ಕೆ. ಎಲ್. ರಾಹುಲ್ – ಕ್ರಿಕೆಟ್ ಲೋಕದ ಹೊಸ ಬೆಳಕು
ಕರ‍್ನಾಟಕ ಕ್ರಿಕೆಟ್ ಗೂ ರಾಹುಲ್ ಎಂಬ ಹೆಸರಿಗೂ ಅವಿನಾಬಾವ ಸಂಬಂದ ಇರಬೇಕು. ಒಬ್ಬ ರಾಹುಲ್(ದ್ರಾವಿಡ್) 5 ವರ‍್ಶ ಕರ‍್ನಾಟಕಕ್ಕೆ ಆಡಿ ರಣಜಿ ಟ್ರೋಪಿ ಗೆಲ್ಲಿಸಿ ನಂತರ ಬಾರತದ ಪರ 16 ವರ‍್ಶ ಅಂತರಾಶ್ಟ್ರೀಯ ಕ್ರಿಕೆಟ್ ಆಡಿ ದಿಗ್ಗಜನಾಗಿ ಬೆಳೆದರೆ, ಈಗ ಬೆಳಕಿಗೆ ಬಂದಿರೋ ರಾಹುಲ್(ಕಣ್ಣೂರು ಲೋಕೇಶ್) ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಕೆ.ಎಲ್ ರಾಹುಲ್ ಕರ‍್ನಾಟಕಕ್ಕೆ 15 ವರ‍್ಶದ ಬಳಿಕ ರಣಜಿ ಟ್ರೋಪಿ ಗೆಲ್ಲಿಸುವಲ್ಲಿ ಪ್ರಮುಕ ಪಾತ್ರ ವಹಿಸಿ, ಅಂತರಾಶ್ಟ್ರೀಯ ಕ್ರಿಕೆಟ್ ಗೆ ಬಡ್ತಿ ಪಡೆದರು. ಈಗ ಇಡೀ ಬಾರತವೇ ಬರವಸೆಯ ಕಣ್ಣುಗಳಿಂದ ಎದುರು ನೋಡುತ್ತಿರುವ ಬ್ಯಾಟ್ಸಮೆನ್ ‘ಕನ್ನಡಿಗ’ ಅನ್ನುವುದೇ ನಮ್ಮೆಲ್ಲರಿಗೂ ಹೆಮ್ಮೆ.
“ರಾಹುಲ್” ಹೆಸರು ಇಟ್ಟಿದ್ದೇ ಒಂದು ಗೊಂದಲ
ರಾಹುಲ್ 1992 ರ ಏಪ್ರಿಲ್ 18 ರಂದು ಮಂಗಳೂರಿನಲ್ಲಿ ಹುಟ್ಟಿದರು. ಇವರಿಗೆ “ರಾಹುಲ್” ಅನ್ನೋ ಹೆಸರು ಇಟ್ಟಿದ್ದೇ ಒಂದು ತಮಾಶೆಯ ಸಂಗತಿ. ಸೂರತ್ಕಲ್ ನಲ್ಲಿ ಕಲಿಸುಗರಾಗಿ ಕೆಲಸ ಮಾಡುತ್ತಿರುವ ರಾಹುಲ್ ರ ತಂದೆ ಕಣ್ಣೂರು ಲೋಕೇಶ್ ಅವರು ಸುನಿಲ್ ಗವಾಸ್ಕರ್ ಅವರ ಬಹಳ ದೊಡ್ಡ ಅಬಿಮಾನಿಯಾಗಿದ್ದರಿಂದ, ತಮ್ಮ ಮಗನಿಗೂ ಗವಾಸ್ಕರ್‍ರ ಮಗನ ಹೆಸರನ್ನೇ ಇಡಬೇಕೆಂದು ರಾಹುಲ್ ಎಂದು ಹೆಸರಿಸಿದರು. ಆದರೆ ಅವರಿಗೆ ಗವಾಸ್ಕರ್ ರ ಮಗನ ಹೆಸರು ರಾಹುಲ್ ಅಲ್ಲ “ರೋಹನ್” ಎಂದು ತಿಳಿಯುವುದರೊಳಗೆ ಬಹಳ ಸಮಯ ಆಗಿತ್ತು. ಹಾಗಾಗಿ ನಮ್ಮ “ರಾಹುಲ್” ರಾಹುಲ್ ಆಗೇ ಉಳಿದನು.
ಬೆಳೆಯುವ ಸಿರಿ ಮೊಳಕೆಯಲ್ಲಿ
ಕ್ರಿಕೆಟ್ ನ ಅಬಿಮಾನಿಯಾಗಿದ್ದ ಲೋಕೇಶ್ ಅವರು ರಾಹುಲ್ ನ ಬಾಲ್ಯದಿಂದಲೇ ಅವನ ಕ್ರಿಕೆಟ್ ಕಲಿಕೆಗೆ ಬೆನ್ನೆಲುಬಾಗಿ ನಿಂತರು. ತಂದೆ ತಾಯಿ ಇಬ್ಬರ ಪ್ರೋತ್ಸಾಹ ಇದ್ದುದರಿಂದ ಕ್ರಿಕೆಟ್ ಒಟ್ಟಿಗೆ ಶಾಲೆಯ ಕಲಿಕೆಯನ್ನು ತೂಗಿಸಿಕೊಂಡು ಹೋಗುವುದು ರಾಹುಲ್‍ಗೆ ತೊಡಕಾಗಲಿಲ್ಲ. ಶಾಲೆಯ ಕಲಿಕೆ ಪೂರೈಸುವುದರೊಳಗೆ ಮಂಗಳೂರಿನ ಹಲವು ವಯೋಮಿತಿಯ ಕ್ರಿಕೆಟ್ ನಲ್ಲಿ ರಾಹುಲ್ ಗಮನ ಸೆಳೆದ್ದಿದ್ದನು. ಅದೇ ಸಮಯದಲ್ಲಿ 16 ರ ಈ ಹುಡುಗ ತನ್ನ ಬಾಳಿನ ಅತಿ ಮುಕ್ಯವಾದ ನಿರ‍್ದಾರ ತೆಗೆದುಕೊಂಡನು. ವ್ರುತ್ತಿಪರ ಕ್ರಿಕೆಟ್ ಆಡುವುದೇ ತನ್ನ ದ್ಯೇಯ ಎಂದು ಬೆಂಗಳೂರಿನ ಕಡೆ ಮುಕ ಮಾಡಿ ತನ್ನ ಅತ್ತೆಯ ಮನೆಯಲ್ಲಿ ಉಳಿದುಕೊಂಡು ಜೈನ್ ಕಾಲೇಜ್ ನಲ್ಲಿ ವಾಣಿಜ್ಯ ವಿಬಾಗ ಸೇರಿದನು.
ಬೆಂಗಳೂರಿನಲ್ಲಿ ಕ್ರಿಕೆಟ್ ಪಕ್ವತೆ
ಈಗಿನ ಕರ‍್ನಾಟಕ ಕ್ರಿಕೆಟ್ ತಂಡದಲ್ಲಿ ಸುಮಾರು 5 ರಿಂದ 8 ಮಂದಿ ಜೈನ್ ಕಾಲೇಜ್ ನವರೇ ಇದ್ದಾರೆ. ಅಲ್ಲಿ ಕ್ರಿಕೆಟ್ ಕಲಿಕೆಗೆ ಹೆಚ್ಚು ಒತ್ತು ಕೊಡುವುದರಿಂದ ವಿಶ್ವವಿದ್ಯಾನಿಲಯಗಳ ನಡುವಣ ನಡೆಯುವ ಎಲ್ಲಾ ಪಂದ್ಯಾವಳಿಗಳನ್ನು ಜೈನ್ ಕಾಲೇಜ್ ಗೆಲ್ಲುತ್ತಾ ಬಂದಿದೆ. ರಣಜಿ ತಂಡದ ಸಮರ‍್ತ, ಶರತ್, ಮನಿಶ್ ಪಾಂಡೆ, ಮಾಯಂಕ್ ಅಗರವಾಲ್, ಶ್ರೇಯಸ್ ಗೋಪಾಲ್, ಬಿನ್ನಿ ಇವರೆಲ್ಲರೂ ಜೈನ್ ಕಾಲೇಜ್ ನಿಂದ ಬೆಳಕಿಗೆ ಬಂದವರು ಅಂದರೆ ಆಲೋಚಿಸಿ ಅಲ್ಲಿನ ಕ್ರಿಕೆಟ್ ಏರ‍್ಪಾಡು ಹೇಗಿದೆ ಅಂತ. ಚಿಕ್ಕ ವಯಸ್ಸಿನಿಂದ ದ್ರಾವಿಡ್ ರ ಆಟದಿಂದ ಪ್ರಬಾವಿತರಾದ ರಾಹುಲ್ ಕೂಡ ತಮ್ಮ ಕ್ರಿಕೆಟ್ ನ ಪಟ್ಟುಗಳನ್ನು ಇಲ್ಲೇ ಕಲಿತರು. ಇಲ್ಲಿ ಬಿ.ಕಾಂ ಕಲಿಕೆಗಿಂತ ಕ್ರಿಕೆಟ್ ಕಲಿಕೆಯಲ್ಲೇ ಹೆಚ್ಚು ಸಮಯ ಕಳೆದು ತಮ್ಮ ಬ್ಯಾಟಿಂಗ್ ನಲ್ಲಿ ಇನ್ನೂ ಪಕ್ವಗೊಂಡರು. 2009 ರಲ್ಲಿ ರಾಹುಲ್ ದ್ರಾವಿಡ್ ಒಮ್ಮೆ ಅಬ್ಯಾಸಕ್ಕೆಂದು ಚಿನ್ನಸ್ವಾಮಿ ಅಂಗಣಕ್ಕೆ ಬಂದಾಗ ಕಿರಿಯರ ಪಂದ್ಯವೊಂದು ನಡೆಯುತ್ತಿತ್ತು. ಈ ಪಂದ್ಯದಲ್ಲಿ ರಾಹುಲ್ ರ ಆಟವನ್ನು ನೋಡಿ ಅಂದೇ ಕರ‍್ನಾಟಕದ ಆಯ್ಕೆಗಾರರಿಗೆ ಈ ಹುಡುಗನ ಬೆಳವಣಿಗೆ ಮೇಲೊಂದು ಕಣ್ಣಿಡಿ, ಈ ವಯಸ್ಸಿಗೆ ಇವನ ಬ್ಯಾಟಿಂಗ್ ತಂತ್ರಗಾರಿಕೆ ಹಿರಿಯರನ್ನು ನಾಚಿಸುವಂತಿದೆ ಎಂದು ದ್ರಾವಿಡ್ ಹೇಳಿದ್ದರು.
19ರ ವಯೋಮಿತಿಯ ವಿಶ್ವಕಪ್
ದ್ರಾವಿಡ್ ರ ಅನಿಸಿಕೆ ಸುಳ್ಳಾಗಲಿಲ್ಲ. ಕರ‍್ನಾಟಕ ಕಿರಿಯರ ಕ್ರಿಕೆಟ್ ನಲ್ಲಿ ಒಳ್ಳೆಯ ಪ್ರದರ‍್ಶನ ನೀಡಿದ್ದ ರಾಹುಲ್ 2010 ರಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನಡೆದ ಕಿರಿಯರ ವಿಶ್ವಕಪ್ ಗೆ ಬಾರತ ತಂಡದಲ್ಲಿ ಸ್ತಾನ ಪಡೆದರು. ಕರ‍್ನಾಟಕದ ಇನ್ನೊಬ್ಬ ಆಟಗಾರ ಮಾಯಂಕ್ ಅಗರವಾಲ್ ರೊಂದಿಗೆ ಬಾರತದ ಬ್ಯಾಟಿಂಗ್ ಶುರು ಮಾಡುವ ಜವಾಬ್ದಾರಿ ವಹಿಸಿಕೊಂಡರು. ಹಾಂಕಾಂಗ್ ಮೇಲೆ 62 ರನ್ ಗಳಿಸಿ ಜನರ ಮೆಚ್ಚುಗೆ ಗಳಿಸಿದರೂ ಬೇರೆ ಪಂದ್ಯಗಳಲ್ಲಿ ಹೆಚ್ಚಾಗಿ ರನ್ ಗಳಿಸದೆ ಮಂಕಾದರು. ಆದರೆ ಅವರ ಬ್ಯಾಟಿಂಗ್ ತಂತ್ರಗಾರಿಕೆಗೆ ಕ್ರಿಕೆಟ್ ವಲಯ ಬೆರಗಾಯಿತು.
ರಣಜಿ ಪಾದಾರ‍್ಪಣೆ ಮತ್ತು ದೇಸೀ ಕ್ರಿಕೆಟ್
ಕಿರಿಯರ ವಿಶ್ವಕಪ್ ಬಳಿಕ ಕೆ.ಎಸ್.ಸಿ.ಏ ನ ಹಲವು ಪಂದ್ಯಾವಳಿಗಳಲ್ಲಿ ಸ್ತಿರ ಪ್ರದರ‍್ಶನ ನೀಡುತ್ತಾ ರಾಹುಲ್ ಕರ‍್ನಾಟಕ ರಣಜಿ ತಂಡದ ಕದ ತಟ್ಟುತ್ತಲೇ ಇದ್ದರು. 2010 ರ ರಣಜಿ ತಂಡದಲ್ಲಿ ಅವರಿಗೆ ಜಾಗ ಕೊಡದೆ ಆಯ್ಕೆಗಾರರಿಗೆ ಬೇರೆ ದಾರಿಯೇ ಇರಲಿಲ್ಲ. ಮೊಹಾಲಿಯಲ್ಲಿ ಪಂಜಾಬ್ ಮೇಲೆ 18 ವರ‍್ಶದ ರಾಹುಲ್ ತಮ್ಮ ಮೊದಲ ರಣಜಿ ಪಂದ್ಯ ಆಡಿದರು. ಈ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ 61 ರನ್ ಗಳಿಸಿ ನಾನು ಈ ಮಟ್ಟದಲ್ಲಿ ಕ್ರಿಕೆಟ್ ಆಡಲು ತಯಾರಿದ್ದೇನೆ ಎಂದು ಸಾಬೀತು ಮಾಡಿದರು. ಆದರೆ ಮುಂದಿನ ಪಂದ್ಯಗಳಲ್ಲಿ ರನ್ ಗಳಿಸಲು ಹೆಣಗಾಡಿದರು. ಸಾಲು ಸಾಲು ವೈಪಲ್ಯಗಳಿಂದ ಬಳಲುತ್ತಿದ್ದ ರಾಹುಲ್ ರನ್ನು 2011-12 ನೇ ಸಾಲಿನ ರಣಜಿ ತಂಡದಿಂದ ಕೈ ಬಿಡಲಾಯಿತು. ಇದರಿಂದ ದೈರ‍್ಯಗೆಡದೆ ಮತ್ತೆ ಮೊದಲ ವರ‍್ಗದ ಕ್ಲಬ್ ಕ್ರಿಕೆಟ್ ನಲ್ಲಿ ರನ್ ಗಳ ಹೊಳೆ ಹರಿಸಿ 2012-13 ರ ರಣಜಿ ತಂಡಕ್ಕೆ ರಾಹುಲ್ ಮರಳಿದರು. ಇಲ್ಲಿಂದ ಶುರು ಆಯ್ತು ರಾಹುಲ್ ರ ನಿಜವಾದ ಪ್ರತಿಬೆಯ ಅನಾವರಣ. ಇದೇ ವರ‍್ಶ ಮೈಸೂರಿನಲ್ಲಿ ವಿದರ‍್ಬ ಮೇಲೆ 157 ರನ್ ಬಾರಿಸಿ ತಮ್ಮ ಮೊದಲ ಶತಕ ದಾಕಲಿಸಿದರು. ಅಲ್ಲಿಂದ ಕ್ರಮೇಣ ಲಯ ಕಂಡುಕೊಂಡ ರಾಹುಲ್ ಕರ‍್ನಾಟಕ ತಂಡದ ಅವಿಬಾಜ್ಯ ಅಂಗವಾದರು.
ತಿರುವು ಕೊಟ್ಟ 2013-14 ರ ರಣಜಿ ಟ್ರೋಪಿ
ರಾಬಿನ್ ಉತ್ತಪ್ಪ, ವಿನಯ್ ಕುಮಾರ್, ಅಬಿಮನ್ಯು ಮಿತುನ್ ರಂತಹ ಅಂತರಾಶ್ಟ್ರೀಯ ಆಟಗಾರರು ಹಾಗು ಮನೀಶ್ ಪಾಂಡೆ, ಬಿನ್ನಿ, ಗೌತಮ್ ಅಂತಹ ಪ್ರತಿಬಾನ್ವಿತ ಆಟಗಾರರು ತಂಡದಲ್ಲಿದ್ದರೂ ಕರ‍್ನಾಟಕ ಏಕೆ ರಣಜಿ ಗೆಲ್ಲಲಾಗುತ್ತಿಲ್ಲ ಎಂಬುದೇ ಯಕ್ಶಪ್ರಶ್ನೆ ಆಗಿತ್ತು. ಈ ಸಾರಿ ಮಾತ್ರ ಯಾವುದೇ ಕಾರಣಕ್ಕೂ ತಪ್ಪೆಸಗಬಾರದೆಂಬ ಉದ್ದೇಶದಿಂದ ನಾಯಕ ವಿನಯ್ ತಂಡದ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಜವಾಬ್ದಾರಿಯನ್ನು ಮನದಟ್ಟು ಮಾಡಿದ್ದರು. ಆಗಿನ್ನೂ ಕೇವಲ 8 ರಣಜಿ ಪಂದ್ಯ ಆಡಿದ್ದ ರಾಹುಲ್ ಗೆ ಇನ್ನಿಂಗ್ಸ್ ಶುರು ಮಾಡಿ ವಿಕೆಟ್ ಕಾಯ್ದುಕೊಳ್ಳುವ ಹೊಣೆ ಹೊರಸಿದರು. ಇಂತಹ ಹೊಣೆ ಸಾಮಾನ್ಯವಾಗಿ ತಂಡದ ಅತ್ಯಂತ ಹಿರಿಯ ಆಟಗಾರನ ಮೇಲೆ ಇರುತ್ತದೆ. ಇಲ್ಲಿ ವಿನಯ್‍ಗೆ ರಾಹುಲ್‍ರ ಸಾಮರ‍್ತ್ಯದ ಬಗ್ಗೆ ಇದ್ದ ನಂಬಿಕೆ ತಿಳಿಯುತ್ತದೆ. ರಾಹುಲ್ ತಮ್ಮ ನಾಯಕನ ನಂಬಿಕೆಯನ್ನು ಹುಸಿ ಮಾಡಲಿಲ್ಲ. ಗೋಡೆಯಂತೆ ನಿಂತು ರನ್ ಗಳಿಸಿದರು. ಇದರ ಪರಿಣಾಮ ಸಾಲು ಸಾಲು ಪಂದ್ಯಗಳಲ್ಲಿ ಕರ‍್ನಾಟಕ ಗೆಲುವು ಕಂಡಿತು.
ರಾಹುಲ್‍ರ ಬ್ಯಾಟಿಂಗ್ ತಂತ್ರಗಾರಿಕೆಯನ್ನು ತಿದ್ದಿ ತೀಡುವಲ್ಲಿ ತರಬೇತುದಾರರಾದ ಜೆ.ಅರುಣ್ ಕುಮಾರ್ ಅವರ ಪಾತ್ರ ಹಿರಿದು. ಹರಿಯಾಣ ಮೇಲಿನ ಪಂದ್ಯದ ಮುನ್ನ ಅರುಣ್ ರಾಹುಲ್ ರಿಗೆ ಒಂದು ಸವಾಲನ್ನಿತ್ತರು. ರೋಹಟಕ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ನೀನು ಶತಕ ಗಳಿಸಿದರೆ ಅಂತರಾಶ್ಟ್ರೀಯ ಕ್ರಿಕೆಟ್ ಆಡಲು ನೀನು ಸಿದ್ದ ಎಂದರ‍್ತ ಎಂದರು. ಅರುಣ್ ಅವರು ಯಾಕೆ ಹೀಗಂದರು ಎಂಬುದು ರಾಹುಲ್ ರಿಗೆ ತಿಳಿದಿತ್ತು. ರೋಹಟಕ್ ನ ಪಿಚ್ ಹುಲ್ಲು ಹಾಸಿನಿಂದ ತುಂಬಿದ್ದು ಇಂಗ್ಲೆಂಡಿನ ಪಿಚ್‍ಗಳ ಹಾಗೆ ಸ್ವಿಂಗ್ ಗೆ ಸಹಾಯಕಾರಿಯಾಗಿದ್ದು ರನ್ ಗಳಿಸಲು ತುಂಬಾ ಶ್ರಮ ಪಡಬೇಕೆಂದು ರಾಹುಲ್ ಅರಿತ್ತಿದ್ದರು. ಈ ಸವಾಲನ್ನು ಸ್ವೀಕರಿಸಿದ ರಾಹುಲ್ ಶತಕ ಗಳಿಸದಿದ್ದರೂ ತಾಳ್ಮೆಯ 98 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅರುಣ್ ಅವರು ಈ ಆಟವನ್ನು ನೋಡಿ ನೀನು ಅಂತರಾಶ್ಟ್ರೀಯ ಕ್ರಿಕೆಟ್ ಆಡೋದು ಕಾತ್ರಿ ಆಯಿತೆಂದು ಮೆಚ್ಚುಗೆಯ ಮಾತಾಡಿದರು. ಅಲ್ಲಿಂದ ಪ್ರತಿಯೊಂದು ಪಂದ್ಯವನ್ನು ರಾಹುಲ್ ರ ಬ್ಯಾಟಿಂಗ್ ಬಲದಿಂದ ಗೆಲ್ಲುತ್ತಾ, ಕರ‍್ನಾಟಕ 2014 ರ ರಣಜಿ ಪೈನಲ್ ಗೆ ಲಗ್ಗೆ ಇಟ್ಟಿತು. ಹೈದರಾಬಾದ್ ನಲ್ಲಿ ಮಹಾರಾಶ್ಟ್ರ ಮೇಲಿನ ಪಂದ್ಯದಲ್ಲಿ ಸೊಗಸಾದ 131 ರನ್ ಬಾರಿಸಿ ರಣಜಿ ಟ್ರೋಪಿಯನ್ನು 15 ವರ‍್ಶಗಳ ಬಳಿಕ ಕರ‍್ನಾಟಕದ ಮಡಿಲಿಗೆ ಹಾಕಿದರು. ಈ ಸರಣಿಯಲ್ಲಿ 3 ಶತಕಗಳಿಂದ ಬರೋಬ್ಬರಿ 1034 ರನ್ ಗಳಿಸಿ ರಾಶ್ಟ್ರೀಯ ಆಯ್ಕೆಗಾರರ ಕಣ್ಣಿಗೆ ಬಿದ್ದರು. ಮಾಜಿ ಆಟಗಾರರು ರಾಹುಲ್ ರನ್ನು ಇಂಗ್ಲಂಡ್ ಪ್ರವಾಸಕ್ಕೆ ಆಯ್ಕೆ ಮಾಡಬೇಕು ಎಂದು ಹೇಳಿದರೂ ಅವರು ಆಯ್ಕೆ ಆಗುವುದಿಲ್ಲ.
ಕಡೆಗೂ ಬಂತು ಬಾರತ ತಂಡದಿಂದ ಕರೆ
2014 ರ ಅಕ್ಟೋಬರ್ ನಲ್ಲಿ ನಡೆದ ದುಲೀಪ್ ಟ್ರೋಪಿ ಪೈನಲ್‍ನಲ್ಲಿ ದಕ್ಶಿಣ ವಲಯದ ಪರ ಆಡಿದ ರಾಹುಲ್ ಒಂದೇ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದರು. 185 ಹಾಗು 130 ರನ್ ಗಳಿಸಿ ನಾನು ಆಸ್ಟ್ರೇಲಿಯಾ ಪ್ರವಾಸಕ್ಕೆ ತಯಾರಿದ್ದೇನೆ ಎಂಬ ಸಂದೇಶ ಕಳಿಸಿದರು. ಆಯ್ಕೆಗಾರರು ಈ ಬಾರಿ ರಾಹುಲ್‍ಗೆ ಮಣೆ ಹಾಕಲೇ ಬೇಕಾಯಿತು. ಆಸ್ಟ್ರೇಲಿಯಾಕ್ಕೆ ತೆರಳಲಿದ್ದ ಬಾರತ ತಂಡದಲ್ಲಿ ರಾಹುಲ್ ಸ್ತಾನ ಗಿಟ್ಟಿಸಿಕೊಂಡರು. ಆದರೆ ಮೊದಲೆರಡು ಟೆಸ್ಟ್ ಗಳಲ್ಲಿ ಆಡುವ 11 ರಲ್ಲಿ ಜಾಗ ಸಿಗದೆ ಹೊರಗುಳಿದರು. ಕಡೆಗೆ 3ನೇ ಟೆಸ್ಟ್ ನಲ್ಲಿ ರಾಹುಲ್ ಗೆ ಅದ್ರುಶ್ಟ ಕೈಗೂಡಿತು. ಮೆಲ್ಬರನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುವ ಐತಿಹಾಸಿಕ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ರಾಹುಲ್ ಅಂತರಾಶ್ಟ್ರೀಯ ಕ್ರಿಕೆಟ್‍ಗೆ ಪಾದಾರ‍್ಪಣೆ ಮಾಡಿದರು. ಆದರೆ ದುರಂತ ಎಂದರೆ ಈ ಪಂದ್ಯದ ಎರಡೂ ಇನ್ನಿಂಗ್ಸ್ ನಲ್ಲಿ ತಲಾ 3 ಹಾಗು 1 ರನ್ ಗಳಿಸಿ ಟೀಕೆಗಾರರ ಕೆಂಗಣ್ಣಿಗೆ ಗುರಿಯಾದರು. ಟೀಕೆಗೆ ಕಾರಣ ಅವರು ಆಡಿದ ಎರಡು ಕೆಟ್ಟ ಹೊಡೆತಗಳಾಗಿತ್ತು. ಅಂದು ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲೂ ಕೂಡ ರಾಹುಲ್‍ರ ಬ್ಯಾಟಿಂಗ್ ಬಗ್ಗೆ ಲೇವಡಿ ಮಾಡುತ್ತಾ ಬಗೆ ಬಗೆಯ ಹೋಲಿಕೆಗಳಿಂದ ಜನ ಟ್ರೆಂಡ್ ಮಾಡಿದರು. ಸದಾ ತಾಳ್ಮೆಯ ಆಟಕ್ಕೆ ಹೆಸರಾಗಿದ್ದ ರಾಹುಲ್ ಆ ರೀತಿ ಆಡಿದ್ದೇಕೆಂದು ಅವರ ಬೆಂಬಲಿಗರು ಯೋಚಿಸುವಂತಾಗಿತ್ತು.
22 ರ ಹರೆಯದ ಹುಡುಗ ತನ್ನ ಮೊದಲ ಪಂದ್ಯದಲ್ಲೇ ಇಶ್ಟೆಲ್ಲಾ ಅವಮಾನ ಅನುಬವಿಸಿದರೆ ಅವನ ಆತ್ಮಸ್ತೈರ‍್ಯ ಕುಗ್ಗುವುದು ಸಹಜ. ಆದರೆ ರಾಹುಲ್ ಮುಂದಿನ ಸಿಡ್ನಿ ಟೆಸ್ಟ್ ನಲ್ಲಿ ತಮ್ಮ ಎಂದಿನ ಆಟದಿಂದ ತಾಳ್ಮೆಯ 110 ರನ್ ಬಾರಿಸಿ ಟೀಕೆಗಾರರ ಬಾಯಿ ಮುಚ್ಚಿಸಿದರು. ಕ್ರಿಕೆಟ್ ಪಂಡಿತರು ನಿಬ್ಬೆರಗಾಗಿ ರಾಹುಲ್‍ರತ್ತ ನೋಡಿದರು. ಆಸ್ಟ್ರೇಲಿಯಾದ ಪಿಚ್‍ಗಳಲ್ಲಿ ಅಲ್ಲಿನ ಗಟಾನುಗಟಿ ವೇಗದ ಬೌಲರ್‍ಗಳ ವಿರುದ್ದ ಶತಕ ಗಳಿಸುವುದು ಎಂತಾ ದೊಡ್ಡ ಸವಾಲು ಎಂದು ಕ್ರಿಕೆಟ್ ಜಗತ್ತಿಗೆ ಗೊತ್ತಿತ್ತು. ಈ ಶತಕದಿಂದ ರಾಹುಲ್ ಅಂತರಾಶ್ಟ್ರೀಯ ಕ್ರಿಕೆಟ್ ನಲ್ಲಿ ತಮ್ಮ ಚಾಪು ಮೂಡಿಸಿದರು.
ಕನ್ನಡಿಗನೊಬ್ಬನ ಮೊದಲ ತ್ರಿಶತಕ
ಆಸ್ಟ್ರೇಲಿಯ ಪ್ರವಾಸದ ನಂತರ ರಾಹುಲ್ ಬಾರತಕ್ಕೆ ಮರಳಿ ಕರ‍್ನಾಟಕ ರಣಜಿ ತಂಡ ಸೇರಿಕೊಂಡರು. ಗುಂಡಪ್ಪ ವಿಶ್ವನಾತ್, ರಾಹುಲ್ ದ್ರಾವಿಡ್ ಅಂತಹ ವಿಶ್ವ ಶ್ರೇಶ್ಟ ಬ್ಯಾಟ್ಸಮೆನ್‍ಗಳು ಕರ‍್ನಾಟಕದ ಪರ ಆಡಿದ್ದರೂ ಯಾರೂ ಸಹ ತ್ರಿಶತಕ ಗಳಿಸಿರಲಿಲ್ಲ. ಟೆಸ್ಟ್ ಶತಕ ಗಳಿಸಿ ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ರಾಹುಲ್ ಬೆಂಗಳೂರಿನಲ್ಲಿ ಉತ್ತರ ಪ್ರದೇಶದ ವಿರುದ್ದ ಬರ‍್ಜರಿ 337 ರನ್ ಗಳಿಸಿ ಕರ‍್ನಾಟಕದ ಮೊದಲ ತ್ರಿಶತಕ ಗಳಿಸಿದ ಬ್ಯಾಟ್ಸಮೆನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ವರ‍್ಶ ಮುಂಬೈನಲ್ಲಿ ನಡೆದ ತಮಿಳುನಾಡು ಮೇಲಿನ ರಣಜಿ ಪೈನಲ್ ಪಂದ್ಯ ರಾಹುಲ್‍ರ ಹಟ ಹಾಗು ಚಲಕ್ಕೆ ಸಾಕ್ಶಿಯಾಯಿತು. ಬ್ಯಾಟಿಂಗ್ ಮಾಡುತ್ತಿರುವಾಗ ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡ ರಾಹುಲ್ ಆಟದ ನಡುವಿನಲ್ಲೇ ಹೊರನಡೆಯ ಬೇಕಾಯಿತು. ಅವರು ಹೊರ ನಡೆದದ್ದೇ ತಡ ಒಂದರ ಹಿಂದೆ ಒಂದು ವಿಕೆಟ್ ಬಿದ್ದವು. ಒಂದು ಹಂತದಲ್ಲಿ 84 ಕ್ಕೆ 5 ವಿಕೆಟ್ ಕಳೆದುಕೊಂಡು ಕರ‍್ನಾಟಕ ಅಪಾಯದ ಅಂಚಿನಲ್ಲಿತ್ತು. ಇನ್ನೂ ನೋವಿನಿಂದ ಪೂರ‍್ಣ ಗುಣವಾಗದೇ ಬಳಲುತ್ತಿದ್ದರೂ ತಂಡಕ್ಕಾಗಿ ಮತ್ತೆ ಕ್ರೀಸ್ ನತ್ತ ನಡೆದರು. ಕರುಣ್ ರ ಜೊತೆ ಸೇರಿ ದಾಕಲೆಯ ಜೊತೆಯಾಟ ಆಡಿ ಕರ‍್ನಾಟಕಕ್ಕೆ 9ನೇ ರಣಜಿ ಕಿರೀಟ ತಂದಿತ್ತರು. ಕರುಣ್ ತಾಳ್ಮೆಯ 328 ರನ್ ಗಳಿಸಿದರೆ ರಾಹುಲ್ ಅಬ್ಬರದ 188 ರನ್ ಪೇರಿಸಿದರು. 84 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಕರ‍್ನಾಟಕ ಕೊನೆಗೆ 762 ರನ್ ಗಳಿಸಿತು ಎಂದರೆ ಇವರಿಬ್ಬರ ಬ್ಯಾಟಿಂಗ್ ಪರಿ ಹೇಗಿದ್ದಿರಬಹುದು ಅಂತ ಯೋಚಿಸಿ.
ಇವನು ಬರಿ ಟೆಸ್ಟ್ ಆಡಿಲಿಕ್ಕಶ್ಟೆ ಲಾಯಕ್ಕು!
2015 ರ ಶ್ರೀಲಂಕಾ ಟೆಸ್ಟ್ ಪ್ರವಾಸದಲ್ಲಿ ರಾಹುಲ್ ತಮ್ಮ 2 ನೇ ಶತಕ ಬಾರಿಸಿದರು. ಆಯ್ಕೆಗಾರರು ಹಾಗು ಕ್ರಿಕೆಟ್ ಪಂಡಿತರು ರಾಹುಲ್ ರ ಆಟ ಟೆಸ್ಟ್ ಗೆ ಹೇಳಿ ಮಾಡಿಸಿದ ಹಾಗಿದೆ, ಹಾಗಾಗಿ ಇವರು ಟೆಸ್ಟ್ ಆಡಲಿಕ್ಕಶ್ಟೆ ಸೂಕ್ತ ಎಂದು ನಂಬಿದ್ದರು. ಇದಕ್ಕೆ ಇಂಬು ಕೊಡುವಂತೆಯೇ 2014 ಹಾಗು 2015 ರ ಐ.ಪಿ.ಎಲ್ ನಲ್ಲಿ ಹೈದರಾಬಾದ್ ಪರ ಆಡಿದ್ದ ರಾಹುಲ್ ಸಾದಾರಣ ಪ್ರದರ‍್ಶನ ನೀಡಿದ್ದರು. ಆದರೆ 2016 ರ ಐ.ಪಿ.ಎಲ್ ಬೆಂಗಳೂರು ತಂಡಕ್ಕೆ ಮರಳಿದವರೇ ತಮ್ಮ ಆಟಕ್ಕೆ ಇನ್ನೊಂದು ಆಯಾಮ ಇದೆ ಎಂದು ತೋರಿದರು. ಒಟ್ಟು 14 ಪಂದ್ಯಗಳಿಂದ 147 ರ ಸ್ಟ್ರೈಕ್ ರೇಟ್ ನಲ್ಲಿ 397 ರನ್ ಗಳಿಸಿ ತಾನು ಟಿ20 ಚುಟುಕು ಕ್ರಿಕೆಟ್ ಕೂಡ ಆಡಬಲ್ಲೆ ಎಂದು ಕೂಗಿ ಹೇಳಿದರು. ಈ ಅಬ್ಬರದ ಬ್ಯಾಟಿಂಗ್ ನಿಂದ ಪ್ರಬಾವಗೊಂಡ ಆಯ್ಕೆಗಾರರು ಜಿಂಬಾಬ್ವೆಯ ಒಂದು ದಿನ ಹಾಗು ಟಿ20 ಪಂದ್ಯಗಳ ಪ್ರವಾಸಕ್ಕೆ ರಾಹುಲ್ ರನ್ನು ಆರಿಸಿದರು.
ಒಂದು ದಿನದ ಪಂದ್ಯಕ್ಕೂ ಸೈ!!!
ಜಿಂಬಾಬ್ವೆ ಮೇಲೆ ತಮ್ಮ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ರಾಹುಲ್ ಹೊಸದೊಂದು ದಾಕಲೆ ಬರೆದರು. ಅವರು ಗಳಿಸಿದ ನೂರು ರನ್ ಒಬ್ಬ ಬಾರತೀಯ ಆಟಗಾರ ತನ್ನ ಚೊಚ್ಚಲ ಒಂದು ದಿನ ಪಂದ್ಯದಲ್ಲಿ ಗಳಿಸಿದ ಗರಿಶ್ಟ ರನ್. ಇದಕ್ಕೂ ಮೊದಲು ಕನ್ನಡಿಗ ರಾಬಿನ್ ಉತ್ತಪ್ಪ ಗಳಿಸಿದ 86 ರನ್ ಅತ್ಯದಿಕ ಮೊತ್ತ ಆಗಿತ್ತು.
ಸರ್ ವಿವಿಯನ್ ರಿಚರ‍್ಡ್ಸ್ ರಿಂದ ಪ್ರಶಂಸೆ
ಜಿಂಬಾಬ್ವೆ ಪ್ರವಾಸದ ಬೆನ್ನಲ್ಲೇ ಬಾರತ ವೆಸ್ಟ್ ಇಂಡೀಸ್ ಗೆ ಪ್ರವಾಸ ಬೆಳೆಸಿತು. ಇಲ್ಲೂ ಸಹ ರಾಹುಲ್ ದರ‍್ಬಾರ್ ಮುಂದುವರೆಯಿತು. ಜಮೈಕಾ ಟೆಸ್ಟ್ ನಲ್ಲಿ ಬಿರುಸಿನ 158 ರನ್ ಬಾರಿಸಿ ಕ್ರಿಕೆಟ್ ದಂತಕತೆ ಸರ್ ವಿವಿಯನ್ ರಿಚರ‍್ಡ್ಸ್ ರಿಂದ ಪ್ರಶಂಸೆಗೊಳಗಾದರು. ಈ ಹುಡುಗ ಆಡುವಾಗ ನೇರ ಬ್ಯಾಟ್ ನಿಂದ ಆಡುತ್ತಾನೆ, ಇಶ್ಟು ಚಿಕ್ಕ ವಯಸ್ಸಿಗೆ ಹೀಗೆ ಆಡುವುದನ್ನು ಕರಗತ ಮಾಡಿಕೊಳ್ಳುವುದು ಕಶ್ಟದ ಕಲೆ. ಹೀಗೇ ಆಟ ಮುಂದುವರಿಸಿದರೆ ರಾಹುಲ್ ಕಂಡಿತ ಬಾರತದ ದಿಗ್ಗಜನಾಗುತ್ತಾನೆ ಎಂದು ಸರ್ ವಿವ್ ಮೆಚ್ಚುಗೆಯ ಮಾತನಾಡಿದರು. ಟೆಸ್ಟ್ ನಂತರ ಅಮೆರಿಕಾದಲ್ಲಿ ವೆಸ್ಟ್ ಇಂಡೀಸ್ ಮೇಲೆ ನಡೆದ ಟಿ20 ಪಂದ್ಯದಲ್ಲಿ ಕೇವಲ 51 ಬಾಲ್ ಗಳಿಂದ ಬಿರುಸಿನ 110 ರನ್ ಸಿಡಿಸಿ ಕ್ರಿಕೆಟ್ ಜಗತ್ತು ನಿಬ್ಬೆರಗಾಗುವಂತೆ ಮಾಡಿದರು.
24 ವರ‍್ಶದ ರಾಹುಲ್ ಆಗಲೇ ಮೂರೂ ಪ್ರಕಾರದ ಅಂತರಾಶ್ಟ್ರೀಯ ಪಂದ್ಯಗಳಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂದೆನಿಸಿದರು. ಅಂದು ಆಸ್ಟ್ರೇಲಿಯಾದಲ್ಲಿ ಕಳಪೆ ಆಟದಿಂದ ಟ್ವಿಟರ್ ನಲ್ಲಿ ತಮಾಶೆಗೆ ಗುರಿಯಾಗಿದ್ದ ರಾಹುಲ್‍ಗೆ ಅಮೆರಿಕಾದಲ್ಲಿ ಆಡಿದ ಆಟದಿಂದ ಟ್ವಿಟರ್‍ನಲ್ಲಿ ಮೆಚ್ಚುಗೆಯ ಸಂದೇಶಗಳು ಹರಿದು ಬಂದವು. ಈ ಬಾರಿಯೂ ರಾಹುಲ್ ಟ್ವಿಟರ್ ನಲ್ಲಿ ಟ್ರೆಂಡ್ ಆದರು, ಆದರೆ ಹೊಗಳಿಕೆಯಿಂದ. ಇಂಗ್ಲೆಂಡ್‍ನ ಮಾಜಿ ನಾಯಕ ಮೈಕಲ್ ವಾನ್ ಈ ಹುಡುಗನ ಆಟವನ್ನು ನೋಡಿ ಬೆರಗಾದೆ. ಇವನ ಮೇಲೊಂದು ಕಣ್ಣಿಡಿ ಎಂದರು. ಹೀಗೆ ಪ್ರಪಂಚದ ಎಲ್ಲಾ ಮೂಲೆಗಳಿಂದ ತಮ್ಮ ಬಗ್ಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದರೂ ರಾಹುಲ್ ಮಾತ್ರ ತನ್ನನ್ನು ತಿದ್ದಿ ತೀಡಿದ ಕೋಚ್ ಅರುಣ್ ಕುಮಾರ್, ನಾಯಕ ವಿನಯ್ ಹಾಗು ಉತ್ತಪ್ಪರ ಕೊಡುಗೆಯನ್ನು ನೆನೆಯದೆ ಇರಲಿಲ್ಲ. ಇದೇ ನಮ್ಮ ಕನ್ನಡದ ಹುಡುಗನ ದೊಡ್ಡತನ.
ರಾಹುಲ್ ಅವರ ಕ್ರಿಕೆಟ್ ವ್ರುತ್ತಿ ಜೀವನವನ್ನು ಗಮನಿಸಿದರೆ ಇದೊಂದು ಪವಾಡ ಎಂದನಿಸದೇ ಇರದು. 2012 ರಲ್ಲಿ ಕರ‍್ನಾಟಕದ ತಂಡದಿಂದಲೇ ಕೈ ಬಿಡಲಾಗಿದ್ದ ಒಬ್ಬ ಆಟಗಾರ ಅಲ್ಲಿಂದ ಕೇವಲ ಎರಡು ವರ‍್ಶಗಳಲ್ಲಿ ಬಾರತಕ್ಕೆ ಆಡಿ ಎರಡು ವರ‍್ಶದ ಅಂತರಾಶ್ಟ್ರೀಯ ಕ್ರಿಕೆಟ್ ನಿಂದ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವುದು ರಾಹುಲ್ ರ ಹಟ, ಚಲ, ಬದ್ದತೆ ಹಾಗೂ ವ್ರುತ್ತಿಪರತೆಗೆ ಹಿಡಿದ ಕನ್ನಡಿ. ಕರ‍್ನಾಟಕ ಕ್ರಿಕೆಟ್ ಗೆ ವೈಬವದ ಪರಂಪರೆ ಇದೆ. ವಿಶ್ವ ಶ್ರೇಶ್ಟ ಬೌಲರ್ ಗಳ ಜೊತೆ ದಿಗ್ಗಜ ಬ್ಯಾಟ್ಸಮೆನ್ ಗಳಾದ ವಿಶ್ವನಾತ್, ದ್ರಾವಿಡ್ ರಂತವರನ್ನೂ ವಿಶ್ವ ಕ್ರಿಕೆಟ್ ಗೆ ಬಳುವಳಿಯಾಗಿ ಕೊಟ್ಟಿದೆ. ಈಗ ನಮ್ಮ ರಾಹುಲ್‍ರ ಆಟವನ್ನು ಗಮನಿಸಿದರೆ ಕರುನಾಡಿನ ಮೂರನೇ ದಿಗ್ಗಜ ಬ್ಯಾಟ್ಸಮೆನ್ ಆಗುವ ಎಲ್ಲಾ ಲಕ್ಶಣಗಳು ಕಾಣ ಸಿಗುತ್ತವೆ. ಬಾರತ ಮುಂದಿನ ಒಂದು ವರ‍್ಶ ಬಿಡುವಿಲ್ಲದೆ ಕ್ರಿಕೆಟ್ ಆಡಲಿದೆ. ರಾಹುಲ್ ತವರಿನಲ್ಲೂ ಮಿಂಚಲಿ ಎಂದು ಹಾರಯ್ಸೋಣ. ಈ “ರಾಹುಲ್” “ದ್ರಾವಿಡ್” ರಂತೆ ಆಡಿ ಕರ‍್ನಾಟಕದ ಕೀರ‍್ತಿ ನೂರ‍್ಮಡಿ ಮಾಡಲಿ.
(ಚಿತ್ರಸೆಲೆ – espncricinfo.com, rediff.com, indianexpress.com, news18.com, espncricinfo.com, cricketcountry.com)
Yes Sir ನಮ್ಮ ಕನ್ನಡಿಗರ Talent Superb Batting ಕೆ ಎಲ್ ರಾಹುಲ್ ಸರ್?