“ನೀನೆಂತಾ ವಿದ್ಯಾರ‍್ತಿ?”

– ಸಿ.ಪಿ.ನಾಗರಾಜ.

ಎಂದಿನಂತೆ ತರಗತಿಗೆ ಹೋದೆ. ಹಾಜರಾತಿಯನ್ನು ತೆಗೆದುಕೊಂಡು ಉಪನ್ಯಾಸದಲ್ಲಿ ತೊಡಗಿದೆ. ಸುಮಾರು ಇಪ್ಪತ್ತು ನಿಮಿಶಗಳ ಕಾಲ ಪದ್ಯವೊಂದನ್ನು ಕುರಿತು ಮಾತನಾಡುತ್ತಿದ್ದವನು, ಇದೀಗ ಪದ್ಯದಲ್ಲಿನ ಕೆಲವು ಸಂಗತಿಗಳನ್ನು ಕುರಿತು ಟಿಪ್ಪಣಿಯನ್ನು ಬರೆದುಕೊಳ್ಳುವಂತೆ ವಿದ್ಯಾರ‍್ತಿಗಳಿಗೆ ಸೂಚಿಸಿ, ನಿದಾನವಾಗಿ ಕೆಲವು ವಾಕ್ಯಗಳನ್ನು ಹೇಳತೊಡಗಿದೆ. ನನ್ನ ಮುಂದೆ ಕುಳಿತಿದ್ದ ವಿದ್ಯಾರ‍್ತಿಯೊಬ್ಬ ಎದ್ದು ನಿಂತು –

“ಪೆನ್ ಕೊಡಿ ಸಾರ‍್” ಎಂದು ಕೇಳಿದ. ನನಗೆ ವಿಪರೀತ ಕೋಪ ಬಂತು. ಆತನನ್ನು ಕುರಿತು –

“ಹೋಪ್‍ಲೆಸ್ ಪೆಲೋ….ಕಾಲೇಜಿನ ವಿದ್ಯಾರ‍್ತಿಯಾಗಿ ತರಗತಿಗೆ ಪೆನ್ ತರಬೇಕೆಂಬ ಎಚ್ಚರ ಬೇಡವೇನಯ್ಯ ನಿಂಗೆ?….ಇಟ್ಟಾಡಪ್ಪನ ಚತ್ರಕ್ಕೆ ಬಂದಂಗೆ ಬರೀ ಕಯ್ಯಲ್ಲಿ ಬಂದಿದ್ದೀಯ?….ನಾನು ಪೆನ್ ಕೊಡಲ್ಲ….ಕುಂತ್ಕೊ ಸುಮ್ನೆ”

ಆ ಹುಡುಗ ನಿಂತೇ ಇದ್ದ. ಮೆತ್ತನೆಯ ದನಿಯಲ್ಲಿ ಮತ್ತೆ ಕೇಳಿದ –

“ಸಾರ್, ಪೆನ್ ಕೊಡಿ ಸಾರ‍್”

ನನಗೆ ಬಹಳ ರೇಗಿತು. ಪೆನ್ನಿಗಾಗಿ ಆತ ನನ್ನನ್ನೇ ಕಾಡುತ್ತಿರುವುದನ್ನು ಕಂಡು ಬೇಸರವೂ ಆಯಿತು.

“ಪೆನ್ ತರದೆ ಬಂದಿರೂ ನಿನಗ್ಯಾಕಯ್ಯ ನೋಟ್ಸ್ ಬೇಕು?….ಪೆನ್ ಇಲ್ದೆ ಕಾಲೇಜಿಗೆ ಬಂದಿರೂ ನೀನೆಂತಾ ವಿದ್ಯಾರ‍್ತಿ?….ಇನ್ನೂ ಹತ್ತು ಸಲ ನೀನು ಕೇಳುದ್ರೂ, ನಾನು ಪೆನ್ ಕೊಡೊಲ್ಲ. ಸುಮ್ನೆ ಕುಂತ್ಕೊಳ್ತಿಯೋ….ಇಲ್ಲ….ತರಗತಿಯಿಂದ ಹೊರಗಡೆ ಕಳಿಸಲೊ” ಎಂದು ಅಬ್ಬರಿಸಿದೆ.

ಆ ವಿದ್ಯಾರ‍್ತಿ ನಿಂತೇ ಇದ್ದ. ಮತ್ತೆ ಮೊದಲಿನ ದನಿಗಿಂತಲೂ ನಯವಾಗಿ ಆತ ನುಡಿದ.

“ಸಾರ್….ನಿಮ್ಮ ಜೇಬಿನಲ್ಲಿರೋದು ನನ್ನ ಪೆನ್ನು ಸಾರ‍್”

ಕೂಡಲೇ ನನ್ನ ಜೇಬಿನ ಕಡೆ ನೋಡಿದೆ. ಪೆನ್ನನ್ನು ಜೇಬಿನಿಂದ ಹೊರಕ್ಕೆ ತೆಗೆದೆ….ಅದು ನನ್ನದಲ್ಲ….ಆ ಹುಡುಗನದು. ತರಗತಿಗೆ ಅಂದು ನಾನು ಪೆನ್ನನ್ನು ತಂದಿರಲಿಲ್ಲ. ಅಟೆಂಡೆನ್ಸ್ ಹಾಕುವುದಕ್ಕಾಗಿ ಮುಂದಿನ ಡೆಸ್ಕಿನಲ್ಲಿ ಕುಳಿತಿದ್ದ ಆ ವಿದ್ಯಾರ‍್ತಿಯಿಂದ ಅವನ ಪೆನ್ನನ್ನು ಪಡೆದು….ಬೇಗ ಬೇಗ ಹಾಜರಾತಿಯನ್ನು ಹಾಕಿ ಮುಗಿಸಿ, ಪಾಟವನ್ನು ಮಾಡಬೇಕೆನ್ನುವ ಆತುರದಲ್ಲಿ ಪೆನ್ನನ್ನು ಅವನಿಗೆ ಹಿಂತಿರುಗಿಸುವುದನ್ನು ಮರೆತು, ನನ್ನ ಜೇಬಿಗೆ ಇಳಿಬಿಟ್ಟಿದ್ದೆ. ಪೆನ್ನನ್ನು ವಿದ್ಯಾರ‍್ತಿಗೆ ಹಿಂದಿರುಗಿ ಕೊಡುತ್ತಾ-

“ದಯವಿಟ್ಟು ಬೇಜಾರು ಮಾಡ್ಕೊಳ್ಳಬೇಡ ಕಣಯ್ಯ…ನನ್ನಿಂದ ತಪ್ಪಾಯಿತು” ಎಂದೆ.

ನನಗೆ ಗೊತ್ತಿಲ್ಲದಂತೆ ನನ್ನ ದನಿ ಕಂಪಿಸುತ್ತಿತ್ತು. ನನ್ನ ಹಣೆಯಲ್ಲಿ ಬೆವರ ಹನಿಗಳು ಮೂಡಿದ್ದವು.

( ಚಿತ್ರ ಸೆಲೆ: campussafetymagazine.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: