ಒಟ್ಟಾಗಿರುವಿಕೆ: ಜರ‍್ಮನಿಯಿಂದ ಕನ್ನಡಿಗರು ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ.

 

ನವಂಬರ್ ತಿಂಗಳು ಅಂದರೆ ಕನ್ನಡಿಗರಲ್ಲಿ ಮತ್ತು ಜರ‍್ಮನ್ನರಲ್ಲಿ ಹೆಚ್ಚು ಸಡಗರ ಮತ್ತು ಸಂತಸ. ಯಾಕೆಂದರೆ, (1956 ರ) ನವಂಬರ್ 1 – ಕನ್ನಡ ಮಾತಾಡುವವರ ಒಗ್ಗೂಡುವಿಕೆಯಿಂದ ಕನ್ನಡ ನಾಡು ಹುಟ್ಟು ಪಡೆದ ದಿನ. ಈ ದಿನವನ್ನು ರಾಜ್ಯೋತ್ಸವ ದಿನವನ್ನಾಗಿ ಕರುನಾಡಿನೆಲ್ಲೆಡೆ ಆಚರಿಸಲಾಗುತ್ತದೆ. ಹಾಗೇ, (1989 ರ) ನವಂಬರ್ 9 – ಒಂದೇ ನುಡಿಯಾಡುತ್ತಿದ್ದರೂ ಕೂಡ ಬೇರೆ ಬೇರೆ ಆಳ್ವಿಕೆಯಡಿ ಮೂಡಣ ಮತ್ತು ಪಡುವಣ ದಿಕ್ಕಿನಲ್ಲಿ ಚದುರಿದ್ದ ಜರ‍್ಮನ್ನರು ಮತ್ತೆ ಒಂದಾಗಲು ಮುನ್ನುಡಿ ಬರೆದ ದಿನ. ಅದು ಜರ‍್ಮನ್ನರಿಗೆ ಮತ್ತು ಜರ‍್ಮನ್ ನಾಡಿನ ಹಿನ್ನಡವಳಿಯಲ್ಲಿ (history) ಮರೆಯಲಾಗದಂತ ದಿನ. ಬೇರೆ ಬೇರೆ ನಾಡಿನಲ್ಲಿರುವ ಎರಡು ನುಡಿಸಮುದಾಯದ ಮಂದಿಯ ಒಗ್ಗೂಡುವಿಕೆಗೆ ನವಂಬರ್ ತಿಂಗಳು ಸಾಕ್ಶಿಯಾಗಿದೆ.

ಹಿನ್ನೆಲೆ:

ಜರ‍್ಮನ್ ನುಡಿಯಾಡುವವರಿದ್ದ ಜರ‍್ಮನಿ ನಾಡನ್ನು 1933 ರಿಂದ 1945 ತನಕ ‘ನಾಜಿ ಜರ‍್ಮನಿ’ಯೆಂದು ಕರೆಯಲಾಗುತ್ತಿತ್ತು. ಕಾರಣ, ಅಡಾಲ್ಪ್ ಹಿಟ್ಲರ್ ಎಂಬ ಸರ‍್ವಾದಿಕಾರಿಯ ನಾಜಿ ಪಕ್ಶದ ಆಳ್ವಿಕೆಯಲ್ಲಿ ಜರ‍್ಮನಿಯಿತ್ತು. ಬೇರೆ ಬೇರೆ ನಾಡುಗಳನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳುವ ಮೂಲಕ ಜರ‍್ಮನಿಯ ಹರವು ಹೆಚ್ಚಿಸುವ ಮನಸ್ತಿತಿಯನ್ನು ಹಿಟ್ಲರ್ ಹೊಂದಿದ್ದನು. ಆ ನಿಟ್ಟಿನಲ್ಲಿ ಆಸ್ಟ್ರಿಯಾ ಮತ್ತು ಚೆಕೊಸ್ಲೊವಾಕಿಯ ನಾಡುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಆತ ಗೆಲುವನ್ನೂ ಕಾಣುತ್ತಾನೆ. ತನ್ನ ಗುರಿಯನ್ನು ಮುಟ್ಟಲು ಇಟಲಿ ಮತ್ತು ಜಪಾನಿನೊಡಗೂಡಿ ಕೂಟವೊಂದನ್ನು(Axis) ಮಾಡಿಕೊಳ್ಳುತ್ತಾನೆ. ಆ ಮೂಲಕ ಬಹುತೇಕ ಯುರೋಪನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಆದರೆ ಅವನ ಈ ಮನಸ್ತಿತಿಯೇ ಮುಂದೆ ಜಗತ್ತಿನ ಎರಡನೇ ಮಹಾ ಕಾಳಗವಾಗುವಂತೆ ಮಾಡುತ್ತದೆ. ಪೋಲೆಂಡ್ ನಾಡಿನ ಮೇಲಿನ ಜರ‍್ಮನಿ ನಡೆಸುವ ಮುತ್ತಿಗೆ ಜಗತ್ತಿನ ಎರಡನೆ ಕಾಳಗಕ್ಕೆ (2nd World War) ನಾಂದಿ ಹಾಡುತ್ತದೆ. ತನ್ನ ಆಕ್ರಮಣಕಾರಿ ನಡೆಯಿಂದ ಯುರೋಪಿನಲ್ಲಿ ಪ್ರಾನ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ ನವರ ಸಿಟ್ಟಿಗೆ ಗುರಿಯಾಗುವ ಹಿಟ್ಲರ್, ಪೋಲೆಂಡ್ ಮುತ್ತಿಗೆಯಿಂದ ರಶ್ಯಾದವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಇನ್ನೊಂದು ಕಡೆ ಜಪಾನ್ ನವರು ಅಮೇರಿಕಾ ಮೇಲೆ ದಾಳಿ ಮಾಡುವರು. ಇದರಿಂದ ಯುನೈಟೆಡ್ ಕಿಂಗ್ಡಮ್, ಪ್ರಾನ್ಸ್, ರಶ್ಯಾ ಮತ್ತು ಅಮೇರಿಕಾ ನಾಡುಗಳು ಹಿಟ್ಲರ್ ಮತ್ತು ಅವನ ಗೆಳೆಯ ನಾಡುಗಳ ಕೂಟದ ವಿರುದ್ದ ಒಂದಾಗಿ ತಮ್ಮದೊಂದು ಕೂಟ (Allies) ಮಾಡಿಕೊಳ್ಳುತ್ತಾರೆ. ಇವರೆಲ್ಲರೂ ಸೇರಿ ಹಿಟ್ಲರನ ಕೂಟವನ್ನು 1945 ರಲ್ಲಿ ಸೋಲಿಸುತ್ತಾರೆ.

ಹಿಟ್ಲರ್ ಸೋತ ಮೇಲೆ ಜರ‍್ಮನಿ:

ಹಿಟ್ಲರನ್ನು ಬಗ್ಗುಬಡಿದ ಮೇಲೆ, ಹಿಟ್ಲರನ ಕೂಟವನ್ನು ಸೋಲಿಸಲು ಒಂದಾಗಿದ್ದ ಪ್ರಬಲವಾದ 4 ನಾಡುಗಳು ಜರ‍್ಮನಿಯನ್ನು 4 ಪಾಲುಗಳಾಗಿ ಮಾಡಿಕೊಂಡು ತಮ್ಮ ಆಡಳಿತಕ್ಕೆ ಒಳಪಡಿಸುತ್ತಾರೆ ಮತ್ತು ಅಲ್ಲಿ ಮಿಲಿಟರಿಯನ್ನೂ ನೇಮಿಸುವರು. ಪಡುವಣ ಜರ‍್ಮನಿಯ ಬಾಗಗಳು ಪ್ರಾನ್ಸ್, ಯುನೈಟೆಡ್ ಕಿಂಗ್ಡಂ ಮತ್ತು ಅಮೆರಿಕಾದ ಆಡಳಿತಕ್ಕೆ ಒಳಪಟ್ಟರೆ, ಮೂಡಣ ಜರ‍್ಮನಿಯ ಬಾಗಗಳು ರಶ್ಯಾದ ಆಳ್ವಿಕೆಗೆ ಒಳಗಾಗುತ್ತವೆ. ಪಡುವಣ ಜರ‍್ಮನಿಯು ‘ಪೆಡರಲ್ ರಿಪಬ್ಲಿಕ್ ಆಪ್ ಜರ‍್ಮನಿ’ ಅಂತಲೂ, ಮೂಡಣ ಜರ‍್ಮನಿಯು ‘ಜರ‍್ಮನ್ ಡೆಮೊಕ್ರಟಿಕ್ ರಿಪಬ್ಲಿಕ್’ ಎಂದು ಕರೆಸಿಕೊಳ್ಳುತ್ತದೆ. ಜರ‍್ಮನಿಯು ಹೀಗೆ ಬೇರೆ ಬೇರೆಯಾದ ಮೇಲೆ ಒಂದೇ ಕುಟುಂಬದವರು ಮತ್ತು ಸಂಬಂದಿಕರೂ ಕೂಡ ಬೇರೆ ಬೇರೆಯಾಗುವರು. ಬರ‍್ಲಿನ್ ನಗರದ ಮೂಡಣದ ಬಾಗ ಮೂಡಣ ಜರ‍್ಮನಿಯ ರಾಜದಾನಿಯಾದರೆ, ಬರ‍್ಲಿನ್ ನಗರದ ಪಡುವಣದ ಬಾಗ ಪಡುವಣ ಜರ‍್ಮನಿಯ ಆಳ್ವಿಕೆಗೆ ಒಳಪಡುತ್ತದೆ. ಬರ‍್ಲಿನ್ ನಗರವು ನಾಲ್ಕೂ ನಾಡಿನ ಆಳ್ವಿಕೆಯಲ್ಲಿದ್ದದರಿಂದ ಅದೊಂದನ್ನು ಬಿಟ್ಟು ಉಳಿದ ಕಡೆಯೆಲ್ಲಾ ಗಡಿಯನ್ನು ಗಟ್ಟಿಮಾಡುವ ಕೆಲಸವೂ ಆಗುತ್ತದೆ.

ತಮ್ಮ ನಾಡಿನಲ್ಲೇ ಬೇರೆ ಬೇರೆ ರೀತಿಯ ಆಳ್ವಿಕೆಯಲ್ಲಿ ಜರ‍್ಮನ್ನರು:

1949ರಿಂದ ತನ್ನನ್ನು ತಾನೇ ಆಳಿಕೊಳ್ಳುವಂತಾದ ಪಡುವಣ ಜರ‍್ಮನಿ, ಒಕ್ಕೂಟ ಮಾದರಿಯ ಮಂದಿಯಾಳ್ವಿಕೆಯನ್ನು ಹೊಂದುತ್ತದೆ. ತನ್ನ ಎಲ್ಲಾ ರಾಜ್ಯಗಳಿಗೂ ಹೆಚ್ಚಿನ ಅದಿಕಾರ ನೀಡುತ್ತಾ, ಮಂದಿಯೇ ತಮ್ಮ ನಾಯಕರನ್ನು ಆರಿಸಲು ಅನುವು ಮಾಡಿಕೊಡುವ ಮೂಲಕ ಜರ‍್ಮನ್ನರೇ ಆಳುವ ಏರ‍್ಪಾಡನ್ನು ಪಡುವಣ ಜರ‍್ಮನಿ ಹೊಂದುತ್ತದೆ. ಮೂಡಣ ಜರ‍್ಮನಿಯು ಹೆಸರಿಗಶ್ಟೇ ‘ಮಂದಿಯಾಳ್ವಿಕೆ ಆಡಳಿತ’ ಹೊಂದಿರುತ್ತಿದ್ದು, ಹೆಚ್ಚಾಗಿ ರಶ್ಯಾ ನಾಡೇ ಅದನ್ನು ಆಳುತ್ತಿರುತ್ತದೆ. ಇದು ಮೂಡಣ ಜರ‍್ಮನಿಯ ಆಳ್ವಿಕೆಯನ್ನು, ಹೊರಗಿನ ರಶ್ಯಾದ ಕೈಯಲ್ಲಿ ಕೇಂದ್ರೀಕ್ರುತಗೊಳಿಸುತ್ತದೆ. ಒಕ್ಕೂಟ ಮಾದರಿಯ ಪಡುವಣ ಜರ‍್ಮನಿ ಬಹು ಬೇಗ ಏಳಿಗೆಯನ್ನು ಹೊಂದುತ್ತಾ ಅಲ್ಲಿನ ಜರ‍್ಮನ್ನರ ಬದುಕಿನ ಮಟ್ಟ ಮೇಲೇರಿಸುತ್ತಾ ಹೋಗುತ್ತದೆ. ಆದರೆ ಕೇಂದ್ರೀಕ್ರುತ ಕಟ್ಟುಪಾಡಿನ ಆಳ್ವಿಕೆಯಲ್ಲಿದ್ದ ಮೂಡಣ ಜರ‍್ಮನ್ನರ ಬದುಕು ಸುದಾರಿಸುವುದಿಲ್ಲ. ಒಂದೇ ನುಡಿಯಾಡುತ್ತಾ ಅಕ್ಕ-ಪಕ್ಕದಲ್ಲಿದ್ದರೂ ಆಳ್ವಿಕೆಯ ಶೈಲಿಯಿಂದ ಜರ‍್ಮನ್ನರ ಬದುಕಿನ ಮಟ್ಟದ ನಡುವಿನ ವ್ಯತ್ಯಾಸ ಹೆಚ್ಚುತ್ತಾ ಹೋಗುತ್ತದೆ. ತಮ್ಮದಲ್ಲದ ತಪ್ಪಿಗೆ ದೂರವಾದವರು ಮರಳಿ ಒಂದಾಗುವ ತವಕ, ಕೇಂದ್ರೀಕ್ರುತ ಆಡಳಿತ ಪರಿಯಿಂದ ಬೇಸತ್ತು ಅದರಿಂದ ಹೊರಬರುವ ಮನಸು, ತಮ್ಮದೇ ನುಡಿಯಾಡುವವರ ಬದುಕಿನ ಮಟ್ಟ ಮೇಲೇರುತ್ತಿರುವುದು, ಜಾಣ್ಮೆ ಇದ್ದರೂ ನಿರುದ್ಯೋಗತನ – ಇವೆಲ್ಲಾ ಮೂಡಣ ಜರ‍್ಮನಿಯಿಂದ ಹೆಚ್ಚು ಜನರನ್ನು ಪಡುವಣ ದಿಕ್ಕಿಗೆ ಸೆಳೆಯಲು ಶುರು ಮಾಡುತ್ತದೆ. ಬರ‍್ಲಿನ್ ನಗರದ ಗಡಿ ಒಬ್ಬರ ಹಿಡಿತದಲ್ಲಿ ಇಲ್ಲದಿರುವುದರಿಂದ, ಬರ‍್ಲಿನ್ ಮೂಲಕವೇ ಜನರ ವಲಸೆ ಶುರುವಾಗತೊಡಗುತ್ತದೆ. ಕಾನೂನು ಮೂಲಕ ವಲಸೆ ಹೋಗುವವರನ್ನು ತಡೆಯುವ ಪ್ರಯತ್ನ ಮಾಡಿದರೂ 1961ರ ಹೊತ್ತಿಗೆ ಮೂಡಣ ಜರ‍್ಮನಿಯ ಶೇ 20ರಶ್ಟು ಜರ‍್ಮನ್ನರು ಪಡುವಣಕ್ಕೆ ವಲಸೆ ಹೋಗಿದ್ದರೆಂದು ಹೇಳಲಾಗುತ್ತದೆ.

ಜರ‍್ಮನ್ನರನ್ನು ಬೇರ‍್ಪಡಿಸಿದ ಬರ‍್ಲಿನ್ ಗೋಡೆ:

Berlinermauerಇದನ್ನು ಅರಿತ ರಶ್ಯಾದ ಕೈಲಿದ್ದ ಜರ‍್ಮನ್ ಡೆಮೊಕ್ರಟಿಕ್ ರಿಪಬ್ಲಿಕನ್ನರು – “ತನ್ನ ನಾಡಿಗೆ ನಾಜಿಗಳು (ಪಡುವಣ ಜರ‍್ಮನ್ನರು) ಬರುತ್ತಿರುವರು, ತನ್ನ ಆಳ್ವಿಕೆಯಲ್ಲಿರುವ ಜರ‍್ಮನ್ನರ ಮೇಲೆ ಅವರ ನೆರಳು ಬೀಳಬಾರದು, ತನ್ನ ಜರ‍್ಮನ್ನರು ನಾಜಿಗಳ ಹಾಗೆ ಆಗಬಾರದು” ಎಂದು ಹೇಳಲು ಶುರುವಿಟ್ಟುಕೊಳ್ಳುತ್ತಾರೆ. ನಾಜಿಗಳನ್ನು ತಡೆಯಬೇಕು ಎಂಬ ಸಬೂಬಿನಡಿ, ಒಂದು ಗಟ್ಟಿಯಾದ ದೊಡ್ಡ ಗೋಡೆಯನ್ನು 1961ರಲ್ಲಿ  ಮೂಡಣ ಬರ‍್ಲಿನ್ ನ ಗಡಿಯೊಳಗೇ ಕಟ್ಟುವ ಕೆಲಸ ಶುರುವಾಗುತ್ತದೆ. ವಾಸ್ತವದಲ್ಲಿ, ತನ್ನ ಆಳ್ವಿಕೆಯಲ್ಲಿದ್ದ ಜರ‍್ಮನ್ನರನ್ನು ಪಡುವಣ ಜರ‍್ಮನಿಗೆ ಹೋಗದಂತೆ ತಡೆಯಲು ಈ ಗೋಡೆ ಕಟ್ಟಲು ಅವರು ಮುಂದಾಗಿರುತ್ತಾರೆ. ಮೂಡಣ ಮತ್ತು ಪಡುವಣ ಜರ‍್ಮನಿಯ ಗಡಿಯುದ್ದಕ್ಕೂ ಗೋಡೆ ಕಟ್ಟುವ ಕೆಲಸವಾಗುತ್ತದೆ. ಕಾವಲಿಗೆ ಅಲ್ಲಿ ಮಿಲಿಟರಿ ಪಡೆಯನ್ನೂ ನೇಮಿಸಲಾಗಿರುತ್ತದೆ. ಒಟ್ಟಿನಲ್ಲಿ ತನ್ನ ನೆಲದ ಜನರು ಯಾರೂ ನಾಡು ತೊರೆಯಬಾರದೆಂಬ ಆಳುವವರ ಉದ್ದೇಶ, ಜರ‍್ಮನ್ ನುಡಿಯಾಡುವವರನ್ನು ಬೇರ‍್ಪಡಿಸುವ ಕೆಲಸ ಮಾಡುತ್ತದೆ.

 

ಒಂತನದ ಬಾವನೆ ಮುಂದೆ ಯಾವ ತಡೆ?:

berlin-wall-1024x798ಗೋಡೆಯಿದ್ದರೂ ಕೂಡ, ಮೂಡಣದ ಜರ‍್ಮನ್ನರು ಆಸ್ಟ್ರಿಯಾ ಮತ್ತು ಹಂಗೇರಿ ನಾಡುಗಳನ್ನು ಬಳಸಿ ಪಡುವಣ ಜರ‍್ಮನಿ ತಲುಪಲು ಹೊಸ ದಾರಿಯನ್ನು ಕಂಡುಕೊಳ್ಳುತ್ತಾರೆ. ಆದರೆ ದಿನಗಳೆದಂತೆ ವಲಸೆ ಹೋಗದೇ, ಇರುವ ತಡೆಯನ್ನು ತೆರವುಗೊಳಿಸಿ ಎಲ್ಲ ಜರ‍್ಮನ್ನರನ್ನು ಒಂದು ಮಾಡುವ ಹಂಬಲ ಜರ‍್ಮನ್ನರಲ್ಲಿ ಹೆಚ್ಚಾಗುತ್ತದೆ. ನಿದಾನವಾಗಿ ಅದು ಶಾಂತಿಯುತ ಪ್ರತಿಬಟನೆಗಳನ್ನು ಹುಟ್ಟುಹಾಕುತ್ತದೆ. 1989ರ ಸೆಪ್ಟಂಬರ್ ತಿಂಗಳಶ್ಟೊತ್ತಿಗೆ ಮೂಡಣ ಜರ‍್ಮನಿಯಲ್ಲಿ ಪ್ರತಿಬಟನೆಗಳು ಜೋರಾಗುತ್ತವೆ. ಮೊದಲಿಗೆ, “ನಾವು ಹೋಗಬೇಕು” ಎಂಬ ಕೂಗುನುಡಿಗಳನ್ನು (slogans) ಕೂಗುತ್ತಿದ್ದ ಮಂದಿ ನಂತರ “ನಾವು ಇಲ್ಲೇ ಇರ‍್ತೀವಿ” (ಬರ‍್ಲಿನ್ ಗೋಡೆಯನ್ನು ತೆಗೆಯಿರಿ ಎಂಬ ಹುರುಳಿನಲ್ಲಿ) ಎಂದು ಕೂಗಲು ಶುರು ಮಾಡುತ್ತಾರೆ. ನವಂಬರ್ ತಿಂಗಳಲ್ಲಿ ಪ್ರತಿಬಟನೆಗಳು ಇನ್ನೂ ತಾರಕಕ್ಕೇರುತ್ತವೆ. ಕೊನೆಗೆ ಆಳುವವರು ಮಂದಿಯ ಒತ್ತಾಯಕ್ಕೆ ಮಣಿಯಲೇ ಬೇಕಾಗುತ್ತದೆ. 1989 ರ ನವಂಬರ್ 9 ರಂದು ಬರ‍್ಲಿನ್ ಮೂಲಕ ಪಡುವಣ ಜರ‍್ಮನಿಗೆ ಹೋಗಲು ಒಪ್ಪಿಗೆ ನೀಡುತ್ತಾರೆ. ಈ ಸುದ್ದಿ ಬಹು ಬೇಗನೆ ಮಾದ್ಯಮಗಳಿಗೆ ಗೊತ್ತಾಗಿ ಅವುಗಳ ಮೂಲಕ, ಪಡುವಣ ಮತ್ತು ಮೂಡಣದ ಎಲ್ಲಾ ಜರ‍್ಮನ್ನರನ್ನು ತಲುಪುತ್ತದೆ. ರಾತ್ರಿ ಹನ್ನೊಂದು ಗಂಟೆಯಶ್ಟೊತ್ತಿಗೆ, ಎರಡೂ ಜರ‍್ಮನಿಯ ಗಡಿಯುದ್ದಕ್ಕೂ ಎರಡೂ ಬದಿಯಲ್ಲಿ ಹೆಚ್ಚಿನ ಎಣಿಕೆಯಲ್ಲಿ ಜರ‍್ಮನ್ನರ ಜಮಾವಣೆಯಾಗಿರುತ್ತದೆ. ಕೊನೆಗೆ ಮಿಲಿಟರಿಯವರಿಗೂ ಗಡಿಯಲ್ಲಿರುವ ಬಾಗಿಲುಗಳನ್ನು ತೆರೆಯುವಂತೆ ಆದೇಶಿಸಲಾಗುತ್ತದೆ. ತುಂಬಾ ದಿನದಿಂದ ಬೇರೆಯಾಗಿದ್ದ ಜರ‍್ಮನ್ನರು ಮತ್ತೆ ಒಂದಾದ ಆ ದಿನದಂದು ಕುಣಿದು ಕುಪ್ಪಳಿಸುತ್ತಾರೆ. ಕೊನೆಗೆ 1990ರ ಜೂನ್ ತಿಂಗಳಲ್ಲಿ ಬರ‍್ಲಿನ್ ಗೋಡೆಯನ್ನು ಪೂರ‍್ತಿಯಾಗಿ ಕೆಡವಲಾಗುತ್ತದೆ. 1990 ಅಕ್ಟೋಬರ್ ತಿಂಗಳಲ್ಲಿ ಪಡುವಣ ಮತ್ತು ಮೂಡಣ ಜರ‍್ಮನಿ ಒಂದಾಗುತ್ತವೆ. ಹೀಗೆ ಮರುಹುಟ್ಟು ಪಡೆದ ಜರ‍್ಮನಿ ಇಂದು ಮುಂದುವರೆದ ನಾಡುಗಳಲ್ಲಿ ಒಂದಾಗಿದೆ.

ಕನ್ನಡಿಗರು ತಿಳಿಯಬೇಕಿರುವುದು:

ಜರ‍್ಮನ್ ನುಡಿಯಾಡುತ್ತಿದ್ದರೂ ನಾನಾ ಕಾರಣಗಳಿಂದ ಬೇರೆ ಬೇರೆಯಾಗಿದ್ದು, ಒಂದಾದ ಬಳಿಕ ಕಲಿಕೆ-ಆಡಳಿತ ಮತ್ತು ನಾಡಿನ ಏಳಿಗೆಗೆ ಬೇಕಾದ ಇತರ ಏರ‍್ಪಾಡುಗಳನ್ನು ತಮ್ಮ ನುಡಿಯಲ್ಲೇ ಕಟ್ಟಿಕೊಂಡು ಮುಂದುವರೆದ ನಾಡುಗಳ ಸಾಲಿನಲ್ಲಿ ಜರ‍್ಮನಿಯನ್ನು ನಿಲ್ಲಿಸಿದ ಜರ‍್ಮನ್ನರ ಪ್ರಯತ್ನವನ್ನು ಮೆಚ್ಚಲೇಬೇಕು. ಕನ್ನಡಿಗರೂ ಕೂಡ ಬ್ರಿಟೀಶರ ಆಳ್ವಿಕೆಯಡಿ ಬೇರೆ ಬೇರೆಯಾಗಿದ್ದವರೇ! ಒಂದಾಗಿ ಇಶ್ಟು ವರುಶಗಳಾದರೂ ಕೂಡ ಏಳಿಗೆಯ ವಿಶಯದಲ್ಲಿ ಸಾದಿಸಿರುವುದು ಕಡಿಮೆ ಇದ್ದು, ಸಾದಿಸಬೇಕಿರುವುದು ತುಂಬಾನೇ ಇದೆ. ಜರ‍್ಮನ್ ನುಡಿಯ ಸುತ್ತ ಜರ‍್ಮನಿಯಲ್ಲಿ ಆದ ಕೆಲಸ, ಕನ್ನಡ ನುಡಿಯ ಸುತ್ತ ಕರ‍್ನಾಟಕದಲ್ಲಿ ಆಗಿಲ್ಲ ಎಂಬುದು ಒಪ್ಪಲೇಬೇಕಾದ ದಿಟ! ತಾಯ್ನುಡಿಗೆ ಕಸುವು ತುಂಬಿದರೆ ಮತ್ತು ಒಂದೇ ನುಡಿಯಾಡುವವರ ನಡುವೆ ಗಟ್ಟಿಯಾದ ಒಗ್ಗಟ್ಟಿದ್ದರೆ ಏನೆಲ್ಲಾ ಸಾದಿಸಬಹುದು ಎಂಬುದಕ್ಕೆ ಪುರಾವೆಯಾಗಿ ಜರ‍್ಮನಿ ಇಂದು ನಮ್ಮ ಮುಂದೆ ನಿಂತಿದೆ. ವಿಪರ‍್ಯಾಸ ಎಂದರೆ, ಈ ವರುಶದ ಕರ‍್ನಾಟಕ ರಾಜ್ಯೋತ್ಸವದ ದಿನದಂದೇ ಕರುನಾಡನ್ನು ಬಾಗ ಮಾಡುವ ದನಿಗಳು ಗಟ್ಟಿಯಾಗಿ ಕೇಳಿಸಿದವು. ಹೆಸರಿಗಶ್ಟೇ ಒಕ್ಕೂಟ ವ್ಯವಸ್ತೆಯಾಗಿ, ಕೇಂದ್ರೀಕ್ರುತ ಆಡಳಿತ ವ್ಯವಸ್ತೆಯನ್ನು ಹೊಂದಿರುವ ಬಾರತವನ್ನು ನಿಜವಾದ ಒಕ್ಕೂಟವನ್ನಾಗಿ ಮಾಡಲು ಮತ್ತು ಕನ್ನಡ ನಾಡು ಏಳಿಗೆ ಹೊಂದಲು ಕನ್ನಡಿಗರ ಒಗ್ಗಟ್ಟು ಬಹಳ ಮುಕ್ಯವಾದುದು! ಇಂದು ಅದನ್ನೇ ಮುರಿಯುವ ಕೆಲಸ ಕೆಲವು ಆಳುವ ನಾಯಕರಿಂದ ನಡೆಯುತ್ತಿದೆ. ಕನ್ನಡಿಗರು ಅಂತ ನಾಯಕರ ಮೋಸದ ತಂತ್ರಗಳಿಗೆ ಬಲಿಯಾಗದೇ ತಮ್ಮ ಒಗ್ಗಟ್ಟನ್ನು ಕಾಯ್ದುಕೊಂಡು, ಏಳಿಗೆಯ ಗುರಿಯಿಟ್ಟುಕೊಂಡು ನಾಡು ಕಟ್ಟಲು ಒಟ್ಟಾಗಿ ಮುಂದಡಿಯಿಡಬೇಕಿದೆ.

( ಮಾಹಿತಿ ಸೆಲೆ: wiki-Germany, wiki-Berlinwall, wiki-worldwar2history.com )

( ಚಿತ್ರ ಸೆಲೆ: kulturweit-blog.desobrehistoria.comlacasapark.com )

ನಿಮಗೆ ಹಿಡಿಸಬಹುದಾದ ಬರಹಗಳು

No Responses

  1. ಒಳ್ಳೆಯ ಬರಹ.. ಇಂದು ಉತ್ತರ ಕರ್ನಾಟಕದಲ್ಲಿ ಕತ್ತಿಯವರ ಹೇಳಿಕೆಗೆ ಸುಮಾರು ಜನ ಬೆಂಬಲ ಕೊಡಲಾರಂಭಿಸಿದ್ದಾರೆ. ಆದ್ರೆ ಅಲ್ಲಿಂದ ಆರಿಸಿ ಹೋದ ನಾಯಕರನ್ನು ಏನು ಕಿಸಿದಿದ್ದೀಯಾ ಅಂತ ಕೊರಳು ಪಟ್ಟಿ ಹಿಡಿದು ಕೇಳೋರು ಯಾರು ಇಲ್ಲ. ಕರ್ನಾಟಕದ ಮಂದಿ ಒಗ್ಗಟ್ಟಾಗಿ ಇದ್ದರೆ ಮತ್ತು ಕನ್ನಡ ಕಟ್ಟುವ ಕೆಲಸ ಮಾಡಿದ್ದೇ ಆದರೇ ನಮ್ಮ ನಾಡು ಮುಂದುವರೆಯುವುದರಲ್ಲಿ ಸಂದೇಹವೇ ಇಲ್ಲ…

ಅನಿಸಿಕೆ ಬರೆಯಿರಿ: