ಅಮ್ರುತ ಗಳಿಗೆ

–  ದರೆಪ್ಪ ಕುಂಬಾರ.

ಹಿಂದೆ ತುರ‍್ತು ನಿರ‍್ಗಮನ ಇರುವ ಚಡ್ಡಿ
ಮುಂದೆ ಅಂಗಿಗೆ ಇಲ್ಲ ಒಂದೆರಡು ಬಿಡ್ಡಿ
ಕನ್ನಡಿ ಕಾಣದ ಸಿಂಬಳ ಸೋರುವ ಮೂತಿ
ಆದರೆ ಅಮ್ಮನಿಗೋ ದ್ರುಶ್ಟಿ ತೆಗೆಯುವ ಪ್ರೀತಿ

ಅತ್ತರೆ ಆಗಸವನೆ ಅಂಗೈಗಿಡುವನು ಅಪ್ಪ
ನಕ್ಕರೆ ಅಮ್ಮನಿಗದು ಹೋಳಿಗೆ ತುಪ್ಪ
ಅಪ್ಪನ ಕೆಂಡದ ಕೋಪಕೆ ಬಿದ್ದರೆ ಬೆಚ್ಚಿ
ಬಚ್ಚಿಡುವಳು ಅಮ್ಮ ಸೆರಗಲಿ ಮುಚ್ಚಿ

ನನ್ನ ಅಕ್ಕನ ಪಾಲಿನ ಮುದ್ದಿನ ತಮ್ಮ
ಆಗಾಗ ಕೋಪಕೆ ತುತ್ತಾಗೊ ಗೆಂಡೆತಿಮ್ಮ
ಹೊರಟರೆ ಹೊರಗೆ ಅವಳಿಗೆ ಜೊತೆಗಾರ
ನಾನೇ ಅಕ್ಕನ ಪುಟಾಣಿ ಕಾವಲುಗಾರ

ಬೆಳಗಾದರೆ ಬೇಕು ಗೆಳೆಯರ ಬಳಗ
ತಡವಾದರೆ ಬರುವರು ಮನೆಯ ಒಳಗ
ಊಟ ತಿಂಡಿ ಎಲ್ಲವೂ ಲಗುಬಗೆ
ಆಡಲು ಆಟವೋ ಹಲವು ಬಗೆಬಗೆ

ಆಟದ ಗುಂಗಲ್ಲಿ ಇದ್ದರೆ ರವಿಗ್ಯಾಕೊ ಅವಸರ
ನೋಡು ಹೆಂಗಲ್ಲಿ ಓಡುತಿಹನು ಸರಸರ
ಕತ್ತಲಾದರೇನಂತೆ ಆಟಕೆ ಬರವಿಲ್ಲ
ಅಪ್ಪನ ಜೊತೆಗಿರೆ ಗುಮ್ಮನ ಬಯವಿಲ್ಲ

ಚಂದಮಾಮನ ಜೊತೆಗೆ ನನಗೂ ಅಮ್ಮನ ಕೈತುತ್ತು
ನಡುವೆ ನನ್ನ ಪೆದ್ದುಮಾತಿಗೆ ಒಂದೊಂದು ಸಿಹಿಮುತ್ತು
ಅಜ್ಜಿಯ ಜೊತೆಗೆ ಲೆಕ್ಕಿಸಬೇಕು ಬಾನಿನ ಚುಕ್ಕಿ
ಎಲ್ಲಿಂದ ತರುವಳೋ ಕತೆಗಳ ಹೆಕ್ಕಿಹೆಕ್ಕಿ

ಇವೇ ನಮ್ಮೀ ಬದುಕಿನ ಅಮ್ರುತ ಗಳಿಗೆ
ದಯಮಾಡಿ ಮತ್ತೊಮ್ಮೆ ಬರುವೆಯಾ ಬಳಿಗೆ
ಅಮ್ಮನು ಇಲ್ಲ, ಅಪ್ಪನ ಪ್ರೀತಿಯೂ ಇಲ್ಲ
ಇನ್ನೊಂದು ಬಾರಿ ಕೊಡುವೆಯಾ ನನಗಿದೆ

(ಚಿತ್ರ ಸೆಲೆ: blogs.sacbee.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: