ಈಗ ಜಪಾನೀ ನುಡಿಯಲ್ಲಿರುವುದನ್ನು ಇಂಗ್ಲೀಶಿನಲ್ಲಿ ಓದಿ


ವಿಜಯಮಹಾಂತೇಶ ಮುಜಗೊಂಡ.

google-translator-japanese2english

ಸುತ್ತಾಟಕ್ಕೆಂದು ಹೊರನಾಡಿಗೆ ಹೋಗಲು ಇರುವ ಹಲವು ತಯಾರಿಗಳಲ್ಲಿ ಅತಿದೊಡ್ಡ ಕೆಲಸ ಎಂದರೆ ಅಲ್ಲಿನ ನುಡಿಯನ್ನು ಕಲಿಯುವುದು. ಕಡಿಮೆಯೆಂದರೂ ಊಟ-ತಿಂಡಿ, ನೀರು, ಹೊತ್ತು, ದಾರಿ ಕೇಳುವುದು ಹೇಗೆ ಎನ್ನುವುದನ್ನು ಕಲಿಯುವುದು ಅನಿವಾರ‍್ಯ. ಅದರಲ್ಲೂ ಬೇರೆ ನಾಡುಗಳಿಗೆ ಸುತ್ತಾಟ ಇಲ್ಲವೇ ಕೆಲಸಕ್ಕೆಂದು ಆಗಾಗ ಹೋಗುವವರಿಗೆ, ಬೇರೆ ಬೇರೆ ನುಡಿಗಳನ್ನು ಕಲಿಯುವುದು ಮೊದಲ ಕೆಲಸವೇ ಎನ್ನಬಹುದು. ದಾರಿಗುರುತು, ಹೆಸರು ಹಲಗೆಗಳನ್ನು ಓದಿ ತಿಳಿಯಲು ಒಂದಶ್ಟು ಬರಿಗೆಗಳನ್ನು(letters) ಕಲಿತರೆ ತುಂಬಾ ಒಳ್ಳೆಯದು. ಆದರೆ ಜಪಾನೀಸ್‍ನಂತಹ ನುಡಿಯ ಬರಿಗೆಗಳನ್ನು ಕಲಿಯುವುದು ಬಲು ಕಶ್ಟವೇ ಸರಿ.

ಹಲವು ಹೊಸಮಾರ‍್ಪುಗಳಿಗೆ(innovation) ಹೆಸರು ಮಾಡಿರುವ ಗೂಗಲ್ ಈಗ ಇದಕ್ಕೂ ಒಂದು ಪರಿಹಾರ ನೀಡುತ್ತಿದೆ. ಇತ್ತೀಚೆಗಶ್ಟೇ ಗೂಗಲ್ ಹೊರತಂದಿರುವ ನುಡಿಮಾರ‍್ಪಿನ ಪರಿಚೆಯೊಂದು(feature) ಈಗ ಜಪಾನೀ ನುಡಿಯನ್ನು ಓದಲು ಸುಳುವಾಗಿಸಿದೆ. ಗೂಗಲ್ ಟ್ರಾನ್ಸ್‌ಲೇಟರ್ ಎನ್ನುವ ನುಡಿಮಾರುಗ ಬಳಕದ(application) ಬಗ್ಗೆ ನೀವು ಕೇಳಿರಬಹುದು.  ಗೂಗಲ್ ಟ್ರಾನ್ಸ್‌ಲೇಟ್‍ಗೆ ಹೊಸದಾಗಿ ಸೇರಿಸಲಾಗಿರುವ ಈ ವಿಶೇಶ ಪರಿಚೆ ಜಪಾನೀ ನುಡಿಯಲ್ಲಿರುವ ಬರಿಗೆಗಳನ್ನು ಇಂಗ್ಲೀಶಿನಲ್ಲಿ ಓದಲು ಅನುವು ಮಾಡಿಕೊಡುತ್ತದೆ!

ಆಂಡ್ರಾಯ್ಡ್ ಮತ್ತು ಐಓಎಸ್ ಚೂಟಿಯುಲಿಗಳಲ್ಲಿ(smart phone) ಗೂಗಲ್ ನುಡಿಮಾರುಗದೊಂದಿಗೆ ಇದೀಗ ಗೂಗಲ್ ವರ‍್ಡ್ ಲೆನ್ಸ್ (Google Word Lens) ಎನ್ನುವ ಹೊಸ ಸೇವೆ ಸಿಗುತ್ತಿದೆ. ಇದು ಜಪಾನೀಸ್ ನುಡಿಯಲ್ಲಿ ಕಂಡದ್ದನ್ನು ನೇರವಾಗಿ ಇಂಗ್ಲೀಶಿಗೆ ನುಡಿಮಾರ‍್ಪು ಮಾಡಬಲ್ಲುದು. ಅಂದರೆ ಜಪಾನೀಸ್ ನುಡಿಯಲ್ಲಿರುವ ಹೆಸರುಹಲಗೆಯೊಂದನ್ನು ನಿಮ್ಮ ಅಲೆಯುಲಿ(mobile) ಕ್ಯಾಮರಾ ಮೂಲಕ ನೋಡಿದರೆ, ಅದು ನಿಮ್ಮ ಮೊಬೈಲ್ ತೆರೆಯಲ್ಲಿ ಇಂಗ್ಲೀಶಿನಲ್ಲಿ ಕಾಣುತ್ತದೆ. ಇದು ಜೊತೆಗೆ ಇದ್ದರೆ ಜಪಾನಿನಲ್ಲಿ ಬಹುಶ ದಾರಿ ತಪ್ಪಲಿಕ್ಕಿಲ್ಲ.

ಈ ಹೊಸ ಪರಿಚೆ ಸದ್ಯಕ್ಕೆ ಜಪಾನೀ ನುಡಿಯಲ್ಲಿ ಸಿಗುತ್ತಿದ್ದು, ಇದನ್ನು ಬಳಸಲು ಆನ್‍ಲೈನ್ ಇರಬೇಕೆಂದೇನೂ ಇಲ್ಲ, ಇಂಟರ್‌ನೆಟ್‍ ಇಲ್ಲದೇ ಇದ್ದರೂ ಇದು ಕೆಲಸ ಮಾಡಬಲ್ಲದು. ಅದಕ್ಕಾಗಿ ಒಂದು ಕಡತವನ್ನು ಅಲೆಯುಲಿಗೆ ಇಳಿಸಿಕೊಂಡಿರಬೇಕು ಅಶ್ಟೇ. ಜಪಾನೀಸ್ ಬಿಟ್ಟರೆ ಮಿಕ್ಕೆಲ್ಲ ನುಡಿಗಳನ್ನು ಓದಲು ಕ್ಯಾಮರಾ ಮೂಲಕ ತಿಟ್ಟವೊಂದನ್ನು(image) ಹಿಡಿದು ನುಡಿಮಾರುಗಕ್ಕೆ ನೀಡಿದರೆ ಅದು ನಿಮ್ಮ ನುಡಿಯಲ್ಲಿ ತೋರಿಸುತ್ತದೆ. ಅಂದರೆ ಬೇರೆ ನುಡಿಗಳಲ್ಲಿ ಸದ್ಯಕ್ಕೆ ನೇರವಾಗಿ ನುಡಿಮಾರ‍್ಪು ಮಾಡುವ ಏರ‍್ಪಾಟು ಇಲ್ಲ, ಅಶ್ಟೇ. ಅದೂ ಮುಂದಿನ ದಿನಗಳಲ್ಲಿ ಬರಬಹುದು.

ಬೇರೊಂದು ನುಡಿಯ ಪದಗಳಿರುವ ಮೊದಲೇ ತೆಗೆದುಕೊಂಡಿದ್ದ ತಿಟ್ಟವೊಂದನ್ನು ನೀಡಿದರೆ, ಅದನ್ನು ನಿಮ್ಮ ನುಡಿಗೆ ಮಾರ‍್ಪಡಿಸುವ ಏರ‍್ಪಾಟು ಗೂಗಲ್ ನುಡಿಮಾರುಗದಲ್ಲಿ ಈಗಾಗಲೇ ಇದೆ. ಬಳಕದಿಂದಲೇ ತಿಟ್ಟವೊಂದನ್ನು ಕ್ಲಿಕ್ಕಿಸಿ ಅಪ್ಲೋಡ್ ಮಾಡುವ ಆಯ್ಕೆಯೂ ಇದೆ. ಆದರೆ ಈ ಹೊಸ ಪರಿಚೆ ಕ್ಯಾಮರಾ ಮೂಲಕ ನೋಡಿದ್ದನ್ನು ನೇರವಾಗಿ ಇಂಗ್ಲೀಶಿನಲ್ಲಿ ನೀಡಬಲ್ಲುದು ಎನ್ನುತ್ತಾರೆ ಗೂಗಲ್‍ನ ಮಸಾಕಾಜು ಸೆನೋ(Masakazu Seno). ಗೂಗಲ್ ನುಡಿಮಾರುಗದಲ್ಲಿ ನೂರಕ್ಕೂ ಹೆಚ್ಚು ಬಾಶೆಗಳಿಗೆ ಬೆಂಬಲ ಇದೆ.

ಇನ್ನು ಮುಂದೆ ಜಪಾನಿಗೆ ಹೋಗಿ ಜಪಾನೀಸ್ ನುಡಿ ಗೊತ್ತಿಲ್ಲದಿದ್ದರೆ, ಏನನ್ನಾದರೂ ಕೇಳಲು ಸನ್ನೆನುಡಿಯನ್ನು(sign language) ಬಳಸಬೇಕಿಲ್ಲ. ಗೂಗಲ್ ನುಡಿಮಾರುಗ ಇದ್ದರೆ ಸಾಕು, ಜಪಾನಿನಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು!

(ಮಾಹಿತಿ ಸೆಲೆ: time.com, blog.google)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: