ಬಾಲ್ಯದ ಆ ದಿನಗಳು ಎಶ್ಟು ಚೆಂದ
ಚಿಕ್ಕವ್ವನ ಹತ್ತಿರ ಕಾಡಿ ಬೇಡಿ ತೆಗೆದಕೊಂಡು ಹೋದ ಜೀರಿಗೆ, ಉಪ್ಪು, ಬೆಲ್ಲದ ಚೂರು, ಒಣ ಕಾರದ ಪುಡಿ, ಆಗ ತಾನೆ ಹುಣಿಸೆ ಗಿಡದಿಂದ ಕಿತ್ತ ಹಣ್ಣಾದ ಹುಣೆಸೆ ಹಣ್ಣು – ಎಲ್ಲವನ್ನು ಸೇರಿಸಿ ಅಲ್ಲೆ ಎಲ್ಲೊ ಒಂದು ಕಲ್ಲಿನ ಮೇಲೆ ಕುಟ್ಟಿ ಗುಂಡಗೆ ಮಾಡಿ ಕಡ್ಡಿಗೆ ಸಿಕ್ಕಿಸಿ ಚೀಪಿದ ಅ ಮಜವೇ ಬೇರೆ . ಕಚಗುಳಿ ಇಟ್ಟ ಹಾಗೆ, ಸುಮ್ಮನೆ ನಕ್ಕ ಹಾಗೆ, ಬಾನಿನಲ್ಲಿ ಹಕ್ಕಿ ಹಾರಿದ ಹಾಗೆ.
ಟ್ರಿಣ್ ಟ್ರಿಣ್ ಎಂದು ದೂರವಾಣಿ ನನ್ನನ್ನು ಕರೆದಾಗಲೆ ನನಗೆ ಎಚ್ಹರವಾಗಿದ್ದು ಮತ್ತು ನಾನು ಕಾಣುತ್ತಿದ್ದದ್ದು ಕನಸು ಎಂದು ಅರಿವಾಗಿದ್ದು. ಸಣ್ಣಂದಿನಿಂದಲೂ ನನಗೆ ಕನಸು ಕಾಣುವ ಹುಚ್ಚಿದೆ. ಈಗಲೂ ನನಸಿನಲ್ಲಿ ಕೊಂಡುಕೊಳ್ಳಲಾಗದ ಪುಸ್ತಕಗಳನ್ನೆಲ್ಲ ಕೊಂಡುಕೊಂಡಿದ್ದೇನೆ. ಒಳ್ಳೊಳ್ಳೆಯ ಪುಸ್ತಕಗಳನ್ನೆಲ್ಲ ಕನಸಿನಲ್ಲೇ ಎತ್ತಿಟ್ಟಿದ್ದೇನೆ. ಇರಲಿ, ಆದರೆ ನಾನಿಲ್ಲಿ ಹೇಳ ಹೊರಟಿದ್ದು ನನ್ನ ಬಾಲ್ಯದ ಬಗ್ಗೆ, ಆಡುತ್ತಿದ್ದ ಆ ಎಲ್ಲ ಆಟಗಳ ಬಗ್ಗೆ. ಮಗಳ ಇಂದಿನ ಆಟೋಟಗಳನ್ನ ನೋಡುತ್ತಾ ಆ ದಿನಗಳು ನೆನಪಾದಾಗ, “ಅದೆಶ್ಟು ಚೆಂದ! ಮತ್ತೊಮ್ಮೆ ಆ ದಿನಗಳು ಬರಬಾರದೆ?” ಎಂದೆನಿಸಿದ್ದು ಕನಸಲ್ಲ .
ಓದಿದ್ದು ಸರಕಾರಿ ಕನ್ನಡ ಶಾಲೆ. ಆಂಗ್ಲ ಮಾತು ಗೊತ್ತಿಲ್ಲ , ಓದಿಲ್ಲ ಎನ್ನುವ ಕೀಳರಿಮೆ ಇಲ್ಲದ ದಿನಗಳವು. ಆಟ ಆಡಿದ್ದೆ ಗೊತ್ತು. ಮನೆಯ ಹೊರಗಡೆ ಕುಂಟೆಬಿಲ್ಲೆ, ಲಗೋರಿ, ಮರಕೋತಿ ಆಟ, ಗೋಲಿ, ಗಿಲ್ಲಿ-ದಾಂಡು, ಜೋಕಾಲಿ, ಜೂಟಾಟ, ಬುಗುರಿ, ನೆಲ-ಕಲ್ಲು, ಗಿರಿಗಿಟ್ಲೆ, ಈಜಾಟ ಹೀಗೆ ಹಲವು ಆಟಗಳು . ಮನೆಯ ಒಳಗಡೆ ಚೌಕಾ-ಬಾರಾ, ಅಳಿಗುಳಿ ಮನೆ, ಸೆಟ್ಟಾಟ, ಅವರ್ ಬಿಟ್ಟ್ ಇವರ್ ಬಿಟ್ಟ್ ಅವರ‍್ಯಾರು – ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಕಣ್ಣಾ ಮುಚ್ಚೆ … ಕಾಡೇ ಗೂಡೆ … ಉದ್ದಿನ ಮೂಟೆ … ಉರುಳೇ ಹೋಯಿತು … ನನ್ನಯ ಹಕ್ಕಿ … ಬಿಟ್ಟೆ ಬಿಟ್ಟೆ … ನಿಮ್ಮಯ ಹಕ್ಕಿ … ಬಚ್ಚಿಕೊಳ್ಳಿ
ಹುಡುಕುವ ಹಕ್ಕಿ, ಬಚ್ಹಿಟ್ಟುಕೊಂಡಿರುವ ಹಕ್ಕಿ ಹುಡುಕ ಹೋಗೊದು. ಬಚ್ಹಿಟ್ಟುಕೊಂಡ ಹಕ್ಕಿ ಸಿಕ್ಕಾಗ ಆ ಹಕ್ಕಿಗಳ ಕಲರವ ಜಿಗಿಯೊ ಪರಿ -ಎಂತ ನಗುವಿತ್ತು ಅಲ್ಲಿ.
ಕಣ್ಣಾಮುಚ್ಚಾಲೆ ಆಡಲೂ ನಿಂತರೆ ಮನೆಯಲ್ಲಿನ ದಾನ್ಯಗಳ ಚೀಲದ ಸೊಂದಿ, ಮನೆಯ ಅಟ್ಟ, ಅಮ್ಮನ ಸೆರಗು ಬಚ್ಚಿಟ್ಟುಕೊಳ್ಳಲು ಸಾಕಾಗುತ್ತಿರಲಿಲ್ಲ. ನೆಲ- ಕಲ್ಲು ಆಟ ಆಡದ ಮಣ್ಣಿನ ಮಕ್ಕಳಿಲ್ಲ. ಸರಳ ಆಟವಿದು. ಯಾವುದೇ ತಯಾರಿ ಇಲ್ಲದೆ ಆಡಬಹುದಾದ ಆಟ. ಆಟ ಆಡಲು ನಾಲ್ವರು ಬೇಕೇಬೇಕು. ಆಟದಲ್ಲಿ ಒಬ್ಬನು ಬಕರಾ. ಅವನು ಕಲ್ಲು ಎಂದರೆ ಎಲ್ಲರು ಕಲ್ಲಿನ ಮೇಲೆ ನಿಲ್ಲ ಬೇಕು. ಕಲ್ಲಿನ ಮೇಲೆ ನಿಲ್ಲದಿದ್ದರೆ ಬಕರಾ ಹಿಡಿದ ಮಿಕ, ಮತ್ತೆ ಬಕರಾ. ಹೀಗೆ ಆಟ ಸಾಗುತ್ತದೆ. ಇನ್ನು ಈಜಾಟದ ಬಗ್ಗೆ ಹೇಳುವುದಾದರೆ, ನಮ್ಮೂರ ಮುಂದಿನ ಕೆರೆಯೇ ನಮಗೆ ಈಜುಕೊಳ. ಇಲ್ಲಿ ನಮಗೆ ಎಮ್ಮೆಗಳೇ ಈಜು ಕಲಿಸುವ ಗುರು. ಎಮ್ಮೆ ಬಾಲ ಹಿಡಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗೋದೆ ಮಜ, ದೋಣಿಯಲ್ಲಿ ಹೋಗೊ ಹಾಗೆ.
ಬುಗುರಿಗಳ ಬಗ್ಗೆ ಹೇಳ್ದೇ ಇದ್ರೆ ಹೇಗೆ? ಮೊದಲ ಬುಗುರಿ ತಗೊಂಡು, “ಅದನ್ನು ಮನೆ ಒಳಗ್ ಆಡ್ ಬ್ಯಾಡ ಇವತ್ತೆ ಸಗಣಿ ಸಾರ‍್ಸೀನಿ” ಎಂದು ಆಳು ಮನುಶ್ಯ ಗದರಿಸಿದಾಗ, ಬುಗುರಿ ಹಿಡಿದು ತಿರುಗಿಸೋ ಮಜ, ಅದನ್ನ ತಿರುಗಿಸ್ತಾ ತಿರುಗಿಸ್ತಾ ಹಾಗೇ ಹಗ್ಗದಲ್ಲಿ ಮೇಲೆತ್ತಿ ಕೈ ಮೇಲೆ ಬಿಟ್ಕೊಂಡು ತಿರುಗಿಸೋಕೆ ಮಾಡ್ತಿದ್ದ ಆ ಸರ‍್ಕಸ್ಸು , ಅಂಗಳದಾಗೆ ಬುಗುರಿಯ ಮೊಳೆ ಚೂಪು ಮಾಡಿ, ತಿರುಗುವ ಬುಗುರಿಗೆ ಮತ್ತೊಂದರಿಂದ ಗುದ್ದಿ, ಆ ಬುಗುರಿಯ ಬಣ್ಣ ನಮ್ಮ ಬುಗುರಿಗೆ ಹತ್ತೋದು. ಆಗ ಬುಗುರಿಯ ಮೇಲಿರುವ ಬಣ್ಣಗಳದ್ದೆ ಕಾರುಬಾರು.
ಬೇಸಿಗೆ ರಜ ಅಂದರೆ ಸಾಕು ನಮಗೆಲ್ಲ ಅದೇನೋ ಸಂತೋಶ ಮತ್ತು ಆನಂದ. ಆ ದಿನಗಳ ನಮ್ಮ ದಿನಚರಿಯೇ ಬೇರೆ. ಬೆಳಿಗ್ಗೆಯ ಗಂಜಿ ಕುಡಿದು ಎಲ್ಲರೂ ಕಟ್ಟೆಯ ಒಂದೆಡೆ ಸೇರಿ ಆ ದಿನದ ಜಾಗ ಮತ್ತು ಆಡುವ ಆಟಗಳ ಪಟ್ಟಿ ಮಾಡಿ, ಜಳಕದ ನಂತರ ಕೊಟ್ಟದ್ದನ್ನು ತಿಂದು ಆಡ ಹೊರಟರೆ ಮತ್ತೆ ಹಿಂದಿರುಗುತ್ತಿದ್ದದ್ದು – ಒಂದು, ಹೊಟ್ಟೆ ಹಸಿದಾಗ ಇಲ್ಲವೇ ಬುಗುರಿಯಿಂದ ಯಾರಿಗಾದರು ದೊಡ್ಡದಾದ ಗಾಯವಾದಾಗಲೇ. ಆಗಲೇ ಮನೆ, ಅವ್ವ ನೆನಪಾಗುವುದು. ಇಲ್ಲದಿದ್ದರೆ ಮನೆಯ ಕಡೆಗೆ ಬರುವುದು ದನ ಕರುಗಳು ಮನೆ ಕಡೆ ಹೊರಡುವ ಹೊತ್ತಾದಾಗಲೇ.
ಈ ಎಲ್ಲ ಆಟಗಳು ಇಂದು ಕಣ್ಮರೆಯಾಗುತ್ತಿವೆ. ಟೀವಿ, ಟ್ಯಾಬ್, ಗಣಕಯಂತ್ರ, ವೀಡಿಯೊ ಗೇಮ್ಸ್ ಹಾಗೂ ಇಲೆಕ್ಟ್ರಾನಿಕ್ ಸಲಕರಣೆಗಳ ಮದ್ಯೆ ಕಳೆದು ಹೋಗಿವೆ. ಎಳೆ ವಯಸ್ಸು ಸ್ವಚ್ಚ ಮನಸ್ಸು. ಎಲ್ಲರ ಬಾಳಿನಲ್ಲಿಯೂ ಸಿಹಿನೆನಪುಗಳನ್ನು, ಕುಶಿಯ ಕ್ಶಣಗಳನ್ನು ನೀಡಿರುತ್ತದೆ. ಈ ಸಮಯ ಹಲವು ಕೋತಿ ಚೇಶ್ಟೆಗಳ ಅಂದರೆ ಅಪ್ಪಟ ಉತ್ತರ ಕರ‍್ನಾಟಕದ ಮಾತಿನಲ್ಲಿ ಹೇಳುವುದಾದರೆ ಮಂಗ್ಯಾನಾಟಕ್ಕೆ ಸರಿಯಾದ ಸಮಯ. ಹಳ್ಳಿಗಾಡಿನ ಜೀವನವೇ ಅಂತಹುದು. ಆ ದಿನಗಳು ನಮ್ಮ ಮುಂದಿನ ದೈಹಿಕ ಹಾಗು ಆಂತರಿಕ ಬೆಳವಣಿಗೆಗೆ ಬಹಳ ಸಹಕಾರಿಯಾದವು.
ಇಂದಿನ ಬಾಲ್ಯಕ್ಕು ಅಂದಿನ ದಿನಗಳಿಗು ಎಲ್ಲಿಯ ಹೋಲಿಕೆ. ಇಂದಿನ ಮಕ್ಕಳಲ್ಲಿ ಆಟವೆಂದರೆ ಕ್ರಿಕೆಟ್, ಪುಟ್ಬಾಲ್, ಟೆನ್ನಿಸ್, ಹೀಗೆ ಕೆಲವು ಮಾತ್ರ. ಅವರಿಗೆ ಗಿಲ್ಲಿ-ದಾಂಡು, ಬುಗುರಿ, ಮರಕೋತಿಯಾಟದಂತಹ ಆಟಗಳ ಅರಿವು, ಆಸಕ್ತಿ ಅವರಿಗಿಲ್ಲ. ಇದಕ್ಕೆ ಕಾರಣಗಳು ಹಲವು. ಈಗಿನ ಸುತ್ತಮುತ್ತಲಿನ ಪರಿಸರ, ನಗರದ ಮಕ್ಕಳು ಟಿವಿ ನೋಡೋದ್ರಲ್ಲಿ, ಅದರಲ್ಲೂ ಹೆಚ್ಚಾಗಿ ವೀಡಿಯೊ ಗೇಮ್ಸ್ ಆಡುವುದರಲ್ಲಿಯೇ ಕಳೆದು ಹೋಗೋದು – ಹೀಗೆ ಹತ್ತು ಹಲವು.
ಏನೇ ಆದರೂ ಆ ದಿನಗಳು ಮತ್ತೆಂದು ಮರಳಿ ಬರಲಾರವು. ಆ ದಿನಗಳನ್ನು ಕುಶಿಯಿಂದ ಕಳೆಯುವಂತೆ ಜತೆ ನೀಡಿದ ಗೆಳೆಯರೆಲ್ಲಿದ್ದಾರೆಂದು ಗೊತ್ತಿಲ್ಲ. ಆದರೂ ಅವ್ರಿಗೊಂದು ಸಲಾಂ. ಕುಂಟೆ ಬಿಲ್ಲೆ, ಹಗ್ಗದಾಟಗಳ ನಡುವೆ ಬಾಲ್ಯಜೀವನ ಸಾಗಿಸಿದ ನಾನೇ ಪುಣ್ಯಾತಗಿತ್ತಿ. ಡಂಕಣಕ್ಕಣ!
(ಚಿತ್ರ ಸೆಲೆ: kidspot.com)
ನೆನಪು ಚೆನ್ನಾಗಿದೆ….