ಇಂಗ್ಲಿಶ್ ನುಡಿಯ ಪರಿಚೆಪದಗಳು

ಡಿ.ಎನ್.ಶಂಕರ ಬಟ್.

ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-18 

ಇಂಗ್ಲಿಶ್ ನುಡಿಯ ಪರಿಚೆಪದಗಳು 

ಮುನ್ನೋಟ

ಇಂಗ್ಲಿಶ್‌ನಲ್ಲಿ adjective ಮತ್ತು adverb ಎಂಬ ಎರಡು ಬಗೆಯ ಪರಿಚೆಪದಗಳಿವೆ; ಕನ್ನಡದಲ್ಲಿ ಇವಕ್ಕೆ ಸಾಟಿಯಾಗಬಲ್ಲ ಪದಗಳನ್ನು ಒಟ್ಟಿಗೆ ಪರಿಚೆಪದ ಎಂಬುದಾಗಿ ಕರೆಯಲಾಗಿದೆ. ಅವುಗಳ ನಡುವೆ ವ್ಯತ್ಯಾಸವನ್ನು ತೋರಿಸಬೇಕಿರುವಲ್ಲಿ ಮೊದಲನೆಯದನ್ನು ಹೆಸರುಪರಿಚೆ ಎಂದು, ಮತ್ತು ಎರಡನೆಯದನ್ನು ಎಸಕಪರಿಚೆ ಎಂದು ಕರೆಯಲಾಗುತ್ತದೆ.

ಕನ್ನಡದ ಪರಿಚೆಪದಗಳು ಇಂಗ್ಲಿಶ್‌ನ adjective ಮತ್ತು adverbಗಳ ಹಾಗೆ ಹೆಸರುಪದ (noun) ಮತ್ತು ಎಸಕಪದ(verb)ಗಳಿಗಿಂತ ಬೇರಾಗಿವೆ; ಆದರೆ, ಅವುಗಳ ಎಣಿಕೆ ಇಂಗ್ಲಿಶ್‌ನಲ್ಲಿರುವುದಕ್ಕಿಂತ ಕನ್ನಡದಲ್ಲಿ ಕಡಿಮೆ. ಕನ್ನಡದಲ್ಲಿ ಹೆಸರುಪದಗಳ ಪತ್ತುಗೆರೂಪವನ್ನು (ಮರದ wooden, ಮರುಕದ piteous) ಮತ್ತು ಎಸಕಪದಗಳ ಪರಿಚೆರೂಪಗಳನ್ನು (ಕೆಟ್ಟ bad, ತಕ್ಕ suitable, ಬಯ್ಯುವ abusive, ಕಾಣುವ visible, ಕರಗಿದ molten) ಪರಿಚೆಪದಗಳ ಜಾಗದಲ್ಲಿ ಬಳಸಲಾಗುತ್ತದೆಯೆಂಬುದು ಇದಕ್ಕೆ ಒಂದು ಕಾರಣ.

ಇಂಗ್ಲಿಶ್‌ನ ಹಲವು ಎಸಕಪರಿಚೆಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಅಣಕುಪದಗಳನ್ನು ಬಳಸಲಾಗುತ್ತದೆ (ಸರಸರನೆ hastily, ಕಚಕ್ಕನೆ forcibly) ಎಂಬುದು ಇನ್ನೊಂದು ಕಾರಣ. ಹಾಗಾಗಿ, ಇಂಗ್ಲಿಶ್ ನುಡಿಯ ಪರಿಚೆಪದಗಳಿಗೆ ಸಾಟಿಯಾಗಬಲ್ಲ ಕನ್ನಡ ಪದಗಳನ್ನು ಹೊಸದಾಗಿ ಉಂಟುಮಾಡುವವರು ಈ ಎರಡು ವಿಶಯಗಳನ್ನು ಗಮನದಲ್ಲಿರಿಸಿಕೊಳ್ಳುವುದು ಒಳ್ಳೆಯದು.

ಇಂಗ್ಲಿಶ್ ನುಡಿಯ ಹೆಸರುಪರಿಚೆಗಳು

ಇಂಗ್ಲಿಶ್‌ನ ಹೆಸರುಪರಿಚೆಗಳಲ್ಲಿ ಒಟ್ಟುಗಳಿರುವ ಕಟ್ಟುಪದಗಳಿಗೂ ಎರಡು ಪದಗಳನ್ನು ಸೇರಿಸಿರುವ ಜೋಡುಪದಗಳಿಗೂ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಮೇಲೆ 6.3 ಮತ್ತು 8.4ರಲ್ಲಿ ವಿವರಿಸಲಾಗಿದೆ. ಈ ಎರಡು ಬಗೆಯ ಹೆಸರುಪರಿಚೆಗಳಲ್ಲದ ಬೇರೆಯೂ ಹಲವು ಹೆಸರುಪರಿಚೆಗಳು ಇಂಗ್ಲಿಶ್‌ನಲ್ಲಿವೆ. ಎತ್ತುಗೆಗಾಗಿ, pink ಎಂಬ ಹೆಸರುಪರಿಚೆ ಕಟ್ಟುಪದವೂ ಅಲ್ಲ, ಜೋಡುಪದವೂ ಅಲ್ಲ. ಇಂತಹ ಹೆಸರುಪರಿಚೆಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವುದು ಹೇಗೆ ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ.

ಕನ್ನಡದಲ್ಲಿ ಅಲು ಮತ್ತು ಕು (ಮತ್ತು ಅವೆರಡನ್ನೂ ಸೇರಿಸಿರುವ ಕಲು) ಎಂಬ ಒಟ್ಟುಗಳನ್ನು ಬಳಸಿ ಎಸಕಪದಗಳಿಂದ ಹೆಸರುಪರಿಚೆಗಳನ್ನು ಪಡೆಯಲು ಬರುತ್ತದೆ. ಇಂಗ್ಲಿಶ್‌ನ ಕೆಲವು ಹೆಸರುಪರಿಚೆಗಳಿಗೆ ಸಾಟಿಯಾಗಿ ಇಂತಹ ಹೆಸರುಪರಿಚೆಗಳನ್ನು ಕನ್ನಡದಲ್ಲಿ ಬಳಸಲು ಬರುತ್ತದೆ:

stale ಹಳಸಲು skew ತಿರುಚಲು
flabby ಸುಕ್ಕಲು morose  ಸಿಡುಕಲು
trite ಸವಕಲು pallid ಬಿಳಿಚಲು

ಆದರೆ, ಈ ಒಟ್ಟುಗಳನ್ನು ಬಳಸಿರುವಲ್ಲಿ ಪದಕ್ಕೆ ಕೆಟ್ಟುಹೋದ ಎಂಬ ಹೆಚ್ಚಿನ ಹುರುಳೂ ಸೇರಿಕೊಳ್ಳುತ್ತದೆ. ಹಾಗಾಗಿ, ಅಂತಹ ಹೆಚ್ಚಿನ ಹುರುಳು ಬೇಡದಿರುವಲ್ಲಿ ಇವನ್ನು ಬಳಸಲು ಬರುವುದಿಲ್ಲ.

ಹೆಚ್ಚಿನ ಇಂಗ್ಲಿಶ್ ಹೆಸರುಪರಿಚೆಗಳಿಗೂ ಸಾಟಿಯಾಗಿ ಕನ್ನಡದಲ್ಲಿ ಹೊಸಪದಗಳನ್ನು ಕಟ್ಟುವಲ್ಲಿ ಹೆಸರುಪದಗಳ ಪತ್ತುಗೆರೂಪವನ್ನು ಇಲ್ಲವೇ ಎಸಕಪದಗಳ ಪರಿಚೆರೂಪಗಳನ್ನು ಬಳಸುವುದೇ ಒಳ್ಳೆಯ ಹೊಲಬೆಂದು ತೋರುತ್ತದೆ. ಜೋಡುಪದಗಳ ಪತ್ತುಗೆರೂಪವನ್ನು ಮತ್ತು ಕೂಡುಪದಗಳ ಪರಿಚೆರೂಪಗಳನ್ನೂ ಈ ಕೆಲಸದಲ್ಲಿ ತೊಡಗಿಸಲು ಬರುತ್ತದೆ.

(1) ಪತ್ತುಗೆರೂಪದ ಬಳಕೆ:

ಹೆಸರುಪದಗಳ ಪತ್ತುಗೆರೂಪವನ್ನು ಬಳಸಿ ಹಲವು ಇಂಗ್ಲಿಶ್ ಹೆಸರುಪರಿಚೆಗಳಿಗೆ ಸಾಟಿಯಾಗುವಂತಹ ಪದಗಳನ್ನು ಪಡೆಯಲು ಬರುತ್ತದೆ:

sacred ಮದಿಪಿನ staid ನೆಮ್ಮದಿಯ
rapid ಉರುಬಿನ intrepid ಕೆಚ್ಚಿನ
florid ಬೆಡಗಿನ torrid ಕಾವರದ
fond ಮುದ್ದಿನ eerie ಗುಂಬದ

ಕೆಲವೆಡೆಗಳಲ್ಲಿ ಜೋಡುಪದಗಳ ಪತ್ತುಗೆರೂಪವನ್ನೂ ಬಳಸಲು ಬರುತ್ತದೆ:

manic ಕಡುಹುಚ್ಚಿನ kind ಕೊಡುಗಯ್ಯ
exact ಕಟ್ಟುನಿಟ್ಟಿನ ribald ಹೊಲಸುಮಾತಿನ
glum ಒಳಮುನಿಸಿನ align ಹೊರನಾಡಿನ

(2) ಪರಿಚೆರೂಪಗಳ ಬಳಕೆ:

ಎಸಕಪದಗಳಿಗೆ ಹಿಂಬೊತ್ತಿನ (ಒಡೆದ), ಮುಂಬೊತ್ತಿನ (ಒಡೆಯುವ) ಮತ್ತು ಅಲ್ಲಗಳೆಯುವ (ಒಡೆಯದ) ಎಂಬ ಮೂರು ಬಗೆಯ ಪರಿಚೆರೂಪಗಳಿದ್ದು, ಈ ಮೂರನ್ನೂ ಹೆಸರುಪರಿಚೆಗಳನ್ನು ಉಂಟುಮಾಡುವಲ್ಲಿ ಬಳಸಲು ಬರುತ್ತದೆ.

(ಕ) ಹಿಂಬೊತ್ತಿನ ಪರಿಚೆರೂಪದ ಬಳಕೆ:

rabid ಕೆರಳಿದ flaccid ಬಾಗಿದ
turgid ಬೀಗಿದ pale ಬಿಳಿಚಿದ
overt ತೆರೆದ mellow ಮಾಗಿದ
skew ತಿರುಚಿದ taut ಬಿಗಿದ
past ಕಳೆದ abstruse ಹುದುಗಿದ

(ಚ) ಮುಂಬೊತ್ತಿನ ಪರಿಚೆರೂಪದ ಬಳಕೆ:

fierce ಬೆಚ್ಚಿಸುವ lithe ಬಳುಕುವ
supple ಬಾಗುವ sad ಕೊರಗುವ
kindred ಹೋಲುವ fluid ಹರಿಯುವ
milch ಕರೆಯುವ rotary ತಿರುಗುವ
saucy ಮಲೆವ solemn ಕಡಗುವ

(ಟ) ಅಲ್ಲಗಳೆಯುವ ಪರಿಚೆರೂಪದ ಬಳಕೆ:

sound ಕೆಡದ staid ಪಸಿಯಿಸದ
intrepid ಹೆದರದ meager ಮಿಗದ
fair ತಪ್ಪದ feral ಪಳಗದ
foul ಸಯ್ಯದ firm ಅಲುಗದ
overt ಅಡಗಿಸದ steady ಅಲ್ಲಾಡದ

(ತ) ಕೂಡುಪದಗಳ ಪರಿಚೆರೂಪಗಳ ಬಳಕೆ:

ಕೂಡುಪದಗಳ ಈ ಮೂರು ಬಗೆಯ ರೂಪಗಳನ್ನೂ ಹೆಸರುಪರಿಚೆಗಳಿಗೆ ಸಾಟಿಯಾಗುವಂತೆ ಬಳಸಲು ಬರುತ್ತದೆ:

ಹಿಂಬೊತ್ತಿನ ಕೂಡುಪದಗಳು:

livid ಕನಿಪೆಕಟ್ಟಿದ genuine ನಂಬತಕ್ಕ
morbid ಕುತ್ತಹಿಡಿದ florid ಕೆಂಪಡರಿದ
hollow ಕುಳಿಬಿದ್ದ extinct ಇರವಳಿದ
passe ಬಳಕೆತಪ್ಪಿದ irate ಸಿಟ್ಟಿಗೆದ್ದ

ಮುಂಬೊತ್ತಿನ ಕೂಡುಪದಗಳು:     

vivid ಎದ್ದುಕಾಣುವ kind ಮರುಕವುಳ್ಳ
finite ಹದ್ದುಳ್ಳ fickle ಮಾರ‍್ಪಡುವ

ಅಲ್ಲಗಳೆಯುವ ಕೂಡುಪದಗಳು:

safe ಗಾಸಿಗೊಳ್ಳದ fickle ನೆಲೆನಿಲ್ಲದ
placid ಅಲ್ಲಾಡದ stolid ತಲ್ಲಣಗೊಳ್ಳದ
solid ಪೊಳ್ಳಲ್ಲದ moot ತಿಳಿಯಲಾಗದ
licit ಕಟ್ಟಲೆತಪ್ಪದ frank ಮರೆಮಾಚದ

ಇಂಗ್ಲಿಶ್ ನುಡಿಯ ಎಸಕಪರಿಚೆಗಳು

ಇಂಗ್ಲಿಶ್‌ನಲ್ಲಿ ಹೆಚ್ಚಿನ ಎಸಕಪರಿಚೆ(adverb)ಗಳೂ ly ಎಂಬ ಒಟ್ಟಿನಲ್ಲಿ ಕೊನೆಗೊಳ್ಳುತ್ತಿದ್ದು, ಅವಕ್ಕೆ ಸಾಟಿಯಾಗಿ ಕನ್ನಡದಲ್ಲಿ ಪರಿಚೆಪದಗಳನ್ನು ಕಟ್ಟುವ ಬಗೆ ಹೇಗೆ ಎಂಬುದನ್ನು ಈಗಾಗಲೇ ವಿವರಿಸಲಾಗಿದೆ.

ಇಂಗ್ಲಿಶ್‌ನಲ್ಲಿ ಬೇರೆಯೂ ಹಲವು ಬಗೆಯ ಎಸಕಪರಿಚೆಗಳಿವೆ. ಆದರೆ, ಅವು ಹಲವಾರು ಗುಂಪುಗಳಲ್ಲಿ ಬರುತ್ತಿದ್ದು, ಒಂದೊಂದು ಗುಂಪಿನವಕ್ಕೂ ಸಾಟಿಯಾಗುವಂತೆ ಕನ್ನಡದಲ್ಲಿ ಬೇರೆ ಬೇರೆ ಬಗೆಯ ಪದಗಳನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಇದಲ್ಲದೆ, ಅವುಗಳ ಬಳಕೆಯೂ ಸೊಲ್ಲರಿಮೆಯ ಕಟ್ಟಲೆಗಳೊಂದಿಗೆ ಹೆಚ್ಚು ಹೆಣೆದುಕೊಂಡಿದೆ, ಮತ್ತು ಅವುಗಳಿಗೆ ಸಾಟಿಯಾಗುವಂತಹ ಕನ್ನಡ ಪದಗಳಲ್ಲಿ ಯಾವೊಂದು ಬಗೆಯ ಒಲವನ್ನೂ ಕಾಣಲು ಬರುವುದಿಲ್ಲ. ಹಾಗಾಗಿ, ಅವನ್ನು ಕಟ್ಟುವ ಕುರಿತಾಗಿ ಇಲ್ಲಿ ಹೆಚ್ಚೇನೂ ಹೇಳಿಲ್ಲ.

ತಿರುಳು

ಇಂಗ್ಲಿಶ್ ನುಡಿಯ ಹೆಸರುಪರಿಚೆಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳಿಗೆ ಅಲು ಇಲ್ಲವೇ ಕು ಒಟ್ಟನ್ನು ಸೇರಿಸಿ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ; ಇದಲ್ಲದೆ, ಹೆಸರುಪದಗಳ ಪತ್ತುಗೆರೂಪವನ್ನು ಇಲ್ಲವೇ ಎಸಕಪದಗಳ ಪರಿಚೆರೂಪಗಳನ್ನೂ ಈ ಕೆಲಸಕ್ಕಾಗಿ ಬಳಸಲು ಬರುತ್ತದೆ. ಎಸಕಪರಿಚೆಗಳಿಗೆ ಸಾಟಿಯಾಗಿ ಕಟ್ಟಬಲ್ಲ ಪದಗಳ ಕುರಿತು ಇಲ್ಲಿ ಏನೂ ಹೇಳಿಲ್ಲ.

<< ಬಾಗ-17

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: