ಕಂಕಣ ಬಾಗ್ಯ

– ಸುರಬಿ ಲತಾ.

maduve

ಪುರೋಹಿತರ ಮಂತ್ರಗಳು ಜೋರಾಗಿ ಕೇಳುತ್ತಿತ್ತು. ಹೆಂಗಸರೆಲ್ಲಾ ಸೇರಿ ಮದು ಮಗಳನ್ನು ಅಲಂಕರಿಸುತ್ತಿದ್ದರು. ಮೀನಾಳ ಮುಕದಲ್ಲಿ ಹೆಣ್ಣಿನ ಕಳೆ ಬಂದಿತ್ತಾದರೂ ಅವಳ ಮುಕದಲ್ಲಿ ಸಂತಸ ಮಾತ್ರ ಇರಲಿಲ್ಲ. ಎರಡು ದಿನದ ಹಿಂದೆ ತನ್ನ ತಂದೆಗೆ ಎರಡನೇ ಸಾರಿ ಹ್ರುದಯಾಗಾತ ಆಗಿತ್ತು. ವೈದ್ಯರು ಗಂಬೀರವಾಗಿ ನುಡಿದಿದ್ದರು, ಯಾವುದೇ ರೀತಿಯಲ್ಲಿ ಅವರಿಗೆ ಒತ್ತಡ ಕೊಡಬಾರದು. ಮೂರನೇ ಸಾರಿ ಹೀಗೆ ಆದರೆ ಪ್ರಾಣಕ್ಕೆ ಅಪಾಯ ಎಂದು.

ಮಗಳ ಮದುವೆಯ ಆಸೆ ಹೊಂದಿದವರಿಗೆ ನಿರಾಸೆ ಮಾಡಲು ಮನಸ್ಸು ಬರದೆ ಒಪ್ಪಿದ್ದಳು. ರಾಮರಾಯರ ಆಪ್ತ ಗೆಳೆಯರಂತೆ, ಎಶ್ಟೋ ವರ‍್ಶಗಳ ನಂತರ ಇಬ್ಬರೂ ಸಿಕ್ಕಿದ್ದು ಅವರ ಮಗನ ಮದುವೆ ಬಗ್ಗೆ ಹೇಳಿದರಂತೆ. ಅವರು ನನ್ನನ್ನು ನೋಡದೆಯೇ ತಮ್ಮ ಮಗನಿಗೆ ನನ್ನ ಕೇಳಿದರಂತೆ. ಒಳ್ಳೆಯ ಸಂಬಂದ, ಇಂಜಿನಿಯರಿಂಗ್ ಓದಿ ಅಮೇರಿಕಾದಲ್ಲಿ ಇರುವ ಹುಡುಗ. ಅಪ್ಪನಿಗೂ ಇಶ್ಟವಾಗಿ ನನ್ನ ಬಳಿ ಕೇಳಿದ್ದರು. ಅಪ್ಪನಿಗೆ ಯಾವುದೇ ರೀತಿಯಿಂದಲೂ ನೋವು ಕೊಡಲು ಇಶ್ಟವಿಲ್ಲದೇ ಒಪ್ಪಿದ್ದು ಆಯಿತು.

ಆದರೆ ಅಂದು ಕಂಡ ಆ ಮುಗ್ದ ನಗು, ಆ ಮುಕ ಮರೆಯಲು ಸಾದ್ಯವಾಗುತ್ತಿಲ್ಲ. ಆದರೂ ಆತನ ಬಗ್ಗೆ ಹೆಚ್ಚು ಏನೂ ತಿಳಿದಿಲ್ಲ. ಎಲ್ಲಿರುವನೋ ತಿಳಿದಿಲ್ಲ. ಹಾಗಾಗಿ ತಂದೆ ಮಾತಿಗೆ ಒಪ್ಪಿದ್ದಳು.

**********************

ಅಂದು ಹುಟ್ಟು ಹಬ್ಬವಾಗಿದ್ದರಿಂದ ತಾಯಿಯ ಬಲವಂತಕ್ಕೆ ಸೀರೆ ಉಟ್ಟು ದೇವಾಲಯಕ್ಕೆ ಬಂದಿದ್ದಳು. ಪೂಜೆ ಮುಗಿಸಿ ಮೆಟ್ಟಿಲು ಇಳಿದು ಬರುತ್ತಿದ್ದಳು. ಸೀರೆ ಕಾಲಿಗೆ ಸಿಕ್ಕಿ ಹಾಕಿಕೊಂಡು ಜಾರಿ ಬೀಳುವವಳನ್ನು ಎರಡು ಕೈ ಅವಳನ್ನು ಬಲವಾಗಿ ಹಿಡಿದಿತ್ತು. ನಾಲ್ಕು ಕಣ್ಣುಗಳು ಬೆರೆತಿದ್ದವು. ಸುಂದರ ಮಕ ಮನಸೆಳೆಯುವ ಆ ಮುಗುಳುನಗೆ ಅವಳ ಮನ ತಣಿಸಿತ್ತು. ತ್ಯಾಂಕ್ಸ್ ಹೇಳುವ ನೆಪದಲ್ಲಿ ಪರಿಚಯ ವಾಗಿತ್ತು.

ಅವನ ಹೆಸರು ಕಿರಣ್. ತನ್ನ ತಾಯಿಯನ್ನು ದೇವಾಲಯಕ್ಕೆ ಬಿಟ್ಟು ಹೋಗಲು ಬಂದಿರುವುದಾಗಿ ತಿಳಿಸಿದ್ದ. ಅಂದು ಕಂಡವನು, ಮತ್ತೆ ಎಂದೂ ಅವನನ್ನು ನೋಡಿರಲಿಲ್ಲ.

****************************

ರುಕ್ಮಿಣಿ ರೂಮಿಗೆ ಬಂದು ಕರೆದಳು. “ಮೀನಾ ಪುರೋಹಿತರು ಕರೀತಿದ್ದಾರೆ ಬಾಮ್ಮಾ ..”

ಗೆಳತಿಯರು ಮೀನಾಳನ್ನು ಹಸೆಮಣೆಗೆ ಕರೆತಂದು ಕೂಡಿಸಿದರು. ಪಕ್ಕದಲ್ಲಿ ಗೆಳತಿ ಮೀನಾಳನ್ನು ಮೊಣಕೈಯಿಂದ ತಿವಿದಳು “ಮೀನಾ, ಈಗಲಾದರೂ ನೋಡೇ ನಿನ್ನ ಗಂಡನಾಗುವನನ್ನು. ನಿಜವಾಗಿಯೂ ತುಂಬಾ ಚೆನ್ನಾಗಿದ್ದಾರೆ ಕಣೆ” ಎಂದಳು. ಹೇಗಿದ್ದರೇನು ಮದುವೆಗೆ ಒಪ್ಪಿ ಆಯಿತು ಎಂದು ನಿರಾಸೆ ಯಿಂದಲೇ ತಲೆ ಎತ್ತಿ ನೋಡಿದಳು. ಅವಳ ಕಣ್ಣನ್ನೇ ಅವಳು ನಂಬದಾದಳು, ಅದೇ ಮುಕ, ಅದೇ ನಗು. ಅಂದು ದೇವಾಲಯದಲ್ಲಿ ಕಂಡ ಮನ ಗೆದ್ದವನು..ಆಶ್ಚರ‍್ಯದಿಂದ ನೋಡುತ್ತಿದ್ದಳು. ಅವನು ಇವಳ ಕಡೆಯೇ ನೋಡಿ ನಗುತ್ತಿದ್ದ .ಅವಳ ಮನದ ಬಾವನೆ ಅವನು ಅರಿತಿದ್ದ.

ಮೊದಲ ನೋಟದಲ್ಲೇ ಕಿರಣ್ ನ ಮನ ಗೆದ್ದಿದ್ದಳು. ತಂದೆ ತಾಯಿಗೆ ಇವಳ ಬಗ್ಗೆ ಹೇಳಿದ್ದ. ಆದರೆ ಅವಳು ಲೋಕನಾತ್ ರ ಹಳೆಯ ಸ್ನೇಹಿತ ರಾಮರಾಯರ ಮಗಳು ಎಂದು ತಿಳಿದಿರಲಿಲ್ಲ. ಅವಳ ಬಗ್ಗೆ ದೇವಾಲಯ ದ ಪುರೋಹಿತರ ಬಳಿ ವಿಚಾರಿಸಿದಾಗಲೇ ಲೋಕನಾತ್ ಅವರಿಗೆ ತಿಳಿಯಿತು. ಮಗನ ಮದುವೆಯ ವಿಚಾರವಾಗಿ ಮಾತನಾಡಲೆಂದು ಅವರ ಮನೆಗೆ ಹೊರಟಾಗ ದಾರಿಯಲ್ಲಿ ಗೆಳೆಯನೇ ಸಿಕ್ಕಿದ್ದ. ಒಂದು ವಾರದಲ್ಲಿ ಕಿರಣ್ ಅಮೇರಿಕಾಗೆ ಹಿಂತಿರುಗಿ ಹೋಗಬೇಕಾಗಿತ್ತು. ಆದ ಕಾರಣ ಒಂದೇ ಸಾರಿ ಮದುವೆ ಮಾಡಿಬಿಡೋಣ ಎಂದು ನಿರ‍್ದರಿಸಿದ್ದರಂತೆ ಇದೆಲ್ಲವೂ ಮದುವೆಯ ನಂತರ ಮೀನಾಗೆ ತಿಳಿಯಿತು.

(ಚಿತ್ರ ಸೆಲೆ:  clipartkid.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks