ಮೆದುಳನ್ನು ಗೊಂದಲಕ್ಕೆ ದೂಡುವ ಕೆಲವು ಕೆಲಸಗಳು!
ಮೆದುಳು ಮನುಶ್ಯನ ಮೈಯ ಅರಿದಾದ ಅಂಗಗಳಲ್ಲಿ ಒಂದಾಗಿದ್ದು, ಮೈಯ ಎಲ್ಲಾ ಬಾಗಗಳನ್ನು ನಿಯಂತ್ರಿಸುತ್ತದೆ. ಇಂತಹ ಮೆದುಳು ಕೂಡ ಕೆಲವೊಮ್ಮೆ ಗೊಂದಲಕ್ಕೆ ಈಡಾಗುತ್ತದೆ, ಮೋಸಹೋಗುತ್ತದೆ ಅಂದರೆ ಅದನ್ನು ನಾವು ನಂಬಲೇಬೇಕು. ಅಂತಹ ಕೆಲವು ಗೊಂದಲಗಳ ಪಟ್ಟಿ ಇಲ್ಲಿದೆ.
ಬಲಗಾಲು ಹಾಗೂ ಬಲಗೈ ಎರಡನ್ನು ಒಂದೇ ಹೊತ್ತಿನಲ್ಲಿ ಬೇರೆ ಬೇರೆ ಕಡೆಗೆ ತಿರುಗಿಸಲು ಆಗುವುದಿಲ್ಲ!
ನೀವು ಕುರ‍್ಚಿಯ ಮೇಲೆ ಕುಳಿತುಕೊಂಡು ಬಲಗಾಲನ್ನು ನೆಲದಿಂದ ಕೆಲವು ಇಂಚು ಮೇಲೆತ್ತಿ ಬಲಕ್ಕೆ ದುಂಡಾಕಾರದಲ್ಲಿ(Clockwise) ತಿರುಗಿಸಿ. ಇದನ್ನು ಮಾಡುತ್ತಲೇ ಬಲಗೈಯ ತೋರುಬೆರಳಿನಿಂದ ಗಾಳಿಯಲ್ಲಿ ಅಂಕಿ ಆರನ್ನು(6) ಬಿಡಿಸಲು ಪ್ರಯತ್ನಿಸಿ. ನಿಮಗೆ ತಿಳಿಯದೇ ಬಲಕ್ಕೆ ತಿರುಗುತ್ತಿದ್ದ ನಿಮ್ಮ ಕಾಲು ಕೂಡಲೆ ಎಡಕ್ಕೆ ದುಂಡಾಕಾರದಲ್ಲಿ (Anticlockwise) ತಿರುಗಲಾರಂಬಿಸುತ್ತದೆ.
ಮೆದುಳಿನಲ್ಲಿ ಎರಡು ಬಾಗಗಳಿವೆ. ಮೆದುಳಿನ ಬಲಬಾಗವು ಮನುಶ್ಯನ ಮೈಯ ಎಡಬಾಗವನ್ನು ನಿಯಂತ್ರಿಸಿದರೆ, ಮೆದುಳಿನ ಎಡಬಾಗವು ಮೈಯ ಬಲಬಾಗವನ್ನು ನಿಯಂತ್ರಿಸುತ್ತದೆ. ನೀವು ಮೈಯ ಯಾವುದಾದರು ಬಾಗವನ್ನು ಗಾಳಿಯಲ್ಲಿ ನಿರ‍್ದಿಶ್ಟ ದಿಕ್ಕಿನಲ್ಲಿ ಚಲನೆ ಮಾಡಬೇಕೆಂದು ಬಯಸಿದಾಗ ನರಕೋಶಗಳ (nerve cells) ಗೊಂಚಲು ಸಕ್ರೀಯವಾಗುತ್ತವೆ. ಅದರಂತೆ ನೀವು ಬಲಗಾಲನ್ನು ಗಾಳಿಯಲ್ಲಿ ಬಲಕ್ಕೆ ಗುಂಡಾಕಾರದಲ್ಲಿ ತಿರುಗಿಸುತ್ತಿರುವಾಗ ಮೆದುಳಿನ ಎಡಬಾಗದ ನರಕೋಶಗಳ ಗೊಂಚಲು ಸಕ್ರೀಯವಾಗಿ ಅದನ್ನು ನಿಯಂತ್ರಿಸುತ್ತಾ ಇರುತ್ತದೆ. ಬಳಿಕ ಅದೇ ಸಮಯದಲ್ಲಿ ನೀವು ಬಲಗೈಯಿಂದ ಗಾಳಿಯಲ್ಲಿ ಅಂಕಿ ಆರನ್ನು ಬರೆಯಲು ಬಯಸಿದಾಗ ಅದು ಎಡಸುತ್ತಿನ ಚಲನೆ ಆಗುತ್ತದೆ. ಮೆದುಳಿನ ಎಡಬಾಗಕ್ಕೆ ಒಂದೇ ಸಮಯದಲ್ಲಿ ಎರಡು ವಿರುದ್ದ ದಿಕ್ಕಿನ ಚಲನೆಗಳನ್ನು ನಿರ‍್ವಹಿಸಲು ಆಗುವುದಿಲ್ಲ. ಆದ್ದರಿಂದ ಎರಡು ಚಲನೆಗಳನ್ನು ಒಂದೇ ದಿಕ್ಕಿನಲ್ಲಿ ನಡೆಯುವಂತೆ ಮಾಡುತ್ತದೆ.
ಆದರೆ ಇದನ್ನೇ ಬಲ ಕಾಲು ಹಾಗೂ ಎಡಗೈಯನ್ನು ಬಳಸಿ ಮಾಡಿದರೆ ಯಾವುದೇ ತೊಂದರೆ ಆಗುವುದಿಲ್ಲ!
ಮುಟ್ಟಿದ್ದು ಒಂದು ಆದರೆ ಹೇಳುವುದು ಎರಡು!
ನಿಮ್ಮ ಗೆಳೆಯ, ಗೆಳತಿಯರ ಮೇಲೆ ಈ ಪ್ರಯೋಗವನ್ನು ಮಾಡಬಹುದು. ಮೊದಲು ನಿಮ್ಮ ಗೆಳೆಯರ ತೋರುಬೆರಳು ಹಾಗೂ ನಡುವಿನ ಬೆರಳನ್ನು ಚಿತ್ರದಲ್ಲಿ ತೋರಿಸಿದ ಹಾಗೆ ಎಕ್ಸ್ ಆಕಾರದಲ್ಲಿ ಬಾಗಿಸಿಕೊಳ್ಳಲು ಹೇಳಿ. ಬಳಿಕ ಅವರ ಎರಡು ಕಣ್ಣುಗಳನ್ನು ಮುಚ್ಚಲು ಹೇಳಿ. ನೀವು ಬಾಗಿರುವ ಅವರ ಎರಡು ಬೆರಳುಗಳಿಗೆ ಚಿಕ್ಕದಾದ ಹಾಗೂ ದುಂಡಾಗಿರುವ (ಬಟಾಣಿ ಕಾಳು ಇಲ್ಲವೇ ಗೋಲಿ) “ಒಂದು” ವಸ್ತುವನ್ನು ಮುಟ್ಟಿಸಿ. ನೆನಪಿರಲಿ, ನೀವು ಮುಟ್ಟಿಸುವ ಒಂದು ವಸ್ತು ಅವರ ಎಕ್ಸ್ ಆಕಾರದ ಎರಡು ಬೆರಳುಗಳ ತುದಿಗೆ ತಾಕಬೇಕು. ಬಳಿಕ ಅವರ ಕೈಗೆ ಎಶ್ಟು ವಸ್ತುಗಳನ್ನು ಮುಟ್ಟಿಸಲಾಗಿದೆ ಎಂದು ಕೇಳಿ, ಆಗ ನಿಮ್ಮ ಗೆಳೆಯರು ಕೊಡುವ ಉತ್ತರ “ಎರಡು” ವಸ್ತುಗಳು ಎಂದಾಗಿರುತ್ತದೆ.
ದುಂಡಾಗಿರುವ ವಸ್ತುವನ್ನು ಮುಟ್ಟುವಾಗ ಎರಡೂ ಬೆರಳುಗಳ ಹೊರಗಿನ ಬಾಗವು ಒಂದೇ ಸಮಯದಲ್ಲಿ ವಸ್ತುವಿಗೆ ತಾಕುತ್ತವೆ. ಈ ಎರಡು ಬೆರಳುಗಳು ಎಕ್ಸ್ ಆಕಾರದಲ್ಲಿ ಬಾಗಿರುವುದನ್ನು ಮೆದುಳಿಗೆ ಗುರುತಿಸಲು ಆಗುವುದಿಲ್ಲ. ಹಾಗಾಗಿ ಇದನ್ನು ಮೆದುಳು ಎರಡು ಬೇರೆ ಬೇರೆ ವಸ್ತುಗಳೆಂದು ತಿಳಿಯುತ್ತದೆ. ಅದಕ್ಕೆ ಅವರು ಕೊಡುವ ಉತ್ತರ ‘ಎರಡು’ ಎಂದಾಗಿರುತ್ತದೆ. ಈ ಪ್ರಯೋಗವನ್ನು ನಿಮಗೇ ನೀವೇ ಮಾಡಿಕೊಳ್ಳಬಹುದು, ಆದರೆ ಎರಡು ವಸ್ತುಗಳನ್ನು ಮುಟ್ಟಿದಂತೆ ಅನಿಸುವ ಸಾದ್ಯತೆಗಳು ಕಡಿಮೆ. ಕೆಲವೊಮ್ಮೆ ನಿಮ್ಮ ಗೆಳೆಯರಿಗೂ ಎರಡು ವಸ್ತುಗಳನ್ನು ಮುಟ್ಟಿದಂತೆ ಅನಿಸದಿರಬಹುದು, ಇದು ಮೆದುಳಿನ ಅರಿವುಕಗಳ ಸ್ತಿತಿಯ ಮೇಲೆ ಅವಲಂಬಿತವಾಗಿರುತ್ತದೆ.
ಎರಡು ಕೈಯಗಳನ್ನು ಒಂದೇ ಸಲಕ್ಕೆ ಬೇರೆ ಬೇರೆ ದಿಕ್ಕಿಗೆ ತಿರುಗಿಸಲು ಆಗುವುದಿಲ್ಲ!
ಇದು ಮೆದುಳನ್ನು ಗೊಂದಲಕ್ಕೆ ಈಡುಮಾಡಲು ಇರುವ ತುಂಬಾ ಸರಳವಾದ ದಾರಿಯಾಗಿದೆ. ನಿಮ್ಮ ಎಡಗೈ ಹಾಗೂ ಬಲಗೈಯನ್ನು ಎದುರು ಬದುರು ತಂದು, ಎರಡು ಕೈಗಳನ್ನು ಬೇರೆ ಬೇರೆ ದಿಕ್ಕಿನಲ್ಲಿ ದುಂಡಾಕಾರದಲ್ಲಿ ತಿರುಗಿಸುವ ಪ್ರಯತ್ನ ಮಾಡಿ. ನಿಮಗೆ ತಿಳಿಯದಂತೆ ನಿಮ್ಮ ಎರಡೂ ಕೈಗಳು ಒಂದೇ ದಿಕ್ಕಿನಲ್ಲಿ ತಿರುಗುತ್ತವೆ.
ಇಕ್ಕಣ್ಣಿ (binocular) ಗಾಯದ ನೋವನ್ನು ಕಡಿಮೆ ಮಾಡುತ್ತದೆ!
ಬರಿಗಣ್ಣಿಗೆ ಕಾಣದ ದೂರದ ವಸ್ತುಗಳನ್ನು ನೋಡಲು ಇಕ್ಕಣ್ಣಿ ಬಳಸುತ್ತಾರೆ. ಯಾಕೆಂದರೆ ಇದರಲ್ಲಿ ದೂರದ ವಸ್ತುಗಳು ದೊಡ್ಡದಾಗಿ ಹಾಗೂ ತೆಳುವಾಗಿ ಕಾಣಿಸುತ್ತವೆ. ಆದರೆ ಅದೇ ಇಕ್ಕಣ್ಣಿಯನ್ನು ಬಳಸಿ ಗಾಯದ ನೋವನ್ನು ಕೂಡ ಕಡಿಮೆ ಮಾಡಬಹುದು!
ಆಕ್ಸಪರ‍್ಡ್ ವಿಶ್ವವಿದ್ಯಾಲಯದ ಅರಕೆಗಾರರು 2008 ರಲ್ಲಿ ತುಂಬಾ ದಿನಗಳಿಂದ ಕೈ ನೋವುನಿಂದ ಬಳಲುತ್ತಿರುವ 10 ರೋಗಿಗಗಳ ಮೇಲೆ ಈ ಇಕ್ಕಣ್ಣಿಯ ಪ್ರಯೋಗವನ್ನು ಮಾಡಿದರು. ಅರಕೆಗಾರರು ರೋಗಿಗಳಿಗೆ ಚಿತ್ರದಲ್ಲಿ ತೋರಿಸಿದ ಹಾಗೆ ಇಕ್ಕಣ್ಣಿಯನ್ನು ಉಲ್ಟಾಪಲ್ಟಾ ಹಿಡಿದುಕೊಂಡು, ಅಂದರೆ ಅದರ ಹಿಂದಿನ ತುದಿಯಿಂದ ಗಾಯವಾದ ಬಾಗವನ್ನು ನೋಡಲು ಹೇಳಿದರು. ಆಗ ರೋಗಿಗಳಿಗೆ ಗಾಯದ ಗಾತ್ರವು ಚಿಕ್ಕದಾದಂತೆ ಕಾಣಿಸಿ, ನೋವು ಸ್ವಲ್ಪ ಕಡಿಮೆ ಆದಂತೆ ಅನಿಸುತ್ತಿದೆ ಎಂದು ತಿಳಿಸಿದರು. ಮೆದುಳಿನ ಅರಿವಿಗೆ ಗಾಯವು ದೊಡ್ಡದಾಗಿ ಕಾಣಿಸಿದ್ದರೆ ಅದರ ನೋವು ಹೆಚ್ಚಿದೆ ಎಂದು ಅಂದುಕೊಳ್ಳುತ್ತದೆ. ಅದೇ ಗಾಯ ಚಿಕ್ಕದಾಗಿ ಕಾಣಿಸಿದರೆ ಅಶ್ಟೇನು ನೋವಿಲ್ಲ ಎಂದು ಮೆದುಳಿಗೆ ಅನಿಸುತ್ತದೆ.
(ಮಾಹಿತಿ ಸೆಲೆ: sciencemadesimple.co.uk, ispsd.com, smashinglists.com)
(ಚಿತ್ರ ಸೆಲೆ: seniorark.com, thenakedscientists.com, sharenator.com, sirasa.lk)
ಇತ್ತೀಚಿನ ಅನಿಸಿಕೆಗಳು