ಇಂಗ್ಲಿಶ್ ನುಡಿಯ ಜೋಡುಪದಗಳು – 2

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-15

(ಇಂಗ್ಲಿಶ್ ಪದಗಳಿಗೆ…-14ರಿಂದ ಮುಂದುವರಿದುದು) 

ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು

ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಲ್ಲಿ ಎರಡನೆಯ ಪದ ಒಂದು ಪರಿಚೆಪದವಾಗಿರುತ್ತದೆ; ಮೊದಲನೆಯ ಪದ ಹೆಸರುಪದವಾಗಿರಬಹುದು (sugar-free, blood-red), ಇಲ್ಲವೇ ಪರಿಚೆಪದವಾಗಿರಬಹುದು (icy cold, bluish-green). ಎರಡನೆಯದಾಗಿ ಬರುವ ಪರಿಚೆಪದವನ್ನು ಹೆಸರುಪದಕ್ಕೆ ಇಲ್ಲವೇ ಎಸಕಪದಕ್ಕೆ ಒಟ್ಟನ್ನು ಸೇರಿಸಿ ಪಡೆದಿರಲೂ ಬರುತ್ತದೆ (blue-eyed, clear-sighted).

ಇಂತಹ ಇಂಗ್ಲಿಶ್ ಜೋಡುಪದಗಳಲ್ಲಿ ಮೊದಲನೆಯ ಪದವಾಗಿ ಹೆಸರುಪದ ಬಂದಿರುವವೇ ಹೆಚ್ಚು ಬಳಕೆಯಲ್ಲಿವೆ. ಈ ಹೆಸರುಪದಕ್ಕೆ ಪರಿಚೆಪದದ ಒಂದು ಪಾಂಗನ್ನು ತಿಳಿಸುವ ಕೆಲಸ ಇರಬಲ್ಲುದು; ಎತ್ತುಗೆಗಾಗಿ, sugar-free ಎಂಬುದರಲ್ಲಿ ಬಂದಿರುವ sugar ಎಂಬ ಹೆಸರುಪದ free ಎಂಬುದರ ಒಂದು ಪಾಂಗಾಗಿದೆ (free of sugar).

ಮೊದಲನೆಯ ಪದಕ್ಕೆ ಎರಡನೆಯ ಪದ ತಿಳಿಸುವ ಪರಿಚೆಯನ್ನು ಕಡುಮೆಗೊಳಿಸುವ (intensifying) ಕೆಲಸವೂ ಇರಬಲ್ಲುದು; ಎತ್ತುಗೆಗಾಗಿ, dog-tired ಎಂಬುದರಲ್ಲಿ ಬಂದಿರುವ dog ಎಂಬ ಹೆಸರುಪದಕ್ಕೆ tired ಎಂಬ ಪರಿಚೆಪದ ತಿಳಿಸುವ ಪರಿಚೆಯನ್ನು ಕಡುಮೆಗೊಳಿಸುವ ಕೆಲಸ ಇದೆ; ಯಾಕೆಂದರೆ, ಈ ಜೋಡುಪದಕ್ಕೆ very tired ಎಂಬ ಹುರುಳಿದೆ.

ಇಂತಹ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಎರಡು ಬಗೆಯ ಹೊಲಬುಗಳನ್ನು ಬಳಸಲು ಬರುತ್ತದೆ: ಹೆಸರುಪದಗಳಾಗಿ ಬರುವ ಜೋಡುಪದಗಳ ಪತ್ತುಗೆರೂಪವನ್ನು ಬಳಸುವುದು ಒಂದು ಹೊಲಬು, ಮತ್ತು ಎಸಕಪದಗಳಾಗಿ ಬರುವ ಕೂಡುಪದಗಳ ಪರಿಚೆರೂಪವನ್ನು ಬಳಸುವುದು ಇನ್ನೊಂದು ಹೊಲಬು:

(1) ಜೋಡುಪದಗಳ ಪತ್ತುಗೆರೂಪದ ಬಳಕೆ:

ಹೆಸರುಪದಗಳಾಗಿ ಬರುವ ಜೋಡುಪದಗಳ ಪತ್ತುಗೆರೂಪವನ್ನು ಕನ್ನಡದಲ್ಲಿ ಪರಿಚೆಪದಗಳ ಜಾಗದಲ್ಲಿ ಬಳಸಲು ಬರುತ್ತದೆ; ಎತ್ತುಗೆಗಾಗಿ, ನೋವಳಿಕ ಎಂಬ ಜೋಡುಪದದ ಪತ್ತುಗೆರೂಪವನ್ನು ನೋವಳಿಕದ ತೊಡಕುಗಳು ಎಂಬಲ್ಲಿ ಒಂದು ಪರಿಚೆಪದದ ಜಾಗದಲ್ಲಿ ಬಳಸಲಾಗಿದೆ. ಇಂಗ್ಲಿಶ್‌ನಲ್ಲಿ ಪರಿಚೆಪದಗಳಾಗಿ ಬರುವ ಹಲವು ಜೋಡುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಇಂತಹ ಪತ್ತುಗೆರೂಪಗಳನ್ನು ಬಳಸಲು ಬರುತ್ತದೆ:

near-sighted ಸಾರೆನೋಟದ out-spoken ಬಿಚ್ಚುಮಾತಿನ
open-hearted ಬಿಚ್ಚೆದೆಯ photo-electric ಬೆಳಕುಮಿಂಚಿನ
quadrilateral ನಾಲ್ಬದಿಯ girl-crazy ಹುಡುಗಿಹುಚ್ಚಿನ
equi-distant ಸರಿದೂರದ multilingual ಹಲನುಡಿಯ
new-born ಹೊಸಹುಟ್ಟಿನ clear-sighted ತಿಳಿಕಾಣ್ಮೆಯ
self-imposed ತನ್ಪೇರ‍್ಕೆಯ self-addressed ತನ್ನೊಕ್ಕಣಿಕೆಯ
green-eyed ಹಸುರುಕಣ್ಣಿನ home-made ಮನೆಮಾಳ್ಕೆಯ

(2) ಕೂಡುಪದದ ಪರಿಚೆರೂಪಗಳ ಬಳಕೆ:

ಎಸಕಪದಗಳಾಗಿ ಬರುವ ಕೂಡುಪದಗಳ ಪರಿಚೆರೂಪಗಳನ್ನೂ ಕನ್ನಡದಲ್ಲಿ ಪರಿಚೆಪದಗಳ ಜಾಗದಲ್ಲಿ ಬಳಸಲು ಬರುತ್ತದೆ; ಕೂಡುಪದಗಳಿಗೆ ಹಿಂಬೊತ್ತಿನ ರೂಪ (ಹೊರಬಿದ್ದ), ಮುಂಬೊತ್ತಿನ ರೂಪ (ಹೊರಬೀಳುವ), ಮತ್ತು ಅಲ್ಲಗಳೆಯುವ ರೂಪ (ಹೊರಬೀಳದ) ಎಂಬುದಾಗಿ ಮೂರು ಬಗೆಯ ಪರಿಚೆರೂಪಗಳಿವೆ.

ಇವುಗಳಲ್ಲಿ ಹಿಂಬೊತ್ತಿನ ರೂಪ ಒಂದು ಎಸಕ ನಡೆದುದರಿಂದಾಗಿ ಉಂಟಾದ ಪರಿಚೆಯನ್ನು ತಿಳಿಸುತ್ತದೆ; ಮುಂಬೊತ್ತಿನ ರೂಪ ಬಳಕೆಯಲ್ಲಿರುವ ಒಂದು ಎಸಕದಿಂದ ದೊರೆಯುವ ಪರಿಚೆಯನ್ನು ತಿಳಿಸುತ್ತದೆ; ಮತ್ತು ಅಲ್ಲಗಳೆಯುವ ರೂಪ ಒಂದು ಎಸಕ ನಡೆಯದುದರಿಂದಾಗಿ ಉಂಟಾಗುವ ಪರಿಚೆಯನ್ನು ತಿಳಿಸುತ್ತದೆ. ಈ ಮೂರನ್ನೂ ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗುವ ಹಾಗೆ ಬಳಸಲು ಬರುತ್ತದೆ:

(1) ಹಿಂಬೊತ್ತಿನ ಪರಿಚೆರೂಪದ ಬಳಕೆ:      

misguided ಹಾದಿತಪ್ಪಿದ man-made ಆಳುಮಾಡಿದ
handicapped ಬಳಕೆಗುಂದಿದ tongue-tied ಮಾತುಕಟ್ಟಿದ
well-known ಹೆಸರಾದ ultrasonic ಕೇಳ್ಮೆಮೀರಿದ

(2) ಮುಂಬೊತ್ತಿನ ಪರಿಚೆರೂಪದ ಬಳಕೆ:

air-tight ಗಾಳಿತಡೆವ long-lasting ನಿಡುಬಾಳುವ
outgoing ಹೊರಹೋಗುವ hair-raising ನವಿರೇಳಿಸುವ
rain-proof ಮಳೆತಡೆವ man-eating ಆಳ್ತಿನ್ನುವ
mouth-watering ನೀರೂರಿಸುವ time-saving ಹೊತ್ತುಳಿಸುವ

 (3) ಅಲ್ಲಗಳೆಯುವ ಪರಿಚೆರೂಪದ ಬಳಕೆ:

outstanding ತೀರುವೆಯಾಗದ sugar-free ಸಕ್ಕರೆಹಾಕದ
stiff-necked ಬಿಟ್ಟುಕೊಡದ tight-fisted ಕಾಸುಬಿಚ್ಚದ
smoke-free ಹೊಗೆಯಿಲ್ಲದ everlasting ಕೊನೆಯಿಲ್ಲದ

ಇಂಗ್ಲಿಶ್‌ನಲ್ಲಿ ಬಳಕೆಯಲ್ಲಿರುವ ಇಂತಹ ಹಲವು ಪರಿಚೆಪದಗಳಾಗಿ ಬರುವ ಜೋಡುಪದಗಳಿಗೆ ಹೆಸರುಪದಗಳಾಗಿ ಇಲ್ಲವೇ ಎಸಕಪದಗಳಾಗಿ ಬರಬಲ್ಲ ರೂಪಗಳಿಲ್ಲ. ಆದರೆ ಇವಕ್ಕೆ, ಇಲ್ಲವೇ ಬೇರೆ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಕನ್ನಡದ ಪರಿಚೆರೂಪಗಳಿಗೆ ಹೆಸರುಪದಗಳಾಗಿ ಇಲ್ಲವೇ ಎಸಕಪದಗಳಾಗಿ ಬರಬಲ್ಲ ರೂಪಗಳೂ ಇವೆ; ಕನ್ನಡದಲ್ಲಿ ಇವು ಬೇರೆ ಪದಗಳಾಗಿರದೆ ಪದರೂಪಗಳಾಗಿರುವುದೇ ಇದಕ್ಕೆ ಕಾರಣ.

 ಎರವಲು ಪದಗಳಿರುವ ಇಂಗ್ಲಿಶ್ ಜೋಡುಪದಗಳು

ಗ್ರೀಕ್ ಇಲ್ಲವೇ ಲ್ಯಾಟಿನ್‌ನಿಂದ ಎರವಲು ಪಡೆದ ಕೆಲವು ಬೇರುಗಳನ್ನು ಬಳಸಿ ಇಂಗ್ಲಿಶ್‌ನಲ್ಲಿ ಹಲವು ಜೋಡುಪದಗಳನ್ನು ಹೊಸದಾಗಿ ಉಂಟುಮಾಡಲಾಗಿದೆ; ಇವನ್ನು neo-classical ಜೋಡುಪದಗಳೆಂದು ಕರೆಯಲಾಗುತ್ತದೆ; ಇವಕ್ಕೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಪಡೆಯಲು ಅಂತಹ ಹುರುಳುಗಳನ್ನು ಕೊಡಬಲ್ಲ ಪದಗಳನ್ನು ಇಲ್ಲವೇ ಬೇರುಗಳನ್ನು ಕನ್ನಡದಲ್ಲಿಯೂ ಬಳಸಲು ಬರುತ್ತದೆ. ಇಂತಹ ಪದ ಇಲ್ಲವೇ ಬೇರುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ.

(ಕ) ಜೋಡುಪದಗಳಲ್ಲಿ ಮೊದಲಿಗೆ ಬರುವ ಎರವಲು ಪದಗಳು ಇಲ್ಲವೇ ಬೇರುಗಳು: 

(1) astro ಬಾನ್

astronomy ಬಾನರಿಮೆ astrophysics ಬಾನ್ಪುರುಳರಿಮೆ
astronaut ಬಾನ್ದಾರಿಗ astrobiology ಬಾನುಸಿರರಿಮೆ
astrolaw ಬಾನ್ಕಟ್ಟಳೆ astroscope ಬಾನ್ತೋರ‍್ಪುಕ
astroblast ಬಾನ್ಸಿಡಿತ astrography ಬಾನರಿಮೆ

(2) bio ಉಸಿರು

biomass ಉಸಿರಿಟ್ಟಣ biomimatics ಉಸಿರಿಯಣಕ
biobattery ಉಸಿರಿಮಿನ್ನೆರಕ biochip ಉಸಿರಿಕೆತ್ತೆ
biodevice ಉಸಿರಿಚೂಟಿ biodigest ಉಸಿರಿಯರಗುಕ
biofilter ಉಸಿರಿಸೋಸುಕ biofabric ಉಸಿರಿಬಟ್ಟೆ

(3) electro ಮಿನ್

electromagnetic ಮಿನ್ಸೆಳೆತದ electrocute ಮಿನ್ಸಾಯಿಸು
electrolysis ಮಿನ್ತೆಗೆತ electrolyte ಮಿನ್ನೀರು
electroplate ಮಿನ್ಬಳಿ electroscope ಮಿನ್ತೋರ‍್ಪುಕ

(4) geo ಮಣ್ಣು, ನೆಲ, ಗೆರೆ

geology ಮಣ್ಣರಿಮೆ geography ನೆಲದರಿಮೆ
geodesy ನೆಲಪರಿಜರಿಮೆ geometry ಗೆರೆಯರಿಮೆ
geophysics ನೆಲಪುರುಳರಿಮೆ geopolitical ನೆಲಾಳ್ವಿಕೆಯ

(5) hydro ನೀರ್‍

hydrophobia ನೀರಂಜಿಕೆ hydrology ನೀರರಿಮೆ
hydrography ನೀರ‍್ತಿಟ್ಟದರಿಮೆ hydrolysis ನೀರೊಡೆತ
hydrometer ನೀರಳಕ hydropathy ನೀರ‍್ಮಾಂಜುಗೆ

(6) retro ಹಿನ್

retrogression ಹಿನ್ನಡೆತ retrograde ಹಿಮ್ಮೆಟ್ಟುವ
retrospect ಹಿನ್ನೋಟ retrovirus ಹಿನ್ನಂಜುತುಣುಕು
retrovert ಹಿನ್ನೋಡು retrorse ಹಿಂಬಾಗಿದ

(7) tele ಗೆಂಟು

telescope ಗೆಂಟುತೋರ‍್ಪುಕ telephone ಗೆಂಟುಮಾತು
television ಗೆಂಟುಕಾಣ್ಕೆ televise ಗೆಂಟುಕಾಣಿಸು
telekinesis ಗೆಂಟುಕದಲಿಕೆ teleprinter ಗೆಂಟಚ್ಚುಕ

(ಚ) ಜೋಡುಪದಗಳಲ್ಲಿ ಕೊನೆಗೆ (ಎರಡನೆಯ ಪದವಾಗಿ) ಬರುವ ಎರವಲು ಪದ ಇಲ್ಲವೇ ಬೇರುಗಳು: 

(1) cide ಕೊಲೆ, ಅಳಿಕ

regicide ಅರಸುಕೊಲೆ patricide ತಂದೆಕೊಲೆ
matricide ತಾಯಿಕೊಲೆ infenticide ಹಸುಳೆಕೊಲೆ
insecticide ಪೂಚಿಯಳಿಕ pesticide ಕೇಡಳಿಕ

(2) cracy ಆಳ್ವಿಕೆ

meritocracy ಸಯ್ಪಾಳ್ವಿಕೆ democracy ಮಂದಿಯಾಳ್ವಿಕೆ
aristocracy ಅರಸಾಳ್ವಿಕೆ stratocracy ಪಡೆಯಾಳ್ವಿಕೆ
androcracy ಗಂಡಾಳ್ವಿಕೆ gynocracy ಹೆಣ್ಣಾಳ್ವಿಕೆ
kleptocracy ಕಳ್ಳಾಳ್ವಿಕೆ dulocracy ತೊತ್ತಾಳ್ವಿಕೆ
argentocracy ಹಣದಾಳ್ವಿಕೆ foolocracy ಹೆಡ್ಡಾಳ್ವಿಕೆ

(3) graphy ಬರಹ, ಅರಿಮೆ

stenography ಬಿರುಸುಬರಹ sonography ಉಲಿಬರಹ
geography ನೆಲದರಿಮೆ orthography ಬರಿಗೆಯರಿಮೆ
oceanography ಕಡಲರಿಮೆ paleography ಹಳೆಬರಹದರಿಮೆ
metallography ಪೊನ್ನರಿಮೆ lexicography ಪದನೆರಕೆಯರಿಮೆ

(4) itis ಕುತ್ತ

meningitis ಮಿದುಳುಪರೆಕುತ್ತ laryngitis ಗಂಟಲಗೂಡುಕುತ್ತ
appendicitis ಕರುಳುಬಾಲಕುತ್ತ placentitis ಮಾಸುಕುತ್ತ

(5) logy ಅರಿಮೆ

physiology ಉಸಿರಿಯರಿಮೆ ethnology ನಾಡರಿಮೆ
gynecology ಹೆಣ್ಣೊಡಲರಿಮೆ musicology ಹಾಡಿಕೆಯರಿಮೆ
oncology ಬಾವರಿಮೆ mycology ಕಸವುಸಿರಿಯರಿಮೆ
geology ಮಣ್ಣರಿಮೆ archeology ಪಳಮೆಯರಿಮೆ
pathology ಕುತ್ತದರಿಮೆ psephology ಆಯ್ಕಳಿಯರಿಮೆ
entomology ಪೂಚಿಯರಿಮೆ hematology ನೆತ್ತರರಿಮೆ

(6)  morph ಪರಿಜು

allomorph ಒಳಪರಿಜು bimorph ಇಪ್ಪರಿಜು
endomorph ಕೊನೆಪರಿಜು isomorph ಒಂಟಿಪರಿಜು
polymorph ಹಲಪರಿಜು trymorph ಮೂಪರಿಜು

(7) phile ಒಲವಿಗ

oenophile ಈಡೊಲವಿಗ acidophile ಹುಳಿಯೊಲವಿಗ
Anglophile ಇಂಗ್ಲಿಶೊಲವಿಗ Sinophile ಚೀನಿಯೊಲವಿಗ
dogophile ನಾಯಿಯೊಲವಿಗ foodophile ತಿನಿಸೊಲವಿಗ

 (8) scope ತೋರ‍್ಪುಕ

microscope ಸೀರುತೋರ‍್ಪುಕ periscope ಮೇಲೆತೋರ‍್ಪುಕ
telescope ಗೆಂಟುತೋರ‍್ಪುಕ nightscope ಇರುಳುತೋರ‍್ಪುಕ
electroscope ಮಿನ್ತೋರ‍್ಪುಕ thermoscope ಬಿಸಿತೋರ‍್ಪುಕ

ತಿರುಳು

ಇಂಗ್ಲಿಶ್‌ನ ಹಾಗೆ ಕನ್ನಡದಲ್ಲೂ ಹೆಸರುಪದಗಳಾಗಿ ಬರುವ ಜೋಡುಪದಗಳ ಮೊದಲನೆಯ ಪದವಾಗಿ ಹೆಸರುಪದ, ಎಸಕಪದ ಮತ್ತು ಪರಿಚೆಪದಗಳು ಬರಬಲ್ಲುವು; ಹಾಗಾಗಿ, ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಬಲ್ಲ ಪದಗಳನ್ನು ಕನ್ನಡದಲ್ಲಿ ಸುಳುವಾಗಿ ಕಟ್ಟಲು ಬರುತ್ತದೆ.

ಎಸಕಪದಗಳಾಗಿ ಬರಬಲ್ಲ ಜೋಡುಪದಗಳು ಕನ್ನಡದಲ್ಲಿಲ್ಲವಾದರೂ ಕೂಡುಪದಗಳೆಂಬ ಬೇರೊಂದು ಬಗೆಯ ಪದಗಳನ್ನು ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಕಟ್ಟಲು ಬರುತ್ತದೆ.

ಇದೇ ರೀತಿಯಲ್ಲಿ, ಪರಿಚೆಪದಗಳಾಗಿ ಬರಬಲ್ಲ ಜೋಡುಪದಗಳು ಕನ್ನಡದಲ್ಲಿಲ್ಲವಾದರು, ಅಂತಹ ಇಂಗ್ಲಿಶ್ ಜೋಡುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದಗಳಾಗಿ ಬರುವ ಜೋಡುಪದಗಳ ಪತ್ತುಗೆ ರೂಪವನ್ನು ಇಲ್ಲವೇ ಎಸಕಪದಗಳಾಗಿ ಬರುವ ಕೂಡುಪದಗಳ ಪರಿಚೆರೂಪಗಳಲ್ಲೊಂದನ್ನು ಬಳಸಲು ಬರುತ್ತದೆ.

ಈ ಎಲ್ಲಾ ಕಡೆಗಳಲ್ಲೂ ಇಂಗ್ಲಿಶ್ ಜೋಡುಪದಗಳ ಹುರುಳನ್ನವಲಂಬಿಸಿ ನಾವು ಬಳಸುವ ಹೊಲಬು ಇಂಗ್ಲಿಶ್ ಬಳಸುವ ಹೊಲಬಿಗಿಂತ ಬೇರಾಗಬೇಕಾಗಬಹುದು.

ಲ್ಯಾಟಿನ್ ಇಲ್ಲವೇ ಗ್ರೀಕ್ ಮೂಲದ ಬೇರುಗಳನ್ನು ಬಳಸಿರುವ ಹಲವು ಹೊಸ ಕಟ್ಟಣೆಗಳೂ ಇಂಗ್ಲಿಶ್‌ನಲ್ಲಿ (ಮುಕ್ಯವಾಗಿ ಅರಿಮೆಯ ಬರಹಗಳಲ್ಲಿ) ಬಳಕೆಯಾಗುತ್ತವೆ; ಇವುಗಳ ಹುರುಳನ್ನು ತಿಳಿಸುವಂತಹ ಕನ್ನಡ ಪದಗಳನ್ನು ಇಲ್ಲವೇ ಬೇರುಗಳನ್ನು ಬಳಸಿ ಇಂತಹ ಪದಗಳಿಗೆ ಸಾಟಿಯಾಗಬಲ್ಲ ಹೊಸ ಪದಗಳನ್ನು ಕನ್ನಡದಲ್ಲಿ ಕಟ್ಟಲು ಬರುತ್ತದೆ.

<< ಬಾಗ-14

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ: