ಕಿರುದಾನ್ಯಗಳು: ಹಳೆ ಊಟ ಹೊಸ ನೋಟ

ಸುನಿತಾ ಹಿರೇಮಟ.

Grains
ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ
ಏಳು ಸಾವಿರದ ಎಪ್ಪತ್ತು ವಚನಗಳ
ಹೇಳಿದನು ಕೇಳ ಸರ್ವಜ್ಞ|

ಇಶ್ಟೆಲ್ಲ ಬರೆದ ಸರ‍್ವಜ್ನನ ಕಾಲದ ಬಗ್ಗೆ ಸರಿಯಾಗಿ ಮಾಹಿತಿ ಸಿಗುವುದಿಲ್ಲ. ಆದರೆ ಆತ ಬರೆದ ವಚನಗಳು ನಮ್ಮ ಆಹಾರ ಶಯ್ಲಿಗೆ ಇಂದಿಗು ಎಶ್ಟು ಒಗ್ಗುತ್ತವೆ ಎಂದರೆ, ಒಮ್ಮೆ ಕೇಳಿ;

ಹಸಿವಿಲ್ಲದುಣಬೇಡ ಹಸಿದು ಇರಬೇಡ,
ಬಿಸಿ ಬೇಡ ತ೦ಗಳುಣಬೇಡ,
ವೈದ್ಯನ ಋಣ ಬೇಡ ಸರ್ವಜ್ಞ|

ಈ ವಚನ ಉಣ್ಣುವ ಪದ್ದತಿ ಹೇಳಿದರೆ ಕೆಳಗಿನವುಗಳು ಉಣ್ಣುವ ಆಹಾರದ ಬಗ್ಗೆ ತಿಳಿಸುತ್ತವೆ.

ನವಣೆಯನು ತಿಂಬುವನು
ಹವಣಾಗಿ ಇರುತಿಹನು ಬವಣಿಗಳಿಗವನು ಒಳಬೀಳನೀ ಮಾತು
ಠವಣೆಲ್ಲೆಂದ ಸರ್ವಜ್ಞ|

ರಾಗಿಯನ್ನು ಉಂಬುವ ನಿರೋಗಿ ಎಂದೆನಿಸುವನು
ರಾಗಿಯು ಭೋಗಿಗಳಿಗಲ್ಲ ಬಡವರಿಂ
ಗಾಗಿ ಬೆಳೆದಿಹುದು ಸರ್ವಜ್ಞ|

ಜೋಳವನು ತಿಂಬುವನು ತೋಳದಂತಾಗುವನು
ಬೇಳೆ ಬೆಲ್ಲಗಳನುಂಬುವನುಬಹು
ಬಾಳನೆದರಿಗು ಸರ್ವಜ್ಞ|

ಈ ಎಲ್ಲ ವಚನಗಳಲ್ಲಿ ಎದ್ದು ಕಾಣುವುದು ದಾನ್ಯ! ಜಗತ್ತಿನ ಅತ್ಯಂತ ಹಳೆಯದಾದ ಆಹಾರವಿದು. ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ಕೊರಲೆ – ಇವು ಹೆಸರಿಸಬಹುದಾದ ಕೆಲವು ದಾನ್ಯಗಳು. ಇವುಗಳ ಕಾಳುಗಳು ಕಿರಿದಾಗಿರುವುದರಿಂದ ಇವನ್ನು ಕಿರುದಾನ್ಯ ಎನ್ನುತ್ತಾರೆ. ಕಿರು ದಾನ್ಯಗಳೆಂದರೆ ಅಕ್ಕಿ, ಗೋದಿ ಮತ್ತು ಮೆಕ್ಕೇಜೋಳದ ಹೊರತಾಗಿ ದೊರೆಯುವ ದಾನ್ಯಗಳು. ಇವು ಗಾತ್ರದಲ್ಲಿ ಸಣ್ಣದಾಗಿದ್ದು ದುಂಡಗೆ ಹಲವು ಬಣ್ಣಗಳಲ್ಲಿವೆ. ಒಂದೊಂದು ದಾನ್ಯಕ್ಕೂ ಅದರದೆ ಆದ ರುಚಿಯಿದೆ, ಕೆಲವು ಸ್ವಲ್ಪ ಸಿಹಿಯಾಗಿದ್ದರೆ ಕೆಲವು ಸ್ವಲ್ಪ ಸಪ್ಪೆಯಾಗಿವೆ.

ಜಗತ್ತಿನಾದ್ಯಂತ ಸಾವಿರಕ್ಕೂ ಮೇಲ್ಪಟ್ಟು ಬೇರೆ ಬೇರೆ ದಾನ್ಯಗಳನ್ನು ಬೆಳೆಯಲಾಗುತ್ತದೆ. ಈ ಬೆಳೆಗಳ ಬೆಳೆಯುವ ದೇಶಗಳ ಪೈಕಿ ಬಾರತ ಮೂಂಚೂಣಿಯಲ್ಲಿದೆ, ಈ ದಾನ್ಯಗಳ ಕ್ರುಶಿ – ಕೇವಲ ಸಾಂಪ್ರದಾಯಕ ಕ್ರುಶಿಯಶ್ಟೇ ಅಲ್ಲ ಅದೊಂದು ವಿಶಿಶ್ಟ ಕ್ರುಶಿ ಪದ್ದತಿ, ನಮ್ಮ ಹಿರಿಯರ ಬದುಕು. ಈ ಪದ್ದತಿಯಲ್ಲಿ ಆರರಿಂದ ಇಪ್ಪತ್ತು ಬೆಳೆಗಳನ್ನು ಒಂದೇ ಕಾಲದಲ್ಲಿ, ಒಂದೇ ಪ್ರದೇಶದಲ್ಲಿ ಬಿತ್ತಿ ಬೆಳೆಯಬಹುದು. ಹಿಂದೆ ಬಯಲು ಸೀಮೆಯಲ್ಲಿನ ರಯ್ತರು ಒಂದು ಮಾತು ಹೇಳ್ತಿದ್ದರು; ‘ಬಾರೆ ಹಸಿಯಾಗಿದ್ರೆ ನವಣೆನೋ, ಸಜ್ಜೆನೋ ಎರಿಚಿ ಬಾರ್‍ಲಾ…’ ಅಂತ. ಇದರ ಅರ್‍ತ ಇಶ್ಟೆ; ಮಳೆ ಕಡಿಮೆಯಾಗಲಿ, ಬಿಸಿಲು ಹೆಚ್ಚಾಗಲಿ ತಲೆಕೆಡಿಸಿಕೊಳ್ಳದೇ ಕಿರುದಾನ್ಯವನ್ನು ಬೆಳೆಯಬಹುದು ಎಂದು.

ಅಶ್ಟೇ ಅಲ್ಲ ತೆಳ್ಳನೆಯ ಮಣ್ಣಿನ ಪದರದ ಬೂಮಿಯಲ್ಲಿಯೂ ಬೆಳೆಯುವ ಈ ದಾನ್ಯಗಳು ಪಲವತ್ತಾದ ಬೂಮಿ ಬಯಸುವುದಿಲ್ಲ. ನೊರಜು ಕಲ್ಲಿನ ಜಮೀನಿನಲ್ಲಿ ರಯ್ತರು ಹಾರಕ ಹಾಗೂ ಕೊರಲೆ ಬೆಳೆಯುತ್ತಿದ್ದರು. ಇಂತಹ ವಿಶಿಶ್ಟ ಗುಣಗಳಿಂದಲೇ ಕಿರು ದಾನ್ಯಗಳನ್ನು ಮಳೆಯಾದಾರಿತ ಪ್ರದೇಶಗಳ ವರದಾನದ ಬೆಳೆಯಾಗಿವೆ. ಈ ಕಿರು ದಾನ್ಯಗಳನ್ನು ಬೆಳೆಯಲು ರಯ್ತರು ರಾಸಾಯನಿಕ ಗೊಬ್ಬರವನ್ನು ನೆಚ್ಚಿಕೊಂಡಿಲ್ಲ. ಇವತ್ತಿಗೂ ಕೊಟ್ಟಿಗೆ ಗೊಬ್ಬರ, ತರಗೆಲೆ ಗೊಬ್ಬರ ಬಳಸಿ ಬೆಳೆಯುತ್ತಾರೆ. ಇದರಿಂದ ಹಣ ಉಳಿದಿದೆ ಜೊತೆಗೆ ರಸಗೊಬ್ಬರ ಬಳಸದಿರುವುದರಿಂದ ಕೀಟಗಳ ಹಾವಳಿಯ ಪ್ರಶ್ನೆಯೇ ಇಲ್ಲ. ಹಾಗಾಗಿ ಈ ಬೆಳೆಗಳನ್ನು ಕೀಟ ಮುಕ್ತ ಬೆಳೆಗಳು ಎನ್ನಬಹುದು. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಇರುವುದರಿಂದ ಪರಿಸರದ ಮೇಲೂ ಕೆಟ್ಟಪರಿಣಾಮ ಬೀರುವುದಿಲ್ಲ.

ಜನರಿಗೆ ಆಹಾರ ಮತ್ತು ಪಶುಗಳ ಮೇವಿನ ಬೆಳೆಯಾಗಿರುವ ಈ ದಾನ್ಯಗಳನ್ನು ಬೆಳೆಯಲು ಹೆಚ್ಚಿನ ನೀರು, ಗೊಬ್ಬರ ಮತ್ತು ಆರಯ್ಕೆಯ ಅವಶ್ಯಕತೆ ಇಲ್ಲ. ಮಳೆಯಾದಾರಿತವಾಗಿ ಹಾಗು ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ ಈ ದಾನ್ಯಗಳನ್ನು ‘ಸಿರಿ ದಾನ್ಯ’ಗಳೆಂದು ಕರೆಯಬಹುದು.

ನನ್ನ ಅವ್ವ ಹೇಳುತ್ತಿದ್ದ ಕೆಳಗಿನ ಮಾತು ನನಗೀಗಲೂ ನೆನಪಿದೆ.

ನಾವೆಲ್ಲ ಬಾಣಂತನದಾಗ ನವಣಕ್ಕಿ ಅನ್ನ, ರೊಟ್ಟಿ ಉಂಡು; ಮೂಲಂಗಿ, ಹಕ್ಕರಿಕಿ ಮೆಂತ್ಯಾ ಸೊಪ್ಪು ತಿಂತಿದ್ವಿ. ನಿಮ್ಮ ತಾತ ನವಣಕ್ಕಿ ಕುಟ್ಟಾತ. ನಾನ ಹಸನ ಮಾಡಾಕಿ. ಮುಂಜಾನೆ ಉಂಡ್ರೆ ಸಂಜಿ ಮಟ ಹೊಟ್ಟಿ ತುಂಬಿರತಿತ್ತು. ಈಗಿನೋರು ನೆಲ್ಲಕ್ಕಿ ಉಣ್ತಾರ, ದಿನಕ್ಕ ಮೂರ ಬಾರಿ ಉಂಡ್ರೂ ಹೊಟ್ಟಿ ಮತ್ತ ಮತ್ತ ಕೇಳತಯ್ತಿ.

ಈಗ ಅಕ್ಕಿ ಎಂದರೆ ಅದು ಬತ್ತದ ಅಕ್ಕಿ ಎಂದೇ ಎಲ್ಲರ ಬಾವನೆ. ಆದರೆ ಮುಂಚೆ ನವಣಕ್ಕಿ, ಹಾರಕದಕ್ಕಿ, ಸಾಮಕ್ಕಿ, ನೆಲ್ಲಕ್ಕಿ ಎಂದೇ ಕರೆಯುತ್ತಿದ್ದರು. ಕಿರುದಾನ್ಯಗಳ ಅಡುಗೆಗಳೆಂದರೆ ರುಚಿ ಹೆಚ್ಚು, ಪೌಶ್ಟಿಕಾಂಶದಲ್ಲೂ ಮುಂದು. ಈ ದಾನ್ಯಗಳ ಕಾದ್ಯಗಳು (ಉಂಡೆ, ರೊಟ್ಟಿ, ಮುದ್ದೆ, ಪಾಯಸ) ಬಹಳ ಹೊತ್ತು ಹಸಿವನ್ನು ಮುಂದೂಡುತ್ತವೆ ಮತ್ತು ಮಯ್ಯಿಗೆ ಹುರುಪು ತುಂಬುತ್ತವೆ. ಅದಕ್ಕಾಗಿಯೇ ಹಿರಿಯರು ಹೇಳುತ್ತಿದ್ದದ್ದು ಇವನ್ನ ಉಂಡ್ರ ‘ಜೀವಕ್ಕ ತಂಪ, ಜುಟ್ಟ ಗಟ್ಟಿ’ ಅಂತ.

ಈ ದಾನ್ಯಗಳಲ್ಲಿ ಇಶೇಲ್ಲ ಪೋಶಕಾಂಶಗಳು, ಪ್ರೋಟಿನ್, ವಿಟಮಿನ್ ಇರುತ್ತವೆ ಎಂದು ಹೇಗೆ ನಂಬುವುದು? ಎಂದು ಇವತ್ತಿನ ನಾಗರಿಕ ಸಮಾಜ ಕೇಳುವ ಪ್ರಶ್ನೆ. ಇಂತಹ ಪ್ರಶ್ನೆಗಳನ್ನಿಟ್ಟುಕೊಂಡೇ ಉತ್ತರ ಹುಡುಕುತ್ತಾ ಹೋದರೆ ದೊರೆಯುವುದು ಅಚ್ಚರಿಯ ಮಾಹಿತಿ. ಅವುಗಳಲ್ಲಿರುವ ಪೌಶ್ಟಿಕಾಂಶ, ನಾರು ಮತ್ತು ಕಬ್ಬಿಣದ ಅಂಶಗಳು, ಕಾರ್‍ಬೊಹೈಡ್ರೇಟ್ ಮತ್ತು ಕೊಬ್ಬು ಬೇರೆಯ ದಾನ್ಯಗಳಿಗೆ ಹೋಲಿಸಿದರೆ ಹೆಚ್ಚಾಗಿವೆ. ಇವು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್ ಗಳು ಮತ್ತು ರೋಗ ನಿರೋದಕದ ಶಕ್ತಿ ಹೊಂದಿರುವುದರಿಂದ ಪೌಶ್ಟಿಕತೆಯ ಕಣಜಗಳಾಗಿವೆ.

ಆಹಾರ ತಜ್ನರು ಮತ್ತು ಪೋಶಕಾಂಶ ತಜ್ನರ ಪ್ರಕಾರ ಕಿರು ದಾನ್ಯಗಳು ಅಕ್ಕಿ ಮತ್ತು ಗೋದಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ವಿಟಮಿನ್ ಹಾಗೂ ಕನಿಜಗಳನ್ನು ಹೊಂದಿವೆ. ಸಾವೆ ಮತ್ತು ನವಣೆ ಅಕ್ಕಿಯಲ್ಲಿರುವಶ್ಟು ಪೋಶಕಾಂಶಗಳು ಮತ್ತಾವುದೇ ಆಹಾರ ಬೆಳೆಗಳಲ್ಲಿ ಇಲ್ಲ. ಮನುಶ್ಯನ ಹೊಟ್ಟೆಯೊಳಗೆ ಸರಳವಾಗಿ ಅರಗುವ ಈ ದಾನ್ಯಗಳು ಅಂಟಿಲ್ಲದ (gluten free) ದಾನ್ಯಗಳ ಗುಂಪಿಗೆ ಸೇರುತ್ತವೆ, ಇದರಿಂದ ಊಟ ಅರಗುವ ತೊಂದರೆ ಇರುವವರಿರಿಗೆ ಇವು ಬಹಳ ಉಪಕಾರಿ ಆಗಿವೆ.

ಸದ್ಯಕ್ಕೆ ನಾವು ಸೇವಿಸುತ್ತಿರುವ ಹೊಟ್ಟು ತೆಗೆದ ಗೋದಿ ಹಾಗು ಅಕ್ಕಿಯಂತಹ ಆಹಾರದಲ್ಲಿ ಸಹಜವಾಗಿ ದೊರೆಯುವ ಪೌಶ್ಟಿಕಾಂಶಗಳು ನಾಶವಾಗಿ, ಸೇವಿಸಿದ ಆಹಾರವು ಬೇಗನೆ ಕೊಬ್ಬಾಗಿ ಮಾರ‍್ಪಾಡುಗೊಳ್ಳುತ್ತದೆ. ಆಹಾರದಲ್ಲಿರುವ ಸಕ್ಕರೆ ಪ್ರಮಾಣ ವೇಗವಾಗಿ ಹಾಗೂ ನೇರವಾಗಿ ರಕ್ತ ಸೇರುತ್ತದೆ. ರಕ್ತದಲ್ಲಿ ಸಕ್ಕರೆ ಹೆಚ್ಚಾಗಿ ಸಕ್ಕರೆ ರೋಗ ಇರುವವರಿಗೆ ತೊಂದರೆ ಕೊಡುತ್ತದೆ. ಕೊಬ್ಬು ಹೆಚ್ಚಾಗಿ ‘ರಕ್ತದ ಒತ್ತಡ’ಕ್ಕೆ ಕಾರಣವಾಗುತ್ತದೆ’. ನವಣೆ, ಸಾಮೆ, ಹಾರಕ ಮತ್ತು ರಾಗಿಯಲ್ಲಿ ನಾರಿನಂಶ ಹೆಚ್ಚಾಗಿರುವುದನ್ನು ಗುರುತಿಸಲಾಗಿದೆ. ಈ ದಾನ್ಯಗಳ ಕಾದ್ಯಗಳು ಸಕ್ಕರೆಯನ್ನು ನಿದಾನವಾಗಿ ಹೀರಿಕೊಂಡು, ರಕ್ತಕ್ಕೆ ಸರಿಯಾಗಿ ಬಿಡುಗಡೆ ಮಾಡುತ್ತವೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ನವಣೆ ಒಂದು ಉತ್ತಮ ಆಹಾರವೆಂದು ಮದ್ದರಿಮೆಯೇ ಹೇಳಿದೆ.

ಪೌಶ್ಟಿಕಾಂಶಗಳಂತೆ ಸಿರಿದಾನ್ಯಗಳಲ್ಲಿರುವ ಕನಿಜಾಂಶಗಳು ಕೂಡ ಗಮನಾರ್‍ಹವಾಗಿವೆ. ವಿಟಮಿನ್ ಬಿ, ಪಾಸ್ಪರಸ್ ಮತ್ತು ಮೆಗ್ನೀಶಿಯಂ ಕನಿಜಗಳಿರುವುದರಿಂದ ಮೂಳೆಗಳ ಬೆಳವಣಿಗೆಗೆ ಇವು ಸಹಾಯ ಮಾಡುತ್ತವೆ. ಅಲ್ಲದೇ ಗುಂಡಿಗೆಯ ತೊಂದರೆ ಮತ್ತು ರಕ್ತದೊತ್ತಡ ತಡೆಯುವಲ್ಲಿ ಸಹಕಾರಿಯಾಗಿವೆ.

100 ಗ್ರಾಂ ಸಜ್ಜೆಯಲ್ಲಿ 8 ಮಿ. ಗ್ರಾಂ ಕಬ್ಬಿಣದ ಅಂಶವಿದೆ, ಅದೇ 100 ಗ್ರಾಂ ಅಕ್ಕಿಯಲ್ಲಿ ಕೇವಲ 0.7 ಮಿ. ಗ್ರಾಂ ಕಬ್ಬಿಣದ ಅಂಶವಿದೆ. ಹಾಗಾಗಿ ಸಜ್ಜೆರೊಟ್ಟಿ ತಿನ್ನುವುದರಿಂದ ಕಬ್ಬಿಣಾಂಶ ದೇಹಕ್ಕೆ ಪೂರಯ್ಕೆಯಾಗುತ್ತದೆ. ಇದು ರಕ್ತಹೀನತೆ ಗುಣಪಡಿಸುವಲ್ಲಿ ನೆರವಾಗುತ್ತದೆ. ಕ್ಯಾಲ್ಸಿಯಂ ಕೊರತೆ ಎಂದ ಕೂಡಲೇ ವೈದ್ಯರು ಮಾತ್ರೆಗಳನ್ನು ಬರೆಯುತ್ತಾರೆ. ಗರ್‍ಬಿಣಿಯರಲ್ಲಂತೂ ಈ ಮಾತ್ರೆ ಸೇವನೆ ಪ್ರಮಾಣ ಹೆಚ್ಚು ಆದರೆ ಈ ಕಿರುದಾನ್ಯಗಳ ಬಳಕೆ ಇಲ್ಲಿ ಉತ್ತಮ. ಬೀಟಾ ಕೆರೋಟಿನ್ನಂತಹ ಸೂಕ್ಶ್ಮ ಪೋಶಕಾಂಶಗಳಿಗಾಗಿ ಗುಳಿಗೆಗಳ ಮೊರೆ ಹೋಗುವ ಬದಲು ಈ ಕಿರುದಾನ್ಯಗಳ ಬಳಸಿದರೆ ಅಂತ ಎಲ್ಲ ಪೋಶಕಾಂಶಗಳನ್ನು ಒಟ್ಟಿಗೆ ನೀಡಬಲ್ಲವು ಇವು.

ಪಿಜ್ಜಾ, ಬರ್‍ಗರ್, ಸ್ಯಾಂಡ್ವಿಚ್, ಕಟ್ಲೆಟ್, ಗೋಬಿ ಮಂಚೂರಿ ಹೀಗೆ ಸಲೀಸಾಗಿ ಸಿಗುವ ಅನಾರೋಗ್ಯಕರ ಆಹಾರಗಳ ಬಳಕೆ ಹೆಚ್ಚಿರುವುದರಿಂದ ಹೆಚ್ಚಿನವರಲ್ಲಿ ಬೊಜ್ಜು ಒಂದು ಸಮಸ್ಯೆಯಾಗಿ ಕಾಡುತ್ತಿದೆ. ಹೆಚ್ಚಾದ ದೇಹದ ತೂಕವನ್ನು ಈ ಕಿರುದಾನ್ಯಗಳ ಬಳಕೆಯಿಂದ ಸಹಜ ತೂಕಕ್ಕೆ ತರಬಹುದು. ಮನುಶ್ಯನ ಹಲವು ರೋಗಗಳಿಗೆ ಆಹಾರದ ರೂಪದಲ್ಲೇ ಈ ದಾನ್ಯಗಳು ಮದ್ದಾಗುತ್ತವೆ. ಹಿಂದಿನ ಕಾಲದ ಆಹಾರ ಪದ್ದತಿಯಲ್ಲಿಯೇ ಮದ್ದು ಅಡಗಿತ್ತು ಎಂಬುದಂತು ನಿಜ.

ನಮ್ಮ ತಾತ – ಮುತ್ತಾತಂದಿರು ಬೆಳೆಯುತ್ತಿದ್ದ ಕಿರು ದಾನ್ಯಗಳು ಇಂದು ಕಣ್ಮರೆಯಾಗುತ್ತಿವೆ. ಇಂದಿನ ಪೀಳಿಗೆಯ ಕೆಲವೇ ಮಂದಿಗೆ ಗೊತ್ತಿದ್ದರೆ, ಮುಂದಿನ ಪೀಳಿಗೆಗೆ ಇವು ಮರೆಯಾಗುವ ಸಾದ್ಯತೆಗಳಿವೆ. ಆದರೆ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಬಹಳಶ್ಟು ಜನ ಹಿಂದೆ ತಿರುಗಿ ನೋಡುತ್ತಿದ್ದಾರೆ. ಆರೋಗ್ಯಕರ ತಿನಿಸುಗಳಿಗಾಗಿ ಕಿರುದಾನ್ಯಗಳ ಬಗ್ಗೆ ಬಹಳಶ್ಟು ಮಾಹಿತಿಗಳನ್ನು ಹುಡುಕುತ್ತಿದ್ದಾರೆ. ಅದಕ್ಕೆಂದೆ ಹಲವಾರು ಮಾಹಿತಿ ಜಾಲಗಳು ಹಬ್ಬಿವೆ.

ಬಡವರು, ಪಶು ಮತ್ತು ಹಕ್ಕಿ ಸಂಕುಲದ ಹೊಟ್ಟೆ ತುಂಬಿಸುತ್ತಿದ್ದ ದಾನ್ಯಗಳಿಗೆ ಈಗ ಸಿರಿಬಂದಿದೆ. ಈಗ ನವಣೆ, ಕೊರಲೆ, ಸಾಮೆ, ಹಾರಕ, ಕೆಂಪಕ್ಕಿ ಎಲ್ಲರಿಗೂ ಬೇಕಾಗಿದೆ. ಅವುಗಳಿಗಾಗಿ ಹುಡುಕಿಕೊಂಡು ಕರೀದಿಸುವ ಪರಿಪಾಟ ಶುರುವಾಗಿದೆ. ಕಿರುದಾನ್ಯ ಅತವಾ ವಾಡಿಕೆಯಲ್ಲಿ ಅಕ್ಕಿಗಳೆಂದೇ ಕರೆಯುವ ನವಣೆ, ಸಾಮೆ, ಕೊರಲೆ, ಬರಗುಗಳ ಕಡೆಗೆ ಸೆಳೆಯಲ್ಪಟ್ಟಿದ್ದಾರೆ.

ಬಹಳ ಅಡೆತಡೆಗಳನ್ನ ದಾಟಿ ಇವುಗಳ ಉಳಿವನ್ನು ನಾವು ಮಾಡಬೇಕಿದೆ. ಈ ದಾನ್ಯಗಳತ್ತ ಹೆಚ್ಚಿನ ರಯ್ತರು ಹಾಗು ಜನರು ಗಮನ ಹರಿಸದೇ ಇರುವುದರಿಂದ ಇವುಗಳ ಬಳಕೆ ಕೆಲವೇ ಕೆಲವು ಸ್ತಳಗಳಲ್ಲಿವೆ. ಬಳಕೆದಾರ ಸ್ನೇಹಿಯಾಗಿಸಲು ಇವುಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಆರೋಗ್ಯಕ್ಕೆ ಇವುಗಳಿಂದಾಗುವ ಲಾಬಗಳು, ನಾಲಿಗೆಗೆ ರುಚಿ ನೀಡುವ ಕಾದ್ಯಗಳ ವಿವರ ಹೀಗೆ ಹತ್ತು ಹಲವು ಆಯಾಮಗಳಲ್ಲಿ ಪ್ರಯತ್ನ ನಡೆಸಬೇಕಿದೆ. ಆಗಲೆ ನಮ್ಮ ಈ ಕಿರು ದಾನ್ಯಗಳು ನಮ್ಮ ಬದುಕಿಗೆ ಸಿರಿದಾನ್ಯಗಳಾಗಲು ಸಾದ್ಯ. ಆರೋಗ್ಯಕರ ಹಳೆ ಊಟ ಹೊಸ ನೋಟದೊಂದಿಗೆ ಆರಂಬಿಸೋಣವೆ. ಮುಂದಿನ ಬರಹಗಳಲ್ಲಿ ಕಿರು ದಾನ್ಯಗಳ ಕುರಿತು ಮತ್ತಶ್ಟು ಅರಿಯೋಣ.

(ಚಿತ್ರ ಸೆಲೆ: thehindubusinessline)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. bahala sariyaagide nimma kirudaanyagala baraha. naanu battadakki biTtu, goodi biTTu aaru tingalugaLaayitu. nanna hb1ac 6.7 inda 5.7 bandide.
    ellaa sakkare beenigaru idannu paalisabhudu. sakkare-beeneya bagge allopathy ya niluvu tiira tappu.

  2. ಕುಮಾರಸ್ವಾಮಿ says:

    ಸೊಗಸಾಗಿಗೆ ಸಿರಿದಾನ್ಯದ ಹೊಸ ನೋಟ ನಿಮ್ಮ ಬರಹದಲ್ಲಿ

Giridhara Mysore ಗೆ ಅನಿಸಿಕೆ ನೀಡಿ Cancel reply

%d bloggers like this: