ನಂಬಿಕೆಯ ನೇಯೋಣ ನಾಳೆಗಳಿಗಾಗಿ

ಪ್ರಶಾಂತ ಎಲೆಮನೆ.

2405865-carpet-weaving-0

ವಿಮಾನ ಬುಸುಗುಡುತ್ತಾ ಕಾಬುಲ್ ವಾಯುನೆಲೆಯಲ್ಲಿ ಇಳಿದಿತ್ತು. ಹೊಸತೇನೋ ಮಾಡುವ ವಿಶ್ವಾಸದಿಂದ ವಿಮಾನವನ್ನು ಇಳಿದೆ. ಆದರೆ ಏನು ಮಾಡಬೇಕು ಅಂತ ಗೊತ್ತಿಲ್ಲ. ಅದು ನನ್ನ ಮೊದಲ ಅಪ್ಗನ್(Afghan) ಪ್ರವಾಸ. ಕಾಳಗದಿಂದ ಬಳಲಿ ಬೆಂಡಾಗಿರುವ ಅಪ್ಗನ್ನಲ್ಲಿ ಹಲವು ಕಡೆ ಸಿಡಿಗುಂಡುಗಳಿಂದ ಚದುರಿದ ಕಟ್ಟಡಗಳ ಕೆಳಗೆ ಅವಿತ ಮಂದಿಯನ್ನು ನೋಡಿದೆ. ಬೇರೆ ಬೇರೆ ದೇಶಗಳ ಯಾವ ಸಹಾಯಗಳೂ ಇಲ್ಲಿಯ ಜನ-ಜೀವನವನ್ನು ಹೇಳಿಕೊಳ್ಳುವಶ್ಟು ಬದಲಿಸಿಲ್ಲ ಅಂತ ಅನಿಸಿತ್ತು. ಅಪ್ಗನ್ ನಲ್ಲಿ ಊರು ಕೇರಿ ಅಲೆದ ಮೇಲೆ ಇಲ್ಲಿಯವರಿಗಾಗಿಯೇ ಒಂದು ಉದ್ದಿಮೆ ಶುರುಮಾಡಿದರೆ ಹೇಗೆ ಅಂತ ಮನಸಿಗೆ ಬಂತು. ಆದರೆ ಮಾಡೋದೇನು? ದೊಡ್ಡ ದೊಡ್ಡ ಕೈಗಾರಿಕೆ ಕಟ್ಟೋದು ಕನಸಿನ ಮಾತು. ಸಣ್ಣ ಪುಟ್ಟದೇನಾದರೂ ಮಾಡಬೇಕು, ಆದರೆ ಹೇಗೆ? ಬಂಡವಾಳ ಎಲ್ಲಿಂದ? ನನ್ನ ಪ್ರವಾಸದ ಕೊನೆಯಲ್ಲಿ, ಕೈಯಿಂದ ನೆಯ್ದ 4 ನೆಲಗಂಬಳಿಯನ್ನು ದಾರಿಬದಿಯ ಅಂಗಡಿಯಲ್ಲಿ ಕೊಂಡು ಅಮೇರಿಕಾದ ವಿಮಾನ ಹತ್ತಿದೆ. ಅದು ಮುಂದೆ ನನ್ನ ಬದುಕನ್ನ ಬದಲಿಸಬಲ್ಲದು ಅಂತ ಆಗ ಗೊತ್ತಿರಲಿಲ್ಲ.

ಅಪ್ಗನ್ ಬೇರೆಲ್ಲ ದೇಶಗಳಿಗಿಂತ ಬಿನ್ನ, ಅಲ್ಲಿಯ ಜನ ಜೀವನ ಕೂಡ. ಇಲ್ಲೇನು ಮಾಡಬಹುದು? ಅದರಲ್ಲೂ ಹೆಂಗಸರಿಗೆ ಒಳಿತಾಗುವಂತಹ ಯಾವ ಉದ್ದಿಮೆ ಮಾಡಬಹುದು ಎಂಬ ಯೋಚನೆ ತಲೆಯಲ್ಲಿತ್ತು. ಚಿಕಾಗೋದ ನನ್ನ ಮನೆಗೆ ಬಂದ ಮೇಲೆ ನೆಲಗಂಬಳಿ, ಚಾಪೆಯ ಉದ್ದಿಮೆಯ ಕುರಿತು ಅರಸುವಿಕೆ ಶುರುಮಾಡಿದೆ. ಉದ್ದಿಮೆಯ ಒಳಗು, ಹೊರಗು ಅರಿತ ಮೇಲೆ ನಿಪುಣರೊಂದಿಗೆ ಚರ‍್ಚಿಸಿದೆ. ಅಮೇರಿಕಾದಲ್ಲಿ ಅತ್ಯುತ್ತಮ ನೆಲಗಂಬಳಿಯ ಬೆಲೆ $8,000 ವರೆಗೂ ಇದೆ, ಆದರೆ ತಾನು ಅಪ್ಗನ್ ಇಂದ ತಂದಿದ್ದು ಅಶ್ಟೇನು ಗುಣಮಟ್ಟದಲ್ಲ ಎನ್ನುವ ಅರಿವು ನನಗಿತ್ತು. ಈಗ ನನ್ನ ಮುಂದೆ ಇದ್ದದ್ದು ಎರಡು ಸವಾಲುಗಳು; ಒಂದು ಹಣಕಾಸು, ಎರಡು ಮಾರುಕಟ್ಟೆ. ಸಾಕಶ್ಟು ಅಲೆದ ಮೇಲೆ ನನ್ನದೇ $100,000 ಹಣದೊಂದಿಗೆ ನೆಲಗಂಬಳಿ ತಯಾರಿಕೆಯನ್ನು ಶುರುಮಾಡುವುದು ಅಂತ ತೀರ‍್ಮಾನವಾಯಿತು. ಸರಿಯಾದ ಮಾರುಕಟ್ಟೆಯ ಹುಡುಕಾಟ ನಡದೇ ಇತ್ತು. ಹಾಗು ಹೀಗೂ ಅಪ್ಗನ್ ನಲ್ಲಿ ತಯಾರಾದ, ಅಲ್ಲಿಯದೇ ಹೆಂಗಸರು ಮನೆಯಲ್ಲೇ ತಯಾರಿಸಿದ ಚಾಪೆಯನ್ನು ಅಮೇರಿಕಾದ ಮಾರುಕಟ್ಟೆಯಲ್ಲಿ ಮಾರುವ ಹೊಳಹು ತಯಾರಾಯಿತು. ನಾನು ಅಂದು ಹುಟ್ಟುಹಾಕಿದ ಸಂಸ್ತೆ ಅರ‍್ಜು ಸ್ಟುಡಿಯೋ ಹೋಪ್( Arzu studio hope), ಈ ಸಂಸ್ತೆಗೆ ಈಗ 13 ವರುಶ!

arzu

ಅಮೇರಿಕಾದ ಟೆಕ್ಸಾಸ್ ಕಲಿಕೆವೀಡಿನಲ್ಲಿ ಓದು ಮುಗಿಸಿದ ಮೇಲೆ ಕೆಲವು ವರುಶ ತೈಲ ಉದ್ಯಮದಲ್ಲಿ ಕೆಲಸ ಮಾಡಿದೆ. ಚಿಕ್ಕಂದಿನಿಂದಲೂ ನನಗೆ ಉದ್ದಿಮೆ ವಲಯದಲ್ಲಿ ಆಸಕ್ತಿ. ಹೊಸತೇನೋ ಮಾಡುವ ಬಯಕೆ. 8 ವಿಂಗ್ಸ್ ಎಂಟರ್‍ಪ್ರೈಸ್ ಎನ್ನುವ ಸಂಸ್ತೆ ಕಟ್ಟಿದೆ, ಒಂದು ಪುಸ್ತಕ ಕೂಡ ಬರೆದೆ. ಮುಂದೆ ಅಂದರೆ 1981 ರಲ್ಲಿ ಗೋಲ್ಡ್ಮನ್ ಸ್ಯಾಕ್ಸ್ ಸೇರಿಕೊಂಡೆ. ಕೆಲಸ ಹಿಡಿಸಿತು. 1990 ರಲ್ಲಿ ಗೋಲ್ಡ್ಮನ್ ಸ್ಯಾಕ್ಸ್ ಎಲೆಕ್ಟ್ರಾನಿಕ್ ಟ್ರೇಡಿಂಗ್ ಬಿಸಿನೆಸ್‍ನ ಮುಂದಾಳ್ತನವನ್ನು ವಹಿಸಿದ್ದೆ. ಅದೂ 26/11 ದುರಂತದ ಸಮಯ ನನ್ನ ಮೂರೂ ಮಕ್ಕಳೊಂದಿಗೆ ಮನೆಗೆ ಹೊರೆಟಿದ್ದೆ, ಹೊಸತೇನೋ ಮಾಡಬೇಕು ಅಂತ ಮನಸಿಗೆ ಬಂತು. ಗೋಲ್ಡ್ಮನ್ ಸ್ಯಾಕ್ಸ್ ನ ಸಹ-ಪಾಲುದಾರಿಕೆ ಹಾಗು ಮುಂದಾಳ್ತನದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಬಂದೆ. ಹೊರಬಂದಾಗ ನನಗೆ 46. ಮುಂದೆ ನನಗೆ ಯುಎಸ್-ಅಪ್ಗನ್ ವಿಮೆನ್ ಕೂಟದೊಂದಿಗೆ ಅಪ್ಗನ್ ಗೆ ಹೋಗುವ ಅವಕಾಶ ಬಂತು. ವಿಮಾನ ಹತ್ತಿದೆ ಅದು ನನ್ನನ್ನು ಕಾಬುಲ್ ನಲ್ಲಿ ಇಳಿಸಿತ್ತು.

ಅರ‍್ಜು ಶುರುವಾಗಿ 13 ವರುಶಗಳಾದರೂ ಇನ್ನು ಲಾಬದಲ್ಲೇನು ಇಲ್ಲ. ನಮ್ಮ ತಯಾರಿಕೆಯ ವೆಚ್ಚ, ಜೊತೆಗೆ ಆರೋಗ್ಯ, ಕಲಿಕೆಗೆ ತಗಲುವ ವೆಚ್ಚವನ್ನು ಸರಿದೂಗಿಸಬಲ್ಲಶ್ಟು ಆದಾಯ ನೆಲಗಂಬಳಿಯ ಮಾರಾಟದಿಂದ ಬರುತ್ತೆ. ಕಡಿಮೆಯಾದರೆ ದೇಣಿಗೆಯ ಮೊರೆ ಹೋಗಲೇಬೇಕು. ಮಾರಾಟವೇನೋ ಸರಿ, ಆದರೆ ಅಪ್ಗನ್ ನಲ್ಲಿ ನೆಲಗಂಬಳಿ ತಯಾರಿಕೆಯ ಮೊದಲ ದಿನಗಳು ಸುಲಬವಿರಲಿಲ್ಲ. ಅರ‍್ಜುಗಾಗಿ ನಾವು ಆರಿಸಿದ್ದು ನಡು ಅಪ್ಗನ್‍ನ ಬಾಮ್ಯಾನ್ ಕಂಪಣದ ಮೂರು ಹಳ್ಳಿಗಳನ್ನ. ಇದು ಅತಿ ಹಿಂದುಳಿದ “ಹಜಾರ” ಜನರ ಮೂಲ ನೆಲೆ. ಇವರು ಶಿಯಾ ಸಂಪ್ರದಾಯದ ಅಲ್ಪಸಂಕ್ಯಾತರು. ಇಲ್ಲಿಯವರು ಬಹಳ ಸಂಪ್ರದಾಯವಾದಿಗಳು. ಹಾಗಾಗಿ ನಮ್ಮ ಪ್ರತಿನಿದಿ ಮೊದಲು ಊರ ಮುಂದಾಳುವನ್ನ ಕಾಣಬೇಕು. ಅವನಿಗೆ ಎಲ್ಲವನ್ನು ವಿವರಿಸಬೇಕು. ಅವನೊಪ್ಪಿದರೆ ಮನೆಮನೆ ಕದ ತಟ್ಟಬೇಕು, ಒಪ್ಪಲಿಲ್ಲವೋ ಮುಂದಿನ ಊರು. ಅರ‍್ಜು ಸೇರುವವರಿಗೆ ನಮ್ಮದೇ ಬೇಡಿಕೆಗಳಿತ್ತು. ಅದೇನೆಂದರೆ ನಮ್ಮ ಸದಸ್ಯರಾಗಲು ಮನೆಯವರೆಲ್ಲ ಕಡ್ಡಾಯ ಕಲಿಕೆ ಪಡೆಯಲೇಬೇಕು. ಗಂಡಸರು ಹೆಂಗಸರನ್ನ ಅರ‍್ಜುವಿನ ತರಬೇತಿ ಶಿಬಿರಗಳಿಗೆ ಕಳಿಸಬೇಕು. ಮತ್ತೆ ಮನೆಯ ಬಾಣಂತಿಯರನ್ನ ಮಯ್ಯೊಳಿತಿನ (Health) ಕೇಂದ್ರಗಳಿಗೆ ತಪಾಸಣೆಗೆ ಮತ್ತು ಹೆರಿಗೆಗೆ ಕಳಿಸಲೇಬೇಕು.

ಮೊದಲು ಇದಕ್ಕೆ ತಕ್ಕ ಮಟ್ಟಿನ ವಿರೋದವಿದ್ದರೂ ಕ್ರಮೇಣ ಒಪ್ಪಿಕೊಂಡರು. 30 ಜನರಿಂದ ಶುರುವಾದ ಅರ‍್ಜುವಿನಲ್ಲಿ ಈಗ ಎಲ್ಲರೂ ಸೇರಿ 700 ಕ್ಕೂ ಅದಿಕ ಮಂದಿ ಇದ್ದಾರೆ. ಅದರಲ್ಲಿ 90% ಹೆಂಗಸರು. ಅಮೇರಿಕಾದಲ್ಲಿ ಇರುವುದು ನನ್ನನ್ನು ಸೇರಿಸಿ 3 ಮಂದಿ ಉದ್ಯೋಗಿಗಳು. ಅಮೇರಿಕಾದಲ್ಲಿನ ಮಾರಾಟದ ಜವಾಬ್ದಾರಿ ನಮ್ಮ ಮೂವರದ್ದು. ಒಂದು ನೆಲಗಂಬಳಿ ನೇಯಲು 3 ರಿಂದ 12 ತಿಂಗಳವರೆಗೂ ಬೇಕು. ನಮ್ಮ ನೆಲಗಂಬಳಿಗಳು 1000 ಡಾಲರ್ ನಿಂದ 10,000 ಡಾಲರ್ ವರೆಗೂ ಮಾರಾಟವಾಗಿವೆ. ಮಾರುಕಟ್ಟೆ ದರದ ಜೊತೆಗೆ ಉತ್ತಮ ನೆಯ್ಗೆಗೆ ಉತ್ತೇಜನ ರೂಪದಲ್ಲಿ ಹೆಚ್ಚುವರಿ ಹಣ ಕೊಡೋದು ನಮ್ಮ ವಾಡಿಕೆ. ನಮ್ಮಲ್ಲಿ ಅನೇಕ ವಿದವೆಯರು, ಅಂಗವಿಕಲರು ಕೆಲಸ ಮಾಡುತ್ತಿದ್ದಾರೆ. ಅವರ ಸ್ವಾವಲಂಬನೆಯೇ ನನ್ನ ಗುರಿ. ನಮ್ಮ ಎಲ್ಲಾ ಸದಸ್ಯರಿಗೂ ಸ್ವಂತ ಮನೆ ಇದೆ. ಕೆಲವರಿಗೆ ಕಾರು ಕೂಡ. ನಮ್ಮ ಸದಸ್ಯರಲ್ಲಿ ಯಾವ ಬಾಣಂತಿಯ ಸಾವು ಆಗಿಲ್ಲ, ಈ ನಡುವೆ 800 ಕ್ಕೂ ಹೆಚ್ಚು ಹೆರಿಗೆಗಳಾಗಿವೆ. ಕಲಿಕೆಗೋಸ್ಕರ ಚಿಕ್ಕ ಗುಡಿಸಲಲ್ಲಿ ಶುರುವಾದ ನಮ್ಮ ಶಾಲೆಗಳು, ಈಗ ದೊಡ್ಡ ಮಟ್ಟದಲ್ಲಿವೆ. ನಮ್ಮದೇ 3 ಶಾಲೆಗಳಿವೆ.

ಎಲೆನಾ ರೊಸೆವೆಲ್ಟ್ ಹೇಳುತ್ತಾರೆ “ಶಾಂತಿಯಲ್ಲಿ ನಂಬಿಕೆ ಇದ್ದರೆ ಸಾಲದು, ಅದಕ್ಕಾಗಿ ಕೆಲಸ ಮಾಡಬೇಕು. ಚಳಕದರಿಮೆ(Technology), ಹೊಸ ಹಮ್ಮುಗೆ(Innovation), ಉದ್ಯೋಗ ಅದರ ಆದಾರ. ಅದಕ್ಕಾಗಿ ಜನರನ್ನ ಸೇರಿಸಬೇಕು ಮತ್ತು ತೊಡಗಿಸಬೇಕು.”
ನಮ್ಮ ಸಮುದಾಯದ ಕೆಲಸಗಳು ಸಾವಿರಾರು ಅಪ್ಗನರನ್ನ ತಲುಪಿದೆ. ಇದೇ ರೀತಿಯ ಕೆಲಸಗಳು ಎಲ್ಲ ಕಡೆ ಆಗಬೇಕೆಂಬುದೇ ನನ್ನ ಗುರಿಯಾಗಿದೆ. ಅದು ಯಾರಿಂದ ಆದರೂ ಸರಿಯೆ. ಅಪ್ಗನ್ ನಲ್ಲಿ ಇದು ಸಾದ್ಯ ಅಂತಾದರೆ ಜಗತ್ತಿನ ಯಾವ ದೇಶದಲ್ಲಾದರೂ ಸಾದ್ಯ. ಅದು ಚೀನಾ, ಬಾರತ ಅತವಾ ಆಪ್ರಿಕಾದ ಯಾವುದೇ ದೇಶವಿರಬಹುದು.

ನಾವಿನ್ನೂ ಆಮೆಗತಿಯಲ್ಲಿದ್ದೇವೆ ನಿಜ, ಆದರೆ ನನಗೆ ಹೆಮ್ಮೆಯಿದೆ ನಾವು ನಂಬಿಕೆಯನ್ನು ನೇಯುತ್ತಿದ್ದೇವೆಂದು. ನನಗೆ ಹೆಮ್ಮೆಯಿದೆ ನಾನು ಹೆಣ್ಣು ಎಂದು, ನನಗೆ ಹೆಮ್ಮೆಯಿದೆ ನಾನು “ಕೋನಿ ಡಕ್ವರ‍್ತ” ಎಂದು.

r1609a_gilson-1200x675

(ಮಾಹಿತಿ ಸೆಲೆ: hbr.orghuffingtonpost.inforbesindia.com)
(ಚಿತ್ರ ಸೆಲೆ: hbr.orgtravelblog.org, twitter.arzu)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: