ಬರೋಬ್ಬರಿ ಹತ್ತು – ನಡಾಲ್​ ತಾಕತ್ತು!

– ಚಂದ್ರಮೋಹನ ಕೋಲಾರ.

ಪುರುಶರ ಟೆನ್ನಿಸ್​ನಲ್ಲಿ ಅಮೆರಿಕನ್ನರು ಪ್ರಾಬಲ್ಯ ಸಾದಿಸಿದ್ದ ಕಾಲವದು. ಆಂಡ್ರೆ ಅಗಾಸಿ, ಪೀಟ್ ಸಾಂಪ್ರಾಸ್​ ತಮ್ಮ ಮನಮೋಹಕ ಆಟದಿಂದಾಗಿ ಟೆನ್ನಿಸ್​ ಪ್ರಿಯರ ಮನ ಗೆದ್ದು ಅವರ ಮನದಲ್ಲಿ ವಿರಾಜಮಾನರಾಗಿದ್ದರು. ಇಬ್ಬರೂ ಇನ್ನೇನು ನಿವ್ರುತ್ತಿ ಹೊಂದುತ್ತಾರೆ ಅನ್ನೋ ಸಮಯಕ್ಕೆ ಇವರಾದ ಬಳಿಕ ಮತ್ಯಾರು? ಎಂಬ ಪ್ರಶ್ನೆ ಉದ್ಬವಿಸಿತ್ತು. ಆಗ ಮುನ್ನೆಲೆಗೆ ಬಂದವರೇ ರೋಜರ‍್​ ಪೆಡರರ‍್​ ಮತ್ತು ರಪೇಲ್​ ನಡಾಲ್​.

ಬಹುಶ ಆ ಕಾಲಕ್ಕೆ ಈ ಇಬ್ಬರು ಟೆನ್ನಿಸ್​ ಗ್ರೇಟ್​ ಅನ್ನಿಸಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಪೆಡರರ‍್​ ಬಗ್ಗೆ ಒಂದಶ್ಟು ನಂಬಿಕೆ ಇತ್ತಾದರೂ ರಪೇಲ್​ ‘ರಪಾ’ ನಡಾಲ್​ ಆಗಸದಲ್ಲಿ ಕಾಣಿಸೋ ಮಿಂಚು ಎಂದು ಶರಾ ಬರೆದವರು ಬಹಳಶ್ಟು ಮಂದಿ. ಒಂದು ಗ್ರಾನ್​ ಸ್ಲ್ಯಾಮ್ ಗೆಲ್ಲೋದೇ ಟೆನ್ನಿಸ್ ಆಟಗಾರರಿಗೆ ದೊಡ್ಡ ಸವಾಲು. ಅಂತಹುದರಲ್ಲಿ ಒಂದೇ ಗ್ರಾನ್​ ಸ್ಲ್ಯಾಮ್ ಅನ್ನು  (ಪ್ರೆಂಚ್ ಓಪನ್) 10 ಬಾರಿ ಗೆಲ್ಲುವುದು ಎಂದರೆ ತಮಾಶೆಯ ಮಾತಲ್ಲ. ಪೆಡರರ‍್​ಗೂ ಈ ಸಾದನೆ ಸಾದ್ಯವಾಗಿಲ್ಲ. ಪೆಡರರ‍್​ 18 ಗ್ರಾನ್​ ಸ್ಲ್ಯಾಮ್ ಗೆದ್ದಿರಬಹುದು. ಆದರೆ, ನಡಾಲ್​ ರೀತಿ ಒಂದೇ ಗ್ರಾನ್​ ಸ್ಲ್ಯಾಮ್ 10 ಬಾರಿ ಗೆಲ್ಲಲು ಆಗಿಲ್ಲ ಎಂದರೆ, ನಡಾಲ್​ ರ ಆಟ ಆವೆ ಮಣ್ಣಿನ ಅಂಕಣದಲ್ಲಿ ಅದ್ಯಾವ ಪರಿ ಇರುತ್ತದೆ ಎಂಬುದರ ಬಗ್ಗೆ ಅಂದಾಜು ಸಿಗುತ್ತದೆ.

ಆಸ್ಟ್ರೇಲಿಯನ್​ ಓಪನ್, ಪ್ರೆಂಚ್ ಓಪನ್​, ವಿಂಬಲ್ಡನ್​, ಯುಸ್​ ಓಪನ್ – ಇವು ಟೆನ್ನಿಸ್ ನ ಗ್ರಾನ್​ ಸ್ಲ್ಯಾಮ್ ಗಳು. ಆಸ್ಟ್ರೇಲಿಯನ್, ಯುಎಸ್​​ ಓಪನ್​ ಹಾರ‍್ಡ್​ ಕೋರ‍್ಟ್​ನಲ್ಲಿ ಆಡುತ್ತಾರೆ. ಪ್ರೆಂಚ್​ ಓಪನ್​ ಆವೆ ಮಣ್ಣು ಅತವಾ ಕ್ಲೇ ಕೋರ‍್ಟ್​ನಲ್ಲಿ ಆಡಿದರೆ, ಟೆನ್ನಿಸ್​​ ಕ್ಲಾಸಿಕಲ್ಸ್​​ ಗಳಿಗೆ ಕಾರಣವಾಗಿರುವ ವಿಂಬಲ್ಡನ್​, ಹುಲ್ಲು ಅಂಕಣ ಅತವಾ ಗ್ರಾಸ್​ ಕೋರ‍್ಟ್​ನಲ್ಲಿ ನಡೆಯುತ್ತದೆ. ಪೆಡರರ‍್​ ಮತ್ತು ನಡಾಲ್​ ನಡುವಿನ ಹೋಲಿಕೆ ಶುರುವಾಗಿದ್ದೇ ವಿಂಬಲ್ಡನ್​ ಓಪನ್ ನ​ ಪೈನಲ್​ ಮ್ಯಾರಾತಾನ್​ ಪಂದ್ಯಗಳಿಂದ.

ನಡಾಲ್​ ಗಾಯದ ಸಮಸ್ಯೆಯಿಂದ 2009ರಲ್ಲಿ ಪ್ರೆಂಚ್​ ಓಪನ್​ನಿಂದ ಹೊರ ಬೀಳದೇ ಇದ್ದಿದ್ದರೆ, ಬಹುಶ ಪೆಡರರ‍್​ಗೆ ಪ್ರೆಂಚ್​ ಓಪನ್​ ಮರೀಚಿಕೆಯಾಗಿಯೇ ಉಳಿಯುತ್ತಿತ್ತೋ ಏನೋ! ಅಶ್ಟರ ಮಟ್ಟಿಗೆ ನಡಾಲ್ ಆವೆ ಮಣ್ಣಿನ ಅಂಕಣವನ್ನು ಆಳುವ ಆಟಗಾರ. ಸ್ಪೇನ್​ನ ನಡಾಲ್​  ‘ಕಿಂಗ್​ ಆಪ್​ ಕ್ಲೇ’ ಎಂದೇ ಕರೆಸಿಕೊಳ್ಳುತ್ತಾರೆ. ಹೀಗೆಂದ ಮಾತ್ರಕ್ಕೆ ಹಾರ‍್ಡ್​ ಕೋರ‍್ಟ್​, ಗ್ರಾಸ್ ಕೋರ‍್ಟ್​ನಲ್ಲಿ ನಡಾಲ್​ ಅಶ್ಟೇನೂ ಚೆನ್ನಾಗಿ ಆಡಲ್ಲ ಎಂದೇನಿಲ್ಲ. 2007, 2008, 2010 ರಲ್ಲಿ ವಿಂಬಲ್ಡನ್​ ಪೈನಲ್​ಗೇರಿದ್ದೇ ಅಲ್ಲದೇ, 2008, 2010 ರಲ್ಲಿ ವಿಂಬಲ್ಡನ್ ಅನ್ನು​ ಮುಡಿಗೇರಿಸಿಕೊಂಡರು. 2008ರಲ್ಲಿ ಪೆಡರರ‍್​​ರನ್ನ ಮಣಿಸಿ ವಿಂಬಲ್ಡನ್​ ಗೆದ್ದ ಬಳಿಕ, ಪೆಡರರ‍್​ ಮತ್ತು ನಡಾಲ್​ ನಡುವೆ ಯಾರು ಶ್ರೇಶ್ಟ ಎಂಬ ಚರ‍್ಚೆ ಶುರುವಾಯಿತು. ಇಂದಿಗೂ ಈ ಚರ‍್ಚೆ ನಿಂತಿಲ್ಲ!

ರಪೇಲ್​ ನಡಾಲ್​ 2014ರಲ್ಲಿ ಪ್ರೆಂಚ್​ ಓಪನ್​ ಗೆದ್ದ ಬಳಿಕ ಗಾಯದ ಸಮಸ್ಯೆಗೆ ತುತ್ತಾದರು. ಇದಾದ ಬಳಿಕ 2015, 2016 ರಲ್ಲಿ ನಡಾಲ್​ ಮತ್ತು ಪೆಡರರ‍್​ ಯಾವುದೇ ಗ್ರಾನ್​ ಸ್ಲ್ಯಾಮ್ ಗೆಲ್ಲುವುದಿರಲಿ, ಪೈನಲ್​ ಕೂಡ ತಲುಪಲಿಲ್ಲ. ಆಗ ಇಬ್ಬರ ಜಮಾನಾ ಮುಗಿದೇ ಹೋಯಿತು ಎಂದು ಎಲ್ಲರೂ ತಿಳಿದಿದ್ದರು. ಯಾವಾಗ 2017ರ ಆಸ್ಟ್ರೇಲಿಯನ್​ ಓಪನ್​ ಶುರುವಾಯಿತೋ, ಟೆನಿಸ್​ ಇತಿಹಾಸದ ಈ ಇಬ್ಬರೂ ದಿಗ್ಗಜ ಆಟಗಾರರು ಪೀನಿಕ್ಸ್​ನಂತೆ ಎದ್ದು ಬಂದರು.

ಆಸ್ಟ್ರೇಲಿಯನ್​ ಓಪನ್​ ನ ಪೈನಲಲ್ಲಿ ಇವರಿಬ್ಬರ ಸೆಣಸಾಟ ನೋಡಿದಾಗ, ನಾವೇನು 2017ರಲ್ಲಿ ಇದ್ದೀವಾ ಅತವಾ 2007ರಲ್ಲಿ ಇದ್ದೀವಾ ಅಂತ ಟೆನ್ನಿಸ್ ಪ್ರಿಯರಿಗೆ ಅನಿಸಿದ್ದು ಅತಿಶಯೋಕ್ತಿ ಅಲ್ಲ. ಅಂತಾ ಪೈಪೋಟಿಯ ಆಟ ಇಬ್ಬರಿಂದಲೂ ಹೊರಹೊಮ್ಮಿತ್ತು ಅಂದು. ಸುಮಾರು 4 ಗಂಟೆ ನಡೆದ ಆ ಹೋರಾಟದಲ್ಲಿ ರೋಜರ‍್​ ಪೆಡರರ‍್​ ನಡಾಲ್ ರನ್ನು ಮಣಿಸಿ, ತಮ್ಮ 18ನೇ ಗ್ರಾನ್​ ಸ್ಲ್ಯಾಮ್ ಗೆದ್ದರು. ಈ ಮೂಲಕ ಟೆನ್ನಿಸ್​​ ಇತಿಹಾಸದಲ್ಲಿ 18 ಗ್ರಾನ್​ ಸ್ಲ್ಯಾಮ್ ಗೆದ್ದ ಏಕೈಕ ಪುರುಶ ಆಟಗಾರ ಎನಿಸಿಕೊಂಡರು.

ಇದಾದ ಬಳಿಕ ರಪೇಲ್​ ನಡಾಲ್​ ಸರದಿ. ಆವೆ ಮಣ್ಣಿನ ಅಂಕಣದ ರಾಜ ನಡಾಲ್​ ಪ್ರೆಂಚ್​ ಓಪನ್​ಗೆ ಕಾಲಿಡುತ್ತಿದ್ದಂತೆ, ಎದುರಾಳಿಗಳ ಎದೆಯಲ್ಲಿ ಡವ ಡವ ಶುರುವಾಗಿತ್ತು. ರೋಲಾಂಡ್​ ಗ್ಯಾರೋಸ್​ ಎಂದರೆ ತನಗೆಶ್ಟು ಇಶ್ಟ ಎಂದು ಈ ಪ್ರೆಂಚ್​ ಓಪನ್​ನಲ್ಲಿ ನಡಾಲ್​ ತೋರಿಸಿಕೊಟ್ಟಿದ್ದಾರೆ. ಈ ಬಾರಿಯ ಪ್ರೆಂಚ್​ ಓಪನ್​ನಲ್ಲಿ 7 ಪಂದ್ಯಗಳನ್ನು ನಡಾಲ್​ ಆಡಿದರು. ಇದರಲ್ಲಿ ಒಂದೇ ಒಂದು ಸೆಟ್​ ಸೋತಿಲ್ಲ. ಪ್ರೆಂಚ್​ ಓಪನ್​ ಇತಿಹಾಸದಲ್ಲಿ ಅತಿ ಕಡಿಮೆ ಗೇಮ್​ಗಳನ್ನು(35) ಸೋತು, ಪ್ರೆಂಚ್​ ಓಪನ್​ ಗೆದ್ದ 2ನೇ ಆಟಗಾರ ಎನಿಸಿಕೊಂಡರು. ಈ ಮೂಲಕ ಪುರುಶರ ಟೆನ್ನಿಸ್​ಇತಿಹಾಸದಲ್ಲಿ ಒಂದೇ ಗ್ರಾನ್​ ಸ್ಲ್ಯಾಮ್ 10 ಬಾರಿ ಗೆದ್ದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೇ, ‘ಲಾ ಡೆಸಿಮಾ’ ಅತವಾ ‘ದಿ ಟೆನ್​ ಸಾದನೆ’ಯನ್ನು ಪೂರ‍್ಣ ಮಾಡಿದರು.

ಸಾಮಾನ್ಯವಾಗಿ ಏಸ್​ಗಳನ್ನ ಸಿಡಿಸಲು ಹಿಂದೆ ಮುಂದೆ ನೋಡುತ್ತಿದ್ದ ನಡಾಲ್​, ಈಗ ಏಸ್​ ಮೇಲೆ ಏಸ್​ ಸಿಡಿಸುತ್ತಿದ್ದಾರೆ. ಬರ‍್ಜರಿ ಬ್ಯಾಕ್​ ಹ್ಯಾಂಡ್​ ಜತೆಗೆ ಪೋರ‍್​ ಹ್ಯಾಂಡ್​ ವಿನ್ನರ‍್​ಗಳನ್ನು ಸಿಡಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ವಿಂಬಲ್ಡನ್​ ಓಪನ್​ ಶುರುವಾಗಲಿದೆ. ಪ್ರೆಂಚ್​ ಓಪನ್​ ಗೆದ್ದ ಬಳಿಕ ವಿಂಬಲ್ಡನ್​ ​ನಲ್ಲಿ ಪಾಲ್ಗೊಳ್ಳಲು ರಪೇಲ್​ ನಡಾಲ್​ ಪೂರ‍್ಣ ತಯಾರಿ ನಡೆಸಿದ್ದಾರೆ. ಗಾಯದಿಂದಾಗಿ ಪ್ರೆಂಚ್​ ಓಪನ್​ ತಪ್ಪಿಸಿಕೊಂಡಿದ್ದ ರೋಜರ‍್​ ಪೆಡರರ್, ತನ್ನ ನೆಚ್ಚಿನ ಹಸಿರು ಹಾಸಿನ ವಿಂಬಲ್ಡನ್​ ಅಂಕಣದಲ್ಲಿ ಕಾಣಿಸಿಕೊಳ್ಳಲು ಸರ‍್ವ ಸನ್ನದ್ದರಾಗಿದ್ದಾರೆ. ಇಬ್ಬರೂ ಆಟಗಾರರು ಇದೇ ರೀತಿಯ ಆಟವನ್ನು ಮುಂದುವರಿಸಿದರೆ, ಈ ಬಾರಿಯ ವಿಂಬಲ್ಡನ್​ ಪೈನಲ್​ ಮತ್ತೊಂದು ಕ್ಲಾಸಿಕಲ್​ ಮ್ಯಾಚ್​ಗೆ ಸಾಕ್ಶಿಯಾಗೋ ಎಲ್ಲಾ ಸಾದ್ಯತೆಗಳು ದಟ್ಟವಾಗಿವೆ.

ಆಂಡಿ ಮರ‍್ರೆ, ನೊವಾಕ್​ ಜೋಕೋವಿಚ್​, ಸ್ಟಾನ್​ ವಾವ್ರಿಂಕಾ, ಕೀ ನಿಶಿಕೋರಿ, ಜೋ ವಿಲ್​ಪ್ರೆಡ್​ ತ್ಸೋಂಗಾ ಜತೆಗೆ ಹೊಸ ಪ್ರತಿಬೆಗಳಾದ ಡೊಮಿನಿಕ್​ ತಿಯೆಮ್​, ಮಿಲಾಸ್​ ರಾವೊನಿಕ್ – ಪೆಡರರ್ ಮತ್ತು ನಡಾಲ್ ಓಟಕ್ಕೆ ಕಡಿವಾಣ ಹಾಕಲು ಸಾಕಶ್ಟು ಶ್ರಮ ವಹಿಸುತ್ತಿದ್ದಾರೆ. ಒಂದು ವೇಳೆ ಪೆಡರರ‍್​ ಮತ್ತು ನಡಾಲ್​ ಪೈನಲ್​ನಲ್ಲಿ ಆಡಿದರೆ, ಈ ಕನಸಿನ ಪೈನಲ್​ ಟೆನ್ನಿಸ್ ಪ್ರಿಯರಿಗೆ ಹಬ್ಬದೂಟವೇ ಸರಿ. ವಿಂಬಲ್ಡನ್​ನ ಸೆಂಟರ‍್​ ಕೋರ‍್ಟ್​​ ನಂಬರ‍್​ ಒಂದರಲ್ಲಿ ಈ ಬಾರಿ ಪೆಡರರ‍್​ ಮತ್ತು ನಡಾಲ್​ ಮತ್ತೊಮ್ಮೆ ಸೆಣಸಲಿ. ಮತ್ತೊಂದು ಕ್ಲಾಸಿಕ್​ ಪೈನಲ್​ಗೆ ನಮಗೆಲ್ಲಾ ನೋಡಸಿಗಲಿ. ಏನಂತೀರಿ 🙂

( ಚಿತ್ರಸೆಲೆ: wikipedia,  thestatesman.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: