ಕಾರಂಜಿ ಹೀಗಿದ್ದರೆ ಚೆನ್ನ

– ಶ್ರೀನಿವಾಸಮೂರ‍್ತಿ ಬಿ.ಜಿ.

karanji

ಪ್ರತಿಬಾ ಕಾರಂಜಿಯು ನುಡಿಯ, ಸಾಹಿತ್ಯದ, ನೆಮ್ಮಿಯ, ವಿಜ್ನಾನದ, ಸಂಸ್ಕ್ರುತಿಯ ಹಾಗೂ ಇನ್ನುಳಿದ ನೆಲೆಗಟ್ಟುಗಳಲ್ಲಿ ಹುದುಗಿರುವ ಜಾಣ್ಮೆಯನ್ನು ಮಕ್ಕಳು ಕಲಿಸುಗರಿಗೆ, ತಮ್ಮ ತಂದೆ-ತಾಯಂದಿರಿಗೆ ಹಾಗೂ ಕೂಡಣಿಗರಾದ ನಮಗೆ ತೋರ‍್ಪಡಿಸಲು ಒಂದು ಸುಳುವಿನ ಕಾರ‍್ಯಕ್ರಮವಾಗಿದೆ.

ಸಾರ‍್ವಜನಿಕ ಶಿಕ್ಶಣ ಇಲಾಕೆಯವರು ಈ ಕಾರ‍್ಯಕ್ರಮವನ್ನು ಹೋಬಳಿಯಿಂದ ಹಿಡಿದು ರಾಜ್ಯ ಮಟ್ಟದ ತನಕ 1-4, 5-7 ಹಾಗೂ 8-10 ತರಗತಿಗಳ ಮಕ್ಕಳನ್ನು ಬೇರೆಯಾಗಿಸಿ ಸ್ಪರ‍್ದೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ ಮಕ್ಕಳು ತಂಡವಾಗಿ ಇಲ್ಲವೆ ಒಂಟಿಯಾಗಿ ಜಾಣ್ಮೆಯನ್ನು ತೋರ‍್ಪಡಿಸಬಹುದಾಗಿದೆ. ಗೆದ್ದವರಿಗೆ ಬಹುಮಾನಗಳನ್ನು ನೀಡಿ ಗವ್ರವಿಸುವುದು ಕೂಡ ಎಂದಿನಂತೆಯೇ ಇದೆ.

ದಾರ‍್ಮಿಕ ಪಟಣ, ಕವಾಲಿ, ಸುಗಮ ಸಂಗೀತ, ಉಡುಗೆತೊಡುಗೆ, ಚಿತ್ರ ಬಿಡಿಸುವ, ಕತೆ ಹೇಳುವ, ಮಣ್ಣು ಕಲೆ, ಯೋಗಾಸನ, ಜನಪದ ಕುಣಿತ, ಹಿಂದೂಸ್ತಾನಿ-ಕರ‍್ನಾಟಕ ಶಾಸ್ತ್ರೀಯ ಸಂಗೀತ, ಬರತ ನಾಟ್ಯ, ರಂಗೋಲಿ ಮತ್ತು ಗಜಲ್ ಇವುಗಳ ಜೊತೆಗೆ ವಿಜ್ನಾನ ಮಾದರಿಗಳನ್ನು ಅಣಿಗೊಳಿಸುವ ಸ್ಪರ‍್ದೆಗಳು ಈ ಕಾರ‍್ಯಕ್ರಮದಲ್ಲಿವೆ.

ಕಾನೂನಿಗೆ ಸಂಬಂದಪಟ್ಟ ಯಾವ ತೆರನ ಸ್ಪರ‍್ದೆಗಳೂ ಇದರಲ್ಲಿ ಇಲ್ಲವಾದರೂ ಕಾನೂನಿಗೆ ಹತ್ತಿರವಾದ ದೇಶಗೀತೆ, ಪ್ರಬಂದ, ಕೆಣಕೇಳ್ವಿ (Quiz), ಬಾಶಣ ಹಾಗೂ ಮಾತ್ವರಸೆ (Debate) ಸ್ಪರ‍್ದೆಗಳು ಇವೆ.

ಈ ಕಾರ‍್ಯಕ್ರಮದಲ್ಲಿ ಕಾನೂನಿನ ಆಶಯಗಳನ್ನು ಹೊಂದಿರುವ ಹಾಡುಗಳನ್ನೂ ಕೂಡ ಸ್ಪರ‍್ದೆಗೆ ಅಳವಡಿಸಿಕೊಂಡರೆ ಕಾನೂನುಗಳ ಅರಿವು ಮಕ್ಕಳಲ್ಲಿ ಮೂಡುತ್ತದಲ್ಲದೆ ಸ್ಪರ‍್ದಾತ್ಮಕ ಹುದ್ದೆಗಳನ್ನು ಪಡೆದುಕೊಳ್ಳುವ ಹಂಬಲವಿರುವವರಿಗೆ ಇದು ಒಂದು ಸುಲಬದ ದಾರಿಯೂ ಆಗುತ್ತದೆ. ಹೊತ್ತಗೆಯಿಂದ ತಿಳಿಯಲಿಕ್ಕೆ ಆಗದವರಿಗೂ ಈ ತೆರನವುಗಳು ನೆರವಿಗೆ ಒದಗುತ್ತವೆ.

ಬಾರತದ ಸಂವಿದಾನ, ಬಾರತ ದಂಡ ಸಂಹಿತೆ, ಮಕ್ಕಳ ಹಕ್ಕುಗಳ ಕಟ್ಟಲೆಗಳು, ಸಕಾಲ, ಚುನಾವಣೆಗೆ ಸಂಬಂದಿಸಿದ ಕಟ್ಟಲೆಗಳು, ಮಕ್ಕಳ ಪಾಲನೆ ಮತ್ತು ರಕ್ಶಣೆಯ ಕಟ್ಟಲೆಗಳು ಹಾಗೂ ಇನ್ನು ಅನೇಕ ಕಟ್ಟಲೆಗಳಲ್ಲಿ ಅಡಗಿರುವ ಆಶಯಗಳನ್ನು ಹಾಡಾಗಿಸಿ ಮಕ್ಕಳನ್ನು ಈ ತೆರನ ಸ್ಪರ‍್ದೆಗಳಲ್ಲಿ ತೊಡಗುವಂತೆ ಹುರಿದುಂಬಿಸಿದರೆ ಅವರಲ್ಲೂ ಅಡಗಿರುವ ಆಸಕ್ತಿ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಈಗಾಗಲೆ ಸಂಗೀತವನ್ನು ಕಲಿತವರೂ ತುಸುವಾದರೂ ಮಕ್ಕಳಿಗೆ ಈ ತೆರನ ಹಾಡುಗಳನ್ನು ಹೇಳಿಕೊಡುವುದರಿಂದ ಅವರಿಗೂ ದುಡಿಮೆಯ ದಾರಿಯಾಗುತ್ತದೆ.

ಇಂದು ಬರತ ನಾಟ್ಯ, ಕರ‍್ನಾಟಕ-ಹಿಂದುಸ್ತಾನಿ-ಸುಗಮ ಸಂಗೀತಗಳನ್ನು ಕಲಿಸುವ ಕಲಿಕೆ ಮನೆಗಳೇನೋ ಎಶ್ಟೋ ಇವೆ. ಆದರೆ ಕಾನೂನು ಆಶಯಗಳನ್ನು ಹೊಂದಿರುವ ಹಾಡುಗಳನ್ನು ಹೇಳಿಕೊಡುವ ಮನೆಗಳು ಇಲ್ಲವೇನೋ ಎನ್ನಬಹುದು. ಹೀಗಾಗಿ ನಲ್ಬರಹಗಳಲ್ಲಿ ತೊಡಗಿಸಿಕೊಂಡಿರುವವರು ಇಲ್ಲವೆ ಸರ‍್ಕಾರ ಇದರ ಕಡೆ ಗಮನವನ್ನು ಹರಿಸಬೇಕಾಗಿದೆ.

ಕಟ್ಟಲೆಯರಿಗರು ತಮ್ಮತಮ್ಮ ಮಕ್ಕಳನ್ನು ಕಟ್ಟಲೆಯರಿಗರನ್ನಾಗಿಸಲು ಬಯಕೆ ಹೊಂದಿದ್ದಲ್ಲಿ ಇದು ಸುಳುವಾದ ಕೆಲಸವಾಗಿದೆ. ಒಂದು ವೇಳೆ ಈ ಕೆಲಸವಾದಲ್ಲಿ ವಿದ್ಯಾರ‍್ತಿ ಕೂಟಗಳೂ ಕೂಡ ತಮ್ಮತಮ್ಮ ಗುಂಪುಗಳಲ್ಲಿ ಸ್ಪರ‍್ದೆಯನ್ನು ಏರ‍್ಪಡಿಸಿಕೊಂಡರೆ ನಾಡ ಒಳಿತಿಗೆ ಶ್ರಮಿಸಲು ನೆರವಾಗುತ್ತದೆ. ಪ್ರತಿಬಾ ಕಾರಂಜಿಯ ಕಾರ‍್ಯಕ್ರಮದಿಂದಲೂ ಕೆಲಸವಿಲ್ಲದವರಿಗೆ ಒಂದಶ್ಟು ದಿನ ಕೆಲಸವನ್ನು ನೀಡಬಹುದು. ಆದರೆ ಈ ತೆರನಾಗಿ ಯೋಚಿಸಿ ಕೆಲಸ ಮಾಡುವವರು ಯಾರು?

ಇಂದು T.V.ಗಳಲ್ಲಿ ನಡೆಯುವ ಸ್ಪರ್‍ದೆಗಳಲ್ಲಿ ಕಾಣಿಸಿಕೊಂಡು ಒಂದೇ ಸಲಕ್ಕೆ ಮಂದಿಯ ನೆನಪಿನ ತೆರೆಯೊಳಕ್ಕೆ ದಾಂಗುಡಿ ಇಡುತ್ತಿರುವವರ ಎಣಿಕೆಯಲ್ಲಿ ಹೆಚ್ಚಳವಾಗುತ್ತಿದೆ. ಆದರೆ ತಳಮಟ್ಟದಿಂದ ರಾಜ್ಯ ಮಟ್ಟಕ್ಕೆ ಏರಿದವರು ಮಂದಿಯ ನೆನಪಿನ ತೆರೆಗೆ ಅಶ್ಟಾಗಿ ಬರುವುದೇ ಇಲ್ಲ. ಇದಕ್ಕೆ ಕಾರಣ ಶಿಕ್ಶಣ ಇಲಾಕೆಯವರು ಮಾದ್ಯಮಗಳ ನೆರವನ್ನು ಪಡೆದು ರಾಜ್ಯ ಮಟ್ಟದ ಸ್ಪರ್‍ದೆಗಳನ್ನು ನೇರ ಪ್ರಸಾರ ಮಾಡಿಸುವ ಕಡೆ ಗಮನಹರಿಸದಿರುವುದು ಒಂದಾದರೆ, ರಾಜ್ಯ ಮಟ್ಟದಲ್ಲಿ ಹಲಬಗೆಯ ಸ್ಪರ್‍ದೆಗಳಲ್ಲಿ ಗೆಲ್ಲುವ ಹಾಡು, ಕತೆ, ಕವನ, ಬಾಶಣ, ಇತರೆಗಳನ್ನು ದಾಕಲಿಸುವ ಮತ್ತು ಗೆದ್ದವರಿಗೆ ಆ ದಾಕಲೆಗಳನ್ನು ನೀಡುವ ಯೋಜನೆ ಇರದಿರುವುದು ಮತ್ತೊಂದು ಆಗಿದೆ.

ಇಂದು ಚಂದನ ವಾಹಿನಿಯು ತನ್ಹಾದಿಯ ಹಕ್ಕನ್ನು ಪಡೆದಿದ್ದರೂ ಸರ್‍ಕಾರಿ ಯೋಜನೆಗಳನ್ನು ಮಂದಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿಯೇ ಮಾಡುತ್ತಿದೆ. ಆದರೆ ಶಿಕ್ಶಣ ಇಲಾಕೆಯವರು ಇವರ ನೆರವನ್ನು ಸುದ್ದಿಗೆ ಮಾತ್ರ ಪಡೆಯುತ್ತಿದ್ದಾರೆಯಶ್ಟೆ.

ಸಾದನೆ ಮಾಡಿದ್ದಾಗ್ಯೂ ಸಾದನೆ ತನಗೆ ಮಾತ್ರ ಸೀಮಿತವಾಗಿಸಿಕೊಳ್ಳಬಾರದು. ಮತ್ತೆಮತ್ತೆ ನೆನಪಿಸುವ ಸಾದನೆಗಳು ಆಗುತ್ತಾ ಇರಬೇಕು. ಮಕ್ಕಳು ಈ ಕಾರ್‍ಯಕ್ರಮದಡಿಯಲ್ಲಿ ಮಾಡಿದ ಸಾದನೆಗಳು ಮಕ್ಕಳ ಬಳಿ ಪುರಾವೆಯೊಂದಿಗೆ ನೆನಪಾಗಿಯೂ ಉಳಿಯಬೇಕು. ಈ ತೆರನವುಗಳಿಂದ ಸುತ್ತಣಿಗರೂ ಮಕ್ಕಳ ನೆರವಿನಲ್ಲಿರುತ್ತಾರೆ. ಇದರ ಜೊತೆಗೆ ತಮ್ಮಶ್ಟಕ್ಕೇನೆ ಹುರಿದುಂಬಿಸಿಕೊಳ್ಳುವ ಮನೋಬಾವದವರಾಗಿ ಮಕ್ಕಳು ರೂಪುಗೊಳ್ಳುತ್ತಾರೆ. ಹೊತ್ತಗೆಯ ಕಲಿಕೆಯೊಟ್ಟಿಗೆ ನಲ್ಗೆಲಸಗಳಿಂದಲೂ ಕಲಿಕೆ ಸಾಗುತ್ತದೆ. ಒತ್ತಡಗಳಲ್ಲಿಯೇ ತೊಳಲಾಡುವುದನ್ನು ಈ ತೆರನ ಕೆಲಸಗಳಿಂದ ಆದಶ್ಟೂ ತಡೆಗಟ್ಟಬಹುದಾಗಿದೆ.

(ಚಿತ್ರ ಸೆಲೆ: prajavani.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: