ಪತ್ತೇದಾರಿ ಕತೆ: ಪಾರ‍್ಕಿನಲ್ಲಿ ಕೊಲೆ

– ಬಸವರಾಜ್ ಕಂಟಿ.

park

ಕಂತು – 1

ಯಾಕೋ ಇಂದು ಕಬ್ಬನ್ ಪಾರ‍್ಕಿನಲ್ಲಿ ಬೆಳ್ಳಂಬೆಳಗ್ಗೆ ಓಡಾಡಬೇಕು ಎನಿಸಿ ಆರು ಗಂಟೆಗೇ ಹೊರಟೆ. ಹದಿನಯ್ದು ನಿಮಿಶದಲ್ಲಿ ಅಲ್ಲಿಗೆ ಸೇರಿ, ಓಡುತ್ತಾ, ಅಲ್ಲಲ್ಲಿ ಕುಳಿತುಕೊಳ್ಳುತ್ತಾ, ಮತ್ತೆ ಓಡುತ್ತಾ ಇದ್ದೆ. ಚಳಿಗಾಲದ ದಿನವಿದ್ದರೂ ಓಡಾಡುವ ಜನರು ಕಮ್ಮಿಯಿರಲಿಲ್ಲ. ಎಳೆಬಿಸಿಲು ನೆಲಕ್ಕೆ ಸದ್ದಿಲ್ಲದೆ ಮುತ್ತಿಕ್ಕುತ್ತಿತ್ತು. ಬಿಸಿಲಿಗೆ ಮಯ್ಯೊಡ್ಡಬೇಕು ಎನಿಸಿ, ತುಸು ಜನಸಂದಣಿ ಕಮ್ಮಿಯಿರುವ ಜಾಗ ಹುಡುಕಿಕೊಂಡು ಹೊರಟಾಗ, ಎದುರಿಗೆ ಹುಡುಗಿಯೊಬ್ಬಳು ಓಡಿ ಬರುವುದು ಕಂಡಿತು. ಅವಳ ಓಟ ಮಾಮೂಲಿನಂತಿರದೆ, ಯಾವುದರಿಂದಲೋ ತಪ್ಪಿಸಿಕೊಂಡು ಓಡುತ್ತಿರುವಂತೆ ಅನಿಸಿತು. ಅವಳು ಹತ್ತಿರಬಂದಂತೆ, ಮುಕವೆಲ್ಲಾ ಬೆವರಿದ್ದು ಕಾಣಿಸಿ, ನನಗ್ಯಾಕೋ ಅನುಮಾನ ಬಂದು, ತಕ್ಶಣ ಅವಳನ್ನು ತಡೆದು, ಗಟ್ಟಿ ದನಿಯಲ್ಲಿ ಕೇಳಿದೆ.

“ಯಾಕೆ ಹೆದರ‍್ಕೊಂಡು ಓಡಿ ಬರ‍್ತಾ ಇದಿರಾ? ನಾನು ಪೊಲೀಸ್. ಏನಿದ್ರು ನಿಜಾ ಹೇಳಿ”. ಉದ್ದವಾದ ಮುಕಕ್ಕೆ ಹೊಂದುವಂತೆ ನೀಳವಾದ ಮೂಗು, ಅಗಲವಲ್ಲದ ಹಣೆ, ಚಪ್ಪಟೆ ಗಲ್ಲ. ಬೆವರಿಗೆ ಹಸಿಯಾಗಿ ಕಣ್ಣುಗಳ ಮೇಲೆ ಬಿದ್ದಿದ್ದ ಮುಂಗುರುಳನ್ನು ಸರಿಸುತ್ತಾ, ಏನು ಹೇಳಬೇಕೆಂದು ಗೊತ್ತಾಗದೆ, ಸುದಾರಿಸಿಕೊಳ್ಳುವಂತೆ ಜೋರಾಗಿ ಉಸಿರಾಡತೊಡಗಿದಳು. ಮತ್ತೆ ಮತ್ತೆ ಮುಂಗುರುಳು ಸರಿಸಿದಳು. ಒಂದರ‍್ದ ನಿಮಿಶ ಬಿಟ್ಟು, ತಾನು ಓಡಿ ಬಂದ ಕಡೆಗೆ ಕಯ್ ತೋರಿಸುತ್ತಾ, “ಅಲ್ಲಿ… ಏನೋ ಇದೆ”. ಎಂದಳು.

“ಹುಲಿ ನಾ?” ಕೇಳಿದೆ. ಅವಳಿಗೆ ಸಿಟ್ಟು ಬಂದು ಬಯ್ಯಬೇಕು ಅಂತ ಅನಿಸಿತೆನೋ, ಆದರೆ ತಡೆಹಿಡಿದು, “ಅಲ್ಲಿ… ಯಾರೋ… ಸತ್ತಿರೊ ಹಾಗಿದೆ” ಅಂದಳು.

“ಓಹ್! ಎಲ್ಲಿ?”

“ಅಲ್ಲಿ… ಆ ಮರದ ಹಿಂದೆ”. ಅವಳು ತೋರಿಸುತ್ತಿದ್ದ ಗಿಡ ಸುಮಾರು ಅಯ್ವತ್ತು ಮೀಟರ್ ದೂರವಿತ್ತು.

“ಆ ಮಾವಿನ ಮರದ ಹಿಂದೆ ನಾ?”

“ಅದು ಯಾವ್ ಮರಾ ಅಂತಾ ಗೊತ್ತಿಲ್ಲ. ದಪ್ಪಗಿದೆಯಲ್ಲಾ ಅದೇ”

“ನೀವು ಮಾವಿನ ಹಣ್ಣು ತಿನ್ನೊಲ್ವಾ?”

ಅವಳಿಗೆ ಮತ್ತೆ ಸಿಟ್ಟು ಬಂತು. ಗುರಾಯಿಸಿದಳು. ನಾನೇ ಮಾತಾಡಿದೆ, “ನೋಡಿ, ನೀವೇ ಮೊದಲು ನೋಡಿರೊದ್ರಿಂದ ನೀವು ಹೋಗೋ ಹಾಗಿಲ್ಲ. ಬನ್ನಿ ಇಬ್ಬರೂ ಹೋಗಿ ನೋಡೋಣ”. ಅವಳು ಮನಸ್ಸಿಲ್ಲದೆ ನನ್ನನ್ನು ಹಿಂಬಾಲಿಸಿದಳು. ಅವಳು ಹೇಳಿದಂತೆ ಆ ಮರದ ಹಿಂದೆ ಗಂಟಲಿಗೆ ಚಾಕು ಚುಚ್ಚಿಕೊಂಡು, ಕುಂತ ಬಂಗಿಯಲ್ಲೇ ಒಬ್ಬ ಮಲಗಿದ್ದ. ಮರದ ಕಾಂಡಕ್ಕೆ ಅವನ ಬೆನ್ನು ಒರಗಿ, ಕಾಲುಗಳು ಚಾಚಿಕೊಂಡಿದ್ದವು. ಸುಮಾರು ಅರ‍್ದ ಅಡಿ ಉದ್ದವಿದ್ದ ಚಾಕು, ಅವನ ಗಂಟಲನ್ನು ಸೀಳಿ ಹಿಂದೆ ಬಂದು, ಗಿಡದ ಕಾಂಡಕ್ಕೆ ಚುಚ್ಚಿತ್ತು. ಬಾಯಿ ತೆರೆದು, ನಾಲಗೆ ಸ್ವಲ್ಪ ಹೊರ ಚಾಚಿತ್ತು. ಕತ್ತು ತುಸು ವಾಲಿ, ಕಣ್ಣುಗಳು ಮುಚ್ಚಿದ್ದವು. ನೋಡುವುದಕ್ಕೆ ಸಾದಾರಣ ಮನುಶ್ಯನಂತೆ ಕಾಣುತ್ತಿದ್ದ. ಕಪ್ಪಗಿನ ಬಣ್ಣ, ಎರಡು ವಾರದ ಗಡ್ಡ-ಮೀಸೆ, ಕೆದರಿದ ಕೂದಲು, ಅಗಲವಾದ ಹಣೆ, ದುಂಡಗಿನ ಮೂಗು. ಕಪ್ಪಗಿನ ಮಾಮೂಲಿ ಪ್ಯಾಂಟು, ಹಾಲಿನ ಬಣ್ಣದ ಅಂಗಿ ತೊಟ್ಟು, ಸಾದಾರಣ ಚಪ್ಪಲಿ ಹಾಕಿದ್ದ. ಪ್ಯಾಂಟಿನ ಕಿಸೆಯಲ್ಲಿ ಮೊಬಾಯಿಲು ಇರಬಹುದೆಂದು ಊಹಿಸಿದೆ, ಆದರೆ ಪೊಲೀಸರನ್ನು ಕರೆಯದೆ ಏನೂ ಮಾಡುವಂತಿರಲಿಲ್ಲ.

ಅವಳಡೆ ತಿರುಗಿ, “ನೋಡಿ, ನಾನು ಪೊಲೀಸರಿಗೆ ಪೋನ್ ಮಾಡ್ತೀನಿ. ಅವ್ರು ಬರೋವರ‍್ಗು ನೀವು ಹೋಗೋ ಹಾಗಿಲ್ಲ”, ಎಂದೆ.

“ಮತ್ತೆ ನೀವೇ ಪೊಲೀಸ್ ಅಂತ ಹೇಳಿದ್ರಿ?”

ಕಕ್ಕಾಬಿಕ್ಕಿಯಾದರೂ ತೋರಿಗೊಡದೆ, “ನಂ…ದು ಬೇರೆ ಏರಿಯಾ. ಏನೂ ಮಾಡೋಹಾಗಿಲ್ಲ. ರೂಲ್ಸೇ ಹಂಗೆ” ಎನ್ನುತ್ತಾ, ಬದಿಗೆ ಬಂದು 100 ಒತ್ತಿದೆ.

ಸುಮಾರು ಇಪ್ಪತ್ತು ನಿಮಿಶ ಕಳೆಯೊಹೊತ್ತಿಗೆ ಜನರ ಗುಂಪು ಸಾಕಶ್ಟು ಕೂಡಿತ್ತು. ಸಾಕು ಎನಿಸುವಶ್ಟು ಮೂಲೆಗಳಿಂದ ಹೆಣದ ತಿಟ್ಟಗಳನ್ನು ನನ್ನ ಮೊಬಾಯಿಲಿನಲ್ಲಿ ಸೆರೆಹಿಡಿದೆ. ಅಲ್ಲಿ ನೆರೆದಿದ್ದ ಒಂದಿಬ್ಬರೂ ತಿಟ್ಟಗಳನ್ನು ತೆಗೆದರು. ಜಾಗಿಂಗ್ ರಾಣಿ ಮಾತ್ರ ಯಾವಾಗ ಅಲ್ಲಿಂದ ಓಡಿ ಹೋಗಬಹುದೋ ಎಂಬಂತೆ ಕಾಯುತ್ತಾ ಕಲ್ಲಿನ ಕಟ್ಟೆ ಮೇಲೆ ಕೂತಿದ್ದಳು. ಒಬ್ಬ ಪೇದೆ ಜೊತೆ ಎಸ್. ಆಯ್ ಬಂದರು. ನನ್ನ ಗುರುತು ಹಿಡಿದು, “ಓಹ್! ನೀವು ಪುಲಕೇಶಿ ಅಲ್ವಾ?” ಎಂದರು.

“ಹೌದು”, ಎಂದೆ, ಹೆಮ್ಮೆಯ ನಗೆ ಬೀರಿ, ರಾಣಿಯ ಕಡೆ ನೋಡುತ್ತಾ. ಅವಳು ತಾತ್ಸಾರದ ನೋಟ ಬೀರಿದಳು.

“ಏನು… ತುಂಬಾ ದಿನದಿಂದ ಪತ್ತೆನೇ ಇರಲಿಲ್ಲ?” ಎಸ್. ಆಯ್ ಕೇಳಿದನು.

“ನಾನು ಬೆಂಗ್ಳೂರಲ್ಲಿರಲಿಲ್ಲಾ… ಲಂಡನ್ ಹೋಗಿದ್ದೆ. ಡೆರೆನ್ ಬ್ರೌನ್ ಅವರ ಹತ್ರ ಮೆಂಟಲಿಸಂ ಕಲಿಯೋಕೆ ಅಂತಾ”

“ಏನು… ಮೆಂಟಲಿಸಮ್ಮಾ? ಏನು ಹಂಗಂದ್ರೆ?”

“ಮೆಂಟಲ್ ತರಾ ಆಡೊವ್ರನ್ನಾ ನಿಬಾಯಿಸೋದು ಹೇಗೆ ಅನ್ನೋ ವಿದ್ಯೆ”, ಕಿಚಾಯಿಸಿದೆ.

“ಓಹ್! ಹೌದಾ…” ಆಸಾಮಿ ನಂಬಿ ಬಿಟ್ಟ.

ಹೆಣವನ್ನು ಎಲ್ಲ ದಿಕ್ಕಿನಿಂದಲೂ ನೋಡಿ, ಪೇದೆಗೆ ತಿಟ್ಟಗಳನ್ನು ತೆಗೆದುಕೊಂಡು ಮಹಜರ್ ಮಾಡಲು ಹೇಳಿ, ನನ್ನ ಬಳಿ ಬಂದ.

“ಯಾರು ಮೊದಲು ನೋಡಿದ್ದು? ನೀವೇನಾ?”

“ಇಲ್ಲಾ… ಅವ್ರು”, ಎಂದು ರಾಣಿಯೆಡೆಗೆ ಕಯ್ ಮಾಡಿದೆ.

ಅವಳು ಕುಳಿತ ಜಾಗಕ್ಕೆ ಹೋಗಿ, ಏನೇನೋ ಮಾತಾಡಿ, ಮರಳಿ ಬಂದ. ಅವನ ಹಿಂದೆ ಅವಳೂ ಬಂದಳು. ಕೂದಲು ಕೆದರಿ, ಅವಳ ಮುಕ ಇನ್ನೂ ಮಂಕಾಗಿತ್ತು. ಮೊದಲಿಗಿಂದ ಮುದ್ದಾಗಿ ಕಾಣ್ತಾಯಿದಾಳಾ ಹೇಗೆ ಅಂತ ನನ್ನ ಮನಸ್ಸು ಗೊಂದಲಕ್ಕೆ ಬಿದ್ದಿತು.

“ಬನ್ನಿ… ಸಹಿ ಮಾಡಿ, ನಿಮ್ಮ ಅಡ್ರೆಸ್, ಮೊಬಾಯಿಲ್ ನಂಬರ್ ಬರೀರಿ” ಎಂದನು ಎಸ್. ಆಯ್. ಅವಳು ಗೀಚಿ, ನನ್ನೆಡೆ ವಿಚಿತ್ರವಾದ ನೋಟ ಬೀರಿ ಅಲ್ಲಿಂದ ಹೊರಟು ಹೋದಳು. ಆ ನೋಟದಲ್ಲಿ ಸಿಟ್ಟಿತ್ತಾ ಅತವಾ ಅಸಹಾಯಕತೆ ಇತ್ತಾ ಎಂಬುದು ಗೊತ್ತಾಗಲಿಲ್ಲ. ಚೇ, ನಾನಿನ್ನೂ ಪಳಗಬೇಕು ಎಂದೊಕೊಂಡೆ. ನಂತರ, ಹೆಣದ ಕಿಸೆಯಲ್ಲಿದ್ದ ಮೊಬಾಯಿಲು, ಪರ‍್ಸು, ಒಂದೆರಡು ಚೀಟಿಗಳನ್ನು ಎತ್ತಿಕೊಂಡು ಅದನ್ನು ಆಸ್ಪತ್ರೆಗೆ ಸಾಗಿಸಿದರು. ಎಲ್ಲಾ ಮುಗಿದ ಮೇಲೆ, ಹೊರಡುತ್ತೇನೆ ಎಂದು ಎಸ್. ಆಯ್ ಹೇಳಿದಾಗ, ಪ್ರೀತಿಸಿದ ಹುಡುಗಿಯೇ ದೂರ ಹೋದಂತಾಯಿತು. ಯಾವ ಕೇಸೂ ಇಲ್ಲದೆ ಎರಡು ತಿಂಗಳಿದ್ದ ನಾನು, ಈಗ ಹೆಣ ನೋಡಿ ಮನಸ್ಸಿನಲ್ಲಿ ಆಸೆಯೊಂದು ಚಿಗುರಿತ್ತು.

“ಸರ್, ನಿಮ್ಮ ಅಬ್ಯಂತರ ಇಲ್ದಿದ್ರೆ, ನಿಮ್ಮ ಜೊತೆ ನಾನೂ ಈ ಕೇಸ್ ಇನ್ವೆಸ್ಟಿಗೇಶನ್ ಮಾಡ್ಬಹುದಾ?” ಎಂದು ದೀನನಾಗಿ ಬೇಡುವ ದನಿ ತೆಗೆದೆ.

“ಆಂ… ಆಂ…”, ಎಂದು ಯೋಚಿಸುತ್ತಾ, ಒಂದೆರಡು ಕ್ಶಣ ತಡೆದು, “ಆಪ್ ದಿ ರೆಕಾರ‍್ಡ್ ಮಾತ್ರ, ನಿಮ್ ಹೆಸರು ಎಲ್ಲೂ ಬರಬಾರ‍್ದು” ಎಂದು ದಿಟ್ಟಿಸಿ ನೋಡಿದ.

“ಸರಿ ಸರ‍್”, ಎಂದು ಅವನ ಕಯ್ ಕುಲುಕುತ್ತಾ, ಅವನ ಎದೆಯ ಮೇಲಿನ ಹೆಸರು ಪಟ್ಟಿಯನ್ನು ನೋಡಿದೆ- ಟಿ. ರಾಜೇಂದ್ರ.

******************************************************************

ಸ್ಟೇಶನ್ನಿನಲ್ಲಿ ಟೀ ಕುಡಿಯುತ್ತಾ, ಸತ್ತವನ ಮೊಬಾಯಿಲ್ ಜಾಲಾಡಲು ಮುಂದಾದ ರಾಜೇಂದ್ರ. ಆ ಮೊಬಾಯಿಲು ಲಾಕ್ ಆಗಿದ್ದರಿಂದ ಅದರಲ್ಲಿದ್ದ ಸಿಮ್ ತೆಗೆದು, ತನ್ನ ಬಳಿ ಇದ್ದ ಇನ್ನೊಂದು ಮೊಬಾಯಿಲಿಗೆ ಅದನ್ನು ಹಾಕಿ, ನನ್ನ ಮೊಬಾಯಿಲಿಗೆ ಕರೆ ಮಾಡಿದನು. ಸತ್ತ ವ್ಯಕ್ತಿಯ ನಂಬರ್ ಗೊತ್ತು ಮಾಡಿಕೊಂಡ ಮೇಲೆ, ಯಾರಿಗೋ ಪೋನ್ ಮಾಡಿ ಆ ನಂಬರಿನ ಕರೆಗಳ ವಿವರ ಕಳಿಸುವಂತೆ ಸೂಚಿಸಿದನು.

“ನಸುಕಿನಲ್ಲೇ ಕೊಲೆ ನಡೆದಿದೆ ಅನ್ಸುತ್ತೆ ಅಲ್ವಾ?” ಎಂದನು.

“ಹೌದು. ಅವನ ಮಯ್ಮೇಲೆ ಹೆಪ್ಪುಗಟ್ಟಿದ್ದ ರಕ್ತ ನೋಡಿದ್ರೆ ಸುಮಾರು ಒಂದು ಗಂಟೆಯಾಗಿತ್ತು ಅನ್ಸುತ್ತೆ… ಅಂದ್ರೆ ಕೊಲೆ ನಡೆದಿದ್ದು ಅಯ್ದೂವರೆ ಆಸುಪಾಸಿನಲ್ಲಿ”

ಅವನ ಪರ‍್ಸಿನಲ್ಲಿ ಆರುನೂರು ಚಿಲ್ಲರೆ ದುಡ್ಡು, ಪಾನ್ ಕಾರ‍್ಡ್, ಎಟಿಎಮ್ ಕಾರ‍್ಡ್ ಇದ್ದವು. ಅವನ ಕಿಸೆಯಲ್ಲಿ ಸಿಕ್ಕಿದ್ದ ಚೀಟಿಗಳು ಬಸ್ ಟಿಕೆಟ್, ಬಟ್ಟೆ ಅಂಗಡಿಯ ಬಿಲ್ ಆಗಿದ್ದವು. ಬಸ್ ಟಿಕೆಟಿನಲ್ಲಿ ತುಮಕೂರಿನಿಂದ ಬೆಂಗಳೂರಿಗೆ ಎರಡು ದಿನಗಳು ಹಿಂದೆ ಬಂದಿದ್ದ ವಿವರಗಳಿದ್ದವು. ಪಾನ್ ಕಾರ‍್ಡಿನಿಂದ ಅವನ ಹೆಸರು ಗುರುರಾಜ್ ಎಂದು ಗೊತ್ತಾಯಿತು, ವಯಸ್ಸು ಮೂವತ್ತಯ್ದು. ಟೀ ಕುಡಿದು ಮುಗಿಸುವಶ್ಟರಲ್ಲಿ ಎಸ್. ಆಯ್ ಗೆ ಕರೆ ಬಂದಿತು. ಅವನ ಮೊಬಾಯಿಲಿನಿಂದ ಹೆಚ್ಚಾಗಿ ಕರೆ ಹೋಗಿದ್ದ ಒಂದು ನಂಬರ್ ಬರೆದುಕೊಂಡನು ರಾಜೇಂದ್ರ.

“ಡೀಟೇಲ್ಸ್ ಆಮೇಲೆ ಮೇಲ್ ಮಾಡ್ತಾರಂತೆ. ಈಗ ಒಂದ್ ನಂಬರ್ ಸಿಕ್ಕಿದೆ. ಕಾಲ್ ಮಾಡೋಣ” ಎಂದು ಕರೆ ಮಾಡಿ, ತನ್ನ ಪರಿಚಯ ಹೇಳಿಕೊಂಡು ಮನೆಯ ವಿಳಾಸ ಪಡೆದುಕೊಂಡನು. ಆ ಕಡೆಯಿಂದ ಒಂದು ಹೆಣ್ಣು ದನಿ ಮಾತಾಡಿತಂತೆ. ನಾನು, ರಾಜೇಂದ್ರ, ಮತ್ತು ಒಬ್ಬ ಪೇದೆ ಸೇರಿ ಮೂವರೂ ಹೊರಟೆವು. “ಈ ಸಾವಿನ ಸುದ್ದಿ ಹೇಳೋದು ಅಂದ್ರೆ ಹೊಟ್ಟೆ ತೊಳಸಿದಂಗಾಗುತ್ತೆ” ಎಂದು ರಾಜೇಂದ್ರೆ ಬೇಸರ ತೋರಿದರೆ, ಅವಳ ಪ್ರತಿಕ್ರಿಯೆ ನೋಡಿ, ಮಿದುಳಿಗೆ ಕಸರತ್ತು ಸಿಗಬಹುದು ಎಂದು ನಾನು ಕಾಯುತ್ತಿದ್ದೆ.

ಪೀಣ್ಯದಲ್ಲಿದ್ದ ಮನೆ ತಲುಪಿದಾಗ ಬೆಳಗ್ಗೆ ಒಂಬತ್ತು ಗಂಟೆ. ಅವಳು ಬರಮಾಡಿಕೊಂಡಳು. ಒಂದು ಮಲಗುವ ಕೋಣೆಯ ಪುಟ್ಟ ಮನೆ. ನಾಲ್ಕೇ ನಾಲ್ಕು ಜನ ಕೂಡುವಶ್ಟು ನಡುಮನೆ, ಬಚ್ಚಲನ್ನೂ ತನ್ನಲ್ಲೇ ಮುಚ್ಚಿಕೊಂಡಿದ್ದ ಅಡುಗೆಮನೆ. ಕಳೆಗುಂದಿದ್ದ ಗೋಡೆಯ ಮೇಲೆ ಮಂಜುನಾತನ ತಿಟ್ಟ, ಮೂಲೆಯಲ್ಲಿ ಒಂದು ಜೊತೆ ಡಂಬಲ್ಸ್ ಇದ್ದವು. ಮನೆಯಲ್ಲಿ ಇನ್ನೊಬ್ಬ ಗಂಡಸಿದ್ದ. “ಇವರ‍್ಯಾರು?” ಕೇಳಿದ ರಾಜೇಂದ್ರ.

“ನನ್ ತಮ್ಮ ಸಾರ್, ವಿಕ್ರಮ್ ಅಂತಾ”, ಅವಳ ದನಿ ನಡುಗುತ್ತಿತ್ತು. ನಾನು ಅವಳನ್ನು ವಿವರವಾಗಿ ನೋಡಿದೆ. ಸಾದಾರಣ ಹಸಿರು ಸೀರೆಯಾದರೂ ಅದಕ್ಕೆ ಹೊಂದುವಂತ ಕುಪ್ಪಸ ತೊಟ್ಟಿದ್ದಳು. ಸುಮಾರು ಅಯ್ದು ಅಡಿ ಎತ್ತರ, ತೆಳ್ಳಗಿನ ಮೈಕಟ್ಟು , ಹೊಳೆಯುವ ಬಿಳಿ ಮೈಬಣ್ಣ. ಚೌಕದಂತೆ ಕಾಣುವ ಮುಕ, ಮುಕದ ಅಳತೆಗೆ ಹೇಳಿ ಮಾಡಿಸಿದಂತೆ ಹಣೆ, ಮೂಗು, ಗಲ್ಲ, ಗದ್ದಗಳಿದ್ದವು. ಅವಳು ತೊಟ್ಟಿದ್ದ ಉದ್ದನೆಯ ಕಿವಿಯೋಲೆ ಅವಳ ಮುಕದ ಕಳೆಯನ್ನು ಹೆಚ್ಚಿಸಿತ್ತು. ಅವಳ ತಮ್ಮನೆಡೆಗೆ ನೋಡಿದೆ. ಅವಳದೇ ಚಾಪು, ಆದರೆ ದಶ್ಟಪುಶ್ಟ ಮೈಕಟ್ಟು. ಮುಕ ಊದಿಕೊಂಡು ಮೂಗು ಮುಚ್ಚಿಕೊಂಡಿತ್ತು. ಮಾಂಸಕಂಡಗಳು ಕಾಣುವಂತೆ ಟೀಶರ‍್ಟ್ ತೊಟ್ಟಿದ್ದ. ಇದು ಜಿಮ್ ಹೋಗುವ ಬಾಡಿ ಅಂದುಕೊಂಡೆ.

“ಈ ಪಾನ್ ಕಾರ‍್ಡ್ ಯಾರದು?” ಎಂದು ತೋರಿಸಿದನು ರಾಜೇಂದ್ರ.

ಅವಳು ನೋಡಿ, “ನಮ್ ಯಜಮಾನ್ರದ್ದು. ನಿಮಗೆ ಹೇಗೆ…?” ಮಾತು ನುಂಗಿಕೊಂಡಳು. ನಾನು ಅವಳನ್ನೇ ದಿಟ್ಟಿಸುತ್ತಿದ್ದೆ. ಕಿಸೆಯಿಂದ ಮೊಬಾಯಿಲು ತೆಗೆದು, “ಇದು ನಿಮ್ಮ ಯಜಮಾನರ ಪೋನು… ಸ್ವಲ್ಪ ಲಾಕ್ ತೆಗೆದು ಕೊಡ್ತೀರಾ?” ಅವಳು ತೆಗೆದು ಕೊಟ್ಟಳು.

“ನೋಡಿ, ಬೇಜಾರು ಮಾಡ್ಕೋಬೇಡಿ. ನಿಮ್ ಯಜಮಾನ್ರು ಇವತ್ತು ಬೆಳಗ್ಗೆ ತೀರ‍್ಕೊಂಡಿದ್ದಾರೆ”. ಅವಳ ಮುಕ ಬಿಗಿಯಿತು. ಅಶ್ಟೊತ್ತೂ ಹೊಳೆಯುತ್ತಿದ್ದ ಕಣ್ಣಿನ ಪಾಪೆ ಕುಗ್ಗಿತು. ರಾಜೇಂದ್ರನೇ ಯಮನೋ ಏನೋ ಅನ್ನುವಂತೆ ದಿಟ್ಟಿಸಿದಳು. ಅವಳ ನೋಟ, ಅಲ್ಲಿದ್ದ ಮೌನ, ಅವನಿಗೆ ಇರಿಸುಮುರಿಸು ಮಾಡಿ, ತಾನು ಏನಾದರೂ ಮಾಡಬೇಕು ಎನಿಸಿ ಮಾತು ಮುಂದುವರೆಸಿದನು. “ಯಾರೋ ನಿಮ್ಮ ಗಂಡನ್ನಾ ಇವತ್ತು ಬೆಳಗ್ಗೆ ಕಬ್ಬನ್ ಪಾರ‍್ಕನಲ್ಲಿ ಕೊಲೆ ಮಾಡಿದ್ದಾರೆ”.

ಅವಳು ಕುಸಿದು ಕುಂತಳು. ಅವಳ ತಮ್ಮ ಸಹಾಯಕ್ಕೆ ಬಂದನು. ಬೊಗಸೆಯಲ್ಲಿ ಮುಕವಿಟ್ಟು ಬಿಕ್ಕಲು ಶುರುಮಾಡಿದಳು. ಅವಳ ಅಳು ಅಸಲಿಯೋ ನಕಲಿಯೋ ಎಂದು ಪತ್ತೆಹಚ್ಚಲು ಕಶ್ಟವಾಯಿತು. ಏನು ಮಾಡಬೇಕು ಎಂದು ಯೋಚಿಸಿ, ಒಂದರ‍್ದ ನಿಮಿಶ ಬಿಟ್ಟು ಕೇಳಿದೆ,
“ನಿಮಗೆ ಯಾರ್ ಮೇಲಾದ್ರು ಅನುಮಾನ ಇದ್ಯಾ?”

ಅವಳು ಮಾತಾಡಲಿಲ್ಲ. ಚೇ, ಎಂದುಕೊಂಡು ಸುಮ್ಮನಾಗುವಾಗಲೇ, ಅವಳು ಬಾಗಿದ ತಲೆಯಲ್ಲೇ, “ಅವಳೇ ಸಾಯ್ಸಿರೋದು. ನನಗೊತ್ತು… ಅವಳೇ ಸಾಯ್ಸಿರೋದು”

“ಯಾರು?” ಎಂದು ಕೇಳಿದೆ.

ಅವಳ ತಮ್ಮ ಮಾತಾಡಿದ, “ನಮ್ಮ ಬಾವನ ಮೊದಲನೇ ಹೆಂಡ್ತಿ ಸಾರ‍್”

ನಾನು ಮತ್ತು ಎಸ್. ಆಯ್ ಮುಕ-ಮುಕ ನೋಡಿಕೊಂಡೆವು. “ಅವರ ಹೆಸರೇನು? ಎಲ್ಲಿರೋದು?” ಎಂದೆ. ಆದರೆ ಅಶ್ಟೊತ್ತಿಗೆ ಅವಳ ಅಳು ಮಿತಿ ಮೀರಿತ್ತು. ಅವಳ ತಮ್ಮ ಗುಣುಗಿದ, “ನಾನ್ ಬಡಕೊಂಡೆ, ಅವ್ನ ಮದುವೆ ಆಗ್ಬೇಡಾ ಅಂತಾ… ಕೇಳಿದ್ಯಾ?”

ಕೇಸು ಇಂಟೆರಿಸ್ಟಿಂಗ್ ಆಗಿದೆ ಎಂದುಕೊಂಡೆ. ಆಗಲೇ ಎಸ್. ಆಯ್ ಮೇಲೆದ್ದು, ಅವಳ ತಮ್ಮನಿಗೆ, “ಅವರನ್ನಾ ಬಾಡಿ ಐಡೆಂಟಿಪಿಕೇಶನ್ ಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರಕೊಂಡು ಬನ್ನಿ. ಅಲ್ಲಿ ಈ ಕಾನ್ಸ್ಟೇಬಲ್ ಇರ‍್ತಾರೆ. ಬಾಡಿ ತಗೊಂಡ್ ಬಂದು ಎಲ್ಲಾ ಕಾರ‍್ಯ ಮುಗಿಸಿ. ನಾನು ಎರಡು ದಿನಾ ಆದ್ಮೇಲೆ ಹೇಳಿ ಕಳಿಸ್ತೀನಿ, ಸ್ಟೇಶನ್ ಬನ್ನಿ” ಎಂದು ಹೊರಡಲು ಸಜ್ಜಾದರು.

“ಸಾರ್, ಮೊದಲನೇ ಹೆಂಡ್ತಿ ಇರೋವಾಗ ಇವರಿಗೆ ಹೇಗೆ ಬಾಡಿ ಕೊಡೋಕ್ ಆಗುತ್ತೆ?”, ನಾನು ನೆನಪಿಸಿದೆ.

“ಹೌದಲ್ವಾ?” ರಾಜೇಂದ್ರ ಇಕ್ಕಟ್ಟಿಗೆ ಸಿಲುಕಿದರು. “ಸಾರಿ ಅಮ್ಮಾ… ನಾವ್ ಏನ್ ಮಾಡೋಕ್ ಆಗೊಲ್ಲ. ಬಾಡಿ ಅವರಿಗೇ ಕೊಡಬೇಕಾಗುತ್ತೆ”. ಅವಳ ತಮ್ಮನಿಗೆ, “ನೋಡಿ, ಆದಶ್ಟು ಬೇಗ ಇವರನ್ನಾ ಬಾಡಿ ಐಡೆಂಟಿಪಿಕೇಶನ್ ಗೆ ಕರಕೊಂಡು ಬನ್ನಿ” ಎಂದು ಹೇಳಿದರು.
ಹೊರಗಡೆ ಬಂದು ಪೇದೆಗೆ, “ಆಸ್ಪತ್ರೆಯಿಂದಾ ಅವರನ್ನಾ ಸೀದಾ ಸ್ಟೇಶನ್ನಿಗೆ ಕರಕೊಂಡು ಬಾ” ಎಂದು ಆರ‍್ಡರ್ ಮಾಡಿದರು. ನನಗೇಕೋ ಇನ್ನೊಂದಿಶ್ಟು ಕೇಳ್ವಿ ಕೇಳಬೇಕು ಎನಿಸಿದರೂ ಸುಮ್ಮನಾದೆ. ಅವಳ ಅಳು ಸುಳ್ಳು ಎಂದು ಎನಿಸಲಿಲ್ಲ. ಮನೆಯ ಹೊರಗೆ ಅಕ್ಕ-ಪಕ್ಕದವರು ಕೂಡಿದ್ದರು. ಅಲ್ಲಿದ್ದ ಒಂದಿಬ್ಬರಿಗೆ ಕೆಲವು ಕೇಳ್ವಿಗಳನ್ನು ಕೇಳಿ ಗಾಡಿ ಹತ್ತಿದೆವು.

******************************************************************

ಸಂಜೆಯ ಹೊತ್ತಿಗೆ ಅವರು ಸ್ಟೇಶನ್ನಿಗೆ ಬಂದರು. ಮೋಡಕವಿದು, ಹೊರಗೆ ತಂಪಾಗಿದ್ದರೂ ಸ್ಟೇಶನ್ನಿನ ಒಳಗೆ ಇದ್ದ ಕಾವೇ ಬೇರೆ. ಅಲ್ಲಿನ ವಾತಾವರಣ ಯಾವತ್ತೂ ಬಿಗುವಿನಿಂದಲೇ ಕೂಡಿರುತ್ತದೆ. ಪೊಲೀಸರಶ್ಟೇ ಅಲ್ಲದೇ, ಅಲ್ಲಿನ ಸಾಮಾನುಗಳು ಬಿಗುವಾಗಿರುತ್ತವೆ ಎಂದು ನನಗೆ ಎಶ್ಟೋ ಸಲ ಅನಿಸಿದೆ. ಕುರ‍್ಚಿ ಸರಿಸಿದರೆ ಅದೂ ಕೂಡ, ಪೊಲೀಸರ ದನಿಯಶ್ಟೇ ಗಡುಸಾಗಿ, ಗುರ್ ಅನ್ನುತ್ತದೆ. ಅಕ್ಕ-ತಮ್ಮನನ್ನು ಕೂರಿಸಿದ್ದ ಕೋಣೆಗೆ, ನಾನು, ಎಸ್.ಆಯ್, ಮತ್ತು ಒಬ್ಬ ಪೇದೆ ಹೋದೆವು. ಅವಳ ಮುಕ ಸಹಜವಾಗಿ ಇನ್ನೂ ಬಾಡಿತ್ತು.

“ನೋಡಿಮಾ, ನಾವ್ ಕೇಳಿದ್ದಕ್ಕೆ ಸ್ಪಶ್ಟವಾಗಿ ಉತ್ತರ ಕೊಡ್ಬೇಕು. ಸುಳ್ಳು ಹೇಳೊ ಗೋಜಿಗೆ ಹೋಗ್ಬೇಡಿ. ಇದು ಕೊಲೆ ಕೇಸು. ಸುಳ್ಳು ಹೇಳಿದ್ರೆ ನಿಮಗೆ ತೊಂದ್ರೆ ಹೆಚ್ಚು”, ಎಸ್. ಆಯ್.

ಅವಳು ಮೆದುವಾಗಿ ಗೋಣುಹಾಕಿದಳು.

“ನಿಮ್ಮ ಹೆಸರು?”

“ಅನಿತಾ”

“ಗುರುರಾಜ್ ಜೊತೆ ನಿಮ್ಮ ಮದುವೆ, ಅವರ ಮೊದಲನೇ ಹೆಂಡ್ತಿ ಕತೆ, ಎಲ್ಲಾನೂ ಹೇಳಿ”

“ಅವ್ರು ಪೀಣ್ಯಾದಲ್ಲಿರೋ ನಮ್ ಗಾರ‍್ಮೆಂಟ್ ಪ್ಯಾಕ್ಟರಿಗೆ ಮೂರು ವರ‍್ಶದ ಹಿಂದೆ ಸೇರ‍್ಕೊಂಡ್ರು. ಅವಾಗಾಗ್ಲೆ ಅವರಿಗೆ ಮದುವೆ ಆಗಿತ್ತು. ಅದು ನಂಗೂ ಗೊತ್ತಿತ್ತು. ಆದ್ರೂ ನಮ್ಮಿಬ್ಬರ ನಡುವೆ ಸಲುಗೆ ಜಾಸ್ತಿ ಆಗಿ, ಮದ್ವೆ ಮಾಡ್ಕೋಬೇಕು ಅನ್ಕೊಂಡ್ವಿ. ನನ್ ತಾಯಿ-ತಮ್ಮ ಬೇಡ ಅಂದ್ರೂ ಹಟಕ್ಕೆ ಬಿದ್ದು ಮದುವೆ ಆದೆ. ನಮ್ ಮದುವೆ ಆಗಿ ಹತ್ ಹತ್ರ ಈಗ ಒಂದ್ ವರ‍್ಶ ಆಯ್ತು. ಆದ್ರೆ ಈ ವಿಶ್ಯ ಅವರ ಮೊದಲನೇ ಹೆಂಡ್ತಿಗೆ ಗೊತ್ತಾಗದಂತೆ ನೋಡ್ಕೊಂಡ್ವಿ. ಅವಳು ಇರೋದು ತುಮಕೂರಿನಲ್ಲಿ. ಇವರು ಏನೋ ನೆಪ ಹೇಳಿ, ವಾರ ಪೂರ‍್ತಿ ಇಲ್ಲೇ ಇದ್ದು, ಬಾನುವಾರ ಮಾತ್ರ ಅಲ್ಲಿ ಹೋಗಿ ಬರ‍್ತಾಯಿದ್ರು. ಆದ್ರೆ ಈಗ ಈ ವಿಶ್ಯ ಅವ್ಳಿಗೆ ಗೊತ್ತಾಯ್ತು ಅನ್ಸುತ್ತೆ. ಅದಕ್ಕೆ…” ಎಂದು ಮಾತು ನಿಲ್ಲಿಸಿದಳು.

“ಹಮ್… ಅವರ ಮೊದಲನೇ ಹೆಂಡ್ತಿ ಹೆಸರು? ತುಮಕೂರಿನಲ್ಲಿ ಅವ್ರು ಎಲ್ಲಿರೋದು ಅಂತಾ ಗೊತ್ತಾ?”

“ಮಂಜುಳಾ ಅಂತಾ. ಅಡ್ರೆಸ್ ಗೊತ್ತು ಸಾರ‍್”

“ಸರಿ… ಇವತ್ತು ಬೆಳಗ್ಗೆ ಅಯ್ದರಿಂದ ಆರು ಗಂಟೆಗೆ ಏನ್ ಮಾಡ್ತಾ ಇದ್ರಿ?”

ಸ್ವಲ್ಪ ಯೋಚಿಸಿದವರಂತೆ ಮುಕಮಾಡಿ, “ನಾನು ಮಲಗಿದ್ದೆ ಸಾರ್. ಏಳೋದೇ ಆರ್ ಗಂಟೆಗೆ”.

“ನಿಮ್ ಯಜಮಾನ್ರು ಯಾಕೆ ನಿಮ್ ಜೊತೆ ಇರಲಿಲ್ಲ?”

ಹಿಂಜರಿದವರಂತೆ, “ಅವ್ರಿಗೆ ಇತ್ತೀಚೆಗೆ ಸ್ವಲ್ಪ ಕುಡಿಯೋ ಚಟ ಹತ್ಕೊಂಡಿತ್ತು ಸಾರ್. ಪ್ರೆಂಡ್ಸ್ ಜೊತೆ ಇದ್ದು ಬೆಳಗ್ಗೆ ಬರ‍್ತೀನಿ ಅಂತಾ ಹೇಳಿ ಹೋಗಿದ್ರು”

“ಓಹ್! ಹಮ್… ಈ ಪ್ರೆಂಡ್ಸ್ ಯಾರು ಅಂತಾ ನಿಮಗೆ ಗೊತ್ತಾ?” ಎಸ್. ಆಯ್.

“ಇಲ್ಲಾ ಸರ್, ನಾನು ಒಮ್ಮೆಯೂ ನೋಡಿಲ್ಲ”

ನನ್ನೆಡೆ ನೋಡುತ್ತಾ, “ಇನ್ನೇನಾದ್ರೂ ಕೇಳೋದಿದ್ಯಾ?” ಎಂದನು ರಾಜೇಂದ್ರ.

ಇವನೇನು ಕೇಳ್ವಿಗಳ ಲಿಸ್ಟ್ ಮಾಡ್ಕೊಂಡು, ಅದರಲ್ಲಿರೋದನ್ನಾ ಮಾತ್ರ ಕೇಳ್ತಾಯಿದಾನಾ ಅನಿಸಿತು ನನಗೆ. “ಇದೆ. ಕೇಳ್ಬಹುದಾ?” ಎಂದೆ.

“ಅದಕ್ಕೇನು… ಕೇಳಿ”

ಅವಳ ನೋಟ ನನ್ನೆಡೆಗೆ ಹರಿಯಿತು. “ಗುರುರಾಜ್ ಅವರ ಮೊದಲನೇ ಹೆಂಡ್ತಿಗೆ ಹೇಗೆ ಈ ವಿಶ್ಯ ಗೊತ್ತಾಗಿರಬಹುದು ಅಂತಾ ನಿಮಗೆ ಅನ್ಸುತ್ತೆ?”

ಅವಳು ಗಲಿಬಿಲಿಗೊಂಡು ಯೋಚನೆಗೆ ಬಿದ್ದು, ನಂತರ, “ಗೊತ್ತಿಲ್ಲ ಸರ‍್” ಎಂದಳು.

“ಈ ಕುಡಿಯೋ ಚಟ ಮೊದಲೇ ಇತ್ತಾ, ಅತವಾ ಇತ್ತೀಚೆಗೆ ಶುರುವಾದದ್ದಾ?”

“ಇತ್ತೀಚೆಗೆ ಸರ್. ಒಂದ್ ತಿಂಗ್ಳು ಆಗಿರಬಹುದು. ಅದಕ್ಕಿಂತಾ ಮೊದ್ಲು ಅವರು ಯಾವತ್ತೂ ಕುಡದಿರಲಿಲ್ಲಾ”

“ಇದಕ್ಕಿಂತಾ ಮೊದ್ಲು ರಾತ್ರಿ ಪ್ರೆಂಡ್ಸ್ ಜೊತೆ ಹೋಗಿದ್ರಾ?”.

“ಇಲ್ಲಾ ಸರ್. ಇದೇ ಮೊದ್ಲು”

ಅವಳಿಗೆ ಕೇಳಬೇಕಾದದ್ದು ಮುಗಿಯಿತು ಎನಿಸಿ, ಅವಳ ತಮ್ಮ ‘ವಿಕ್ಕಿ’ಯೆಡೆಗೆ ನೋಡುತ್ತಾ, “ಗುರುರಾಜ್ ಬಗ್ಗೆ ನಿಮ್ಮ ಅಬಿಪ್ರಾಯ ಏನು?” ಎಂದೆ.

ಅವನಿಗೆ ಯಾವ ಅಬಿಪ್ರಾಯವೂ ಇರಲಿಲ್ಲ ಎಂದು ಅವನ ನೋಟವೇ ಹೇಳಿತು. “ಒಳ್ಳೆ ಮನುಶ್ಯಾನೇ ಸರ್. ಆದ್ರೆ ಎರಡನೇ ಮದ್ವೆ ಅಂತಾ ಅಶ್ಟೇ…”

“ಇವತ್ತು ಬೆಳಗ್ಗೆ ನೀವು ಎಲ್ಲಿದ್ರಿ?”

ಅವನ ಅಕ್ಕ ಬಾಯಿ ಹಾಕಿದಳು, “ಮನೆಲೇ ಇದ್ದಾ ಸರ‍್”. ಏನೋ ಹೇಳಲು ಮುಂದಾಗಿದ್ದ ಅವನು ಸುಮ್ಮನಾದ.

“ನೀವು ಆ ಮೊದಲನೇ ಹೆಂಡ್ತಿನಾ ನೋಡಿದಿರಾ?”

“ಇಲ್ಲಾ ಸರ್. ಅವರ ಮೊಬಾಯಿಲ್ ನಲ್ಲಿರೋ ಪೊಟೋದಲ್ಲಿ ನೋಡಿದೀನಿ ಅಶ್ಟೇ”

“ಸರಿ” ಎಂದು ರಾಜೇಂದ್ರನಿಗೆ ಆಯಿತು ಎನ್ನುವಂತೆ ಸನ್ನೆ ಮಾಡಿದೆ. ಅವರು ತುಮಕೂರಿನ ವಿಳಾಸ, ಪೋನ್ ನಂಬರ್ ಕೊಟ್ಟು ಹೊರಟು ಹೋದರು.

******************************************************************

(ಮುಂದುವರೆಯುವುದು : ಎರಡನೆ  ಕಂತು ನಾಳೆಗೆ) 

( ಚಿತ್ರ ಸೆಲೆ: fineartamerica.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

ಅನಿಸಿಕೆ ಬರೆಯಿರಿ: