ಪತ್ತೇದಾರಿ ಕತೆ: “ನಿನ್ನಾತ್ಮಕ್ಕೆ ಶಾಂತಿ ಸಿಗಲಿ”(ಕೊನೆ ಕಂತು)

– ಬಸವರಾಜ್ ಕಂಟಿ.

ಕಂತು-1  ಕಂತು-2 ಕಂತು-3 ಕಂತು-4

ಒಬ್ಬ ಪೇದೆಯ ಬಟ್ಟೆ ಹಾಕಿಕೊಂಡು, ಕಯ್ಯಲ್ಲಿ ಒಂದು ಕಡತ ಇಟ್ಟುಕೊಂಡು ಅರಸ್ ಅವರ ಮನೆಕಡೆಗೆ ಹೊರಟೆ.

ತನ್ನನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದರೂ, ಸುದಾ ಪೊಲೀಸ್ ಕಂಪ್ಲೆಂಟ್ ಕೊಡದೇ ಇರೋಹಾಗೆ ಸಂಜಯ್ ನೇ ಅವಳಿಗೆ ಹೇಗೋ ಮನವೊಲಿಸಿದ್ದಾನೆ. ಆಗ ಬಹುಶ ಅವಳು ಕಾಸಗಿ ಪತ್ತೇದಾರನಿಗಾದರೂ ನೇಮಿಸೋಣ ಎಂದಾಗ ದಾರಿಕಾಣದೆ ನನ್ನನ್ನು ಮೀಟ್ ಮಾಡಿ, ನನ್ನ ಕಾರ‍್ಡ್ ಪಡೆಯಲು ನನ್ನ ಜೊತೆ ನಾಟಕ ಆಡಿದ್ದಾನೆ. ಆದರೆ ಈ ಕಿಡ್ನಾಪ್ ವಿಶ್ಯ ಮತ್ತು ಅದರಲ್ಲಿ ಅವನೂ ಬಾಗಿಯಾಗಿದ್ದಾನೆ ಎಂದು ತಮಗೆ ಗೊತ್ತಾದ ತಕ್ಶಣ ಅರಸ್ ಅವರು ಸುದಾಳಿಗೆ ತಿಳಿಸಿದ್ದಾರೆ. ಆಗ ಸುದಾ ಮತ್ತು ಸಂಜಯ್ ನಡುವೆ ಜಗಳವಾಗಿ ಸುದಾಳೇ ಆ ಹೂದಾನಿಯನ್ನು ಎತ್ತಿ ಸಂಜಯ್ ತಲೆಗೆ ಹೊಡೆದಿದ್ದರೆ? ಅಲ್ಲಿ ಏನಾಗಿರಬಹುದು ಎಂದು ಸುದಾ ಮಾತ್ರ ಹೇಳಲು ಸಾದ್ಯ. ಸುದಾ ಪಾರ‍್ಲರ್ ನಲ್ಲಿ ಇದ್ದಳೆಂಬ ಸಾಕ್ಶಿ ಸುಳ್ಳು ಎಂದು, ಅವತ್ತು ವಕೀಲರು ಬಾಯಿ ಬಿಟ್ಟು ಹೇಳಿದಾಗಲೇ ಗೊತ್ತಾಗಿತ್ತು. ಇನ್ನು ಎಲ್ಲ ನಿಂತಿರುವುದು ಸುದಾ ಸತ್ಯವನ್ನ ಒಪ್ಪಿಕೊಳ್ಳುವುದರಲ್ಲಿ ಮಾತ್ರ. ಅವಳನ್ನು ಒಪ್ಪಿಸುವ ಉದ್ದೇಶದಿಂದಲೇ ಅವಳ ಮನೆಗೆ ಹೊರಟಿದ್ದೆ.

“ಸುದಾ ಮೇಡಂ ಹತ್ರ ಸಹಿ ತೊಗೋಬೇಕಿತ್ತು”. ಬಾಗಿಲಲ್ಲಿದ್ದ ಗಾರ‍್ಡ್ ಗೆ ಹೇಳಿದೆ. ಅವನು ಗೇಟು ತೆಗೆದ. ತಲಬಾಗಿಲಲ್ಲಿ ನಿಂತಿದ್ದ ಗಾರ‍್ಡ್ ಗೂ ಅದೇ ಹೇಳಿದೆ. ಅವನು ಒಳಗೆ ಹೋಗಿ ಸುದಾಳ ಹತ್ರ ಮಾತಾಡಿ ಮರಳಿ ಬಂದು ಅವಳ ಕೋಣೆಗೆ ನನ್ನನ್ನು ಕರೆದುಕೊಂಡು ಹೋದ. ಪೇದೆಯ ವೇಶದಲ್ಲಿ ನನ್ನನ್ನು ನೋಡಿ ಅವಳಿಗೆ ಗೊಂದಲವಾಯಿತು. ನಾನು ನೇರ ಮಾತಿಗಿಳಿದೆ,

“ಸಂಜಯ್ ಸಾವಿಗೆ ನೀನೇ ಕಾರಣ ಅಲ್ಲಾ ಅಂತಾ ನಿನಗೂ ಗೊತ್ತು. ನೀನು ಮನಸ್ಸು ಮಾಡಿದ್ರೆ, ಅವನನ್ನಾ ಉಳಿಸಬಹುದಿತ್ತು ಅಲ್ವಾ?”

ಅವಳ ಮುಕ ಬೆವರಿತು. ಅಚ್ಚರಿಯ ಕಣ್ಣುಗಳಲ್ಲಿ ಬಾಗಿಲಲ್ಲಿ ನಿಂತಿದ್ದ ಗಾರ‍್ಡ್ ಮತ್ತು ನನ್ನೆಡೆಗೆ ಮತ್ತೆ ಮತ್ತೆ ನೋಟ ಹೊರಳಿಸಿದಳು. ಗಾರ‍್ಡ್ ಯಾರಿಗೋ ಕರೆ ಮಾಡಲು ಜೇಬಿನಿಂದ ಮೊಬೈಲು ಹೊರತೆಗೆದ.

“ನೀನು ಪ್ರಾಣಕ್ಕಿಂತಾ ಹೆಚ್ಚಾಗಿ ನಿನ್ನ ಸಂಜಯ್ ನನ್ನಾ ಪ್ರೀತಿಸ್ತಿದ್ದಿದ್ದು ನಿಜ. ಅವನೂ ನಿನ್ನನ್ನಾ ಅಶ್ಟೇ ಪ್ರೀತಿಸ್ತಿದ್ದಾ. ನಿನ್ನನ್ನಾ ಕಿಡ್ನಾಪ್ ಮಾಡಿದ್ದು ತನ್ನ ಬ್ಯುಸಿನೆಸ್ ಗೆ ದುಡ್ಡು ಹೊಂದಿಸೋದಕ್ಕೆ ಅಶ್ಟೇ. ನಿಮ್ಮಿಬ್ಬರ ಪ್ರೀತಿ ಸುಳ್ಳಲ್ಲಾ. ಅವನ ಕೊಲೆ ಮಾಡಿದ್ದು ನೀನಲ್ಲಾ ನೆನಪಿಟ್ಕೋ. ಈಗ ತಪ್ಪು ಮಾಡಿ ಯಾಕೆ ಇಡೀ ಜೀವನ ಕೊರಗ್ತೀಯಾ? ಸತ್ಯ ಒಪ್ಕೋ… ನಿನಗೆ ದೊಡ್ಡ ಶಿಕ್ಶೆ ಆಗೊಲ್ಲ. ನಿಮ್ಮಪ್ಪನ ಒತ್ತಾಯಕ್ಕೆ ಮಣಿಬೇಡ. ನಿಮ್ಮ ಪ್ರೀತಿನಾ ಗೆಲ್ಸು”

ಅಶ್ಟರಲ್ಲಿ ಆ ಗಾರ‍್ಡ್ ಬಂದು, “ನಿಮ್ ಐಡೆಂಟಿಟಿ ಕಾರ‍್ಡ್ ತೋರ‍್ಸಿ” ಎಂದ. ನಾನು ಸುದಾಳೆಡೆಗೇ ನೋಡುತ್ತಿದ್ದೆ. ಅವನು ಮತ್ತೆ ಅದನ್ನೇ ಕೇಳಿದ. ನಾನು “ಇಲ್ಲಾ” ಎಂದೆ.

ಹಿಂದಿನಿಂದ ನನ್ನ ಕಂಕುಳಕ್ಕೆ ಕಯ್ ಹಾಕಿ ದರದರನೇ ಏಳೆದುಕೊಂಡು ಹೋದ. ನಾನು ಚೀರುತ್ತಲೇ ಇದ್ದೆ, “ನಿನ್ನ ಸಂಜಯ್ ಆತ್ಮಕ್ಕೆ ಮೋಸ ಮಾಡ್ಬೇಡ. ನಿನ್ನ ಪ್ರೀತಿ ಗೆಲ್ಲಿಸು” ಅವಳು ಗೊಂದಲದಲ್ಲಿ ನೋಡುತ್ತಲೇ ಇದ್ದಳು. ನನ್ನನ್ನು ಹೊರಗೆ ದೂಕುತ್ತಾ ಗೇಟು ಎಳೆದುಕೊಂಡನು ಗಾರ‍್ಡ್. “ಒಳಗೆ ಬಿಟ್ಟಿದ್ದಕ್ಕೆ ತುಂಬಾ ತ್ಯಾಂಕ್ಸ್” ಎಂದೆ. ಅವನು ದುರುಗುಟ್ಟಿ ನೋಡಿದ. ನಾನು ಪಕ್ಕದ ಬೀದಿಯಲ್ಲಿ ನಿಲ್ಲಿಸಿದ್ದ ನನ್ನ ಕಾರಿನೆಡೆಗೆ ಹೆಜ್ಜೆ ಹಾಕಿದೆ.

ಅಂದು ಸಂಜೆ ಗಿರೀಶ್ ಹತ್ತಿರದ ಕಾಪಿ ಡೇ ನಲ್ಲಿ ಸಿಕ್ಕಿದ. ಮಂಜಾ ಇನ್ನೂ ಒಪ್ಪಿಕೊಂಡಿರಲಿಲ್ವಂತೆ. ನನ್ನ ಪಾಲಿನ ಹುಡುಕಾಟಗಳನ್ನು ಅವನಿಗೆ ಹೇಳಿದೆ. ಅವನಿಗೂ ಅದು ಸರಿಯೆನಿಸಿ ತಲೆದೂಗಿದ. ಆದರೆ ನಾನ್ಯಾಕೆ ಸುದಾಳನ್ನಾ ಹಾಗೆ ಬೇಟಿಯಾದೆ ಅಂತ ಕೇಳಿದ.

“ತನ್ನನ್ನಾ ಸಂಜಯ್ ನೇ ಕಿಡ್ನಾಪ್ ಮಾಡ್ಸಿದ್ದಾನೆ ಎಂದು ಗೊತ್ತಾದಾಗ ಅವಳಿಗೆ ಸಹಜವಾಗಿ ಅವನ ಮೇಲೆ ಕೋಪ ಬಂದು, ಪ್ರೀತಿಯನ್ನು ಮರೆಯುವಂತೆ ಮಾಡಿತ್ತು. ನಾನು ಹೋಗಿ ಅವಳಿಗೆ ಆ ಪ್ರೀತಿಯನ್ನು ನೆನಪಿಸಿ ಬಂದೆ. ಇದರ ಹಿಂದೆ ಒಂದು ಗುಟ್ಟೂ ಇದೆ”.

“ಏನದು?”

“ನಾನು ಮಾತಿನುದ್ದಕ್ಕೂ ಅವಳಿಗೆ ನಿನ್ನ ಪ್ರೀತಿ, ನಿನ್ನ ಸಂಜಯ್ ಅಂತ ಹೇಳುತ್ತಲೇ ಇದ್ದೆ. ಸಾಮಾನ್ಯವಾಗಿ ಜನರಿಗೆ ‘ಇದು ನಿನ್ನದು, ಇದು ನಿನ್ನದು’ ಎಂದು ಮತ್ತೆ ಮತ್ತೆ ಹೇಳಿದಾಗ ಅದರ ಬಗ್ಗೆ ತಾನಾಗೇ ಅವರಿಗೆ ಕಾಳಜಿ ಮತ್ತು ಜವಾಬ್ದಾರಿಯ ಅರಿವು ಮೂಡುತ್ತದೆ. ಅದರಲ್ಲೂ ಹುಡುಗಿಯರಲ್ಲಿ ಇದು ಹೆಚ್ಚು ಕೆಲಸ ಮಾಡುತ್ತದೆ”

“ಸೂಪರ‍್”

“ಅಶ್ಟಕ್ಕೂ ಮಂಜ ನಿಮ್ಮ ಕಯ್ಗೆ ಸಿಕ್ಕಿರೋದು ಅರಸ್ ಗೆ ಗೊತ್ತಾಗೇ ಆಗಿರುತ್ತೆ. ಈ ವಿಶ್ಯನೆಲ್ಲಾ ನಿಮಗೆ ಹೇಳಿದ್ದರೆ, ನೀವು ಅರಸ್ ಮತ್ತು ಸುದಾಳ ಎನ್ಕ್ವೈರಿ ಮಾಡ್ತಿದ್ರಿ. ಅವರು ನಿಮ್ಮ ಪ್ರಶ್ನೆಗಳಿಗೆ ಸೂಕ್ತವಾಗಿ ತಯಾರಾಗಿರುತ್ತಿದ್ದರು”

“ಅದೂ ನಿಜ… ಮುಂದೆ?”

“ಸುದಾ ಸತ್ಯ ಒಪ್ಕೋತಾಳೆ. ಒಂದೆರಡು ದಿನ ಕಾಯಿರಿ. ಇಲ್ದಿದ್ರೆ ನಿಮ್ಮ ಎನ್ಕ್ವೈರಿ ಮುಂದುವರೆಸಿ”

“ನಿಮಗೆ ಅನೂಪ್ ಮೇಲೆ ಯಾಕೆ ಅನುಮಾನ ಬರಲಿಲ್ಲ?”

“ಅವ್ನು ಅಂದು ಆಪೀಸಿನಲ್ಲೇ ಇದ್ದಿದ್ದಕ್ಕೆ ಪುರಾವೆ ಇತ್ತು. ಹಾಗಾಗಿ ಅವನೇ ಕೊಲೆ ಮಾಡಲು ಸುಪಾರಿ ಕೊಟ್ಟಿದ್ರೆ, ಕೊಲೆ ಮಾಡೋವ್ರು ತಮ್ಮ ಜೊತೆ ವೆಪನ್ ಕೂಡಾ ತಂದಿರ‍್ತಿದ್ರು. ಆಗ ಹೂದಾನಿ ಕಾಣೆ ಆಗ್ತಿರಲಿಲ್ಲ”. ಅವನು ಮತ್ತೆ ತಲೆದೂಗಿದ.

*****************************

ಮಾರನೆಯ ದಿನ ಸಂಜೆ ಸುದಾ ಸ್ಟೇಶನ್ನಿಗೆ ಬಂದು ತಪ್ಪೊಪಿಕೆಯ ಹೇಳಿಕೆ ಬರೆದುಕೊಟ್ಟಳಂತೆ. ಮೊಬೈ ಲಿನಲ್ಲಿ ಅದರ ತಿಟ್ಟ ತೆಗೆದು ಗಿರೀಶ್ ನನಗೆ ಕಳಿಸಿದ್ದ. ಅದು ಹೀಗಿತ್ತು,

“…
ಸಂಜಯ್ ನೇ ನನ್ನ ಕಿಡ್ನಾಪ್ ಮಾಡಲು ಸಂಚು ರೂಪಿಸಿದ್ದನೆಂದು ನನ್ನ ತಂದೆಯವರಿಂದ ತಿಳಿದ ಮೇಲೆ ಅವನನ್ನು ಇದರ ಬಗ್ಗೆ ವಿಚಾರಿಸಲು ಅವನ ಮನೆಗೆ ಹೋದೆ. ಅವನು ಮೊದಲು ಕ್ಶಮೆ ಕೇಳಿದರೂ, ನಂತರ ನಾನು ಪೊಲೀಸ್ ಕಂಪ್ಲೆಂಟ್ ಕೊಡುತ್ತೇನೆ ಎಂದು ಹೇಳಿ, ಮನೆಯಿಂದ ಹೊರಗೆ ಹೋಗಲು ಯತ್ನಿಸಿದಾಗ, ಬಾಗಿಲು ಹಾಕಿ, ನನ್ನನ್ನು ಬಲವಂತದಿಂದ ಹಿಡಿದಿಡಲು ಮುಂದಾದ. ಆಗ ನನ್ನ ಕಯ್ಗೆ ಸಿಕ್ಕ ಹೂದಾನಿಯನ್ನು ಎತ್ತಿ ಅವನ ತಲೆಗೆ ಹೊಡದೆ. ಅವನು ನರಳುತ್ತಾ ಕೆಳಗೆ ಬಿದ್ದ. ಸ್ವಲ್ಪ ಸಮಯದಲ್ಲೇ ರಕ್ತ ನೆಲದ ಮೇಲೆ ಹರಿಯಲು ಶುರುವಾಯಿತು. ನಾನು ಗಾಬರಿಯಾಗಿ ನನ್ನ ತಂದೆಯವರಿಗೆ ಕರೆ ಮಾಡಿ ನಡೆದಿದೆಲ್ಲವನ್ನೂ ತಿಳಿಸಿದೆ. ಹತ್ತು ನಿಮಿಶ ಬಿಟ್ಟು ಅವರು ಮರಳಿ ಕರೆಮಾಡಿ, ನನಗೆ ಅಲ್ಲಿಯೇ ಇರುವಂತೆ ಸೂಚಿಸಿದರು, ಮತ್ತು ನನ್ನನ್ನು ಕರೆದುಕೊಂಡು ಹೋಗಲು ಯಾರನ್ನಾದರು ಕಳಿಸುತ್ತೇನೆ ಎಂದು ಹೇಳಿದರು. ಅವರು ಹೇಳಿದಹಾಗೆ ಇಬ್ಬರು ಗಂಡಸರು ಬಂದರು. ಒಬ್ಬ ಜುಬ್ಬಾ ಪಾಯಿಜಾಮಾ ತೊಟ್ಟಿದ್ದ, ಇನ್ನೊಬ್ಬ ಬುರ‍್ಕಾ ದರಿಸಿದ್ದ. ಇಬ್ಬರೂ ಸೇರಿ ಮನೆಯನ್ನು ಮೊದಲಿನಂತೆ ಚೊಕ್ಕವಾಗಿಸಿ, ಅಲ್ಲಿ ಜಗಳ ನಡೆದ ಯಾವ ಸುಳಿವೂ ಇರದಂತೆ ನೋಡಿಕೊಂಡರು. ಅಶ್ಟರಲ್ಲಾಗಲೇ ಸಂಜಯ್ ತೆವಳುತ್ತಾ ಬಾಗಿಲಿನೆಡೆಗೆ ಹೋಗಿದ್ದ. ನನ್ನ ಪಕ್ಕದಲ್ಲಿ ಬಿದ್ದಿದ್ದ ಹೂದಾನಿ ಒಬ್ಬ ಎತ್ತಿಕೊಂಡ. ಇನ್ನೊಬ್ಬ ನನಗೊಂದು ಬುರ‍್ಕಾಕೊಟ್ಟು ಬಾತ್ ರೂಮಿನಲ್ಲಿ ಹೋಗಿ ತೊಟ್ಟುಕೊಳ್ಳುವಂತೆ ಸೂಚಿಸಿದ. ನಾನು ಬಾತ್ ರೂಮಿನಲ್ಲಿದ್ದಾಗ ಏನೋ ಸದ್ದು ಕೇಳಿತು. ಹೊರಗೆ ಬಂದು ನೋಡಿದಾಗ ಸಂಜಯ್ ತಲೆಯಿಂದ ಹೆಚ್ಚು ರಕ್ತ ಸುರಿಯುತ್ತಿತ್ತು. ಅವರು ತಡಮಾಡದೆ ಹೂದಾನಿ ಎತ್ತಿಕೊಂಡು, ಬಾಗಿಲುಹಾಕಿ, ನನ್ನನ್ನು ಅಲ್ಲಿಂದ ಕರೆದುಕೊಂಡು ಹೊರಟುಬಿಟ್ಟರು. ಆ ಗಳಿಗೆಯಲ್ಲಿ ತುಂಬಾ ಹೆದರಿದ್ದ ನನಗೆ ಸರಿ ಯಾವುದು ತಪ್ಪು ಯಾವುದು ಎಂದು ಗೊತ್ತಾಗಲಿಲ್ಲ.

ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಅವರು ನೇರವಾಗಿ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ಅಲ್ಲಿ ಅಪ್ಪ ನನಗಾಗಿ ಕಾಯುತ್ತಿದ್ದರು. ಅಪ್ಪನ ಜೊತೆ ಇನ್ನೊಬ್ಬ ವ್ಯಕ್ತಿ ಇದ್ದರು, ಅವರು ಯಾರೆಂದು ನನಗೆ ಗೊತ್ತಿಲ್ಲ. ಅವರು ಹೇಳಿಕೊಟ್ಟಂತೆ ನಾನು ಮರುದಿನ ನಡೆದುಕೊಂಡೆ.

ನನ್ನನ್ನು ಪ್ರೀತಿಸಿದವನಿಗೆ ಮೋಸಮಾಡಬಾರದೆಂದು ನನ್ನ ತಪ್ಪನ್ನು ಒಪ್ಪಿಕೊಳ್ಳಲು ಮುಂದಾಗಿದ್ದೇನೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ”

ತಿಟ್ಟಗಳ ಕೆಳಗೆ ಒಂದು ಸಂದೇಶವಿತ್ತು. “ನಾಳೆ ಅರಸ್ ಅವರನ್ನಾ ಅರೆಸ್ಟ್ ಮಾಡೋಕೆ ಹೋಗ್ತಾಯಿದೀನಿ. ಮೇಲಿನವರು ಓ.ಕೆ. ಎಂದಿದ್ದಾರೆ”.

ನಾನು ನಿಟ್ಟುಸಿರು ಬಿಟ್ಟೆ. ಸಂಜಯ್ ನನ್ನು ಕೊಲ್ಲಿಸದೆ ಅರಸ್ ಅವರಿಗೆ ಬೇರೆ ದಾರಿಯಿರಲಿಲ್ಲ. ಅವನು ಬದುಕಿದ್ದರೆ ಸುದಾಳ ಮೇಲೆ ಕೊಲೆ ಯತ್ನದ ಕೇಸು ಕಂಡಿತಾ ಬರುತ್ತಿತ್ತು. ಅದನ್ನು ಆತ್ಮರಕ್ಶಣೆ ಎಂದು ಹೇಳಿಕೊಳ್ಳಲು ಯಾವ ಸುಳಿವೂ ಇರಲಿಲ್ಲ.

(ಮುಗಿಯಿತು)

( ಚಿತ್ರ ಸೆಲೆ: michaelwjgage.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ:

Enable Notifications