ಯಾಕೀ ಚಿತ್ತ ಸಾವಿನತ್ತ

ಪ್ರಶಾಂತ ಎಲೆಮನೆ.

se1

ಆತ್ಮಹತ್ಯೆ(ತನ್ಕೊಲೆ) ಇಡೀ ಕುಟುಂಬವನ್ನೇ ತಲ್ಲಣಗೊಳಿಸಬಲ್ಲ ದುರಂತ. ನಮ್ಮ  ಪ್ರೀತಿಪಾತ್ರರ ಅಗಲಿಕೆ ಬಹಳ ಸಂಕಟದ ವಿಶಯವೇ ಸರಿ. ನಮ್ಮ ದೇಶದಲ್ಲಿ ಇತ್ತೀಚಿನ ಕೆಲವು ವರುಶಗಳಲ್ಲಿ ಒಕ್ಕಲಿಗರ ಆತ್ಮಹತ್ಯೆ ಬಾರಿ ಸುದ್ದಿಯಲ್ಲಿದೆ. ನ್ಯಾಶನಲ್ ಕ್ರೈಮ್ ಬ್ಯುರೋ ಪ್ರಕಾರ ಬಾರತದಲ್ಲಿ 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಕ್ಕಲಿಗರ ಸಂಕ್ಯೆ 5650.ಇದರಲ್ಲಿ ದೊಡ್ಡ ಪಾಲು ಮಹಾರಾಶ್ಟ್ರದ್ದು. ಜಗತ್ತಿನಲ್ಲಿ ಪ್ರತಿ 40 ನಿಮಿಶಕ್ಕೆ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಒಂದು ಪುಟ್ಟ ಮಗು ತಾನು ಹೆಚ್ಚು ಅಂಕ ಪಡೆಯಲಾಗಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳುತ್ತೆ ಅಂದ್ರೆ, ಇದರ ಕುತ್ತಿನ ಅರಿವಾಗಬಹುದೇನೋ. ಇದಕ್ಕೆಲ್ಲ ಎಲ್ಲೋ ನಮ್ಮ ಚಿತ್ತವೇ ಕಾರಣವೇನೋ ಆದರೂ ಮೇಲ್ನೋಟಕ್ಕೆ ಹಣಕಾಸು,ಕೌಟುಂಬಿಕ, ಕಾಯಿಲೆಗಳು, ಮಾದಕ ವ್ಯಸನ, ಅತಿಯಾದ ನಿರಾಸೆ ಇತ್ಯಾದಿ ಅನ್ನಲು ಅಡ್ಡಿಯಿಲ್ಲ. ಮರ‍್ಲಿನ್ ಮನ್ರ‍ೋ, ಹಿಟ್ಲರ್, ರಾಬಿನ್ ವಿಲಿಯಮ್ಸ್, ಹೆಮಿಂಗ್ವೇ ಹೀಗೆ ಆತ್ಮಹತ್ಯೆ ಮಾಡಿಕೊಂಡ ಮಹನೀಯರ ಪಟ್ಟಿ ಬಹಳ ಉದ್ದ ಇದೆ.

ಆತ್ಮಹತ್ಯೆಗೆ ಕುರಿತಂತೆ ಕೆಲವು ಸತ್ಯಗಳು:

  • ಸೆಪ್ಟೆಂಬರ್ 10 ವಿಶ್ವ ಆತ್ಮಹತ್ಯಾ ನಿಯಂತ್ರಣ ದಿನ
  • ಪುರುಶರ ಆತ್ಮಹತ್ಯೆ ಮಹಿಳೆಯರಿಗಿಂತಾ ಹೆಚ್ಚು
  • 25 ಮಂದಿ ಆತ್ಮಹತ್ಯೆ ಮಾಡಿಕೊಳ್ಳೋದರ ಬಗ್ಗೆ ಯೋಚಿಸಿದರೆ ಅದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋದು ಒಬ್ಬರು ಮಾತ್ರ
  • ಸೋಮವಾರ ಆತ್ಮಹತ್ಯೆ ಮಾಡಿಕೊಳ್ಳೋರು ಹೆಚ್ಚು ಮತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳೋರೆ ಹೆಚ್ಚಂತೆ
  • ಆತ್ಮಹತ್ಯೆ ಮಾಡಿಕೊಳ್ಳೋ 50% ಮಂದಿಗೆ ಕಿನ್ನತೆ ಇರುತ್ತೆ. ಇದರಲ್ಲಿ 90% ಮಂದಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದರೆ ಕಿನ್ನತೆಯನ್ನ ಗುಣಪಡಿಸಬಹುದು
  • 1937ರಿಂದ ಇಲ್ಲಿಯವರೆಗೆ ಅಮೇರಿಕದ ಗೋಲ್ಡನ್ ಗೇಟ್ ಬ್ರಿಡ್ಜ್‌ನಿಂದ ಜಿಗಿದು 1200 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
  • ಅತಿ ನಿದ್ರೆ ಮತ್ತು ನಿದ್ರಾಹೀನತೆ ಎರಡೂ ಸಾವಿನ ಯೋಚನೆಯನ್ನ ಹೆಚ್ಚು ಉತ್ತೇಜಿಸುತ್ತವಂತೆ
  • 10 ರಿಂದ 35 ಪ್ರತಿಶತ ಮಂದಿ ಸಾಯೋವಾಗ ಸಾವಿನಚೀಟಿ ಬರೆಯುತ್ತಾರಂತೆ

ಸರಣಿ ಆತ್ಮಹತ್ಯೆ:

ಆತ್ಮಹತ್ಯೆಯನ್ನ ಸಾಂಕ್ರಾಮಿಕವಾಗಿ ಕೂಡ ನೋಡಬಹುದು.ಇದಕ್ಕೆ ಸರಣಿ ಆತ್ಮಹತ್ಯೆಯನ್ನ ಉದಾಹರಿಸಬಹುದು. ನಮ್ಮ ದೇಶದಲ್ಲೇ ಕಳೆದ 20 ವರುಶದಲ್ಲಿ 3,00,000 ಒಕ್ಕಲಿಗರು ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಇದರಲ್ಲಿ 60000 ಮಹಾರಾಶ್ಟ್ರದವರೇ ಮತ್ತು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹೆಚ್ಚಿನವರು ದೊಡ್ಡ ಹಿಡುವಳಿದಾರರೆ.ಮೈಕ್ರೊನೀಶಿಯಾ ಎಂಬ ಪುಟ್ಟದ್ವೀಪದಲ್ಲಿ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೋಳ್ಳೋರು ಹೆಚ್ಚಾಗೋಕೆ ಶುರುವಾಗಿತ್ತು. ಇದರಲ್ಲಿ 24 ರಿಂದ 40 ವರುಶದವರೇ ಹೆಚ್ಚು.ಅವರು ಸಾಯೋವಂತ ಯಾವ ಕಾರಣಗಳೂ ಇರಲಿಲ್ಲ. 1980ರ ಸುಮಾರಿಗೆ ಇದರ ಸರಾಸರಿ ಇದ್ದಿದ್ದು 1,00,000 ಕ್ಕೆ 160. ಬೇರೆಲ್ಲಾ ದೇಶಗಳಿಗಿಂತಲೂ ಹೆಚ್ಚು. ಅತಿ ಕಸುವುಳ್ಳ ಅಮೆರಿಕಾದ ಕಾಳಗ ಪಡೆಯಲ್ಲೇ 2000ದಿಂದ ಈಚೆಗೆ ಆತ್ಮಹತ್ಯೆ ಮಾಡಿಕೊಳ್ಳೋದು ದುಪ್ಪಟ್ಟಾಗಿದೆಯಂತೆ. 2009ರಲ್ಲಿ 400ರಕ್ಕೂ ಹೆಚ್ಚು ಸಿಪಾಯಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.ಅದರಲ್ಲಿ ಅನೇಕರು ಸಮರ ತರಬೇತಿ ಕೂಡ ಮುಗಿಸಿದವರಲ್ಲ. ಒಬ್ಬರಿಂದ ಒಬ್ಬರಿಗೆ ಹೀಗೆ ಸಾವಿನಗೀಳು ಅಂಟಿಕೊಂಡ ಅನೇಕ ಉದಾಹರಣೆಗಳಿವೆ. ಹಾಗಾಗಿ ಮಾದ್ಯಮಗಳಲ್ಲಿ ಆತ್ಮಹತ್ಯೆಗಳಿಗೆ ಹೆಚ್ಚು ಪ್ರಚಾರ ಕೊಡದಿರುವುದು ಒಳಿತು.

ಮನಸೆಂಬ ಶಿಕಾರಿ:

ನಮ್ಮ ಏಳಿಗೆಗೆ ಮತ್ತು ಆತ್ಮಹತ್ಯೆಗೆ ನಂಟಿಲ್ಲ. ಕ್ಯಾತ ಈಜುಪಟು ಮೈಕಲ್ ಪೆಲ್ಪ್ಸ್ (Michael Phelps) 22 ಒಲಿಂಪಿಕ್ ಪದಕಗಳ ಒಲಿಸಿಕೊಂಡವ. ಅವನಿಗೂ 2012ರಲ್ಲಿ ಸಾಯುವ ಮನಸಾಗಿತ್ತಂತೆ. ಆತ್ಮಹತ್ಯೆ ಮಾಡಿಕೊಳ್ಳೋನು ಹೇಡಿ ಎಂಬ ಮಾತಿದೆ, ಆದರೂ ಅವನಿಗೆ ಗುಂಡಿಗೆಬೇಕು. ತನ್ನನ್ನೇ ಕೊಲ್ಲೋದೆನು ಸಣ್ಣ ಮಾತೇ? ನೋವನ್ನು ಸಹಿಸೋ ಶಕ್ತಿ ಒಂದು ಅಪರೂಪದ ಗುಣಾನೇ. ಆದರೆ ಇಂತ ನೋವು ಸಹಿಸೋ ಶಕ್ತಿಯುಳ್ಳವರೇ ಆತ್ಮಹತ್ಯೆ ಮಾಡಿಕೊಳ್ಳೋದು ಹೆಚ್ಚಂತೆ.ಯಾಕಂದ್ರೆ ಕ್ಶಣಕ್ಕಾದರೂ ಸರಿಯೇ ಸಾವಲ್ಲಿ ನೋವು ಹೆಚ್ಚು. ಒಮ್ಮೊಮ್ಮೆ ತುಂಬಾ ಕುಶಿ ಅನಿಸೋದು, ಒಮ್ಮೊಮ್ಮೆ ಯಾಕಪ್ಪಾ ಬದುಕಿದೀನಿ ಅನ್ನಿಸೋದು ಸಹಜವೇ ಆದರೆ ಹಾಗೆ ಅನ್ನಿಸೋ ತೀವ್ರತೆ ಎಶ್ಟು ಅನ್ನೋದು ಮುಕ್ಯವೇ. ಅದು ಮನಸಿನ ಯಾವುದೋ ಒಂದು ಕಾಯಿಲೆಯ ಲಕ್ಶಣವಿರಬಹುದು. ಮಾನಸಿಕ ಕಾಯಿಲೆಯಿಂದ ಆತ್ಮಹತ್ಯೆ ಮಾಡಿಕೊಳ್ಳೋರು ಹೆಚ್ಚಾಗುತ್ತಿರೋದು ಇದನ್ನ ಹೇಳುತ್ತೆ. ಇಲ್ಲಿ ಸಿರೊಟೋನಿನ್ (serotonin) ಎಂಬ ನರಪ್ರೇಕ್ಶಕವನ್ನ (neurotransmitter) ಕಡೆಗಣಿಸುವಂತಿಲ್ಲ, ಯಾಕೆಂದರೆ ಇದು ಮನಸಿನ ಏರಿಳಿತಗಳನ್ನ ನಿಯಂತ್ರಿಸುತ್ತೆ. ಡಿಸ್ಲೆಕ್ಸಿಯಾ (ಕಲಿಕೆಯತೊಂದರೆ – dyslexia), ಸ್ಕಿಜೋಪ್ರೇನಿಯಾ (ಅತಿರೇಕದವರ‍್ತನೆ – Schizophrenia), ಬೈಪೋಲಾರ‍್ ಡಿಸಾರ‍್ಡರ್ (ಲಹರಿಯಲ್ಲಿ ತೀವ್ರ ತರದ ಬದಲಾವಣೆ – bipolar disorder), ಇನ್ಸೋಮ್ನಿಯಾ (ನಿದ್ರೆಗೆ ಸಂಬಂದಿಸಿದ ರೋಗ – insomnia), ಆಟಿಸಂ (ನರಮಂಡಲದ ಬೆಳವಣಿಗೆಯಲ್ಲಿನ ಕೊರತೆ ­- autism) ಮೊದಲಾದ ಮಾನಸಿಕ ಕಾಯಿಲೆಗಳೂ ಆತ್ಮಹತ್ಯೆಯಲ್ಲಿ ಬಹುಮುಕ್ಯ ಪಾತ್ರ ನಿರ‍್ವಹಿಸಬಹುದು.

ಹೆಸರುವಾಸಿ ಮಾನಸಿಕ ರೋಗಿಗಳ ಮಾಂಜುಗ ಸಿಗ್ಮಂಡ್ ಪ್ರಾಯ್ಡ್ (Sigmund Freud) ಹೇಳುವಂತೆ  “ಆತ್ಮಹತ್ಯೆ ನಮ್ಮಲ್ಲೇ ಇರುವ ಸಾವು ಮತ್ತು ಬದುಕಿನ ತೊಳಲಾಟದ ಅಬಿವ್ಯಕ್ತಿ. ಸಾವು ಎಂಬುದು ಸಂಕಟ,ಯಾತನೆಯಲ್ಲಿರೋ ಮನಸಿನಲ್ಲಿ ಅತಿ ಹೆಚ್ಚು ಶಕ್ತಿಶಾಲಿ”.

ಇಲ್ಲಿ ಮೂರು ರೀತಿಯ ಮನಸ್ತಿತಿ ಇದೆಯಂತೆ

  1. ಕೊಲ್ಲುವ
  2. ಕೊಲ್ಲಿಸಿಕೊಳ್ಳುವ
  3. ತನಗೇನೆ ಕೇಡು ಮಾಡುವ

ಈ ಕಿನ್ನತೆಯ ಮಾನಸಿಕ ಸಮಸ್ಯೆಗಳನ್ನ ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಸೂಕ್ತ ಸಮಯಕ್ಕೆ ಅದನ್ನ ಗುರುತಿಸುವುದು ಮಾತ್ರ ಅತಿ ಮುಕ್ಯ. ಹೆಚ್ಚು ನಕಾರಾತ್ಮಕ ಚಿಂತನೆಗಳು,ನಿದ್ರಾಹೀನತೆಯಂತ ಸಾಮಾನ್ಯ ಸಮಸ್ಯೆಗಳಿಗೂ ತಜ್ನರನ್ನ ಸಂಪರ‍್ಕಿಸುವುದು ಸೂಕ್ತ. ಯೋಗ,ಪ್ರಾಣಾಯಾಮದಂತ ಬಳಕೆ ಬಹಳ ಒಳಿತು. ಮುಂಜಾನೆಯ ರವಿಯ ಕಿರಣಗಳು ನಮ್ಮ ನಕಾರಾತ್ಮಕ ಚಿಂತನೆಯನ್ನ ಕಡಿಮೆ ಮಾಡಬಹುದಂತೆ. ಕೂಟಗಳಲ್ಲಿ(Society) ಮಂದಿ ಜೊತೆ ಬೆರೆತರೆ ನಮ್ಮ ಚಟುವಟಿಕೆಗಳು ಹೆಚ್ಚು ಮುದವಾಗಬಲ್ಲುದು.

ಯಾವ ಸಮಸ್ಯೆಗಳೂ ನಮಗಿಂತ ದೊಡ್ಡದಲ್ಲ. ನಮಗೆ ಕೇಡು ಮಾಡಿಕೊಳ್ಳುವಶ್ಟು ಗಂಬೀರವೂ ಇರುವುದಿಲ್ಲ. ಸಮಯದ ಮುಂದೆ ಎಲ್ಲವೂ ಚಿಕ್ಕದೇ. ಇಂದು ದೊಡ್ಡದಾಗಿ ಕಾಣುವ ಸಮಸ್ಯೆ ನಾಳೆ ಚಿಕ್ಕದಾಗುತ್ತೆ. ಆದರೆ ನಾಳೆವರೆಗೂ ಕಾಯುವ ತಾಳ್ಮೆ ಬೇಕಶ್ಟೆ. “ನಾನು ಯಾಕಪ್ಪಾ ಬದುಕಬೇಕು?” ಅಂತ ಅನ್ನಿಸಿದರೂ, ಬದುಕಲು ಒಂದಲ್ಲ ಒಂದು ಕಾರಣ ಇದ್ದೇ ಇದೆ.ಬದುಕುವ ಕಾರಣಗಳು ಯಾವತ್ತೂ ಸಾಯುವ ಕಾರಣಗಳಿಗಿಂತ ದೊಡ್ಡದೆ. ಆಸ್ರ (AASRA), ಕನೆಕ್ಟಿಂಗ್ ಇಂಡಿಯಾ ಎಂಬ ಸೇವಾ ಸಂಸ್ತೆಗಳು ಮಂದಿಯ ಆತ್ಮಹತ್ಯೆ ತಡೆಯುವದಕ್ಕಾಗಿಯೇ ತಮನ್ನು ಮೀಸಲಿಟ್ಟಿವೆ.

ಹೀಗೊಂದು ಆಸಕ್ತಿ:

ಆಸ್ಟ್ರೇಲಿಯಾದ ಡಾನ್ ರಿಚಿಗೆ (Don Richie) ಒಂದು ವಿಚಿತ್ರವಾದ ಹುಚ್ಚಿತ್ತು. ಅವನ ಮನೆ ಇದ್ದಿದ್ದು “ದ ಗ್ಯಾಪ್ “ (The Gap) ಎಂಬ ಟ್ಯಾಸ್‌ಮನ್ (Tasman) ತೀರದ ಕಮರಿ (Cliff) ಪಕ್ಕ. ಇಲ್ಲಿಗೆ ಬಂದು ಜಿಗಿದು ಸಾಯೋರು ಬಹಳ ಮಂದಿ. ಪ್ರತಿ ದಿನ ರಿಚಿ ತನ್ನ ಮನೆಯಿಂದ ಸಮುದ್ರ ತೀರವನ್ನ ನೋಡ್ತಾ ಕುರ‍್ತಿದ್ದ. ಅವನಿಗೊಂದು ಗುರಿ ಇತ್ತು, ಅದು ಇಲ್ಲಿಗೆ ಬಂದು ಸಾಯೋರನ್ನ ತಡೆಯಬೇಕು ಮತ್ತು ಅವರನ್ನ ಬದಲಾಯಿಸಬೇಕು ಅಂತ. 1964 ರಿಂದ 2012 ರವರೆಗೆ ಅವನು ಮಾಡಿದ್ದು ಇದೇ. ಯಾರಾದರೂ ಕಡಲಿಗೆ ಹಾರಬಹುದು ಎಂಬ ಅನುಮಾನ ಬಂದ ಕೂಡಲೇ ಅವರನ್ನ ಹೋಗಿ ಮಾತಾಡಿಸ್ತಿದ್ದ. “ನಾನೇನಾದರೂ ನಿಮ್ಮ ಸಹಾಯ ಮಾಡಬಹುದಾ” ಅಂತ ಅವರನ್ನ ಕೇಳ್ತಿದ್ದ. ಅವನ ಈ ಜಾಣ್ಮೆ ಕೆಲಸ ಮಾಡ್ತಿತ್ತು. 2012ರಲ್ಲಿ ರಿಚಿ ಸತ್ತಾಗ ಅವನಿಗೆ ಕನಿಷ್ಟ 165 ಜನರ ಜೀವ ಉಳಿಸಿದ ಕೀರ‍್ತಿ ಸಿಕ್ಕಿತ್ತು. ಅವನ ಈ ಕೆಲಸ ನೂರಾರು ಜನರಿಗೆ ಅವರ ಪ್ರೀತಿಪಾತ್ರರನ್ನ ಉಳಿಸಿಕೊಟ್ಟಿತ್ತು.

ಬಹಳ ಜನ ಸಾಯುವಾಗ ಸಾವಿನ ಚೀಟಿ ಬಿಟ್ಟು ಹೋಗ್ತಾರೆ. ಅಂತಹುದೇ ಒಂದು ಹೀಗಿದೆ “ನಾನಿವತ್ತು ಗೋಲ್ಡನ್ ಗೇಟ್ ಸೇತುವೆಗೆ ಸಾಯೋಕೆ ಹೋಗ್ತಾ ಇದ್ದೀನಿ. ಅಲ್ಲಿ ಯಾರಾದರೂ ಸಿಕ್ಕಿ ಮುಗುಳ್ನಕ್ಕರೆ ನಾನು ಸಾಯಲ್ಲ”. ಇದನ್ನು ಬರೆದಿಟ್ಟ ಮನುಶ್ಯ ಅವತ್ತು ಬದುಕಿ ಬರಲಿಲ್ಲವಂತೆ. ಹಲವು ಸಲ ನಮ್ಮ  ಒಂದು ನಗು ಬೇರೆಯವರ ಜೀವನೇ ಉಳಿಸಬಹುದು ಅಂದರೆ ಅದಕೆಶ್ಟು ಶಕ್ತಿ ಇದೆ ಅಲ್ವಾ? ಹಾಗಾದರೆ ನಗು ನಗುತಾ ಬಾಳಿ ಕಿನ್ನತೆಯ ಯೋಚನೆಗಳನ್ನು ತೊರೆದು ಹಾಕಿ.

(ಮಾಹಿತಿ ಮತ್ತು ತಿಟ್ಟ ಸೆಲೆ: randomhistory.com , hindu.com , psychologytoday.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: