ಕರ್‍ನಾಟಕ ಜಪಾನ್ ಆಗದಿರಲಿ

ಚೇತನ್ ಜೀರಾಳ್.

japaneldb

ಇದೇನು ಹೀಗೆ ಹೇಳಲಾಗಿದೆ ಎಂದುಕೊಳ್ಳಬೇಡಿ. ನಾವು ಜಪಾನ್ ನಾಡಿನಿಂದ ಕಲಿಯಬೇಕಾಗಿರುವುದು ಬಹಳಶ್ಟಿದೆ. ಅವರು ಉದ್ದಿಮೆಗಳನ್ನು ಕಟ್ಟುವುದರಲ್ಲಿ, ಹೊಸ ಚಳಕಗಳನ್ನು ಕಂಡುಹಿಡಿಯುವಲ್ಲಿ, ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಏರ್‍ಪಾಡನ್ನು ಕಟ್ಟಿರುವುದು, ಹೀಗೆ ಹಲವಾರು ವಿಶಯಗಳಲ್ಲಿ ನಮಗೆ ಮಾದರಿ. ಸುಮಾರು 1868ರ ಸಮಯದಲ್ಲಿ ಮಾರುಕಟ್ಟೆಯ ಬೆಳವಣಿಗೆಯ ಕಡೆಗೆ ಗಮನಹರಿಸಿದ ಜಪಾನ್ ರಸ್ತೆ ಅಬಿವ್ರುದ್ದಿ, ಬಂದರುಗಳು, ಬ್ಯಾಂಕಿಂಗ್ ಮುಂತಾದ ಕ್ಶೇತ್ರಗಳ ಬೆಳವಣಿಗೆಯ ಕಡೆಗೆ ಒತ್ತು ಕೊಟ್ಟಿತು. ಅಂದಿನ ದಿನಗಳಲ್ಲಿ ಶುರುವಾದ ಉದ್ದಿಮೆಗಳ ಕಟ್ಟುವಿಕೆ ಮತ್ತು ಬೆಳವಣಿಗೆಗಳಿಂದ ಇಂದು ಜಪಾನ್ ಏಶ್ಯಾ ಕಂಡದಲ್ಲಿಯೇ ಮುಂದುವರಿದ ನಾಡಾಗಿದೆ. ಹಿರೋಶಿಮಾ ಮತ್ತು ನಾಗಾಸಾಕಿಯ ಬಾಂಬ್ ದಾಳಿಯ ನಂತರ ಸ್ವಾಬಿಮಾನದ ಪ್ರಶ್ನೆಯಾಗಿ ಸ್ವೀಕರಿಸಿದ ಜಪಾನ್ 1960–1980ರಲ್ಲಿ ಮಾಡಿದ ಬೆಳವಣಿಗೆ ಅಚ್ಚರಿ ತರಿಸುವಂತಹುದು. ಇಂದು ಜಿ.ಡಿ.ಪಿ.ಯ ಅಳತೆಯಲ್ಲಿ ಅಮೇರಿಕಾ ಮತ್ತು ಚೀನಾದ ನಂತರ ಜಪಾನ್ ಬೆಳವಣಿಗೆಯಲ್ಲಿ ಮೂರನೇ ಜಾಗದಲ್ಲಿದೆ. ಅರಿಮೆ ಮತ್ತು ಉದ್ದಿಮೆಗಾರಿಕೆಯಲ್ಲಿ ಜಪಾನ್ ಸಾದಿಸಿರುವ ಬೆಳವಣಿಗೆ ನಮಗೆ ಮಾದರಿ.

ಆದರೆ ಜಪಾನ್ ಇಂದು ಒಂದು ದೊಡ್ಡ ಕೊರತೆ ಅನುಬವಿಸುತ್ತಿದೆ. ಅದು ಜನಸಂಕ್ಯೆ ಮತ್ತು ಯುವ ಸಮುದಾಯದ ಕೊರತೆ. 2009ರಲ್ಲಿ ಜಪಾನ್‍ನ ನೂರರಲ್ಲಿ 22.7ರಶ್ಟು ಜನರು 65 ವರ್‍ಶದ ಮೇಲ್ಪಟ್ಟಿನವರಿದ್ದರು. ಇದೇ ರೀತಿ ಮುಂದುವರಿದಲ್ಲಿ 2050ರ ವೇಳೆಗೆ ಈ ಅಂಕಿ 40ಕ್ಕೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಈ ಜನಸಂಕ್ಯೆಯಲ್ಲಿ ಆಗಿರುವ ಬದಲಾವಣೆಯಿಂದಾಗಿ ಇಂದು ಜಪಾನ್ ನಾಡು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದಾಗಿ ಉದ್ದಿಮೆಗಳಲ್ಲಿ ಕೆಲಸ ಮಾಡಲು ಬೇಕಾಗಿರುವ ನುರಿತ ಕೆಲಸಗಾರರ ಕೊರೆತೆ ಮತ್ತು ವಯಸ್ಸಾದವರಿಗೆ ನೀಡಬೇಕಾಗಿರುವ ಸಾಮಾಜಿಕ ಬದ್ರತೆಗೆ ಬೇಕಾಗಿರುವ ಹಣ. ಇಂದು ಜಪಾನ್‍ನ ಟಿ.ಎಪ್.ಆರ್. (TFR) 1.39ಕ್ಕೆ ಇಳಿದಿದೆ. ಇದೇ ರೀತಿ ಮುಂದುವರಿದಲ್ಲಿ ಜಪಾನಿ ಜನಾಂಗವೇ ಮುಂದೊಂದು ದಿನ ನಶಿಸಿಹೋಗುವ ಅಪಾಯವಿದೆ.

ಟಿ.ಎಪ್. ಆರ್. ಅಂದರೇನು?

ನಿಮಗೆ ಟಿ.ಎಪ್.ಆರ್. ಬಗ್ಗೆ ಗೊತ್ತಿರಬಹುದು. ಟಿ.ಎಪ್.ಆರ್.ನ ಹಿಗ್ಗಿದ ರೂಪ ಟೋಟಲ್ ಪರ್‍ಟಿಲಿಟಿ ರೇಟ್ (Total Fertility Rate) ಎಂದು. ಒಂದು ಜನಾಂಗದಲ್ಲಿ ಒಬ್ಬ ಹೆಂಗಸಿಗೆ, ಆಕೆಯ ಜೀವಮಾನದಲ್ಲಿ, ಸರಾಸರಿ ಎಶ್ಟು ಮಕ್ಕಳು ಹುಟ್ಟುತ್ತವೆಂಬುದೇ ಟಿ.ಎಪ್.ಆರ್. ಒಂದು ಜನಾಂಗದವರು ತಮ್ಮ ಜನಾಂಗವನ್ನು ಯಾವುದೇ ತೊಂದರೆಗಳಿಲ್ಲದೆ ಮುಂದುವರಿಸಿಕೊಂಡು ಹೋಗಲು ಪ್ರತಿ ಕುಟುಂಬ, ಸರಾಸರಿ ಎಶ್ಟು ಮಕ್ಕಳನ್ನು ಪಡೆಯಬೇಕು ಎಂಬುದು ಇದರಿಂದ ತಿಳಿಯಬಹುದು. ಸಾಮಾನ್ಯವಾಗಿ ಒಂದು ಜನಾಂಗದ ಜನಸಂಕ್ಯೆಯನ್ನು ಕುಸಿಯದಂತೆ ಕಾಯ್ದುಕೊಳ್ಳಲು ಟಿ.ಎಪ್.ಆರ್. 2.1 ಇರಬೇಕು ಎಂದು ಹೇಳಲಾಗುತ್ತದೆ. ಎತ್ತುಗೆಗೆ ಒಂದು ಜನಾಂಗದಲ್ಲಿ 1000 ಜೋಡಿಗಳಿದ್ದರೆ, ಅಲ್ಲಿ ಟಿ.ಎಪ್.ಆರ್. ಅನ್ನು 2.1ರ ಮಟ್ಟದಲ್ಲಿ ಕಾಯ್ದುಕೊಂಡಿದ್ದರೆ 2100 ಮಕ್ಕಳಿರುತ್ತಾರೆ. 2000 ಮಂದಿ ತಂದೆ ತಾಯಂದಿರ ಜಾಗವನ್ನು ಮುಂದೆ ಈ 2100 ಮಕ್ಕಳು ತುಂಬುತ್ತಾರೆ. ಒಂದಶ್ಟು ಹೆಚ್ಚಿಗೆ (2000 ಮಂದಿಯ ಜಾಗ ತೆಗೆದುಕೊಳ್ಳಲು 2100 ಮಕ್ಕಳು), ಯಾಕೆಂದರೆ ಅಲ್ಲಿಲ್ಲಿ ಕೆಲವು ಸಾವುಗಳಾಗಬಹುದು. ಆಗ ಪೀಳಿಗೆಯಿಂದ ಪೀಳಿಗೆಗೆ ಜನಸಂಕ್ಯೆಯು ಏರಿಳಿತಗಳನ್ನು ಕಾಣದೆ ಗಟ್ಟಿಯಾಗಿ ನಿಲ್ಲುತ್ತದೆ.

ಕರ್‍ನಾಟಕ ಜಪಾನ್ ಆಗದಿರಲಿ

ಇಂದು ಬಾರತದ ಟಿ.ಎಪ್.ಆರ್. 2.32 ಇದೆ. ಅಂದರೆ ಬಾರತ ತನ್ನ ಜನಸಂಕ್ಯೆಯನ್ನು ಕಾಪಾಡಿಕೊಂಡು ಹೋಗಲು ಯಾವುದೇ ತೊಂದರೆ ಇಲ್ಲ. ಆದರೆ ಇಂದು ತೆಂಕಣ ಬಾರತದಲ್ಲಿ ಗಾಬರಿಯ ಮಟ್ಟದಲ್ಲಿ ಜನಸಂಕ್ಯೆ ಕುಸಿಯುತ್ತಿರುವುದನ್ನು ನಾವು ನೋಡಬಹುದಾಗಿದೆ. ಎತ್ತುಗೆಗೆ ತಮಿಳುನಾಡಿನ ಟಿ.ಎಪ್.ಆರ್. 1.64 ಕ್ಕೆ ಇಳಿದಿದೆ, ಕೇರಳದಲ್ಲಿ 1.65 ಇದೆ, ಆಂದ್ರಪದೇಶದಲ್ಲಿ 1.66 ಇದೆ. ಆದರೆ ಉತ್ತರ ಬಾರತದ ಬಿಹಾರದಲ್ಲಿ 3.43, ಉತ್ತರ ಪ್ರದೇಶದಲ್ಲಿ 3.21, ಮದ್ಯ ಪ್ರದೇಶದಲ್ಲಿ 2.95 ಮತ್ತು ರಾಜಸ್ತಾನದಲ್ಲಿ 2.83 ಇದೆ. ನಮ್ಮ ಕರ್‍ನಾಟಕದಲ್ಲಿ 1.79 ಇದೆ. ಇದು ಬೇರೆ ತೆಂಕಣ ಬಾರತದ ರಾಜ್ಯಗಳಿಗೆ ಹೋಲಿಸಿದರೆ ಕೊಂಚ ಮುಂದಿದ್ದರೂ ಸಾಮಾನ್ಯವಾಗಿ ಇರಬೇಕಾಗಿದ್ದ 2.1ರ ಮಟ್ಟಕ್ಕಿಂತ ಕಡಿಮೆಯಿರುವುದು ಆತಂಕಕಾರಿ ವಿಶಯ.

ಜನಸಂಕ್ಯೆ ನಿಯಂತ್ರಣದ ಹೆಸರಿನಲ್ಲಿ ಕರ್‍ನಾಟಕಕ್ಕೆ 2.1ಕ್ಕಿಂತ ಕಡಿಮೆ ಟಿ.ಎಪ್.ಆರ್. ಗುರಿಯನ್ನು ಒಕ್ಕೂಟ ಸರಕಾರ ಕೊಟ್ಟಿದೆ. ಒಂದು ವೇಳೆ ನಾವು ಈಗಿರುವ ಮಟ್ಟದಲ್ಲೇ ಟಿ.ಎಪ್.ಆರ್. ಅನ್ನು ಕಡಿಮೆ ಮಾಡುತ್ತ ಹೋದರೆ, ಇಂದು ಜಪಾನ್‍ನಲ್ಲಿರುವ ಸಮಸ್ಯೆ ನಾಳೆ ನಮ್ಮ ನಾಡಿಗೂ ಬರುತ್ತದೆ. ಇಂದು ನಮ್ಮ ನಾಡಿನಲ್ಲಿರುವ ಉದ್ದಿಮೆಗಳಲ್ಲಿ ಕೆಲಸ ಮಾಡಲು ಹೆಚ್ಚಿನ ಜನರು ಇದ್ದಾರೆ, ಆದರೆ ಜನಸಂಕ್ಯೆ ಕಡಿಮೆಯಾಗುತ್ತ ಹೋದಲ್ಲಿ ನುರಿತ ಕೆಲಸಗಾರರ ಎಣಿಕೆ ಕುಸಿಯುತ್ತ ಹೋಗುತ್ತದೆ. ಆಗ ಉದ್ದಿಮೆಗಳು ಅವರಿಗೆ ಹೆಚ್ಚಿನ ಹಣ ನೀಡಿ ಕೆಲಸ ಪಡೆದುಕೊಳ್ಳಬೇಕಾಗುತ್ತದೆ. ಇದರ ಪರಿಣಾಮ ಆ ಸಾಮಾನು ಕೊಳ್ಳುವ ಕೊಳ್ಳುಗ ಹೆಚ್ಚಿನ ಹಣ ತೆತ್ತು ಕೊಳ್ಳಬೇಕಾಗುತ್ತದೆ. ಹಲವು ವೇಳೆ ಈ ಹೆಚ್ಚಿನ ಹಣ ನೀಡುವ ಬದಲು ಹೊರಗಿನಿಂದ ಸಾಮಾನು ತರಿಸಿಕೊಳ್ಳುವುದೇ ಕೊಳ್ಳುಗನಿಗೆ ಅಗ್ಗವಾಗಿ ಹೋಗುತ್ತದೆ. ಇದರ ಪರಿಣಾಮವಾಗುವುದು ಉದ್ದಿಮೆಗಳ ಮೇಲೆ, ತಾನು ತಾಯಾರು ಮಾಡಿರುವ ಸಾಮಾನನ್ನು ಕೊಳ್ಳುಗ ಕೊಳ್ಳದಿದ್ದಲ್ಲಿ ಹೆಚ್ಚಿನ ಹಣ ಕೊಟ್ಟು ಕೆಲಸ ಮಾಡಿಸಿರುವುದರಿಂದ ಉದ್ದಿಮೆ ನಶ್ಟದಿಂದಾಗಿ ಮುಚ್ಚಿಹೋಗುತ್ತದೆ. ಆಗ ಇದ್ದ ಜನರಿಗೂ ಕೆಲಸವಿಲ್ಲದಂತಾಗುತ್ತದೆ.

ಎತ್ತುಗೆಗೆ, ಕರ್‍ನಾಟಕದ ಯಾವುದೋ ಮೂಲೆಯೊಂದರಲ್ಲಿ ಚಿನ್ನದ ಗಣಿ ಇದ್ದು, ಅಲ್ಲಿ ಹೇರಳವಾಗಿ ಚಿನ್ನ ಸಿಗುತ್ತದೆ ಎಂದುಕೊಳ್ಳಿ. ಜನಸಂಕ್ಯೆ ಟಿ.ಎಪ್.ಆರ್.ನ ಅನುಗುಣವಾಗಿದ್ದಲ್ಲಿ ಅಲ್ಲಿ ದುಡಿಯಲು ಬೇಕಿರುವ ಜನರು ಕಡಿಮೆ ಬೆಲೆಗೆ ಸಿಗುತ್ತಾರೆ. ಹಾಗಾಗಿ ಚಿನ್ನವನ್ನು ಕೊಳ್ಳುವನ ಮೇಲೆ ಹೆಚ್ಚಿನ ಹೊರೆ ಬೀಳುವುದಿಲ್ಲ. 10 ಗ್ರಾಂ ಚಿನ್ನಕ್ಕೆ 100 ರುಪಾಯಿ ಎಂದುಕೊಳ್ಳಿ. ಒಂದು ವೇಳೆ ಟಿ.ಎಪ್.ಆರ್. ಕಡಿಮೆಯಾಗಿ ಕರ್‍ನಾಟಕದಲ್ಲಿ ನುರಿತ ಕೆಲಸಗಾರರು ಮತ್ತು ಯುವ ಸಮೂಹ ಕಡಿಮೆಯಾದಾಗ ಕೆಲಸ ಮಾಡಲು ಸಿಗುವ ಜನರೇ ಕಡಿಮೆ ಆದರೆ ಗಣಿಯಲ್ಲಿ ಕೆಲಸ ಮಾಡಲು ಹೆಚ್ಚಿನ ಹಣವನ್ನು ಉದ್ದಿಮೆಯವರು ಕೆಲಸಗಾರರಿಗೆ ನೀಡಬೇಕಾಗುತ್ತದೆ. ಆಗ ಇದನ್ನು ಸರಿದೂಗಿಸಲು ಉದ್ದಿಮೆಯವರು ಚಿನ್ನದ ಬೆಲೆಯನ್ನು ಹೆಚ್ಚು ಮಾಡುತ್ತಾರೆ. ಎತ್ತುಗೆಗೆ 10 ಗ್ರಾಂ ಚಿನ್ನಕ್ಕೆ 130 ರುಪಾಯಿ ಆಯಿತು ಎಂದುಕೊಳ್ಳಿ. ಆದರೆ ಮಾರುಕಟ್ಟೆಯ ಬೆಲೆ 10 ಗ್ರಾಂ ಚಿನ್ನಕ್ಕೆ 100 ರೂಪಾಯೇ ಇದ್ದಲ್ಲಿ, ಆಗ ಚಿನ್ನ ಕೊಳ್ಳಲು ಕೊಳ್ಳುಗ ಹಿಂಜರಿಯುತ್ತಾನೆ, ಅತವಾ ಇದಕ್ಕಿಂತ ಕಡಿಮೆ ದರದಲ್ಲಿ ಹೊರನಾಡಿನಿಂದ ಸಿಕ್ಕಲ್ಲಿ ಆಲ್ಲಿಂದಲೇ ಕೊಳ್ಳುತ್ತಾನೆ. ಇದರಿಂದ ಗಣಿ ಮುಚ್ಚಿ ಹೋಗಬಹುದು, ನಮ್ಮ ನಾಡಿನ ಹಣಕಾಸು ಏರ್‍ಪಾಡು ಕುಸಿದು ಹೋಗಬಹುದು. ಈ ಎತ್ತುಗೆಯನ್ನು ಸಮಾಜದ ಬೇರೆ ಬೇರೆ ವಲಯದಲ್ಲಿರುವ ಉದ್ದಿಮೆಗಳಿಗೂ ಅನ್ವಯಿಸಬಹುದು. ಮಾರುಕಟ್ಟೆಯ ಬೆಲೆಗಿಂತ ಒಂದು ಸಾಮಾನಿನ ಬೆಲೆ ಹೆಚ್ಚಾಗಿದ್ದಲ್ಲಿ ಅದನ್ನು ತಯಾರಿಸುವ ಉದ್ದಿಮೆ ನಶ್ಟ ಹೊಂದುವ ಸಂಬವ ಹೆಚ್ಚು.

ಇಂದು ಈ ರೀತಿಯ ಪರಿಣಾಮಗಳು ಆಗದಂತೆ ತಡೆಯಬೇಕಾಗಿರುವ ಹೊಣೆಗಾರಿಕೆ ನಮ್ಮ ಮೇಲಿದೆ. ನೀವೇನೆನ್ನುತ್ತೀರಿ?

(ಚಿತ್ರ ಸೆಲೆ: foreignpolicy.com)

ನಿಮಗೆ ಹಿಡಿಸಬಹುದಾದ ಬರಹಗಳು

4 Responses

 1. babu ajay says:

  ಒಳ್ಳೆಯ ಬರಹ ಚೇತನ್ .

 2. Mahesh Bhat says:

  ಅದಕ್ಕೇ ಇರಬಹುದು, ಇಂದು ಜಪಾನ್ ಅಪಾರ ಸಂಖ್ಯೆಯಲ್ಲಿ ರೋಬೋಟ್ ಸೃಷ್ಥಿಗೆ ತೊಡಗಿರುವುದು. ಕೆಲಸಗಾರರ ಕೊರತೆಯನ್ನು ನಿವಾರಿಸಲು ಚತುರ ಉಕ್ಕಾಳುಗಳ ತಯಾರಿಕೆಯಲ್ಲಿ ಜಪಾನ್ ಮುಂಚೂಣಿಯಲ್ಲಿದೆ.

  • chetanjeeral says:

   ಮಹೇಶ್ ನಿಮ್ಮ ಮಾತು ನಿಜ. ಆದರೆ ಅವರು ಅನುಬವಿಸುತ್ತಿರುವ ತೊಂದರೆಗೆ ಉಕ್ಕಾಳುಗಳ ತಯಾರಿಕೆ ಕೊಂಚ ಮಟ್ಟಿನ ಸಹಾಯವಾಗಬಲ್ಲದು. ಜನರೇ ಇಲ್ಲದೇ ಹೋದರೆ ಉಕ್ಕಾಳುಗಳು ಎಶ್ಟ್ರರ ಮಟ್ಟಿಗೆ ನಮಗೆ ಸಹಾಯಕ?

 1. 16/10/2013

  […] ಮತ್ತು ತೆಂಕಣ ಕೊರಿಯಾದಂತಹ ದೇಶಗಳಲ್ಲಿ TFR ಕಡಿಮೆಯಾಗಿ ಮಂದಿಯೆಣಿಕೆ ಕುಸಿಯುವ […]

ಅನಿಸಿಕೆ ಬರೆಯಿರಿ:

Enable Notifications