ನೊಂದವರ ಮೊಗದಲ್ಲಿ ಮತ್ತೆ ಮೂಡಿದ ನಗು

ನಾಗರಾಜ್ ಬದ್ರಾ.

kid1_350_111714032324

ಜಾತಿ-ದರ‍್ಮ, ಮೇಲು-ಕೀಳು, ಬಡವರು-ಶ್ರೀಮಂತರು, ಕೆಟ್ಟವರು-ಒಳ್ಳೆಯವರು ಯಾವುದನ್ನೂ ಅರಿಯದ ಮುಗ್ದರೆಂದರೆ ಮಕ್ಕಳು. ಅವರ ಆಟ, ನಗು ಮತ್ತು ಮುಗ್ದತೆ ಎಂತಹ ಕ್ರೂರಿಯ ಮನಸ್ಸನ್ನು ಕರಗಿಸುತ್ತದೆ. ಆದರೆ ಈ ಸಮಾಜದಲ್ಲಿ ಒಂದಶ್ಟು ಕ್ರೂರಿಗಳಿಗೆ ಆ ಮನಸ್ಸೇ ಇರುವುದಿಲ್ಲ. ಅಂತಹ ಕ್ರೂರ ಮ್ರುಗಗಳು ತಮ್ಮ ಸ್ವಾರ‍್ತಕ್ಕೋಸ್ಕರ ಮುಗ್ದ ಮಕ್ಕಳನ್ನು ಅಪಹರಿಸಿ ಬೇರೆ ಕಡೆ ಬಿಕ್ಶೆ ಬೇಡಲು ಹಾಗೂ ಇತರೆ ಕೆಲಸಕ್ಕೆ ಹಚ್ಚುತ್ತಾರೆ.

ಇನ್ನು ಕೆಲವು ಮಕ್ಕಳು ಈ ಕೆಳಗಿನ ಕಾರಣಗಳಿಂದ ಮನೆ ಬಿಟ್ಟು ಹೋಗುತ್ತಾರೆ.
1) ಮನೆಯಲ್ಲಿನ ಬಡತನ ಹಾಗು ಅಹಿತಕರ ವಾತಾವರಣ
2) ದೈಹಿಕ ಹಾಗು ಮಾನಸಿಕ ಹಿಂಸೆ
3) ಕೆಟ್ಟ ಅಬ್ಯಾಸ
4) ಲೈಂಗಿಕ ಕಿರುಕುಳ
5) ಮನೆಯಲ್ಲಿ ಅವರನ್ನು ಕಡೆಗಣಿಸುವುದು
6) ಓದು ಮತ್ತು ಇತರೆ ಒತ್ತಡ
7) ಅಪರಾದಿ ಜಗತ್ತಿನ ನಂಟು

ಕಾಣೆಯಾದ ಮಕ್ಕಳು ವರ‍್ಶಗಳಾದರು ಸಿಗದೇ ಹೋದಾಗ ಮಕ್ಕಳನ್ನು ಕಳೆದುಕೊಂಡ ಪಾಲಕರ ನೋವನ್ನು ಶಬ್ದಗಳಲ್ಲಿ ಎಶ್ಟು ವಿವರಿಸಿದರೂ ಸಾಲದು, ಅದನ್ನು ಅನುಬವಿಸಿದವರಿಗೇ ಗೊತ್ತು. ಎಶ್ಟೋ ತಾಯಂದಿರು ಅದನ್ನೇ ಯೋಚಿಸಿ ಹಾಸಿಗೆ ಹಿಡ್ಡದಿದ್ದಾರೆ, ಮಾನಸಿಕ ರೋಗಿಗಳಾಗಿದ್ದಾರೆ, ಇನ್ನೂ ಕೆಲವರು ಆತ್ಮಹತ್ಯೆ ಅಂತಹ ಕೆಟ್ಟ ನಿರ‍್ಣಯವನ್ನು ತೆಗೆದುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ವರ‍್ಶವು ಲಕ್ಶಾಂತರ ಮಕ್ಕಳು ಕಾಣೆಯಾಗುತ್ತಾರೆ. ಅದರಲ್ಲಿ ನಮ್ಮ ಪೋಲೀಸರಿಗೆ ಕೇವಲ ಕೆಲವು ಮಕ್ಕಳನ್ನು ಮಾತ್ರ ಹುಡುಕಿಕೊಡಲು ಸಾದ್ಯವಾಗಿದೆ.

ಉತ್ತರ ಪ್ರದೇಶ ರಾಜ್ಯದ ಗಾಜಿಯಬಾದ್ ಜಿಲ್ಲೆಯಲ್ಲಿ ಮಕ್ಕಳು ಕಾಣೆಯಾಗುವ ಪ್ರಕರಣಗಳ ಸಂಕ್ಯೆ ಹೆಚ್ಚಾಗಿ ಹೋಗಿತ್ತು. ಅಲ್ಲಿಯ ಪೊಲೀಸರಿಗೆ ಈ ಪ್ರಕರಣಗಳು ಬಿಡಿಸಲಾರದ ಒಗಟುಗಳಾಗಿ ನಿದ್ದೆಗೆಡಿಸಿದ್ದವು. ಕಳೆದುಹೋದ ಮಕ್ಕಳನ್ನು ಹುಡುಕಿಕೊಡುವ ಮತ್ತು ಮಕ್ಕಳನ್ನು ಕಳೆದುಕೊಂಡ ಪಾಲಕರ ಜೀವನದಲ್ಲಿ ಮರೆಯಾದ ನಗುವನ್ನು ಮತ್ತೆ ತರುವ ಪಣತೊಟ್ಟ ಅಲ್ಲಿಯ ಎಸ್.ಎಸ್.ಪಿ ( Senior Superintendent of Police) ದರ‍್ಮೆಂದ್ರ ಸಿಂಗ್ ಯಾದವ ಅವರು ಆಪರೇಶನ್ ಸ್ಮೈಲ್(Operation Smile) ಎಂಬ ಹೆಸರಿನ ವಿನೂತನ ಅಬಿಯಾನವನ್ನು ನವೆಂಬರ್ 14, 2014 ರಂದು ಶುರುಮಾಡಿದರು. ಈ ಅಬಿಯಾನದಲ್ಲಿ ಗಾಜಿಯಾಬಾದ್ ಪೊಲೀಸ್ ಇಲಾಕೆಯ ವಿವಿದ ಶ್ರೇಣಿಯ ಪೊಲೀಸ್ ಆಪೀಸರ್ ಗಳಲ್ಲಿ ಪೋಸ್ಕೊ(POSCO Act) ಕಾಯ್ದೆ, ಜುವೆನೈಲ್ ಜಸ್ಟಿಸ್ ಕಾಯ್ದೆ (Juvenile Justice Act) ಮತ್ತು ಪ್ರೊಟೆಕ್ಶನ್ ಆಪ್ ಚೈಲ್ಡ್ ರೈಟ್ಸ್ ಕಾಯ್ದೆಯಲ್ಲಿ (Protection of child Rights Act) ವಿಶೇಶ ತರಬೇತಿ ಪಡೆದವರನ್ನು ಆರಿಸಿ ತಂಡಗಳನ್ನಾಗಿ ಮಾಡಲಾಯಿತು.

ಗಾಜಿಯಾಬಾದ್ ನಲ್ಲಿ 2006 ರಿಂದ 18 ವರ‍್ಶ ಒಳಗಿನ ಕಾಣೆಯಾಗಿರುವ ಮಕ್ಕಳ ಪಟ್ಟಿಯನ್ನು ಮಾಡಿದರು. ಮೊದಲ ಹಂತದಲ್ಲಿ ವಿಶೇಶ ತರಬೇತಿ ಪಡೆದಿದ್ದ ಪೊಲೀಸರ ಆರು ತಂಡಗಳನ್ನು ರಚಿಸಲಾಯಿತು. ಆ ತಂಡಗಳನ್ನು ಬೇರೆ ಬೇರೆಯಾಗಿ ದೆಹಲಿ, ಗುರಗಾಂವ್, ಪರೀದಬಾದ್, ಚಂಡಿಗಡ, ಹರಿದ್ವಾರ ಮತ್ತು ಡೆಹರಾಡೂನ್ ಗೆ ಕಳುಹಿಸಿದರು. ಈ ತಂಡಗಳು ಆಯಾ ನಗರಗಳ ಎನ್ ಜಿ ಓ ಗಳು (NGO) ಮತ್ತು ನಿರಾಶ್ರಿತರ ಕೇಂದ್ರಗಳಿಗೆ ಬೇಟಿಮಾಡಿದರು. ಆಯಾ ನಗರಗಳ ರೈಲ್ವೆ, ಬಸ್ಸು ನಿಲ್ದಾಣಗಳು, ಜನಬರಿತ ಪ್ರದೇಶಗಳು ಹಾಗೂ ನಗರಗಳಲ್ಲಿನ ಬಿಕ್ಶಾಟನೆಯ ಜಾಗಗಳಲ್ಲಿ ಹುಡುಕಾಟವನ್ನು ಶುರುಮಾಡಿದರು. ನ್ಯಾಶನಲ್ ಕ್ರೈಮ್ ರೆಕಾರ‍್ಡ್ಸ್ ಬ್ಯೂರೊ (National Crime Records Bureau), ಮಿಸ್ಸಿಂಗ್ ಪರ‍್ಸನ್ ಸೆಲ್ (Missing Persons Cell), ಚೈಲ್ಡ್ ವೆಲ್ಪೇರ್ ಕಮೀಟಿಸ್ (Child Welfare Communities) ಹಾಗೂ ಇತರ ಸ್ತಳೀಯ ಸಂಸ್ತೆಗಳ ಸಹಾಯವನ್ನು ಪೊಲೀಸರು ಪಡೆದರು. ಕೇವಲ ಒಂದು ತಿಂಗಳ ಅವದಿಯಲ್ಲಿ 227 ಮಕ್ಕಳನ್ನು ಪತ್ತೆ ಮಾಡುವಲ್ಲಿ ಸಪಲರಾದರು.

ಪತ್ತೆಯಾದ ಮಕ್ಕಳಲ್ಲಿ ಕೆಲವರು ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ಸ್ ಗಳನ್ನು ಆಯುತ್ತಾಯಿದ್ದರು, ಕೆಲವರು ದಾಬಾಗಳಲ್ಲಿ ಕೆಲಸ ಮಾಡುತ್ತಿದ್ದರು, ಕೆಲವು ಮಕ್ಕಳು ಡ್ರಗ್ಸ್ ಚಟಕ್ಕೆ ಒಳಗಾಗಿದ್ದರು, ಮತ್ತು ಕೆಲವು ಮಕ್ಕಳು ಬಿಕ್ಶಾಟನೆಯ ಗುಂಪಿನಲ್ಲಿ ಪತ್ತೆಯಾದರು. ಗಾಜಿಯಾಬಾದ್ ಪೊಲೀಸರ ಈ ಆಪರೇಶನ್ ಸ್ಮೈಲ್ ಅಬಿಯಾನವು ಕೇವಲ ಒಂದು ತಿಂಗಳಲ್ಲಿಯೇ ಯಶಸ್ವಿಯಾಗಿತ್ತು. ಇದರ ಯಶಸ್ಸಿನಿಂದ ಎಚ್ಚೆತ್ತ ಕೇಂದ್ರ ಸರಕಾರದ ಗ್ರುಹ ಸಚಿವಾಲಯ, ದೇಶದ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಡಾಳಿತ ಪ್ರದೇಶಗಳಿಗೆ ಆಪರೇಶನ್ ಸ್ಮೈಲ್ ಮಾದರಿಯನ್ನು ಅಳವಡಿಸಿಕೊಂಡು ಕಾಣೆಯಾದ ಮಕ್ಕಳನ್ನು ಹುಡುಕಲು, ಜನವರಿ 1, 2015 ರಿಂದ ಜನವರಿ 31, 2015 ವರೆಗೆ ಅಬಿಯಾನವನ್ನು ಪ್ರಾರಂಬಿಸುವಂತೆ ಕೇಳಿತ್ತು.

ದೇಶದೆಲ್ಲಡೆ ಆಪರೇಶನ್ ಸ್ಮೈಲ್ (Operation Smile) ಮಾದರಿಯಲ್ಲಿ ಅಬಿಯಾನ ಪ್ರಾರಂಬಗೊಂಡಿತು. ದೇಶದ ವಿವಿದ ರಾಜ್ಯಗಳಲ್ಲಿ ಈ ಅಬಿಯಾನದಲ್ಲಿ ಪತ್ತೆಯಾದ ಮಕ್ಕಳ ವಿವರಗಳು ಈ ಕೆಳಗಿನಂತಿವೆ;
1) ಬಿಹಾರ – 122
2) ಕರ‍್ನಾಟಕ – 65
3) ಮದ್ಯಪ್ರದೇಶ – 711
4) ರಾಜಸ್ತಾನ – 80
5) ಸಿಕ್ಕಿಂ – 193
6) ಉತ್ತರಾಕಂಡ – 188
7) ಉತ್ತರಪ್ರದೇಶ – 855
8) ಪಶ್ಚಿಮ ಬಂಗಾಳ – 754
9) ಚಂಡಿಗಡ – 50
10 ) ತ್ರಿಪುರ – 15
11 ) ತೆಲಂಗಾಣ – 1397

ಒಟ್ಟು 4427 ಮಕ್ಕಳನ್ನು ಬರೀ ಒಂದು ತಿಂಗಳಲ್ಲಿ ಪತ್ತೆಮಾಡುವಲ್ಲಿ ಪೊಲೀಸರು ಯಶಸ್ವಿಯಾದರು. ಗಾಜಿಯಾಬಾದ್ ಪೊಲೀಸರು ಕೂಡ ಆಪರೇಶನ್ ಸ್ಮೆಲ್ (Operation Smile)ನ ಎರಡನೆಯ ಹಂತವನ್ನು ಜನವರಿ 1, 2015 ರಿಂದ ಜನವರಿ 31,2015 ವರೆಗೆ ನಡೆಸಿ ಕಾಣೆಯಾಗಿದ್ದ 57 ಮಕ್ಕಳನ್ನು ಪತ್ತೆಮಾಡುವಲ್ಲಿ ಯಶಸ್ವಿಯಾದರು. ಮತ್ತೊಮ್ಮೆ ಕೇಂದ್ರ ಸರಕಾರವು ದೇಶದ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಡಾಳಿತ ಪ್ರದೇಶಗಳಿಗೆ ಜುಲೈ 1 ರಿಂದ – ಜುಲೈ 31 ರವರೆಗೆ ಆಪರೇಶನ್ ಸ್ಮೈಲ್ ಅಬಿಯಾನವನ್ನು ನಡೆಸಲು ಕೇಳಿದೆ. ಬಾರತೀಯ ರೈಲ್ವೆ ಪೊಲೀಸ್ ಪೋರ‍್ಸ್ (Railway Police Force) ಈ ಅಬಿಯಾನದ ಯಶಸ್ಸಿನಿಂದ ಎಚ್ಚೆತ್ತು ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲಿನಲ್ಲಿ ಕಾಣೆಯಾಗಿರುವ ಮಕ್ಕಳನ್ನು ಪತ್ತೆಮಾಡಲು ಇದೇ ಮಾದರಿಯಲ್ಲಿ ಆಪರೇಶನ್ ಮುಸ್ಕಾನ್ (Operation Muskan) ಎಂಬ ಅಬಿಯಾನವನ್ನು ಪ್ರಾರಂಬಿಸಿದೆ.

ಗಾಜಿಯಬಾದ್ ಪೋಲಿಸರು ಆಪರೇಶನ್ ಸ್ಮೈಲ್ ನ ಮೂರನೆಯ ಹಂತದಲ್ಲಿ ಹದಿನೈದು ತಂಡಗಳನ್ನು ರಚಿಸಿ ದೇಶದ ವಿವಿದ ನಗರಗಳಿಗೆ ಕಳುಹಿಸಿದ್ದಾರೆ. ಈ ಅಬಿಯಾನದ ಯಶಸ್ಸಿನ ಸುದ್ದಿ ದೇಶಾದ್ಯಂತ ಹರಡಿತ್ತು. ಇದರ ಯಶಸ್ಸನ್ನು ಅರಿತ ಕೇಂದ್ರ ಸರಕಾರವು ಇದೇ ಮಾದರಿಯಲ್ಲಿ ಆಪರೇಶನ್ ಮುಸ್ಕಾನ್ ಎಂಬ ಹೊಸ ಅಬಿಯಾನವನ್ನು ಗೋಶಿಸುವ ಯೋಚನೆಯಲ್ಲಿದೆ. ದೇಶದಲ್ಲಿಯೆ ಈ ಯೋಜನೆಯನ್ನು ಮೊದಲು ಪ್ರಾರಂಬಸಿ ಕಾಣೆಯಾಗಿದ್ದ ಮಕ್ಕಳಿಗೆ ಮತ್ತೊಂದು ಹೊಸ ಜೀವನವನ್ನು ನೀಡಿದ ಹಾಗೂ ಆ ಮಕ್ಕಳ ಪಾಲಕರ ಬದುಕಿನಲ್ಲಿ ನಗುವನ್ನು ತುಂಬಿದ ಗಾಜಿಯಬಾದ್ ಎಸ್.ಎಸ್.ಪಿ ದರ‍್ಮೇಂದ್ರ ಸಿಂಗ್ ಯಾದವ್ ಹಾಗೂ ಅವರ ತಂಡಕ್ಕೆ ನನ್ನದೊಂದು ಸೆಲ್ಯೂಟ್.

(ಮಾಹಿತಿ ಮತ್ತು ಚಿತ್ರಸೆಲೆ: indiatoday.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: