ಪ್ಲಾಸ್ಟಿಕ್‍ನಿಂದ ಇಂದನ ತಯಾರಿಕೆ!
– ಕೆ.ವಿ.ಶಶಿದರ.
ಮನೆಯಲ್ಲೇ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಮರುಬಳಕೆ ಮಾಡಿ ಅದರಿಂದ ಇಂದನ ತಯಾರಿಕೆಯ ಪುಟ್ಟ ಯಂತ್ರವನ್ನು ಜಪಾನಿ ವಿಜ್ನಾನಿ ಅಕಿನೊರಿ ಇಟೊ ಕಂಡುಹಿಡಿದಿದ್ದಾರೆ. ಇದರಿಂದ ಉತ್ಪತ್ತಿಯಾದ ಇಂದನವನ್ನು ಅಡುಗೆ ಕೋಣೆಯಲ್ಲಿ ಆಹಾರ ಪದಾರ‍್ತ ತಯಾರಿಕೆಯಲ್ಲಿ ಹಾಗೂ ನೀರು ಮುಂತಾದ ದ್ರವ ಪದಾರ‍್ತಗಳನ್ನು ಬಿಸಿ ಮಾಡಲು ಬಳಸಬಹುದು ಎನ್ನುತ್ತಾರೆ ಅವರು.
ಕೆಲವು ಸಮೀಕ್ಶೆಗಳ ಪ್ರಕಾರ ಪ್ರಪಂಚದಲ್ಲಿ ವರ‍್ಶಂಪ್ರತಿ 100 ಮಿಲಿಯನ್ ಟನ್ ಪ್ಲಾಸ್ಟಿಕ್ ವಿವಿದ ರೀತಿಯಲ್ಲಿ ಬಳಕೆಯಾಗುತ್ತಿದೆ. ಪ್ಯಾಕೇಜಿಂಗ್ ಕ್ಶೇತ್ರದಲ್ಲಿ ಇದರ ಬಳಕೆ ಅತಿ ಹೆಚ್ಚು. ಉಪಯೋಗದ ನಂತರ ತ್ಯಾಜ್ಯವಾಗುವ ಪ್ಲಾಸ್ಟಿಕ್‍ನ 10% ಸಮುದ್ರದ ಪಾಲಾಗುತ್ತದೆ. ಸಮುದ್ರದ ಪಾಲಾದ ಪ್ಲಾಸ್ಟಿಕ್ ಸಮುದ್ರ ನೀರಿನ ನಿರಂತರ ಹೊಡೆತಕ್ಕೆ ಸಿಕ್ಕು ಸಣ್ಣ ಸಣ್ಣ ಚೂರುಗಳಾಗುತ್ತದೆ. ಇವುಗಳನ್ನು ಜಲಚರಗಳಾದ ಮೀನುಗಳು, ಆಮೆಗಳು, ತಿಮಿಂಗಿಲಗಳು, ಸೀಲ್‍ಗಳು, ಸೀ-ಲಯನ್‍ಗಳು ಆಹಾರವೆಂದು ತಿನ್ನುವುದರಿಂದ ಅವುಗಳ ದೇಹವನ್ನು ಸೇರುವ ಪ್ಲಾಸ್ಟಿಕ್ ಕರಗುವುದಿಲ್ಲ. ಇದು ಕ್ರಮೇಣ ಪ್ರಾಣಿ ಪಕ್ಶಿಗಳಿಗೆ ಮಾರಣಾಂತಿಕವಾಗುತ್ತದೆ.
ಉಪಯೋಗವಾಗುವ ಪ್ಲಾಸ್ಟಿಕ್‍ನ ತ್ಯಾಜ್ಯದಲ್ಲಿ 10% ಸಮುದ್ರ ಪಾಲಾದರೆ ಉಳಿದ 90% ಬೂಮಿಯನ್ನು ಸೇರದೇ ವಿದಿಯಿಲ್ಲ. ಬೂಮಿಯ ಒಡಲನ್ನು ಸೇರುವ ಪ್ಲಾಸ್ಟಿಕ್ ತಂತಾನೆ ಕರಗಲು ಕನಿಶ್ಟ 450 ವರ‍್ಶಗಳು ಬೇಕಿದೆ! ಪ್ಲಾಸ್ಟಿಕ್ ಬಳಕೆ ಇದೇ ರೀತಿಯಲ್ಲಿ ಮುಂದುವರೆದರೆ, ಇಡೀ ಬೂಮಿಯ ಮೇಲ್ಮಯ್ ಪೂರಾ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ ಹೋಗುವ ದಿನ ತುಂಬಾ ದೂರವಿಲ್ಲ.
ಹಾಗಾದರೆ ಮುಂದಿನ ದಾರಿಯೇನು?
ಮಾನವನ ಮುಂದಿರುವುದು ಕೇವಲ ಎರಡು ದಾರಿ. ಒಂದು ಪ್ಲಾಸ್ಟಿಕ್ ಬಳಕೆಯನ್ನು ಹಾಗೂ ಅದರ ತಯಾರಿಕೆಯನ್ನು ವಿಶ್ವಾದ್ಯಂತ ಸಂಪೂರ‍್ಣ ನಿಶೇದಿಸುವುದು. ಇಂದಿನ ವಿಶ್ವದ ಪರಿಸ್ತಿತಿಯಲ್ಲಿ ಇದು ಅಸಾದ್ಯ. ಹಾಗಾಗಿ ಪ್ಲಾಸ್ಟಿಕ್ ಮರುಬಳಕೆ ಮಾಡುವ ದಾರಿಯನ್ನು ಹುಡುಕುವುದು ಅನಿವಾರ‍್ಯ. ಈ ನಿಟ್ಟಿನಲ್ಲಿ ಜಪಾನಿನ ವಿಜ್ನಾನಿ ಅಕಿನೊರಿ ಇಟೊ ಒಂದು ಹೆಜ್ಜೆ ಮುಂದೆ ಇಟ್ಟಿರುವುದು ಸ್ವಾಗತಾರ‍್ಹ ಕ್ರಮ.
ಪ್ಲಾಸ್ಟಿಕ್‍ನ ಬವಿಶ್ಯವೇನು?
ಅಕಿನೊರಿ ಇಟೊ ತನ್ನ ಸಂಶೋದನೆಯನ್ನು ಪ್ರಾರಂಬಿಸುವ ಮುನ್ನ ತಿಳಿದುಕೊಂಡಿದ್ದು ಪ್ಲಾಸ್ಟಿಕ್‍ನ ಹುಟ್ಟಿನ ಬಗ್ಗೆ. ಪ್ಲಾಸ್ಟಿಕ್ ಪೆಟ್ರೋಲಿಯಮ್‍ನ ಒಂದು ರೂಪ. ಹಾಗಾಗಿ ಪ್ಲಾಸ್ಟಿಕನ್ನು ಮತ್ತೆ ಆಯಿಲ್ ಆಗಿ ರೂಪಾಂತರಿಸುವ ಸಾದ್ಯತೆಯ ಬಗ್ಗೆ ಚಿಂತಿಸಿದ. ಆ ಸಾದ್ಯತೆ ಇದೆ ಎಂದಾದಲ್ಲಿ ಅದರಿಂದ ಹೊರಹೊಮ್ಮುವ ಆಯಿಲ್‍ನಿಂದ ಸ್ಟವ್‍ಗಳನ್ನು ಉರಿಸಲು, ಅಯಿಲ್ ಅನ್ನು ರಿಪೈನ್ ಮಾಡಿದಲ್ಲಿ ಕಾರು ಬೋಟ್, ಬೈಕುಗಳಿಗೆ ಉಪಯೋಗಿಸುವ ಗ್ಯಾಸೋಲಿನ್‍ಗೆ ಬದಲಾಗಿಯೂ ಸಹ ಬಳಸಬಹುದು ಎಂಬುದು ಅಕಿನೊರಿ ಇಟೊ ಚಿಂತನೆಯ ಸಾರಾಂಶ.
ಅಕಿನೊರಿಯ ಚಿಂತನೆ ಪ್ಲಾಸ್ಟಿಕ್ ಅನ್ನು ವಿಬಜಿಸುವ ಬಗ್ಗೆ. ಇದಕ್ಕಾಗಿ ಆತ ಉಪಯೋಗಿಸಿದ್ದು ಪೈರೊಲಿಸಿಸ್ ಎಂಬ ತಂತ್ರಜ್ನಾನವನ್ನು.
ಏನಿದು ಪೈರೊಲಿಸಿಸ್?
ಆಮ್ಲಜನಕದ ಪಾತ್ರವಿಲ್ಲದೆ ಅತಿ ಹೆಚ್ಚು ಉಶ್ಣತೆಯಲ್ಲಿ (ಅಂದರೆ 8000 F) ಜೈವಿಕ ವಸ್ತುಗಳ ವಿಬಜನೆಯನ್ನು ಪೈರೊಲಿಸಿಸ್ ಎನ್ನುತ್ತಾರೆ. ಈ ಪ್ರಯೋಗದಲ್ಲಿ ಏಕಕಾಲದಲ್ಲಿ ರಾಸಾಯನಿಕ ಸಂಯೋಜನೆ ಮತ್ತು ಬೌತಿಕ ಹಂತದಲ್ಲಿನ ಬದಲಾವಣೆ ಒಳಗೊಂಡಿರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಅತಿ ಹೆಚ್ಚು ಉಶ್ಣತೆಯಲ್ಲಿ ಕಾಯಿಸುವುದರಿಂದ ಅದು ವಿಬಜನೆಯಾಗಿ ಆಯಿಲ್ ಹಾಗೂ ಇತರೆ ವಸ್ತುಗಳಾಗಿ ವಿಬಜನೆಯಾಗುತ್ತದೆ. ಈ ಪ್ರಯೋಗದಿಂದ ಉತ್ಪತ್ತಿಯಾದ ಆಯಿಲ್ ಅನ್ನು ಇಂದನವಾಗಿ ವಿವಿದೆಡೆ ಬಳಸಬಹುದು.
ಅತಿ ಹೆಚ್ಚು ಉಶ್ಣತೆಯಲ್ಲಿ ಕಾಯಿಸುವ ಈ ಪ್ರಕ್ರಿಯೆಯಲ್ಲಿ ಪಾಲಿ ಎತಿಲಿನ್, ಪಾಲಿಸ್ಟರೀನ್ ಹಾಗೂ ಪಾಲಿ ಪ್ರೊಪಿಲಿನ್‍ಗಳನ್ನು ಮಾತ್ರ ಸಂಸ್ಕರಿಸಬಹುದಾಗಿದೆ. ಪೆಟ್‍ನಿಂದ ತಯಾರಾದ ಬಾಟಲ್‍ಗಳಾಗಲಿ ಇತರೆ ವಸ್ತುಗಳಾಗಲಿ ಈ ರೀತಿಯಲ್ಲಿ ವಿಬಜಿಸಲು ಸಾದ್ಯವಿರುವುದಿಲ್ಲ. ವಿಬಜನೆಯಿಂದ ಉತ್ಪತ್ತಿಯಾಗುವ ಅನಿಲವನ್ನು ಜನರೇಟರ್‍ಗಳ ಚಾಲನೆಗೆ ಹಾಗೂ ಸ್ಟವ್‍ಗಳಲ್ಲಿ ದ್ರವ ಪದಾರ‍್ತಗಳನ್ನು ಕಾಯಿಸಲು ಬಳಸಬಹುದು. ಕಚ್ಚಾ ಅನಿಲವನ್ನು ರಿಪೈನ್ ಮಾಡಿದಲ್ಲಿ ಕಾರುಗಳ, ಬೋಟುಗಳ, ಮೋಟಾರ್ ಬೈಕ್‍ಗಳ ಚಾಲನೆಗೆ ಸೂಕ್ತವಾದ ಆಯಿಲ್ ದೊರಕುತ್ತದೆ.
ಈ ಯಂತ್ರವು ಒಂದು ಕೆಜಿ ಪ್ಲಾಸ್ಟಿಕನ್ನು ಒಂದು ಲೀಟರ್ ಆಯಿಲ್ ಆಗಿ ಪರವರ‍್ತಿಸುತ್ತದೆ. ಈ ಯಂತ್ರದ ತಯಾರಕರಾದ ಬ್ಲೆಸ್ಟ್ ಕಂಪೆನಿಯವರು ರಿಪೈನರ್ ಯಂತ್ರವನ್ನೂ ಸಹ ತಯಾರಿಸಿದ್ದು ಈ ಕಚ್ಚಾ ಆಯಿಲ್‍ನಿಂದ ಹೈಡ್ರೋಕಾರ‍್ಬನ್‍ಗಳನ್ನು ಬೇರ‍್ಪಡಿಸಬಹುದಾಗಿದೆ. ಕಚ್ಚಾ ಆಯಿಲ್ ಗ್ಯಾಸೋಲಿನ್, ಡೀಸೆಲ್, ಕೆರೋಸಿನ್ ಹಾಗೂ ಹೆವಿ ಆಯಿಲ್‍ನ ಮಿಶ್ರಣ. ಇದರಿಂದ ಗ್ಯಾಸೋಲಿನ್, ಕೆರೋಸಿನ್ ಹಾಗೂ ಡೀಸಲ್ ಆಯಿಲ್ ಅನ್ನು ಬೇರ‍್ಪಡಿಸಬಹುದು. ಇದು, ಪ್ರಮುಕವಾಗಿ ಉಪಯೋಗಿಸಿದ ಕಚ್ಚಾ ಪ್ಲಾಸ್ಟಿಕ್‍ನ ಮೇಲೆ ಪೂರ‍್ಣ ಪ್ರಮಾಣದಲ್ಲಿ ಅವಲಂಬಿತವಾಗಿರುವ ಹಿನ್ನೆಲೆಯಲ್ಲಿ ಕಂಪೆನಿಯವರು ಅಂತಿಮ ಉತ್ಪನ್ನದ ಬಗ್ಗೆ ಯಾವುದೇ ಕಾತರಿಯನ್ನು ನೀಡಲು ತಯಾರಿಲ್ಲ. ಈ ಯಂತ್ರದ ಬಳಕೆಯಿಂದ ಕಚ್ಚಾ ಆಯಿಲ್‍ನ ತಯಾರಿಕೆಯಲ್ಲಿ ಸುಟ್ಟು ಕರಕಲಾದ ನಿಶ್ಕ್ರಿಯ ಶೇಶ ಉತ್ಪತ್ತಿಯಾಗಲಿದ್ದು, ಇದನ್ನು ಇತರೆ ತ್ಯಾಜ್ಯಗಳಂತೆ ವಿಲೇವಾರಿ ಮಾಡಬಹುದಾಗಿರುತ್ತೆ.
ಪ್ಲಾಸ್ಟಿಕ್‍ನಿಂದ ಆಯಿಲ್‍ಗೆ ಬದಲಾಯಿಸುವ ಪೈರೊಲಿಸಿಸ್ ತಂತ್ರಜ್ನಾನದಲ್ಲಿ ಇತರೆ ಎಲ್ಲಾ ತಂತ್ರಜ್ನಾನದಲ್ಲಿರುವಂತೆ ಹಲವು ಒಳಿತು ಕೆಡಕುಗಳನ್ನು ಒಳಗೊಂಡಿದೆ.
ಮೊದಲು ಒಳಿತುಗಳನ್ನು ಗಮನಿಸುವ:
– ಪ್ಲಾಸ್ಟಿಕ್ ಉಪಯೋಗದ ನಂತರ ತ್ಯಾಜ್ಯವಾಗಿ ಸಮುದ್ರ ಹಾಗೂ ಬೂಮಿಯನ್ನು ಸೇರುವುದನ್ನು ಸಂಪೂರ‍್ಣವಾಗಿ ನಿಯಂತ್ರಣಗೊಳಿಸಬಹುದು. ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ತಮ ರೀತಿಯಲ್ಲಿ ಮಾನವನ ಉಪಯೋಗಕ್ಕೆ ಮರುಬಳಸಬಹುದಾಗಿದೆ.
– ವಾತವರಣದ ಮೇಲೆ ಆಗುತ್ತಿರುವ ಪ್ರಹಾರವನ್ನು ಪೂರ‍್ಣ ಪ್ರಮಾಣದಲ್ಲಿ ತಡೆಗಟ್ಟುವ ಸಾದ್ಯತೆ. ಪ್ರಾಣಿ ಪಕ್ಶಿಗಳ ಸಂಕುಲಗಳ ಮೇಲೆ ಆಗುತ್ತಿರುವ ಮಾರಣಾಂತಿಕ ನಿದಾನಗತಿಯ ವಿಶ ಪ್ರಾಶಾನವನ್ನು ಕಡಿಮೆಮಾಡಿ ವಿನಾಶದ ಹಾದಿಯಿಂದ ಅವುಗಳ ರಕ್ಶಣೆ.
-ಪೈರೋಲಿಸಿಸ್ ತಂತ್ರಜ್ನಾನ ಉಪಯೋಗಿಸಿದಲ್ಲಿ ಒಂದು ಕಿಲೋ ಪ್ಲಾಸ್ಟಿಕ್ ಒಂದು ಲೀಟರ್ ಆಯಿಲ್ ಆಗಿ ಬದಲಾಗುತ್ತದೆ. ಈ ಸಂಪೂರ‍್ಣ ಪ್ರಯೋಗಕ್ಕೆ ಅವಶ್ಯವಿರುವ ವಿದ್ಯುತ್ ಕೇವಲ ಒಂದು ಕಿಲೋ ವ್ಯಾಟ್ ಮಾತ್ರ. ಹಾಗಾಗಿ ಪ್ಲಾಸ್ಟಿಕ್‍ನಿಂದ ಆಯಿಲ್‍ಗೆ ಆಗುವ ಬದಲಾವಣೆಯ ವೆಚ್ಚ ತೀರ ಕಡಿಮೆ.
– ಪ್ಲಾಸ್ಟಿಕ್‍ನಿಂದ ಆಯಿಲ್ ಉತ್ಪಾದನೆಯು ಮನೆ ಮನೆಗೆ ಹಬ್ಬಿದಲ್ಲಿ ದೈನಂದಿನ ಅಡುಗೆಗೆ ಮತ್ತಿತರ ಕೆಲಸಗಳಿಗೆ ಗ್ಯಾಸೋಲಿನ್ ಅವಶ್ಯಕತೆಯು ಕಡಿಮೆಯಾಗಿ, ಬೂಮಿಯಿಂದ ಕಚ್ಚಾ ಪೆಟ್ರೋಲಿಯಮ್ ಆಯಿಲ್ ತೆಗೆಯುವುದನ್ನು ಸಾಕಶ್ಟು ಕಡಿತಗೊಳಿಸಬಹುದು.
ಇದರಿಂದ ಆಗಬಹುದಾದ ಕೆಡಕುಗಳು:
– ಬವಿಶ್ಯದಲ್ಲಿ ಈ ಪ್ರಯೋಗದಿಂದ ಹೊರಸೂಸುವ ಅನಿಲಗಳಿಂದ ವಾತಾವರಣ ಕಲುಶಿತಗೊಳ್ಳುವ ಅಪಾಯ.
– ಆಯಿಲ್ ಉತ್ಪಾದನೆಯ ಈ ಸಂಶೋದನೆಯು ಯಶಸ್ವಿಯಾದಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದಂತೆ ಹೆಚ್ಚುವುದರಲ್ಲಿ ಸಂಶಯವಿಲ್ಲ.
– ಪೆಟ್ ಪ್ಲಾಸ್ಟಿಕನ್ನು ಇದರಲ್ಲಿ ಉಪಯೋಗಿಸಲು ಸಾದ್ಯವಿಲ್ಲದ ಕಾರಣ ಅದರ ತ್ಯಾಜ್ಯ ವಿಲೇವಾರಿ ಮತ್ತೆ ಬೂತದಂತೆ ತಲೆ ಎತ್ತುವ ಸಾದ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅದರ ಮರುಬಳಕೆಯ ಬಗ್ಗೆ ಪರ‍್ಯಾಯ ಸಂಶೋದನೆ ಅತಿ ಅವಶ್ಯ.
ಇಂತಹ ಅಸಾಮಾನ್ಯ ಪುಟ್ಟ ಯಂತ್ರ ಜನ ಸಾಮಾನ್ಯರ ಕೈಗೆ ಎಟುಕುವಂತಾದಲ್ಲಿ ಇದು ಈ ಯುಗದ ಅತ್ಯಂತ ಕ್ರಾಂತಿಕಾರಕ ಸಂಶೋದನೆಯಾಗುವುದರಲ್ಲಿ ಸಂದೇಹವಿಲ್ಲ. ಇಂದನ ಕ್ಶೇತ್ರದಲ್ಲಿ ವಿಶ್ವದಲ್ಲೇ ಬ್ರುಹತ್ ಆಂದೋಲನವನ್ನು ಉಂಟು ಮಾಡುವುದರಲ್ಲಿ ಎಳ್ಳಶ್ಟು ಸಂಶಯವಿಲ್ಲ.
(ಚಿತ್ರ ಸೆಲೆ: shonan-journal.com, chenahotsprings.com, geek.com)
ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ .
plastic ಬಳಕೆಯಿಂದಾಗುವ ಕೇಡಿನ ಬಗೆಗೆ ಮತ್ತಶ್ಟು ಬರಹಗಳು ಮೂಡಲಿ.