ಹ್ಯುಂಡಾಯ್‌ನ ಹೊಸ ಬಂಡಿ: ಟುಸಾನ್

– ಜಯತೀರ‍್ತ ನಾಡಗವ್ಡ.

in_gal_tl_ext_view06

ಬಾರತದ ಬಂಡಿ ಕೊಳ್ಳುಗರು ಆಟೋಟದ ಬಳಕೆಯ ಬಂಡಿಗಳತ್ತ ಮಾರುಹೋಗಿದ್ದಾರೆ ಎಂದರೆ ತಪ್ಪಲ್ಲ. ದುಬಾರಿ ಬೆಲೆಯ ದೊಡ್ಡ ಆಟೋಟದ ಬಂಡಿ(SUV) ಕೊಳ್ಳಲಾಗದಿದ್ದವರು, ಅಗ್ಗದ ಕಿರು ಆಟೋಟ ಬಂಡಿಗಳತ್ತ(Compact SUV) ತಮ್ಮ ಒಲವು ತೋರುತ್ತಿದ್ದಾರೆ. ಇದೇ ಕಾರಣಕ್ಕೆ ಡಸ್ಟರ್, ಎಕೋ ಸ್ಪೋರ‍್ಟ್, ಟೆರ್ರಾನೊ, ವಿಟಾರಾ ಬ್ರೆಜಾ, ಕ್ರೇಟಾ, ಹೋಂಡಾ ಬಿಆರ್‌ವಿ ಹೀಗೆ ಸಾಲು ಸಾಲು ಕಿರು ಆಟೋಟ ಬಂಡಿಗಳು ಹೊರಬಂದಿವೆ. ಬಾರತದ ಮಾರುಕಟ್ಟೆಯಲ್ಲಿ ಎರಡನೇ ದೊಡ್ಡ ಬಂಡಿ ತಯಾರಕ ಕೂಟವಾಗಿ ತನ್ನ ಸ್ತಾನ ಗಟ್ಟಿಗೊಳಿಸಿರುವ ತೆಂಕಣ ಕೊರಿಯಾ ಮೂಲದ ಹ್ಯುಂಡಾಯ್ ಕೂಟ “ಟುಸಾನ್” ಹೆಸರಿನ ಹೊಸದೊಂದು ಬಂಡಿಯನ್ನು ಹೊರತಂದಿದೆ. ಬರೀ ಕಿರು ಹಿಂಗದ(Hatchback) ಮತ್ತು ಸೆಡಾನ್(Sedan) ಕಾರುಗಳನ್ನೇ ನೆಚ್ಚಿಕೊಂಡಿದ್ದ ಹ್ಯುಂಡಾಯ್, ಇದೀಗ ಎಲ್ಲ ಬಗೆಯ ಕಾರುಗಳ ತಯಾರಿಕೆಯಲ್ಲಿ ತನ್ನ ಇರುವಿಕೆಯನ್ನು ಗಟ್ಟಿಗೊಳಿಸಿ, ಮಾರುಕಟ್ಟೆಯಲ್ಲಿ ತನ್ನ ಹರವನ್ನು ಹೆಚ್ಚಿಸುವ ನಿಟ್ಟಿನಿಂದ ಟುಸಾನ್(TUCSON) ಬಂಡಿಯನ್ನು ಬೀದಿಗಿಳಿಸಿದೆ. ಮೊದಲ ತಲೆಮಾರಿನ ಟುಸಾನ್ ಬಂಡಿ ಮೊದಲು ಬಾರತಕ್ಕೆ ಕಾಲಿಟ್ಟಿದ್ದು 2005 ರಲ್ಲಿ. ಈ ಮೊದಲ ಯತ್ನದಲ್ಲಿ ಸೋಲು ಕಂಡಿದ್ದರಿಂದ ಟುಸಾನ್‌ನ ಎರಡನೇ ತಲೆಮಾರು ಬಾರತದತ್ತ ಬರಲೇ ಇಲ್ಲ. ಇದೇ ನವೆಂಬರ್ 14ರಂದು 3ನೇ ತಲೆಮಾರಿನ ಟುಸಾನ್ ಬಿಡುಗಡೆಯಾಗಿದೆ. ಹೊಸ ಟುಸಾನ್ ಬಂಡಿಯ ವಿಶೇಶತೆ, ಇದರಲ್ಲಿ ಹೊಸತೇನು ಇರಲಿದೆ ಎಂಬುದನ್ನು ನೋಡೋಣ ಬನ್ನಿ.

 ಬಿಣಿಗೆ, ಸಾಗಣಿ ಹಾಗೂ ಮಯ್ಲಿಯೋಟ (Engine, Transmission and Mileage):

ಟುಸಾನ್ ಬಂಡಿ ಪೆಟ್ರೋಲ್ ಮತ್ತು ಡೀಸೆಲ್ ಹೀಗೆ ಎರಡೂ ಬಿಣಿಗೆಗಳ ಆಯ್ಕೆಯಲ್ಲಿ ಮಾರಾಟಗೊಳ್ಳುವುದು. ನು(Nu) ಹೆಸರಿನ ಪೆಟ್ರೋಲ್ ಬಿಣಿಗೆ 2 ಲೀಟರ್ ಅಳತೆಯದ್ದು, ಇದರಿಂದ 155 ಕುದುರೆಬಲದ ಕಸುವು ಉಂಟು ಮಾಡಿ, 192 ನ್ಯೂಟನ್ ಮೀಟರ್‌ಗಳಶ್ಟು ತಿರುಗುಬಲ ನೀಡಬಲ್ಲುದು. 2 ಲೀಟರ್‌ನ ಆರ್(R) ಹೆಸರಿನ ಡೀಸೆಲ್ ಬಿಣಿಗೆ 185 ಕುದುರೆಬಲ ಉಂಟು ಮಾಡಿ, ಬರ‍್ಜರಿ 400 ನ್ಯೂಟನ್ ಮೀಟರ್‌ಗಳಶ್ಟು ತಿರುಗುಬಲ ನೀಡಲಿದೆ. ಡೀಸೆಲ್ ಬಿಣಿಗೆ, ಕಡಿಮೆ ವೇಗದಲ್ಲೂ ನಯವಾಗಿ ತಿರುಗುಬಲ ನೀಡುವುದು ಓಡಿಸುಗರಿಗೆ ನಲಿವಿನ ವಿಶಯ. ಡೀಸೆಲ್ ಮತ್ತು ಪೆಟ್ರೋಲ್ ಎರಡೂ ಬಿಣಿಗೆಗಳಿಗೆ, 6-ವೇಗದ ತನ್ನ ಹಿಡಿತದ(Automatic Transmission) ಮತ್ತು ಓಡಿಸುಗನ ಹಿಡಿತದ(Manual Transmission)  ಎರಡು ಸಾಗಣಿಗಳ ಆಯ್ಕೆ ಕೊಡಮಾಡಲಾಗಿದೆ. ಪೆಟ್ರೋಲ್ ಟುಸಾನ್ ತನ್ನ ಹಿಡಿತದ ಸಾಗಣಿ  ಹೊಂದಿರುವ ಬಂಡಿ 16.5 ಕಿ.ಮೀ. ಹಾಗೂ ಓಡಿಸುಗನ ಹಿಡಿತದ ಸಾಗಣಿ ಪಡೆದಿರುವ ಬಂಡಿ 18.4 ಕಿ.ಮೀ.ಪ್ರತಿ ಲೀಟರ್ ಮಯ್ಲಿಯೋಟ(Mileage) ನೀಡುತ್ತವೆ. ಡೀಸೆಲ್ ಟುಸಾನ್ ತನ್ನ ಹಿಡಿತದ ಸಾಗಣಿ ಹೊಂದಿರುವ ಬಂಡಿ 13 ಕಿ.ಮೀ. ಹಾಗೂ ಓಡಿಸುಗನ ಹಿಡಿತದ ಸಾಗಣಿ ಪಡೆದಿರುವ ಬಂಡಿ 12.95 ಕಿ.ಮೀ.ಪ್ರತಿ ಲೀಟರ್ ಮಯ್ಲಿಯೋಟ ನೀಡುತ್ತವೆ.

%e0%b3%a7

ಮೈಮಾಟ:

ಹ್ಯುಂಡಾಯ್‌ನವರ ದೊಡ್ಡ ಆಟೋಟದ ಬಳಕೆಯ ಬಂಡಿ ಸಂಟಾಪೇ(Santa Fe) ಮತ್ತು ಕಳೆದ ವರುಶ ಬಂದ ಕಿರು ಆಟೋಟದ ಬಳಕೆಯ ಬಂಡಿ ಕ್ರೇಟಾ(Creta), ಇವರೆಡರ ಬೆರಕೆಯೇ ಟುಸಾನ್ ಅನ್ನಬಹುದು. ಕ್ರೇಟಾಗಿಂತ ಸಂಟಾಪೇ ಬಂಡಿಯನ್ನೇ ಹೆಚ್ಚು ಹೋಲುತ್ತದೆ. ಆರುಬದಿಯಾಕ್ರುತಿಗಳಿಂದ ಜೋಡಿಸಲ್ಪಟ್ಟ ಮುನ್ಕಂಬಿ ತೆರೆ(Hexagonal Front Grill) ಹ್ಯುಂಡಾಯ್‌ನ ಈಡುಗಾರಿಕೆಯ(Design) ಗುರುತಾಗಿ ಎದ್ದುಕಾಣುವುದು. ಆಟೋಟದ ಬಳಕೆಯ ಬಂಡಿಗಳು ತೋರುವ ದಿಟ್ಟ ನೋಟದಂತೆ, ಟುಸಾನ್ ಬಂಡಿಯ ಮುಂಬದಿಯ ಹಾಗೂ ಹಿಂಬದಿಯ ದೀಪಗಳನ್ನು ಅಳವಡಿಸಲಾಗಿದೆ. ಟುಸಾನ್ ಬಂಡಿಗೆ 18 ಇಂಚಿನ ಗಾಲಿಗಳನ್ನು ಜೋಡಿಸಿಲಾಗಿದೆ. ಆದರೆ 172 ಮಿಲಿಮೀಟರ್‌ನಶ್ಟೇ ಚಿಕ್ಕದಿರುವ ನೆಲತೆರವು(Ground Clearance) ಟುಸಾನ್‌ನಂತ ಬಂಡಿಗೆ ಸರಿಹೊಂದಲ್ಲವೆನಿಸುತ್ತದೆ.

ಬಂಡಿಯ ಒಳಗಡೆ ಬಂದರೆ, ಎಲ್ಲವೂ ಅಚ್ಚುಕಟ್ಟಾಗಿದೆ ಎಂಬುದು ಕಂಡು ಬರುತ್ತದೆ. ಒಳಬಾಗವನ್ನು ಕಪ್ಪು ಮತ್ತು ಮರಳಿನ ಬಣ್ಣ (Beige) ಹೀಗೆ ಇಬ್ಬಗೆಯ (Dual Tone) ಬಣ್ಣಗಳಿಂದ ತಯಾರಿಸಲಾಗಿದೆ. ಹ್ಯುಂಡಾಯ್‌ರವರ ಎಲಂಟ್ರಾ(Elantra) ಕಾರಿನಲ್ಲಿರುವ 8 ಇಂಚಿನ ತಿಳಿನಲಿ ಏರ‍್ಪಾಟನ್ನು(Infotainment System), ಟುಸಾನ್ ಬಂಡಿಯಲ್ಲೂ ಕಾಣಬಹುದು. ಅಂಡ್ರಾಯ್ಡ್ ಆಟೋ(Android Auto) ಮತ್ತು ಆಪಲ್ ಕಾರ್‌ಪ್ಲೇ(Apple Carplay) ನಡೆಸೇರ‍್ಪಾಟಗಳ ಮೂಲಕ ನಿಮ್ಮ ಚೂಟಿಯುಲಿಯನ್ನು(Smart Phone) ಈ ಬಂಡಿಗೆ ಹೊಂದಿಸಿಕೊಳ್ಳಬಹುದು.  4.2 ಇಂಚಿನ ತೋರುಮಣೆಯ(Dashboard) ತೆರೆಯಲ್ಲಿ(Screen) ಬಂಡಿಯ ದೂರದಳಕ(Odometer) ಮತ್ತು ಓಟದಳಕ(Speedometer) ಮುಂತಾದವುಗಳನ್ನು ಕಾಣಬಹುದು. ಕೇವಲ ಒಂದೇ USB ಕಿಂಡಿ ನೀಡಿರುವುದು ಕೂಡ ಹುಬ್ಬೇರಿಸುವ ವಿಶಯ. ಟುಸಾನ್ ಬಂಡಿಯೊಳಗೆ ಕೈ, ಕಾಲು ಚಾಚಿಕೊಂಡು ಹಾಯಾಗಿ ಪಯಣಿಸಲು ಸಾಕಶ್ಟು ಜಾಗವಿದೆ. ಸರಕುಚಾಚಿಕೆ(Boot Space) 513 ಲೀಟರ್‌ಗಳಶ್ಟು ದೊಡ್ಡದು. ಸರಕುಚಾಚಿನ ಬಾಗಿಲನ್ನು ನಿಮ್ಮ ಇಶ್ಟದ ಎತ್ತರಕ್ಕೆ ಹೊಂದಿಸಿಕೊಳ್ಳುವ ಏರ‍್ಪಾಟು ಮಾಡಿದ್ದು ಪಯಣಿಗರ ಕೆಲಸವನ್ನು ಹಗುರ ಮಾಡಲಿದೆ.

%e0%b3%a8

ಬಂಡಿಯ ಕಾಪಿನ ವಿಶಯದಲ್ಲಿಯೂ, ಇಂದಿನ ಹೆಚ್ಚಿನ ಬಂಡಿಗಳಲ್ಲಿ ಕಾಣ ಸಿಗುವ ಎಲ್ಲ ಏರ‍್ಪಾಟುಗಳನ್ನು ಟುಸಾನ್‌ನಲ್ಲಿ ನೋಡಬಹುದು. ಹೆಚ್ಚಿನ ಬೆಲೆಯ ತನ್ನ ಹಿಡಿತದ ಸಾಗಣಿಯ ಬಂಡಿಗಳಿಗೆ 6 ಗಾಳಿಚೀಲಗಳು ಮತ್ತು ಓಡಿಸುಗನ ಹಿಡಿತದ ಸಾಗಣಿಯ ಬಂಡಿಗಳಿಗೆ 2 ಗಾಳಿಚೀಲಗಳನ್ನು(Air Bag) ಜೋಡಿಸಲಾಗಿದೆ. ಸಿಲುಕಿನ ತಡೆತದ ಏರ‍್ಪಾಟು(Anti-lock Braking System), ಗುಡ್ಡ ಗಾಡಿನಂತ ಏರಿನ ಜಾಗದಲ್ಲಿ ಬಂಡಿ ಹಿಂದೆ ಜಾರದಂತೆ ತಡೆಯುವ ಏರ‍್ಪಾಟು, ಬಂಡಿ ನಿಲುಗಡೆಗೆ ಅರಿವಿಕ, ತಿಟ್ಟಕಗಳನ್ನು(Parking Sensors, Camera) ಮತ್ತು ಕಳ್ಳರಿಂದ ಕಾಪಾಡಲು ಕದಲ್ಗಾಪು(Immobilizer) ಟುಸಾನ್ ಬಂಡಿಯ ಬಾಗವಾಗಿರಲಿವೆ. ಸುಯ್ ಅಂಕೆ ಏರ‍್ಪಾಟು(Cruise Control), ಎತ್ತರಕ್ಕೆ ಹೊಂದಿಸಿಕೊಳ್ಳಬಲ್ಲ ತಿಗುರಿ(Height Adjustable Steering) ಮತ್ತು ಕುಡಿಗೆಗಳನ್ನು(Drink) ತಂಪಾಗಿರಿಸುವ ಸೇರುವೆಗಳು(Cooling glove box) ಬಂಡಿಯಲ್ಲಿ ಕಂಡುಬರುವ ಇತರೆ ವಿಶೇಶಗಳು.

ಹ್ಯುಂಡಾಯ್ ಟುಸಾನ್ ಯಾವುದೇ ಬಂಡಿಗಳೊಂದಿಗೆ ನೇರ ಪೈಪೋಟಿ ಒಡ್ಡದಿದ್ದರೂ, ತಾನೋಡ ಕಯ್ಗಾರಿಕೆಯ ಮಂದಿ, ಹೋಂಡಾ ಸಿಆರ್‌ವಿಯೊಂದಿಗೆ(Honda CR-V) ಇದನ್ನು ಹೋಲಿಸುತ್ತಿದ್ದಾರೆ. ಎರಡು ಬಂಡಿಗಳ ಆಯಗಳನ್ನು ಹೋಲಿಸಿದಾಗ ಎತ್ತರ, ಉದ್ದದಲ್ಲಿ ಟುಸಾನ್ ಬಂಡಿ ಕಿರಿದೆನಿಸಿದರೂ, ಅಗಲ ಮತ್ತು ಗಾಲಿಗಳ ನಡುವಿನ ದೂರ ಇವುಗಳಲ್ಲಿ ಟುಸಾನ್ ಬಂಡಿಯದ್ದೇ ಮೇಲುಗೈ. ತಿರುಗುಬಲ, ಕಸುವು, ಮಯ್ಲಿಯೋಟದಂತ ಅಳವುತನದ ವಿಶೇಶತೆಗಳಲ್ಲೂ ಟುಸಾನ್ , ಹೋಂಡಾದವರ ಸಿಆರ್‌ವಿಯನ್ನು ಮೀರಿಸುತ್ತದೆ. ಇವೆಲ್ಲ ವಿಶೇಶತೆಗಳ ಹೋಲಿಕೆಯನ್ನು ಕೆಳಗಿನ ಪಟ್ಟಿಯಲ್ಲಿ ನೋಡಬಹುದು.

%e0%b3%a9

%e0%b3%aa

ಬೆಲೆ: ಪೆಟ್ರೋಲ್ ಆಯ್ಕೆಯ ಬಂಡಿ ಸುಮಾರು 18.99 ಲಕ್ಶ ರೂ.ಗಳಿಂದ ಸಿಕ್ಕರೆ, ಡೀಸೆಲ್ ಆಯ್ಕೆಯ ಬಂಡಿ 21.59 ಲಕ್ಶ ರೂ.ಗಳ ಆರಂಬಿಕ ಬೆಲೆಯಲ್ಲಿ ದೊರೆಯಲಿವೆ.

ಬಿಳಿ, ಬೆಳ್ಳಿ, ಕಪ್ಪು, ಕಡುಗೆಂಪು ಮತ್ತು ಬೂದಿ 5 ಬಣ್ಣಗಳ ಆಯ್ಕೆಯಲ್ಲಿ ಬರುವ ಟುಸಾನ್, 5 ಮಂದಿ ಪಯಣಿಗರು ಇದರಲ್ಲಿ ಸಾಗಬಹುದು.

 

(ಮಾಹಿತಿ ಮತ್ತು ತಿಟ್ಟ ಸೆಲೆ: autocarindia.com, hondacarindia.com, hyundai.com )

 

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: