ಇದು ಬರಿ ಕಾಗದದಲ್ಲಿ ಕಟ್ಟಿದ ಮನೆ!
– ಕೆ.ವಿ.ಶಶಿದರ.
ನ್ಯೂಸ್ ಪೇಪರ್ ಎಂದಾಕ್ಶಣ ಮೊದಲು ನೆನಪಿಗೆ ಬರುವುದು ಪೇಪರ್ ಬೋಟ್‍ಗಳು. ಚಿಕ್ಕಂದಿನಲ್ಲಿ ಪೇಪರ್ ಬೋಟ್‍ಗಳನ್ನು ಮಾಡಿ ಹರಿಯುವ ಮಳೆ ನೀರಿನಲ್ಲಿ ತೇಲಿ ಬಿಟ್ಟು ಅದರೊಟ್ಟಿಗೆ ಓಡುತ್ತಾ ಸಂತಸಪಡದ ಮಕ್ಕಳಿಲ್ಲ. ಆಶಾಡ ಬಂದಾಕ್ಶಣ ಅದೇ ಪೇಪರ್‍ಗಳನ್ನು ಬಳಸಿ ಗಾಳಿಪಟ ತಯಾರಿಸಿ, ಬಾಲಂಗೋಚಿಯನ್ನೂ ಸಹ ಪೇಪರ್‍ನಲ್ಲೇ ಮಾಡಿ ಗಾಳಿಯಲ್ಲಿ ಹಾರಿ ಬಿಟ್ಟು ಸಂತಸಪಡದ ಕ್ಶಣವಿಲ್ಲ. ಕಾಲ ಕಳೆದಂತೆ ದೊಡ್ಡವರಾಗಿ ಪೇಪರ್ ರಾಕೆಟ್ ಮಾಡಿ ಹೆಣ್ಣು ಮಕ್ಕಳ ಮೇಲೆ ಹಾರಿ ಬಿಟ್ಟು ಕುಶಿಪಡದ ದಿನವಿಲ್ಲ. ಹಿಂದೆ ದಿನಸಿಗಳನ್ನು ಕಟ್ಟಲು, ಮಾತ್ರೆಗಳನ್ನು, ತರಕಾರಿಗಳನ್ನು, ಬಟ್ಟೆಗಳನ್ನು ನೀಡಲು ಪೇಪರ್ ಕವರ್‍ಗಳೇ ಇದ್ದವು. ಪೇಪರ್ ಎಂಬುದು ನ್ಯೂಸ್ ಮಾತ್ರವಲ್ಲದೆ ಬಹು ಉಪಯೋಗಿಯಾಗಿದೆ.
ಇಲ್ಲೊಬ್ಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಗದವನ್ನು ಬಳಸಿ ಮನೆಯನ್ನು ಕಟ್ಟಿದ್ದಾನೆಂದರೆ ಆಶ್ಚರ‍್ಯವಲ್ಲವೆ. ಬನ್ನಿ ನೋಡುವ ಯಾರಾತ? ಯಾವ ರೀತಿಯಲ್ಲಿ ಮನೆಯನ್ನು ಕಟ್ಟಿದ್ದಾನೆ ಎಂಬುದನ್ನು.
ಅಮೇರಿಕಾ ದೇಶದ ಮಸ್ಸಾಚುಸೆಟ್ಸ್‍ನಲ್ಲಿನ ರಾಕ್‍ಪೋರ‍್ಟ್‍ಗೆ ನೀವೆಂದಾದರು ಹೋದಲ್ಲಿ, ಪಿಜನ್ ಹಿಲ್ ಸ್ಟ್ರೀಟ್‍ಗೆ ಹೋಗಿ ‘ಪೇಪರ್ ಹೌಸ್’ ಎಂಬ ಪಲಕವಿರುವ ಮನೆಯನ್ನು ಹುಡುಕಿ. ಅಲ್ಲಿ ನಿಮಗೆ ಆಶ್ಚರ‍್ಯ ಹಾಗೂ ಆದ್ಬುತ ನಿರ‍್ಮಾಣದ ಕಲೆ ಕಾದಿದೆ. ಅಕ್ಕ ಪಕ್ಕದಲ್ಲಿರುವ ಹಲವಾರು ಮನೆಗಳಲ್ಲಿ ಇದೂ ಸಹ ಒಂದು ಅಂತಸ್ತಿನ ಕೆಂಪು ಬಣ್ಣದ ಮನೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಮನೆಯ ಒಳಬಾಗ ಹಾಗೂ ಹೊರಬಾಗವನ್ನು ಸೂಕ್ಶ್ಮವಾಗಿ ಗಮನಿಸಿಬೇಕು. ಆಗ ವಾತಾವರಣದ ಹೊಡೆತಕ್ಕೆ ಸಿಕ್ಕಿ ಅಲ್ಲಲ್ಲಿ ಗೋಡೆಯ ಮೇಲಿನ ಒಂದು ಪದರ ಸುಲಿದು ಬಂದಿದ್ದು ಒಳಗಿರುವ ಪೇಪರ್ ಗೋಚರವಾಗುತ್ತದೆ. ಪೇಪರ್‍ನಿಂದಲೇ ಈ ಮನೆಯನ್ನು ಸಂಪೂರ‍್ಣವಾಗಿ ನಿರ‍್ಮಿಸಿರುವುದರ ಬಗ್ಗೆ ಸಾಕ್ಶ್ಯಾದಾರಗಳು ಹಾಗೂ ಪುರಾವೆಗಳು ನಿಮಗೆ ದೊರಕುತ್ತವೆ.
ಏನಿದರ ಇತಿಹಾಸ?
ಈ ಕೆಂಪು ಬಣ್ಣದ ಪುಟ್ಟ ಮನೆಯ ನಿರ‍್ಮಾಣ ಆರಂಬವಾಗಿದ್ದ್ದು 1922ರಲ್ಲಿ. ಇದರ ಹಿಂದಿರುವ ವ್ಯಕ್ತಿ ವ್ರುತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿದ್ದ ಎಲಿಸ್ ಸ್ಟೆನ್‍ಮನ್. ಬೇಸಿಗೆಯ ದಿನಗಳನ್ನು ಕಳೆಯಲು ಆತನಿಗೆ ಪ್ರಶಾಂತ ವಾತಾವರಣದಲ್ಲಿ ಒಂದು ಸಣ್ಣ ಮನೆ ಬೇಕಿತ್ತು. ಬೇರೆಲ್ಲಾ ಕಡಿಮೆ ವೆಚ್ಚದ ಮನೆಯಂತೆ ಈತನೂ ಸಹ ಅಗ್ಗದ ಮನೆಯನ್ನು ಕಟ್ಟಲು ಪ್ರಾರಂಬಿಸಿದ. ಅಲ್ಲಿನ ರೀತಿ ರಿವಾಜಿನಂತೆ ಹಾಗೂ ವಾತಾವರಣಕ್ಕೆ ಸ್ಪಂದಿಸುವ ಮರದ ಪ್ರೇಮ್, ಸರ‍್ಪಸುತ್ತಿನಂತೆ ಉಬ್ಬಿದ ಮಾಳಿಗೆ, ಮರದ ನೆಲಹಾಸುಗಳನ್ನು ತಯಾರಿಸಿ ಇಟ್ಟುಕೊಂಡ.
ಮರದ ಪ್ರೇಮ್‍ಗಳ ಮದ್ಯೆ ಸುತ್ತ ಮುತ್ತಲಿನ ಮನೆಗಳಂತೆ ತೆಳ್ಳನೆಯ ಮರದ ಹಲಗೆಯನ್ನು ಹಾಕಲು ಈತನಿಗೆ ಒಪ್ಪಿಗೆಯಾಗಲಿಲ್ಲ. ಮರಕ್ಕಿಂತ ಇನ್ನೂ ಅಗ್ಗದ ವಸ್ತವಿನ ಬಳಕೆಯ ಸಾದ್ಯಾಸಾದ್ಯತೆಗಳ ಬಗ್ಗೆ ಹೆಚ್ಚು ತಲೆ ಕೆಡಸಿಕೊಂಡ. ಬದಲಿ ಜೋಡಣೆಗೆ ಇತನ ಮನಸ್ಸಿನಲ್ಲಿ ಬಹಳಶ್ಟು ಯೋಚನೆಗಳು ಹಾಗೂ ಯೋಜನೆಗಳು ರೂಪುಗೊಂಡವು. ಕೊನೆಯಲ್ಲಿ ನ್ಯೂಸ್ ಪೇಪರ್ ಬಳಸಿ ಗೋಡೆಯನ್ನು ತಯಾರಿಸುವ ಬಗ್ಗೆ ಹೆಚ್ಚು ಆಸಕ್ತಿ ಮೂಡಿತು. ಅದರೆ ಸ್ಟೆನ್‍ಮನ್‍ಗೆ ಅನುಮಾನ ಹಾಗೂ ಅಳುಕಿದ್ದುದು ನ್ಯೂಸ್ ಪೇಪರ್‍ನ ಬಾಳಿಕೆಯ ಬಗ್ಗೆ. ವಾತಾವರಣದಲ್ಲಿನ ಏರುಪೇರುಗಳನ್ನು ತಡೆದು ನಿಲ್ಲುವ ಬಗ್ಗೆ.
ಸ್ಟೆನ್‍ಮನ್ ಅನುಬವವೇನು?
ಸ್ಟೆನ್‍ಮನ್ ಮೂಲತಹ ಸ್ವೀಡನ್ ದೇಶದವನು. ಅಮೇರಿಕಾಕ್ಕೆ ವಲಸೆ ಬಂದು ಇಲ್ಲಿಯೇ ನೆಲಸಿದವನು. ಪುಸ್ತಕಗಳ ತಯಾರಿಕೆಯಲ್ಲಿ ಪೇಪರ್‍ಗಳನ್ನು ಜೋಡಿಸಿದ ನಂತರ ಅವುಗಳನ್ನು ಬಿಗಿಯಾಗಿ ಹಿಡಿದಿಡಲು ಬಳಸುವ ಪೇಪರ್ ಕ್ಲಿಪ್‍ಗಳ ತಯಾರಿಕೆಗೆ ಬಳಸುವ ಯಂತ್ರವನ್ನು ಕಂಡುಹಿಡಿದ ಕ್ಯಾತಿ ಸ್ಟೆನ್‍ಮನ್‍ದು. ಪೇಪರ್ ಕ್ಲಿಪ್‍ನ ಜನಕ ಎಂದೇ ಈತ ಪ್ರಸಿದ್ದಿ. ಹಾಗಾಗಿ ಈತನಿಗೆ ಪೇಪರ್ ಬಗ್ಗೆ ಅಲ್ಪ ಸ್ವಲ್ಪ ಜ್ನಾನ ಇತ್ತು. ಬಹುಶಹ ಇದೇ ಅತನಿಗೆ ವರವಾಗಿ ಪರಿಣಮಿಸಲಿಕ್ಕೆ ಸಾಕು. ತಾನು ನಿರ‍್ಮಿಸುತ್ತಿರುವ ಅಗ್ಗದ ಮನೆಗೆ ಪೇಪರ್ ಬಳಕೆ ಸೂಕ್ತ ಎಂದು ತೋಚಿದ ಕೂಡಲೇ ಕಾರ‍್ಯ ಪ್ರವ್ರುತ್ತನಾಗಿ ಹಲವಾರು ರೀತಿಯ ಜೋಡಣೆಗಳನ್ನು ಪ್ರಯತ್ನಿಸಿದ. ಅದರ ಅಂತಿಮ ಅವಿಶ್ಕಾರದ ಪರಿಣಾಮವೇ ಈ ಪೇಪರ್ ಹೌಸ್.
ಮನೆಯನ್ನು ಕಟ್ಟಿದ ವಿದಾನ
ಮರದ ಪ್ರೇಮುಗಳ ಮದ್ಯೆ ಬೇರೆಲ್ಲಾ ಮನೆಗಳಲ್ಲೂ ಕ್ಲಾಪ್ ಬೋರ‍್ಡ್‍ಗಳು ಸಾಮಾನ್ಯ. ಮರದಿಂದ ಮಾಡಿದ ಇದು ಬೇಸಿಗೆಯಲ್ಲಿನ ಬಿಸಿಲಿನ ಜಳ ಒಳಗೆ ಹರಿಯುವುದನ್ನು ತಡೆಯುತ್ತದೆ. ಮರದ ಹಲಗೆ ಉಪಯುಕ್ತ ನಿರೋದಕ ಶಕ್ತಿಯನ್ನು ಹೊಂದಿದೆ. ಪೇಪರ್ ಸಹ ನಿರೋದಕ ಶಕ್ತಿ ಹೊಂದಿರುವ ಹಿನ್ನಲೆಯಲ್ಲಿ ಸ್ಟೆನ್‍ಮನ್ ಪೇಪರ್ ಬಳಸಲು ನಿರ‍್ದರಿಸಿದ. ಪೇಪರ್ ಗೋಡೆ ತಯಾರಿಕೆಗೆ ಈತ ನ್ಯೂಸ್ ಪೇಪರ್‍ನ ಹಲವಾರು ಪದರಗಳನ್ನು ಒಂದರ ಮೇಲೊಂದು ಜೋಡಿಸಿ, ಒಂದಕ್ಕೊಂದನ್ನು ಅಂಟಿಸಿ ಒಂದು ಇಂಚು ದಪ್ಪದಾಗಿ ಮಾಡಿದ. ಇದರ ಮೇಲೆ ವಾರ‍್ನಿಶ್ ಹಚ್ಚಿ ಚನ್ನಾಗಿ ಒಣಗಿಸಿದ. ಒಣಗಿದ ನಂತರ ಇದು ಗಟ್ಟಿಯಾಗಿ ಮರದ ಹಲಗೆಗೆ ಸರಿಸಾಟಿಯಾಗಿದ್ದು ಕಂಡು ಕುಶಿಪಟ್ಟ. ತಾನೇ ನಿರ‍್ಮಿಸಿದ್ದ ಮರದ ಪ್ರೇಮ್‍ಗಳ ಅಳತೆಗೆ ಸರಿಯಾಗಿ ಇಂತಹ ಹಲವು ಪೇಪರ್ ಬೋರ‍್ಡ್ ತಯಾರಿಸಿದ. ಮರದ ಹಲಗೆಯನ್ನು ಜೋಡಿಸುವ ವಿದಾನದಲ್ಲೇ ಇದನ್ನು ಜೋಡಿಸಿ ಮನೆಯನ್ನು ಸಂಪೂರ‍್ಣವಾಗಿ ನಿರ‍್ಮಿಸಿದ.
ಪೇಪರ್ ಬೋರ‍್ಡ್‍ಗಳ ತಯಾರಿಕೆಯಲ್ಲಿ ಪೇಪರ್‍ಗಳನ್ನು ಒಂದಕ್ಕೊಂದು ಅಂಟಿಸಲು ಅವಶ್ಯವಿರುವ ಗಮ್ ಸಹ ಆತ ಮನೆಯಲ್ಲೇ ತಯಾರಿಸಿಕೊಂಡಿದ್ದ. ಅದಕ್ಕೆ ಬಳಸಿದ್ದು ಹಿಟ್ಟು, ಸೇಬಿನ ಸಿಪ್ಪೆ ಮತ್ತು ನೀರು.
ಈ ರೀತಿ 1924ರಲ್ಲಿ ಕಟ್ಟಲು ಪ್ರಾರಂಬಿಸಿದ ಮನೆ ಸಂಪೂರ‍್ಣ ಮುಗಿಯುವಶ್ಟರಲ್ಲಿ ಎರಡು ವರ‍್ಶವಾಗಿತ್ತು. ನಂತರ ಒಂದು ವರ‍್ಶದವರೆಗೂ ಮಳೆ ಚಳಿ ಗಾಳಿಗೆ ಮೈಯೊಡ್ಡಿ ನಿಂತ ಈ ಪೇಪರ್ ಹೌಸ್ ಅಲುಗಾಡಲಿಲ್ಲ. ಯತಾವತ್ತಾಗಿಯೇ ಇತ್ತು. ಇದರಿಂದ ಉತ್ತೇಜನ ಪಡೆದ ಅವನು ಮುಂದೆ ಪೇಪರ್ ಬಳಸಿ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಲು ಪ್ರಾರಂಬಿಸಿದ. ಅದರ ಪರಿಣಾಮವನ್ನು ಮನೆಯನ್ನು ಹೊಕ್ಕ ಯಾರು ಬೇಕಾದರೂ ಈಗಲೂ ಕಾಣಬಹುದು. ಸ್ಟೆನ್‍ಮನ್ ಮನೆಯನ್ನು ಅಲಂಕರಿಸಲು ಕರ‍್ಟನ್‍ಗಳನ್ನು ಮತ್ತು ಗಡಿಯಾರವನ್ನೂ ಹಾಗೂ ಮನೆಗೆ ಅವಶ್ಯವಿರುವ ಚೇರುಗಳು, ಟೇಬಲ್‍ಗಳು, ಪುಸ್ತಕ ಕಪಾಟುಗಳನ್ನೂ ಸಹ ನ್ಯೂಸ್ ಪೇಪರ್ ಹಾಗೂ ಮ್ಯಾಗಜೀನ್ ಹಾಳೆಗಳನ್ನು ಉಪಯೋಗಿಸಿಕೊಂಡು ತಯಾರಿಸಿದ. ತನ್ನ ದಿನ ನಿತ್ಯ ಸಂಗೀತೋಪಾಸನೆಗೆ ಬೇಕಿದ್ದ ಪಿಯಾನೋವನ್ನು ಮಾತ್ರ ಮರದಿಂದ ಮಾಡಿದ. ಅದೂ ಸಹ ಚೇರು ಟೇಬಲ್‍ಗಳಂತೆ ಒಂದೇ ರೀತಿ ಕಾಣಲು ಪೇಪರ್ ಹೊದಿಕೆಯಿಂದ ಮುಚ್ಚಿದ. ಬಿಸಿಗಾಗಿ ಬಳಸುವ ಪೈರ್ ಪ್ಲೇಸ್ ಅನ್ನು ಮಾತ್ರ ವಿದಿಯಿಲ್ಲದೆ ಇಟ್ಟಿಗೆಗಳಿಂದ ಮಾಡಿದ.
ನಾಲ್ಕಾರು ವರ‍್ಶಗಳ ಕಾಲ ಮಾತ್ರ ಅಂದರೆ 1930 ರವರೆಗೂ ಸ್ಟೆನ್ ಮನ್ ಇದರಲ್ಲಿ ವಾಸಿಸಿದ. 1942ರಲ್ಲಿ ಅಸುನೀಗುವವರೆಗೂ ಆತ ಪೇಪರ್ ಮರುಬಳಕೆಯ ಬಗ್ಗೆಯೇ ತಲೆ ಕೆಡಸಿಕೊಂಡು ಅನೇಕ ಸಂಶೋದನೆಗಳನ್ನು ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಲೇ ಇದ್ದ. ಮನೆಯನ್ನು ಕಟ್ಟಲು ಪ್ರಾರಂಬಿಸಿದ ನಂತರದ ಮುಂದಿನ 20 ವರ‍್ಶಗಳ ಕಾಲ ಮನೆಗಾಗಿ ಹಾಗೂ ಅಲಂಕಾರಿಕ ಹಾಗೂ ನಿತ್ಯೋಪಯೋಗಿ ವಸ್ತುಗಳ ತಯಾರಿಕೆಗೆ ಆತ ಬಳಸಿದ್ದು ಅಂದಾಜು 1,00,000 ನ್ಯೂಸ್ ಪೇಪರ್ ಹಾಳೆಗಳನ್ನು.
ಈಗ್ಗೆ 92 ವರ‍್ಶಗಳಶ್ಟು ಹಿಂದೆ ಕಟ್ಟಿದ ಮನೆ ನಿರಂತರ ಮಳೆ ಗಾಳಿಯ ಹೊಡೆತಕ್ಕೆ ಹಾಗೂ ವಾತಾವರಣದ ಏರುಪೇರಿಗೆ ಸಿಕ್ಕು ಗೋಡೆಯ ಮೇಲ್ಪದರ ಮಾತ್ರ ಸುಲಿಯತೊಡಗಿದೆ. ಮೇಲಿನ ಪದರ ಸುಲಿದ ಕಾರಣ ಅದರ ಹಿಂದಿರುವ ಪೇಪರ್‍ನಲ್ಲಿನ ಸುದ್ದಿ, ಜಾಹೀರಾತುಗಳು ನಿಚ್ಚಳವಾಗಿ ಕಾಣುತ್ತವೆ. ಈ ಮನೆಯನ್ನು ವೀಕ್ಶಿಸಲು ಬರುವ ಪ್ರವಾಸಿಗರಿಗೆ ಹೆಚ್ಚು ಕಡಿಮೆ ಒಂದು ಶತಮಾನದ ಹಿಂದಿನ ಸುದ್ದಿಯನ್ನು, ಜಾಹೀರಾತನ್ನು ಹುಡುಕಿ ಓದುವುದೇ ಸಂಬ್ರಮ. ಬರೆಯುವ ಮೇಜಿನ ಮೇಲೆ ಕಂಡುಬರುವ ಪೇಪರ್‍ನಲ್ಲಿರುವ ಚಾಲ್ರ್ಸ್ ಲಿಂಡ್‍ಬರ‍್ಗರವರ ಟ್ರಾನ್ಸ್ ಅಟ್ಲಾಂಟಿಕ್ ವಿಮಾನ ಯಾನದ ವಿವರ, ರೆಡಿಯೋ ಕ್ಯಾಬಿನೆಟ್‍ನಲ್ಲಿನ ಪೇಪರ್‍ನಲ್ಲಿ ಅಮೇರಿಕಾದ ಅದ್ಯಕ್ಶ ಪದವಿಗೆ ಸ್ಪರ‍್ದಿಸಿದ್ದ ಹರ‍್ಬರ‍್ಟ್ ಹೂವರ್ ಪ್ರಚಾರದ ವಿವರ, ಪಿಯಾನೋದಲ್ಲಿನ ಪೇಪರ್‍ನಲ್ಲಿ ಅಡ್ಮಿರಲ್ ಬಯರ‍್ಡರ ದಕ್ಶಿಣ ಹಾಗೂ ಉತ್ತರ ದ್ರುವಗಳ ಪರ‍್ಯಟನೆಯ ವಿವರ ಕಾಣಬಹುದು.
1942ರಲ್ಲಿ ಸ್ಟೆನ್‍ಮನ್‍ರ ನಿದನ ಹೊಂದಿದರು. ನಂತರ ಈ ಪೇಪರ್ ಮನೆಯನ್ನು ಅವರ ಸ್ಮರಣಾರ‍್ತ ವಸ್ತು ಸಂಗ್ರಹಾಲಯವನ್ನಾಗಿ ಮಾರ‍್ಪಡಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಪದರಗಳು ಸುಲಿಯುವ ಸಂಬವವಿದೆ. ಆಗ ಅದರ ಹಿಂದಿರುವ ಪೇಪರ್‍ನಲ್ಲಿ ಹುದುಗಿರುವ ಇನ್ನೂ ಹಳೆಯ ವಿಶೇಶ ಸುದ್ದಿಗಳನ್ನು ಹೆಕ್ಕಿ ತೆಗೆಯಬಹುದು. ಪದೇ ಪದೇ ಪ್ರವಾಸಿಗರು ಇಲ್ಲಿಗೆ ಮರಳುತ್ತಿರುವುದು ಇದಕ್ಕಾಗಿಯೇ ಇರಬೇಕು.
ಇತ್ತೀಚಿನ ದಿನಗಳಲ್ಲಿ ಸ್ರುಶ್ಟಿಯಾದ ‘ಪರಿಸರ ಸ್ನೇಹಿ’ ಪದ ಪುಂಜಕ್ಕೂ ಬಹಳಶ್ಟು ಮುಂಚೆಯೇ ಪರಿಸರ ಸ್ನೇಹಿ ಮನೆಯನ್ನು ಸ್ಟೆನ್‍ಮನ್ ನಿರ‍್ಮಿಸಿದ್ದ. ಅದ್ದರಿಂದ ಪರಿಸರ ಸ್ನೇಹಿ ಜನಕನ ಸ್ಮಾರಕವನ್ನಾಗಿ ಕಾಪಾಡುವುದು ಎಲ್ಲರ ಕರ‍್ತವ್ಯವಲ್ಲವೆ?
(ಚಿತ್ರ ಸೆಲೆ: oddthingsiveseen.com, thesomewhere.com, eccentricroadside.blogspot.in, suitcasesandsippycups.com)
ಇತ್ತೀಚಿನ ಅನಿಸಿಕೆಗಳು