ಚೀನಾದಲ್ಲಿ ತಲೆ ಎತ್ತುತ್ತಿವೆ ಹಸಿರು ಕಟ್ಟಡಗಳು

ವಿಜಯಮಹಾಂತೇಶ ಮುಜಗೊಂಡ.

ಕಳೆದ ಡಿಸೆಂಬರ‍್‌ನಲ್ಲಿ ಚೀನಾದ 24 ನಗರಗಳಿಗೆ ಅಪಾಯದ ಮುನ್ನೆಚ್ಚರಿಕೆಯಾಗಿ ‘ರೆಡ್ ಅಲರ‍್ಟ್’ ನೀಡಲಾಗಿತ್ತು. ಅಲ್ಲಿನ ಗಾಳಿ ಎಶ್ಟು ಕೆಟ್ಟದಾಗಿತ್ತೆಂದರೆ ಕೆಲ ದಿನಗಳ ಮಟ್ಟಿಗೆ ಶಾಲೆಗಳನ್ನು ಮುಚ್ಚಿ, ಮಂದಿಗೆ ಮನೆಯಿಂದ ಹೊರಗೆ ಬರದಂತೆ ಕಟ್ಟೆಚ್ಚರ ನೀಡಲಾಗಿತ್ತು! ರಸ್ತೆಗಳಲ್ಲಿ ಯಾವುದೇ ಬಂಡಿಗಳು ಓಡಾಡುವಂತಿರಲಿಲ್ಲ ಮತ್ತು ಬಾನೋಡಗಳ ಹಾರಾಟವನ್ನೂ ರದ್ದುಗೊಳಿಸಲಾಗಿತ್ತು.

ಕಾಡುಗಳ ಕಡಿತದಿಂದಾಗಿ ಕಾವು ಹೆಚ್ಚುತ್ತಿರುವುದು ನಮ್ಮ ಅನುಬವಕ್ಕೆ ಬರುತ್ತಿದೆ. ಪ್ರತಿ ವರ‍್ಶವೂ ಹೆಚ್ಚುತ್ತಿರುವ ಬಿಸಿಲು ಜಗತ್ತಿನ ಎಲ್ಲ ನಾಡುಗಳಿಗೂ ಬಿಸಿ ಮುಟ್ಟಿಸಿದೆ. ಅಳಿಯುತ್ತಿರುವ ಹಸಿರಿನಿಂದಾಗಿ ಗಾಳಿ ಮತ್ತು ಸುತ್ತಣದ(environment) ಮಾಲಿನ್ಯ ಹೆಚ್ಚುತ್ತಿರುವುದು ಇನ್ನೊಂದು ಸವಾಲಾಗಿದೆ. ಇಂದು ಜಗತ್ತಿನ ಎಲ್ಲ ನಾಡುಗಳೂ ಇದಕ್ಕೆ ಉತ್ತರ ಕಂಡುಕೊಳ್ಳುವ ಕುರಿತು ತಲೆಕೆಡಿಸಿಕೊಂಡಿವೆ. ಹೆಚ್ಚು ಮಂದಿಯೆಣಿಕೆ ಇರುವ ನಾಡುಗಳು ಮತ್ತು ಊರುಗಳಲ್ಲಿ ಜಾಗ ಕಡಿಮೆಯಿರುವುದರಿಂದ ಕಾಡುಗಳನ್ನು ಬೆಳೆಸುವುದು ಕಶ್ಟವೇ ಸರಿ. ಇದಕ್ಕೆ ಚೀನಾ ಕಟ್ಟಡತೋಟಗಳನ್ನು(Vertical Forest) ಬೆಳೆಸುವ ಕೆಲಸಕ್ಕೆ ಕೈಹಾಕಿದೆ. ಕಟ್ಟಡತೋಟ ಅಂದರೆ ಕಟ್ಟಡಗಳ ಜೊತೆಗೇ, ಗೋಡೆಗಳಲ್ಲಿ ಗಿಡಗಳನ್ನು ಬೆಳೆಸುವ ಪ್ರಯತ್ನವಾಗಿದೆ.

ಚೀನಾದ ನಂಜಿಂಗ್ ನಗರದ ಮೂಡಣ ದಿಕ್ಕಿನಲ್ಲಿ 200 ಮೀಟರ್ ಮತ್ತು 108 ಮೀಟರ್ ಎತ್ತರದ ನಂಜಿಂಗ್ ಗ್ರೀನ್ ಟವರ‍್ಸ್ ಅವಳಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. 23 ಬಗೆಯ ಒಟ್ಟು 1,100 ಗಿಡಗಳು ಮತ್ತು 2,500 ಕುರುಚಲು ಬಳ್ಳಿ ಮತ್ತು ಸಣ್ಣ ಗಿಡಗಳಿಗೆ ಈ ಅವಳಿ ಕಟ್ಟಡಗಳು ಬೀಡಾಗಲಿವೆ. ಕಟ್ಟಡದ 65,000 ಚದರ ಅಡಿ ಹಸಿರು ಹಬ್ಬಲಿದೆ ಎನ್ನುತ್ತಾರೆ ಈ ಯೋಜನೆಯ ಕಟ್ಟಡದರಿಗ(architect) ಸ್ಟಿಪಾನೋ ಬೋಯ್ರಿ. 35 ಅಂತಸ್ತುಗಳ ಈ ಕಟ್ಟಡಗಳಲ್ಲಿ 247 ಐಶಾರಾಮಿ ಹೋಟೆಲ್ ಕೋಣೆಗಳಿರಲಿದ್ದು, ಕಚೇರಿಗಳು, ಅಂಗಡಿಗಳು, ತಿಂಡಿಯ ಸಂತೆಮಾಳ(food market), ತೋರುಮನೆ(exhibition centre) ಅಲ್ಲದೇ ಹಸಿರು ಕಟ್ಟಡದರಿಮೆಯ ಕಲಿಕೆಮನೆಗಳು(green architecture school) ಸೇರಿರಲಿವೆ. ಈ ಕಟ್ಟಡಗಳ ಕೆಲಸ 2018ರಲ್ಲಿ ಮುಗಿಯಲಿದೆ.

ಈ ಹಸಿರು ಕಟ್ಟಡಗಳು ಪ್ರತಿವರ‍್ಶ ಸುಮಾರು 25 ಟನ್‍ನಶ್ಟು ಕಾರ‍್ಬನ್ ಡೈಆಕ್ಸೈಡ್‍ಅನ್ನು ಹೀರಿಕೊಂಡು ದಿನವೊಂದಕ್ಕೆ ಸುಮಾರು 60 ಕೆ.ಜಿ.ಯಶ್ಟು ಉಸಿರ‍್ಗಾಳಿಯನ್ನು(Oxygen) ನೀಡಬಲ್ಲವು ಎನ್ನುತ್ತಾರೆ ಸ್ಟಿಪಾನೋ. 25 ಟನ್ ಕಾರ‍್ಬನ್ ಡೈಆಕ್ಸೈಡ್ ಅಂದರೆ ಐದು ಕಾರುಗಳಿಂದ ವರ‍್ಶಪೂರ‍್ತಿ ಹೊರಬೀಳುವಶ್ಟು ಹೊಗೆ! ಸ್ಟಿಪಾನೋ ಹೇಳುವಂತೆ ಈ ಎರಡು ಕಟ್ಟಡಗಳು ನಂಜಿಂಗ್ ನಂತಹ ದೊಡ್ಡ ನಗರಗಳ ಇಡೀ ತೊಂದರೆಯನ್ನು ಸರಿಪಡಿಸಲಿಕ್ಕಿಲ್ಲ, ಆದರೆ ಇನ್ನಶ್ಟು ಇದೇ ಬಗೆಯ ಹಸಿರು ಕಟ್ಟಡಗಳು ಹೆಚ್ಚಲು ಮುನ್ನುಡಿ ಆಗಬಹುದು.

ಸ್ಟಿಪಾನೋ ಬೋಯ್ರಿ ಕೆಲಸ ಮಾಡಿರುವ ಕಟ್ಟಡತೋಟ ಇದೇ ಮೊದಲಿನದಲ್ಲ. ಇಟಲಿಯ ಮಿಲನ್ ಮತ್ತು ಸ್ವಿಟ್ಜರ‍್ಲೆಂಡಿನ ಲೋಹ್ಜಾನ್ ನಗರಗಳಲ್ಲಿಯೂ ಇದೇ ಬಗೆಯ ಕಟ್ಟಡಗಳನ್ನು ಕಟ್ಟಿದ್ದಾರೆ. ಇಟಲಿಯಲ್ಲಿರುವ ಬೋಸ್ಕೋ ವರ‍್ಟಿಕಾಲೇ(Bosco Verticale) ಬಹಳ ಪ್ರಸಿದ್ದವಾದುದು. ಇದೇ ಬಗೆಯಲ್ಲಿ ಹಸಿರು ಕಟ್ಟಡಗಳಿರುವ ನಗರವನ್ನು ಕಟ್ಟುವ ಯೋಜನೆಯೊಂದನ್ನು ಕೂಡ ಇವರು ತಯಾರಿಸಿದ್ದಾರೆ.

ಇಂದು ಜಗತ್ತಿನ ಸುಮಾರು 54% ಮಂದಿ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಸಂಕ್ಯೆ 2050ರ ಹೊತ್ತಿಗೆ 66% ಮೀರಲಿದ್ದು ಸಹಜವಾಗಿಯೇ ನಗರಗಳಲ್ಲಿ ಮಾಲಿನ್ಯ ಹೆಚ್ಚಲಿದೆ. ಹೆಚ್ಚುತ್ತಿರುವ ಮಂದಿದಟ್ಟಣೆಯಿಂದಾಗಿ ಪಾರ‍್ಕು, ಕೈತೋಟಗಳಿಗೆ ಜಾಗದ ಕೊರತೆಯಾಗಲಿದೆ. ಸುತ್ತಣದಿಂದ ನಾವು ಪಡೆದುದಕ್ಕೆ ಪ್ರತಿಯಾಗಿ ಹಸಿರು ಕಟ್ಟಡಗಳು ಕೊಡುಗೆ ಆಗಲಿವೆ ಎನ್ನುತ್ತಾರೆ ಸ್ಟಿಪಾನೋ.

ಈ ಹೊಳಹು ಹೆಚ್ಚು ಮಂದಿಮೆಚ್ಚುಗೆ ಗಳಿಸುತ್ತಿದ್ದು ಹಸಿರು ಹೆಚ್ಚಿಸುವ ಕಟ್ಟಡಗಳು ಜಗತ್ತಿನ ಹಲವೆಡೆ ತಲೆಯೆತ್ತುತ್ತಿವೆ. ಸಿಂಗಾಪೂರ‍್‌ನ ಸುಪರ‍್‌ಟ್ರೀ ಮತ್ತು ಸಿಡ್ನಿಯ ಒನ್ ಸೆಂಟ್ರಲ್ ಪಾರ‍್ಕ್ ಈ ಪಟ್ಟಿಗೆ ಹೊಸ ಸೇರ‍್ಪಡೆಗಳು.

(ಮಾಹಿತಿ ಮತ್ತು ಚಿತ್ರ ಸೆಲೆ: weforum.orgyourstory.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ವಿಶ್ವದಲ್ಲೆಲ್ಲಾ ಹಸಿರು ಕಾಡುಗಳು ಮಾಯವಾಗಿ ಕಾಂಕ್ರೀಟ್ ಕಾಡುಗಳು ತಲೆಯೆತ್ತುತ್ತಿರುವ ಈ ಸಮಯದಲ್ಲಿ ಇಂತಹ ವಿನೂತನ ಪ್ರಯೋಗ ಅತ್ಯಂತ ಸ್ವಾಗತಾರ್ಹ. ಇದನ್ನೇ ಭಾರತದ ನಗರಗಳಲ್ಲಿ ದಿನಕ್ಕೊಂದರಂತೆ ತಲೆಯೆತ್ತುತ್ತಿರುವ ಅಪಾರ್ಟಮೆಂಟ್‍ಗಳಿಗೆ ಅಳವಡಿಸುವುದರ ಬಗ್ಗೆ ಚಿಂತನೆ ಅವಶ್ಯ. ಲೇಖನ ಸೊಗಸಾಗಿದೆ.

ಅನಿಸಿಕೆ ಬರೆಯಿರಿ:

%d bloggers like this: