ಕಿರುದಾನ್ಯಗಳು: ಜೋಳ ನಂಬಿದರೆ ಹಸನು ಬಾಳು

ಸುನಿತಾ ಹಿರೇಮಟ.

Sorghum

ಒಂದಾನೊಂದು ಕಾಲದಲ್ಲಿ…

ಒಂದು ಊರಿನಲ್ಲಿ ಕೆಲವು ಮಕ್ಕಳು ಊರ ಹೊರಗಿನ ಕಮಾನು ಬಾಗಿಲಿನ ಹತ್ತಿರ ಆಟ ಆಡುವಾಗ ಹುಡುಗನೊಬ್ಬನಿಗೆ ಗುಂಡಗಿನ ಒಂದು ವಸ್ತು ಸಿಕ್ಕಿತು. ಹುಡುಗ ಕೂತುಹಲದಿಂದ ಅದನ್ನು ಒಯ್ದು ಅಪ್ಪನಿಗೆ ತೋರಿಸಿದ. ಅಪ್ಪನಿಗೂ ಆ ವಸ್ತು ಯಾವುದು ಅಂತ ತಿಳಿಯಲಿಲ್ಲ, ಇಂತಹ ಅಪರೂಪದ ವಸ್ತು ರಾಜನಿಗೇ ಸೇರಬೇಕಾದದ್ದು, ಅದನ್ನು ರಾಜನಿಗೆ ಕೊಟ್ಟು ಬಿಡೋಣವೆಂದು, ಅದನ್ನ ರಾಜನ ಆಸ್ತಾನಕ್ಕೆ ತೆಗೆದುಕೊಂಡು ಹೋದ. ಅದನ್ನು ನೋಡಿದ ರಾಜನಿಗೂ ಕೂತಹಲ ಹೆಚ್ಚಿ, ಆಸ್ತಾನದ ವಿದ್ವಾಂಸರಿಗೆಲ್ಲ ಅದೇನೆಂದು ಕೇಳಿದನು. ಅದರಲ್ಲಿ ಒಬ್ಬರು ಇದನ್ನು ಹಿರಿಯರಿಗೆ ತೋರಿಸಿದರೆ ತಿಳಿಯುತ್ತದೆ ಎಂದು ಸಲಹೆ ನೀಡಿದರು.

ಅದರಂತೆ ಎಲ್ಲೆಡೆ ಹುಡುಕಿ ಒಬ್ಬ ತಾತನನ್ನು ಕರೆದುಕೊಂಡು ಬಂದರು. ಆತ, “ಓಹೋ! ಇದಾ ನಮ್ಮ ಕಾಲದಲ್ಲಿ ಇದ್ದಿಲ್ಲ. ನಮ್ಮಪ್ಪ ಇದರ ಬಗ್ಗೆ ಹೇಳತಿದ್ದ, ಅವರನ್ನು ಕರೆಸಿದರೆ ಇದರ ಬಗ್ಗೆ ತಿಳಿಯುತ್ತೆ ಎಂದ.” ನಿಮ್ಮಪ್ಪನಿಗೆ ತೋರಿಸಬೇಕೆ? ಇನ್ನೂ ಇದ್ದಾರೆಯೆ? ಎಂದು ಆಶ್ಚರ‍್ಯದಿಂದ ರಾಜ ಅವರ ಅಪ್ಪನನ್ನು ಕರೆಸಿದ. ಅವರಪ್ಪ ಕೋಲು ಹಿಡಿದುಕೊಂಡು ಬಂದಾಗ ಇಡಿ ಆಸ್ತಾನವೇ ಅಚ್ಚರಿಗೊಂಡಿತು. ಅವನನ್ನು ಕೇಳಲಾಗಿ, ‘ಇಲ್ಲ ನಮ್ಮಪ್ಪನವರ ಕಾಲದಲ್ಲಿ ಈ ರೀತಿಯ ಕಾಳು ಬೆಳೆತಿದ್ದರಂತೆ, ಅವರನ್ನ ಕರೆಸಿದರೆ ಗೊತ್ತಾಗಬಹುದು’ ಎಂದ ಅದನ್ನ ಕೇಳಿ ಎಲ್ಲರಿಗೂ ಆಶ್ಚರ‍್ಯವಾಯಿತು. ಅಂತೆಯೇ ಅವರಪ್ಪನನ್ನು ಆಸ್ತಾನಕ್ಕೆ ಕರೆಸಲಾಯಿತು. ಅವರ ಅಪ್ಪ ಆಸ್ತಾನಕ್ಕೆ ಯಾವ ಸಹಾಯವಿಲ್ಲದೆ ನಡೆದು ಬಂದ, ಮೇಲಾಗಿ ಇನ್ನು ಗಟ್ಟಿ ಮುಟ್ಟಾಗಿದ್ದ. ಅವನನ್ನು ನೋಡಿ ರಾಜರಾದಿ ಎಲ್ಲರೂ ದಂಗಾದರು. ಬಂದ ಮನುಶ್ಯ ಆ ಕಾಳನ್ನ ನೋಡಿ ಕುಶಿಯಿಂದ ನಮ್ಮ ತಾತನವರ ಕಾಲಕ್ಕೆ ಬೆಳೆಯುತ್ತಿದ್ದ ಜೋಳದ ಕಾಳು ಇದು. ಆಗ ಈ ಗಾತ್ರದಲ್ಲಿದ್ದವು, ಬದಲಾದ ಒಕ್ಕಲಿನಲ್ಲಿ ಕಾಲಕಾಲಕ್ಕೆ ಸಣ್ಣ ಆಗುತ್ತ ಬಂದವು. ಬಾಲ್ಯದಲ್ಲಿ ಅಂತಹ ಆಹಾರ ಸೇವಿಸುತ್ತಿದ್ದರಿಂದಲೇ ಹೀಗೆ ಗಟ್ಟಿಮುಟ್ಟಾಗಿ ಇದ್ದೇನೆ. ಎಂದು ಹೇಳಿ ಬಡಬಡನೇ ನಡೆದು ಹೋದ.

ಜೋಳದ ಗಟ್ಟಿತನದ ಬಗ್ಗೆ ತಿಳಿಸುವ ಈ ಕತೆ ಈಗಲೂ ನಮ್ಮ ನಡುವೆ ಹರಿದಾಡುತ್ತಿದೆ. ಅಂದಿನ ಹಿರಿಯರ ಆರೋಗ್ಯದ ಬಗ್ಗೆ ಓದಿ, ಕೇಳಿ ತಿಳಿದ ನನಗೆ ಜೋಳದ ಬಗ್ಗೆ ವಿವರವಾಗಿ ತಿಳಿಯುವ ಕುತೂಹಲ ಯಾವಗಲೂ ಇತ್ತು. ಇದೇ ಕುತೂಹಲ ಒಂದೊಂದು ಸಲ ಒಂದೊಂದು ಮಗ್ಗಲು, ಒಂದೊಂದು ಮುಕವನ್ನು ಪರಿಚಯಿಸುತ್ತದೆ, ಇಂದಿಗೂ ಪರಿಚಯಿಸುತ್ತಲೆ ಇದೆ.

ಬಾರತದ ಜೋಳ ಬೆಳೆಯುವ ರಾಜ್ಯಗಳಲ್ಲಿ ಎರಡನೆ ಅತೀ ದೊಡ್ಡ ರಾಜ್ಯ ಕರ‍್ನಾಟಕ. ಜೋಳದ ಬೆಳೆ ಕರ‍್ನಾಟಕದಲ್ಲಿ ಬಹುಮುಕ್ಯವಾದ ಬೆಳೆಗಳಲ್ಲಿ ಒಂದಾಗಿದೆ. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಅದರಲ್ಲೂ ಉತ್ತರ ಕರ‍್ನಾಟಕ ಬಾಗದಲ್ಲಿ ಹೆಚ್ಚಾಗಿ ಇದನ್ನು ಬೆಳೆಯುತ್ತಾರೆ. ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಗುಲ್ಬರ‍್ಗ ಮತ್ತು ರಾಯಚೂರಿನ ಹಲವು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಆ ಬಾಗದಲ್ಲಿ ಜೋಳದ ರೊಟ್ಟಿ ತಿನ್ನದೆ ಊಟ ಮಾಡುವವರು ಕಮ್ಮಿ. ಉತ್ತರ ಕರ‍್ನಾಟಕದ ಸುಪ್ರಸಿದ್ದ ಐತಿಹಾಸಿಕ ಸ್ಮಾರಕ ವಿಜಾಪೂರದ ಗೋಳಗುಮ್ಮಟ ಎಶ್ಟು ಪ್ರಸಿದ್ದವೋ ಅಶ್ಟೇ ಕ್ಯಾತಿ ಈ ಬಿಳಿ ಜೋಳಕ್ಕಿದೆ. ಗೋಳಗುಮ್ಮಟ ಕಟ್ಟಿದ ಜಟ್ಟಿಗಳ ಶಕ್ತಿ ಮೂಲವೇ ಬಿಳಿಜೋಳದ ರೊಟ್ಟಿ ಎಂಬ ಮಾತು ಕೇಳಿ ಬರುತ್ತದೆ. ಕರ‍್ನಾಟಕದ ಇತರ ಬಾಗಗಳಲ್ಲೂ ಜೋಳ ಮುಕ್ಯ ಆಹಾರವಾಗಿದೆ.

ಒಣ ಬೂಮಿ ಮತ್ತು ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಜೋಳವನ್ನು ಬೆಳೆಯಬಹುದಾಗಿದೆ. ಕಪ್ಪು ಮಣ್ಣು, ಕೆಂಪು ಮಣ್ಣು ಹೀಗೆ ಹಲವು ರೀತಿಯ ಮಣ್ಣಿನಲ್ಲಿ ಸುಲಬವಾಗಿ ಬೆಳೆಯಬಹುದು. ಜೋಳದ ಇನ್ನೊಂದು ವಿಶೇಶತೆಯೆಂದರೆ ಜೋಳ ಬೆಳೆಯು ತನ್ನ ಜೀವಿತಾವದಿಯಲ್ಲಿ ಪ್ರತಿ 1000 ಲೀಟರ್ ನೀರನ್ನು ಉಪಯೋಗಿಸಿ 1.5 ಕೆ. ಜಿ. ಜೀವ ಪದಾರ‍್ತವನ್ನು, ಅಂದರೆ ಕಾಳು ಮತ್ತು ಮೇವನ್ನು ಉತ್ಪಾದಿಸಬಲ್ಲದು. ಇದು ಉಳಿದ ದಾನ್ಯಗಳಿಗೆ ಹೋಲಿಸಿಕೊಂಡರೆ ಅತಿ ಹೆಚ್ಚು. ಈ ಕೆಳಗಿನ ಅಂಕಿ ಅಂಶಗಳನ್ನು ಗಮನಿಸಿ.

Jola

ಈ ಅಂಕಿ ಅಂಶಗಳಿಂದ ತಿಳಿದು ಬರುವುದೇನೆಂದರೆ, ಅತಿ ಕಡಿಮೆ ತೇವಾಂಶವನ್ನು ಉಪಯೋಗಿಸಿ ಹೆಚ್ಚು ಕಾಳು ಹಾಗೂ ಮೇವು ಕೊಡುವ ಒಂದೇ ಒಂದು ಬೆಳೆ ಜೋಳ. ಕರ‍್ನಾಟಕದ ಉತ್ತರ ಒಣ ವಲಯದಲ್ಲಿ ಹವಾಮಾನದ ವಯ್ಪರಿತ್ಯ ಮತ್ತು ಅಕಾಲಿಕ ಮಳೆಯು ತೀರಾ ಸಾಮಾನ್ಯವಾಗಿದ್ದು, ಸರಾಸರಿ ಮಳೆ ಕೇವಲ 580 ಮಿ.ಮಿ. ಆಗುತ್ತದೆ. ಜೋಳ ಮಾತ್ರ ಇದೆಲ್ಲವನ್ನು ಎದುರಿಸಿ ಯಶಸ್ವಿಯಾಗಿ ಬೆಳೆಯಬಲ್ಲ ಬರವಸೆಯ ಬೆಳೆಯಾಗಿದೆ. ಮೇಲಾಗಿ ಇತರೆ ಬೆಳೆಗಳಿಗೆ ಸುರಿಯುವ ವಿಶದ ರಾಸಾಯನಿಕಗಳಿಗೆ ಹೋಲಿಸಿದರೆ ಜೋಳ ಅದೆಶ್ಟೋ ಪಾಲು ಸುರಕ್ಶಿತ ಎನ್ನಬೇಕು.

ಜೋಳ ಬಿಟ್ಟು ಬೇರೆ ಬೆಳೆಗಳನ್ನು ಬೆಳೆಯಲು ನೀರು ಮತ್ತು ಅಪಾರ ಪ್ರಮಾಣದ ರಾಸಾಯನಿಕಗಳ ದುರ‍್ಬಳಕೆಯಾಗುತ್ತಿದೆ, ವಿಶವಸ್ತುಗಳು ಬೆರೆತ ಈ ನೀರು ಬೇರೆ ನೆಲವೆನ್ನೆಲ್ಲ ಜವುಳು ಮಾಡುತ್ತಿದೆ. ಹಾಗಾಗಿ ಜೋಳ ಪರಿಸರ ಸ್ನೇಹಿ ಬೆಳೆಯಾಗಿದ್ದು ಈ ನಾಡಿನ ಜನರ ಪ್ರದಾನ ಬೆಳೆ ಮತ್ತು ಆಹಾರವಾಗಿದೆ. ಜೋಳವನ್ನು ಮುಂಗಾರು ಹಾಗು ಹಿಂಗಾರು ಬೆಳೆಯಾಗಿ ಹಾಗು ಮಿಶ್ರ ಬೆಳೆಯಾಗಿಯೂ ಬಿತ್ತಬಹುದು. ಸರಿಯಾದ ಕಣ ಹಾಗು ಸಂಗ್ರಹಿಸುವ ಪದ್ದತಿ ಅನುಸರಿಸಿದರೆ ಬಹು ಕಾಲ ಬಾಳುವವು ಈ ಸಿರಿದಾನ್ಯಗಳು.

ಈ ಹಿಂದೆ ಒಂದೊಂದು ಸೀಮೆಗೂ ನಾಲ್ಕಾರು ಜೋಳದ ತಳಿಗಳಿದ್ದು ಆಯಾ ಪ್ರದೇಶಕ್ಕನುಗುಣವಾಗಿ ತಿನ್ನಲು ಒಂದು ಜೋಳದ ತಳಿ, ಜಾನುವಾರು ಮೇವಿಗೆ ಮತ್ತೊಂದು ತಳಿ, ಹಬ್ಬ-ಹುಣ್ಣಿಮೆಗಳಲ್ಲಿ ವಿಶೇಶ ಕಾದ್ಯ ತಯಾರಿಸಲು ಮತ್ತೊಂದು ತಳಿ ಹೀಗೆ ಹತ್ತಾರು ತಳಿಯ ಜೋಳದ ಬೀಜಗಳು ಉತ್ತರ ಕರ್‍ನಾಟಕದ ರೈತರ ಉಡಿಗಳಲ್ಲಿ ಇದ್ದವು. ಅದರಲ್ಲಿಯೇ, ಮುಂಗಾರು ಹಂಗಾಮಿಗೆ ಬಿತ್ತುವ ತಳಿಗಳೇ ಬೇರೆ, ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡುವ ತಳಿಗಳೇ ಬೇರೆಯಾಗಿದ್ದವು. ರೋಗ-ರುಜಿನಗಳ ಕಾಟವಿಲ್ಲದೆ ಸೊಗಸಾಗಿ ಬೆಳೆದು ಸಮ್ರುದ್ದ ಪಸಲು ನೀಡುವುದರ ಜೊತೆಗೆ ದನಕರುಗಳಿಗೆ ವರ್‍ಶಕ್ಕಾಗುವಶ್ಟು ಮೇವು ಒದಗಿಸುತ್ತಿದ್ದವು.

ಯಾವಾಗ ಹಯ್ಬ್ರಿಡ್ ತಳಿಗಳು ಸಾಮಾನ್ಯವಾದವೊ ಆಗ ಶುರುವಾದದ್ದೆ ಮರುಹುಟ್ಟು ಪಡೆಯದ ಬಂಜೆ ಬೀಜಗಳು. ಆ ಕ್ರಮೇಣ ಎಲ್ಲ ದೇಶಿ ತಳಿಗಳು ಒಂದರ ಹಿಂದೆ ಒಂದು ಮಾಯವಾದವು. ಈಗ ಹತ್ತಾರು ಸೀಮೆ ಸುತ್ತಿದರೂ ನಾಲ್ಕಾರು ಜೋಳದ ಬೀಜದ ತಳಿಗಳು ಸಿಗುವುದೂ ಕಶ್ಟ. ಸುಮಾರು ನಾಲ್ಕು- ಐದು ತಿಂಗಳುಗಳ ಕಾಲ ಬೆಳೆದು ಗಟ್ಟಿ ಆಹಾರ ಕೊಡುತ್ತಿದ್ದ ದೇಶಿ ಜೋಳದ ತಳಿಗಳು ಈ ಹಿಂದೆ ಬಳಕೆಯಲ್ಲಿದ್ದವು. ಆದರೆ ಈಗ ಕೆಲವೇ ಬೀಜದ ತಳಿಗಳು ಉಳಿದಿದ್ದು ಜೋಳದ ತಳಿಗಳು ಅಳಿದು ಹೋಗಿ ದಶಕಗಳೇ ಕಳೆದಿವೆ. ಕೆಲವು ತಳಿಗಳು ಇನ್ನೂ ಉತ್ತರ ಕರ‍್ನಾಟಕದ ಬಾಗದಲ್ಲಿ ಕಾಣ ಸಿಗುತ್ತವೆ. ಈ ಬಾಗದ ಬಹುತೇಕ ರೈತರು ತಾವೇ ಜೋಳದ ಬೀಜಗಳನ್ನು ಕೂಡಿಟ್ಟುಕೊಂಡು ಬೆಳೆಗಳನ್ನು ಕಾಪಾಡಿ ಕೊಂಡಿದ್ದಾರೆ. ಜವಾರಿ ಜೋಳದ ಬೀಜದ ತಳಿಗಳು ನಮಗೀಗ ಅಮೂಲ್ಯವಾಗಿ ಹೋಗಿದೆ.

ಮನುಶ್ಯನಿಗೆ ಇದರ ಕಾಳು ಮುಕ್ಯ ಆಹಾರವಾಗಿದ್ದರೆ, ಮೇವು ಜಾನುವಾರುಗಳ ಹೊಟ್ಟೆ ತುಂಬಿಸುವ ಮುಕ್ಯ ಈಡುಣಿಸಾಗಿದೆ. ಈ ಮೇವನ್ನು ಹಸಿ ಇದ್ದಾಗಲೂ, ಒಣಗಿದ ಮೇಲೂ ದನಗಳಿಗೆ ಕೊಡಬಹುದು. ಈ ಮೇವನ್ನು ದನಗಳು ಪ್ರೀತಿಯಿಂದ ತಿನ್ನುತ್ತವೆ. ದನಗಳ ಆರೋಗ್ಯ, ಬೆಳವಣಿಗೆ ಹಾಗೂ ಅವುಗಳ ಉತ್ಪಾದನಾಶಕ್ತಿ ಅವುಗಳಿಗೆ ಕೊಡುವ ಆಹಾರವನ್ನು ಅವಲಂಬಿಸಿರುತ್ತದೆ, ಈ ಜೋಳದ ಮೇವು ಅವುಗಳ ಬೆಳವಣಿಗೆಗೆ ತುಂಬಾ ನೆರವಾಗುತ್ತದೆ. ಮುಂಗಾರಿಗಿಂತ ಹಿಂಗಾರಿ ಜೋಳದ ಮೇವು ದನಗಳಿಗೆ ಹೆಚ್ಚು ಪೌಶ್ಟಿಕವಾಗಿರುತ್ತವೆ.

ಉತ್ತಮ ಜೋಳದ ದಂಟು ತೆಳ್ಳಗಿದ್ದು ತಿಳಿ ಅರಿಸಿನ ಬಣ್ಣದ ಎಲೆಗಳು ಹೇರಳವಾಗಿರುತ್ತವೆ. ರವದೆಯ ಮೇಲೆ ಕೆಂಪು ಕಪ್ಪು ಮಿಶ್ರಿತವಾದ ಚುಕ್ಕೆಗಳು ಇರುವುದಿಲ್ಲ. ಜೋಳದ ಮೇವಿನಲ್ಲಿ ಮಾಂಸೋತ್ಪಾದಕ ಮತ್ತು ಕೊಬ್ಬು ಪದಾರ್‍ತಗಳು ಕಡಿಮೆ. ಪಿಶ್ಟಮಯ ಪದಾರ್‍ತವು ವಿಪುಲವಾಗಿರುತ್ತದೆ. ಈಡುಣಿಸಾಗಿ ಈ ಜೋಳದ ಮೇವು ಬಹಳ ಉಪಯುಕ್ತವಾದದ್ದು. ಜೋಳದ ದಂಟು ಇಲ್ಲಿ ಬಹಳ ಉಪಕಾರಿ. ಸರಿಯಾಗಿ ಸಂಸ್ಕರಿಸಿದ ಮೇವಿನಲ್ಲಿ ಬಹು ಪ್ರಮಾಣದ ಪೋಶಕಾಂಶಗಳು ದೊರಕುವವು. ದನ-ಕರುಗಳಿಗೆ ಮೇವಾಗಿ ಉಪಯೋಗವಾಗುವ ಜೋಳದ ದಂಟು ಸಾವಯವ ಗೊಬ್ಬರವಾಗಿಯೂ ಉಪಯೋಗವಾಗುತ್ತದೆ. ಕಡಿದ ದಂಟಿನ ಕೆಳಬಾಗವನ್ನು ಹಾಗೇ ಬಿಟ್ಟರೆ ಕಳೆಯ ರೂಪದಲ್ಲಿ ಮತ್ತೆ ಇಳುವರಿ ಕೊಡುತ್ತದೆ.

`ಹಸಿರು ಕ್ರಾಂತಿ’ಯ ಅಬ್ಬರದಲ್ಲಿ ನಾವು ಮಹತ್ವದ ಕಿರುದಾನ್ಯಗಳನ್ನು ಕಳೆದುಕೊಂಡಿದ್ದೇವೆ. ಈಗೀಗ ಜೋಳ, ರಾಗಿಯನ್ನೂ ಮನೆಯಿಂದ ಆಚೆ ನೂಕಲು ಹೊರಟಿದ್ದೇವೆ. ಲಾಬದಾಯಕ ಬೆಳೆಗಳ ಪಯ್ಪೋಟಿ, ಬದಲಾಗುತ್ತಿರುವ ಆಹಾರ ಪದ್ದತಿ, ಕಡಿಮೆಯಾಗುತ್ತಿರುವ ಒಕ್ಕಲು ಬೂಮಿ ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಜೋಳ ತನ್ನ ಪ್ರಾಮುಕ್ಯತೆಯನ್ನ ಕಳೆದುಕೊಳ್ಳುತ್ತಿದೆ. ಜೋಳದಿಂದ ಮಾಡುವ ಬೇರೆ ಬೇರೆ ತಿನಿಸುಗಳ ಮತ್ತು ಅವುಗಳ ಉಪಯೋಗಗಳ ಕುರಿತು ಸರಿಯಾದ ಅರಿವು ಮೂಡಿಸಿದರೆ ಜೋಳದ ಬೇಡಿಕೆ ಹೆಚ್ಚಾಗುವುದು.

ಮುಂಬರುವ ವರ್‍ಶಗಳಲ್ಲಿ ನೀರಿನ ಸಮಸ್ಯೆ ಮತ್ತು ನೀರಿಗಾಗಿ ಪಯ್ಪೋಟಿ ಹೆಚ್ಚಾಗಲಿದ್ದು, ಇಂತಹ ಪರಿಸ್ತಿತಿಯಲ್ಲಿ ಆಹಾರ ಬದ್ರತೆಯು ಅತೀ ಹೆಚ್ಚು ನೀರನ್ನು ಮತ್ತು ಪರಿಕರಗಳನ್ನು ಉಪಯೋಗಿಸಿ ಹೆಚ್ಚಿನ ಇಳುವರಿಯನ್ನು ಕೊಡುವ ಬೆಳೆಗಳಿಗಿಂತ, ಅತೀ ಕಡಿಮೆ ನೀರು ಹಾಗೂ ಪರಿಕರಗಳನ್ನು ಉಪಯೋಗಿಸಿ, ಪ್ರತಿಕೂಲ ಹವಾಮಾನವನ್ನು ಸಮರ್‍ತವಾಗಿ ಎದುರಿಸಿ, ಉತ್ತಮ ಪಸಲನ್ನು ಕೊಡುವ ಬೆಳೆಗಳ ಮೇಲೆ ಅವಲಂಬಿತವಾಗಿದೆ. ಇಂತಹ ಬೆಳೆಗಳ ಪಟ್ಟಿ ಮಾಡಿದರೆ ಜೋಳಕ್ಕೆ ಮೊದಲ ಸ್ತಾನ ಸಿಗುವುದು. ಇದಲ್ಲದೆ ಜೋಳವನ್ನು ಅತೀ ಕಡಿಮೆ ರಾಸಾಯನಿಕಗಳನ್ನು ಉಪಯೋಗಿಸಿ ಬೆಳೆಯುವುದರಿಂದ ಇದೊಂದು ಸಾವಯವ ಆಹಾರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಜೋಳವು ನೈಸರ‍್ಗಿಕ ಆರೋಗ್ಯ ವರ್‍ದಕವಾಗಿದೆ. ಈ ನಿಟ್ಟಿನಲ್ಲಿ ಸರಕಾರ, ವಿಗ್ನಾನಿಗಳು ಹಾಗೂ ಬುದ್ದಿ ಜೀವಿಗಳು ಚಿಂತನೆ ನಡೆಸುವುದು ಅವಶ್ಯಕವಾಗಿದೆ.

ಇತ್ತೀಚಿನ ವೈಗ್ನಾನಿಕ ಸಂಶೋದನೆಗಳು ಕೂಡಾ ಜೋಳದಲ್ಲಿ ಅನೇಕ ಶಕ್ತಿವರ್‍ದಕ ಹಾಗೂ ಆರೋಗ್ಯವರ್‍ದಕ ಅಂಶಗಳಿರುವುದನ್ನು ಪತ್ತೆಹಚ್ಚಿವೆ. ಪಯ್ಟೋಸ್ಟಿರಾಲ್ಗಳು, ನಾರಿನಂಶ, ಉಪಯುಕ್ತ ಪ್ರೊಟೀನ್ ಗಳು, ಕನಿಜಾಂಶಗಳು ಮುಂತಾದವುಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮದುಮೇಹ, ಕ್ಯಾನ್ಸರ್, ರಕ್ತದೊತ್ತಡ, ಹ್ರುದಯ ಸಂಬಂದಿ ರೋಗಗಳನ್ನು ತಡೆಗಟ್ಟುವಲ್ಲಿ ಜೋಳವು ಮಹತ್ತರ ಪಾತ್ರವಹಿಸುತ್ತದೆ.

Jola1 ಜೋಳ ಪ್ರೊಟೀನಿನ ಅತ್ಯುತ್ತಮ ಮೂಲ. ಇದು ಅವಶ್ಯಕ ಪೋಶಕಾಂಶಗಳಾದ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಪಾಸ್ಪರಸ್ ಗಳಿಂದ ಸಮ್ರುದ್ದವಾಗಿವೆ. ಜೋಳದಲ್ಲಿ ವಿಟಮಿನ್ ಬಿ ಗಳಾದ ತಿಯಾಮಿನ್ ಮತ್ತು ರೈಬೋಪ್ಲೇನ್ ಗಳು ಇವೆ. ಜೋಳದಲ್ಲಿ ಪಯ್ಟೋ ಕೆಮಿಕಲ್ಸ್, ಟ್ಯಾನಿನ್ಸ್, ಪಿನಾಲಿಕ್ ಆಸಿಡ್ ಮತ್ತು ಆಂತೋಸಿಯಾನಿನ್ ಗಳು ಸಮ್ರುದ್ದವಾಗಿರುತ್ತವೆ. ಇದರಲ್ಲಿರುವ ಪಯ್ಟೋಕೆಮಿಕಲ್ಸ್ ಬೊಜ್ಜಿನ ನಿಯಂತ್ರಣದಲ್ಲಿ ನೆರವಾಗುತ್ತದೆ. ಜೋಳವು ಹ್ರುದಯ ಸ್ನೇಹಿ ಆಹಾರವಾಗಿದ್ದು, ಜೋಳದ ಪೋಶಕಾಂಶಗಳು ಅಕ್ಕಿಗಿಂತ ಅದೆಶ್ಟೊ ರೀತಿಯಲ್ಲಿ ದೈಹಿಕ ಕೆಲಸ ಮಾಡುವವರಿಗೆ ಆರೋಗ್ಯದಾಯಕವಾಗಿದೆ.

ರೊಟ್ಟಿ ಉತ್ತರ ಬಾರತದಲ್ಲಿ ಮಾತ್ರವಲ್ಲ, ದಕ್ಶಿಣ ಬಾರತದ ಪ್ರಮುಕ ಅಡುಗೆಗಳಲ್ಲಿ ಒಂದಾಗಿದೆ. ಕರ‍್ನಾಟಕದಲ್ಲಿ ಉತ್ತರ ಕರ‍್ನಾಟಕದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ. ರೊಟ್ಟಿಯಲ್ಲಿ ಅಕ್ಕಿ ರೊಟ್ಟಿ, ಜೋಳದ ರೊಟ್ಟಿ, ರಾಗಿ ರೊಟ್ಟಿ ಹೀಗೆ ಅನೇಕ ಬಗೆಯ ರೊಟ್ಟಿ ತಯಾರಿಸಲಾಗುವುದು.

ಪ್ರತಿದಿನ ಆಹಾರಕ್ರಮದಲ್ಲಿ ಜೋಳದ ರೊಟ್ಟಿಯನ್ನು ತಿಂದಲ್ಲಿ ಆಗುವ ಉಪಯೋಗಗಳು:

  • ಜೋಳದ ರೊಟ್ಟಿಯಲ್ಲಿರುವ ಪೋಶಕಾಂಶಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
  • ರೊಟ್ಟಿ ಹೊಟ್ಟೆ ತುಂಬುವುದರ ಜೊತೆಗೆ ನಿದಾನಕ್ಕೆ ಅರಗುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
  • ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ದತೆಯನ್ನು ಹೋಗಲಾಡಿಸುತ್ತದೆ.
  • ರೊಟ್ಟಿಯಲ್ಲಿ ಕಡಿಮೆ ಕ್ಯಾಲೋರಿ ಇರುವುದರಿಂದ ಹ್ರುದಯದ ಆರೋಗ್ಯಕ್ಕೆ ಒಳ್ಳೆಯದು.
  • ಸಮತೂಕವನ್ನು ಬಯಸುವವರು ಪ್ರತಿನಿತ್ಯ ರೊಟ್ಟಿ ತಿನ್ನುವುದು ಒಳ್ಳೆಯದು
  • ಆಯುರ‍್ವೇದದ ಪ್ರಕಾರ ಇದು ದೇಹದಲ್ಲಿ ವಾತ ಮತ್ತು ಪಿತ್ತವನ್ನು ನಿಯಂತ್ರಣದಲ್ಲಿಡುತ್ತದೆ. ವಾತವು ದೇಹದ ಉಸಿರಾಟ, ಊಟದ ಅರಗುವಿಕೆ, ಮೆದುಳಿನ ಆರೋಗ್ಯ ಕಾಪಾಡುತ್ತದೆ. ಪಿತ್ತವು ದೇಹದಲ್ಲಿ ಅರಗುವಿಕೆ ಸರಿಯಾಗಿ ನಡೆಯುವಂತೆ ಮಾಡಿ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.
  • ರೊಟ್ಟಿಯಲ್ಲಿ ವಿಟಮಿನ್ ಬಿ1, ಬಿ2, ಬಿ3, ಬಿ6, ಬಿ9, ಕಬ್ಬಿಣದಂಶ, ಮೆಗ್ನಿಶಿಯಂ ಮತ್ತು ಪೊಟಾಶಿಯಂ ಅಂಶವಿರುವುದರಿಂದ ದೇಹಕ್ಕೆ ಅಗತ್ಯವಾದ ಪೋಶಕಾಂಶ ದೊರೆಯುತ್ತದೆ.

ಇತ್ತೀಚಿನ ಆಯಾಮಗಳು:
ಕಯ್ಗಾರಿಕೆಗೋಸ್ಕರ ಹಾಗೂ ಕುಡಿಯಲು ಯೋಗ್ಯವಾದ ಮದ್ಯಸಾರ ಹಾಗೂ ಪಿಶ್ಟ ಪದಾರ್‍ತಗಳ ಬೇಡಿಕೆಯು ಹೆಚ್ಚಾಗುತ್ತಿದೆ. ಜೋಳದಿಂದ ಮದ್ಯಸಾರ, ಪಿಶ್ಟ ಮತ್ತು ಪಿಶ್ಟೋತ್ತರ ಉತ್ಪನ್ನಗಳು, ಉತ್ತಮ ಗುಣಮಟ್ಟದ ಪ್ರಕ್ಟೋಸ್ ಶರಬತ್ತು, ಗ್ಲುಕೋಸ್, ಮಾಲ್ಟ್, ಪ್ಲೆಕ್ ತಯಾರಿಸಬಹುದು. ಸಿಹಿದಂಟಿನ ಜೋಳದಿಂದ ನೈಸರ‍್ಗಿಕ ಪಾನೀಯಗಳು, ಬೆಲ್ಲ ಮುಂತಾದವುಗಳನ್ನು ತಯಾರಿಸಬಹುದಾಗಿದೆ. ಈ ಎಲ್ಲ ಉತ್ಪಾದನೆಗೋಸ್ಕರ ಉಪಯೋಗಿಸುವ ಕಚ್ಚಾ ಸಾಮಾಗ್ರಿಗಳನ್ನು ಜೋಳದೊಂದಿಗೆ ಹೋಲಿಸಿದರೆ ಜೋಳಕ್ಕೆ ಉತ್ತಮ ಬವಿಶ್ಯವಿದೆ. ಉತ್ತರ ಕರ‍್ನಾಟಕವು ಜೋಳ ಬೆಳೆಯಲು ಬೇಕಾದ ಮಣ್ಣು ಮತ್ತು ಹವಾಮಾನಗಳನ್ನು ಹೊಂದಿದೆ. ಈ ನಿಸರ್‍ಗದತ್ತ ಅವಕಾಶಗಳನ್ನು ಸಂಪೂರ್‍ಣವಾಗಿ ಬಳಸಿ, ರೈತರ ಆರ್‍ತಿಕ ಪರಿಸ್ತಿತಿಯನ್ನು ಸುದಾರಿಸಬಹುದು.

(ಚಿತ್ರ ಸೆಲೆ: wikipedia)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. honalu alli ii riitiya barahagaLu bara todagiruvudu bahala muda niiduva sangati.
    sakkare beene iruvavaru keevala arka, korlu, navane mattu saame tinnabeeku. hbiac 5.8 ge banda meele joolada roTTi, raagi roTTi muntaaduvugaLannu tinna todagabeeku. akki tinisugalanu aparuupakke tinnabeeku. akki hadulakke olitalla.

ಅನಿಸಿಕೆ ಬರೆಯಿರಿ:

%d bloggers like this: