ಕಿತ್ತಳೆ ಹಣ್ಣಿನ ಕೇಕ್ ಮಾಡುವ ಬಗೆ

ಪ್ರೇಮ ಯಶವಂತ.

Cake

ಬೇಕಾಗುವ ಅಡಕಗಳು:

ಮಯ್ದಾ ಹಿಟ್ಟು – 2 ಬಟ್ಟಲುtitta1ಸಕ್ಕರೆ – 2 ಬಟ್ಟಲು
ಅಡಿಗೆ ಸೋಡಾ – 2 ಟೀ ಚಮಚ
ಉಪ್ಪು – 1 ಟೀ ಚಮಚ
ಕಿತ್ತಳೆ ಹಣ್ಣಿನ ರಸ – 2 ಬಟ್ಟಲು
ಮೊಟ್ಟೆ – 2-3
ಹರಿಗೆಯಿಳಿಸಿದ ವೆನಿಲ್ಲಾ (vanilla extract) – 2 ಟೀ ಚಮಚ
ಅಡಿಗೆ ಎಣ್ಣೆ – 1/2 ಬಟ್ಟಲು
ಕಿತ್ತಳೆ ಸಿಪ್ಪೆ ತುರಿ – 1.5 ಟೇಬಲ್ ಚಮಚ
ನಿಂಬೆಹಣ್ಣಿನ ಸಿಪ್ಪೆ ತುರಿ – 1 ಟೇಬಲ್ ಚಮಚ
6″/9″ (ಇಂಚು) ಬೇಯಿಸುವ ತಟ್ಟೆ (baking tray) – ನಾನು 6 ” ತಟ್ಟೆಯನ್ನು ಬಳಸಿ 2 ಕೇಕ್ ಮಾಡಿದ್ದೇನೆ.

ಮಾಡುವ ಬಗೆ:
ಮೇಲೆ ತಿಳಿಸಿದ ಎಲ್ಲವನ್ನು ಒಂದು ಬಟ್ಟಲಿಗೆ ಹಾಕಿ ಮಿಕ್ಸರ್ ನಿಂದ ಗಂಟು ಬೀಳದ ಹಾಗೆ ಚೆನ್ನಾಗಿ ಕಲಸಿಟ್ಟುಕೊಳ್ಳಿ. ಕೇಕ್ ಬೆಂದಮೇಲೆ ತೆಗೆಯಲು ಸುಳುವಾಗಿಸುವುದಕ್ಕೆ ಕೇಕ್ ಬೇಯಿಸುವ ತಟ್ಟೆಗೆ ಸ್ವಲ್ಪ ಎಣ್ಣೆ ಇಲ್ಲವೇ ಬೆಣ್ಣೆಯನ್ನು ಸವರಿ ಮತ್ತು ಸ್ವಲ್ಪ ಮಯ್ದಾ ಹಿಟ್ಟನ್ನು ಉದುರಿಸಿ. ಕಲಸಿದ ಮಿಶ್ರಣವನ್ನು ತಟ್ಟೆಯ ಮುಕ್ಕಾಲು ಬಾಗ ತುಂಬಿರಿ. ಓವನ್ ಅನ್ನು 350 ಡಿಗ್ರಿಗೆ ಬಿಸಿ ಮಾಡಿಕೊಳ್ಳಿ. 10 ನಿಮಿಶ ಬಿಸಿಯಾದಮೇಲೆ ಈ ತಟ್ಟೆಯನ್ನು ಇಟ್ಟು 40-50 ನಿಮಿಶ ಬೇಯಿಸಿ. ಚಮಚದ ಹಿಂಬಾಗವನ್ನು ಕೇಕಿನ ಒಳಗೆ ತೂರಿಸಿ ತೆಗೆದಾಗ ಬೇಯುತ್ತಿರುವ ಕೇಕಿನ ಮಿಶ್ರಣ ಆಂಟಿಕೊಳ್ಳದಿದ್ದರೆ ನಿಮ್ಮ ಕಿತ್ತಳೆ ರಸದ ಕೇಕ್ ಅಣಿಯಾದಂತೆ.

ಕೇಕನ್ನು ಇನ್ನಶ್ಟು ರುಚಿಯಾಗಿಸಲು ಹಾಗು ಯಾವುದೇ ಹಬ್ಬಕ್ಕೆ ಅಣಿಮಾಡಲು ಸಿಹಿಹಚ್ಚಿಕೆ (frosting) ಮಾಡಬಹುದು.

ಸಿಹಿಹಚ್ಚಿಕೆ ಮಾಡಲು ಬೇಕಾದ ಅಡಕಗಳು:
ಕ್ರೀಮ್ ಚೀಸ್ – 1 ಬಟ್ಟಲು
ಉಪ್ಪು – 1/4 ಟೀ ಚಮಚ
ಸಕ್ಕರೆ – 1 ಬಟ್ಟಲು
ಹರಿಗೆಯಿಳಿಸಿದ ವೆನಿಲ್ಲಾ – 1 ಟೀ ಚಮಚ
ಗಟ್ಟಿ ಹಾಲ್ಗೆನೆ (heavy cream)- 1 .5 ಬಟ್ಟಲು

ಒಂದು ಬಟ್ಟಲಿನಲ್ಲಿ ಕ್ರೀಂ ಚೀಸ್, ಉಪ್ಪು, ಸಕ್ಕರೆ ಮತ್ತು ಹರಿಗೆಯಿಳಿಸಿದ ವೆನಿಲ್ಲಾ ಹಾಕಿ ನುಣ್ಣಗಾಗುವವರೆಗೂ ಕಲಸಿರಿ. ಈಗ ಗಟ್ಟಿ ಹಾಲ್ಗೆನೆಯನ್ನು ನಿದಾನವಾಗಿ ಹಾಕುತ್ತ ಎಲೆಕ್ಟ್ರಿಕ್ ಮಿಕ್ಸರ್ ನಲ್ಲಿ ಸ್ವಲ್ಪ ಗಟ್ಟಿಯಾಗುವವರೆಗೂ ಕಲಸಿದರೆ ಸಿಹಿಹಚ್ಚಿಕೆ ಅಣಿಗೊಳ್ಳುತ್ತದೆ.

ಎರಡು ಕೇಕ್ ಮಾಡಿದ್ದರೆ, ಎರಡನ್ನೂ ಬಳಸಿ ಪದರದ ಕೇಕ್ (layer cake) ಮಾಡಬಹುದು. ಕೇಕ್ಗಳ ಮೇಲ್ ಬಾಗಗಳನ್ನು ಸಮತಟ್ಟಾಗಿ ಕತ್ತರಿಸಿ ತೆಗೆಯಿರಿ. ಮೊದಲನೆಯ ಕೇಕಿನ ಮೇಲೆ ಸಿಹಿಹಚ್ಚಿಕೆಯನ್ನು ಸವರಿ. ಇದರ ಮೇಲೆ ಎರಡನೆಯ ಕೇಕನ್ನು ಇರಿಸಿ. ಎರಡನೆಯ ಕೇಕ್ ಮೇಲೂ ಸಿಹಿಹಚ್ಚಿಕೆಯನ್ನು ಸವರಿ. ಆಮೇಲೆ ಕೇಕುಗಳ ಹೊರ ಮಯ್ಗೆ ಮೆತ್ತಿ. ಕೊನೆಯದಾಗಿ ನಿಮಗೆ ಇಶ್ಟವಾದ ಬಗೆಯಲ್ಲಿ ಕೇಕನ್ನು ಸಿಂಗರಿಸಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications