ಕಿಟ್‍ ಕ್ಯಾಟ್‍‍ ನಿಂದ ಕಿಟ್‍ ಕ್ಯಾಟ್!

ವಿಜಯಮಹಾಂತೇಶ ಮುಜಗೊಂಡ.

kitkat

ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಮೆಚ್ಚುವ ತಿನಿಸು ಚಾಕಲೇಟ್. ಚಾಕಲೇಟ್‍ ಜಗತ್ತಿನಲ್ಲಿ ಹೆಚ್ಚು ಮಂದಿ ಮೆಚ್ಚಿರುವ ‘ನೆಸ್ಲೇ ಕಿಟ್‍ ಕ್ಯಾಟ್‍’ನ ರುಚಿ ಬೇರೆಲ್ಲ ಚಾಕಲೇಟ್‍‍ಗಳಿಗಿಂತ ಬೇರೆ ಮತ್ತು ವಿಶೇಶ. ಬೆರಳುಗಳಂತೆ ಉದ್ದುದ್ದನೆಯ ಆಕಾರದ ಕಿಟ್‍ ಕ್ಯಾಟ್ ಯಾರಿಗೆ ತಾನೆ ಇಶ್ಟವಿಲ್ಲ? ಪ್ರತಿ ವರ‍್ಶ ಸುಮಾರು 250 ಬಿಲಿಯನ್ ಅಮೆರಿಕನ್ ಡಾಲರ್‍ನಶ್ಟು ಗಳಿಕೆ ಹೊಂದಿರುವ ನೆಸ್ಲೇ, ಜಗತ್ತಿನಲ್ಲಿಯೇ ಅತಿಹೆಚ್ಚು ಆದಾಯವುಳ್ಳ ತಿಂಡಿ-ತಿನಿಸುಗಳ ತಯಾರಿಕೆಯ ಕಂಪನಿಯಾಗಿದೆ. ಜಗತ್ತಿನ 194 ದೇಶಗಳಲ್ಲಿರುವ ಈ ಕಂಪನಿ ಸುಮಾರು 333,000 ಮಂದಿ ಕೆಲಸಗಾರರನ್ನು ಹೊಂದಿದೆ.

ಮೆಚ್ಚಿನ ಕಿಟ್‍ ಕ್ಯಾಟ್ ಚಾಕಲೇಟನ್ನು ಹೇಗೆ ಮತ್ತು ಯಾವುದರಿಂದ ಮಾಡುತ್ತಾರೆ ಎನ್ನುವ ಕುತೂಹಲ ಹಲವು ಸಲ ಮೂಡಿರಬಹುದು. ಸಿಹಿಮುರುಕುಗಳನ್ನು(wafers) ಚಾಕಲೇಟ್ ಕೆನೆಯಲ್ಲಿ(cream) ಅದ್ದಿ, ಕಿಟ್‍ ಕ್ಯಾಟ್ ಚಾಕಲೇಟನ್ನು ಮಾಡುತ್ತಿರಬಹುದು ಎಂದು ನೀವು ಅಂದುಕೊಂಡಿರಲೂಬಹುದು. ಆದರೆ ಈ ಸಿಹಿಮುರುಕು, ಬೇರೆ ಚಾಕಲೇಟಿನ ಅತವಾ ಹಾಗೆಯೇ ಸಿಗುವ ಸಿಹಿಮುರುಕುಗಳಿಗಿಂತ ಬೇರೆಯೇ ರುಚಿ ಹೊಂದಿದೆ ಎನ್ನುವುದು ನಿಮ್ಮ ಗಮನಕ್ಕೆ ಬಂದಿರಲೇಬೇಕು. ಹಾಗಾದರೆ ಗರಿಗರಿಯಾದ, ಬೇರೆಯೇ ರುಚಿಯನ್ನು ಹೊಂದಿರುವ ಈ ಸಿಹಿಮುರುಕಿನ ಸವಿಯ ಹಿಂದಿರುವ ಗುಟ್ಟು ಏನು?

ಹೆಚ್ಚಿನ ಮಂದಿಗೆ ಗೊತ್ತಿಲ್ಲದ ಕಿಟ್‍ ಕ್ಯಾಟ್‍ನ ಈ ವಿಶೇಶ ರುಚಿಯ ಒಳಗುಟ್ಟು ಇತ್ತೀಚೆಗಶ್ಟೇ ಗೊತ್ತಾಗಿದೆ. ಈ ಮೊದಲು ಸಿಹಿಮುರುಕಿನ ಒಳಗಿರುವುದು ಮೆದುವಾದ, ತೆಳು ಬಣ್ಣದ ಬೇರೆ ಬಗೆಯ ಚಾಕಲೇಟ್ ಕೆನೆ ಅಂದುಕೊಂಡಿದ್ದರು. ನೀವಂದುಕೊಂಡಂತೆ ಇದು ವಿಶೇಶ ಬಗೆಯ ಚಾಕಲೇಟ್ ಕ್ರೀಮ್ ಅಲ್ಲ, ಇದು ಇನ್ನೊಂದು ಕಿಟ್‍ ಕ್ಯಾಟ್!

ನೆಸ್ಲೇ ಹೇಳುವಂತೆ ಇದು “ತೆಳುವಾದ ಕಿಟ್‍ ಕ್ಯಾಟ್ ಚಾಕಲೇಟ್ ಕೆನೆಪದರ”

ಕಿಟ್‍ ಕ್ಯಾಟ್‍ನ ಸಿಹಿಮುರುಕಿನ ನಡುವೆ ಇರುವುದು ಇನ್ನೊಂದು ಕಿಟ್‍ ಕ್ಯಾಟ್‍ನ ಪುಡಿಯಾಗಿದೆ. ನೆಸ್ಲೇ ಕಂಪನಿಯು, ಕಿಟ್‍ ಕ್ಯಾಟ್‍ನ ಯಾವುದೇ ತುಣುಕನ್ನು ಕೂಡ ಪೋಲಾಗಲು ಬಿಡುವುದಿಲ್ಲ. ಆಕಾರ ಅತವಾ ಅಳತೆಯ ಮಾನದಂಡದಲ್ಲಿ ನೆಸ್ಲೇ ಕೂಟದ ಗುಣಮಟ್ಟ ತಲುಪದ ಕಿಟ್‍ ಕ್ಯಾಟ್‍ ಚಾಕಲೇಟುಗಳನ್ನು ಬೇರ್‍ಪಡಿಸಿದ ಬಳಿಕ ಸಣ್ಣ ಪುಡಿಯನ್ನಾಗಿ ಮಾಡಿ, ಅದನ್ನು ಸಿಹಿಮುರುಕಿನ ನಡುವೆ ತುಂಬುತ್ತಾರೆ.

ಇಂತಹ ಚಾಕಲೇಟ್ ಪುಡಿಯನ್ನು ಏಕೆ ಬಳಸುತ್ತಾರೆ ಎನ್ನುವುದಕ್ಕೆ ಕಾರಣ ಕೂಡ ಕುತೂಹಲದ್ದೇ. ಚಾಕಲೇಟ್ ತಯಾರಾಗುವಾಗ ಗುಣಮಟ್ಟ ಪರೀಕ್ಶೆ ಮಾಡುವ ತಂಡದವರು ಹೆಚ್ಚು ಗುಳ್ಳೆಗಳಿರುವ, ನಿರೀಕ್ಶಿಸಿದಂತೆ ಹೊಳಪಿಲ್ಲದ ಅತವಾ ಬೇರೆ ಯಾವುದೇ ಬಗೆಯಲ್ಲಿ ಕೊರತೆ ಹೊಂದಿರುವ ಚಾಕಲೇಟುಗಳನ್ನು ಬೇರ‍್ಪಡಿಸುವರು. ರುಚಿಯಲ್ಲಿ ಯಾವುದೇ ಕೊರತೆಗಳಿಲ್ಲದಿದ್ದರೂ ಇವನ್ನು ಹಾಗೆಯೇ ಪೊಟ್ಟಣಕ್ಕೆ ತುಂಬಿಸುವುದಿಲ್ಲ. ಬದಲಾಗಿ ಇವುಗಳನ್ನೇ ಪುಡಿಮಾಡಿ ಸಿಹಿಮುರುಕಿನಲ್ಲಿ ತುಂಬಿಸಲಾಗುತ್ತದೆ.

ಕಿಟ್‍  ಕ್ಯಾಟ್ ಚಾಕಲೇಟ್ ಬಗೆಯ ‘ಇನ್ಸೆಪ್ಶನ್’!?

ನೀವು ಒಂದು ಕಿಟ್‍ ಕ್ಯಾಟ್‍ನ್ನು ಕೊಂಡು ತಿಂದರೆ ಅದರೊಂದಿಗೆ ಸಿಹಿಮುರುಕಿನ ನಡುವೆ ತುಂಬಿದ್ದ ಇನ್ನೊಂದು ಕಿಟ್‍ ಕ್ಯಾಟ್‍ನ ಪುಡಿಯನ್ನು ತಿನ್ನುವಿರಿ, ಒಂದು ಕಿಟ್‍ ಕ್ಯಾಟ್‍ನ ಜೊತೆ ಹಲವು ಕಿಟ್‍ ಕ್ಯಾಟ್‍ನ ಪದರಗಳನ್ನು ತಿನ್ನುವಿರಿ. ಹೀಗೆ ಚಾಕಲೇಟ್ ಬಾರ್‍ಗಳನ್ನು ಪುಡಿಮಾಡಿ ಸೇರಿಸುತ್ತಾರೆ ಎಂದರೆ ಒಂದು ಒಗಟು ನಿಮಗೆ ಮೂಡಿರಬಹುದು. ಹೊಸ ಕಿಟ್‍ ಕ್ಯಾಟ್ ಚಾಕಲೇಟೊಂದನ್ನು ಮಾಡುವಾಗ ಅದರಲ್ಲಿ ಹಿಂದೆ ಉಳಿದ ಚಾಕಲೇಟಿನ ಪುಡಿಯನ್ನು ಸೇರಿಸಿರುತ್ತಾರೆ. ಹಾಗಾದರೆ ಅದರಲ್ಲಿ ಕೂಡ ಹಿಂದೆ ಮಾಡಿದ ಚಾಕಲೇಟಿನ ಬಾಗ ಇದ್ದೇ ಇದೆ. ಹೀಗೆಯೇ ಎಶ್ಟು ಹಿಂದೆ ಹೋಗಬಹುದು ಎಂದು ನೀವು ಲೆಕ್ಕಹಾಕಲು ಕೂತರೆ ನೀವು ಎಣಿಕೆಯರಿಮೆಯ ನಿಪುಣರೇ ಆಗಿರಬೇಕು! ಇದನ್ನು ಕಿಟ್‍ ಕ್ಯಾಟ್ ಚಾಕಲೇಟ್ ಬಗೆಯ ‘ಇನ್ಸೆಪ್ಶನ್’ ಎನ್ನಬಹುದೇ? 🙂

ಅಂದಹಾಗೆ ಕಿಟ್‍ ಕ್ಯಾಟ್ ಕುರಿತ ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ, ಮೂರು ಬೆರಳುಗಳಂತಿರುವ ಕಿಟ್‍ ಕ್ಯಾಟ್ ಚಾಕಲೇಟುಗಳು ಇಂಡಿಯಾದಲ್ಲಿ ಮಾತ್ರವೇ ಸಿಗುತ್ತವೆ!

(ಮಾಹಿತಿ ಸೆಲೆ: mirror.co.uk, dailytelegraph.com.au)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: