ಜನಸಂಕ್ಯೆಯ ನಿಯಂತ್ರಣ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

ಸಂದೀಪ್ ಕಂಬಿ.

population_india

ನರೇಂದ್ರ ಮೋದಿ ಆಳ್ವಿಕೆಯ ಗುಜರಾತ ಸರಕಾರ 2005ರಲ್ಲಿ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದಿತ್ತು. ಅದೇನೆಂದರೆ 2ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಗುಜರಾತಿನ ಯಾವುದೇ ನಗರ ಪಾಲಿಕೆಯ ಸದಸ್ಯತ್ವ ಹೊಂದಲು ಹಕ್ಕಿರುವುದಿಲ್ಲ ಎಂದು. ಕಳೆದ ವಾರ ಸಂಜಯ್ ದಾವ ಎಂಬ ರಾಜಕೋಟ್ ನಗರ ಪಾಲಿಕೆಯ ಸದಸ್ಯರು ಮೂರನೇ ಮಗುವಿಗೆ ತಂದೆಯಾದ ಕಾರಣ ತಮ್ಮ ಸದಸ್ಯತ್ವಕ್ಕೆ ತೊರೆಯೋಲೆ ಕೊಡಬೇಕಾಗಿ ಬಂದಿತು. ಈ ಸುದ್ದಿ ಹಲವು ಸುದ್ದಿ ಹಾಳೆಗಳಲ್ಲಿ ಪ್ರಕಟವಾಗಿದ್ದು ಕೆಲವರು ಮಂದಿಯೆಣಿಕೆಯ ಪಿಡುಗಿಂದ ತತ್ತರಿಸುತ್ತಿರುವ ಬಾರತದಲ್ಲಿ ಇದು ಸರಿಯಾದ ನಡೆ ಮತ್ತು ಮಂದಿಯೆಣಿಕೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಎಂದು ಕೊಂಡಾಡಿದ್ದಾರೆ. ಆದರೆ ಗುಜರಾತದ ಮಂದಿಯೆಣಿಕೆ ಎಶ್ಟು ಮತ್ತದರಿಂದ ಆ ರಾಜ್ಯಕ್ಕೆ ನಿಜವಾಗಿಯೂ ತೊಡಕುಗಳು ಆಗಿವೆಯೇ/ ಆಗುತ್ತವೆಯೇ ಎಂಬುದನ್ನು ನೋಡೋಣ.

ಈ ಕೆಳಗಿನ ತಿಟ್ಟದಲ್ಲಿ ಗುಜರಾತ ರಾಜ್ಯದ ಮಂದಿ ದಟ್ಟಣೆಯನ್ನು (ಚದರ ಕಿಲೋಮೀಟರಿಗೆ) ಬೇರೆ ಕೆಲವು ಮುಂದುವರಿದ ದೇಶಗಳೊಂದಿಗೆ ಹೋಲಿಸಲಾಗಿದೆ.

chart

ಈ ಮೇಲಿನ ದೇಶಗಳ ಮಂದಿ ದಟ್ಟಣೆ ಹೆಚ್ಚು ಕಡಿಮೆ ಗಜರಾತಿನದಶ್ಟೇ ಇವೆ. ಯುನಯ್ಟೆಡ್ ಕಿಂಗ್‍ಡಮ್ ಒಂದನ್ನು ಬಿಟ್ಟರೆ ಮಿಕ್ಕ ದೇಶಗಳ ಮಂದಿ ದಟ್ಟಣೆ ಗುಜರಾತಿಗಿಂತ ಹೆಚ್ಚಾಗಿಯೇ ಇವೆ. ಆದರೆ ಈ ಯಾವುದೇ ದೇಶಗಳಲ್ಲಿ ಹೆಚ್ಚು ಮಂದಿಯೆಣಿಕೆಯ ಸಮಸ್ಯೆ ಇಲ್ಲ. ಅಲ್ಲಿನ ಸರಕಾರಗಳು ಮಂದಿಯೆಣಿಕೆಯನ್ನು ಕಡಿಮೆ ಮಾಡುವ ಯಾವುದೇ ಹಮ್ಮುಗೆಗಳನ್ನು ಹಮ್ಮಿಕೊಂಡಿಲ್ಲ. ಬದಲಾಗಿ ಜಪಾನ್ ಮತ್ತು ತೆಂಕಣ ಕೊರಿಯಾದಂತಹ ದೇಶಗಳಲ್ಲಿ TFR ಕಡಿಮೆಯಾಗಿ ಮಂದಿಯೆಣಿಕೆ ಕುಸಿಯುವ ಆತಂಕವಿದೆ. ಒಂದು ಅಂದಾಜಿನ ಪ್ರಕಾರ 2011ರಲ್ಲಿ ತೆಂಕಣ ಕೊರಿಯಾದ TFR 1.23 ಇದ್ದರೆ ಜಪಾನಿನ TFR 1.21 ಇತ್ತು. ಈ ಎರಡೂ ದೇಶದ ಕೂಡಣಗಳಲ್ಲಿ ಕುಸಿದಿರುವ TFRನಿಂದಾಗಿ ದುಡಿಯಬಲ್ಲ ಚಿಕ್ಕ ವಯಸ್ಸಿನ ಮಂದಿ ಕಡಿಮೆಯಾಗಿದ್ದಾರೆ ಮತ್ತು ವಯಸ್ಸಾಗಿ ದುಡಿಯದೇ ಕುಳಿತಿರುವ ಮಂದಿಯನ್ನು ಸಾಕುವ ಹೊಣೆಗಾರಿಕೆ ಚಿಕ್ಕ ವಯಸ್ಸಿನ ಮಂದಿಯ ಮೇಲೆ ಬಿದ್ದಿದೆ. ಹೀಗೇ ಮುಂದುವರಿದರೆ ಈ ದೇಶಗಳ ಇಡೀ ಹಣಕಾಸಿನ ವ್ಯವಸ್ತೆ ದುಡಿಯುವ ಕಯ್ಗಳು ಸಾಕಾಗದೆ ಕುಸಿದು ಬೀಳುವ ಆತಂಕವಿದೆ. ಹಾಗಾಗಿ TFR ಹೆಚ್ಚಿಸಿಕೊಳ್ಳಲು ಅಲ್ಲಿನ ಸರಕಾರಗಳು ಹಲವಾರು ಹಮ್ಮುಗೆಗಳನ್ನು ಹಮ್ಮಿಕೊಂಡಿವೆ.

ಯಾವುದೇ ಕೂಡಣದ ಮಂದಿಯೆಣಿಕೆ ಸರಿತೂಕವನ್ನು ಕಾಪಾಡಿಕೊಳ್ಳಬೇಕಾದರೆ ಅಲ್ಲಿನ TFR 2.1ರಶ್ಟು ಇರಬೇಕು. ಇದಕ್ಕೂ ಕಡಿಮೆಯಾದಲ್ಲಿ ಈಗ ತೆಂಕಣ ಕೊರಿಯಾ ಮತ್ತು ಜಪಾನ್ ಎದುರಿಸುತ್ತಿರುವ ಸಮಸ್ಯೆಯೇ ಅದೂ ಎದುರಿಸಬೇಕಾಗುತ್ತದೆ. ಮುಂದೆ ಆ ಜನಾಂಗ ಅಳಿದು ಹೋಗುವ ಆತಂಕವೂ ಇರುತ್ತದೆ. ಈಗ 6 ಕೋಟಿಯಶ್ಟು ಮಂದಿಯೆಣಿಕೆ ಇರುವ ಗುಜರಾತಿನ TFR 2.25 ಇದೆ. ಗುಜರಾತಿನ ಈಗಿನ ಮಂದಿಯೆಣಿಕೆ ಮತ್ತು ಮಂದಿದಟ್ಟಣೆಗಳನ್ನು ಗಮನಕ್ಕೆ ತೆಗೆದುಕೊಂಡರೆ ಇದೇನು ತೀರಾ ಆತಂಕ ಪಡುವ ವಿಶಯವೇನಲ್ಲ. ಹಾಗಾಗಿ, ಇಂದಾಗಲಿ ಮುಂಬರುವ ವರುಶಗಳಲ್ಲಾಗಲಿ, ಗುಜರಾತಿಗೆ ಮಂದಿಯೆಣಿಕೆಯ ಏರಿಕೆಯ ಸಮಸ್ಯೆ ಇಲ್ಲ. ಗುಜರಾತಿನ ಮಟ್ಟಿಗೆ ನೋಡಿದರೆ ಈಗಿರುವ ಮಂದಿಯೆಣಿಕೆಯನ್ನು ಅವರು ಎಚ್ಚರದಿಂದ ಸರಿಯಾಗಿ ಕಾಪಾಡಿಕೊಂಡು ಹೋಗುವತ್ತ ಗಮನ ಹರಿಸಬೇಕೇ ಹೊರತು, ದೇಶದ ಮಂದಿಯೆಣಿಕೆ ಹೆಚ್ಚಿದೆ ಎಂದು ಕುರುಡಾಗಿ ತಮ್ಮ ಮಂದಿಯೆಣಿಕೆಯ ಏರಿಕೆಗೆ ಕಡಿವಾಣ ಹಾಕಬಾರದು. ತಮ್ಮ ಮಂದಿಯೆಣಿಕೆ ಮುಂಬರುವ ವರುಶಗಳಲ್ಲಿ ಎಶ್ಟಿರಬೇಕು ಎಂಬುದನ್ನು ಯೋಚಿಸಿ ಅದರ ತಕ್ಕಂತೆ ತೀರ್‍ಮಾನಗಳನ್ನು ತೆಗೆದುಕೊಳ್ಳ ಬೇಕು.

ಹಾಗಾದರೆ ನಮ್ಮ ದೇಶದಲ್ಲಿ ಹೆಚ್ಚು ಮಂದಿಯೆಣಿಕೆಯ ಸಮಸ್ಯೆ ಇಲ್ಲವೇ? ಚದರ ಕಿಲೋಮೀಟರಿಗೆ 828ರಶ್ಟು ಮಂದಿ ದಟ್ಟಣೆ ಇರುವ ಉತ್ತರ ಪ್ರದೇಶ, 1102 ಇರುವ ಬಿಹಾರ, 1029 ಇರುವ ಬಂಗಾಳ ಮುಂತಾದ ರಾಜ್ಯಗಳಲ್ಲಿ ಈ ಸಮಸ್ಯೆ ಇದೆ. ಉತ್ತರ ಪ್ರದೇಶದಲ್ಲಿ TFR 3.21 ಇದ್ದರೆ ಬಿಹಾರದಲ್ಲಿ 3.43 ಇದೆ. ಹಾಗಾಗಿ ಇಂತಹ ರಾಜ್ಯಗಳಲ್ಲಿ ಮಂದಿಯೆಣಿಕೆಯು ತೀರಾ ಬಿರುಸಾಗಿ ಬೆಳೆಯುತ್ತಿರುವ ಸಮಸ್ಯೆಯೂ ಇದೆ. ಆದರೆ ಅಂದ್ರ ಪ್ರದೇಶ, ಕರ್‍ನಾಟಕ, ತಮಿಳುನಾಡು, ಪಂಜಾಬ್, ಮಹಾರಾಶ್ಟ್ರ ಮುಂತಾದ ರಾಜ್ಯಗಳಲ್ಲಿ ಈ ಸಮಸ್ಯೆ ಇಲ್ಲ. ಅಲ್ಲದೆ ಈ ರಾಜ್ಯಗಳಲ್ಲಿ TFR 2.1ಕ್ಕಿಂತ ಕೆಳಗೆ ಕುಸಿದಿದೆ. ಮುಂಬರುವ ವರುಶಗಳಲ್ಲಿ ಈ ರಾಜ್ಯಗಳಲ್ಲಿ ಮಂದಿಯೆಣಿಕೆ ಕುಸಿಯುವುದರಿಂದ ವಲಸೆ ಹೆಚ್ಚಾಗಿ ಜನಾಂಗೀಯ ಬದಲಾವಣೆಗಳಾಗಬಹುದು. ಕೊಡವ, ತುಳುವರಂತಹ ನುಡಿ ಸಮುದಾಯಗಳು ಮತ್ತು ಇನ್ನಿತರೆ ಸಣ್ಣ ಜನಾಂಗಗಳು ಅಳಿವಿನಂಚಿಗೆ ತಳ್ಳಲ್ಪಡಬಹುದು.

ನಮ್ಮ ಒಕ್ಕೂಟ ಸರಕಾರ ಇಡೀ ಬಾರತದ TFRಅನ್ನು 2.1ಕ್ಕೆ ತರುವ ಗುರಿಯಿಂದ ಎಲ್ಲ ರಾಜ್ಯಗಳಲ್ಲೂ ಮಂದಿಯೆಣಿಕೆಗೆ ಕಡಿವಾಣ ಹಾಕಲು ಹೊರಟಿದೆ. ಈಗಾಗಲೇ ಸುಮಾರು 2.1 ರಶ್ಟು ಇಲ್ಲವೇ ಅದಕ್ಕೂ ಕಡಿಮೆ TFR ಸಾದಿಸಿರುವ ರಾಜ್ಯಗಳಲ್ಲೂ ಮಂದಿಯೆಣಿಕೆಯನ್ನು ಮತ್ತಶ್ಟು ಕಡಿಮೆ ಮಾಡಲು ಒತ್ತಾಯ ಪಡಿಸಲಾಗುತ್ತಿದೆ. ಆದರೆ ಇದರಿಂದ ಮುಂದೆ ಆಗುವ ತೊಂದರೆಗಳ ಬಗ್ಗೆ ಕೊಂಚವೂ ಯೋಚಿಸದೆ ಎಲ್ಲ ರಾಜ್ಯ ಸರಕಾರಗಳೂ ಒಕ್ಕೂಟದ ಈ ಹಮ್ಮುಗೆಯನ್ನು ಕುರುಡಾಗಿ ನಡೆಸುತ್ತಿವೆ. ಮೇಲೆ ನೋಡಿದಂತೆ ನಿಜವಾಗಿಯೂ ಈ ಸಮಸ್ಯೆ ಇರುವುದು ಕೆಲವು ರಾಜ್ಯಗಳಲ್ಲಿ. ಹಾಗಾಗಿ ಈ ಸಮಸ್ಯೆಯನ್ನು ಅಲ್ಲಿಯೇ ಎದುರಿಸಿ ಅಲ್ಲಿಯೇ ಬಗೆಹರಿಕೆಯನ್ನು ಕಂಡುಕೊಳ್ಳಬೇಕು.

ಆದರೆ ಇಂದು ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರಂತೆ’ ಎಂಬ ಗಾದೆ ಮಾತಿನಂತೆ ನಾವು ಕೆಲವು ರಾಜ್ಯಗಳಲ್ಲಿರುವ ಸಮಸ್ಯೆಗೆ, ಸಮಸ್ಯೆಯೇ ಇಲ್ಲದೆಡೆಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಹೊರಟಿದ್ದೇವೆ. ಮೇಲೆ ಹೇಳಿದ ಗುಜರಾತಿನ ಗಟನೆಯು ನಮ್ಮ ಈ ಎಡವಟ್ಟಿಗೆ ಒಂದು ತಿಳಿಯಾದ ಉದಾಹರಣೆ.

(ಮಾಹಿತಿ ಸೆಲೆ: http://en.wikipedia.org)
(ಚಿತ್ರ ಸೆಲೆ: churchandstate.org.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: