ಕಾಲ್ಚೆಂಡು ವಿಶ್ವ ಕಪ್ – ಗುಂಪುಗಳ ನಡುವಿನ ಪಯ್ಪೋಟಿ

ರಗುನಂದನ್.

FIF_groups

ಹಿಂದಿನ ಬರಹದಲ್ಲಿ ನಾವು ಈ ವಿಶ್ವಕಪ್ಪಿನ ತೊಡಕಿನ ಗುಂಪು ಯಾವುದೆಂದು ಗುರುತಿಸಿದ್ದೆವು.

ಜರ‍್ಮನಿ, ಪೋರ‍್ಚುಗಲ್ ಮತ್ತು ಯು.ಎಸ್.ಎ. ತಂಡಗಳನ್ನು ಹೊಂದಿರುವ G ಗುಂಪು ಈಗ ಎಲ್ಲಕ್ಕಿಂತ ಬಲಿಶ್ಟ ಗುಂಪಾಗಿ ಕಾಣುತ್ತಿದೆ. ಬಳಿಕ ಸ್ಪೇನ್, ಹಾಲೆಂಡ್ ಮತ್ತು ಚಿಲಿ ತಂಡಗಳನ್ನು ಹೊಂದಿರುವ B ಗುಂಪಿನಿಂದ ಯಾವ ಎರಡು ತಂಡಗಳು ಆಯ್ಕೆಯಾಗುತ್ತವೆ ಎಂಬುದು ಒಳ್ಳೆಯ ಪಯ್ಪೋಟಿಗೆ ಈಡುಮಾಡುಕೊಟ್ಟಿದೆ. ಇಂಗ್ಲೆಂಡ್ ಕಾಲ್ಚೆಂಡು ತಂಡದ ಅಬಿಮಾನಿಗಳಿಗೆ ತಮ್ಮ ನೆಚ್ಚಿನ ತಂಡ D ಗುಂಪಿನಲ್ಲಿರುವುದು ಅಶ್ಟೇನು ಹಿಡಿಸಿಲ್ಲ. ಕಾರಣ ಇಲ್ಲಿ ಮತ್ತೆರಡು ಬಲವಾದ ಇಟಲಿ ಮತ್ತು ಉರುಗ್ವೆ ತಂಡಗಳಿವೆ. ಈಗ ಬೇರೆ ಗುಂಪುಗಳತ್ತ ಗಮನ ಹರಿಸೋಣ.

A ಗುಂಪು

ಇಂಡಿಯಾದಲ್ಲಿ ಕೆಲವರು ಕಾಲ್ಚೆಂಡು ವಿಶ್ವಕಪ್ ನೋಡುವುದೇ ಬ್ರೆಜಿಲ್ ತಂಡದ ಆಟವನ್ನು ಸವಿಯಲು. ಪೀಲೆ, ರೊನಾಲ್ಡೋ, ಗಾರಿಂಚಾದಂತಹ ಮೇರು ಆಟಗಾರರು ಕಳೆದ ಶತಮಾನದಲ್ಲಿ ಬ್ರೆಜಿಲ್ ತಂಡಕ್ಕೆ ಆಡಿದ್ದಾರೆ ಮತ್ತು ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಬ್ರೆಜಿಲಿನಲ್ಲಿ ಕಾಲ್ಚೆಂಡು ಆಟಗಾರನೆಂದರೆ ಹೆಸರು, ಹಣ, ಗವ್ರವ ತಾನಾಗಿಯೇ ಬರುತ್ತೆ. ಈ ಕಾರಣಕ್ಕಾಗಿಯೇ ಬ್ರೆಜಿಲ್ ಕಾಲ್ಚೆಂಡು ತಂಡಕ್ಕೆ ಜಗತ್ತಿನ ಉದ್ದಗಲಕ್ಕೂ ಸಾಕಶ್ಟು ಬೆಂಬಲಿಗರಿದ್ದಾರೆ. ಹಲವಾರು ವರುಶಗಳ ಬಳಿಕ ಬ್ರೆಜಿಲಿನಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಬ್ರೆಜಿಲ್ ತಂಡದ ಮೇಲಿನ ನಿರೀಕ್ಶೆ ಮತ್ತು ಒತ್ತಡ ಹೆಚ್ಚಾಗಿದೆ ಎಂದೇ ಹೇಳಬಹುದು. ಕ್ರೊವೇಶಿಯಾ, ಕ್ಯಾಮರೂನ್ ಮತ್ತು ಮೆಕ್ಸಿಕೋ ತಂಡಗಳು ಈ ಗುಂಪಿನಲ್ಲಿದ್ದು ಬ್ರೆಜಿಲ್‌ಗೆ ಮುಂದಿನ ಸುತ್ತಿಗೆ ಹೋಗುವುದು ಅಶ್ಟೇನು ಕಶ್ಟವಲ್ಲ ಎಂಬುದು ತಿಳಿವಿಗರ ಅನಿಸಿಕೆ.

C ಗುಂಪು

ಇಲ್ಲಿರುವ ತಂಡಗಳಲ್ಲಿ ಕೊಲಂಬಿಯಾ, ಗ್ರೀಸ್ ಮತ್ತು ಅಯ್ವರಿ ಕೋಸ್ಟ್ ನಡುವೆ ಹೆಚ್ಚು ಎಡೆಯಿಲ್ಲ. ಕೊಲಂಬಿಯಾ ಬಿರುಸಿನ ಚುರುಕಿನ ಆಟಕ್ಕೆ ಹೆಸರುವಾಸಿಯಾಗಿದ್ದು ಈ ಗುಂಪಿನ ನೆಚ್ಚಿನ ತಂಡವಾಗಿದೆ. ಗ್ರೀಸ್ ಮತ್ತು ಅಯ್.ಕೋಸ್ಟ್ ನಡುವೆ ನೇರ ಪಯ್ಪೋಟಿ ಏರ‍್ಪಟ್ಟಿದೆ. ನಾಲ್ಕನೇ ತಂಡವಾದ ಜಪಾನ್ ಒಂದೊಂದು ವಿಶ್ವಕಪ್ಪಿನಲ್ಲೂ ಮೇಲೆ ಏರುತ್ತಿದ್ದು ಈ ಮೂರೂ ತಂಡಗಳಿಗೆ ಅಚ್ಚರಿ ಮೂಡಿಸುವ ಎಲ್ಲಾ ಸಾದ್ಯತೆಗಳೂ ಇವೆ. ಮುಂದಿನ ಸುತ್ತುಗಳಲ್ಲಿ ಕೊಲಂಬಿಯಾ ಬೇರೆ ಬಲಿಶ್ಟ ತಂಡಗಳಿಗೆ ಪ್ರಬಲ ಎದುರಾಳಿಯಾಗುವುದರಲ್ಲಿ ಯಾವುದೇ ಅರೆಮರೆಯಿಲ್ಲ. ಅಯ್ವರಿ ಕೋಸ್ಟಿನ ಪ್ರೀಮಿಯರ್ ಲೀಗ್ ಆಟಗಾರರಾದ ಯಾಯಾ ಟೂರೆ ಮತ್ತು ಡಿಡಿಯೇರ್ ಡ್ರಾಗ್ಬಾಗೆ ತಮ್ಮ ಕಡೆಯ ವಿಶ್ವಕಪ್ಪಿನಲ್ಲಿ ಒಳ್ಳೆಯ ಸಾದನೆ ತೋರಲು ಕಾಯುತ್ತಿದ್ದಾರೆ.

E ಗುಂಪು

ಪ್ರಾನ್ಸ್ ಮತ್ತು ಸ್ವಿಟ್ಜರ್‍‌ಲ್ಯಾಂಡ್ ಈ ಗುಂಪಿನ ನೆಚ್ಚಿನ ತಂಡಗಳು. ಪ್ರಾನ್ಸ್ ಸುಳುವಾಗಿ ಮುಂದಿನ ಸುತ್ತಿಗೆ ಹೋಗಬಲ್ಲುದಾದರೂ ಕಳೆದ ಸಲಿಯ ಕಹಿನೆನಪು ಹೋಗಿರಲಿಕ್ಕಿಲ್ಲ. ಕಳೆದ ಸಲಿ ಕೂಡ ಇಂತಹುದ್ದೇ ಗುಂಪಿನಲ್ಲಿ ಆಡಿದ್ದ ಪ್ರಾನ್ಸ್ ಹೆಚ್ಚಿನ ಸಾದನೆಗೆಯ್ಯಲು ಆಗಿರಲಿಲ್ಲ. ಈ ಸರತಿ ತಮ್ಮ ಆಟದ ಅಳವನ್ನು ತೋರಿಸಲು ಪ್ರಾನ್ಸ್ ತುದಿಗಾಲಿನಲ್ಲಿ ನಿಂತಿದೆ. ಸ್ವಿಟ್ಜರ್‍‌ಲ್ಯಾಂಡ್ ತಂಡ ಕಳೆದ ವಿಶ್ವಕಪ್ಪಿನಲ್ಲಿ ಸ್ಪೇನ್ ತಂಡವನ್ನು ಸೋಲಿಸಿತ್ತು. ಈ ಸಲಿ ಮುಂದಿನ ಹಂತಕ್ಕೆ ಹೋಗುವುದು ಕಶ್ಟವೇನಲ್ಲ ಎಂದು ತೋರುತ್ತಿದೆ. ಇನ್ನೆರಡು ತಂಡಗಳಾದ ಈಕ್ವೇಡಾರ್ ಮತ್ತು ಹೊಂಡುರಾಸ್ ಏನಾದರು ಲೆಕ್ಕವನ್ನು ತಿರುಗು-ಮುರುಗು ಮಾಡಲಾದೀತೆ ಕಾದುನೋಡಬೇಕಿದೆ.

F ಗುಂಪು

ಸದ್ಯದ ಜಗತ್ತಿನ ಮೇರು ಕಾಲ್ಚೆಂಡು ಆಟಗಾರನಾದ ಲಿಯೋನೆಲ್ ಮೆಸ್ಸಿ ಇರುವ ಅರ‍್ಜೆಂಟೀನಾ ತಂಡ ಈ ಗುಂಪಿನಲ್ಲಿದೆ. ವಿಶ್ವಕಪ್ ಗೆಲ್ಲುವ ಎಲ್ಲಾ ಸಲಕರಣೆಗಳು ಚಳಕಗಳು ಈ ತಂಡದಲ್ಲಿದೆ. ಬ್ರೆಜಿಲ್ ತಂಡಕ್ಕೆ ನೇರ ಎದುರಾಳಿಯಾಗಿ ನಿಂತಿದೆ ಅರ‍್ಜೆಂಟೀನಾ. ಮೆಸ್ಸಿ ಸುತ್ತ ಕಟ್ಟಿರುವ ತಂಡ ಮೊದಲ ಹಂತ ಸುಳುವಾಗಿ ದಾಟಲಿದೆ. ಈ ಗುಂಪಿನಲ್ಲಿ ಇರುವ ಬೇರೆ ತಂಡಗಳು ಬೋಸ್ನಿಯಾ, ಇರಾನ್ ಮತ್ತು ನಯ್ಜೀರಿಯಾ. ಆಪ್ರಿಕನ್ ಕಪ್ ಆಪ್ ನೇಶನ್ಸ್ ಗೆದ್ದಿರುವ ನಯ್ಜೀರಿಯಾದ ತನ್ನಂಬಿಕೆ ಹೆಚ್ಚಿದೆ. ಏಶಿಯಾದ ಕಡು ಹೆಚ್ಚು ಸ್ತಾನದಲ್ಲಿರುವ ಇರಾನ್ ಪ್ರಬಲ ಪಯ್ಪೋಟಿಯೊಡ್ಡುವ ನಿರೀಕ್ಶೆ ಇದೆ.

H ಗುಂಪು

ಈ ಗುಂಪಿನ ನೆಚ್ಚಿನ ತಂಡ ಬೆಲ್ಜಿಯಮ್ ಎಂದೇ ಹೇಳಬಹುದು. ಬೆಲ್ಜಿಯಮ್ ತಂಡಕ್ಕೆ ಆಡುವವರಲ್ಲಿ ಇಂಗ್ಲಿಶ್ ಪ್ರೀಮಿಯರ್ ಲೀಗಿನ ಒಳ್ಳೊಳ್ಳೆ ಆಟಗಾರರಿದ್ದಾರೆ. ಮುಂದಿನ ಸುತ್ತಿಗೆ ಹೋಗುವುದು ಅಶ್ಟೇನು ಕಶ್ಟವೆನಿಸುವುದಿಲ್ಲ. ಬೆಲ್ಜಿಯಮ್ ತಂಡದೊಟ್ಟಿಗೆ ರಶ್ಯಾ ಮತ್ತು ತೆಂಕಣ ಕೊರಿಯಾ ಕೂಡ ಈ ಗುಂಪಿನಲ್ಲಿ ಇರುವ ತಂಡಗಳು. ಇವೆರಡು ಗುಂಪುಗಳಲ್ಲಿ ಯಾವುದು ಮುಂದಿನ ಹಂತಕ್ಕೆ ಹೋಗುತ್ತದೆ ಎಂಬುದು ಕಾದುನೋಡಬೇಕಿದೆ.

(ಚಿತ್ರ ಸೆಲೆ: zastavki.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.