ಪುಟ್ಬಾಲ್ ಲೀಗ್ : ಕಾಲ್ಚೆಂಡು ಪ್ರಿಯರಿಗೆ ಹಬ್ಬದೂಟ
ಇಂಡಿಯನ್ ಪ್ರೀಮಿಯರ‍್ ಲೀಗ್ನ ಅಬ್ಬರ ಇದೀಗ ತಾನೆ ಮುಗಿದಿದೆ. ಐ ಪಿ ಎಲ್ ನಡೆಯುವಾಗ ಬೆಂಗಳೂರಲ್ಲಿ ಬಹುತೇಕರು ಆರ್ರ್ರ್ರ್… ಸೀಸೀಸೀ.. ಬೀಬೀಬೀ.. ಅಂತಾ ಕೂಗಿದ್ರೆ, ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ಪರ ಗೋಶಣೆಗಳು ಕೇಳಿ ಬರುತ್ತವೆ. ಪುಣೆಯಲ್ಲಿ ಸೂಪರ‍್ ಜೈಂಟ್ಸ್, ಕೋಲ್ಕತಾದಲ್ಲಿ ನೈಟ್ರೈಡರ್ಸ್, ಹೈದರಾಬಾದ್ನಲ್ಲಿ ಸನರೈಸರ‍್ಸ್, ಪಂಜಾಬಿನಲ್ಲಿ ಕಿಂಗ್ಸ್ ಇಲೆವೆನ್… ಅವರವರ ತವರಲ್ಲಿ ಅವರವರ ಅಬಿಮಾನಿಗಳು ಗೋಶಣೆ ಕೂಗುತ್ತಾ, ತಮ್ಮ ತಂಡಗಳಿಗೆ ಬೆಂಬಲ ನೀಡ್ತಾರೆ. ಆದರೆ, ಬಾರತೀಯರಲ್ಲಿ ಬಹುತೇಕರಿಗೆ ಗೊತ್ತೇ ಇಲ್ಲದ ಮತ್ತೊಂದು ಆಟವಿದೆ. ಆ ಆಟದ ಬಗ್ಗೆ ಗೊತ್ತಿದ್ರೂ ಪ್ರೀ ಕಿಕ್ಗೂ, ಪೆನಾಲ್ಟಿ ಕಿಕ್ ಗೂ ವ್ಯತ್ಯಾಸ ಗೊತ್ತಿಲ್ಲದವರೂ ಕಂಡಲ್ಲಿ ಸಿಗ್ತಾರೆ. ಅದೇ ಪುಟ್ಬಾಲ್ ಅನ್ನೋ ರೋಚಕ, ಮೈನವಿರೇಳಿಸೋ ಆಟ.
ವರ‍್ಶ ಪೂರ‍್ತಿ ಕ್ರಿಕೆಟ್ನಲ್ಲಿ ಎರಡು ದೇಶಗಳ ನಡುವೆ ಸರಣಿ ನಡೆಯುತ್ತೆ. ಆದರೆ ಪ್ರತಿದಿನ ಕ್ರಿಕೆಟ್ ಪಂದ್ಯಗಳು ನಡೆಯುವುದು ಅಪರೂಪ. ಆದ್ರೆ, ಪುಟ್ಬಾಲ್ ಹಾಗಲ್ಲ. ಪ್ರತಿದಿನ ಒಂದಲ್ಲಾ ಒಂದು ಲೀಗ್ ನಡೆಯುತ್ತಲೇ ಇರುತ್ತೆ. ವರ‍್ಶ ಪೂರ‍್ತಿ ಕಾನೂನು ಬದ್ದ ಬೆಟ್ಟಿಂಗ್ ನಡೆಯುತ್ತೆ. ಅಶ್ಟರ ಮಟ್ಟಿಗೆ ಪುಟ್ಬಾಲ್ ವಿಶ್ವವನ್ನ ಆಕ್ರಮಿಸಿದೆ. ಪುಟ್ಬಾಲ್ನಲ್ಲಿ ಏನಿದ್ರೂ ಕ್ಲಬ್ಗಳದ್ದೇ ಅಬ್ಬರ. ಕ್ಲಬ್ಗಳ ಮುಂದೆ ದೇಶ ಲೆಕ್ಕಕ್ಕಿಲ್ಲ ಎಂದಲ್ಲ. ಬದಲಿಗೆ ಪುಟ್ಬಾಲ್ ಎಂಬುದೇ ಕ್ಲಬ್ಗಳ ಆಟ.
ಇಂತಾ ಪುಟ್ಬಾಲ್ ವಿಶ್ವಕಪ್ ನಡೆದರೆ, ಎರಡು ದೇಶಗಳ ನಡುವಿನ ಯುದ್ದ ನಿಂತ ಅದೆಶ್ಟೋ ಉದಾಹರಣೆಗಳು ಸಿಗುತ್ತವೆ. ಎರಡು ಕ್ಲಬ್ಗಳ ನಡುವಿನ ಗುದ್ದಾಟ, ಬಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದಶ್ಟೇ ಕುತೂಹಲ ಕೆರಳಿಸುತ್ತೆ ಎಂಬುದು ಪುಟ್ಬಾಲ್ಗಿರೋ ಶಕ್ತಿಯ ಪ್ರತೀಕ ಎಂದರೆ ತಪ್ಪಲ್ಲ. ಅದು ಇಂಗ್ಲೀಶ್ ಪ್ರೀಮಿಯರ‍್ ಲೀಗ್ ಇರಲಿ, ಸ್ಪ್ಯಾನಿಶ್ ಲಾ ಲೀಗಾ ಇರಲಿ, ಇಟಾಲಿಯನ್ ಸೀರೀ ಏ, ಪ್ರಾನ್ಸ್ನ ಲೀಗ್ 1, ಜರ‍್ಮನಿಯ ಬಂಡೆಸ್ ಲಿಗಾ ಇರಲಿ… ಅಲ್ಲೊಂದು ಐತಿಹಾಸಿಕ ವೈಶಮ್ಯದ ಅದ್ಯಾಯ ಇದ್ದೇ ಇರುತ್ತದೆ. ಅಶ್ಟರ ಮಟ್ಟಿಗೆ ಪುಟ್ಬಾಲ್ ಆ ದೇಶಗಳನ್ನ ಆವರಿಸಿಕೊಂಡಿದೆ.
ಕ್ರಿಕೆಟ್ ಜನಿಸಿದ ನಾಡಲ್ಲೇ ಪುಟ್ಬಾಲ್ ಕೂಡ ಜನ್ಮ ತಳೆದಿದೆ. ಇಂಗ್ಲೆಂಡ್ನವರಿಗೆ ಕ್ರಿಕೆಟ್ ವಿಶ್ವಕಪ್ ಗೆಲ್ಲದೇ ಇರೋದು ಮುಕ್ಯವೇ ಅಲ್ಲ. ಅದೇ ಯುರೋ ಕಪ್ನಲ್ಲೋ, ಪುಟ್ಬಾಲ್ ವಿಶ್ವಕಪ್ನಲ್ಲೋ ತಮ್ಮ ತಂಡ ಪಾಲ್ಗೊಳ್ಳದೇ ಇದ್ದರೆ, ಅವರಿಗೆ ಬರೋ ಸಿಟ್ಟು ನಿರೀಕ್ಶೆಗೆ ಮೀರಿದ್ದು. ಇಂಗ್ಲೀಶ್ ಪ್ರೀಮಿಯರ‍್ ಲೀಗ್ನಲ್ಲಿ ಮ್ಯಾಂಚೆಸ್ಟರ‍್ ಯುನೈಟೆಡ್ ಮತ್ತು ಲಿವರ್ಪೂಲ್, ಮ್ಯಾಂಚೆಸ್ಟರ‍್ ಯುನೈಟೆಡ್ ಮತ್ತು ಆರ‍್ಸೆನಲ್, ಮ್ಯಾಂಚೆಸ್ಟರ‍್ ಯುನೈಟೆಡ್ ಮತ್ತು ಮ್ಯಾಂಚೆಸ್ಟರ‍್ ಸಿಟಿ ನಡುವಿನ ಪಂದ್ಯಗಳಿಗೆ ಕಾದು ಕೂರುವ ಅಬಿಮಾನಿಗಳ ಪಡೆಗೆ ಕಡಿಮೆ ಇಲ್ಲ. ಪ್ರತಿಯೊಂದು ಕ್ಲಬ್ನ ಆಟಗಾರನಿಗೂ ಆ ಕ್ಲಬ್ ಅಬಿಮಾನಿಗಳು ಹಾಡು ರಚಿಸ್ತಾರೆ. ಸಾಂಪ್ರದಾಯಿಕ ಎದುರಾಳಿ ಕ್ಲಬ್ನ ಆಟಗಾರನಿಗಾಗಿ ಕುಹಕದ ಹಾಡಿನ ಮೂಲಕ ಆತ್ಮಸ್ತೈರ‍್ಯ ಕುಗ್ಗಿಸೋ ಕೆಲಸವನ್ನು ಮಾಡುತ್ತಾರೆ. ಬಾರತದ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ನಲ್ಲೂ ಹೀಗೆ ಮಾಡುವುದಿದೆ.
ಸ್ಪ್ಯಾನಿಶ್ ಲಾ ಲೀಗಾದಲ್ಲಿ ರಿಯಲ್ ಮ್ಯಾಡ್ರಿಡ್ ಮತ್ತು ಬಾರ‍್ಸಿಲೋನ ನಡುವಿನ ಎಲ್ ಕ್ಲಾಸಿಕೋ, ರಿಯಲ್ ಮ್ಯಾಡ್ರಿಡ್ ಮತ್ತು ಅತ್ಲೆಟಿಕೋ ಮ್ಯಾಡ್ರಿಡ್ ನಡುವಿನ ಮ್ಯಾಡ್ರಿಡ್ ಡರ‍್ಬಿ ನೋಡೋಕೇ ಮುಗಿ ಬೀಳುವರ ಸಂಕೆ ಲಕ್ಶಗಳನ್ನ ದಾಟುತ್ತೆ. ಹೇಳಬೇಕು ಅಂದ್ರೆ ನಮ್ಮಲ್ಲಿ ನಡೆಯೋ ಐಪಿಎಲ್, ಇಂಗ್ಲೆಂಡಿನಲ್ಲಿ ನಡೆಯೋ ಇಂಗ್ಲೀಶ್ ಪ್ರೀಮಿಯರ‍್ ಲೀಗ್ನ ಅವತರಣಿಕೆ ಅಶ್ಟೇ. ಅಲ್ಲಿ ಬೆಟ್ಟಿಂಗ್ ಕಾನೂನು ಬದ್ದ, ಇಲ್ಲಿ ಬೆಟ್ಟಿಂಗ್ ಕಾನೂನು ಬಾಹಿರ ಅನ್ನೋದೊಂದೇ ವ್ಯತ್ಯಾಸ.
ಇದು ಕೇವಲ ಇಂಗ್ಲೀಶ್ ಪ್ರೀಮಿಯರ‍್ ಲೀಗಿಗೆ ಸೀಮಿತವಲ್ಲ. ವಿಶ್ವದ ಎಲ್ಲ ಪುಟ್ಬಾಲ್ ಲೀಗ್ಗಳಿಗೂ ಅನ್ವಯಿಸುತ್ತೆ. ಜರ‍್ಮನಿ, ಬ್ರೆಜಿಲ್, ಅರ‍್ಜೆಂಟೀನಾ, ಕೊಲಂಬಿಯಾ, ಉರುಗ್ವೆ, ಪರಾಗ್ವೆ, ಚಿಲಿ, ಅಮೆರಿಕದ ಮೇಜರ‍್ ಸಾಕರ‍್ ಲೀಗ್, ಚೈನೀಸ್ ಸೂಪರ‍್ ಲೀಗ್… ಪುಟ್ಬಾಲ್ ಅನ್ನೋದೇ ಹಾಗೆ. ಅದು ಶ್ರೀಮಂತರ ಆಟವೇ ಅಲ್ಲ. ಜನ ಸಾಮಾನ್ಯರ ಆಟ. ಈ ಆಟದಲ್ಲಿ ಸ್ಟಾರ್ಗಳಾಗಿರೋರಲ್ಲಿ ಬಹುತೇಕರು ಒಪ್ಪೊತ್ತಿನ ಊಟಕ್ಕೆ ಪರದಾಡ್ತಿದ್ದೋರು. ಗಲ್ಲಿ ಗಲ್ಲಿಗಳಲ್ಲಿ ಯಾವುದೋ ವಸ್ತುವನ್ನ ಕಾಲ್ಚೆಂಡಿನಂತೆ ಕಂಡು, ಅದರಲ್ಲಿ ಆಟ ಆಡಿದೋರು. ಇಂತ ಗುಂಪಿನಲ್ಲಿ ಮೊದಲಿಗೆ ನಮ್ಮ ಕಣ್ಣ ಮುಂದೆ ಬರೋದು ಅಂದ್ರೆ ರೊನಾಲ್ಡಿನೋ. ಬ್ರೆಜಿಲ್ ರಾಜದಾನಿ ರಿಯೋ ಡಿ ಜನೈರೋದ ಕೊಳಗೇರಿಯಲ್ಲಿ, ಪ್ಲಾಸ್ಟಿಕ್ ಬಾಟಲಿಗಳನ್ನ ಗೋಲಿನೊಳಗೆ ತೂರಿಸೋ ಕಾಲ್ಚೆಳಕ ಕಂಡ ಕ್ಲಬ್ನ ವ್ಯಕ್ತಿಯೊಬ್ಬ, ರೊನಾಲ್ಡಿನೋ ಅವರನ್ನ ಒಂದು ಕ್ಲಬ್ಗೆ ಸೇರಿಸಿದ. ಬಳಿಕ ನಡೆದದ್ದು ಇತಿಹಾಸ. ರೊನಾಲ್ಡಿನೋ ಅದ್ಯಾವ ಮಟ್ಟಿಗಿನ ಕ್ರೇಜ್ ಸಂಪಾದಿಸಿದರು ಅಂದ್ರೆ, ವಿಶ್ವದ ಅತ್ಯಂತ ದೊಡ್ಡ ಕ್ಲಬ್ಗಳಲ್ಲಿ ಒಂದಾದ ಬಾರ‍್ಸಿಲೋನಾ, ಬಾಯರ‍್ನ್ ಮ್ಯೂನಿಕ್ ಪ್ರತಿನಿದಿಸಿದ್ದರು. ಇದು ಪುಟ್ಬಾಲ್ನ ಮಾಯೆ.
( ಮುಂದಿನ ಬರಹದಲ್ಲಿ : ಪುಟ್ಬಾಲ್ ಕ್ಲಬ್ ಗಳ ನಡುವಿನ ಕಾದಾಟ – ‘ಎಲ್ ಕ್ಲಾಸಿಕೋ’ )
( ಚಿತ್ರ ಸೆಲೆ: sillyseason.com )
ಫುಟ್ಬಾಲ್ ಅಭಿಮಾನಿಯಾಗಿ ಕನ್ನಡದಲ್ಲಿ ಸುದ್ದಿ ಓದುತ್ತಿರುವುದು ನಿಜಕ್ಕೂ ಸಂತೋಷ ತಂದಿತು.
ದನ್ಯವಾದಗಳು