ಮ್ಯಾನೇಜರ್ ಆಗಿ ಅಲೆಕ್ಸ್ ಪರ‍್ಗುಸನ್

ರಗುನಂದನ್.

Alex Ferguson

ಇಂಗ್ಲೆಂಡಿನಲ್ಲಿ ನಡೆಯುವ ಹೆಸರುವಾಸಿ ಕಾಲ್ಚೆಂಡು ಪಯ್ಪೋಟಿಯಾದ(football competition) ಇಂಗ್ಲಿಶ್ ಪ್ರೀಮಿಯರ್‍ ಲೀಗಿನ(EPL) ಅತ್ಯಂತ ಯಶಸ್ವೀ ತಂಡವಾದ ಮ್ಯಾಂಚೆಸ್ಟರ್‍ ಯುನಯ್ಟೆಡಿನ ಮ್ಯಾನೇಜರ್‍ ಆಗಿ ಕೆಲಸ ಮಾಡಿದ ಅಲೆಕ್ಸ್ ಪರ‍್ಗುಸನ್ ಇತ್ತೀಚೆಗೆ ತಮ್ಮ ಕೆಲಸವನ್ನು ತೊರೆದಿದ್ದಾರೆ. ಅವರು ಮ್ಯಾಂಚೆಸ್ಟರ್‍ ಯುನಯ್ಟೆಡಿನ ಮೇಲ್ವಿಚಾರಕ (ಮ್ಯಾನೇಜರ್‍) ನಾಗಿ 27 ವರುಶಗಳ ಕಾಲ ಕೆಲಸ ಮಾಡಿದ್ದರು. ಈ ಅವದಿಯಲ್ಲಿ ಅವರು ತಮ್ಮ ತಂಡವನ್ನು ಎಲ್ಲಾ ಮಟ್ಟದ ಕಾಲ್ಚೆಂಡು ಪಯ್ಪೋಟಿಗಳಲ್ಲಿ ಗೆಲ್ಲಿಸಿ ಯಶಸ್ವಿಯಾಗಿದ್ದರು. 1993 ಮತ್ತು 1994 ರಲ್ಲಿ ಮೊದಲೆರಡು ಪ್ರೀಮಿಯರ್‍ ಲೀಗ್ ಬಿರುದುಗಳು ತಮ್ಮದಾಗಿಸಿಕೊಂಡಿದ್ದರು. ಒಂದೇ ವರುಶದಲ್ಲಿ ಅಂದರೆ 1999 ರಲ್ಲಿ ಎಪ್.ಎ ಕಪ್, ಪ್ರೀಮಿಯರ್‍ ಲೀಗ್ ಮತ್ತು ಚಾಂಪಿಯನ್ಸ್ ಲೀಗ್ ಬಿರುದುಗಳನ್ನು ಮ್ಯಾಂಚೆಸ್ಟರ್‍ ಯುನಯ್ಟೆಡ್ ತಂಡ ಇವರ ಮುಂದಾಳ್ತನದಲ್ಲಿ ಪಡೆದಿತ್ತು. ಮುಂದೆ ಮತ್ತೆ 2008 ರಲ್ಲಿ ಚಾಂಪಿಯನ್ಸ್ ಲೀಗ್ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

ಯೂರೋಪಿನ ಕಾಲ್ಚೆಂಡು ಪಯ್ಪೋಟಿಗಳು
ಯೂರೋಪಿನಲ್ಲಿ ಕಾಲ್ಚೆಂಡು ಪಯ್ಪೋಟಿಗಳನ್ನು ಹೇಗೆ ಏರ‍್ಪಾಡು ಮಾಡಲಾಗುತ್ತೆ ಎಂಬುದನ್ನು ತುಸು ನೋಡೋಣ. ಮೊದಲಿಗೆ ಯೂರೋಪಿನ ಎಲ್ಲಾ ದೇಶಗಳು ತಮ್ಮದೇ ಆದಂತಹ ಒಂದು ಕಾಲ್ಚೆಂಡು ಪಯ್ಪೋಟಿಯನ್ನು ಆಡುತ್ತಾರೆ. ಇದರಲ್ಲಿ ಎರಡು ಬಗೆ – ಒಂದು ಲೀಗ್(league) ಮತ್ತೊಂದು ಕಪ್(cup). ಲೀಗ್ ಎಂಬ ಪಯ್ಪೋಟಿಯಲ್ಲಿ 15-20 ತಂಡಗಳು ಒಂದು ವರುಶಪೂರ‍್ತಿ ತಮ್ಮ ತಮ್ಮ ಎದುರು ಆಟವಾಡುತ್ತವೆ. ಒಂದು ಆಟ ಗೆದ್ದರೆ ಇಂತಿಶ್ಟು ಅಂಕಗಳನ್ನು ಗಳಿಸುತ್ತಾರೆ. ವರುಶದ ಕೊನೆಯಲ್ಲಿ ಯಾರು ಹೆಚ್ಚು ಅಂಕಗಳನ್ನು ಪಡೆದಿರುತ್ತಾರೋ ಅವರಿಗೆ ಆ ಲೀಗ್ ಬಿರುದು ದೊರಕುತ್ತದೆ.

ಕಪ್ ಎಂಬ ಪಯ್ಪೋಟಿ ಸರಿಸುಮಾರು ಕ್ರಿಕೆಟ್ ವಿಶ್ವ ಕಪ್ ಇದ್ದ ಹಾಗೆ. ತಂಡಗಳನ್ನು ಎರಡು ಗುಂಪುಗಳಾಗಿ ಮಾಡಿ ನಂತರ ಎರಡೂ ಗುಂಪಿನಿಂದ ಆಯ್ಕೆ ಮಾಡಿ ಕ್ವಾರ‍್ಟರ್‍ ಪಯ್ನಲ್, ಸೆಮಿ ಪಯ್ನಲ್ ಮತ್ತು ಪಯ್ನಲ್‍ಗಳು ಇರುತ್ತವೆ. ಪಯ್ನಲ್ನಲ್ಲಿ ಗೆದ್ದವರು ಪ್ರಶಸ್ತಿಯನ್ನು ಪಡೆಯುತ್ತಾರೆ. ಇದು ಕೂಡ ವರುಶಪೂರ‍್ತಿ ಆಡಲಾಗುತ್ತೆ ಮತ್ತು ಲೀಗಿಗಿಂತ ಹೆಚ್ಚು ತಂಡಗಳು ಪಾಲ್ಗೊಳ್ಳುತ್ತವೆ. ಮತ್ತೊಂದು ದೊಡ್ಡ ಪಯ್ಪೋಟಿಯೆಂದರೆ UEFA ಚಾಂಪಿಯನ್ಸ್ ಲೀಗ್. ಇದರಲ್ಲಿ ಯೊರೋಪಿನ ಎಂಟು ಹತ್ತು ದೇಶಗಳಲ್ಲಿ ತಮ್ಮ ತಮ್ಮ ಲೀಗುಗಳಲ್ಲಿ ಮೇಲಿನ ಸ್ತಾನ ಪಡೆದಿರುವ ನಾಲ್ಕು ತಂಡಗಳು ಇದರಲ್ಲಿ ಆಡುತ್ತವೆ. ಇದು ಕೂಡ ಕಪ್ ಮಾದರಿಯಲ್ಲಿಯೇ ಆಡಲ್ಪಡುತ್ತದೆ.

ಕಾಲ್ಚೆಂಡು ಆಟದಲ್ಲಿ ಮ್ಯಾನೇಜರ್‍ ಏಕೆ ಮುಕ್ಯವಾಗುತ್ತಾನೆ?
ಪುಟ್ಬಾಲಿನಲ್ಲಿ ಹನ್ನೊಂದು ಆಟಗಾರರಿರುತ್ತಾರೆ. ಇದರಲ್ಲಿ ಒಬ್ಬ ಗೋಲ್ ಕೀಪರ್‍ ಆಗಿರುತ್ತಾನೆ. ಮಿಕ್ಕ ಹತ್ತು ಆಟಗಾರರು ಆಟದ ಬಯಲಿನಲ್ಲಿ ತಮ್ಮದೇ ಆದ ಜಾಗ (position) ಗಳಲ್ಲಿ ನಿಂತಿರುತ್ತಾರೆ. ಎದುರು ತಂಡದ ಗೋಲ್ ಕೀಪರ್‍ ಹತ್ತಿರ ಇರುವವರು ಸ್ಟ್ರಯ್ಕರ್‍ (forward/striker) ಗಳಾಗಿರುತ್ತಾರೆ. ಬಯಲಿನ ನಡುವಿನಲ್ಲಿ ಇರುವವರನ್ನು ಮಿಡ್-ಪೀಲ್ಡರ್‍ (mid-fielders) ಎಂದು ಕರೆಯುತ್ತಾರೆ. ಇನ್ನು ತಮ್ಮ ಗೋಲ್ ಬಲೆಯನ್ನು (goal net) ಕಾಪಾಡಲು ಇರುವವರನ್ನು ಡಿಪೆಂಡರ‍್ಸ್ (defenders) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ನಾಲ್ಕು ಡಿಪೆಂಡರ‍್ಸ್‌ಗಳು, ನಾಲ್ಕು ಮಿಡ್-ಪೀಲ್ಡರ್‍‌ಗಳು ಮತ್ತು ಇಬ್ಬರು ಸ್ಟ್ರಯ್ಕರ್‍‌ಗಳು ಇರುವುದು ವಾಡಿಕೆ.

ಈ ಮೂರು ಗುಂಪುಗಳ ನಡುವಿನ ಒಡ-ಹೊಂದಾಣಿಕೆ(co-ordination) ತುಂಬಾ ಮುಕ್ಯವಾಗುತ್ತದೆ. ಡಿಪೆಂಡರ್‍‌ಗಳು ಎಶ್ಟು ಮುಂದೆ ಹೋಗಬಹುದು ಮತ್ತು ಮಿಡ್-ಪೀಲ್ಡರ್‍‌ಗಳು ಎಶ್ಟು ಹಿಂದೆ ಇರಬೇಕು ಮತ್ತು ಮುಂದೆ ಇರುವ ಸ್ಟ್ರಯ್ಕರ್‍‌ಗಳು ತಮ್ಮ ತಮ್ಮಲ್ಲೇ ಚೆಂಡನ್ನು ಎಶ್ಟು ಬೇಗ ಒಬ್ಬರಿಂದೊಬ್ಬರಿಗೆ ದಾಟಿಸಬೇಕು(passing) ಎಂಬುದೆಲ್ಲಾ ಒಂದು ತಂಡದ ಗೆಲುವಿನ ಮೇಲೆ ಒತ್ತು ಬೀರುತ್ತದೆ. ಈ ಬಗೆಯ ಲೆಕ್ಕಾಚಾರಗಳನ್ನು ನೋಡಿಕೊಳ್ಳುವವನು ಆ ತಂಡದ ಮ್ಯಾನೇಜರ್‍ ಆಗಿರುತ್ತಾನೆ. ಕ್ರಿಕೆಟ್ಟಿನಂತೆ ಇಲ್ಲಿ ಬರೀ ಇಬ್ಬರ –  ಬ್ಯಾಟ್ಸ್‌ಮಾನ್ ಮತ್ತು ಬೋಲರ್‍ (batsman-bowler) – ನಡುವಿನ ಸೆಣಸಾಟವಾಗಿರದೇ ಹತ್ತು ಮಂದಿಯೂ ಒಮ್ಮೆಲೆ ಒಡ-ಹೊಂದಾಣಿಕೆ ಮಾಡಬೇಕಾಗುತ್ತದೆ. ಹಾಗಾಗಿ ಕಾಲ್ಚೆಂಡಾಟದಲ್ಲಿ ಆಟದ ಉಪಾಯ (game strategy) ಆಟ ನಡೆಯುತ್ತಿರುವ ಹೊತ್ತಿನಲ್ಲಿಯೇ ಪ್ರಯೋಗಿಸಬೇಕಾಗುತ್ತದೆ.

ಹಾಗಾಗಿ ಮ್ಯಾನೇಜರ್‍‌ಗಳು ಆ ದಿನ ಪಂದ್ಯ ಗೆಲ್ಲಬೇಕೋ ಇಲ್ಲವೇ ಬರಿ ಡ್ರಾ ಆದರೆ ಸಾಕು ಇಲ್ಲವೇ ಗೋಲ್ ಹೊಡಿಸಿಕೊಳ್ಳದಿದ್ದರೆ ಸಾಕು ಎಂಬುದರ ಆದಾರದ ಮೇಲೆ ಹೇಗೆ ಆಟ ಆಡಬೇಕೆಂಬ ರೂಪುರೇಶೆಯನ್ನು ಹಾಕಿಕೊಟ್ಟಿರುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಕಾಲ್ಚೆಂಡಿನಾಟದಲ್ಲಿ ಮ್ಯಾನೇಜರ್‍ ಎಂಬುವನ ಪಾತ್ರ ಮುಕ್ಯವಾಗಿರುತ್ತದೆ. ಒಂದು ತಂಡ ಪ್ರೊಪೆಶನಲ್ ಪುಟ್ಬಾಲಿನಲ್ಲಿ ಮುಂಚೂಣಿ ಸ್ತಾನದಲ್ಲಿ ಇರಬೇಕೆಂದರೆ ಆ ತಂಡದ ಚಾಕಚಕ್ಯತೆ(competence) ಹೆಚ್ಚಿರಬೇಕಾಗುತ್ತದೆ. ಇದು ಮ್ಯಾನೇಜರಿನ ತನ್ನಂಬಿಕೆ, ಅನುಬವ ಮತ್ತು ತಾಳ್ಮೆಯ ಮೇಲೆ ಅವಲಂಬಿತವಾಗಿರುತ್ತದೆ. ಅದಕ್ಕಾಗಿಯೇ ಕಾಲ್ಚೆಂಡಿನ ಆಟದಲ್ಲಿ ಒಂದು ತಂಡವು ಗೆಲುವು ಕಂಡುಕೊಳ್ಳುವಲ್ಲಿ ಮ್ಯಾನೇಜರಿನ ಪಾತ್ರ ಹಿರಿದಾಗಿರುತ್ತದೆ.

ಅಲೆಕ್ಸ್ ಪರ‍್ಗುಸನ್ ಅವರ ಯಶಸ್ಸಿನ ಹಿಂದಿನ ಗುಟ್ಟೇನು?
ಮೊದಲಿಗೆ ಅಲೆಕ್ಸ್ ಪರ‍್ಗುಸನ್ ಒಬ್ಬ ದಿಟವಾದ ಪುಟ್ಬಾಲ್ ಪ್ರೇಮಿಯಾಗಿದ್ದರು. ಅವರು ಮ್ಯಾನೇಜರ್‍ ಆಗಿದ್ದರೂ ಕೂಡ ತಮ್ಮ ಮುಂದೆ ನಡೆಯುತ್ತಿರುವ ಆಟವನ್ನು ಸವಿಯುತ್ತಿದ್ದರು. ತಮ್ಮ ಪುಟ್ಬಾಲ್ ಪ್ರೇಮದ ಕಾರಣದಿಂದಾಗಿಯೇ ಅವರು ಎದೆಯ ಬೇನೆ ಇದ್ದರೂ 71ರ ಇಳಿವಯಸ್ಸಿನ ವರೆಗೂ ಮ್ಯಾನೇಜರ್‍ ಹುದ್ದೆಯಲ್ಲಿದ್ದರು. ತಮ್ಮ ತಂಡವು ಆಡುತ್ತಿರುವಾಗ ಬೆಂಚಿನ ಮೇಲೆ ಕೂರದೆ ಆಟದ ಬಯಲಿನ ಹತ್ತಿರವೇ ತಮ್ಮ ಆಟಗಾರರಿಗೆ ಆದೇಶಗಳನ್ನು ಕೊಡುತ್ತಿದ್ದರು. ಪರ‍್ಗುಸನ್‍ರವರು ಒಬ್ಬ ಮೇಲ್ಮಟ್ಟದ ಹಮ್ಮುಗೆಗಾರ(planner) ಆಗಿದ್ದರು ಮತ್ತು ಪುಟ್ಬಾಲ್ ಆಟದಲ್ಲಿ ಯಾವ ಆಟಗಾರ ಚೆನ್ನಾಗಿ ಪಳಗಬಲ್ಲ ಎಂಬುದನ್ನು ಬೇಗನೇ ಗುರುತಿಸಿಬಿಡುತ್ತಿದ್ದರು. ತಂಡದಲ್ಲಿ ಇರುವ ಆಟಗಾರರನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದರು.

ಇಂಗ್ಲಿಶ್ ಪ್ರೀಮಿಯರ್‍ ಲೀಗಿನಲ್ಲಿ(EPL) ಆಟಗಾರರನ್ನು ಕೊಂಡುಕೊಳ್ಳುವುದಕ್ಕೆ ಮತ್ತೆ ಅರಳುವ ಪ್ರತಿಬೆಗಳನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳುವುದಕ್ಕೆ ಮ್ಯಾನೇಜರ್‍‌ಗಳು ಹವಣಿಸುತ್ತಿರುತ್ತಾರೆ. ವೇಯ್ನ್ ರೂನಿ ಮತ್ತು ಕ್ರಿಸ್ತಿಯಾನೋ ರೋನಾಲ್ಡೊಗಳಂತಹ ಹರೆಯದ ಪ್ರತಿಬೆಗಳನ್ನು ಗುರುತಿಸಿ ಅವರನ್ನು ಪಳಗಿಸಿ ವಿಶ್ವಮಟ್ಟದ ಆಟಗಾರರನ್ನಾಗಿ ಮಾಡಿದ ಹೆಗ್ಗಳಿಕೆ ಪರ‍್ಗುಸನ್‍ಗೆ ಸಲ್ಲುತ್ತದೆ. 1990 ಮತ್ತು 2000 ರ ದಶಕಗಳಲ್ಲಿ ಲಿವರ್‍‌ಪೂಲ್, ಚೆಲ್ಸೀ, ಮ್ಯಾಂಚೆಸ್ಟರ್‍ ಸಿಟಿ ಮತ್ತು ಆರ‍್ಸನಲ್ ತಂಡಗಳು ಇಂಗ್ಲಿಶ್ ಪ್ರೀಮಿಯರ್‍ ಲೀಗಿನಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದರು. ಇಂಗ್ಲಿಶ್ ಪ್ರೀಮಿಯರ್‍ ಲೀಗ್ ಬಿರುದಿಗಾಗಿ ಯಾವಾಗಲೂ ಈ ತಂಡಗಳೊಟ್ಟಿಗೆ ಹಣಾಹಣಿಗೆ ಇಳಿಯಬೇಕಾಗುತ್ತಿತ್ತು. ಚೆಲ್ಸೀ ತಂಡದ ಮ್ಯಾನೇಜರ್‍ ಜೋಸೇ ಮರಿನಿಯೋ ಮತ್ತು ಆರ‍್ಸನಲ್ ತಂಡದ ಆರ‍್ಸೀನ್ ವೆಂಗರ್‍ ಬುದ್ದಿವಂತ ಮ್ಯಾನೇಜರುಗಳು ಎಂದು ಹೆಸರುವಾಸಿಯಾಗಿದ್ದರು.

ಆದರೆ ಅಲೆಕ್ಸ್‌ರವರ ಶಯ್ಲಿಯೇ ಬೇರೆಯಾಗಿತ್ತು. ಅವರು ಬಿರುಸಾದ(fast) ಮತ್ತು ದಾಳಿಯ(attacking) ಆಟಕ್ಕೆ ಹೆಚ್ಚು ಇಂಬು ಕೊಡುತ್ತಿದ್ದರು. ಈ ತಂಡಗಳ ಸವಾಲನ್ನು ಅಲೆಕ್ಸ್ ಪರ‍್ಗುಸನ್ ಎಡೆಬಿಡದೆ ಎದುರಿಸಿ ಸಾಕಶ್ಟು ಗೆಲವನ್ನೂ ಕೂಡ ಕಂಡಿದ್ದರು. ಅಲೆಕ್ಸ್ ಪರ‍್ಗುಸನ್ ಕಟ್ಟಾ ನಿಶ್ಟುರವಾದಿಯಾಗಿದ್ದರು. ಹೆಸರಾಂತ ಆಟಗಾರರು ಮತ್ತು ಮ್ಯಾನೇಜರುಗಳ ನಡುವೆ ತಿಕ್ಕಾಟವಾಗುವುದು ಕಾಲ್ಚೆಂಡಿನಾಟದಲ್ಲಿ ಇದ್ದೇ ಇರುತ್ತದೆ. ಹೆಸರಾಂತ ಇಂಗ್ಲೆಂಡ್ ಆಟಗಾರ ಡೇವಿಡ್ ಬೆಕ್‍ಹಾಮ್ ವಿಶಯದಲ್ಲೂ ಕೂಡ ಅಲೆಕ್ಸ್ ಪರ‍್ಗುಸನ್‌ರಿಗೆ ಇದೇ ರೀತಿಯಾಗಿತ್ತು. ಆಗ ಬೆಕ್‌ಹಾಮ್‌ರನ್ನು ತಂಡದಿಂದ ಕಯ್ಬಿಡಲಾಗಿತ್ತು. ತಮ್ಮ ನೆಚ್ಚಿನ ನಾಯಕನಾಗಿದ್ದ ರಾಯ್ ಕೀನ್ ವಿಶಯದಲ್ಲೂ ಅಲೆಕ್ಸ್ ಹೀಗೆ ಮಾಡಿದ್ದರು.

ಮೇಲ್ಮಟ್ಟದ ಪ್ರೊಪೆಶನಲ್ ಪುಟ್ಬಾಲಿನಲ್ಲಿ 27 ವರುಶ ಕೆಲಸ ಮಾಡಿದ ಪಡೆದ ಅಲೆಕ್ಸ್ ಪರ‍್ಗುಸನ್‍ರವರು ಹೋದ ತಿಂಗಳ ಮೇ 8ರಂದು ಮಾಂಚೆಸ್ಟರ್‍ ಯುನಯ್ಟೆಡಿನ ಮ್ಯಾನೇಜರ್‍ ಹುದ್ದೆಯನ್ನು ತೊರೆದರು. ಅಲ್ಲಿಯವರೆಗೆ ಮ್ಯಾಂಚೆಸ್ಟರ್‍ ಯುನಯ್ಟೆಡ್ ತಂಡದೊಡನೆ ಒಟ್ಟು ಮೂವತ್ತೆಂಟು ಪ್ರಶಸ್ತಿಗಳನ್ನು ಅವರು ಗೆದ್ದಿದ್ದರು.

ಮಾಹಿತಿ ಸೆಲೆ: moneycontrol.com

(ಚಿತ್ರ: www.nydailynews.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks