ಇಂಗ್ಲಿಶ್ ನುಡಿಯ ಎಸಕಪದಗಳು
ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-17
ಮುನ್ನೋಟ
ಹಲವು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳನ್ನೇ ಬಳಸಲು ಬರುತ್ತದೆ; come ಬರು, go ಹೋಗು, eat ತಿನ್ನು, look ನೋಡು, push ದೂಡು, flow ಹರಿ ಮೊದಲಾದ ಪದಗಳನ್ನು ಇದಕ್ಕೆ ಎತ್ತುಗೆಯಾಗಿ ಕೊಡಬಹುದು. ಆದರೆ, ಬೇರೆ ಹಲವು ಕಡೆಗಳಲ್ಲಿ ಇದಕ್ಕಾಗಿ ಒಟ್ಟನ್ನು ಸೇರಿಸಿರುವ ಕಟ್ಟುಪದಗಳನ್ನು ಇಲ್ಲವೇ ಎಸಕಪದಗಳೊಂದಿಗೆ ಹೆಸರುಪದ, ಪರಿಚೆಪದ ಇಲ್ಲವೇ ಬೇರೆ ಎಸಕಪದದ ಜೋಡಿಸುವ ರೂಪವನ್ನು ಬಳಸಿರುವ ಕೂಡುಪದಗಳನ್ನು ಬಳಸಬೇಕಾಗುತ್ತದೆ.
ಈ ಎರಡು ಬಗೆಯ ಹಮ್ಮುಗೆಗಳನ್ನು ಬಳಸಿ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ:
ಒಟ್ಟುಗಳ ಬಳಕೆ:
ಕನ್ನಡದಲ್ಲಿ ಹೊಸ ಎಸಕಪದಗಳನ್ನು ಕಟ್ಟಲು ಇಸು ಎಂಬ ಒಂದು ಒಟ್ಟನ್ನು ಮಾತ್ರ ಬಳಸಲು ಬರುತ್ತದೆ. ಇದನ್ನು ಪರಿಚೆಪದಗಳಿಗೆ, ಹೆಸರುಪದಗಳಿಗೆ, ಇಲ್ಲವೇ ನೆನಸಿನ (abstract) ಹೆಸರುಪದಗಳಿಗೆ ಸೇರಿಸಿ ಎಸಕಪದಗಳನ್ನು ಪಡೆಯಲು ಬರುತ್ತದೆ. ಕೆಲವೆಡೆಗಳಲ್ಲಿ ಇದನ್ನು ನನಸಿನ (concrete) ಹೆಸರುಪದಗಳಿಗೆ ಸೇರಿಸಿಯೂ ಎಸಕಪದಗಳನ್ನು ಪಡೆಯಲಾಗಿದೆ (ಉಗ್ರಾಣ store : ಉಗ್ರಾಣಿಸು amass). ಅರಿಮೆಯ ಬರಹಗಳಲ್ಲಿ ಇಂತಹ ನನಸಿನ ಹೆಸರುಪದಗಳಿಗೆ ಇಸು ಒಟ್ಟನ್ನು ಸೇರಿಸಿರುವ ಎಸಕಪದಗಳ ಬೇಡಿಕೆ ಹೆಚ್ಚಿದೆ.
ಕನ್ನಡದಲ್ಲಿ ಈ ಒಟ್ಟನ್ನು ಬಳಸಿ ಆಗುವಿಕೆಯನ್ನು ತಿಳಿಸುವ ಎಸಕಪದಗಳನ್ನು ಮಾಡುವಿಕೆಯನ್ನು ತಿಳಿಸುವ ಎಸಕಪದಗಳನ್ನಾಗಿ ಮಾರ‍್ಪಡಿಸಲೂ ಬರುತ್ತದೆ (ಬೀಳು : ಬೀಳಿಸು, ಅರಳು : ಅರಳಿಸು). ಇಂತಹ ಎರಡು ಎಸಕಗಳನ್ನು ತಿಳಿಸಲು ಇಂಗ್ಲಿಶ್‌ನಲ್ಲಿ ಬೇರೆ ಬೇರೆ ಎಸಕಪದಗಳಿವೆಯಾದರೆ (agree : persuade, miss : avert), ಅವುಗಳಲ್ಲಿ ಒಂದಕ್ಕೆ ಸಾಟಿಯಾಗುವಂತೆ ಕನ್ನಡದ ಒಟ್ಟಿಲ್ಲದ ಎಸಕಪದವನ್ನು, ಮತ್ತು ಇನ್ನೊಂದಕ್ಕೆ ಸಾಟಿಯಾಗುವಂತೆ ಇಸು ಒಟ್ಟನ್ನು ಸೇರಿಸಿದ ರೂಪವನ್ನು ಬಳಸಲು ಬರುತ್ತದೆ. ಇದಕ್ಕೆ ಕೆಲವು ಎತ್ತುಗೆಗಳನ್ನು ಕೆಳಗೆ ಕೊಡಲಾಗಿದೆ:
agree | ಒಪ್ಪು | persuade | ಒಪ್ಪಿಸು | |
burn | ಕತ್ತು | kindle | ಕತ್ತಿಸು | |
learn | ಕಲಿ | teach | ಕಲಿಸು | |
ascend | ಏರು | boost | ಏರಿಸು | |
miss | ತಪ್ಪು | avert | ತಪ್ಪಿಸು | |
obtain | ಗಿಟ್ಟು | earn | ಗಿಟ್ಟಿಸು | |
know | ತಿಳಿ | inform | ತಿಳಿಸು | |
depart | ತೊಲಗು | rid | ತೊಲಗಿಸು | |
heal | ಮಾಂಜು | cure | ಮಾಂಜಿಸು | |
reach | ಮುಟ್ಟು | deliver | ಮುಟ್ಟಿಸು | |
laugh | ನಗು | regale | ನಗಿಸು | |
appear | ತೋರು | show | ತೋರಿಸು |
ಇದಲ್ಲದೆ, ಇಂಗ್ಲಿಶ್‌ನ ಬೇರೆ ಕೆಲವು ಎಸಕಪದಗಳಿಗೆ ಸಾಟಿಯಾಗುವಂತೆ ಕನ್ನಡದ ಹೆಸರುಪದಗಳಿಗೆ ಇಲ್ಲವೇ ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸಿಯೂ ಎಸಕಪದಗಳನ್ನು ಕಟ್ಟಲು ಬರುತ್ತದೆ. ಇದನ್ನು ಕೆಳಗೆ ಕೊಟ್ಟಿರುವ ಎತ್ತುಗೆಗಳಲ್ಲಿ ಕಾಣಬಹುದು:
(1) ಹೆಸರುಪದಗಳಿಗೆ ಇಸು ಒಟ್ಟನ್ನು ಸೇರಿಸಿ ಪಡೆದ ಎಸಕಪದಗಳು:
mimicry | ಅಣಕ | deride | ಅಣಕಿಸು | |
deceit | ಉಕ್ಕೆವ | cheat | ಉಕ್ಕೆವಿಸು | |
contempt | ಕುಚ್ಚಣೆ | blame | ಕುಚ್ಚಣಿಸು | |
lesson | ಕಲ್ಪಿ | instruct | ಕಲ್ಪಿಸು | |
memory | ನೆನಪು | remind | ನೆನಪಿಸು | |
abode | ನೆಲೆ | settle | ನೆಲಸು | |
envy | ಪುರುಡು | envy | ಪುರುಡಿಸು | |
regret | ಬೇಸರ | regret | ಬೇಸರಿಸು | |
fold | ಮಡಿ | fold | ಮಡಿಸು | |
name | ಹೆಸರು | name | ಹೆಸರಿಸು |
ಕೊನೆಯ ನಾಲ್ಕು ಎತ್ತುಗೆಗಳಲ್ಲಿ ಹೆಸರುಪದ ಮತ್ತು ಎಸಕಪದಗಳೆರಡೂ ಇಂಗ್ಲಿಶ್‌ನಲ್ಲಿ ಒಂದೇ ರೂಪದಲ್ಲಿವೆ, ಮತ್ತು ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಹೆಸರುಪದಗಳನ್ನು ಮತ್ತು ಅವಕ್ಕೆ ಇಸು ಒಟ್ಟನ್ನು ಸೇರಿಸಿರುವ ಎಸಕಪದಗಳನ್ನು ಬಳಸಲಾಗಿದೆ ಎಂಬುದನ್ನು ಗಮನಿಸಬಹುದು.
(2) ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸಿ ಪಡೆದ ಎಸಕಪದಗಳು:
dry | ಗಾರು | fry | ಗಾರಿಸು | |
joint | ಜಂಟಿ | join | ಜಂಟಿಸು | |
itch | ತುರಿ | itch | ತುರಿಸು | |
bent | ಕುಡು | bend | ಕುಡಿಸು | |
front | ಇದಿರು | dare | ಇದಿರಿಸು | |
piece | ತುಂಡು | divide | ತುಂಡಿಸು |
ಕೆಲವು ಬಗೆಯ ಅಣಕಪರಿಚೆಗಳಿಗೂ ಇಸು ಒಟ್ಟನ್ನು ಸೇರಿಸಿ ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಬಲ್ಲ ಎಸಕಪದಗಳನ್ನು ಕನ್ನಡದಲ್ಲಿ ಉಂಟುಮಾಡಲು ಬರುತ್ತದೆ:
hawk | ಕೇಕರಿಸು | doze | ಜೂಗರಿಸು | |
lurch | ತತ್ತರಿಸು | alarm | ತಳಮಳಿಸು | |
jam | ತಿಂತಿಣಿಸು | tinkle | ಕಿಣಿಕಿಣಿಸು | |
rattle | ದಡಬಡಿಸು | smack | ಚಪ್ಪರಿಸು | |
glisten | ಮಳಮಳಿಸು | blink | ಮಿಟಕಿಸು |
ಕೂಡುಪದಗಳ ಬಳಕೆ:
ಎಸಕಪದಗಳ ಮೊದಲು ಹೆಸರುಪದಗಳನ್ನು, ಪರಿಚೆಪದಗಳನ್ನು, ಇಲ್ಲವೇ ಎಸಕಪದಗಳ ಜೋಡಿಸುವ ರೂಪವನ್ನು ಬಳಸಿ ಕನ್ನಡದಲ್ಲಿ ಕೂಡುಪದಗಳನ್ನು ಉಂಟುಮಾಡಲಾಗುತ್ತದೆ (3.3 ನೋಡಿ). ಇಂಗ್ಲಿಶ್‌ನ ಹಲವು ಎಸಕಪದಗಳಿಗೆ ಸಾಟಿಯಾಗುವಂತೆ ಇಂತಹ ಕೂಡುಪದಗಳನ್ನು ಬಳಸಲು ಬರುತ್ತದೆ.
(1) ಹೆಸರುಪದಗಳನ್ನು ಬಳಸಿರುವ ಕೂಡುಪದಗಳು:
rate | ಬೆಲೆಕಟ್ಟು | vote | ಒಪ್ಪಿತಕೊಡು | |
rescue | ಪಾರುಮಾಡು | sue | ಮೊರೆಯಿಡು | |
rave | ಹುಚ್ಚಾಡು | prove | ನನ್ನಿಗೆಯ್ಯು | |
stave | ತೂತುಮಾಡು | owe | ಸಾಲಬೀಳು | |
glaze | ಹೊಳಪುಕೊಡು | freeze | ಹೆಪ್ಪುಗಟ್ಟು | |
gag | ಬಾಯಿಗಿಡಿ | rig | ಅಣಿಮಾಡು | |
smirch | ಕೊಳೆಹಚ್ಚು | shrug | ಹೆಗಲುಹಾರಿಸು | |
fetch | ಬೆಲೆಸಿಗು | gnash | ಹಲ್ಲುಕಡಿ | |
hock | ಒತ್ತೆಯಿಡು | strangle | ಕತ್ತುಹಿಚುಕು | |
opine | ಬಗೆಯರಿಸು | gore | ಕೋಡಿಡು |
(2) ಪರಿಚೆಪದಗಳನ್ನು ಬಳಸಿರುವ ಕೂಡುಪದಗಳು:
exile | ಹೊರಹಾಕು | grapple | ಗಟ್ಟಿಹಿಡಿ | |
exhume | ಹೊರತೆಗೆ | profane | ಕೀಳುಗಳೆ | |
ignore | ಕಡೆಗಣಿಸು | zoom | ಮೇಲೇರು | |
insure | ಕಂಡಿತಪಡಿಸು | heave | ಮೇಲೆತ್ತು | |
lag | ಹಿಂದೆಬೀಳು | flinch | ಹಿಂದೆಗೆ | |
flush | ಕೆಂಪೇರು | stroll | ಅಡ್ಡಾಡು | |
tan | ಹದಮಾಡು | preen | ಅಂದಗೊಳಿಸು |
ಕನ್ನಡದಲ್ಲಿ ಅಣಕಪದಗಳೂ ಪರಿಚೆಪದಗಳಾಗಿ ಬಳಕೆಯಾಗುತ್ತಿದ್ದು, ಹಲವೆಡೆಗಳಲ್ಲಿ ಇಂತಹ ಪದಗಳನ್ನು ಬಳಸಿರುವ ಕೂಡುಪದಗಳನ್ನು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಿ ಬಳಸಲು ಬರುತ್ತದೆ:
tingle | ಜುಮ್ಮೆನ್ನು | growl | ಗುರುಗುಟ್ಟು | |
roar | ಬೋರ‍್ಗರೆ | twirl | ಗರಗರ ತಿರುಚು | |
snarl | ಗುರ‍್ರೆನ್ನು | quaff | ಗಟಗಟ ಕುಡಿ | |
pulsate | ಗುಕ್ಕೆನ್ನು | glare | ದುರುಗುಟ್ಟು | |
guzzle | ಗಟಗಟ ಕುಡಿ | sizzle | ಚರಚರ ಕಾಯು | |
hurtle | ದಡದಡ ಬೀಳು | gurgle | ಜುಳುಜುಳು ಹರಿ |
ಇಂತಹ ಅಣಕಪರಿಚೆಗಳನ್ನು ಬಳಸಿ ಹೊಸ ಎಸಕಪದಗಳನ್ನು ಕಟ್ಟುವವರು ಒಂದು ಮುಕ್ಯವಾದ ವಿಶಯವನ್ನು ಮರೆಯಬಾರದು: ಕನ್ನಡದಲ್ಲಿ ಎರಡು ಬಗೆಯ ಅಣಕಪದಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಒಂದು ಬಗೆಯವು ತುಸುಹೊತ್ತು ನಡೆಯುವ ಎಸಕದ ಪರಿಚೆಯನ್ನು ತಿಳಿಸುತ್ತವೆ, ಮತ್ತು ಇನ್ನೊಂದು ಬಗೆಯವು ಒಮ್ಮೆಗೇನೇ ನಡೆದುಹೋಗುವಂತಹ ಎಸಕದ ಪರಿಚೆಯನ್ನು ತಿಳಿಸುತ್ತವೆ.
ಇವುಗಳ ನಡುವಿನ ವ್ಯತ್ಯಾಸವೇನೆಂಬುದನ್ನು (4.3)ರಲ್ಲಿ ವಿವರಿಸಲಾಗಿದೆ.
(3) ಎಸಕಪದಗಳ ಜೋಡಿಸುವ ರೂಪವನ್ನು ಬಳಸಿರುವ ಕೂಡುಪದಗಳು:
mangle | ಕೊಚ್ಚಿಹಾಕು | snuggle | ಅಪ್ಪಿಕೊಳ್ಳು | |
swipe | ಬೀಸಿಹೊಡೆ | wriggle | ನುಣುಚಿಕೊಳ್ಳು | |
inquire | ಕೇಳಿತಿಳಿ | quote | ಎತ್ತಿಹೇಳು | |
rove | ಅಲೆದಾಡು | romp | ಕುಣಿದಾಡು | |
gallop | ನೆಗೆದೋಡು | plan | ಹಮ್ಮಿಕೊಳ್ಳು |
ಕೆಳಗೆ ಕೊಟ್ಟಿರುವ ಕೂಡುಪದಗಳಲ್ಲಿ ಒಂದು ಎಸಕಪದವನ್ನು ನೇರವಾಗಿ ಇನ್ನೊಂದು ಎಸಕಪದದೊಂದಿಗೆ ಸೇರಿಸಿರುವ ಹಾಗೆ ಕಾಣಿಸುತ್ತದೆ; ಆದರೆ, ನಿಜಕ್ಕೂ ಇವುಗಳಲ್ಲಿ ಮೊದಲನೆಯದು ಎಸಕಪದದ ಜೋಡಿಸುವ ರೂಪವಾಗಿದ್ದು, ಅದರ ಕೊನೆಯ ಇಕಾರ ಸೇರಿಕೆಯಲ್ಲಿ ಬಿದ್ದುಹೋಗಿದೆ (ಎತ್ತುಗೆಗಾಗಿ, ಹಾರಿ+ಆಡು ಎಂಬುದು ಹಾರಾಡು ಎಂದಾಗಿದೆ):
haggle | ಕೊಸರಾಡು | straggle | ಹಾರಾಡು | |
struggle | ಒದ್ದಾಡು | rave | ಕೂಗಾಡು | |
wrangle | ಕಚ್ಚಾಡು | revere | ಕೊಂಡಾಡು | |
store | ಕೂಡಿಡು | secrete | ಬಚ್ಚಿಡು |
ತಿರುಳು
ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಬಲ್ಲ ಎಸಕಪದಗಳನ್ನು ಕನ್ನಡದಲ್ಲಿ ಹೊಸದಾಗಿ ಉಂಟುಮಾಡಲು ಎರಡು ಬಗೆಯ ಹಮ್ಮುಗೆಗಳನ್ನು ಬಳಸಲು ಬರುತ್ತದೆ; (ಕ) ಹೆಸರುಪದ, ಎಸಕಪದ ಇಲ್ಲವೇ ಪರಿಚೆಪದಗಳಿಗೆ ಇಸು ಒಟ್ಟನ್ನು ಸೇರಿಸುವುದು ಒಂದು ಹಮ್ಮುಗೆ, ಮತ್ತು (ಚ) ಹೆಸರುಪದಗಳಿಗೆ, ಪರಿಚೆಪದಗಳಿಗೆ, ಇಲ್ಲವೇ ಎಸಕಪದಗಳ ಜೋಡಿಸುವ ರೂಪಕ್ಕೆ ಇನ್ನೊಂದು ಎಸಕಪದವನ್ನು ಸೇರಿಸುವುದು ಇನ್ನೊಂದು ಹಮ್ಮುಗೆ.
1 Response
[…] << ಬಾಗ-17 […]