ಮಾಹಿತಿ ಹಕ್ಕು: ಮಂದಿಗೋ ಹಿಂದಿಗೋ?

ರತೀಶ ರತ್ನಾಕರ.

RTI-logo

ಮಾಹಿತಿ ಹಕ್ಕು, 2005ರಂದು ಜಾರಿಗೆ ಬಂದ ಒಂದು ಕಾಯ್ದೆ. ಸರಕಾರಕ್ಕೆ ಸಂಬಂದಿಸಿದ ಯಾವುದೇ ಮಾಹಿತಿಯನ್ನು (ಬದ್ರತೆ, ಗುಟ್ಟುದಳ ಹಾಗೂ ಶಾಸನಸಬೆಯ ಹಕ್ಕುಗಳಿಗೆ ಕೆಡುಕುಂಟಾಗುವಂತಹ ಮಾಹಿತಿಗಳನ್ನು ಹೊರತುಪಡಿಸಿ) ಮಂದಿಯು ಪಡೆದುಕೊಳ್ಳುವ ಹಕ್ಕನ್ನು ಈ ಕಾಯ್ದೆ ನೀಡಿದೆ. ಮಂದಿಯು ಕಟ್ಟುವ ತೆರಿಗೆಯಿಂದ ನಡೆಯುವ ಸರಕಾರ ಹಾಗೂ ಸರಕಾರದ ಹಮ್ಮುಗೆಗಳ ಕುರಿತು ವಿವರಗಳನ್ನು ಪಡೆಯುವ ಅದಿಕಾರ ಮಂದಿಗೆ ಇರುವುದು ಒಳ್ಳೆಯದೇ ಆಗಿದೆ. ಅಲ್ಲದೇ, ಹಲವು ಕಾನೂನಿನ ಮಾಹಿತಿಗಳನ್ನು ಕೂಡ ತಿಳಿದುಕೊಳ್ಳುವಲ್ಲಿ ಇದು ನೆರವಾಗಿದೆ. ಇಂತಹ ಮಾಹಿತಿ ಹಕ್ಕಿನ ಕುರಿತು ಮಂದಿಯಲ್ಲಿ ತಿಳಿವನ್ನು ಹೆಚ್ಚಿಸಲು ಅಕ್ಟೋಬರ್ 25ನ್ನು ‘ಮಾಹಿತಿ ಹಕ್ಕಿನ ದಿನ’ವನ್ನಾಗಿ ಆಚರಿಸಲಾಗುತ್ತದೆ.

ಈ ಮಾಹಿತಿ ಹಕ್ಕಿನ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಒಕ್ಕೂಟ ಸರಕಾರದ ಕಡೆಯಿಂದ ಮಂದಿಯಾಳ್ವಿಕೆಗೆ ಮಸಿ ಬಳಿಯುವ ಕೆಲಸವೊಂದು ನಡೆದಿದೆ. ಮಾಹಿತಿ ಹಕ್ಕು ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ಮಾಡಿ ಕಳೆದ ಆಗಸ್ಟ್‍ನಲ್ಲಿ ಮಾಹಿತಿ ಹಕ್ಕು ಕಾಯ್ದೆ (ತಿದ್ದುಪಡಿ) 2013ನ್ನು ಲೋಕಸಬೆಯಲ್ಲಿ ಮಂಡಿಸಲಾಗಿತ್ತು. ಈ ತಿದ್ದುಪಡಿಗಳ ಕುರಿತು ಮಂದಿಯ ಅನಿಸಿಕೆ ಹಾಗು ಸಲಹೆಗಳನ್ನು ನೀಡುವಂತೆ ಕೋರಿತ್ತು. ಇಲ್ಲಿ ಮಸಿ ಬಳಿಯಲಾದ ಕೆಲಸ ಏನು ಗೊತ್ತೇ? ಅದು, ಮಂದಿಯು ತಮ್ಮ ಅನಿಸಿಕೆ ಮತ್ತು ಸಲಹೆಗಳನ್ನು ಕೇವಲ ಇಂಗ್ಲೀಶ್ ಇಲ್ಲವೇ ಹಿಂದಿಯಲ್ಲಿ ನೀಡಬೇಕು ಎಂಬ ಕಟ್ಟಲೆ ಮಾಡಿರುವುದು.

ಹವ್ದು, ನುಡಿಯ ಹಲತನವನ್ನು ಒಕ್ಕೂಟ ಸರಕಾರ ಗಣನೆಗೆ ತೆಗೆದುಕೊಂಡೇ ಇಲ್ಲ. ಮಂದಿಯು ಅವರ ನುಡಿಯಲ್ಲಿಯೇ ತಮ್ಮ ಅನಿಸಿಕೆ ಹಾಗೂ ಸಲಹೆಗಳನ್ನು ನೀಡುವಂತಹ ಏರ‍್ಪಾಡನ್ನು ಒಕ್ಕೂಟ ಸರಕಾರ ಮಾಡಿಲ್ಲ. ಕೇವಲ ಇಂಗ್ಲೀಶ್ ಗೊತ್ತಿದ್ದವರು ಇಲ್ಲವೇ ಹಿಂದಿಯವರು ಮಾತ್ರ ಸರಕಾರದ ಕಾಯ್ದೆಯ ಕೆಲಸಗಳಲ್ಲಿ ಪಾಲ್ಗೊಳ್ಳಬಹುದು. ಹಿಂದಿ ಇಲ್ಲವೇ ಇಂಗ್ಲೀಶ್ ಗೊತ್ತಿಲ್ಲವಾದರೆ ಅವರ ಪಾಲ್ಗೊಳ್ಳುವಿಕೆ ಒಕ್ಕೂಟ ಸರಕಾರಕ್ಕೆ ಬೇಡವಾಗಿದೆ. ಹಿಂದಿಯೇತರರ ಮೇಲಿರುವ ಒಕ್ಕೂಟದ ಅಸಡ್ಡೆಯನ್ನು ಈ ಪ್ರಕರಣ ಎತ್ತಿ ತೋರಿಸುತ್ತದೆ. ಹಿಂದಿ ಗೊತ್ತಿಲ್ಲದವರನ್ನು ಎರಡನೇ ದರ್‍ಜೆಯ ಮಂದಿಯನ್ನಾಗಿ ಒಕ್ಕೂಟವು ನೋಡುತ್ತಿದೆ ಎನ್ನುವುದನ್ನು ಇಂತಹ ಪ್ರಕರಣಗಳು ಪದೇ ಪದೇ ಸಾರುತ್ತಿವೆ.

ಮಾಹಿತಿ ಹಕ್ಕಿಗೆ ನಿಜವಾದ ಬೆಲೆ ಬರುವುದು ಆ ಮಾಹಿತಿಯು ಮಂದಿಗೆ ಮಂದಿಯ ನುಡಿಯಲ್ಲಿಯೇ ಸಿಕ್ಕಾಗ. ವಿಪರ್‍ಯಾಸವೆಂದರೆ ಅಂತಹ ಮಾಹಿತಿ ಹಕ್ಕಿನ ಕಾಯ್ದೆಯ ಕುರಿತು ಮಂದಿಯು ತಮ್ಮ ಅನಿಸಿಕೆಗಳನ್ನು ಅವರ ನುಡಿಯಲ್ಲಿ ನೀಡುವ ಹಾಗಿಲ್ಲ! ಈ ಕಾಯ್ದೆಗೆ ನೀಡುವ ಅನಿಸಿಕೆಗಳನ್ನು ಅಶೋಕ್ ಕುಮಾರ್ ಸಾಹು ಎಂಬ ಅದಿಕಾರಿಗೆ ಕಳಿಸಬೇಕಾಗಿದೆ. ಒಂದು ವೇಳೆ ಅಶೋಕ್ ಕುಮಾರ್ ಸಾಹು ಅವರಿಗೆ ಬೇರೆ ನುಡಿ ಗೊತ್ತಿದ್ದರೂ (ಅವರ ಹೆಸರು ನೋಡಿದರೆ ಒಡಿಯಾ ಬಲ್ಲವರಂತೆ ಕಾಣುತ್ತದೆ ಕೂಡ) ಆ ನುಡಿಯಲ್ಲಿ ಅವರು ಮಂದಿಯನಿಸಿಕೆ ಪಡೆಯುವ ಹಾಗಿಲ್ಲ!

ಮಂದಿಯು ಅವರವರ ನುಡಿಯಲ್ಲಿ ಅವರನ್ನು ಆಳಿಕೊಂಡು ಮಂದಿಯಾಳ್ವಿಕೆಯನ್ನು ನಡೆಸಿಕೊಳ್ಳುವ ಏರ‍್ಪಾಡು ಇರಬೇಕಿತ್ತು. ಆದರೆ ಹಿಂದಿಯೇತರ ಮಂದಿಯನ್ನು ಈ ಮಸೂದೆಗೆ ಸಲಹೆ ನೀಡುವುದರಿಂದ ಹೊರಗಿಟ್ಟು ಬರಿ ಹಿಂದಿಯಾಳ್ವಿಕೆಯಾಗಿ ಕಾಣಿಸಿಕೊಳ್ಳುತ್ತಿದೆ. ಬೇರೆ ಬೇರೆ ನುಡಿಯಾಡುಗರು ಇರುವಂತಹ ನಾಡಿಗೆ ಒಂದು ಕಾಯ್ದೆ ಮಾಡುವಾಗ ಅದು ಎಲ್ಲಾ ನುಡಿಯಾಡುಗರನ್ನು ಅವರವರ ನುಡಿಗಳ ಮೂಲಕ ತಲುಪುವಂತಿರಬೇಕು. ಅದನ್ನು ಬಿಟ್ಟು ಯಾವುದೇ ಒಂದು ನುಡಿಯನ್ನು ಬಳಸುವಂತಹ ಏರ‍್ಪಾಡು ಮಾಡುವುದು ಮಂದಿಯ ಹಕ್ಕನ್ನು ಕಸಿದುಕೊಂಡಂತೆ ಮತ್ತು ಮಂದಿಯಾಳ್ವಿಕೆಗೆ ಮಸಿ ಬಳಿದಂತೆ.

(ಚಿತ್ರ ಸೆಲೆ: yespunjab.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: