ನಮ್ಮ ನಡುವೆ ಇರುವ ‘ಸೂಪರ್ ಹೀರೋಗಳು’ – 2

– ನಾಗರಾಜ್ ಬದ್ರಾ.

ಹಿಂದಿನ ಬರಹದಲ್ಲಿ ನಮ್ಮ ನಡುವೆ ಇರುವ ಕೆಲವು ಸೂಪರ್ ಹೀರೋಗಳ ಬಗ್ಗೆ ಓದಿದ್ದೇವೆ. ಅದೇ ರೀತಿಯ ವಿಶಿಶ್ಟ ಶಕ್ತಿಗಳಿರುವ ನಿಜ ಜೀವನದಲ್ಲಿನ ಇನ್ನೂ ಕೆಲವು ಸೂಪರ್ ಹೀರೋಗಳು ಇಲ್ಲಿ ಇದ್ದಾರೆ ನೋಡಿ!

ಈತ ಬಂದೂಕಿನಿಂದ ಹಾರಿಸಿದ ಗುಂಡನ್ನು ಎರಡು ತುಂಡುಗಳನ್ನಾಗಿ ಮಾಡಬಲ್ಲ!

ಬಂದೂಕಿನಿಂದ ಹಾರಿಸಿದ ಗುಂಡು ಎಶ್ಟು ಬಿರುಸಿನಿಂದ ಬರುತ್ತದೆಂದರೆ ಅದು ಸಾಮಾನ್ಯ ಮನುಶ್ಯರ ಕಣ್ಣಿಗೆ ಕಾಣಿಸುವುದಿಲ್ಲ. ಜಪಾನಿನ ಇಸಾವೊ ಮಾಚೀ (Isao Machii) ಅವರು ಪ್ರತಿ ಸೆಕೆಂಡಿಗೆ ಸುಮಾರು 550 ಅಡಿ ಬಿರುಸಿನಿಂದ ಬರುವ, ಬಂದೂಕಿನಿಂದ ಹಾರಿಸಿದ ಗುಂಡನ್ನು ಗಾಳಿಯಲ್ಲಿಯೇ ಎರಡು ತುಂಡುಗಳನ್ನಾಗಿ ಕತ್ತರಿಸುತ್ತಾರೆ. ಇವರ ಕತ್ತಿಯ ಚಲನೆಯನ್ನು ಬರಿಗಣ್ಣಿನಲ್ಲಿ ಗುರುತಿಸಲು ಸಾದ್ಯವಿಲ್ಲ. ಲಾಸ್ ಏಂಜಲೀಸ್ ನಗರದಲ್ಲಿ ವಿಶೇಶ ಕ್ಯಾಮೆರಾವನ್ನು ಬಳಸಿಕೊಂಡು ಅವರ ಕತ್ತಿಯ ಚಲನೆಯನ್ನು ಚಿತ್ರೀಕರಿಸಲಾಗಿ, ಅವರ ಈ ಚಳಕವನ್ನು ನೋಡುಗರು ಗುರುತಿಸಲು ವೀಡಿಯೋದ ಚಲನೆಯ ವೇಗವನ್ನು ಸಾಮಾನ್ಯಕ್ಕಿಂತ 20 ಪಟ್ಟು ಕಡಿಮೆ ಮಾಡಬೇಕಾಗಿತ್ತು. ಇವರನ್ನು ಆದುನಿಕ ಸಮುರಾಯ್ ವಾರಿಯರ್ (samurai warrior) ಎಂದು ಕರೆಯುತ್ತಾರೆ. 3 ನಿಮಿಶದಲ್ಲಿಯೇ ಒಣಹುಲ್ಲಿನ ಚಾಪೆಯನ್ನು (straw mats) ಕತ್ತರಿಸಿದ ದಾಕಲೆ ಇವರ ಹೆಸರಿನಲ್ಲಿದೆ. ಹಾಗೆಯೇ ಪ್ರತಿ ಗಂಟೆಗೆ 820 ಕಿಮೀ ಬಿರುಸಿನಿಂದ ಬರುವ ಟೆನಿಸ್ ಬಾಲ್ ನ್ನು ಎರಡು ತುಂಡುಗಳನ್ನಾಗಿ ಕತ್ತರಿಸಿದ ದಾಕಲೆಯೂ ಕೂಡ ಇವರ ಹೆಸರಿನಲ್ಲಿದೆ.

ಇವರ ಕತ್ತಿ ಚಲನೆಯ ವೀಡಿಯೋ ಕೊಂಡಿ

ಈತ ಒಂದೇ ನೋಟದಲ್ಲಿ ಇಡೀ ನಗರದ ಚಿತ್ರ ಬಿಡಿಸಬಲ್ಲ!

ನಾವು ಯಾವುದಾದರೂ ಒಂದು ಹೊಸ ನಗರಕ್ಕೆ ಬೇಟಿ ನೀಡುವಾಗ ನಮಗೆ ಆ ನಗರದ ನಾಡತಿಟ್ಟ (Map), ಜಿ.ಪಿ.ಎಸ್ ಅತವಾ ನಗರದ ಬಗ್ಗೆ ಚೆನ್ನಾಗಿ ಗೊತ್ತಿರುವವರ ನೆರವು ಬೇಕಾಗುತ್ತದೆ. ನಾವು ಮೊದಲ ಬಾರಿಗೆ ಬೇಟಿ ಮಾಡಿದ ಯಾವುದೇ ಹೊಸ ಜಾಗದ ನಾಡತಿಟ್ಟವನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಮಿದುಳಿಗೆ ಸ್ವಲ್ಪ ಸಮಯ ಬೇಕು. ಆದರೆ ಇಂಗ್ಲೆಂಡ್ ದೇಶದ ಕಲಾವಿದ ಸ್ಟೀಪನ್ ವಿಲ್ಟಶೈರ್ (Stephen Wiltshire) ಯಾವುದೇ ಊರನ್ನು ಒಂದು ಸಾರಿ ನೋಡಿದರೆ ಸಾಕು, ಆ ಊರಿನ ನಾಡತಿಟ್ಟವನ್ನೇ ಬಿಡಿಸುತ್ತಾನೆ. ಅವರು ಟೋಕಿಯೋ ನಗರದ ಮೇಲೆ ಹೆಲಿಕಾಪ್ಟರಿನಲ್ಲಿ ಹಾರಾಡಿದನ್ನು ನೆನಪಿನಲ್ಲಿ ಇಟ್ಟುಕೊಂಡು ಕೇವಲ 7 ದಿನಗಳಲ್ಲಿ ಟೋಕಿಯೋ ನಗರದ ಸಮಗ್ರ ನೋಟದ ತಿಟ್ಟವನ್ನು ಬಿಡಿಸಿದರು. ಅವರಿಗೆ ಹೆಚ್ಚು ಪ್ರಸಿದ್ದಿ ನೀಡಿದ್ದು 20 ನಿಮಿಶಗಳ ಕಾಲ ನ್ಯೂಯಾರ‍್ಕ್ ನಗರದ ಮೇಲೆ ಹೆಲಿಕಾಪ್ಟರಿನಲ್ಲಿ ಹಾರಾಡಿದ ನೆನಪಿನ ನೆರವಿನಿಂದ 19 ಅಡಿ ಉದ್ದದ ಒಂದು ಅದ್ಬುತ ನಾಡತಿಟ್ಟವನ್ನು ಬಿಡಿಸಿರುವುದು. ಇವರು ‘ಮಾನವ ಕ್ಯಾಮೆರಾ ’ ಎಂದೇ ಹೆಸರುವಾಸಿ ಆಗಿದ್ದಾರೆ.

ಈತನಿಗೆ ಮೌಂಟ್ ಎವರೆಸ್ಟ್ ಗೆ ಹೋದರು ಚಳಿ ಆಗುವುದಿಲ್ಲ!

ಡಚ್ ದೇಶದ 57 ವಯಸ್ಸಿನ ವಿಮ್ ಹೊಪ್ (Wim Hof) ಎಂಬುವರು ಎಂತಹ ಚಳಿಯನ್ನು ಕೂಡ ತಡೆದುಕೊಳ್ಳಬಲ್ಲರು. ಇನ್ನೊಂದು ಬೆರಗಾಗಿಸುವ ಸಂಗತಿಯೆಂದರೆ ಅವರು ಕೊರೆಯುವ ಚಳಿಯಲ್ಲಿಯೇ ಯಾವುದೇ ಬಟ್ಟೆಯನ್ನು ತೊಟ್ಟುಕೊಳ್ಳದೇ ಬರೀ ಒಂದು ಚೊಣ್ಣ ಹಾಗೂ ಶೂಗಳನ್ನು ತೊಟ್ಟುಕೊಂಡು ಮೌಂಟ್ ಎವರೆಸ್ಟ್ ನ 6.7 ಕಿ.ಮೀ. ಎತ್ತರವನ್ನು ಹತ್ತಿದ್ದಾರೆ. ಬಳಿಕ ಅವರಿಗೆ ಕಾಲುಗಳಲ್ಲಿ ಗಾಯ ಕಾಣಿಸಿಕೊಂಡ ಕಾರಣ ಮೌಂಟ್ ಎವರೆಸ್ಟ್ ನ ತುದಿಯನ್ನು ತಲುಪಲು ಆಗಲಿಲ್ಲ. 2011 ರಲ್ಲಿ ವಿಮ್ ಹೊಪ್ ಅವರು ಸುಮಾರು 1 ಗಂಟೆ, 52 ನಿಮಿಶ, 42 ಸೆಕೆಂಡುಗಳ ಕಾಲ ಮಂಜುಗಡ್ಡೆಯಿಂದ ತುಂಬಿದ ನೀರಿನೊಳಗಿದ್ದು ವಿಶ್ವ ದಾಕಲೆಯನ್ನು ನಿರ‍್ಮಿಸಿದ್ದಾರೆ. ಇವರು ಡಚ್ ದೇಶದಾದ್ಯಂತ ’ ಐಸ್ ಮ್ಯಾನ್ ’ ಎಂದೇ ಹೆಸರುವಾಸಿ ಆಗಿದ್ದಾರೆ. 2006 ರಲ್ಲಿ ಕೇವಲ ಚೊಣ್ಣವನ್ನು ತೊಟ್ಟು 2 ದಿನಗಳಲ್ಲಿ ಮೌಂಟ್ ಕಿಲಿಮಾಂಜರೋ (Mount Kilimanjaro) ಬೆಟ್ಟದ ತುದಿಯನ್ನು ಹತ್ತಿದ್ದಾರೆ. ಅದೇ ವರ‍್ಶ ಪಿನಲ್ಯಾಂಡಿನ ಆರ‍್ಕ್ಟಿಕ್ (arctic ) ಸರ‍್ಕಲ್ ಮೇಲೆ ನಡೆದ 42.195 ಕಿಲೋಮೀಟರ್ ಉದ್ದದ ಮ್ಯಾರತಾನನ್ನು ಕೂಡ ಅಂಗಿ ಇಲ್ಲದೇ 5 ಗಂಟೆ, 25 ನಿಮಿಶಗಳಲ್ಲಿ ಓಡಿ ಮುಗಿಸಿದ್ದಾರೆ.

ಈತನ ಮೈ ಒಂದು ರಬ್ಬರ್!

ಅಮೇರಿಕಾದ ಡೇನಿಯಲ್ ಬ್ರೌನಿಂಗ್ ಸ್ಮಿತ್ (Daniel Browning Smith) ಎಂಬುವರು ತಮ್ಮ ಇಡೀ ಮೈಯನ್ನೇ ರಬ್ಬರಿನಂತೆ ಹೇಗೆ ಬೇಕೋ ಹಾಗೆ ಬಾಗಿಸುತ್ತಾರೆ. ಇವರು ’ ರಬ್ಬರ್ ಮ್ಯಾನ್ ’ ಎಂದೇ ಹೆಸರುವಾಸಿ ಆಗಿದ್ದಾರೆ. ಡೇನಿಯಲ್ ಬ್ರೌನಿಂಗ್ ಸ್ಮಿತ್ ಮೇ 8, 1979 ರಲ್ಲಿ ಅಮೇರಿಕಾದಲ್ಲಿ ಹುಟ್ಟಿದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ಮೈಯನ್ನು ರಬ್ಬರಿನಂತೆ ಬಾಗಿಸಿ ಎಲ್ಲರನ್ನು ಬೆರಗಾಗಿಸಿದ್ದರು. ಸ್ಮಿತ್ ಅವರು ಮೈಯನ್ನು ಬಾಗಿಸುವುದರಲ್ಲಿ ಒಟ್ಟು 7 ಗಿನ್ನೆಸ್ ವರ‍್ಲ್ಡ್ ರೆಕಾರ‍್ಡ್ ಗಳನ್ನು ನಿರ‍್ಮಿಸಿದ್ದಾರೆ. ಇದಲ್ಲದೇ ಇವರು ಹಾಲಿವುಡ್ ಸಿನಿಮಾ ಹಾಗೂ ಬಗೆ ಬಗೆಯ ಟಿ.ವಿ ಕಾರ‍್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಡೇನಿಯಲ್ ಬ್ರೌನಿಂಗ್ ಸ್ಮಿತ್ ಅವರನ್ನು ಅತ್ಯಂತ ಬಾಗುವ ಮನುಶ್ಯವೆಂದು ಕರೆಯುತ್ತಾರೆ.

ಈತನಿಗೆ ಕರೆಂಟ್ ಹೊಡೆಯುವುದಿಲ್ಲ!

ಸಾಮಾನ್ಯ ಮನುಶ್ಯನಿಗೆ 1 ಆಂಪಿಯರ್ ನಶ್ಟು ಮಿಂಚು ಹೊಡೆದರೆ ಬದುಕುಳಿಯುವದು ತುಂಬಾ ಕಡಿಮೆ. ಕೇರಳದ ಕೊಲ್ಲಂನಲ್ಲಿರುವ ರಾಜ ಮೋಹನ್ ನಾಯರ್ ಅವರು ಸಾಮಾನ್ಯ ಮನುಶ್ಯಗಿಂತ ಸುಮಾರು 10 ಪಟ್ಟು (ಎಂದರೆ 10 ಆಂಪಿಯರ್ ನಶ್ಟು) ಮಿಂಚು ಹೊಡೆತವನ್ನು ತಡೆದುಕೊಳ್ಳುತ್ತಾರೆ. ಇವರ ಮೈಯ ಮೂಲಕ ಮಿಂಚು ಯಾವುದೇ ಅಡೆತಡೆಗಳಿಲ್ಲದೇ ಹರಿಯುತ್ತದೆ. ಅವರ ಮೈಯು ಮಿಂಚಿನ ಒಂದು ಒಳ್ಳೆಯ ದಾರಿತೋರುಗವಾಗಿ ಕೆಲಸ ಮಾಡುತ್ತದೆ. 7 ನೆ ವಯಸ್ಸಿನಲ್ಲಿ ಇರುವಾಗ ತಾಯಿಯನ್ನು ಕಳೆದುಕೊಂಡರು. ಆ ನೋವನ್ನು ತಡೆದುಕೊಳ್ಳಲಾಗದೇ ರಾಜಾ ಅವರು ಮಿಂಚು ಮಾರ‍್ಪುಕವನ್ನು ( transformer) ಹತ್ತಿ ಮಿಂಚು ಹರಿಯುವಿಕೆ ತಂತಿಗಳನ್ನು (Wires) ಹಿಡಿದುಕೊಂಡು ಸಾಯಲು ಪ್ರಯತ್ನಿಸಿದರು. ಆದರೆ ಮಿಂಚಿನಿಂದ ಯಾವುದೇ ರೀತಿಯ ತೊಂದರೆ ಆಗಲಿಲ್ಲ, ಇದು ಎಲ್ಲರನ್ನೂ ಬೆರಗಾಗಿಸಿತ್ತು. ಈ ಸಮಯದಲ್ಲಿಯೇ ರಾಜ್ ಮೋಹನ್ ನಾಯರ್ ಅವರಲ್ಲಿ ಒಂದು ವಿಶಿಶ್ಟ ಶಕ್ತಿಯಿದೆ ಎಂದು ಮೊದಲಬಾರಿಗೆ ಅರಿವಾಯಿತು. ಇವರು ಇಂಡಿಯಾದ ’ ಎಲೆಕ್ಟ್ರಿಕ್ ಮ್ಯಾನ್ ’ ಎಂದೇ ಹೆಸರುವಾಸಿ ಆಗಿದ್ದಾರೆ.

ಇವರ ಈ ವಿಶಿಶ್ಟ ಶಕ್ತಿಯ ಕುರಿತು ವೀಡಿಯೋ ಕೊಂಡಿ

(ಮಾಹಿತಿ ಮತ್ತು ಚಿತ್ರ ಸೆಲೆ: unbelievable-facts.commoviepilot.comsplendoureye.blogspot.inemgn.com, wikipedia.orgstillunfold.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: