ಮರೆಯಾಗದೆ ಉಳಿದಿರುವ ‘ಮಲಿಯಾಬಾದ್ ಕೋಟೆ’
ಅವತ್ತು ಬೆಳಗ್ಗೆ ನಾನು, ಪುಟ್ಟ, ಸಮ್ಮೇಳನಕ್ಕೆ ಅಂತ ರಾಯಚೂರು ಇಳಿಯುತ್ತಿದ್ದ ಹಾಗೆ ಸಿಕ್ಕಿದ್ದು ಪ್ರಬು ಮತ್ತು ಅಬಿ. ಬೆಳಿಗ್ಗೆ 6:30 ಕ್ಕೆಯೇ ಇಲ್ಲೆ ಒಂದು ಜಾಗ ಇದೆ ನೋಡಿ ಬರೋಣ ಅಂತ ಸುಮ್ಮನೆ ಗಾಡಿ ಹತ್ತಿಸಿದರು. ಕುರುಚಲು ಗಿಡಗಳಿರುವಂತಹ ದಾರಿಯಲ್ಲಿ 5-6 ಕಿ.ಮೀ. ಸಾಗಿದ ಮೇಲೆ ಮಲಿಯಾಬಾದ್ ಅನ್ನೋ ಚಿಕ್ಕ ಊರಿದೆ, ಅದೇ ದಾರಿಯಲ್ಲಿ ಮುಂದೆ ಸಾಗಿದರೆ ದೊಡ್ಡ ದೊಡ್ಡ ಕಲ್ಲುಗಳ ಗೋಡೆಯನ್ನು ನೋಡಿದಾಗ ಕೋಟೆ ಎಂಬುದು ಅರಿವಿಗೆ ಬರುತ್ತದೆ. ಅದರೊಳಗೆ ಸಾಗಿದರೆ ಅಲ್ಲಿ ಕುರುಚಲು ಕಾಡು, ಕೆರೆ, ಕೆರೆಯನ್ನು ಸೀಳಿದ ದಾರಿ, ಯಾರೋ ಒಂದಶ್ಟು ಕಲ್ಲುಗಳನ್ನು ಗುಡ್ಡೆ ಹಾಕಿದ ಹಾಗೆ ಕಾಣುವ ದೊಡ್ಡದಾದ ಗುಡ್ಡವಿದೆ. ತುಂಗಬದ್ರಾ ನದಿಯ ಉದ್ದಗಲಕ್ಕೂ ಇದೇ ತರದ ಗುಡ್ಡಗಳು ಕಾಣಿಸಿದರೂ ಮಲಿಯಾಬಾದ್ ಗುಡ್ಡ ವಿಶೇಶವಾಗಿ ಕಾಣಿಸುತ್ತದೆ.
ಈ ಕೋಟೆಯನ್ನು ಕಟ್ಟಿದ್ದು 13ನೇ ಶತಮಾನದಲ್ಲಿ!
ಇತಿಹಾಸದ ಪ್ರಕಾರ ಕಾಕತೀಯರ ಕಾಲದಲ್ಲಿ ಕಟ್ಟಲಾದಂತ ಕೋಟೆ ಇದು. ರಾಯಚೂರು ಕೋಟೆ ನಿರ‍್ಮಿಸುವುದಕ್ಕಿಂತ ಮೊದಲು ಕಟ್ಟಿಸಿರುವುದಾಗಿ ತಿಳಿದು ಬರುತ್ತದೆ. ಇದು 2 ಸುತ್ತಿನ ಕೋಟೆಯಾಗಿದ್ದು 13 ನೇ ಶತಮಾನದಲ್ಲಿ ಕಾಕತೀಯರು ಒಂದು ಸುತ್ತು ಮಾತ್ರವೆ ಕಟ್ಟಿಸಿದ್ದರು. ರಾಯಚೂರನ್ನು ಆಳುತ್ತಿದ್ದ ಆದಿಲ್ ಶಾಹಿಗಳ ಮೇಲೆ ದಂಡಯಾತ್ರೆಗೆ ಕ್ರುಶ್ಣ ದೇವರಾಯನು ಬಂದಾಗ ಅವನ ಸೈನ್ಯ ಇಲ್ಲಿಯೇ ಬೀಡು ಬಿಟ್ಟಿತ್ತೆಂದು ಹೇಳಲಾಗುತ್ತದೆ. ಬಳಿಕ ಈ ಕೋಟೆ ವಿಜಯನಗರ ಸಾಮ್ರಾಜ್ಯದ ಕೈವಶವಾಗುತ್ತದೆ. ಅವರ ಕಾಲದಲ್ಲಿ ಅಂದರೆ 15 ನೇ ಶತಮಾನದಲ್ಲಿ ಎರಡನೇ ಸುತ್ತಿನ ಕೋಟೆ ಮತ್ತು ವಿಶ್ಣುವಿನ ದೇವಾಲಯವನ್ನು ಶ್ರೀ ಕ್ರಿಶ್ಣದೇವರಾಯ ಕಟ್ಟಿಸುತ್ತಾನೆ. ತದನಂತರದ ದಿನಗಳಲ್ಲಿ ಶತ್ರುಗಳ ದಾಳಿಗೆ ಸಿಲುಕಿ ಅವೆಲ್ಲವೂ ನಾಶವಾಗುತ್ತವೆ. ಕೋಟೆಯೆಲ್ಲ ದೂಳಿನ ನಡುವೆ ಮುಚ್ಚಿ ಹೋಗುತ್ತದೆ.
ರಾಯಚೂರು ಕೋಟೆಯಶ್ಟೇ ಅಲ್ಲದೇ ಇದೂ ಒಂದು ದೊಡ್ಡ ಕೋಟೆಯಿದ್ದಿರಬಹುದು. ಅಲ್ಲಿರುವ ಆ ಕಲ್ಲುಗಳ ಗಾತ್ರವೇ ಅಂತದ್ದೊಂದು ಊಹೆಗೆ ದೂಡುತ್ತದೆ. ಅಶ್ಟು ದೊಡ್ಡ ಗಾತ್ರದ ಕಲ್ಲುಗಳವು. ಬಂಡೆ ಬಂಡೆಗಳನ್ನೇ ಕಡಿದು ಒಂದರ ಪಕ್ಕ ಒಂದಿಟ್ಟಂತೆ. ಇದು ಒಳಸುತ್ತಿನ ಕೋಟೆ. ಮತ್ತೊಂದು ಸುತ್ತಿನಲ್ಲಿ ಸ್ವಲ್ಪ ದೂರದಲ್ಲಿ 2 ದೊಡ್ಡ ಕಲ್ಲಾನೆಗಳಿವೆ. ಬಹುಶಹ ಇವು ಕೋಟೆ ಬಾಗಿಲಲ್ಲಿ ಇದ್ದಿರಬಹುದು ಅತವಾ ದೇವಾಲಯದ ಮುಂದೆ ಇದ್ದಿರಬಹುದು. ಶತ್ರುಗಳ ದಾಳಿಯಲ್ಲಿ ಹಾಳಾಗಿ ಕಾಲಾಂತರದಲ್ಲಿ ಅವುಗಳು ಸ್ತಳಾಂತರಗೊಂಡಿರಬಹುದು. ಇಂದು ಆ ಕಲ್ಲಾನೆಗಳು ಸ್ತಳೀಯರಿಗೆ ಸೇರಿದ ಹೊಲದ ನಡುವೆ ಇವೆ. ಅವು ಹಾಳಾಗದೆ ಇಂದಿಗೂ ಅಶ್ಟೇ ಆಕರ‍್ಶಣೀಯವಾಗಿವೆ. ಅಲ್ಲಿದ್ದುದು ಬರೀ ಕಲ್ಲಾನೆಗಳಲ್ಲ, ಹಾಳಾದ ಕೆತ್ತನೆಗಳು, ಬಿದ್ದುಹೋದ ಕೋಟೆಯ ದೊಡ್ಡ ದೊಡ್ಡ ಕಲ್ಲುಗಳು, ಇತಿಹಾಸದ ಗತಕಾಲದಲ್ಲಿ ನಶಿಸಿಹೋದ ಸಾಮ್ರಾಜ್ಯದ ನೆನಪುಗಳು. ಅದರ ಸುತ್ತಲೂ ಸಾಕಶ್ಟು ಕುರುಹುಗಳಿವೆ. ಹುಡುಕಿದರೆ ಇನ್ನೂ ಸಿಗಬಹುದು. ಇತಿಹಾಸವೇ ಹಾಗೆ, ಅಗೆದಶ್ಟೂ ಸಿಕ್ಕಬಹುದು. ಅವರವರ ಊಹೆಗೆ ನಿಲುಕದಶ್ಟು.
ಬ್ರುಹತ್ ಗಾತ್ರದ ಕಲ್ಲಿನ ಕೋಟೆ ಕೊತ್ತಲಗಳು ಮತ್ತು ಕೋಟೆ ಆವರಣದಲ್ಲಿ ಇರುವ ಕಲ್ಲಾನೆಗಳು ಕೋಟೆ ನಿರ‍್ಮಾಣದ ವಾಸ್ತು ಶೈಲಿಯ ಪ್ರತೀಕವಾಗಿವೆ.
2016 ರ ರಾಯಚೂರಿನ ಸಾಹಿತ್ಯ ಸಮ್ಮೇಳನದ ಲಾಂಚನದಲ್ಲಿ ಕೂಡ ಎರಡೂ ಬದಿಯಲ್ಲಿ ಕಲ್ಲಾನೆಗಳಿವೆ. ರಾಯಚೂರು ಜಿಲ್ಲೆಯ ಇತಿಹಾಸದಲ್ಲಿ ಕಲ್ಲಾನೆಗಳೇ ಒಂದು ಮಹತ್ವ ಪಡೆದಿರುವುದನ್ನು ಇದು ತೋರಿಸುತ್ತದೆ. ಈತರದ ಶಿಲ್ಪವನ್ನು ರೂಪಿಸಬೇಕೆಂದರೆ ಈಗ ಲಕ್ಶಗಳನ್ನೇ ಸುರಿಯಬೇಕಾಗುತ್ತದೆ, ಆದರೂ ಈ ಕಲ್ಲಾನೆಗಳೆನ್ನೇಕೆ ಸಂರಕ್ಶಿಸಿಲ್ಲ ಅನ್ನುವುದೇ ಪ್ರಶ್ನೆಯಾಗಿ ಉಳಿಯಿತು. ನಂತರ ಗೂಗಲ್ ನಲ್ಲಿ ನೋಡಿದಾಗ, ಮಲಿಯಾಬಾದ್ ಕೋಟೆಯ ರಕ್ಶಣೆಗೆ ಮತ್ತು ಅಬಿವ್ರುದ್ದಿಗಾಗಿ ಒಂದಶ್ಟು ಹಣ ಸರ‍್ಕಾರದಿಂದ ಬಿಡುಗಡೆಯಾಗಿದೆ. ಯಾವಾಗ ಆ ಕೆಲಸ ಪೂರ‍್ಣವಾಗುತ್ತದೆಯೊ?
ಇದೇ ಕೋಟೆಯ ಗೋಡೆಗಳನ್ನು ಬಳಸಿಕೊಂಡು ಗೋಶಾಲೆಯೊಂದನ್ನು ಮಾಡಿಕೊಂಡಿದ್ದಾರೆ. ರಾಯಚೂರಿನ ನಗರದೊಳಗೆ ಒಡಾಡುವ ಹಸುಗಳನ್ನು ಇಲ್ಲಿ ತಂದು ಸಾಕುತ್ತಾರೆ.
ದೊಡ್ಡದಾದ ಊಹೆಗಳನ್ನು ಇಟ್ಟಕೊಂಡು ಇಂತಹ ಜಾಗವನ್ನು ನೋಡಲು ಹೋಗಲೇ ಬಾರದು. ಸ್ವಲ್ಪ ಶಿತಿಲಾವಸ್ತೆಯಲ್ಲಿರುವ ಜಾಗವಾದ್ದರಿಂದ ಇತಿಹಾಸದ ಬಗ್ಗೆ ಆಸಕ್ತಿ ಇರುವ ಮತ್ತು ಕುರುಹುಗಳನ್ನು ನೋಡಲು ಮನಸ್ಸಿರುವ ಮಂದಿಗೆ ಮಾತ್ರ ಈ ಜಾಗ ಹಿಡಿಸಬಹುದು. ನಾವು ಅಲ್ಲಿಗೆ ಹೋಗಿದ್ದೆ ಆ ಕ್ಶಣದ ನಿರ‍್ದಾರವಾದ್ದರಿಂದ ಒಂದು ರೀತಿಯ ವಿಬಿನ್ನ ಅನುಬವ ನೀಡಿತು.
(ಚಿತ್ರ ಸೆಲೆ: ದೇವರಾಜ್ ಮುದಿಗೆರೆ)
ಇತ್ತೀಚಿನ ಅನಿಸಿಕೆಗಳು