“ಮುಟ್ಟಿದೊಡೆ ಶಿವನಾಣೆ” (ಆಣೆಪ್ರಮಾಣ – 4ನೆಯ ಕಂತು)

 ಸಿ.ಪಿ.ನಾಗರಾಜ.

 

ಕಂತು 1, ಕಂತು 2 ಕಂತು 3 )

ಜನರಿಂದ ಆಯ್ಕೆಗೊಂಡು ಮಂದಿಯಾಳ್ವಿಕೆಯ ಒಕ್ಕೂಟಗಳಾದ ಅಸೆಂಬ್ಲಿ ಮತ್ತು ಪಾರ‍್ಲಿಮೆಂಟ್‍ಗಳಲ್ಲಿ ಮತ್ತು ಇತರ ಎಡೆಗಳಲ್ಲಿ ವ್ಯಕ್ತಿಗಳು ಗದ್ದುಗೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಮಯದಲ್ಲಿ ದೇವರ ಹೆಸರಿನಲ್ಲಿ/ಸತ್ಯದ ಹೆಸರಿನಲ್ಲಿ/ತಮಗೆ ಬೇಕಾದ ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣವಚನವನ್ನು ಓದುತ್ತಾರೆ. ಆದರೆ ಪ್ರಮಾಣವಚನದಲ್ಲಿ ನಿರೂಪಣೆಗೊಂಡಿರುವ ಸಂಗತಿಗಳಿಗೆ ತಕ್ಕಂತೆ ನಡೆದುಕೊಳ್ಳುವ ವ್ಯಕ್ತಿಗಳ ಸಂಕೆಯು ಬಹಳ ಕಡಿಮೆಯಿರುತ್ತದೆ. ಕೋರ‍್ಟಿನಲ್ಲಿ ನ್ಯಾಯಾದೀಶರ ಮುಂದೆ ಯಾವುದೇ ಒಂದು ಮೊಕದ್ದಮೆಗೆ ಬೇಕಾದ ಸಾಕ್ಶ್ಯ ಇಲ್ಲವೇ ಹೇಳಿಕೆಯನ್ನು ಕೊಡುವುದಕ್ಕೆ ಮೊದಲು ವ್ಯಕ್ತಿಗಳು ತಾವು ಹೇಳುವುದೆಲ್ಲಾ ಸತ್ಯವೆಂದು ದೇವರ ಹೆಸರಿನಲ್ಲಿ/ದರ‍್ಮದ ಹೊತ್ತಗೆಗಳನ್ನು ಮುಟ್ಟಿ ಪ್ರಮಾಣ ಮಾಡುತ್ತಾರೆ. ಆದರೆ ಬಹುತೇಕ ಮೊಕದ್ದಮೆಗಳಲ್ಲಿ ವ್ಯಕ್ತಿಗಳು ನೀಡುವ ಹೇಳಿಕೆಗಳು ಅವರ ವಕೀಲರು ತರಬೇತಿ ಕೊಟ್ಟ ರೀತಿಯಲ್ಲಿರುತ್ತವೆಯೇ ಹೊರತು ವಾಸ್ತವ ಸಂಗತಿಗಳನ್ನು ಒಳಗೊಂಡಿರುವುದಿಲ್ಲ. ಈ ರೀತಿ ಇಂದಿನ ಸಮಾಜದ ವ್ಯವಹಾರಗಳಲ್ಲಿ ಬಳಕೆಯಾಗುತ್ತಿರುವ ಆಣೆಪ್ರಮಾಣಗಳು ವ್ಯಕ್ತಿಗಳ ನಡೆನುಡಿಗಳ ಮೇಲೆ ಯಾವುದೇ ಹೆಚ್ಚಿನ ಪರಿಣಾಮವನ್ನು ಬೀರದೆ, ಕೇವಲ ಯಾಂತ್ರಿಕವಾಗಿ ನಡೆಯುವ ಆಚರಣೆಗಳಾಗಿವೆ.

ನಾಗರಿಕ ಸಮಾಜದಲ್ಲಿ ಇಂಗ್ಲಿಶ್ ನುಡಿಯಲ್ಲಿ ವಿದ್ಯೆಯನ್ನು ಕಲಿಯುತ್ತಿರುವ ಹದಿಹರೆಯದ ಮಕ್ಕಳಲ್ಲಿ ಕೆಲವರು ತಮ್ಮ ದಿನನಿತ್ಯದ ಮಾತುಕತೆಯಲ್ಲಿ “ಗಾಡ್ ಪ್ರಾಮಿಸ್…ಮದರ್ ಪ್ರಾಮಿಸ್” ಎಂಬ ಪದಕಂತೆಗಳನ್ನು ಕನ್ನಡದ ಆಣೆಗಳ ಜಾಗದಲ್ಲಿ ಬಳಸುವುದನ್ನು ಕಾಣುತ್ತೇವೆ. ತಾವು ಆಡುತ್ತಿರುವ ಮಾತುಗಳ ಮೇಲೆ ಹೆಚ್ಚಿನ ಗಮನವನ್ನು ಸೆಳೆಯಲು ಮಕ್ಕಳು ಈ ತಂತ್ರವನ್ನು ಬಳಸುತ್ತಾರೆ.

ಸಾಮಾಜಿಕ ರಂಗದಲ್ಲಿನ ಎಲ್ಲಾ ಬಗೆಯ ವ್ಯವಹಾರಗಳಲ್ಲೂ ಆಗಿಂದಾಗ್ಗೆ ಆಣೆಪ್ರಮಾಣಗಳನ್ನು ಬಳಸುವುದರಿಂದ ಅನೇಕ ಉದ್ದೇಶಗಳನ್ನು ಈಡೇರಿಸಿಕೊಳ್ಳಬಹುದಾದರೂ, ಇವುಗಳ ಬಗ್ಗೆ ಒಟ್ಟಾರೆಯಾಗಿ ಕನ್ನಡ ನುಡಿಸಮುದಾಯವು ಒಳ್ಳೆಯ ನಿಲುವನ್ನು ಹೊಂದಿಲ್ಲ. ಮಾಡಿರುವ ತಪ್ಪನ್ನು/ಆಗಿರುವ ಕೆಡುಕನ್ನು ಮುಚ್ಚಿಡಲೆಂದು ಆಣೆಪ್ರಮಾಣ ಮಾಡುವುದರಿಂದ ಉಂಟಾಗಬಹುದಾದ ಕೆಟ್ಟಪರಿಣಾಮಗಳಿಗೆ ಬಹುತೇಕ ಮಂದಿ ಹಿಂಜರಿಯುತ್ತಾರೆ. “ವ್ಯಕ್ತಿಯು ಇತರರನ್ನು ನಂಬಿಸಲು ತಾನು ಹೇಳುತ್ತಿರುವ ಸಂಗತಿಯು ನಡೆದಿದೆ ಇಲ್ಲವೇ ನಡೆದಿಲ್ಲ ಎಂಬುದನ್ನು ಹೇಳಬೇಕೆ ಹೊರತು, ತಾನಾಡುವ ಮಾತುಗಳಿಗೆ ಪೂರಕವಾಗಿ ಆಣೆಪ್ರಮಾಣಗಳ ಬೆಂಬಲ ಬೇಕಾಗಿಲ್ಲ. ಯಾರು ಆಣೆಪ್ರಮಾಣಗಳ ಮೂಲಕವೇ ಸಂಗತಿಗಳನ್ನು ತಿಳಿಸಲು ಪ್ರಯತ್ನಿಸುತ್ತಾರೆಯೋ, ಅಂತಹವರು ನಂಬಿಕೆಗೆ ಯೋಗ್ಯರಲ್ಲ” ಎಂಬ ನಿಲುವು ಜನಮನದಲ್ಲಿದೆ.

ಕನ್ನಡ ನುಡಿಸಮುದಾಯದ ಸಾಮಾಜಿಕ ವ್ಯವಹಾರಗಳಲ್ಲಿ ಆಣೆಪ್ರಮಾಣಗಳು ಬಳಕೆಯಲ್ಲಿರುವುದನ್ನು ನಮ್ಮ ಹಳೆಗನ್ನಡ/ನಡುಗನ್ನಡ/ಹೊಸಗನ್ನಡ ಹಾಗೂ ಜನಪದ ನಲ್ಬರಹಗಳು ಬಗೆಬಗೆಯ ಸನ್ನಿವೇಶ ಹಾಗೂ ಪಾತ್ರಗಳ ಮೂಲಕ ಚಿತ್ರಿಸಿವೆ.

ಕ್ರಿ.ಶ.12ನೆಯ ಶತಮಾನದಲ್ಲಿದ್ದ ಹರಿಹರ ಕವಿಯು ರಚಿಸಿರುವ ತಿರುನೀಲಕಂಟ ರಗಳೆಯು ಸಂಪೂರ‍್ಣವಾಗಿ ಆಣೆಪ್ರಮಾಣಗಳ ಸನ್ನಿವೇಶಗಳಿಂದ ಕೂಡಿದೆ. ಚೋಳದೇಶದ ಹರಹಿನಲ್ಲಿ ಬರುವ ಪೊನ್ನಾಂಬಲ ಎಂಬ ಪುರದಲ್ಲಿ ಹದಿನಾರರ ಹರೆಯದ ತಿರುನೀಲಕಂಟ ಮತ್ತು ಮುತ್ತಯ್ದೆ ಎಂಬ ಹೆಸರಿನ ಗಂಡಹೆಂಡತಿ ಇದ್ದರು. ಇವರಿಬ್ಬರು ಶಿವನ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದರು. ಒಂದು ದಿನ ತಿರುನೀಲಕಂಟನು ನಡು ಇರುಳಿನವರೆಗೂ ದೇಗುಲದಲ್ಲಿ ಶಿವನನ್ನು ಪೂಜಿಸುತ್ತಿದ್ದು, ಮನೆಗೆ ಹಿಂತಿರುಗಿ ಬರುವಾಗ, ವಿಳಾಸಿನಿಯೊಬ್ಬಳು ತಾನು ಊಟ ಮಾಡಿದ ತಟ್ಟೆಯ ಎಂಜಲ ನೀರನ್ನು ತನ್ನ ಮನೆಯ ಉಪ್ಪರಿಗೆಯಿಂದ ಹೊರಕ್ಕೆ ಎಸೆಯುತ್ತಾಳೆ. ಅದೇ ವೇಳೆಯಲ್ಲಿ ಶಿವನನ್ನು ಜಪಿಸುತ್ತಾ ಪುರದ ಬೀದಿಯಲ್ಲಿ ನಡೆದುಬರುತ್ತಿದ್ದ ತಿರುನೀಲಕಂಟನ ಮಯ್ ಮೇಲೆ ಎಂಜಲನೀರು ಬೀಳುತ್ತದೆ.ಇದನ್ನು ಕಂಡ ವಿಳಾಸಿನಿಯು ತನ್ನಿಂದ ಆದ ತಪ್ಪಿಗಾಗಿ ನೊಂದುಕೊಂಡು, ಉಪ್ಪರಿಗೆಯಿಂದ ಇಳಿದುಬಂದು, ಅವನನ್ನು ತನ್ನ ಮನೆಯೊಳಕ್ಕೆ ಕರೆದುಕೊಂಡು ಹೋಗಿ, ಕಂಪಿನಿಂದ ಕೂಡಿದ ವಸ್ತುಗಳನ್ನು ಮಯ್ಗೆಲ್ಲ ಸವರಿ, ಬಿಸಿನೀರಿನಿಂದ ಮೀಯಿಸಿ, ಬೆಲೆಬಾಳುವ ಬಟ್ಟೆಗಳನ್ನು ಉಡಿಸಿ, ಕರ‍್ಪೂರದ ವೀಳ್ಯವನ್ನು ನೀಡಿ ಒಲವಿನಿಂದ ಕಳುಹಿಸುತ್ತಾಳೆ.

ಅಂದಚೆಂದದ ಉಡುಗೆಯನ್ನು ಉಟ್ಟುಕೊಂಡು ಮನೆಗೆ ಬಂದ ತಿರುನೀಲಕಂಟನ ಸೊಗಸನ್ನು ಕಂಡು ಮಡದಿ ಮುತ್ತಯ್ದೆಯು ಗಂಡನ ನಡತೆಯ ಬಗ್ಗೆ ಅನುಮಾನಗೊಂಡು ಮನದೊಳಗೆ ಕಳವಳಪಡುತ್ತಾಳೆ. ಆದರೆ ಅದನ್ನು ಹೊರಗೆ ತೋರಿಸಿಕೊಳ್ಳದೆ, ಎಂದಿನಂತೆ ಗಂಡನಿಗೆ ಉಣಬಡಿಸಿ ಉಪಚಾರ ಮಾಡಿ ಮಲಗಿಕೊಂಡಾಗ, ತಿರುನೀಲಕಂಟನು ಕಾಮದ ಒಳಮಿಡಿತದಿಂದ ಮುತ್ತಯ್ದೆತ್ತ ಕಯ್ ಚಾಚುತ್ತಾನೆ. ಇದರಿಂದ ಸಿಡಿಮಿಡಿಗೊಂಡ ಮುತ್ತಯ್ದೆಯು ಕೆರಳಿ ಕೆಂಡವಾಗಿ,”ಮುಟ್ಟಿದೊಡೆ ಶಿವನಾಣೆ”ಎನ್ನುತ್ತಾ, ತನ್ನ ಮಯ್ ಮೇಲಿದ್ದ ತಿರುನೀಲಕಂಟನ ಕಯ್ಯನ್ನು ಕಿತ್ತೆಸೆಯುತ್ತಾಳೆ. ಶಿವನ ಒಲವಿನ ಕಿಂಕರನಾಗಿದ್ದ ತಿರುನೀಲಕಂಟನಿಗೆ ಹೆಂಡತಿಯಿಕ್ಕಿದ ಆಣೆಯ ಮಾತು ಮನಕ್ಕೆ ದೊಡ್ಡ ಪೆಟ್ಟನ್ನು ನೀಡಿದರೂ, ಆ ಗಳಿಗೆಯಿಂದಲೇ ಅದರಂತೆಯೇ ನಡೆದುಕೊಳ್ಳಲು ತೀರ‍್ಮಾನಿಸುತ್ತಾನೆ. ಆಣೆಯ ಕಟ್ಟುಪಾಡಿಗೆ ಮುತ್ತಯ್ದೆಯು ಒಳಗಾಗುತ್ತಾಳೆ. ಪರಸ್ಪರ ಒಬ್ಬರನ್ನೊಬ್ಬರು ಮುಟ್ಟದೆ, ತಮ್ಮ ತೊಂಬತ್ತನೆಯ ವಯೋಮಾನದವರೆಗೂ ಆಣೆ ಮುರಿಯದಂತೆ ಬಾಳುತ್ತಾರೆ.

ಆಣೆಗೆ ಒಳಗಾಗಿ ನಡೆದುಕೊಳ್ಳುತ್ತಿದ್ದ ಈ ಗಂಡಹೆಂಡತಿಯ ಶಿವನ ಬಗೆಗಿನ ಒಲವನ್ನು ಹೊರಜಗತ್ತಿಗೆ ತಿಳಿಸಲೆಂಬ ಉದ್ದೇಶದಿಂದ ಶಿವನು ತಿರುಕನ ಉಡುಗೆಯನ್ನುಟ್ಟು ಪೊನ್ನಂಬಲ ಪುರದಲ್ಲಿದ್ದ ದಂಪತಿಯ ಮನೆಗೆ ಬಂದು, ಪಾತ್ರೆಯೊಂದನ್ನು ಅವರಿಗೆ ತೋರಿಸುತಾ, “ಇದು ದೊಡ್ಡ ಮಹಿಮೆಯುಳ್ಳ ಪಾತ್ರೆ” ಎಂದು ಬಣ್ಣಿಸಿ, ಅದನ್ನು ಕೊಂಚ ಕಾಲ ಜೋಪಾನವಾಗಿ ಕಾಪಿಡುವಂತೆ ತಿರುನೀಲಕಂಟ ದಂಪತಿಯ ಪಾಲಿಗೆ ಒಪ್ಪಿಸಿ ತೆರಳುತ್ತಾನೆ. ಅವರು ಆ ಪಾತ್ರೆಯನ್ನು ಪೆಟ್ಟಿಗೆಯೊಂದರಲ್ಲಿಟ್ಟು ಎಚ್ಚರದಿಂದ ಕಾವಲು ಕಾಯುತ್ತಿರುತ್ತಾರೆ. ಕೆಲದಿನಗಳ ನಂತರ ತಿರುಕ ಶಿವನು ತನ್ನ ಪಾತ್ರೆಯನ್ನು ಹಿಂತಿರುಗಿ ಪಡೆಯಲೆಂದು ದಂಪತಿಯ ಬಳಿ ಬಂದು ಕೇಳಿದಾಗ, ಅವರು ಬಹಳ ಸಡಗರ ಸಂತಸದಿಂದ ಪಾತ್ರೆಯನ್ನು ಹಿಂತಿರುಗಿಸಲೆಂದು ಪೆಟ್ಟಿಗೆಯನ್ನು ತೆರೆದಾಗ, ಪಾತ್ರೆಯು ಅಲ್ಲಿರಲಿಲ್ಲ. ಕೋಪಗೊಂಡ ತಿರುಕ ಶಿವನು ಪೊನ್ನಾಂಬಲದ ಪಂಚಾಯ್ತಿಗೆ ದೂರನ್ನು ನೀಡಿ, ಆರೋಪಿಗಳಿಂದ ತನ್ನ ಪಾತ್ರೆಯನ್ನು ಕೊಡಿಸಿಕೊಡಬೇಕೆಂದು ಮೊರೆಯಿಡುತ್ತಾನೆ. ಪಂಚಾಯ್ತಿಯ ಮೂವರು ಸದಸ್ಯರು ದಂಪತಿಯನ್ನು ವಿಚಾರಣೆ ಮಾಡಿದಾಗ “ಪಾತ್ರೆಯನ್ನು ಇವರು ಕೊಟ್ಟಿದ್ದು ನಿಜ. ಆದರೆ ಅದು ಇಟ್ಟ ಜಾಗದಿಂದ ಕಣ್ಮರೆಯಾಗಿದೆ. ಈಗ ಇವರು ಹೇಳಿದಂತೆ ನಡೆದುಕೊಳ್ಳುತ್ತೇವೆ” ಎಂದು ನುಡಿಯುತ್ತಾರೆ. ಆಗ ಮಾರುಡುಗೆಯಲ್ಲಿದ್ದ ತಿರುಕ ಶಿವನು ದಂಪತಿಗೆ ಒಂದು ಪ್ರಮಾಣವನ್ನು ಮಾಡಲು ಹೇಳುತ್ತಾನೆ. ತಿರುನೀಲಕಂಟ ದಂಪತಿ ಹತ್ತಿರದಲ್ಲಿರುವ ನೀರಿನ ಕೊಂಡವೊಂದರಲ್ಲಿ ನಿಂತು, ಒಬ್ಬರೊಬ್ಬರ ಕಯ್ಯನ್ನು ಹಿಡಿದುಕೊಂಡು “ತಾವು ಪಾತ್ರೆಯನ್ನು ಕದ್ದಿಲ್ಲ” ಎಂದು ಪಂಚಾಯ್ತಿಕಟ್ಟೆಯಲ್ಲಿ ನೆರೆದಿರುವ ಜನಗಳ ಮುಂದೆ ಹೇಳಿ, ಒಮ್ಮೆ ನೀರಿನಲ್ಲಿ ಮುಳುಗಿ ಏಳಬೇಕೆಂಬ ಕಟ್ಟನ್ನು ಹಾಕುತ್ತಾನೆ.

ಇದನ್ನು ಆಚರಿಸಲಾಗದೆ ಗಂಡಹೆಂಡತಿ ಇಕ್ಕಟ್ಟಿಗೆ ಗುರಿಯಾಗುತ್ತಾರೆ. ಇತ್ತ ಹೆಂಡತಿಯ ಕಯ್ಯನ್ನು ಹಿಡಿದರೆ ಆಕೆಯು ಶಿವನ ಹೆಸರಿನಲ್ಲಿಟ್ಟಿರುವ ಆಣೆಯನ್ನು ಮೀರಿ ಶಿವನಿಗೆ ಅಪಚಾರವನ್ನು ಮಾಡಿದಂತಾಗುತ್ತದೆ. ಅತ್ತ ಕಯ್ಯನ್ನು ಹಿಡಿಯದಿದ್ದರೆ ಪಂಚಾಯ್ತಿಯಲ್ಲಿ ನೆರೆದ ಜನತೆಯ ಮುಂದೆ ಪಾತ್ರೆಯನ್ನು ಕದ್ದ ಕಳ್ಳರು ತಾವೆಂದು ಒಪ್ಪಿಕೊಂಡಂತಾಗುತ್ತದೆ. ಇಂತಹ ಇಬ್ಬಗೆಯ ತೊಳಲಾಟದಲ್ಲಿ ತುಸುಕಾಲ ಒದ್ದಾಡಿದ ದಂಪತಿ, ಕಟ್ಟಕಡೆಗೆ ತಮ್ಮ ಮಾನ ಹೋದರೂ ಚಿಂತೆಯಿಲ್ಲ ಒಂದು ವೇಳೆ ಜೀವ ಹೋಗುವ ಗಳಿಗೆ ಎದುರಾದರೂ ಶಿವನಾಣೆ ಮುರಿಯದಂತಿರಬೇಕೆಂದು ತೀರ‍್ಮಾನಿಸಿ, ಏನೊಂದನ್ನು ಮಾತನಾಡದೆ ಸುಮ್ಮನೆ ನಿಲ್ಲುತ್ತಾರೆ. ಆಗ ಶಿವನು ಮತ್ತೊಂದು ಬಗೆಯಲ್ಲಿ ಪ್ರಮಾಣವನ್ನು ಮಾಡಲು ಸೂಚಿಸುತ್ತಾನೆ.

ಒಂದು ಲಾತಕೋಲಿನ (ಸನ್ಯಾಸಿಗಳು ಕುಳಿತುಕೊಂಡಾಗ ತಮ್ಮ ಕಯ್ಯನ್ನು ಊರಿಕೊಳ್ಳಲು ಬಳಸುವ ಕೋಲು) ಎರಡು ತುದಿಗಳನ್ನು ಗಂಡ ಒಂದು ಕಡೆ, ಹೆಂಡತಿ ಒಂದು ಕಡೆ ಹಿಡಿದುಕೊಂಡು, ತಾವು ಪಾತ್ರೆಯನ್ನು ಕದ್ದಿಲ್ಲವೆಂದು ಹೇಳುತ್ತಾ, ನೀರಿನ ಕೊಂಡದಲ್ಲಿ ಮುಳುಗಿ ಮೇಲೇಳಬೇಕೆಂದು ಹೇಳಿದಾಗ, ತಿರುನೀಲಕಂಟ ದಂಪತಿಯು ಆನಂದದಿಂದ ಒಪ್ಪಿಕೊಂಡು, ಅಂತೆಯೇ ಪ್ರಮಾಣ ಮಾಡಲು ಅಡಿಯಿಡುತ್ತಾರೆ. ನೀರಿನಲ್ಲಿ ಮುಳುಗುವಾಗ ತೊಂಬತ್ತರ ವಯಸ್ಸಿನ ಮುದಿಯರಾಗಿದ್ದ ಅವರು, ನೀರಿನಿಂದ ಮೇಲೆದ್ದಾಗ ಹದಿನಾರರ ಹರೆಯದವರಾಗಿರುತ್ತಾರೆ. ಶಿವನ ಒಲವಿಗೆ ಪಾತ್ರರಾದ ಈ ಗಂಡಹೆಂಡತಿಯು ಮತ್ತೆ ದಾಂಪತ್ಯದ ಸವಿಯನ್ನು ಪಡೆದು ಬಾಳುತ್ತಾರೆ.

ಈ ಕತೆಯಲ್ಲಿನ ಪವಾಡಗಳಾದ ಪೆಟ್ಟಿಗೆಯಲ್ಲಿದ್ದ ಪಾತ್ರೆಯು ಕಣ್ಮರೆಯಾಗುವ ಮತ್ತು ಮುಪ್ಪಿನ ದಂಪತಿಯು ಹರೆಯದವರಾಗುವ ಪ್ರಸಂಗಗಳನ್ನು ಕಾವ್ಯಲೋಕದಲ್ಲಿನ ರೂಪಕಗಳೆಂದು ಪರಿಗಣಿಸಿ, ಆಣೆಪ್ರಮಾಣಗಳು ಸಾಮಾಜಿಕ ವ್ಯಕ್ತಿಗಳ ಜೀವನದಲ್ಲಿ ಯಾವ ಯಾವ ಬಗೆಯ ಪರಿಣಾಮಗಳನ್ನು ಬೀರುತ್ತಿದ್ದವು ಎಂಬುದನ್ನು ಗಮನಿಸಬೇಕು. ಸಮಾಜದಲ್ಲಿನ ವ್ಯಕ್ತಿಗಳ ನಡೆನುಡಿಗಳನ್ನು ಹತೋಟಿಯಲ್ಲಿಡಬಲ್ಲ ಕಸುವನ್ನು ಆಣೆಪ್ರಮಾಣಗಳು ಪಡೆದಿದ್ದವು. ಮಾನವರು ಇಡುವ ಆಣೆ ಮಾಡುವ ಪ್ರಮಾಣಗಳೆಲ್ಲಕ್ಕೂ ದೇವರು ಸಾಕ್ಶಿಯಾಗಿರುತ್ತಾನೆಂಬ ನಂಬಿಕೆಯು ಜನಮನದಲ್ಲಿ ಆಳವಾಗಿ ಬೇರೂರಿತ್ತು. ಆದ್ದರಿಂದಲೇ ವ್ಯಕ್ತಿಗಳ ಸಾಮಾಜಿಕ ವ್ಯವಹಾರಗಳಲ್ಲಿ ಆಣೆಪ್ರಮಾಣಗಳು ಮನದೊಳಗಿನ ದನಿಯಾಗಿ ಕೆಲಸ ಮಾಡುತ್ತಿದ್ದುದನ್ನು ಇಂತಹ ಕಾವ್ಯ ಪ್ರಸಂಗಗಳ ಚಿತ್ರಣದಲ್ಲಿ ಕಾಣಬಹುದು.

ನಮ್ಮ ಜನಪದ ಸಾಹಿತ್ಯದಲ್ಲಿ “ಗೋವಿನ ಹಾಡು” ಎಂಬ ಕಾವ್ಯ ತುಂಬಾ ಜನಮೆಚ್ಚುಗೆಯನ್ನು ಪಡೆದಿದೆ. ಪುಣ್ಯಕೋಟಿ ಎಂಬ ಹಸು ಕಾಡಿನ ನಡುವೆ ಅರ‍್ಬುತನೆಂಬ ಹುಲಿಯ ಬಾಯಿಗೆ ಸಿಕ್ಕಿ ಬಿದ್ದು, ಬಲಿಯಾಗುವ ಮುನ್ನ ಹುಲಿಯ ಮುಂದೆ ತನ್ನ ಕೊನೆಯ ಆಸೆಯೊಂದನ್ನು ಈ ರೀತಿ ತೋಡಿಕೊಳ್ಳುತ್ತದೆ.

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಶದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ.

ಹಸುವಿನ ಮಾತನ್ನು ನಂಬದೆ ಹುಲಿಯು ತನ್ನ ಅನುಮಾನವನ್ನು ಹೊರಹಾಕುತ್ತದೆ.

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆ ಎಂದಿತು.

ಆಗ ಪುಣ್ಯಕೋಟಿ ಹಸು ತಾನು ಎಂದಿಗೂ ಆಡಿದ ಮಾತಿಗೆ ತಪ್ಪಿ ನಡೆಯುವುದಿಲ್ಲವೆಂದು ಹೇಳುತ್ತಾ, ತನ್ನ ಮಾತುಗಳಿಗೆ ಪೂರಕವಾಗಿ ಆಣೆಗಳನ್ನಿಡುತ್ತದೆ.

ಮೂರು ಮೂರ‍್ತಿಗಳಾಣೆ ಬರುವೆನು
ಸೂರ‍್ಯ ಚಂದ್ರಮರಾಣೆ ಬರುವೆನು
ದಾರಿಣೀ ದೇವಿಯಾಣೆ ಬರುವೆನು
ಎಂದು ಬಾಶೆಯ ಮಾಡಿತು.

ಕಂದನನ್ನು ಕಾಣುವ ಹಂಬಲದಲ್ಲಿರುವ ಪುಣ್ಯಕೋಟಿಯು ಹುಲಿಯ ಮನದಲ್ಲಿನ ಅನುಮಾನವನ್ನು ಹೋಗಲಾಡಿಸಿ, ತನ್ನ ಮಾತುಗಳ ಬಗ್ಗೆ ನಂಬಿಕೆಯನ್ನು ಮೂಡಿಸಲೆಂದು ತಾನು ಇಡುತ್ತಿರುವ ಆಣೆಗಳಿಗೆ ಒತ್ತಾಸೆಯಾಗಿ ಸಾಕ್ಶಿಗಳನ್ನು ಹೆಸರಿಸುತ್ತದೆ.

ಅಶ್ಟದಿಕ್ಪಾಲಕರು ಸಾಕ್ಶಿ
ಶ್ರೇಶ್ಟ ನವಗ್ರಹ ತಾರೆ ಸಾಕ್ಶಿ
ಸ್ರುಶ್ಟಿಯಾ ಪತಿವ್ರತೆಯರ ಸಾಕ್ಶಿ
ನಿಶ್ಟೆಯಿಂದಲಿ ಕೇಳಯ್ಯಾ.

ಆದಿಶೇಶಾನಿಲರು ಸಾಕ್ಶಿ
ವೇದಶಾಸ್ತ್ರ ಪುರಾಣ ಸಾಕ್ಶಿ
ಮೋದದಿಂದಾಕಾಶವಗ್ನಿಯು
ಸಾಕ್ಶಿ ಸತ್ಯವು ಕೇಳಯ್ಯ.

ಪುಣ್ಯಕೋಟಿಯ ಈ ಬಗೆಯ ನುಡಿಗಳಿಂದ ಮನಕರಗಿದ ಅರ‍್ಬುತನು ಅದಕ್ಕೆ ದನದ ದೊಡ್ಡಿಯಲ್ಲಿರುವ ಕಂದನನ್ನು ನೋಡಿಬರಲು ಒಪ್ಪಿಗೆಯನ್ನು ನೀಡುತ್ತದೆ. ಕಂದನಿಗೆ ಹಾಲುಣಿಸಿ, ಹಿತನುಡಿಗಳನ್ನು ಹೇಳಿ, ಹುಲಿಯ ಬಳಿಗೆ ಬಲಿಯಾಗಲು ಹೊರಟಾಗ, ಮತ್ತೆ ಹೋಗದಂತೆ ಕಂದನು ಇನ್ನಿಲ್ಲದಂತೆ ಮೊರೆಯಿಡುತ್ತದೆ. ಆದರೆ ಪುಣ್ಯಕೋಟಿಯ ಪಾಲಿಗೆ ಜೀವದ ಉಳಿವಿಗಿಂತ, ಕೊಟ್ಟಿರುವ ಮಾತಿಗೆ ತಪ್ಪಿ ನಡೆಯದ ನಿಲುವು ದೊಡ್ಡದಾಗಿರುತ್ತದೆ. ತನ್ನ ಕಂದನನ್ನು ಒಲವಿನಿಂದ ನೇವರಿಸುತ್ತಾ-

ಕೊಟ್ಟ ಬಾಶೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಶ್ಟೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಕಂಡಿತ.

ಸತ್ಯವೇ ನಮ್ಮ ತಾಯಿತಂದೆಯು
ಸತ್ಯವೇ ನಮ್ಮ ಬಂದುಬಳಗವು
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಜಗದೀಶನು.

ಕಂದನನ್ನು ತೊರೆದು, ಹುಲಿಯ ಬಳಿಗೆ ಪುಣ್ಯಕೋಟಿಯು ಬಂದಾಗ, ಆಡಿದ ಮಾತನ್ನು ಉಳಿಸಿಕೊಂಡ ಪುಣ್ಯಕೋಟಿಯ ಸತ್ಯದ ಒಲವನ್ನು ಕಂಡು ಅರ‍್ಬುತನು ಅಚ್ಚರಿಗೊಳ್ಳುತ್ತದೆ. ಹಸುವನ್ನು ಕೊಂದು ತಿನ್ನಬೇಕೆಂಬ ತನ್ನ ಒಡಲಿನ ಆಸೆಯನ್ನೇ ದೂರಮಾಡಿ, ದೊಡ್ಡಬಂಡೆಯ ಮೇಲಿಂದ ಕೆಳಕ್ಕೆ ಬಿದ್ದು ಹುಲಿಯು ಸಾವನ್ನಪ್ಪುತ್ತದೆ.

ಪ್ರಾಣಿಗಳ ರೂಪಕದ ಈ ಪ್ರಸಂಗದಲ್ಲಿ ನಿರೂಪಣೆಗೊಂಡಿರುವ ಸನ್ನಿವೇಶವನ್ನು ಗಮನಿಸಿದಾಗ, ನಮ್ಮ ಜನಪದರ ದಿನನಿತ್ಯದ ಜೀವನದ ಆಗುಹೋಗುಗಳಲ್ಲಿ ಆಣೆಪ್ರಮಾಣಗಳು ಯಾವ ಬಗೆಯ ನಡೆನುಡಿಗಳಿಗೆ ಪ್ರೇರಣೆಯಾಗಿದ್ದವು ಎಂಬುದು ತಿಳಿದುಬರುತ್ತದೆ. ಆಪತ್ತು ಬಂದೊದಗಿದಾಗ ಇಡುತ್ತಿದ್ದ ಆಣೆಪ್ರಮಾಣಗಳು…ಬಂದು ಎರಗಲಿರುವ ಸಂಕಟದಿಂದ ಪಾರಾಗುವ ಉಪಾಯದ ಮಾರ‍್ಗವಾಗಿರಲಿಲ್ಲ…ಸತ್ಯವಾಗಿ/ದರ‍್ಮವಾಗಿ/ನ್ಯಾಯವಾಗಿ ತಮಗೆ ಸರಿಯೆನಿಸಿದ್ದನ್ನು ಮಾಡುವುದಕ್ಕಾಗಿ ಇಲ್ಲವೇ ಸಾಬೀತು ಪಡಿಸುವುದಕ್ಕಾಗಿ ತಮ್ಮ ವ್ಯಕ್ತಿತ್ವವನ್ನೇ ಪಣವಾಗಿ ಒಡ್ಡುವ ನಡೆನುಡಿಯಾಗಿದ್ದವು. ಜನಪದರ ಬದುಕಿನಲ್ಲಿ ಬಹುತೇಕ ಮಂದಿಯ ಪಾಲಿಗೆ ತಮ್ಮ ಜೀವನದ ಇತರ ಗಳಿಕೆಗಿಂತ ಹೆಚ್ಚಾಗಿ ಜೀವನದ ಏಳು-ಬೀಳುಗಳ ಸಮಯದಲ್ಲಿ ಇಟ್ಟ ಆಣೆ/ಕೊಟ್ಟ ಮಾತು/ಮಾಡಿದ ಪ್ರಮಾಣಗಳಿಗೆ ಹಾನಿತಟ್ಟದಂತೆ ಬಾಳಬೇಕೆಂಬ ಇಚ್ಚಾಶಕ್ತಿಯೇ ದೊಡ್ಡದಾಗಿತ್ತು ಎಂಬುದನ್ನು ಈ ಜನಪದ ಕಾವ್ಯ ಹೇಳುತ್ತಿದೆ.

ಕ್ರಿ.ಶ.10ನೆಯ ಶತಮಾನದಲ್ಲಿದ್ದ ಪಂಪ ಕವಿಯು ರಚಿಸಿರುವ “ವಿಕ್ರಮಾರ‍್ಜುನ ವಿಜಯ” ಎಂಬ ಕಾವ್ಯದಲ್ಲಿ ಬರುವ ಒಂದು ಪ್ರಸಂಗ: ಹಸ್ತಿನಾಪುರವನ್ನು ಆಳುತ್ತಿದ್ದ ಶಂತನು ಚಕ್ರವರ‍್ತಿಯು ಒಮ್ಮೆ ಕಾಡಿನಲ್ಲಿ ಬೇಟೆಯಾಡುತ್ತ ಬರುತ್ತಿರುವಾಗ ಯೋಜನಗಂದಿಯೆಂಬ ತರುಣಿಯ ಚೆಲುವಿಗೆ ಮನಸೋತು, ಅವಳ ಕಯ್ಯನ್ನು ಹಿಡಿದುಕೊಂಡುದನ್ನು ಪಂಪಕವಿಯು “ದಿಬ್ಯಂಬಿಡಿವಂತೆವೋಲ್” ಎಂದು ಉಪಮೆಯೊಂದರ ಮೂಲಕ ಬಣ್ಣಿಸಿದ್ದಾನೆ(ಮೊದಲನೆಯ ಆಶ್ವಾಸ-ಪದ್ಯ 70). ನಡುವಯಸ್ಸಿನ ಶಂತನು ಚಕ್ರವರ‍್ತಿಗೆ ಬೆಳೆದು ತರುಣನಾಗಿರುವ ಗಾಂಗೇಯನೆಂಬ ಒಬ್ಬ ಮಗನಿದ್ದ. ಇಶ್ಟು ವಯೋಮಾನದ ಶಂತನು ಹರೆಯಕ್ಕೆ ಅಡಿಯಿಟ್ಟಿರುವ ಯೋಜನಗಂದಿಯ ಕಯ್ಯನ್ನು ಹಿಡಿಯುವುದರಿಂದ ಕುರುಕುಲದ ರಾಜವಂಶವು ಮುಂದಿನ ದಿನಗಳಲ್ಲಿ ನಾನಾ ಬಗೆಯ ತೊಡಕುಗಳಿಗೆ ಗುರಿಯಾಗಲಿದೆ ಎಂಬುದನ್ನು ಕವಿಯು “ದಿಬ್ಯಂ+ಪಿಡಿವ+ಅಂತೆ+ವೋಲ್= ದಿಬ್ಯವನ್ನು ಹಿಡಿದಂತೆ ಆಯಿತು” ಎಂಬ ಉಪಮೆಯ ಮೂಲಕ ಸೂಚಿಸಿದ್ದಾನೆ.

‘ ದಿಬ್ಯ’ ಎನ್ನುವುದು ಪ್ರಮಾಣವನ್ನು ಮಾಡುವ ಒಂದು ಆಚರಣೆ. ಇದು ಪ್ರಾಚೀನ ಕಾಲದ ನ್ಯಾಯ ನೀಡಿಕೆಯ ಸನ್ನಿವೇಶದಲ್ಲಿ ಆಚರಿಸಲಾಗುತ್ತಿದ್ದ ಒಂದು ಕಟ್ಟಳೆಯಾಗಿತ್ತು. ವ್ಯಕ್ತಿಯೊಬ್ಬನು/ಳು ಗುರುತರವಾದ ತಪ್ಪು/ಕೇಡನ್ನು ಮಾಡಿದ ಆರೋಪಕ್ಕೆ ಗುರಿಯಾದಾಗ, ಅವನ/ಅವಳ ಮೇಲಣ ಆರೋಪವನ್ನು ರುಜುವಾತುಪಡಿಸಲು ಯಾವುದೇ ಬಗೆಯ ಸಾಕ್ಶಿ/ಪುರಾವೆ/ಇನ್ನಿತರ ಆದಾರಗಳು ದೊರೆಯದಿದ್ದಾಗ, ಕಟ್ಟಕಡೆಯದಾಗಿ ನ್ಯಾಯ ಮಂಡಲಿಯು ಆರೋಪಿಯನ್ನು ದಿಬ್ಯದ ಆಚರಣೆಗೆ ಒಡ್ಡುತ್ತಿತ್ತು. ದಿಬ್ಯದ ಆಚರಣೆಯ ರೀತಿಗಳು ಏಳು/ಒಂಬತ್ತು/ಹತ್ತು ಬಗೆಗಳಲ್ಲಿ ಇದ್ದುವೆಂದು ಯಾಜ್ನವಲ್ಕ್ಯವೆಂಬ ಹೊತ್ತಿಗೆಯಲ್ಲಿ ಬಣ್ಣಿಸಲಾಗಿದೆ. ಅವುಗಳಲ್ಲಿ ಹೆಚ್ಚು ಬಳಕೆಯಲ್ಲಿದ್ದ ಆಚರಣೆಗಳೆಂದರೆ-ಬೆಂಕಿ/ನಂಜು/ಹಾವುಗಳನ್ನು ಬಳಸಿಕೊಂಡು ಮಾಡುವ ಆಚರಣೆಗಳು.

1) ಆರೋಪಕ್ಕೆ ಗುರಿಯಾದ ವ್ಯಕ್ತಿಯು ಚೆನ್ನಾಗಿ ಕಾದು ಕೆಂಪಾಗಿರುವ ಕಬ್ಬಿಣದ ಸಲಾಕೆಯೊಂದನ್ನು ಬರಿಗಯ್ಯಲ್ಲಿ ಹಿಡಿದುಕೊಂಡು, ತನ್ನ ಮೇಲಣ ಆರೋಪವನ್ನು ನಿರಾಕರಿಸಬೇಕು. ಈ ಸಮಯದಲ್ಲಿ ಆರೋಪಿಯ ಕಯ್ಯಿ ಸುಟ್ಟು/ಬೆಂದು ಗಾಸಿಯಾಗದಿದ್ದರೆ ಅವನ/ಅವಳ ಮೇಲೆ ಹೊರಿಸಿರುವ ಆರೋಪದಿಂದ ಬಿಡುಗಡೆಯಾಗುತ್ತಿತ್ತು.

2) ಮಡಕೆಯೊಂದರಲ್ಲಿ ವಿಶದ ಹಾವೊಂದನ್ನು ಬಿಟ್ಟು ಆರೋಪಿಯನ್ನು ಇಂತಿಶ್ಟು ಸಮಯ ಮಡಕೆಯೊಳಗೆ ಕಯ್ಯನ್ನು ಇಡಲು ಸೂಚಿಲಾಗುತ್ತಿತ್ತು. ಆರೋಪಿಯು ಮಡಕೆಯೊಳಗೆ ಕಯ್ಯಿಟ್ಟ ಸಮಯದಲ್ಲಿ ತನ್ನ ಮೇಲಣ ಆರೋಪ ಸುಳ್ಳೆಂದು ನುಡಿಯಬೇಕಿತ್ತು. ಈ ಸಮಯದಲ್ಲಿ ಹಾವು ಆರೋಪಿಯನ್ನು ಕಚ್ಚದಿದ್ದರೆ, ಅವನ/ಅವಳ ಮೇಲೆ ಹೊರಿಸಿರುವ ಆರೋಪದಿಂದ ಬಿಡುಗಡೆಯಾಗುತ್ತಿತ್ತು.

3)ಆರೋಪಿಗೆ ಬಟ್ಟಲೊಂದರಲ್ಲಿ ನಂಜನ್ನು ನೀಡಿ, ಅದನ್ನು ಕುಡಿಯಲು ಹೇಳುತ್ತಿದ್ದರು. ಆರೋಪಿಯು ತನ್ನ ಮೇಲಣ ಆರೋಪವನ್ನು ನಿರಾಕರಿಸುವ ನುಡಿಗಳನ್ನಾಡುತ್ತಾ ನಂಜನ್ನು ಕುಡಿಯಬೇಕಿತ್ತು. ನಂಜನ್ನು ಕುಡಿದ ನಂತರವೂ ಆರೋಪಿಯು ಸಾಯದೆ ಬದುಕಿ ಉಳಿದರೆ, ಅವನ/ಅವಳ ಮೇಲೆ ಹೊರಿಸಿರುವ ಆರೋಪದಿಂದ ಬಿಡುಗಡೆಯಾಗುತ್ತಿತ್ತು.

ಪ್ರಾಚೀನ ಕಾಲದ ಸಮಾಜದಲ್ಲಿ ನ್ಯಾಯನಿರ‍್ಣಯ ವ್ಯವಸ್ತೆಯ ಒಂದು ಆಚರಣೆಯಾಗಿದ್ದ ದಿಬ್ಯದ ಸಂಗತಿಗಳನ್ನು ನಾವು ಅಂದಿನ ಸಾಮಾಜಿಕ/ಆರ‍್ತಿಕ/ರಾಜಕೀಯ ಕಟ್ಟುಪಾಡುಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ, ದಿಬ್ಯದ ಆಚರಣೆಯು ಎಶ್ಟೊಂದು ಅಮಾನವೀಯ ಹಾಗೂ ಕ್ರೂರವಾಗಿತ್ತೆಂಬುದು ಮನದಟ್ಟಾಗುತ್ತದೆ. ಅಂದಿನ ಸಾಮಾಜಿಕ ಜೀವನವು ಜಾತಿಯ ಮೇಲು-ಕೀಳಿನ ಮೆಟ್ಟಿಲುಗಳಿಂದ ಕೂಡಿತ್ತು. ಒಟ್ಟು ಜನಸಮುದಾಯದಲ್ಲಿ ನೂರಕ್ಕೆ ಎಂಬತ್ತರಶ್ಟು ಮಂದಿ ಶೂದ್ರ ಮತ್ತು ಪಂಚಮವೆಂಬ ಕೆಳಜಾತಿಗೆ ಸೇರಿದವರೆಂಬ ಕಾರಣದಿಂದಲೇ ವಿದ್ಯೆ/ಸಂಪತ್ತು/ಅದಿಕಾರಗಳಿಂದ ವಂಚಿತರಾಗಿ ಕೀಳರಿಮೆಯಿಂದ ಬಾಳುತ್ತಿದ್ದರು. ಸಂಪತ್ತನ್ನು ಹೊಂದಿ ಮೆರೆಯುವ ಒಡೆಯರ ಮತ್ತು ಯಾವುದೇ ಸಂಪತ್ತಿಲ್ಲದೆ ದುಡಿಯುವ ಶ್ರಮಜೀವಿಗಳಾದ ಆಳುಗಳಿಂದ ಕೂಡಿದ ಊಳಿಗಮಾನ್ಯ ಪದ್ದತಿಯು ಸಮಾಜದ ಬಹುತೇಕ ಮಂದಿಯನ್ನು ಬಡತನದ ಅಂಚಿಗೆ ತಳ್ಳಿತ್ತು. ಊಳಿಗಮಾನ್ಯ ಪದ್ದತಿಯೆಂದರೆ ರಾಜ-ಪ್ರಜೆ ; ಯಜಮಾನ-ಆಳು ; ಗಂಡಸು-ಹೆಂಗಸು ; ಮೇಲುಜಾತಿ-ಕೆಳಜಾತಿ ; ಬಲ್ಲಿದ-ಬಡವ ಎಂಬುವರಲ್ಲಿ ರಾಜ/ಯಜಮಾನ/ಗಂಡಸು/ಮೇಲುಜಾತಿ/ಬಲ್ಲಿದ ಎಂಬ ವರ‍್ಗಕ್ಕೆ ಸೇರಿದವರ ಸೇವೆಯನ್ನು ಆಳು/ಪ್ರಜೆ/ಹೆಂಗಸು/ಕೆಳಜಾತಿ/ಬಡವ ವರ‍್ಗಕ್ಕೆ ಸೇರಿದವರು ಮಾಡಬೇಕೆಂಬ ಕಟ್ಟುಪಾಡುಗಳು. ವಂಶಪರಂಪರೆಯಿಂದ ಪಟ್ಟವೇರುತ್ತಿದ್ದ ರಾಜ/ಮಂಡಲಾದೀಶ/ಪಾಳ್ಳೇಗಾರರ ದಬ್ಬಾಳಿಕೆಯ ನಡೆನುಡಿಗಳು ಕೆಳಹಂತದಲ್ಲಿದ್ದ ಜನಸಮುದಾಯವನ್ನು ಸದಾಕಾಲ ತಮ್ಮ ಅಂಕೆಯಲ್ಲಿಟ್ಟುಕೊಂಡಿರುತ್ತಿದ್ದವು.

ಇಂತಹ ಸಾಮಾಜಿಕ ವ್ಯವಸ್ತೆಯ ಬದುಕಿನಲ್ಲಿ ಆರೋಪಕ್ಕೆ ಗುರಿಯಾಗುತ್ತಿದ್ದ ವ್ಯಕ್ತಿಗಳಲ್ಲಿ ಬಹುತೇಕ ಮಂದಿ ಕೆಳಹಂತಕ್ಕೆ ಸೇರಿದ ಬಡವರೇ ಆಗಿರುತ್ತಿದ್ದರು. ಜಾತಿಬಲ/ಹಣಬಲ/ಅದಿಕಾರದ ಬಲವಿಲ್ಲದ ವ್ಯಕ್ತಿಗಳು ಮರುಮಾತನಾಡಲಾಗದೆ ದಿಬ್ಯದ ಆಚರಣೆಗೆ ಬಲಿಯಾಗಲೇಬೇಕಿತ್ತು. ಏಕೆಂದರೆ ಕಾದ ಕಬ್ಬಿಣದ ಸಲಾಕೆಯನ್ನು ಹಿಡಿದುಕೊಂಡಾಗ, ಹಿಡಿದುಕೊಂಡವರ ಕಯ್ಯಿ ಸುಟ್ಟೇಸುಡುತ್ತದೆ ; ವಿಶದ ಹಾವು ಇರುವ ಮಡಕೆಯೊಳಕ್ಕೆ ಕಯ್ಯಿಟ್ಟಾಗ, ಹಾವು ಕಚ್ಚೇಕಚ್ಚುತ್ತದೆ ; ವಿಶವನ್ನು ಕುಡಿದಾಗ ಸಾವು ಬಂದೇ ಬರುತ್ತದೆ . ಈ ಹಿನ್ನೆಲೆಯಲ್ಲಿ ದಿಬ್ಯದ ಆಚರಣೆಯನ್ನು ಗಮನಿಸಿದಾಗ ಪ್ರಾಚೀನ ಕಾಲದಲ್ಲಿದ್ದ ಅದಿಕಾರಸ್ತ ಸಮುದಾಯದವರು ಬಡವರ/ಶ್ರಮಜೀವಿಗಳ/ಹೆಂಗಸರ ಮೇಲೆ ತಾವು ನಡೆಸುತ್ತಿದ್ದ ದಬ್ಬಾಳಿಕೆ/ತುಳಿತ/ದೋಚುವ ಕೆಲಸಗಳನ್ನು ಯಾವ ಅಡೆತಡೆಗಳಲ್ಲಿದೆ ಮುಂದುವರಿಸಿಕೊಂಡು ಹೋಗಲು ನ್ಯಾಯವಿತರಣೆಯ ಹೆಸರಿನಲ್ಲಿ ಮಾಡಿಕೊಂಡಿದ್ದ ಒಂದು ಕ್ರೂರಪದ್ದತಿಯೇ ದಿಬ್ಯವೆಂದು ಹೇಳಬಹುದು. ಇಂದು ನಮ್ಮ ಕಾಲದಲ್ಲಿಯೂ ನಾನಾ ಬಗೆಯ ಆರೋಪಗಳಿಗೆ ಗುರಿಯಾಗಿ, ದೇವರ ಮುಂದೆ ಇಲ್ಲವೇ ಪ್ರಾಣಿಗಳನ್ನು ಮತ್ತು ವಸ್ತುಗಳನ್ನು ಹಿಡಿದುಕೊಂಡು ಪ್ರಮಾಣವನ್ನು ಮಾಡಲೇಬೇಕಾದ ಇಕ್ಕಟ್ಟಿಗೆ ಒಳಗಾಗುವವರಲ್ಲಿ ಹೆಚ್ಚಿನ ಮಂದಿ ಸಾಮಾಜಿಕವಾಗಿ ಮತ್ತು ಹಣಕಾಸಿನಲ್ಲಿ ಕೆಳಹಂತದವರಾಗಿರುವುದನ್ನು ನಾವು ಕಾಣುತ್ತೇವೆ.

( ಚಿತ್ರಸೆಲೆ: whotalking.com ) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks