ನಾವು ಕನ್ನಡಿಗರು

– ಕಿರಣ್ ಮಲೆನಾಡು.

Garlanding Kitturu Chennamma Statue

 

 

ಬಡಗಣದಿಂದ ತೆಂಕಣದವರೆಗೆ,ಪಡುವಣದಿಂದ ಮೂಡಣದವರೆಗೆ ಇರುವ – ನಾವು ಕನ್ನಡಿಗರು.

ಕರಾವಳಿಯ ಕಡಲ, ಮಲೆನಾಡ ಬೆಟ್ಟ ಗುಡ್ಡದ, ಬಯಲು ಸೀಮೆಯ ಬೆರಗಿನ – ನಾವು ಕನ್ನಡಿಗರು.

ಕೊಡಚಾದ್ರಿ, ಕುದುರೆಮುಕ, ಕೆಮ್ಮಣ್ಣು ಗುಂಡಿ, ನಂದಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟದೆತ್ತರದ – ನಾವು ಕನ್ನಡಿಗರು.

ಅಬ್ಬೆ, ಹೆಬ್ಬೆ,ಇ ರುಪ್ಪು, ಕಲ್ಲತ್ತಿ, ಶಿವನ ಸಮುದ್ರ, ಜೋಗ, ಮಾಗೋಡು, ಗೋಕಾಕಿನ ಬೆರಗನು ಕಾಣುವ – ನಾವು ಕನ್ನಡಿಗರು.

ಕ್ರಿಶ್ಣ, ಬೀಮ, ತುಂಗಬದ್ರ, ಕಾಳಿ, ನೇತ್ರಾವತಿ, ಶರಾವತಿ, ಕಬಿನಿ, ಕಾವೇರಿಯಲ್ಲಿ ಮೀಯುವ – ನಾವು ಕನ್ನಡಿಗರು.

ಬೇಲೂರು, ಹಳೇಬೀಡು, ಹಂಪಿ,ಬಾದಾಮಿ, ಐಹೊಳೆ, ಪಟ್ಟದಕಲ್ಲು ಕಲ್ಲಿನಲ್ಲಿ – ನಾವು ಕನ್ನಡಿಗರು.

ಗಂದದ ಗುಡಿ, ಚಿನ್ನದ ನಾಡು, ಬೆಳೆಗಳ ಬೀಡು, ಕಬ್ಬಿಗರ ನಾಡಿನ – ನಾವು ಕನ್ನಡಿಗರು.

ಕರಾವಳಿ ಕನ್ನಡ, ಕುಂದಗನ್ನಡ, ಬಯಲುಸೀಮೆ ಕನ್ನಡ, ಮೈಸೂರು ಕನ್ನಡ, ಹವಿಗನ್ನಡದ ಸವಿಯ – ನಾವು ಕನ್ನಡಿಗರು

ನಲ್ನುಡಿ, ಸಿರಿನುಡಿ, ಸವಿನುಡಿ, ಹೊನ್ನುಡಿ, ಚೆನ್ನುಡಿಯನ್ನಾಡುವ – ನಾವು ಕನ್ನಡಿಗರು.

ಕದಂಬ, ಗಂಗ, ಚಾಲುಕ್ಯ, ರಾಶ್ಟ್ರಕೂಟ, ಹೊಯ್ಸಳ, ವಿಜಯನಗರ, ಮಯ್ಸೂರರಸರಂತೆ ಮತ್ತು ಮುಂದೂ – ನಾವು ಕನ್ನಡಿಗರು.

ಮಯೂರಶರ‍್ಮ, ಇಮ್ಮಡಿ ಪುಲಕೇಶಿ, ವೀರ ಬಲ್ಲಾಳ, ಕ್ರಿಶ್ಣದೇವರಾಯರ ಎಂಟೆದೆಯ, ಕೆಚ್ಚೆದೆಯ – ನಾವು ಕನ್ನಡಿಗರು.

ಪಂಪ, ರನ್ನ, ಜನ್ನ, ಹರಿಹರ, ರಾಗವಾಂಕ, ಆಂಡಯ್ಯ, ಕುಮಾರ ವ್ಯಾಸ, ಮುದ್ದಣನ ಮುದ್ದಿನ – ನಾವು ಕನ್ನಡಿಗರು.

ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ, ಕಿತ್ತೂರು ಚೆನ್ನಮರ ಮಡಿಲಿನ – ನಾವು ಕನ್ನಡಿಗರು.

ವಿದ್ಯಾರಣ್ಯ,ಕನಕ, ಪುರಂದರ, ವ್ಯಾಸರಾಯ, ವಿಜಯ, ಶಿಶುನಾಳರ ಶಿಶುಗಳು – ನಾವು ಕನ್ನಡಿಗರು.

ಬಸವಣ್ಣ, ಅಲ್ಲಮಪ್ರಬು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಸರ‍್ವಗ್ನರ ವಚನಗಳನ್ನು ಸವಿಯುವ – ನಾವು ಕನ್ನಡಿಗರು .

ರಾಮಮೂರ‍್ತಿ, ಅನಕ್ರು, ಸದಾಶಿವರಾಯ, ಶ್ರೀಕಂಟಯ್ಯ, ಹುಯಿಲಗೋಳ, ಅಲೂರರಿಂದ ಅರಳಿದ – ನಾವು ಕನ್ನಡಿಗರು.

ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿ, ಗೋಕಾಕ, ಮೂರ‍್ತಿ, ಕಾರ‍್ನಾಡ, ಕಂಬಾರರ ಕತೆ ಕವನಗಳ – ನಾವು ಕನ್ನಡಿಗರು

ತೊಗಲುಗೊಂಬೆ, ವೀರಗಾಸೆ, ಯಕ್ಶಗಾನ, ಕರಡಿಮಜಲು, ಕಂಸಾಳೆ, ಡೊಳ್ಳುಕುಣಿತದ ಸೊಗಡನು ಸವಿದ – ನಾವು ಕನ್ನಡಿಗರು

ರಾಜಕುಮಾರ, ನರಸಿಂಹರಾಜು, ವಿಶ್ಣುವರ‍್ದನ, ಶಂಕರ, ಕಲ್ಪನ, ಕಣಗಾಲರ ಕಣ್ಮಣಿಗಳು – ನಾವು ಕನ್ನಡಿಗರು

ವೀರಣ್ಣ, ಸುಬ್ಬಣ್ಣ, ಕಾರಂತ, ಲೀಲಾ, ಹೊನ್ನಪ್ಪ ಬಾಗವತ, ಕೆರೆಮನೆಯವರ ಕುಣಿದಾಟಗಳನು ಕಣ್ ತುಂಬಿಕೊಂಡ – ನಾವು ಕನ್ನಡಿಗರು.

ಅನಂತಸ್ವಾಮಿ, ಅಶ್ವತ್ತ, ಸುಬ್ಬಣ್ಣ, ಬಾನಂದೂರು, ಬಾಳಪ್ಪ, ನಾವಡರ ಮೋಡಿಗೆ ಒಳಗಾದ – ನಾವು ಕನ್ನಡಿಗರು.

ಆಟೋಟಗಳು, ಕಲೆ, ಸಾಹಿತ್ಯ, ಆಳ್ವಿಕೆ, ಕಲಿಕೆ, ಹಲವು ಅರಿಮೆಗಳ ಗರಿಮೆಯ – ನಾವು ಕನ್ನಡಿಗರು.

ಹೊರನಾಡು, ಒಳನಾಡು, ನಾಡಿನ ಎಲ್ಲೆ ಎಲ್ಲೆಗಳಲಿ ಕನ್ನಡದೀಪವನು ಬೆಳಗಿದ ಮತ್ತು ಬೆಳಗುತ್ತಿರುವ – ನಾವು ಕನ್ನಡಿಗರು.

( ಚಿತ್ರ ಸೆಲೆ: karavenalnudi.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks