ಕನ್ನಡದ ಮಕ್ಕಳು ಹತ್ತಲಾಗದ “ಸೈನ್ಸ್ ಎಕ್ಸ್ ಪ್ರೆಸ್”

– ವಲ್ಲೀಶ್ ಕುಮಾರ್.

ಕಾಡು, ಪರಿಸರ ಮತ್ತು ಹವೆಯಳತೆ ಮಂತ್ರಾಲಯವು ವಿಗ್ನಾನ ಮತ್ತು ತಂತ್ರಗ್ನಾನ ಇಲಾಕೆಯ ಜೊತೆಗೂಡಿ “ಸೈನ್ಸ್ ಎಕ್ಸ್ ಪ್ರೆಸ್” ಅನ್ನುವ ಹಮ್ಮುಗೆಯನ್ನು ಹೊರಡಿಸಿ ಆರು ವರ‍್ಶ ತುಂಬಿದೆ. ಇಲ್ಲಿ ಹಲಬಗೆಯ ಪರಿಸರ ಮತ್ತು ಅಲ್ಲಿ ಬೀಡುಬಿಟ್ಟಿರುವ ಪ್ರಾಣಿ ಪಕ್ಶಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಒಂದು ರೈಲಿನ 16 ಬೋಗಿಗಳ ಒಳಗೆ ಬಾರತದ ಎಲ್ಲೆಡೆಯ ಬಗೆಬಗೆಯ ಕಾಡು ಮತ್ತು ಅಲ್ಲಿ ಇರುವ ಪ್ರಾಣಿ-ಪಕ್ಶಿಗಳ ಬಗ್ಗೆ, ಮತ್ತು ಪರಿಸರವನ್ನು ಕಾಪಾಡಿಕೊಳ್ಳುವ ಬಗ್ಗೆ ವಿವರಣೆ ನೀಡುವ ಚಿತ್ರಗಳನ್ನು ಅಂಟಿಸಿರುತ್ತಾರೆ. ಪ್ರತಿಯೊಂದು ಬಗೆಯ ಕಾಡಿನ ಬಗ್ಗೆಯೂ ಇಲ್ಲಿ ಮಾಹಿತಿ ನೀಡಲು ಸಿಬ್ಬಂದಿ ನಿಂತಿರುತ್ತಾರೆ. ಈ ರೈಲು ಊರೂರು ಸುತ್ತುತ್ತಾ ಆಯಾ ಊರಿನ ಮಕ್ಕಳಿಗೆ ಈ ವಿಶಯದ ಕುರಿತು ಮಾಹಿತಿ ನೀಡುತ್ತಾ ಸಾಗುತ್ತದೆ. ಶಾಲಾ ಮಕ್ಕಳೂ ಸೇರಿದಂತೆ ಎಲ್ಲರೂ ಯಾವುದೇ ಶುಲ್ಕವಿಲ್ಲದೇ ಹೋಗಿ ನೋಡಬಹುದಾಗಿದೆ. ಈ ಬಾರಿ ಈ ರೈಲು ಬೆಂಗಳೂರಿನ ವೈಟ್ ಪೀಲ್ಡ್ ರೈಲು ನಿಲ್ದಾಣದಲ್ಲಿ ಒಂದು ವಾರ ಬೀಡು ಬಿಟ್ಟಿದೆ. ಇಂದು ಈ “ಸೈನ್ಸ್ ಎಕ್ಸ್ ಪ್ರೆಸ್” ನೋಡಿ ಬಂದ ನನ್ನ ಅನುಬವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಅರಿಮೆಯನ್ನು ಎಲ್ಲರಿಗೂ, ಹೆಚ್ಚಾಗಿ ಶಾಲಾ ಮಕ್ಕಳಿಗೆ ತಲುಪಿಸುವ ಪ್ರಯತ್ನವನ್ನು ತುಂಬಾ ಮೆಚ್ಚಿಕೊಂಡು ಅಲ್ಲಿಗೆ ಹೋದ ನನಗೆ ಬೇಸರ ಕಾದಿತ್ತು. ಅಲ್ಲಿ ಬಂದಿದ್ದ ನೂರಾರು ಕನ್ನಡದ ಮಕ್ಕಳು ಕಣ್ಣು ಮಿಟುಕಿಸುತ್ತಾ ಎಲ್ಲವನ್ನೂ ನೋಡುತ್ತಿದ್ದರು. ಪೋಸ್ಟರುಗಳ ಮೇಲೆ ಬರೆದ ಟಿಪ್ಪಣಿಗಳನ್ನು ಓದಲು ಪ್ರಯತ್ನಿಸುತ್ತಿದ್ದರು. ಆದರೆ ಹಲವರಿಗೆ ಅದು ತಿಳಿಯುತ್ತಿರಲಿಲ್ಲ. ಕಾರಣ ಎಲ್ಲಾ ಮಾಹಿತಿಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಶ್ ನುಡಿಗಳಲ್ಲಿ ಬರೆಯಲಾಗಿತ್ತು. “ಜಗತ್ತಿನಲ್ಲೇ ಬಲು ಹೆಚ್ಚಿನ ಬೇರ‍್ಮೆಯ ಜೀವಿಗಳನ್ನು ಒಳಗೊಂಡ ಕಾಡುಗಳು” – ಎಂದು ಕರ‍್ನಾಟಕದ ಪಡುವಣ ಗಟ್ಟದ ಕಾಡುಗಳ ಬಗ್ಗೆ ಹೊಗಳಿ ಬರೆದಿದ್ದ ಟಿಪ್ಪಣಿಯನ್ನು ಕನ್ನಡ ಮಕ್ಕಳು ಓದಿ ತಿಳಿಯಲೂ ಆಗುತ್ತಿರಲಿಲ್ಲ.

ಅಲ್ಲದೆ ಅಲ್ಲಿ ಮಾಹಿತಿ ನೀಡಲು ನಿಂತಿದ್ದ ಸಿಬ್ಬಂದಿ ಪೈಕಿ ಒಬ್ಬರೂ ಕನ್ನಡ ಬಲ್ಲವರಿಲ್ಲ! ಎಲ್ಲರಿಗೂ ಇಂಗ್ಲಿಶಿನಲ್ಲೇ ಮಾಹಿತಿ ನೀಡಲಾಗುತ್ತಿತ್ತು. ಆಗ ಕನ್ನಡ ಶಾಲೆಯ ಕಲಿಸುಗರೊಬ್ಬರು ತಮ್ಮ ಶಾಲೆಯ ಮಕ್ಕಳನ್ನು ತೋರಿಸುತ್ತಾ – “ಸರ್, ದಯವಿಟ್ಟು ಮಾಹಿತಿಯನ್ನು ಕನ್ನಡದಲ್ಲೇ ನೀಡುತ್ತೀರಾ? ನಮ್ಮ ಮಕ್ಕಳಿಗೆ ಸುಲಬವಾಗುತ್ತದೆ.” ಅಂತ ಕೇಳಿಕೊಂಡಾಗ – “ನಮಗೆ ಕನ್ನಡ ಬರುವುದಿಲ್ಲ, ಹಿಂದಿಯಲ್ಲಿ ಬೇಕಾದರೆ ಹೇಳುತ್ತೇವೆ” ಎಂದು ಇಂಗ್ಲಿಶಿನಲ್ಲಿ ಉತ್ತರಿಸಿದರು ಅಲ್ಲಿನ ಸಿಬ್ಬಂದಿ – ಹಾಗೆಯೇ ನಡೆದುಕೊಂಡರು. ಇನ್ನು ಈ ಸೈನ್ಸ್ ಎಕ್ಸ್ ಪ್ರೆಸ್ಸಿನಲ್ಲಿ ಕನ್ನಡದ ಮಕ್ಕಳು ಎಶ್ಟರ ಮಟ್ಟಿಗೆ ವಿಶಯಗಳನ್ನು ತಿಳಿಯಲು ಆಗಿರಬಹುದು ಎಂಬುದನ್ನೇ ನೀವೇ ಊಹಿಸಿಕೊಳ್ಳಿ.

ಈ ನಡಾವಳಿಯ ಸುತ್ತ ಹಲವು ಕೇಳ್ವಿಗಳು ಹುಟ್ಟುತ್ತವೆ: ಕನ್ನಡದ ಮಕ್ಕಳಿಗೆ ಹಿಂದಿ ಮತ್ತು ಇಂಗ್ಲಿಶ್ ನುಡಿಗಳಲ್ಲಿ ಕಲಿಸಿದರೆ ಮಕ್ಕಳು ವಿಶಯಗಳನ್ನು ಹೇಗೆ ತಿಳಿಯುತ್ತಾರೆ? ಹಿಂದಿ/ಇಂಗ್ಲಿಶ್ ತಿಳಿಯದ ಮಂದಿಗೆ (ಅಂದರೆ 60% ಬಾರತೀಯರಿಗೆ) ಉಪಯೋಗವಾಗದ ಇಂತಹ ಹಮ್ಮುಗೆಗಳಿಗೆ ಬಾರತ ಸರ‍್ಕಾರ ಕೋಟ್ಯಂತರ ರೂಪಾಯಿ ಸುರಿಯುವುದು ದಂಡ ಅಲ್ಲವೇ? ಬಾರತದ ಎಲ್ಲಾ ನುಡಿ ಸಮುದಾಯಗಳನ್ನೂ ತಲುಪಲು ಆಗದಿದ್ದ ಮೇಲೆ ಇಂತಹ ಹಮ್ಮುಗೆಗಳನ್ನು ಕೇಂದ್ರ ಸರ‍್ಕಾರ ಏಕೆ ಹೊರಡಿಸಬೇಕು?

ಕಲಿಕೆಯ ಸುತ್ತ ಕೇಂದ್ರ ಸರಕಾರವು ಹಾಕಿಕೊಳ್ಳುವ ಹಮ್ಮುಗೆಗಳೆಲ್ಲವೂ ಹಿಂದಿ/ಇಂಗ್ಲೀಶಿನಲ್ಲಿಯೇ ಇದ್ದು, ಹೆಚ್ಚು ಮಂದಿಯನ್ನು ತಲುಪದೇ ಹಣ ದಂಡ ಮಾಡುವ ಹಮ್ಮುಗೆಗಳಾಗಿರುತ್ತವೆ. ಕಲಿಕೆಗೆ ಸಂಬಂದಿಸಿದ ಯೋಜನೆಗಳನ್ನು ಕೇಂದ್ರ ಸರ‍್ಕಾರ ಮಾಡದೇ ರಾಜ್ಯ ಸರ‍್ಕಾರಗಳಿಗೆ ಬಿಟ್ಟು ಬಿಡುವುದೇ ಒಳ್ಳೆಯದು. ಆಗ ನಮ್ಮ ಮಕ್ಕಳಿಗೆ ನಮ್ಮ ನುಡಿಯಲ್ಲೇ ಕಲಿಸುವ ಏರ‍್ಪಾಡು ನಾವು ಮಾಡಿಕೊಳ್ಳಬಹುದು. ಇಡೀ ಬಾರತಕ್ಕೆ ಒಂದೆಡೆಯಿಂದ ಕಲಿಕೆ ರೂಪಿಸುವುದು ಆಗದ ಕೆಲಸ ಅನ್ನುವುದಕ್ಕೆ ಇದೊಂದು ಎತ್ತುಗೆಯೇ ಸರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: