ಕಾರುಗಳ್ಳರಿಂದ ಎಚ್ಚರವಹಿಸುವುದು ಹೇಗೆ?

– ಜಯತೀರ‍್ತ ನಾಡಗವ್ಡ.

car-theft

ಕಾಲ ಬದಲಾದಂತೆ ಬಂಡಿಗಳೂ ಬದಲಾಗುತ್ತ ಸಾಗಿವೆ. ನಡು ಬೀಗ (Central Locking System), ಕದಲ್ಗಾಪು(Immobilizer) ಮುಂತಾದ ಹೊಸ ಚಳಕಗಳನ್ನು ಅಳವಡಿಸಿಕೊಂಡ ಇಂದಿನ ಬಂಡಿಗಳು ಕಳ್ಳರಿಂದ ಸಾಕಶ್ಟು ಬದ್ರವಾಗುತ್ತಿದ್ದರೂ, ಬಂಡಿಗಳ ಕಳ್ಳರು ಹೊಸ ಕಲೆಗಳನ್ನರಿತು ತಮ್ಮ ಕೈಚಳಕ ತೋರಿಸುವಲ್ಲಿ ಹಿಂದೆ ಬಿದ್ದಿಲ್ಲ. ಆದ್ದರಿಂದ ನಮ್ಮ ಬಂಡಿಗಳನ್ನು ನಾವು ಎಚ್ಚರದಿಂದ ಕಾಪಾಡಿಕೊಳ್ಳಬೇಕಾಗಿರುತ್ತದೆ. ಪೋಲಿಸರ ಅಂಕಿ ಸಂಕ್ಯೆಗಳು ಹೇಳುವಂತೆ, ಬಾರತದ ವಿವಿದೆಡೆ ಕದಿಯಲ್ಪಟ್ಟ ಕಾರುಗಳಲ್ಲಿ ಸುಮಾರು 5% ರಶ್ಟು ಕಾರುಗಳು ಮಾತ್ರ ಮರಳಿ ಸಿಕ್ಕಿವೆ. ನಾವು ಕೆಲವೊಮ್ಮೆ ಎಚ್ಚರ ತಪ್ಪಿ ಮಾಡುವ ಚಿಕ್ಕಪುಟ್ಟ ತಪ್ಪುಗಳು ಬಂಡಿ ಕಳ್ಳರಿಗೆ ತಮ್ಮ ಕೆಲಸ ಮಾಡಲು ನೆರವಾಗುತ್ತವೆ. ಈ ತಪ್ಪುಗಳ್ಯಾವುವು ಮತ್ತು ಅವುಗಳಾಗದಂತೆ ತಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

1.ಬಂಡಿಯ ಬೀಗದ ಕೈ:
ಬಂಡಿಯ ಬೀಗದ ಕೈ ಬಲು ಮುಕ್ಯವಾದದ್ದು. ಇದನ್ನು ಯಾವಾಗಲೂ ಬದ್ರವಾಗಿರಿಸಬೇಕು. ಗೊತ್ತು-ಪರಿಚಯವಿಲ್ಲದವರಿಗೆ ಬಂಡಿಯ ಬೀಗದ ಕೈ ನೀಡಬೇಡಿ. ಪರಿಚಯವಿರದವರಿಗೆ ಬೀಗದ ಕೈ ನೀಡಿದರೆ, ಬೀಗದ ಕೈಯ ಪಡಿಯಚ್ಚನ್ನು ತಯಾರಿಸಿ, ಕಳುವು ಮಾಡಲು ಸುಳುವಾಗುತ್ತದೆ. ಕೆಲವು ದೊಡ್ಡ ಮಳಿಗೆಗಳಿಗೆ, ಹೋಟೆಲ್‌ಗಳಿಗೆ, ಮಾಲ್‌ಗಳಿಗೆ (Mall) ತೆರಳಿದಾಗ ಅಲ್ಲಿ ಬಂಡಿಗಳನ್ನು ಬಂಡಿನೆಲೆಗೆ(Parking lot) ಬಿಡುವುದಕ್ಕೆ ಸಿಬ್ಬಂದಿಗಳಿರುತ್ತಾರೆ. ಇವರಿಗೆ ವಾಲೆ ಪಾರ‍್ಕಿಂಗ್ ಸಿಬ್ಬಂದಿ (Valet Parking Staff) ಎನ್ನುವುದುಂಟು. ವಾಲೆ ಎಂದರೆ ಕಯ್ಯಾಳು, ಅಂದರೆ ಕಯ್ಯಾಳಿನ ಸೇವೆ. ಇಂತವರಿಗೆ ಬಂಡಿಯ ಬೀಗದ ಕೈಯೊಪ್ಪಿಸುವುದು ಅನಿವಾರ‍್ಯ. ಅವರಿಗೆ ಬೀಗದ ಕೈ ನೀಡಿ ಸರಿಯಾದ ರಸೀದಿ ಪಡೆದುಕೊಳ್ಳಿ. ಅದಕ್ಕೂ ಮೊದಲು ಇವರು ಆಯಾ ಮಳಿಗೆಯ, ಹೋಟೆಲ್‍ನ ಸಿಬ್ಬಂದಿಗಳೇ ಎಂದು ಕಚಿತಪಡಿಸಿಕೊಳ್ಳುವುದು ಮರೆಯದಿರಿ. ಅನುಮಾನವಿದ್ದರೆ ಸಿಬ್ಬಂದಿಗೆ ಗುರುತಿನ ಚೀಟಿ ತೋರಿಸಲು ಹೇಳಿ. ಬಂಡಿಯಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನಿಡದಿರಿ.

2.ಬಂಡಿಯ ನಿಲುಗಡೆ(Parking)/ ಬಂಡಿನೆಲೆ (Parking lot):
ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಬಂಡಿಯ ನಿಲುಗಡೆಗೆ ವಿಶೇಶ ಜಾಗವನ್ನು ಗುರುತಿಸಿರುತ್ತಾರೆ. ಇವುಗಳು ಹೆಚ್ಚಾಗಿ ಮಾಲ್‌ನ ಕೆಳಮಹಡಿಯಲ್ಲಿ ಇರುತ್ತವೆ. ಅಂತಕಡೆ ನಿಲ್ಲಿಸುವಾಗ ಕತ್ತಲಿರುವ ಜಾಗಗಳನ್ನು ಆಯ್ದುಕೊಳ್ಳಬೇಡಿ. ಮಂದಿ ಸುಳಿದಾಡದ ಕತ್ತಲಿರುವ ಜಾಗಗಳು ಕಳ್ಳರಿಗೆ ಅಚ್ಚುಮೆಚ್ಚು. ಇಂತ ಕಡೆಗಳಲ್ಲಿ ನಿಮ್ಮ ಬಂಡಿಗಳನ್ನು ನಿಲ್ಲಿಸಬೇಡಿ. ನಿಲ್ಲಿಸಲೇಬೇಕಾದ ಪರಿಸ್ತಿತಿ ಬಂದೊದಗಿದಾಗ ಅಲ್ಲಿ ಸಿಸಿಟಿವಿ ತಿಟ್ಟಕಗಳನ್ನು (CCTV Camera) ಕೂಡಿಸಿದ್ದಾರೋ ಇಲ್ಲವೋ, ಬದ್ರತಾ ಸಿಬ್ಬಂದಿ ಇದ್ದಾರೆಯೋ ನೋಡಿಕೊಳ್ಳಿ.

3.ಬೀಗ ಹಾಕಿದ್ದನ್ನು ಕಾತರಿಸಿಪಡಿಸಿಕೊಳ್ಳಿ:
ಇಂದಿನ ಹೆಚ್ಚಿನ ಬಂಡಿಗಳ ಬೀಗದ ಕೈಗಳು ರಿಮೋಟ್(Remote Keys) ಮೂಲಕ ಹಿಡಿತದಲ್ಲಿಡಬಹುದು. ರಿಮೋಟ್‌ನ ಒಂದು ಪುಟ್ಟ ಗುಂಡಿಯ ಮೂಲಕ ಬಂಡಿಗೆ ಬೀಗ ಹಾಕಬಹುದು, ತೆರೆಯಬಹುದು. ಗುಂಡಿಯೊತ್ತಿ ಬೀಗವನ್ನು ಹಾಕಿದಾಗ ಬಂಡಿಯ ಬಾಗಿಲೆಳೆದು ಸರಿಯಾಗಿ ಅದು ಬದ್ರವಾಗಿದೆಯೇ ಕಚಿತಪಡಿಸಿಕೊಳ್ಳುವುದು ಬಲುಮುಕ್ಯ. ದೂರದಿಂದ ರಿಮೋಟ್ ಬಳಸಿದಾಗ ಕೆಲವೊಮ್ಮೆ ಬೀಗ ಸರಿಯಾಗಿ ಬೀಳದೇ ಇರಬಹುದು. ಅದಕ್ಕೆ ಸೋಮಾರಿತನ ತೋರದೇ ಬಾಗಿಲೆಳೆದು ಕಾತರಿಪಡಿಸಿಕೊಳ್ಳುವುದು ಒಳಿತು.

4. ಎರಡನೆಯ ಬೀಗದ ಕೈ:
ಸಾಮಾನ್ಯವಾಗಿ ಬಂಡಿಗಳನ್ನು ಕೊಂಡಾಗ ಎರಡು ಬೀಗದ ಕೈಗಳನ್ನು ನೀಡುತ್ತಾರೆ. ಒಂದು ಕಳೆದುಹೋದಲ್ಲಿ ಇನ್ನೊಂದು ಬಳಸಿಕೊಳ್ಳಬಹುದೆಂದು ಎರಡನೆಯ ಬೀಗದ ಕೈ ಕೊಟ್ಟಿರುತ್ತಾರೆ. ಕೆಲವರು ಈ ಎರಡನೆಯ ಬೀಗದ ಕೈಯನ್ನು ಬಂಡಿಯೊಳಗೆ ಇರಿಸಿರುತ್ತಾರೆ. ಇದು ಕಳ್ಳರಿಗೆ ಹುರುಪು ನೀಡಿದಂತೇ ಸರಿ. ಬಂಡಿಯ ಕಿಟಕಿಯ ಗಾಜನ್ನೊಡೆದು ಎರಡನೆಯ ಬೀಗದ ಕೈಯನ್ನು ಕದಿಯಲು ಇದು ದಾರಿ ಮಾಡಿಕೊಡುತ್ತದೆ. ಬಂಡಿಯ ಎರಡನೆಯ ಬೀಗದ ಕೈಯನ್ನು ಬದ್ರವಾಗಿ ಮನೆಯಲ್ಲಿಡುವುದು ಲೇಸು.

5. ಬಂಡಿಯ ಕಿಟಕಿಯ ಗಾಜುಗಳು ಮುಚ್ಚಿರಲಿ:
ಬಿಸಿಲಿನಲ್ಲಿ ಹೆಚ್ಚು ಹೊತ್ತು ಬಂಡಿ ನಿಲ್ಲಿಸಿದಾಗ ಬಂಡಿಗಳು ಕಾದು ಬಾಣಲೆಯಂತಾಗಿರುತ್ತವೆ. ಆಗ ಬಂಡಿಯಲ್ಲಿ ಕೂತರೆ ಬಾಣಲೆಯ ಮೇಲೆ ಕೂತಂತ ಅನುಬವ. ಬಿಸಿಲಿನಲ್ಲಿ ನಿಲ್ಲಿಸಿದಾಗ, ಬಂಡಿಯೊಳಗೆ ಗಾಳಿಯಾಡುತ್ತಿದ್ದರೆ ಬಂಡಿಯೊಳಗಿನ ಬಿಸಿ ಕಡಿಮೆಯಾಗುತ್ತದೆ. ಇದಕ್ಕೆಂದೇ ಕೆಲವರು ಬಂಡಿಯ ಕಿಟಕಿ ಗಾಜುಗಳನ್ನು ತೆರೆದಿರಿಸಿ ಹೋಗುತ್ತಾರೆ. ಬಂಡಿ ಕದಿಯುವವರಿಗೆ ಇದು ಸಲೀಸಾಗುತ್ತದೆ. ಕಣ್ಮುಚ್ಚಿ ತೆಗೆಯುವುದರಲ್ಲಿ ನಡುಬೀಗವನ್ನು(Central Locking System) ಕತ್ತರಿಸಿ, ಬೆಲೆಬಾಳುವ ವಸ್ತುಗಳಿದ್ದರೆ ಕದ್ದು, ಬಂಡಿಯನ್ನು ಲಪಟಾಯಿಸಲು ಇದಕ್ಕಿಂತ ಸುಲಬ ದಾರಿ ಬೇರೊಂದಿಲ್ಲ. ಬಂಡಿಯನ್ನು ನಿಲ್ಲಿಸುವಾಗ ಯಾವಾಗಲೂ ಅದರ ಕಿಟಕಿ ಗಾಜುಗಳನ್ನು ತೆರೆದಿಡಬೇಡಿ.

6. ಬೆಲೆಬಾಳುವ ವಸ್ತುಗಳನ್ನು ಬಂಡಿಗಳಲ್ಲಿ ಇಡದಿರಿ:
ಅಲೆಯುಲಿ(Mobile Phone), ಬೆಳ್ಳಿ-ಬಂಗಾರದ ಆಬರಣಗಳು ಇಲ್ಲವೇ ಇತರೆ ಬೆಲೆಬಾಳುವ ವಸ್ತುಗಳನ್ನು ಬಂಡಿಯಲ್ಲಿಯೇ ಇಟ್ಟು ಬಂಡಿ ನಿಲ್ಲಿಸಿ ಹೋಗುವುದು ದಡ್ಡತನವೆನ್ನಿಸಿಕೊಳ್ಳುತ್ತದೆ. ಹಾಗೆ ಕೆಲವೊಮ್ಮೆ ಬೆಲೆಬಾಳುವ ವಸ್ತುಗಳು ಇಡಲೇಬೇಕಾದ ಸಂದರ‍್ಬ ಬಂದೊದಗಿದರೆ , ಬಂಡಿಯ ಅಕ್ಕ-ಪಕ್ಕ ಯಾರು ಸುಳಿದಾಡುತ್ತಿಲ್ಲವೆಂದು ಕಾತರಿ ಮಾಡಿಕೊಂಡು ಸರಕುಗೂಡಿನಲ್ಲಿ(Glove Box) ಬದ್ರವಾಗಿಸಬೇಕು. ದೊಡ್ಡ ಸರಕಿನ ಇಲ್ಲವೇ ಪ್ರಯಾಣಕ್ಕೆ ಬಳಸುವ ಬಟ್ಟೆ ಚೀಲಗಳು ಇಡಬೇಕೆಂದಾಗ ಹಿಂಬದಿಯ ಸರಕು ಚಾಚಿನಲ್ಲಿಡಿ (Luggage Space/Boot Space). ಕೆಲವು ಕಳ್ಳರಿಗೆ ಬಂಡಿಯಲ್ಲಿನ ಹಾಡಿಕೆ ಪೆಟ್ಟಿಗೆಗಳೆಂದರೆ(Music or Stereo system) ಬಲು ಇಶ್ಟ. ಬಂಡಿಯ ಕಿಟಕಿ ಗಾಜುಗಳನ್ನೊಡೆದು ಹಾಡಿಕೆ ಪೆಟ್ಟಿಗೆಗಳನ್ನು ಸುಲಬವಾಗಿ ಎಗರಿಸಿಬಿಡುತ್ತಾರೆ. ಕೆಲವು ಹಾಡಿಕೆ ಪೆಟ್ಟಿಗೆಗಳ ಮುಂಬಾಗವನ್ನು ನೀವು ಬಿಡಿಸಿಡಬಹುದಾಗಿದ್ದು, ಬಂಡಿಯನ್ನು ನಿಲ್ಲಿಸಿ ಹೋದಾಗ ಅವುಗಳನ್ನು ಬಿಡಿಸಿ ಸರಕುಗೂಡಿಗೆ ಸೇರಿಸಿಡಬಹುದು. ಬೇಕೆಂದಾಗ ಮತ್ತೆ ಜೋಡಿಸಿ ಹಾಡು ಕೇಳುತ್ತ ಸಾಗಿ.

7. ಕಡತ,ಹಾಳೆಗಳನ್ನು ಕಾಪಾಡಿಕೊಳ್ಳಿ:
ನಾನು ನೋಡಿರುವಂತೆ ನಮ್ಮಲ್ಲಿ ಕೆಲವರು ಬಂಡಿ ನೋಂದಾಯಿಸಿಕೊಂಡ ಓಲೆ, ಮುಂಗಾಪಿನ ಹಾಳೆ (Insurance Paper), ಓಡಿಸುಗನ ಸೆಲವು(Driving License) ಹೀಗೆ ಬಂಡಿಗೆ ಸಂಬದಿಸಿದ ಕಡತಗಳ ಬೇರಚ್ಚುಗಳನ್ನು(Original Prints) ಬಂಡಿಯ ಸರಕುಗೂಡಿನಲ್ಲಿಟ್ಟು ಓಡಾಡಿಕೊಂಡಿರುತ್ತಾರೆ. ಅಕಸ್ಮಾತ್ ಇಂತ ಬಂಡಿಗಳು ಕಳ್ಳರಿಗೆ ಸಿಕ್ಕರೆ ಅವರಿಗಂತೂ ಹಬ್ಬವೋ ಹಬ್ಬ. ಬಂಡಿಗೆ ಸಂಬಂದಿಸಿದ ಎಲ್ಲ ಕಡತಗಳಿದ್ದರೆ ಅದನ್ನು ಇನ್ನೊಬ್ಬರಿಗೆ ಸುಲಬವಾಗಿ ಮಾರಲು ಇದು ಅನುವು ಮಾಡಿಕೊಡುತ್ತದೆ. ಹೀಗಾಗದಿರಲು ಬಂಡಿಗೆ ಸಂಬಂದಪಟ್ಟ ಮೂಲ ಕಡತ, ಹಾಳೆಗಳನ್ನೆಂದು ಬಂಡಿಯಲ್ಲಿಟ್ಟು ಕೊಳ್ಳದೇ ಅದರ ಪಳಿಯನ್ನು(Copy) ಇಟ್ಟುಕೊಂಡಿರಿ.

8. ನಿಮ್ಮ ಬಂಡಿಗೆ ಕಳ್ಳತನ ತಡೆಯಬಲ್ಲ ಎಣಿಗಳನ್ನು (Anti-theft Device) ಅಳವಡಿಸಿ:
ದಿನೇ ದಿನೇ ಬಂಡಿಗಳ್ಳರು ಚುರುಕಾಗುತ್ತಿದ್ದಾರೆ. ಹೊಸದಾದ ಕಳ್ಳತನ ತಡೆಯುವ ಚಳಕಗಳನ್ನು (Anti-theft Technology) ಮೀರಿ ನಿಲ್ಲುವ ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಇಶ್ಟೆಲ್ಲ ಮುಂದುವರೆದರೂ ಹಳಮೆಯ ಚಳಕಗಳಾದ ತಿಗುರಿ ಬೀಗ(Steering lock), ಹಲ್ಲುಗಾಲಿಗಳ ಬೀಗ(Gear Lock) ಇಂದಿಗೂ ಕಳ್ಳರಿಗೆ ಕಬ್ಬಿಣದ ಕಡಲೆಯಾಗಿವೆ. ಇವುಗಳನ್ನು ಸುಳುವಾಗಿ ಮುರಿದು ಬಂಡಿಯನ್ನು ಕದಿಯಲಾಗದು. ಅಲ್ಲದೇ, ಈ ಕೆಲಸಕ್ಕೆ ಹೆಚ್ಚಿನ ಹೊತ್ತು ತಗಲುವುದರಿಂದ, ಇಂತ ಬಂಡಿಗಳನ್ನು ಕದಿಯಲು ಕಳ್ಳರು ಹಿಂದೇಟು ಹಾಕುವರು. ಈ ಚಳಕಗಳನ್ನು ಬಂಡಿಯಲ್ಲಿ ಅಳವಡಿಸಿಕೊಂಡಿದ್ದರೆ ನೀವು ನೆಮ್ಮದಿಯಾಗಿರಬಹುದು.

9. ಕೊನೆಯದಾಗಿ, ಬಂಡಿಯನ್ನು ಆನ್ ಮಾಡಿರಿಸಿ ಬೀದಿಯಾಚೆ ಬದಿಗೆ ಏನನ್ನೋ ಕೊಳ್ಳಲು ಹೋಗುವುದು ಸರಿಯಲ್ಲ. ಬಂಡಿಯನ್ನು ಆನ್ ಮಾಡಿರಿಸಿ ಹೀಗೆ ಹೋಗಿ ಹಾಗೇ ಬಂದೇ ಎನ್ನುವಶ್ಟರಲ್ಲಿ ನಿಮ್ಮ ಬಂಡಿ ಕಳ್ಳರ ಪಾಲಾಗಿರಬಹುದು. ಯಾವುದೇ ಪುಟ್ಟ ವಸ್ತು ಕೊಳ್ಳಲು ಎಶ್ಟೇ ಕಡಿಮೆ ಹೊತ್ತು ತಗಲುತ್ತಿದ್ದರೂ ಬಂಡಿಯನ್ನು ಆನ್ ಮಾಡಿರಿಸದೇ ,ಆಪ್ ಮಾಡಿ ಬೀಗ ಬದ್ರಪಡಿಸಿ ನಿಮ್ಮ ಬಂಡಿಯನ್ನು ಕಾಪಾಡಿಕೊಳ್ಳಿ.

(ಮಾಹಿತಿ ಮತ್ತು ತಿಟ್ಟ ಸೆಲೆ: cartoq.com, mylocalscoop.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: