ಇಂಗ್ಲಿಶ್ ನುಡಿಯ ಹೆಸರುಪದಗಳು

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು-16

ಇಂಗ್ಲಿಶ್ ನುಡಿಯ ಹೆಸರುಪದಗಳು

ಮುನ್ನೋಟ

ಇಂಗ್ಲಿಶ್ ಹೆಸರುಪದಗಳಲ್ಲಿ ಮುನ್ನೊಟ್ಟು(prefix)ಗಳಿರುವ ಇಲ್ಲವೇ ಹಿನ್ನೊಟ್ಟು(suffix)ಗಳಿರುವ ಕಟ್ಟುಪದಗಳಿಗೆ ಮತ್ತು ಎರಡು ಪದಗಳು ಕೂಡಿರುವ ಜೋಡುಪದ(compound)ಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸದಾಗಿ ಹೆಸರುಪದಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಮೇಲಿನ 6, 7, ಮತ್ತು 8ನೇ ಪಸುಗೆಗಳಲ್ಲಿ ವಿವರಿಸಲಾಗಿದೆ. ಈ ಮೂರು ಗುಂಪುಗಳಿಗೂ ಸೇರದಿರುವ ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸ ಹೆಸರುಪದಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು ಈ ಪಸುಗೆಯಲ್ಲಿ ವಿವರಿಸಲಾಗಿದೆ.

ಇಂತಹ ಒಟ್ಟುಗಳಿಲ್ಲದ ಮತ್ತು ಜೋಡುಪದಗಳಲ್ಲದ ಹಲವು ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಬಲ್ಲ ಅಂತಹವೇ ಹೆಸರುಪದಗಳು ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿವೆ. ಎತ್ತುಗೆಗಾಗಿ, ಇಂಗ್ಲಿಶ್‌ನ weed ಕಳೆ, end ತುದಿ, hide ತೊಗಲು, tree ಮರ, head ತಲೆ, wind ಗಾಳಿ, hood ಹೆಡೆ, ground ನೆಲ ಮೊದಲಾದ ಕಡೆಗಳಲ್ಲಿ ಇಂಗ್ಲಿಶ್‌ನ ಒತ್ತೆ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೂ ಒತ್ತೆ ಹೆಸರುಪದಗಳಿವೆ.

ಆದರೆ, ಬೇರೆ ಕೆಲವು ಕಡೆಗಳಲ್ಲಿ ಇಂಗ್ಲಿಶ್‌ನ ಒತ್ತೆ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಜೋಡುಪದಗಳನ್ನು ಬಳಸಿರುವುದೂ ಇದೆ; ಇದನ್ನು chuckle ಮೆಲುನಗೆ, clan ಬುಡಕಟ್ಟು, coffin ಹೆಣಪೆಟ್ಟಿಗೆ, colic ಹೊಟ್ಟೆನೋವು, sash ಹೆಗಲಪಟ್ಟಿ ಎಂಬಂತಹ ಕಡೆಗಳಲ್ಲಿ ಕಾಣಬಹುದು.

ಇನ್ನು ಕೆಲವು ಕಡೆಗಳಲ್ಲಿ ಇಂಗ್ಲಿಶ್‌ನ ಹೆಸರುಪದಗಳಲ್ಲಿ ಒಟ್ಟುಗಳಿಲ್ಲದಿದ್ದರೂ ಅವಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ ಒಟ್ಟುಗಳನ್ನು ಸೇರಿಸಿರುವಂತಹ ಪದಗಳನ್ನು ಬಳಸಲಾಗಿದೆ; ಇದನ್ನು fear ಹೆದರಿಕೆ, excise ತೆರಿಗೆ, conduct ನಡತೆ, practice ಬಳಕೆ, award ಕೊಡುಗೆ ಮೊದಲಾದ ಕಡೆಗಳಲ್ಲಿ ಕಾಣಬಹುದು.
ಇಂತಹ ಹಲವು ಪದಗಳನ್ನು ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಎಂಬ ನನ್ನ ಕಡತದಲ್ಲಿ ಕೊಟ್ಟಿದ್ದೇನೆ.

ಈ ರೀತಿ ಈಗಾಗಲೇ ಪದಗಳು ಬಳಕೆಯಲ್ಲಿಲ್ಲದಂತಹ ಕಡೆಗಳಲ್ಲಿ ಮಾತ್ರ ನಾವು ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಬಲ್ಲ ಹೆಸರುಪದಗಳನ್ನು ಕನ್ನಡದಲ್ಲಿ ಹೊಸದಾಗಿ ಕಟ್ಟಬೇಕಾಗುತ್ತದೆ. ಇಂತಹ ಕೆಲವೆಡೆಗಳಲ್ಲಿ ಇಂಗ್ಲಿಶ್‌ನಿಂದ ಎರವಲು ಪಡೆದ ಬಸ್ಸು, ಕಾರು, ರೇಡಿಯೋ, ಕಂಪ್ಯೂಟರ‍್ ಮೊದಲಾದ ಪದಗಳು ಬಳಕೆಯಲ್ಲಿದ್ದು, ಮುಂದೆಯೂ ಅವನ್ನೇ ಬಳಸಲು ಬರುತ್ತದೆ; ಹೀಗಿದ್ದರೂ, ಅವಕ್ಕೆ ಸಾಟಿಯಾಗುವಂತಹ ಹೊಸಪದಗಳನ್ನು ಕಟ್ಟುವ ಮೂಲಕ ಎರವಲು ಪಡೆದಿದ್ದರೂ ಪದಕಟ್ಟುವಿಕೆಯಲ್ಲಿ ಕನ್ನಡ ಹಿಂದಿಲ್ಲ ಎಂಬುದನ್ನು ಗಟ್ಟಿಮಾಡಿಕೊಳ್ಳಬಹುದು.

ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಪದಗಳಿಗೆ ಒಟ್ಟುಗಳನ್ನು ಸೇರಿಸಿ ಕಟ್ಟುಪದಗಳನ್ನು ಉಂಟುಮಾಡುವುದು ಮತ್ತು ಹೆಸರುಪದಗಳ ಮೊದಲು ಎಸಕಪದ, ಪರಿಚೆಪದ, ಇಲ್ಲವೇ ಬೇರೆ ಹೆಸರುಪದಗಳನ್ನು ಇರಿಸಿ ಜೋಡುಪದಗಳನ್ನು ಉಂಟುಮಾಡುವುದು ಎಂಬ ಎರಡು ಬಗೆಯ ಹೊಲಬುಗಳನ್ನು ಬಳಸಿ ಹೊಸ ಹೆಸರುಪದಗಳನ್ನು ಕಟ್ಟಲು ಬರುತ್ತದೆ ಎಂಬುದನ್ನು ಮೇಲೆ ಎರಡನೇ ಪಸುಗೆಯಲ್ಲಿ ವಿವರಿಸಲಾಗಿದೆ.

ಇಂಗ್ಲಿಶ್‌ನ ಒತ್ತೆ ಹೆಸರುಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವಲ್ಲೂ ಈ ಎರಡು ಹೊಲಬುಗಳಲ್ಲಿ ಒಂದನ್ನು ಬಳಸಬೇಕಾಗುತ್ತದೆ; ಅವುಗಳಲ್ಲಿ ಯಾವುದನ್ನು ಬಳಸಬೇಕು ಎಂಬುದು ಮುಕ್ಯವಾಗಿ ನಮ್ಮ ಎದುರಿಗಿರುವ ಇಂಗ್ಲಿಶ್ ಪದ ಎಂತಹ ಹುರುಳನ್ನು ಕೊಡುತ್ತದೆ ಎಂಬುದನ್ನು ಅವಲಂಬಿಸಿದೆ.

ಆ ಹುರುಳನ್ನು ಬಳಕೆಯಲ್ಲಿರುವ ಎಸಕಪದ, ಪರಿಚೆಪದ ಇಲ್ಲವೇ ಹೆಸರುಪದಕ್ಕೆ ಒಟ್ಟುಗಳನ್ನು ಸೇರಿಸಿ ತಿಳಿಸಲು ಬರುತ್ತದೆಯಾದರೆ, ಅದೇ ಹೊಲಬನ್ನು ಬಳಸಿ ಅಡಕವಾದ ಕನ್ನಡ ಪದವನ್ನು ಹೊಸದಾಗಿ ಕಟ್ಟಬಹುದು. ಇದನ್ನು ನಡೆಸಲು ಬಾರದಿರುವಲ್ಲಿ ಮಾತ್ರ ಜೋಡುಪದಗಳನ್ನು ಕಟ್ಟುವ ಹೊಲಬನ್ನು ಬಳಸಬೇಕಾಗುತ್ತದೆ. ಯಾಕೆಂದರೆ, ಇವು ಸಾಮಾನ್ಯವಾಗಿ ಒಟ್ಟುಗಳನ್ನು ಬಳಸಿ ಪಡೆದಿರುವ ಪದಗಳಶ್ಟು ಅಡಕವಾಗಿರುವುದಿಲ್ಲ.

ಒಟ್ಟುಗಳನ್ನು ಬಳಸಿ ಹೆಸರುಪದಗಳನ್ನು ಉಂಟುಮಾಡುವುದು
ಒಟ್ಟುಗಳನ್ನು ಬಳಸಿ ಹೊಸಪದಗಳನ್ನು ಕಟ್ಟುವಲ್ಲಿ ಇಂಗ್ಲಿಶ್ ಪದಗಳ ಹುರುಳನ್ನೇ ಮುಕ್ಯವಾಗಿ ಗಮನಿಸಬೇಕಾಗಿರುವ ಕಾರಣ, ಎಂತಹ ಒಟ್ಟನ್ನು ಬಳಸಬೇಕು ಎಂಬುದನ್ನು ಕೆಳಗೆ ಇಂಗ್ಲಿಶ್ ಪದಗಳ ಹುರುಳುಗಳನ್ನು ಅವಲಂಬಿಸಿಯೇ ವಿವರಿಸಲಾಗಿದೆ:

(1) ಮಂದಿಯನ್ನು ಗುರುತಿಸುವ ಇಂಗ್ಲಿಶ್ ಹೆಸರುಪದಗಳು:
ನಮ್ಮ ಮುಂದಿರುವ ಇಂಗ್ಲಿಶ್ ಪದ ಮಂದಿಯನ್ನು ಗುರುತಿಸುತ್ತಿದೆಯಾದರೆ, ಅದಕ್ಕೆ ಸಾಟಿಯಾಗುವಂತೆ ಕನ್ನಡದಲ್ಲಿ (ಕ) ಎಸಕಪದಗಳಿಗೆ ಗ/ಇಗ ಒಟ್ಟನ್ನು ಸೇರಿಸುವುದು ಮತ್ತು (ಚ) ಹೆಸರುಪದಗಳಿಗೆ ಅದೇ ಒಟ್ಟನ್ನು ಇಲ್ಲವೇ ಗಾರ ಒಟ್ಟನ್ನು ಸೇರಿಸುವುದು ಎಂಬ ಎರಡು ಹೊಲಬುಗಳನ್ನು ಬಳಸಿ ಹೊಸ ಪದಗಳನ್ನು ಕಟ್ಟಲು ಬರುತ್ತದೆ (2.1.1 ನೋಡಿ).

(ಕ) ಎಸಕಪದಗಳಿಗೆ ಗ/ಇಗ ಒಟ್ಟನ್ನು ಸೇರಿಸುವುದು:

scribe ಬರೆಗ god ದಾಟುಗ
heir ಮರುಪಡೆಗ nurse ಆರಯ್ಗ
monk ಬಿಡುಗ genius ಪೇರರಿಗ
pupil ಕಲಿಗ champion ಗೆಲ್ಲುಗ
proud ಕೊಬ್ಬುಗ bandit ದೋಚುಗ
recluse ತೊರೆಗ clerk ಬರೆಗ

(ಚ) ಹೆಸರುಪದಗಳಿಗೆ ಗ/ಇಗ ಇಲ್ಲವೇ ಗಾರ ಒಟ್ಟನ್ನು ಸೇರಿಸುವುದು:

ಗ/ಇಗ ಒಟ್ಟು ಗಾರ ಒಟ್ಟು
animal ಉಸಿರುಗ peon ಕೋಲುಗಾರ
pimp ಹೆಣ್ಣುಗ apprentice ಕಲಿಕೆಗಾರ
hypocrite ತೋರ‍್ಕೆಗ umpire ತೀರ‍್ಪುಗಾರ
libertine ಹಾದರಿಗ emigre ವಲಸೆಗಾರ
native ನಾಡಿಗ honest ನಾಣ್ಯಗಾರ
friend ಅಳವಿಗ artisan ಕೆಲಸಗಾರ

ಮಂದಿಯನ್ನು ಹೆಸರಿಸುವ ಪದಗಳು ಹೆಂಗಸನ್ನು ಗುರುತಿಸುತ್ತಿವೆಯಾದರೆ, ಅಂತಹ ಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಗ/ಇಗ ಒಟ್ಟಿನ ಬಳಿಕ ಇತ್ತಿ ಒಟ್ಟನ್ನು ಮತ್ತು ಗಾರ ಒಟ್ಟಿನ ಬಳಿಕ ತಿ ಒಟ್ಟನ್ನು ಬಳಸಲು ಬರುತ್ತದೆ:

nurse ಆರಯ್ಗ, ಆರಯ್ಗಿತ್ತಿ
citizen ನಾಡಿಗ, ನಾಡಿಗಿತ್ತಿ
paramour ನಲ್ಮೆಗಾರ, ನಲ್ಮೆಗಾರ‍್ತಿ
patriot ನಾಡರ‍್ತಿಗ, ನಾಡರ‍್ತಿಗಿತ್ತಿ
deputy ನೆರವಿಗ, ನೆರವಿಗಿತ್ತಿ

ತನ್ನ ಅಳವಿನಿಂದಲೇ ಕೆಲಸವನ್ನು ನಡೆಸುವ ವಸ್ತುಗಳನ್ನು ಇಲ್ಲವೇ ಅಂಗಗಳನ್ನು ಹೆಸರಿಸಬೇಕಾದಲ್ಲಿ ಗ/ಇಗ ಒಟ್ಟಿನ ಬದಲು ಕ ಒಟ್ಟನ್ನು ಬಳಸಲು ಬರುತ್ತದೆ:

piston ತಳ್ಳುಕ lung ಉಸಿರುಕ
phone ಗೆಂಟುಲಿಕ pesticide ಕೇಡಳಿಕ

(2) ಎಸಕಗಳನ್ನು ಹೆಸರಿಸುವ ಇಂಗ್ಲಿಶ್ ಹೆಸರುಪದಗಳು:
ಎಸಕಗಳನ್ನು ಹೆಸರಿಸುವ ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳಿಗೆ ಇಕೆ/ಕೆ ಒಟ್ಟನ್ನು ಇಲ್ಲವೇ ತ ಒಟ್ಟನ್ನು ಸೇರಿಸಿ ಹೊಸಪದಗಳನ್ನು ಉಂಟುಮಾಡಲು ಬರುತ್ತದೆ (2.1.2 ನೋಡಿ); ಇವುಗಳಲ್ಲಿ ಇಕೆ/ಕೆ ಎಂಬುದನ್ನು ಉಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಬಳಸಬಹುದು, ಮತ್ತು ತ ಎಂಬುದನ್ನು ಎಕಾರ ಇಲ್ಲವೇ ಇಕಾರದಲ್ಲಿ ಕೊನೆಗೊಳ್ಳುವ ಪದಗಳ ಬಳಿಕ ಬಳಸಬಹುದು:

idea ಹಂಚಿಕೆ trauma ಹೊಡೆತ
plea ಕೋರಿಕೆ ache ಕೊಡೆತ
notice ಎಚ್ಚರಿಕೆ jubilee ಮೆರೆತ
nausea ಉಬ್ಬಳಿಕೆ hold ಹಿಡಿತ
stamina ತಾಳಿಕೆ kick ಒದೆತ
rage ಕೆರಳಿಕೆ force ಸೆಳೆತ

(3) ಎಸಕದ ದೊರೆತವನ್ನು ಇಲ್ಲವೇ ಮುಟ್ಟನ್ನು ಹೆಸರಿಸುವ ಇಂಗ್ಲಿಶ್ ಹೆಸರುಪದಗಳು:
ಮೇಲೆ (2.1.3)ರಲ್ಲಿ ವಿವರಿಸಿದ ಹಾಗೆ, ಇಂತಹ ಹೆಸರುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳಿಗೆ ಇಗೆ/ಗೆ ಒಟ್ಟನ್ನು ಸೇರಿಸಿರುವ ಪದಗಳನ್ನು ಬಳಸಲು ಬರುತ್ತದೆ:

purgative ಎಕ್ಕುಗೆ example ಎತ್ತುಗೆ
pad ಒತ್ತಿಗೆ equipment ಒದಗುಗೆ
mop ಒರಸುಗೆ drink ಕುಡಿಗೆ
party ಕೂಟಗೆ bracket ತಾಂಗುಗೆ
experience ತಾಳುಗೆ douche ಚಿಮ್ಮುಗೆ
post ನೆಡಿಗೆ booty ದೋಚುಗೆ
duty ತೆರಿಗೆ ornament ತೊಡುಗೆ

(4) ಪಾಂಗುಗಳ ಪರಿಚೆಯನ್ನು ಹೆಸರಿಸುವ ಇಂಗ್ಲಿಶ್ ಹೆಸರುಪದಗಳು:
ಕನ್ನಡದಲ್ಲಿ ಹೆಸರುಪದಗಳಿಗೆ ತನ ಒಟ್ಟನ್ನು ಸೇರಿಸಿ ಅವು ತಿಳಿಸುವ ಪರಿಚೆಯನ್ನು ಹೆಸರಿಸಲು ಬರುತ್ತದೆ (ಕುಡುಕ : ಕುಡುಕತನ); ಹೆಸರುಪದಗಳು ಗಾರ ಇಲ್ಲವೇ ಆಟ ಎಂಬುದರಲ್ಲಿ ಕೊನೆಗೊಂಡಿದ್ದಲ್ಲಿ ಮಾತ್ರ ಅವಕ್ಕೆ ಇಕೆ ಒಟ್ಟನ್ನು ಸೇರಿಸಲಾಗುತ್ತದೆ (ಬಿಲ್ಲುಗಾರ : ಬಿಲ್ಲುಗಾರಿಕೆ, ಬೂಟಾಟ : ಬೂಟಾಟಿಕೆ).
ಪರಿಚೆಯನ್ನು ತಿಳಿಸುವ ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಉಂಟುಮಾಡುವಲೂ ಈ ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ:

ಜೋಡುಪದಗಳ ಬಳಕೆ
ಮೇಲೆ ವಿವರಿಸಿದ ಹಾಗೆ, ಒಟ್ಟುಗಳನ್ನು ಬಳಸಿ ಹೊಸಪದಗಳನ್ನು ಉಂಟುಮಾಡಲು ಬಾರದಿರುವಲ್ಲಿ ಜೋಡುಪದಗಳನ್ನು ಕಟ್ಟುವಂತಹ ಇನ್ನೊಂದು ಹೊಲಬನ್ನು ಬಳಸಬೇಕಾಗುತ್ತದೆ. ಇದಕ್ಕಾಗಿ ಕನ್ನಡದಲ್ಲಿ ಹೆಸರುಪದಗಳೊಂದಿಗೆ ಬೇರೆ ಹೆಸರುಪದಗಳನ್ನು, ಎಸಕಪದಗಳನ್ನು, ಇಲ್ಲವೇ ಪರಿಚೆಪದಗಳನ್ನು ಬಳಸಲು ಬರುತ್ತದೆ; ಇವುಗಳಲ್ಲಿ ಯಾವುದನ್ನು ಬಳಸಬೇಕು ಎಂಬುದು ಇಂಗ್ಲಿಶ್ ಹೆಸರುಪದದ ಹುರುಳನ್ನು ಕನ್ನಡದಲ್ಲಿ ತಿಳಿಸಲು ಎಂತಹ ಪದಗಳು ದೊರಕುತ್ತವೆ ಎಂಬುದರ ಮೇಲೆ ಅವಲಂಬಿಸಿದೆ.

ಎತ್ತುಗೆಗಾಗಿ, lard ಎಂಬ ಪದಕ್ಕೆ fat from the abdomen of the pig ಎಂಬ ಹುರುಳನ್ನು ಕೊಡಲಾಗಿದೆ; ಇದರಲ್ಲಿ fat ಮತ್ತು pig ಎಂಬ ಎರಡು ಹೆಸರುಪದಗಳು ಮುಕ್ಯವೆಂದು ಅನಿಸುವುದರಿಂದ ಈ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹಂದಿನೆಣ ಎಂಬ ಜೋಡುಪದವನ್ನು ಕಟ್ಟುವುದು ಸರಿಯೆಂದು ತೋರುತ್ತದೆ. ಇದರಲ್ಲಿ ಹಂದಿ ಎಂಬ ಹೆಸರುಪದವನ್ನು ನೆಣ ಎಂಬ ಇನ್ನೊಂದು ಹೆಸರುಪದದೊಂದಿಗೆ ಬಳಸಲಾಗಿದೆ.

lava ಎಂಬುದಕ್ಕೆ hot molten rock that erupts from a volcano ಎಂಬ ಹುರುಳನ್ನು ಕೊಡಲಾಗಿದ್ದು, ಇದರಲ್ಲಿ molten ಮತ್ತು rock ಎಂಬ ಪದಗಳು ಮುಕ್ಯವೆಂದು ಅನಿಸುವುದರಿಂದ, ಈ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಕರಗುಕಲ್ಲು ಎಂಬ ಜೋಡುಪದವನ್ನು ಕಟ್ಟುವುದು ಸರಿಯೆಂದು ತೋರುತ್ತದೆ; ಇದರಲ್ಲಿ ಕರಗು ಎಸಕಪದವನ್ನು ಕಲ್ಲು ಹೆಸರುಪದದೊಂದಿಗೆ ಬಳಸಲಾಗಿದೆ.

salad ಎಂಬುದಕ್ಕೆ a cold dish of raw vegetables ಎಂಬ ಹುರುಳಿದ್ದು, ಇದರಲ್ಲಿ raw ಮತ್ತು vegetable ಎಂಬ ಪದಗಳು ಮುಕ್ಯವೆಂದು ಅನಿಸುವುದರಿಂದ, ಈ ಪದಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹಸಿಪಲ್ಲೆ ಎಂಬ ಜೋಡುಪದವನ್ನು ಕಟ್ಟುವುದು ಸರಿಯೆಂದು ತೋರುತ್ತದೆ; ಇದರಲ್ಲಿ ಹಸಿ ಎಂಬ ಪರಿಚೆಪದವನ್ನು ಪಲ್ಲೆ ಎಂಬ ಹೆಸರುಪದದೊಂದಿಗೆ ಬಳಸಲಾಗಿದೆ; ಹಸಿ ಎಂಬುದಕ್ಕೆ cold ಎಂಬುದರ ಹುರುಳೂ ಇದೆಯೆಂದು ಹೇಳಬಹುದು.

ಈ ರೀತಿ ಇಂಗ್ಲಿಶ್ ಹೆಸರುಪದಗಳ ಹುರುಳನ್ನವಲಂಬಿಸಿ ಅವಕ್ಕೆ ಸಾಟಿಯಾಗುವಂತೆ ಮೂರು ಬಗೆಯ ಜೋಡುಪದಗಳನ್ನು ಕನ್ನಡದಲ್ಲಿ ಉಂಟುಮಾಡಿರುವುದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:

(1) ಹೆಸರುಪದಗಳೊಂದಿಗೆ ಬೇರೆ ಹೆಸರುಪದಗಳನ್ನು ಬಳಸಿರುವುದು:

mafia ಕೇಡಿತಂಡ pergola ಬಳ್ಳಿಮನೆ
retina ಕಣ್ಣುಪರೆ pupa ಗೂಡುಹುಳು
grub ದುಂಬಿಮರಿ toad ನೆಲಗಪ್ಪೆ
lard ಹಂದಿನೆಣ parade ಸಾಲುನಡಿಗೆ
page ಹಾಳೆಬದಿ lagoon ಕಡಲ್ಕೊಳ
urine ಮಯ್ನೀರು skate ಗಾಲಿಮೆಟ್ಟು
paradise ಹೊನ್ನೂರು shingle ಮರಹಂಚು
kite ಗಾಳಿಪಟ lode ಅದುರೆಳೆ
hose ಕಾಲ್ಚೀಲ muzzle ಬಾಯಿಕುಕ್ಕೆ
mound ಕಲ್ದಿಬ್ಬ shroud ಹೆಣಹೊದಿಕೆ

(2) ಹೆಸರುಪದಗಳೊಂದಿಗೆ ಎಸಕಪದಗಳನ್ನು ಬಳಸಿರುವುದು:

lava ಕರಗುಕಲ್ಲು slab ಹಾಸುಕಲ್ಲು
pizza ಕೊಚ್ಚುರೊಟ್ಟಿ poniard ಕುತ್ತುಬಾಳು
movie ಓಡುತಿಟ್ಟ pie ತುಂಬುಕಡುಬು
tiffee ಅಂಟುಸಿಹಿ ode ನೆನೆಹಾಡು
souffle ಪೊಂಗಪ್ಪ missile ಬಿಟ್ಟೇರು
staple ಬಾಗುಸರಿಗೆ hone ಮಸೆಕಲ್ಲು
recipe ಮಾಡುಬಗೆ meteorite ಬೀಳ್ಕಲ್ಲು
parachute ಇಳಿಕೊಡೆ salve ಹಚ್ಚುಮದ್ದು
sleigh ಜಾರುಬಂಡಿ myth ಕಟ್ಟುಕತೆ
ski ಜಾರುಪಟ್ಟಿ sink ತೊಳೆಮರಿಗೆ

(3) ಹೆಸರುಪದಗಳೊಂದಿಗೆ ಪರಿಚೆಪದಗಳನ್ನು ಬಳಸಿರುವುದು:

phobia ಕಡುದಿಗಿಲು uvula ಕಿರುನಾಲಿಗೆ
siesta ಕಿತ್ತೊರಕು greed ಪೇರೆಳಸು
robe ನೀಳುಡುಪು salad ಹಸಿಪಲ್ಲೆ
sortie ಹೊರದಾಳಿ pomade ಕೆಂಪೆಣ್ಣೆ
prickle ಕಿರುಮುಳ್ಳು mantle ಮೇಲುಡುಪು
malaise ಒಳಗುದಿ empire ಪೆರ‍್ನಾಡು
nape ಹಿಂಗತ್ತು hunch ಮುನ್ನೆಣಿಕೆ
mulch ಹಸಿಗೊಬ್ಬರ wig ಮಾರ‍್ಕೂದಲು
proof ಕರಡಚ್ಚು sigh ನಿಟ್ಟುಸಿರು
plinth ಅಡಿಗಲ್ಲು foil ತೆಳುಹಾಳೆ

ತಿರುಳು
ಒಟ್ಟುಗಳನ್ನು ಬಳಸದಿರುವ ಮತ್ತು ಜೋಡುಪದಗಳಾಗಿಲ್ಲದಿರುವ ಇಂಗ್ಲಿಶ್ ಹೆಸರುಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸ ಹೆಸರುಪದಗಳನ್ನು ಪಡೆಯಲು ಮುಕ್ಯವಾಗಿ (ಕ) ಹೆಸರುಪದ, ಎಸಕಪದ, ಇಲ್ಲವೇ ಪರಿಚೆಪದಗಳಿಗೆ ಒಟ್ಟುಗಳನ್ನು ಸೇರಿಸಿ ಕಟ್ಟುಪದಗಳನ್ನು ಕಟ್ಟುವುದು ಮತ್ತು (ಚ) ಹೆಸರುಪದಗಳಿಗೆ ಎಸಕಪದ, ಪರಿಚೆಪದ, ಇಲ್ಲವೇ ಬೇರೆ ಹೆಸರುಪದಗಳನ್ನು ಸೇರಿಸಿ ಜೋಡುಪದಗಳನ್ನು ಕಟ್ಟುವುದು ಎಂಬುದಾಗಿ ಎರಡು ಹಮ್ಮುಗೆಗಳನ್ನು ಬಳಸಲು ಬರುತ್ತದೆ.

<< ಬಾಗ-15

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. jspradeep says:

    Sir Hide- ತೊಗಲು or ತೊಲಗು #justAsking

  2. jspradeep says:

    ತೊಗಲು ಅಂದರೆ ಚರ್ಮ ಅಲ್ವ

ಅನಿಸಿಕೆ ಬರೆಯಿರಿ:

%d bloggers like this: