ಕಿಕ್ಕಿರಿದ ಹವಳದ ದ್ವೀಪ ‘ಸಾಂತಾ ಕ್ರೂಜ್ ಡೆಲ್ ಐಸ್ಲೊಟೆ’

– ಕೆ.ವಿ.ಶಶಿದರ.

santa_cruz_delislote

ಸಾಂತಾ ಕ್ರೂಜ್ ಡೆಲ್ ಐಸ್ಲೋಟೆ ಒಂದು ಸಣ್ಣ ಹವಳದ ದ್ವೀಪ. ಇದು ಕೊಲಂಬಿಯಾ ದೇಶದ ಕರಾವಳಿಯಲ್ಲಿನ ಸ್ಯಾನ್ ಬೆರ‍್ನಾರ‍್ಡೋ ದ್ವೀಪ ಸಮೂಹದಲ್ಲಿಯೇ ಅತ್ಯಂತ ಪುಟ್ಟದು. ಇದರ ಒಟ್ಟು ವಿಸ್ತೀರ‍್ಣ 2.4 ಎಕರೆ. ಇಶ್ಟು ಪುಟ್ಟದಾದರೂ ಇಲ್ಲಿ ವಾಸಿಸುತ್ತಿರುವುದು 1200 ಮಂದಿ! ಕಿಶ್ಕಿಂದೆಯಂತಿರುವ ಇದನ್ನು ವಿಶ್ವದಲ್ಲೆ ಅತ್ಯಂತ ಜನಸಾಂದ್ರತೆಯ ದ್ವೀಪವೆಂದು ಅನದಿಕ್ರುತವಾಗಿ ಗುರುತಿಸಲಾಗಿದೆ.

ಸಾಂತಾ ಕ್ರೂಜ್ ಡೆಲ್ ಐಸ್ಲೋಟೆನಲ್ಲಿ ಸರಿಯಾದ ಒಳಚರಂಡಿ ವ್ಯವಸ್ತೆಯಿಲ್ಲ. ಉಪಯೋಗಿಸಿದ ಕಲುಶಿತ ನೀರು ಇಳಿಜಾರಿರುವ ಕಡೆ ತಾಂತಾನೆ ಹರಿದು ಹೋಗುತ್ತದೆ. ಇನ್ನು ವಿದ್ಯುಚ್ಚಕ್ತಿಯ ಸರಬರಾಜಂತೂ ಕೇಳುವ ಹಾಗೆ ಇಲ್ಲ. ಲಬ್ಯವಿರುವ ಜನರೇಟರ್ ಓಡಿಸುವ ಮೂಲಕ ದಿನಕ್ಕೆ ಐದು ಗಂಟೆಗಳ ಕಾಲ ಮಾತ್ರ ಕರೆಂಟು ಕಾಣಬಹುದು. ಕುಡಿಯುವ ನೀರಿಗೂ ಇಲ್ಲಿ ಹಾಹಾಕಾರವಿದೆ. ಮೂರು ವಾರಕ್ಕೆ ಒಂದು ಬಾರಿ ಕೊಲಂಬಿಯಾ ನೇವಿಯವರು ಕುಡಿಯುವ ನೀರನ್ನು ಸರಬರಾಜು ಮಾಡುತ್ತಾರೆ.

ಇಶ್ಟೆಲ್ಲಾ ತೊಂದರೆಗಳು ಇದ್ದಾಗ್ಯೂ ಈ ಪುಟ್ಟ ದ್ವೀಪ ಇಶ್ಟು ಜನನಿಬಿಡವಾಗಿರಲು ಕಾರಣವೇನು? ಜನ ಇಲ್ಲೇ ವಾಸಿಸಲು ಇಶ್ಟ ಪಡುವುದೇತಕ್ಕೆ?

ಇಲ್ಲಿನ ದಂತಕತೆಯಂತೆ ಸುಮಾರು 150 ವರ‍್ಶಗಳ ಹಿಂದೆ ಮೀನುಗಾರರ ಒಂದು ಗುಂಪು ಬಾರೂ ನಗರದ ಕರಾವಳಿಯಿಂದ ಮೀನು ಹಿಡಿಯಲು ದೋಣಿಗಳಲ್ಲಿ ಅಂದಾಜು 50 ಕಿಲೋಮೀಟರ್ ದೂರ ಸಾಗಿ ಹೋಗಿದ್ದರು. ಮೀನನ ಸಾಂದ್ರತೆ ಹೆಚ್ಚಿರುವ ಹೊಸ ನೀರಿನ ಹುಡುಕಾಟದಲ್ಲಿದ್ದ ಅವರಿಗೆ ಗೋಚರಿಸಿದ್ದೇ ಈ ಪುಟ್ಟ ಹವಳದ ದ್ವೀಪ. ಇಲ್ಲಿಗೆ ತಲಪುವ ವೇಳೆಗಾಗಲೇ ಇಳಿಹೊತ್ತಾಗಿದ್ದು ಹಿಂದಿರುಗಲು ಸಾದ್ಯವಿರಲಿಲ್ಲ. ಅಲ್ಲೇ ಬೀಡು ಬಿಟ್ಟು ರಾತ್ರಿಯನ್ನು ಕಳೆಯುುವ ನಿರ‍್ದಾರ ಮಾಡಿದರು.

ರಾತ್ರಿ ಅತ್ಯಾಶ್ಚರ‍್ಯಕರ ಸಂಗತಿ ಕಾದಿತ್ತು. ಮೊದಲ ಬಾರಿಗೆ ಅವರುಗಳು ಇಡೀ ರಾತ್ರಿ ಸೊಳ್ಳೆಗಳ ಕಾಟವಿಲ್ಲದೆ ನೆಮ್ಮದಿಯ ನಿದ್ದೆ ಮಾಡಿದರು. ಇಂತಹ ಒಂದು ಸುಂದರವಾದ, ಸೊಳ್ಳೆಗಳಿಂದ ಮುಕ್ತವಾದ ಬೂ ಪ್ರದೇಶವನ್ನು ಕಂಡ ಅವರಿಗೆ ಇಲ್ಲೇ ಉಳಿಯುವ, ಇದನ್ನೇ ಸ್ವಂತ ಮಾಡಿಕೊಳ್ಳವ ಇರಾದೆ ಹೆಚ್ಚಾಗಿ ಅದರಂತೆ ತೀರ‍್ಮಾನವನ್ನೂ ಮಾಡಿಕೊಂಡುಬಿಟ್ಟರು. ಇಂದು ಅಲ್ಲಿ ತೊಂಬತ್ತು ಮನೆಗಳು, ಎರಡು ಅಂಗಡಿಗಳು, ಒಂದು ರೆಸ್ಟೋರೆಂಟ್, ಒಂದು ಡಿಸ್ಕೋ ಹಾಗೂ ಒಂದು ಸ್ಕೂಲಿದೆ. ಇಶ್ಟೆಲ್ಲಾ ಅಡಗಿರುವುದು ಒಂದೂವರೆ ಪುಟ್‍ಬಾಲ್ ಮೈದಾನದಶ್ಟು ವಿಸ್ತೀರ‍್ಣದ ಪ್ರದೇಶದಲ್ಲಿ!!!

ಈ ಪುಟ್ಟ ದ್ವೀಪದಲ್ಲಿ ಕಾಲಿ ಇರುವ ಜಾಗವನ್ನು ಹುಡುಕಿದರೂ ಸಿಗುವುದಿಲ್ಲ. ಹಲವು ಕಟ್ಟಡಗಳ ಕೆಲ ಬಾಗ ನೀರಿನ ಮೇಲೆ ಚಾಚಿಕೊಂಡಿರುವುದೂ ಇದೆ. ಹೀಗೆ ಚಾಚಿಕೊಂಡಿರುವ ಬಾಗಕ್ಕೆ ಹತ್ತಿರದ ನೆಲದಿಂದ ಕ್ರುತಕ ಆದಾರ ಸ್ತಂಬವನ್ನು ಇರಿಸಲಾಗಿದೆ. ಬಹುಮಹಡಿಗಳ ಕಟ್ಟಡ ಇಲ್ಲಿನ ವಸತಿ ಸಮಸ್ಯೆಗೆ ಪರಿಹಾರವಾಗಬಹುದಿತ್ತು. ಆದರೆ ಇಲ್ಲಿರುವುದೆಲ್ಲಾ ಒಂದೇ ಮಹಡಿಯ ಕಟ್ಟಡಗಳು. ಜನವಸತಿಯಿಲ್ಲದ ಒಂದೇ ಒಂದು ಪ್ರದೇಶವೆಂದರೆ ಟೆನ್ನಿಸ್ ಕೋರ‍್ಟಿನ ಅರ‍್ದ ಬಾಗದಶ್ಟಿರುವ ಅಂಗಣ. ವರ‍್ಶದ ಬಹಳಶ್ಟು ದಿನ ದೊಡ್ಡ ದೊಡ್ಡ ಅಲೆಗಳು ಬಂದಾಗ ಈ ಬಾಗ ನೀರಿನಲ್ಲಿ ಮುಳುಗಿರುತ್ತದೆ ಎಂಬುದಕ್ಕಾಗಿ ಇದು ಕಾಲಿ ಇದೆ.

ಸಾಂತಾ ಕ್ರೂಜ್ ಡೆಲ್ ಐಸ್ಲೋಟೆನ ಜನರ ಮುಕ್ಯ ಉದ್ಯೋಗ ಮೀನುಗಾರಿಕೆ ಎಂದು ಬೇರೆ ಹೇಳಬೇಕಿಲ್ಲ. ಹತ್ತಾರು ದಶಕಗಳ ಕಾಲ ಮೀನುಗಾರಿಕೆಯೇ ಮುಕ್ಯ ಆದಾಯವಾಗಿತ್ತು ಅವರಿಗೆ. ಇತ್ತೀಚಿನ ದಿನಗಳಲ್ಲಿ ಮೀನಿನ ಸಾಂದ್ರತೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದಿಯಿಲ್ಲದೆ ಬೇರೆಡೆ ಕೆಲಸವನ್ನು ಅರಸಿ ಹೋಗಬೇಕಾದ ಪರಿಸ್ತಿತಿ ಉದ್ಬವಿಸಿದೆ. ಪಕ್ಕದ ದ್ವೀಪದಲ್ಲಿನ ಹೊಟೇಲ್‍ಗಳಲ್ಲಿ ಹಾಗೂ ರೆಸಾರ‍್ಟ್ ಗಳಲ್ಲಿ ಹಲವು ಮಂದಿ ಕೆಲಸಕ್ಕಾಗಿ ಹೋಗುವುದುಂಟು. ಈ ಪುಟ್ಟ ದ್ವೀಪದ ಆರ‍್ತಿಕತೆ ಪಕ್ಕದ ದ್ವೀಪಗಳ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಹತ್ತಿರದ ದ್ವೀಪ ಮುಕುರದಲ್ಲಿ ಉನ್ನತ ಮಟ್ಟದ ರೆಸಾರ‍್ಟ್ ಗಳಿದ್ದು ಅಲ್ಲಿ ಮೀನು ಹಿಡಿಯುವಿಕೆ, ನೀರಿಗೆ ಆಟಗಳು, ನೀರಿನೊಳಗೆ ಸಬ್ ಮೇರಿನ್ ರೀತಿಯಲ್ಲಿ ಈಜುವಿಕೆಗಳೆಲ್ಲವೂ ಪ್ರವಾಸಿಗರಿಗೆ ಲಬ್ಯವಿದೆ. ಅಂತಹ ಬಹಳಶ್ಟು ರೆಸಾರ‍್ಟ್ ಗಳಲ್ಲಿ ಸಾಂತಾ ಕ್ರೂಜ್‍ನ ನಿವಾಸಿಗಳಿಗೆ ಕೈ ತುಂಬಾ ಕೆಲಸ. ಉಳಿದವರು ಹೆಕ್ಕಿ ತಂದ ಶಂಕಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಿ ಹಾಗೂ ಸ್ತಳೀಯ ತಿಂಡಿ ತಿನಸುಗಳನ್ನು ಮಾರಿ ಹೊಟ್ಟೆ ಹೊರೆಯುತ್ತಾರೆ.

s2a2304-640x360

ಇಶ್ಟೆಲ್ಲಾ ಕಶ್ಟಗಳಿದ್ದಾಗ್ಯೂ ಈ ದ್ವೀಪದ ವಾಸ ತಮಗೆ ಸುಕ ಹಾಗೂ ನೆಮ್ಮದಿಯನ್ನು ನೀಡಿದೆ ಎಂದು ಬಣ್ಣಿಸುತ್ತಾರೆ ಅಲ್ಲಿನವರು. ಸಾಂತಾ ಕ್ರೂಜ್ ಡೆಲ್ ಐಸ್ಲೋಟೆ ಅತಿ ಪುಟ್ಟದಾದ ದ್ವೀಪವಾದ ಕಾರಣ ಅಲ್ಲಿರುವವರೆಲ್ಲಾ ಒಂದೇ ಕುಟುಂಬದವರಂತೆ ಇದ್ದಾರೆ. ಹಾಗಾಗಿ ಅಲ್ಲಿ ಹಿಂಸೆ, ಕಳ್ಳತನ, ಮೋಸ, ವಂಚನೆ ಯಾವುದರ ಸುಳಿವೂ ಇಲ್ಲ. ಮನೆಯ ಬಾಗಿಲಿಗೆ ಬೀಗ ಹಾಕುವ ಪದ್ದತಿಯೂ ಇಲ್ಲ. ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳೂ ಸಹ ಸೌಮ್ಯತೆಯ ಸಾಕಾರ ಮೂರ‍್ತಿಯಂತೆ ಶಿಸ್ತಿನ ಸಿಪಾಯಿಯಗಳಂತೆ ಇದ್ದಾರೆ.

ಪ್ರತಿ ದಿನ ಈ ದ್ವೀಪದಲ್ಲಿ ಸಂಜೆ ಏಳು ಗಂಟೆಗೆ ಜನರೇಟರ್ ಮೂಲಕ ಪ್ರತಿಯೊಂದು ಮನೆಗೂ ವಿದ್ಯುತ್ ಹರಿಸುತ್ತಾರೆ. ಹನ್ನೊಂದು ಗಂಟೆಗೆ ಅದನ್ನು ಸ್ತಗಿತಗೊಳಿಸುತ್ತಾರೆ. ಈ ಸಮಯದಲ್ಲಿ ದಾರಾವಾಹಿಗಳನ್ನು ಅಲ್ಲಲ್ಲಿ ಲಬ್ಯವಿರುವ ಟಿವಿಗಳಲ್ಲಿ ನೋಡಿ ಅವರುಗಳು ಕಾಲ ಕಳೆಯುತ್ತಾರೆ. ಗುಂಪು ಗುಂಪಾಗಿ ಸಮುದಾಯದಂತೆ ಟಿವಿ ನೋಡುವುದೇ ಅವರಿಗೊಂದು ಸಂಬ್ರಮ. ಇಲ್ಲಿನ ಜನಕ್ಕೆ ಪುಟ್‍ಬಾಲ್ ಕ್ರೀಡೆಯ ಬಗ್ಗೆ ಅತೀವ ಗೀಳು. ವಿಶ್ವ ಕಪ್‍ನಂತಹ ದೊಡ್ಡ ದೊಡ್ಡ ಪುಟ್‍ಬಾಲ್ ಪಂದ್ಯಗಳನ್ನೂ ನೋಡುವುದನ್ನು ಯಾವ ಕಾರಣಕ್ಕೂ ತಪ್ಪಿಸುವುದಿಲ್ಲ. ತಮ್ಮ ಉಳಿತಾಯದ ಹಣದಿಂದ ಹೆಚ್ಚಿಗೆ ಗ್ಯಾಸೋಲಿನ್ ಕರೀದಿಸಿ ಪಂದ್ಯದ ಸಮಯದಲ್ಲಿ ಜನರೇಟರ್ ಚಾಲನೆ ಮಾಡಿ ಪಂದ್ಯವನ್ನು ನೋಡಿ ಕುಶಿ ಪಡುತ್ತಾರೆ. ಪುಟ್‍ಬಾಲ್ ಗೀಳಿನ ಕೆಲ ಯುವಕರು ಪಕ್ಕದ ಮುಕುರಾ ದ್ವೀಪಕ್ಕೆ ಹೋಗಿ ಮನದಣಿಯೆ ಆಡುವುದೂ ಉಂಟು.

ಸಾಂತಾ ಕ್ರೂಜ್ ಡೆಲ್ ಐಸ್ಲೋಟೆ ದ್ವೀಪವಾದರೂ ಇಲ್ಲಿ ಬೀಚ್‍ಗಳಿಲ್ಲ, ಸ್ವಿಮ್ಮಿಂಗ್ ಪೂಲ್‍ಗಳಿಲ್ಲ, ಹೊಟೇಲ್‍ಗಳಿಲ್ಲ. ಅಶ್ಟೆ ಏಕೆ ಸತ್ತವರ ಕಳೇಬರವನ್ನು ಮಣ್ಣು ಮಾಡಲೂ ಜಾಗವಿಲ್ಲ. ಕಾಲಿ ಬೂಪ್ರದೇಶವೇ ಇಲ್ಲದಿರುವುದರಿಂದ ಇಲ್ಲಿ ಸ್ಮಶಾನವೂ ಇಲ್ಲ. ಹೆಣಗಳನ್ನು ವಿಲೇವಾರಿ ಮಾಡಲು ಅವುಗಳನ್ನು ಸುಡಬೇಕು ಇಲ್ಲವೆ ಜಲಚರಗಳಿಗೆ ಆಹಾರವಾಗಿ ನೀರಿಗೆ ಎಸೆಯಬೇಕು ಇಲ್ಲವೆ ಅಕ್ಕ ಪಕ್ಕದ ದ್ವೀಪದಲ್ಲಿ ಹೂಳಬೇಕು.

(ಚಿತ್ರ ಸೆಲೆ: areacucuta.com, thestar.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: