ಟೆನ್ನಿಸ್ ನ ಅಪ್ರತಿಮ ಆಟಗಾರ – ರೋಜರ್ ಪೆಡರರ್

 ರಾಮಚಂದ್ರ ಮಹಾರುದ್ರಪ್ಪ.

 

ಅದು 1993ರ ಬಸೆಲ್ ಕಿರಿಯರ ಚಾಂಪಿಯಯನ್ ಶಿಪ್ ನ ಪೈನಲ್ ಪಂದ್ಯ. ಆಟದಲ್ಲಿ ಸೋತ ಹನ್ನೊಂದರ ಪೋರ ತನ್ನ ಟೆನ್ನಿಸ್ ರ‍್ಯಾಕೆಟ್ ಅನ್ನು ಬಿಸಾಡಿ ಮಾತಿನ ಚಕಮಕಿಗೆ ಇಳಿಯುತ್ತಾನೆ. ಈ ಅಸಬ್ಯ ವರ‍್ತನೆಯಿಂದ ಆಯೋಜಕರ ಕೆಂಗಣ್ಣಿಗೆ ಗುರಿಯಾಗಿ ಚೀಮಾರಿ ಹಾಕಿಸಿಕೊಳ್ಳುತ್ತಾನೆ. ಇದೇ ಪೋರ ಇನ್ನೊಂದು ಕ್ಲಬ್ ಪಂದ್ಯದಲ್ಲಿ ಸೋತ ಮೇಲೆ ಆ ಸೋಲನ್ನು ಅರಗಿಸಿಕೊಳ್ಳಲಾಗದೆ ಅಂಪೈರ್ ನ ಚೇರ್ ಕೆಳಗೆ ಅಡಗಿ ಕೂತು ತನ್ನ ಬಾಳು ಇಲ್ಲಿಗೆ ಮುಗಿಯಿತೇನೋ ಎಂಬಂತೆ ಬಿಕ್ಕಿ ಬಿಕ್ಕಿ ಅಳುತ್ತಾನೆ. ನಂತರ ತನ್ನ ತರಬೇತುದಾರ ಬಂದು ಸಂತೈಸಿದ ಮೇಲೆಯಶ್ಟೇ ಹೊರ ಬರುತ್ತಾನೆ.

ಎಳವೆಯಲ್ಲೇ ಕೊಂಚವೂ ಸಂಯಮ ಇಲ್ಲದ ಈ ಹುಡುಗ ಮುಂದೊಂದು ದಿನ ಟೆನ್ನಿಸ್ ಲೋಕದ ದಿಗ್ಗಜನಾಗುತ್ತಾನೆ ಎಂದು ಯಾರೂ ಎಣಿಸಿರಲಿಲ್ಲ. ಆದರೆ ವಯಸ್ಸು ಕಳೆದಂತೆ ತನ್ನ ನಡವಳಿಕೆಯನ್ನು, ಆಟವನ್ನು ಒಂದು ಹತೋಟಿಗೆ ತಂದುಕೊಂಡು ಆ ಹುಡುಗ, ಟೆನ್ನಿಸ್ ಲೋಕದ ಅನಬಿಶಕ್ತ ದೊರೆಯಾಗಿ ಬೆಳೆಯುತ್ತಾನೆ. ಆ ಆಟಗಾರ ಬೇರೆ ಯಾರೂ ಅಲ್ಲ. ಮೊನ್ನೆಯಶ್ಟೇ ವಿಂಬಲ್ಡನ್ ನಲ್ಲಿ ಗೆದ್ದು ತನ್ನ 19ನೇ ಗ್ರಾನ್ ಸ್ಲ್ಯಾಮ್ ಅನ್ನು ಮುಡಿಗೇರಿಸಿಕೊಂಡ ಸ್ವಿಜರ್ ಲ್ಯಾಂಡ್ ನ ರೋಜರ್ ಪೆಡರರ್.

ಎಳವೆಯಲ್ಲಿ ಟೆನ್ನಿಸ್ ತರಬೇತಿ

ಪೆಡರರ್ 1981ರ ಆಗಸ್ಟ್ 8ರಂದು ಸ್ವಿಜರ್ ಲ್ಯಾಂಡ್ ನ ಬಸೆಲ್ ನಲ್ಲಿ ಒಂದು ಟೆನ್ನಿಸ್ ಕುಟುಂಬದಲ್ಲೇ ಹುಟ್ಟಿದರು. ಅವರ ತಂದೆ ರಾಬರ‍್ಟ್ ಪೆಡರರ್ ಮತ್ತು ತಾಯಿ ಲಿನ್ನೆಟ್ ಅವರು ಕ್ಲಬ್ ಹಂತದ ಟೆನ್ನಿಸ್ ಆಡಿದ್ದರು. ಹಾಗಾಗಿ ಬಾಲ್ಯದಿಂದಲೇ ಪೆಡರರ್ ರಿಗೆ ಟೆನ್ನಿಸ್ ಆಡಲು ಪ್ರೋತ್ಸಾಹಕ್ಕೇನು ಕೊರತೆ ಇರಲಿಲ್ಲ. ಆದರೆ ಪೆಡರರ್ 5 ವರ‍್ಶದ ಹುಡುಗನಾಗಿದ್ದಾಗ ಮೊದಲು ಮನಸೋತಿದ್ದು ಪುಟ್ಬಾಲ್ ಆಟಕ್ಕೆ. ಆದರೆ ಅವರ ತಾಯಿ ಲಿನ್ನೆಟ್ ಇನ್ನೂ ಸೀಬಾ ಕ್ಲಬ್ ನಲ್ಲಿ ಆಡುತ್ತಿದ್ದರಿಂದ ಪೆಡರರ್ ರಿಗೂ ಟೆನ್ನಿಸ್ ಗೀಳು ಹಿಡಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ತನ್ನ ತಾಯಿಯ ಆಟವನ್ನು ನೋಡುತ್ತಿದ್ದ ಪುಟ್ಟ ಹುಡುಗ ಪೆಡರರ್ ತನ್ನ 6ನೇ ವಯಸ್ಸಿಗೆ ಟೆನ್ನಿಸ್ ರ‍್ಯಾಕೆಟ್ ಅನ್ನು ಹಿಡಿಯುತ್ತಾನೆ. ಅಲ್ಲಿಂದ 2 ವರ‍್ಶದ ಕಾಲ ಸೀಬಾ ಕ್ಲಬ್ ನ ಜೇಡಿಮಣ್ಣು ನೆಲದ ಅಂಕಣದಲ್ಲಿ ಒಂದು ಹಂತದ ಟೆನ್ನಿಸ್ ತರಬೇತಿ ಪಡೆದ ಪುಟ್ಟ ಪೆಡರರ್ ನ ಆಟವನ್ನು ಗಮನಿಸಿದ ತಂದೆ ತಾಯಿಗೆ, ತಮ್ಮ ಮಗನನ್ನು ವ್ರುತ್ತಿಪರ ಆಟಗಾರನನ್ನಾಗಿ ಮಾಡಬೇಕು ಅನ್ನೋ ಹೆಬ್ಬಯಕೆ ಮೂಡುತ್ತದೆ.

ಹಾಗಾಗಿ ಇನ್ನೂ ಹೆಚ್ಚಿನ ಮಟ್ಟದ ತರಬೇತಿಗಾಗಿ 1989ರಲ್ಲಿ ಎಂಟು ವರ‍್ಶದ ಪೆಡರರ್ ನನ್ನು ಮ್ಯಾಡಲಿನ್ ಬರ‍್ಲೋಚರ್ ನಡೆಸುತ್ತಿದ್ದ “ಓಲ್ಡ್ ಬಾಯ್ಸ್” ಕ್ಲಬ್ ಗೆ ಸೇರಿಸುತ್ತಾರೆ. ಅಲ್ಲಿ ಆಸ್ಟ್ರೇಲಿಯಾದ ಪೀಟರ್ ಕಾರ‍್ಟರ್ ಪುಟ್ಟ ಪೆಡರರ್ ನ ಮೊದಲ ತರಬೇತುದಾರರಾಗುತ್ತಾರೆ. ಈ ಹುಡುಗನಲ್ಲಿದ್ದ ಚಳಕವನ್ನು ಎಳವೆಯಲ್ಲೇ ಗುರುತಿಸಿ ಪೆಡರರ್ ಒಂದು ದಿನ ವ್ರುತ್ತಿಪರ ಆಟಗಾರನಾಗುತ್ತಾನೆ ಎಂದು ಅವರ ತಂದೆಗೆ ಮೊದಲು ಹೇಳಿದ್ದು ಇದೇ ಕಾರ‍್ಟರ್ ಅವರು. ನಿತ್ಯ 2 ರಿಂದ 3 ತಾಸು ಅಬ್ಯಾಸ ಮತ್ತು ವಾರದ ಕೊನೆಯಲ್ಲಿ ಪಂದ್ಯಗಳನ್ನು ಆಡುತ್ತಿದ್ದ ಪೆಡರರ್ ಅಲ್ಲಿ ಒಂದು ವರ‍್ಶ ಕಳೆದ ಮೇಲೆ ಇನ್ನೊಬ್ಬರು ತರಬೇತುದಾರರು ಮಾರ‍್ಗದರ‍್ಶಕರಾಗುತ್ತಾರೆ. ಅವರು ಚೆಕ್ ಗಣರಾಜ್ಯದ ಅಡೋಲ್ಪ್ ಕಸೋವ್ಸ್ಕಿ. ಪೆಡರರ್ ರ ಆಟವನ್ನು ಹೆಚ್ಚು ತಿದ್ದಿ ತೀಡಿದ ಶ್ರೇಯ ಇವರಿಗೇ ಸಲ್ಲುತ್ತದೆ.

ಆ ವಯಸ್ಸಿನಲ್ಲೇ ಸರ‍್ವ್ ಮಾಡುವ ಚಳಕ, ಸ್ಮ್ಯಾಶ್ ಮತ್ತು  ಸರ‍್ವ್ ಅನ್ನು ಕರಾರುವಕ್ಕಾಗಿ ಹಿಂತಿರುಗಿಸುವ ಪರಿಯನ್ನು ಕಲಿಸಿದ ಕಸೋವ್ಸ್ಕಿ ಅವರು ಪೆಡರರ್ ಆಟದ ತಾಕತ್ತು ಅವರ ಪೋರ್ ಹ್ಯಾಂಡ್ ಹೊಡೆತಗಳು ಎಂದು ಮನದಟ್ಟು ಮಾಡಿಸಿ ಆಟದ ಪಟ್ಟುಗಳನ್ನು ಕಲಿಸುತ್ತಾರೆ. ಹೀಗೇ ಅಬ್ಯಾಸ ಮಾಡುತ್ತಾ ಕಿರಿಯರ ಪಂದ್ಯಾವಳಿಗಳಲ್ಲಿ, ಬೇರೆ ಕ್ಲಬ್ ಗಳ ನಡುವಿನ ಪೋಟಿಗಳಲ್ಲಿ ತಮ್ಮ 14 ನೇ ವರ‍್ಶದ ತನಕ ಆಡಿದ ಪೆಡರರ್, ಸೋಲು ಗೆಲುವುಗಳನ್ನು ಸಮಾನವಾಗಿ ಅರಗಿಸಿಕೊಳ್ಳುವ ಪರಿಯನ್ನು ಕಲಿಯುವುದೇ ಇಲ್ಲ. ಗೆದ್ದಾಗ ಮೆರೆಯೋದು ಸೋತಾಗ ಶಪಿಸಿ ಕೆಟ್ಟದಾಗಿ ವರ‍್ತಿಸೋದು ಪೆಡರರ್ ರ ಹುಟ್ಟು ಗುಣವಾಗಿತ್ತು. ಈ ನಡವಳಿಕೆಯಿಂದ ಹಲವಾರು ಬಾರಿ ತಮ್ಮ ತರಬೇತುದಾರರಿಂದ ಶಿಕ್ಶೆಯನ್ನೂ ಪಡೆದಿದ್ದರು. ಆದರೆ ಆಟದ ಬಗೆಗಿನ ಒಲವು ಮತ್ತು ಶಿಸ್ತು ಅವರನ್ನು “ಸ್ವಿಸ್ ನ್ಯಾಶನಲ್ ಟೆನ್ನಿಸ್ ಸೆಂಟರ್ ” ನ ಅರ‍್ಹತೆ ಪಡೆಯಲು ನೆರವಾಗುತ್ತದೆ. ಆದರೆ ಹುಟ್ಟಿದಾಗಿನಿಂದ ತಂದೆ ತಾಯಿಯನ್ನು ಬಿಟ್ಟು ಎಲ್ಲಿಗೂ ಹೋಗದ ಪೆಡರರ್ ತನ್ನೂರಿನಿಂದ ಸುಮಾರು 200 ಕಿ.ಮೀ ದೂರ ಇರುವ ಇಕುಬ್ಲನ್ಸ್ ಗೆ ಹೋಗುವುದಿಲ್ಲ ಎಂದು ತನ್ನ ಹೆತ್ತವರ ಮುಂದೆ ಅಳಲು ತೋಡಿಕೊಳ್ಳುತ್ತಾರೆ.

ಸ್ವಿಸ್ ನ್ಯಾಶನಲ್ ಟೆನ್ನಿಸ್ ಸೆಂಟರ್ ನಲ್ಲಿ ಪೆಡರರ್

ಮನೆ ಬಿಟ್ಟು ದೂರದೂರಿಗೆ ಹೋಗಲ್ಲ ಎಂದಿದ್ದ 14ರ ಹರೆಯದ ಪೆಡರರ್ ರನ್ನು, ಅವರ ಟೆನ್ನಿಸ್ ಮೇಲಿನ ಪ್ರೀತಿ ಎಲ್ಲವನ್ನೂ ಬಿಟ್ಟು ಇಕುಬ್ಲನ್ಸ್ ಗೆ ಬರುವಂತೆ ಮಾಡುತ್ತದೆ. ಆದರೆ ಇಲ್ಲಿನ ಮೊದಲ 6 ತಿಂಗಳು ಪೆಡರರ್ ರಿಗೆ ನರಕದ ಅನುಬವವನ್ನೇ ಕೊಡುತ್ತದೆ. ಪ್ರೆಂಚ್ ಮಾತಾಡುತ್ತಿದ್ದ ಊರಿನಲ್ಲಿ ಆಗ ಪ್ರೆಂಚ್ ಬಾರದ ಪೆಡರರ್ ರ ಅಳಲನ್ನು ಕೇಳಲೂ ಯಾರು ಇರುವುದಿಲ್ಲ. ಒಂಟಿತನವೂ ಸಹ ಅವರನ್ನು ಕಾಡಲಾರಂಬಿಸುತ್ತದೆ. ಇವನ್ನೆಲ್ಲಾ ಸಹಿಸಿಕೊಳ್ಳಲಾಗದೆ ಎಶ್ಟೋ ಸಾರಿ ಗಂಟು ಮೂಟೆ ಕಟ್ಟಿ ಊರಿಗೆ ವಾಪಸ್ಸಾಗುವ ಮನಸ್ಸನ್ನು ಪೆಡರರ್ ಮಾಡಿದರೂ ಟೆನ್ನಿಸ್ ಕಲಿಕೆಯ ಮೇಲಿನ ಒಲವು ಅವರನ್ನು ಅಲ್ಲೇ ಇರುವಂತೆ ಮಾಡುತ್ತದೆ. ಮುಂಜಾನೆ ಶಾಲೆಗೆ ಹೋಗುವುದು, ಆಮೇಲೆ ಟೆನ್ನಿಸ್ ಅಬ್ಯಾಸ, ರಾತ್ರಿ ತಾಯಿಗೆ ಪೋನ್ ಮಾಡಿ ಗಂಟೆಗಟ್ಟಲೇ ಅಳುವುದು ಪೆಡರರ್ ರ ದಿನಚರಿ ಆಗಿ ಹೋಗಿತ್ತು. ವಾರದ ಕೊನೆಯಲ್ಲಿ ಮನೆಗೆ ಮರಳುತ್ತಿದ್ದ ಪೆಡೆರರ್ ಬಾನುವಾರ ರಾತ್ರಿ ಮತ್ತೆ ಇಕುಬ್ಲನ್ಸ್ ಗೆ ಹೊರಡುವಾಗ ಕಣ್ಣೀರು ಹಾಕುತ್ತಲೇ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಕಾಲ ಕಳೆದಂತೆ ಪ್ರೆಂಚ್ ಕಲಿಯುವುದರ ಜೊತೆಗೆ ಇಕುಬ್ಲನ್ಸ್ ನ ವಾತಾವರಣಕ್ಕೆ ಒಗ್ಗಿಕ್ಕೊಂಡ ಪೆಡರರ್ ಟೆನ್ನಿಸ್ ಆಟದಲ್ಲಿ ಹೆಚ್ಚು ಪಕ್ವಗೊಳ್ಳುತ್ತಾ ಹೋದರು. ತನ್ನ 16ನೇ ವಯಸ್ಸಿಗೆ ಓದಿಗೆ ತಿಲಾಂಜಲಿ ಇಟ್ಟು ಪೆಡರರ್ ತಮ್ಮ ಸಮಯವನ್ನೆಲ್ಲಾ ಟೆನ್ನಿಸ್ ಕೋರ‍್ಟ್ ನಲ್ಲಿ ಬೆವರು ಹರಿಸುವುದರಲ್ಲಿ ಕಳೆದರು. ನೋಡ ನೋಡುತ್ತಿದಂತೆಯೇ ಅವರ ಆಟ ಮತ್ತು ತಂತ್ರಗಾರಿಕೆ ಒಂದು ಲಯ ಕಂಡುಕೊಂಡು ಅಂತರಾಶ್ಟ್ರೀಯ ಟೆನ್ನಿಸ್ ಆಡುವ ಹೊಸ್ತಿಲಿಗೆ ಪೆಡರರ್ ಬಂದು ನಿಲ್ಲುತ್ತಾರೆ.

ಕಿರಿಯರ ವಿಂಬಲ್ಡನ್ ಚಾಂಪಿಯನ್

17 ರ ಹರೆಯದ ಪೆಡೆರರ್ 1998 ರಲ್ಲಿ ಕಿರಿಯರ ವಿಂಬಲ್ಡನ್ ಸಿಂಗಲ್ಸ್ ಪೋಟಿಯನ್ನು ಗೆಲ್ಲುವುದರ ಜೊತೆಗೆ ಒಲಿವರ್ ರೋಕಸ್ ಜೊತೆ ಆಡಿ ಅದೇ ಸಾಲಿನ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಯನ್ನೂ ಗೆಲ್ಲುತ್ತಾರೆ. ಈ ಗೆಲುವಿನಿಂದ ಪೆಡರರ್ ಬರವಸೆ ಮೂಡಿಸಿದರೂ ಅಗ್ರ ಶ್ರೇಯಾಂಕದ ಆಟಗಾರರ ಜೊತೆ ಸರಿಸಮಾನವಾಗಿ ಸೆಣಸಲು ಇನ್ನೂ ಸ್ವಲ್ಪ ಕಾಲ ಕಾಯಬೇಕಾಗುತ್ತದೆ. ಇದೇ ವರ‍್ಶ ತಮ್ಮ ಸ್ತಿರ ಪ್ರದರ‍್ಶನದಿಂದ ತಮ್ಮ ಸಿಂಗಲ್ಸ್ ರ‍್ಯಾಂಕಿಂಗ್ ಅನ್ನು 100 ಒಳಗೆ ಬರುವಂತೆ ಮಾಡಿಕೊಂಡು ಗಟಾನುಗಟಿಗಳ ಜೊತೆಗೆ ಪಂದ್ಯವಾಡಲು ಪೆಡರರ್ ಅರ‍್ಹತೆ ಪಡೆದರು.

1999 ರ ಪ್ರಾನ್ಸ್ ನ ಮಾರ‍್ಸಿಲ್ ಓಪನ್ ನಲ್ಲಿ ಆಗಿನ ಹಾಲಿ ಪ್ರೆಂಚ್ ಓಪನ್ ಗೆಲ್ಲುಗರಾದ ಕಾರ‍್ಲೋಸ್ ಮೊಯಾ ಅವರನ್ನು ಪೆಡರರ್ ಮಣಿಸಿದಾಗ ಟೆನ್ನಿಸ್ ಪ್ರಪಂಚವೇ ಯಾರು ಈ ಹುಡುಗ ಎಂದು ಬೆರಗು ಕಣ್ಣುಗಳಿಂದ ನೋಡಿತು. ಇಲ್ಲಿಂದ ತಮ್ಮ ಆಟವನ್ನು ಇನ್ನೂ ಸುದಾರಿಸಿಕೊಂಡ ಪೆಡರರ್ 2000 ದ ಮಾರ‍್ಸಿಲ್ ಓಪನ್ ನಲ್ಲಿ ಪೈನಲ್ ಕೂಡ ಪ್ರವೇಶಿಸಿದರು. ಆದರೆ ಸದಾ ಪ್ರಶಸ್ತಿ ಗೆಲುವಿನ ಹೊಸ್ತಿಲಲ್ಲಿ ಅವರು ಎಡವುತ್ತಿದ್ದರು.

1999 ರಿಂದ ಗ್ರಾನ್ ಸ್ಲ್ಯಾಮ್ ಆಡ ತೊಡಗಿದ್ದರೂ 2000 ಇಸವಿಯ ತನಕ ಮೊದಲ ಹಂತದಲ್ಲೇ ಸೋತು ಹೊರನಡೆಯುತ್ತಿದ್ದರು. ಆದರೆ 2001 ರ ಪ್ರೆಂಚ್ ಓಪನ್ ನಲ್ಲಿ ಮೊದಲ ಬಾರಿಗೆ ಕ್ವಾರ‍್ಟರ್ ಪೈನಲ್ ಪ್ರವೇಶಿಸಿ ತಮ್ಮ ಆಟದಲ್ಲಿ ಕಸುವಿದೆ ಎಂದು ತೋರಿಸಿದರು. ನಂತರ 2001ರ ವಿಂಬಲ್ಡನ್ ನ 4ನೇ ಸುತ್ತಿನಲ್ಲಿ ಟೆನ್ನಿಸ್ ದಂತಕತೆ ಅಮೇರಿಕಾದ ಪೀಟ್ ಸಾಂಪ್ರಾಸ್ ರನ್ನು ಸೋಲಿಸಿ ಕ್ವಾರ‍್ಟರ್ ಪೈನಲ್ ಗೆ ಲಗ್ಗೆ ಇಟ್ಟು ತಮ್ಮಲ್ಲಿ ಯಾರನ್ನು ಬೇಕಾದರೂ ಸೋಲಿಸೋ ಅಳವಿದೆ ಎಂದು ಸಾಬೀತು ಮಾಡಿದರು. ಹೀಗೆ ಆಗೊಮ್ಮ ಈಗೊಮ್ಮೆ ಎಂತಾವರನ್ನು ಸೋಲಿಸುತ್ತಿದ್ದರೂ 2002 ರಲ್ಲಿ ಅವರ ಪ್ರದರ‍್ಶನ ತೀರಾ ಸಪ್ಪೆಯಾಗಿತ್ತು. ಆ ವರ‍್ಶದ ನಾಲ್ಕೂ ಗ್ರಾನ್ ಸ್ಲ್ಯಾಮ್ ಗಳಲ್ಲಿ ಮೊದಲ 4 ಸುತ್ತುಗಳ ಒಳಗೇ ಸೋತರು. ಆದರೆ 2003 ರಿಂದ ಪೆಡರರ್ ಯುಗ ಶುರುವಾಗಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ.

2003ರ ವಿಂಬಲ್ಡನ್ -ಮೊದಲ ಗೆಲುವು

2003ರ ಪ್ರೆಂಚ್ ಓಪನ್ ನಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದ ಪೆಡರರ್ ಅದೇ ವರ‍್ಶದ ವಿಂಬಲ್ಡನ್ ನಲ್ಲಿ ಆಗಿನ ಪ್ರಬಲ ಆಟಗಾರನ್ನು ಮಣಿಸಿ ಪೈನಲ್ ತಲುಪಿದಾಗ ಯಾರಿಗೂ ನಂಬಲಾಗಲಿಲ್ಲ. ಒಂದೇ ತಿಂಗಳಲ್ಲಿ ಆಟವನ್ನು ಈ ಮಟ್ಟಕ್ಕೆ ಸುದಾರಿಸಿಕೊಳ್ಳೋದು ತಮಾಶೆಯಲ್ಲ ಅನ್ನೋದು ಟೆನ್ನಿಸ್ ಬಲ್ಲವರಿಗೆ ಮಾತ್ರ ಗೊತ್ತು. ಕೊನೆಗೆ ಪೈನಲ್ ನಲ್ಲಿ ಮಾರ‍್ಕ್ ಪಿಲಿಪೋಸಿಸ್ ರನ್ನು ನೇರ ಸೆಟ್ ಗಳಿಂದ ಸೋಲಿಸಿ ತಮ್ಮ ಮೊದಲ ಗ್ರಾನ್ ಸ್ಲ್ಯಾಮ್ ಅನ್ನು ಗೆದ್ದು ‘ನಾನಿಲ್ಲಿ ಟೆನ್ನಿಸ್ ಜಗತ್ತನ್ನು ಆಳಲು ಬಂದಿದ್ದೀನಿ’ ಅನ್ನೋದನ್ನ ಹೇಳಿದರು.

2004- ಪೆಡೆರರ್ ಪರ‍್ವ ಆರಂಬ

2004ರ ಜನವರಿಯಲ್ಲಿ ತಮ್ಮ ಮೊದಲ ಆಸ್ಟ್ರೇಲಿಯಾ ಓಪನ್ ಮತ್ತು ಸೆಪ್ಟಂಬರ್ ನಲ್ಲಿ ಮೊದಲ ಅಮೇರಿಕಾ ಓಪನ್ ಗೆದ್ದ ಪೆಡರರ್ ರಿಗೆ ಪ್ರೆಂಚ್ ಓಪನ್ ನಲ್ಲಿ ಗೆಲುವು ಪಡೆಯಲು ತುಂಬಾ ಕಾಲ ಕಾಯಬೇಕಾಯಿತು. 2005 ರಲ್ಲಿ ಮತ್ತೊಮ್ಮೆ ವಿಂಬಲ್ಡನ್ ಹಾಗು ಅಮೇರಿಕಾ ಓಪನ್ ಮತ್ತು 2006, 2007 ರಲ್ಲಿ ನಿರಾಯಾಸವಾಗಿ ಉಳಿದ ಮೂರು ಗ್ರಾನ್ ಸ್ಲ್ಯಾಮ್ ಗಳನ್ನು ಗೆದ್ದರೂ 2006 ರಿಂದ 2008 ತನಕ ಸತತ 3 ಪ್ರೆಂಚ್ ಓಪನ್ ಪೈನಲ್ ಗಳಲ್ಲಿ ನಡಾಲ್ ಎದುರು ಪೆಡರರ್ ಸೋತರು. ಆದರೆ ಸತತ 2 ವರ‍್ಶ ನಾಲ್ಕೂ ಗ್ರಾನ್ ಸ್ಲ್ಯಾಮ್ ಗಳ ಪೈನಲ್ ಪ್ರವೇಶಿಸಿ ಟೆನ್ನಿಸ್ ದಿಗ್ಗಜ ರಾಡ್ ಲೀವರ್ ದಾಕಲೆಯನ್ನು ಸರಿಗಟ್ಟಿದರು.

ಹೀಗೆ ಒಳ್ಳೆ ಆಟ ಆಡುತ್ತಾ ತಮ್ಮ ಆಟದ ಉತ್ತುಂಗ ತಲುಪಿದ್ದರೂ ಜೇಡಿ ಮಣ್ಣಿನ ಅಂಕಣದ ಮರ‍್ಮ ಮತ್ತು ನಡಾಲ್ ರನ್ನು ಅಲ್ಲಿ ಎದುರಿಸುವುದು ಹೇಗೆ ಎಂಬುದು ಮಾತ್ರ ಪೆಡೆರರ್ ರಿಗೆ ತಿಳಿಯಲೇ ಇಲ್ಲ. ಆದರೆ 2009 ರ ಪ್ರೆಂಚ್ ಓಪನ್ ನಲ್ಲಿ ಗಾಯಗೊಂಡು ನಾಲ್ಕನೇ ಸುತ್ತಿನಲ್ಲಿ ನಡಾಲ್ ಸೋಲುಂಡಿದ್ದು ಪೆಡರರ್ ರಿಗೆ ವರವಾಯಿತು. ಪೈನಲ್ ನಲ್ಲಿ ಸಾಡರ‍್ಲಿಂಗ್ ಅವರನ್ನು ಮೂರೇ ಸೆಟ್ ಗಳಲ್ಲಿ ಸುಳುವಾಗಿ ಸೋಲಿಸಿ ತಮ್ಮ ಮೊದಲನೇ ಪ್ರೆಂಚ್ ಓಪನ್ ಮತ್ತು ವ್ರುತ್ತಿ ಬದುಕಿನ 14ನೇ ಗ್ರಾನ್ ಸ್ಲ್ಯಾಮ್ ಅನ್ನು ಗೆದ್ದರು. ಇವರ ಗೆಲುವಿನ ನಾಗಾಲೋಟ ಮುಂದಿನ ವಿಂಬಲ್ಡನ್ ನಲ್ಲೂ ಮುಂದುವರಿಯಿತು. 2009 ರ ವಿಂಬಲ್ಡನ್ ನಲ್ಲಿ ತಮ್ಮ 15ನೇ ಗ್ರಾನ್ ಸ್ಲ್ಯಾಮ್ ಗೆದ್ದು ಪೀಟ್ ಸಾಂಪ್ರಾಸ್ ರ ಅತ್ಯದಿಕ 14 ಗ್ರಾನ್ ಸ್ಲ್ಯಾಮ್ ಗಳ ದಾಕಲೆಯನ್ನು ಮುರಿದರು. ಅಲ್ಲಿಗೆ ‘ಪೆಡರರ್ ಟೆನ್ನಿಸ್ ಲೋಕ ಕಂಡ ಶ್ರೇಶ್ಟ ಆಟಗಾರರೇ? ಅಲ್ಲವೇ?’ ಎಂಬ ಚರ‍್ಚೆಗಳು ಶುರುವಾದವು. ಈ ಚರ‍್ಚೆಯಲ್ಲೂ ಅವರಿಗೆ ಪೋಟಿ ಕೊಡುತ್ತಿದ್ದದ್ದು ನಡಾಲ್!

ಪೆಡರರ್ – ನಡಾಲ್ ರಲ್ಲಿ ಯಾರು ಶ್ರೇಶ್ಟ ??

ಬೋರ‍್ಗ್ – ಮೆಕೆನ್ರೋ, ಎವರ‍್ಟ್ – ನವ್ರಾಟಿಲೋವಾ, ಸಾಂಪ್ರಾಸ್ – ಅಗಾಸ್ಸಿ ಇವರುಗಳ ನಡುವಿನ ತೀವ್ರ ಪೈಪೋಟಿಯನ್ನು ದಶಕಗಳಿಂದ ಕಂಡಿದ್ದ ಟೆನ್ನಿಸ್ ಪ್ರಿಯರಿಗೆ ಇವರೆಲ್ಲರನ್ನೂ ಮೀರಿಸೋ ಪೆಡೆರರ್ – ನಡಾಲ್ ಪೋಟಿ ಮನೋರಂಜನೆ ನೀಡಿದೆ ಎಂದರೆ ತಪ್ಪಾಗಲಾರದು. 2007, 2008 ರ ವಿಂಬಲ್ಡನ್ ನಲ್ಲಿ ಈ ದಿಗ್ಗಜರ ನಡುವಿನ ಪೈನಲ್ ಪಂದ್ಯಗಳು ಮತ್ತು 2017 ರ ಆಸ್ಟ್ರೇಲಿಯಾ ಓಪನ್ ಪೈನಲ್ ಪಂದ್ಯ ಟೆನ್ನಿಸ್ ಇತಿಹಾಸದಲ್ಲಿ ಸುವರ‍್ಣಾಕ್ಶರದಲ್ಲಿ ಬರೆದಿಡಬೇಕಾದ ಪಂದ್ಯಗಳು ಎಂಬುವುದು ಟೆನ್ನಿಸ್ ಪಂಡಿತರ ಅಂಬೋಣ. ಆದರೆ ಇವರಿಬ್ಬರ ನಡುವೆ ಯಾರು ಸರ‍್ವಶ್ರೇಶ್ಟ ಅನ್ನುವ ಕೇಳ್ವಿಗೆ ಉತ್ತರ ಹುಡುಕಲು ಒಂದು ದಶಕದಿಂದ ಚರ‍್ಚೆಗಳು ನಡೆಯುತ್ತಲೇ ಇವೆ. ಕೆಲವರು ಪೆಡೆರರ್ ಶ್ರೇಶ್ಟ ಅಂದರೆ ಕೆಲವರು ನಡಾಲ್ ಅನ್ನುತ್ತಾರೆ.

ಈ ದಿಗ್ಗಜರು ಇಲ್ಲಿಯ ತನಕ 37 ಪಂದ್ಯಗಳಲ್ಲಿ ಮುಕಾಮುಕಿಯಾಗಿದ್ದಾರೆ. ಈ ಪಂದ್ಯಗಳಲ್ಲಿ 13 ಪಂದ್ಯಗಳು ಕೊನೆಯ ಸೆಟ್ ತಲುಪಿವೆ ಅನ್ನೋದು ಇವರಿಬ್ಬರ ನಡುವೆ ಹೆಚ್ಚು ಅಂತರವಿಲ್ಲ ಅನ್ನೋದನ್ನ ತೋರಿಸುತ್ತದೆ. ಅಂಕಿ ಅಂಶದಲ್ಲಿ ನಡಾಲ್ ಮುಂದಿದ್ದಾರೆ. 23 ಬಾರಿ ಗೆದ್ದು ಪೆಡರರ್ ರ ಮೇಲೆ 23-14 ಮುನ್ನಡೆ ಸಾದಿಸಿದ್ದಾರೆ. ಆದರೆ ಈ ಮುನ್ನಡೆಗೆ ಮುಕ್ಯ ಕಾರಣ ನಡಾಲ್ ರ ಬದ್ರಕೋಟೆಯಾದ ಜೇಡಿಮಣ್ಣು ಅಂಕಣದ 13-2 ರ ಪಂದ್ಯಗಳ ಗೆಲುವು ಅನ್ನೋದನ್ನ ತಳ್ಳಿಹಾಕುವಂತಿಲ್ಲ. ಉಳಿದ ಅಂಕಣಗಳಾದ ಹುಲ್ಲು ಹಾಸಿನಲ್ಲಿ 2-1 ಮತ್ತು ಗಟ್ಟಿನೆಲದ ಮೇಲೆ 10-9 ರ ಸಣ್ಣ ಮುನ್ನಡೆಯನ್ನು ಪೆಡರರ್ ಸಾದಿಸಿದ್ದಾರೆ. ಆದರೆ ಈ ಅಂಕಿ ಅಂಶಗಳು ಸಹ ಒಬ್ಬರು ಇನ್ನೊಬ್ಬರಿಗಿಂತ ಶ್ರೇಶ್ಟ ಎಂದು ತೀರ‍್ಮಾನ ಮಾಡಲು ನೆರವಾಗುವುದಿಲ್ಲ. ಎಳವೆಯಿಂದಲೂ ಜೇಡಿಮಣ್ಣ ನೆಲದ ಮೇಲೆ ಆಟದ ಪಟ್ಟುಗಳನ್ನು ಕಲಿತ ಪೆಡರರ್ ರಿಗೆ ಅಲ್ಲೇ ತುಂಬಾ ಕಡಿಮೆ ಗೆಲುವು ದಕ್ಕಿರುವುದು ಅಚ್ಚರಿಯೇ ಸರಿ. ಅದಕ್ಕೆ ಕಾರಣ ನಡಾಲ್ ಅನ್ನೋದು ಎಲ್ಲರಿಗೂ ತಿಳಿದೇ ಇದೆ. ಚೆಂಡು ಹೆಚ್ಚು ಪುಟಿದು ವೇಗ ಕಳೆದುಕೊಂಡು ನಿದಾನವಾಗಿ ಆಟಗಾರನನ್ನು ತಲುಪೋ ಜೇಡಿಮಣ್ಣು ನೆಲದ ಮೇಲೆ ನಡಾಲ್ ರ ಬಾರಿ ಟಾಪ್ ಸ್ಪಿನ್ ಹೊಡೆತಗಳನ್ನು ಎದುರಿಸಲು ಪೆಡರರ್ ಕಡೆ ತನಕ ಹೆಣಗಾಡಿದರು. ಆದರೆ ಪೆಡರರ್ 4 ಪ್ರೆಂಚ್ ಓಪನ್ ಪೈನಲ್ ತಲುಪಿದ್ದು ಅವರ ಅಳವನ್ನು ತೋರಿಸುತ್ತದೆ. ಹಾಗಾಗಿ ಅವರ ಶ್ರೇಶ್ಟತೆಯನ್ನೂ ಕಡೆಗಣಿಸುವ ಹಾಗಿಲ್ಲ.

2010 ರ ನಂತರ ಸಪ್ಪೆಯಾದ ಪೆಡರರ್ ಆಟ

2010ರಲ್ಲಿ ಆಸ್ಟ್ರೇಲಿಯಾ ಓಪನ್ ಗೆದ್ದ ನಂತರ ಪೆಡರರ್ 2011 ರಲ್ಲಿ ಯಾವುದೇ ಗ್ರಾನ್ ಸ್ಲ್ಯಾಮ್ ಅನ್ನು ಗೆಲ್ಲಲಿಲ್ಲ. 2012 ರಲ್ಲಿ ತಮ್ಮ 7ನೇ ವಿಂಬಲ್ಡನ್ ಗೆದ್ದ ಮೇಲಂತೂ ಸತತ 5 ವರ‍್ಶ ಗೆಲುವು ಅನ್ನೋದು ಗಗನಕುಸುಮವಾಯಿತು. ಲಂಡನ್ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೇಲೆ ಪೆಡರರ್ ಪ್ರದರ‍್ಶನ ಇಳಿಮುಕವಾಯಿತು. 30ರ ನಂತರ ಅದೇ ಮಟ್ಟದ ಆಟವನ್ನು ಆಡುವುದು ತುಂಬಾ ಕಶ್ಟ ಅನ್ನೋದು ಟೆನ್ನಿಸ್ ಆಟದ ಚರಿತ್ರೆ ನೋಡಿದರೆ ತಿಳಿಯುತ್ತದೆ. ಆದರೂ ಪೆಡರರ್ 2014, 15 ರಲ್ಲಿ ವಿಂಬಲ್ಡನ್ ಪೈನಲ್ ಮತ್ತು 2015 ರಲ್ಲಿ ಅಮೇರಿಕಾ ಓಪನ್ ಪೈನಲ್ ತಲುಪಿ ಜೋಕೋವಿಚ್ ಎದುರು ಸೋಲುಂಡರು. 2013 ರಲ್ಲಿ ಗಾಯದ ಸಮಸ್ಯೆಗಳು ಅವರನ್ನು ಕಾಡಿತು. ಇವನ್ನೆಲ್ಲಾ ಗಮನಿಸುತ್ತಿದ್ದ ಎಶ್ಟೋ ಟೆನ್ನಿಸ್ ಪಂಡಿತರು ಪೆಡರರ್ ನಿವ್ರುತ್ತರಾಗೋದು ಒಳ್ಳೇದು ಎಂದೇ ಹೇಳಿದ್ದರು. ಆದರೂ ಪೆಡರರ್ ಚಲದಂಕಮಲ್ಲನಂತೆ ಆಡುತ್ತಲೇ ಇದ್ದರು. 2016 ರ ವಿಂಬಲ್ಡನ್ ಸೆಮಿಪೈನಲ್ ನಲ್ಲಿ ರೋನಿಚ್ ಎದುರು ಸೋತ ಮೇಲಂತೂ ಪೆಡರರ್ ಇನ್ನೆಂದೂ ಗ್ರಾನ್ ಸ್ಲ್ಯಾಮ್ ಗೆಲ್ಲಲಾರರು ಎಂದೇ ಎಲ್ಲರೂ ತಿಳಿದ್ದಿದ್ದರು. ಇದೇ ಸಮಯದಲ್ಲಿ ಆಟದಿಂದ 6 ತಿಂಗಳ ಬಿಡುವು ಪಡೆದು ಪೆಡರರ್ ಮಂಡಿ ನೋವಿಗೆ ಚಿಕಿತ್ಸೆ ಪಡೆದರು.

2017 ಆಸ್ಟ್ರೇಲಿಯಾ ಓಪನ್ – ಮರಳಿದ ಹಳೇ ಪೆಡರರ್

2016 ರ ಜೂನ್ ನಲ್ಲಿ ಬಿಡುವು ಪಡೆದ ಪೆಡರರ್ ತಮ್ಮ ವಯಸ್ಸಿಗೆ ತಕ್ಕಂತೆ ಆಟದಲ್ಲಿ ಹಲವಾರು ಸುದಾರಣೆಗಳನ್ನು ಮಾಡಿಕೊಂಡರು. ಈ ಬಿಡುವಿನಲ್ಲಿ ತಮ್ಮ ಬ್ಯಾಕ್ ಹ್ಯಾಂಡ್ ಡ್ರೈವ್ ಅನ್ನು ಸುದಾರಿಸಿಕೊಳ್ಳುವುದರ ಜೊತೆಗೆ ತಮ್ಮ ಆಟದ ನೆಟ್ ಹಾಗು ಬೇಸ್ ಲೈನ್ ಹೊಡೆತಗಳ ನಡುವೆ ಸಮತೋಲನ ಸಾದಿಸಿದರು. ಹೊಸ ಬಗೆಯ ತಂತ್ರಗಾರಿಕೆಯಿಂದ ಕರಾರುವಾಕ್ ಸರ‍್ವ್ ಅನ್ನು ಮಾಡುವತ್ತ ಗಮನ ಹರಿಸಿದರು. 35 ವರ‍್ಶದ ಪೆಡರರ್ ಯುವ ಆಟಗಾರನಂತೆ ತಮ್ಮ ಚಳಕಗಳನ್ನು ತಿದ್ದಿ ತೀಡಿ ಸಕಲ ತಯಾರಿಗಳಿಂದ 2017ರ ಆಸ್ಟ್ರೇಲಿಯಾ ಓಪನ್ ನಲ್ಲಿ ಮತ್ತೆ ಟೆನ್ನಿಸ್ ಅಂಕಣಕ್ಕೆ ಕಾಲಿಟ್ಟರು. ರ‍್ಯಾಂಕಿಂಗ್ ನಲ್ಲಿ ಸಾಕಶ್ಟು ಹಿಂದುಳಿದಿದ್ದ ಅವರ ದಾರಿ ತುಂಬಾ ಕಶ್ಟದಾಗಿತ್ತು. ಪೆಡರರ್ ಗೆಲ್ಲುತ್ತಾರೆ ಎಂದು ಯಾರಿಗೂ ನಂಬಿಕೆ ಇರಲಿಲ್ಲ. ಆದರೆ ಜನರ ಹಾಗೂ ಟೆನ್ನಿಸ್ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ 5 ಸೆಟ್ ಗಳ ಪೈನಲ್ ನಲ್ಲಿ ನಡಾಲ್ ರನ್ನು ಸೋಲಿಸಿ ತಮ್ಮ 5ನೇ ಆಸ್ಟ್ರೇಲಿಯಾ ಓಪನ್ ಮತ್ತು ವ್ರುತ್ತಿಬದುಕಿನ 18ನೇ ಗ್ರಾನ್ ಸ್ಲ್ಯಾಮ್ ಗೆದ್ದರು.

ಮಿಯಾಮಿ ಓಪನ್ ನ ಪೈನಲ್ ನಲ್ಲಿ ಮತ್ತೊಮೆ ನಡಾಲ್ ರನ್ನು ಮಣಿಸಿದ ಪೆಡರರ್, ಅವರ ವಯಸ್ಸು ಮತ್ತು ಮಯ್ ಅಳವನ್ನು ಗಮನದಲ್ಲಿಟ್ಟುಕೊಂಡು ಪ್ರೆಂಚ್ ಓಪನ್ ಇಂದ ದೂರ ಸರಿದರು. ಜೂನ್ ನಲ್ಲಿ ಹಾಲ್ ಓಪನ್ ಗೆದ್ದು ವಿಂಬಲ್ಡನ್ ನಲ್ಲೂ ಗೆಲುವು ಸಾದಿಸುವ ಬರವಸೆ ಮೂಡಿಸಿದರು. ಜನರ ನಂಬಿಕೆಯಂತೇ ಲಂಡನ್ ನ ಸೆಂಟರ್ ಕೋರ‍್ಟ್ ನಲ್ಲಿ ಸಿಲಿಚ್ ರನ್ನು ನಿರಾಯಾಸವಾಗಿ ಸೋಲಿಸಿ ತಮ್ಮ 8ನೇ ವಿಂಬಲ್ಡನ್ ಹಾಗು 19ನೇ ಗ್ರಾನ್ ಸ್ಲ್ಯಾಮ್ ಅನ್ನು ಗೆದ್ದು ತಮ್ಮಲ್ಲಿ ಇನ್ನೂ ಹಳೇ ಪೆಡರರ್ ನ ಚಳಕ ಇದೆ ಎಂದು ಪ್ರಪಂಚಕ್ಕೆ ತೋರಿಸಿದರು. ಇಡೀ ಪಂದ್ಯಾವಳಿಯಲ್ಲಿ ಒಂದೂ ಸೆಟ್ ಸೋಲದೆ ಗ್ರಾನ್ ಸ್ಲ್ಯಾಮ್ ಗೆದ್ದದ್ದೇ ಇದಕ್ಕೆ ಸಾಕ್ಶಿ. 35 ನೇ ವಯಸ್ಸಿನಲ್ಲಿ 2 ಗ್ರಾನ್ ಸ್ಲ್ಯಾಮ್ ಗಳನ್ನು ಗೆದ್ದ ಪೆಡರರ್ ಟೆನ್ನಿಸ್ ಇತಿಹಾಸದಲ್ಲಿ ಶ್ರೇಶ್ಟರಾಗಿ ಉಳಿಯುತ್ತಾರೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಪೆಡರರ್ ಆಟದ ಶಯ್ಲಿ, ಸಾದನೆ – ಪಂಡಿತರ ಅನಿಸಿಕೆ

ಟೆನ್ನಿಸ್ ದಿಗ್ಗಜ ಜಿಮ್ಮಿ ಕಾನರ‍್ಸ್ ರ ಪ್ರಕಾರ ಟೆನ್ನಿಸ್ ನಲ್ಲಿ 4 ಬಗೆಯ ಆಟಗಾರರಿದ್ದಾರೆ. ಹುಲ್ಲುಹಾಸಿನ ತಗ್ನ ಆಟಗಾರರು, ಜೇಡಿಮಣ್ಣು ನೆಲದ ತಗ್ನ ಆಟಗಾರರು, ಗಟ್ಟಿನೆಲದ ತಗ್ನ ಆಟಗಾರರು ಮತ್ತು ರೋಜರ್ ಪೆಡರರ್. ಇವರ ಈ ಮಾತು ಪೆಡರರ್ ರ ಶ್ರೇಶ್ಟತೆಯನ್ನು ತೋರುತ್ತದೆ ಅಲ್ವೇ?? ಹಾಗೆಯೇ ಇನ್ನೊಬ್ಬ ಮಾಜಿ ದಿಗ್ಗಜ ಆಟಗಾರರಾದ ಜಾನ್ ಮೆಕೆನ್ರೋ ಅವರು ಪೆಡರರ್ ಪೋರ್ ಹ್ಯಾಂಡ್ ಹೊಡೆತಗಳು ಎಲ್ಲರಿಗಿಂತ ಸರ‍್ವಶ್ರೇಶ್ಟ ಎಂದು ಹೇಳಿದ್ದಾರೆ. ಇವರ ಹೇಳಿಕೆಗಳಿಗೆ ಇಂಬು ಕೊಡುವಂತೆಯೇ ಪೆಡರರ್ ಟೆನ್ನಿಸ್ ಕೋರ‍್ಟ್ ನಲ್ಲಿ ಸಾದನೆ ಮಾಡಿದ್ದಾರೆ. ಒಟ್ಟು ಅತ್ಯದಿಕ 19 ಗ್ರಾನ್ ಸ್ಲ್ಯಾಮ್ ಗಳು, ಅತ್ಯದಿಕ 29 ಗ್ರಾನ್ ಸ್ಲ್ಯಾಮ್ ಪೈನಲ್ ಗಳಲ್ಲಿ ಸತತ 10 ಪೈನಲ್ ತಲುಪಿರೋ ಅಪರೂಪದ ಸಾದನೆ ಮಾಡಿರೋದು ಪೆಡರರ್ ಒಬ್ಬರೇ. 4 ಪ್ರಮುಕ ಗ್ರಾನ್ ಸ್ಲ್ಯಾಮ್ ನಂತರ ಅಗ್ರ ಶ್ರೇಯಾಂಕಿತ ಪಂದ್ಯಾವಳಿಯಾದ ATP ಟೂರ್ ಪೈನಲ್ಸ್ ನೂ ಸಹ ಅತ್ಯದಿಕ (6) ಬಾರಿ ಪೆಡೆರರ್ ಗೆದ್ದಿದ್ದಾರೆ. ಹಾಗೂ ರ‍್ಯಾಂಕಿಂಗ್ ನಲ್ಲಿ ಒಂದನೇ ಸ್ತಾನವನ್ನು ಅತಿ ಹೆಚ್ಚು ವಾರಗಳ (302) ಕಾಲ ಉಳಿಸಿಕೊಂಡಿರುವ ಆಟಗಾರ ಪೆಡರರ್ ಒಬ್ಬರೇ. ಇದರಲ್ಲಿ ಸತತ 237 ವಾರಗಳ ಕಾಲ ಒಂದನೇ ಸ್ತಾನದಲ್ಲಿದ್ದದ್ದು ಆಟದ ಮೇಲೆ ಅವರಿಗಿದ್ದ ಹಿಡಿತಕ್ಕೆ ಕನ್ನಡಿಯಾಗಿದೆ.

ಪೆಡರರ್ ರ ತಾಕತ್ತು ಅವರ ಬಲಾಡ್ಯ ಪೋರ್ ಹ್ಯಾಂಡ್ ಆಟ ಮಾತ್ರವಲ್ಲದೇ ಬ್ಯಾಕ್ ಹ್ಯಾಂಡ್ ಆಟ ಕೂಡ ಆಗಿದೆ. ಇವಶ್ಟೇ ಅಲ್ಲದೇ ಅವರ ಟಾಪ್ ಸ್ಪಿನ್ ಮತ್ತು ಸ್ಲೈಸ್ ಹೊಡೆತಗಳು ಎದುರಾಳಿಗಳನ್ನು ತಬ್ಬಿಬ್ಬು ಮಾಡಿವೆ. ಕೋರ‍್ಟ್ ನಲ್ಲಿ ಅವರ ಕಾಲುಗಳ ಚಲನೆ ಮತ್ತು ಅದಕ್ಕೆ ತಕ್ಕದಾದ ಹೊಡೆತಗಳು ಅವರಿಗೆ ಎಶ್ಟೋ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದೆ. ಇಶ್ಟೆಲ್ಲಾ ಚಳಕಗಳು ತಮ್ಮ ಬತ್ತಳಿಕೆಯಲ್ಲಿದ್ದರೂ 2012 ರ ನಂತರ ತಮ್ಮ ಆಟ ಮಂಕಾದ ಮೇಲೆ ಪೆಡರರ್ ಒಂದು ಹೊಸ ಶಯ್ಲಿಯ ಹೊಡೆತವನ್ನು ಕರಗತ ಮಾಡಿಕೊಳ್ಳುತ್ತಾರೆ. ಅದುವೇ SABR – Sneak attack by Roger.

ರೋಜರ್ ಪೆಡರರ್ – GOAT ( Greatest of all time )

2015 ರಲ್ಲಿ ಮೊದಲ ಬಾರಿಗೆ SABR ಹೊಡೆತಗಳನ್ನು ಆಡತೊಡಗಿದಾಗ ಆಟಗಾರರ ಜೊತೆ ನೋಡುಗರು ಮತ್ತು ಟೆನ್ನಿಸ್ ಪಂಡಿತರೂ ಕೂಡ ಬೆರಗಾದರು. ಎದುರಾಳಿಯ ಸರ‍್ವ್ ಅನ್ನು ನೆಟ್ಸ್ ನತ್ತ ಮುನ್ನುಗ್ಗಿ ಹಿಂತಿರುಗಿಸಿ, ಒಂದು ಆಕ್ರಮಣಕಾರಿ ಎಡೆಯನ್ನು ಸಾದಿಸಿ ಕಡೆಗೆ ಸ್ಮ್ಯಾಶ್ ಮೂಲಕ ಪಾಯಿಂಟ್ ಗಳಿಸುವ ಈ ಹೊಡೆತವನ್ನು ಅಶ್ಟು ಸುಳುವಾಗಿ ಎಲ್ಲರೂ ಕರಗತ ಮಾಡಿಕೊಳ್ಳಲು ಆಗದು. ಇದರಿಂದ ಕಯ್ ಸುಟ್ಟುಕೊಳ್ಳೋ ಅಪಾಯವೂ ಇದ್ದೇ ಇದೆ. ಈ ಹೊಡೆತ ಟೆನ್ನಿಸ್ ವಲಯದಲ್ಲಿ ಕೊಂಚ ಚರ‍್ಚೆಗೆ ಗ್ರಾಸವಾದರೂ ಇದರಿಂದ ತಕ್ಕ ಮಟ್ಟಿನ ಯಶಸ್ಸನ್ನು ಪೆಡರರ್ ಕಂಡರು. ಇದೇ ಪೆಡರರ್ ರಿಗೂ ಉಳಿದ ಆಟಗಾರರಿಗೂ ಇರುವ ವ್ಯತ್ಯಾಸ. ಇಶ್ಟೆಲ್ಲಾ ಸಾದನೆ ಮಾಡಿದ ಮೇಲೂ ಈ ವಯಸ್ಸಿನಲ್ಲೂ ಕಲಿಯಬೇಕು ಅನ್ನೋ ಹಂಬಲ, ತಮ್ಮ ಆಟವನ್ನು ಸುದಾರಿಸಿಕೊಳ್ಳಬೇಕು ಅನ್ನೋ ತುಡಿತ, ಅವರನ್ನು ಹಲವು ಟೆನ್ನಿಸ್ ಪಂಡಿತರಿಂದ GOAT ( Greatest of all time ) ಎಂದೇ ಕರೆಸಿಕೊಳ್ಳುವಂತೆ ಮಾಡಿದೆ.

ಇದೇ ಆಗಸ್ಟ್ ನಲ್ಲಿ 36ರ ಹರೆಯಕ್ಕೆ ಕಾಲಿಡಲಿರುವ ಪೆಡರರ್, ಅಮೇರಿಕಾ ಓಪನ್ ಆಡಲಿದ್ದಾರೆ. ಎಲ್ಲಾ ಟೆನ್ನಿಸ್ ಪ್ರಿಯರೂ ಸಹ ಮತ್ತೊಂದು ಪೆಡರರ್ – ನಡಾಲ್ ಪೈನಲ್ ಕಾಯುತ್ತಿದ್ದಾರೆ. 2008ರ ಬಳಿಕ ಒಂದೂ ಅಮೇರಿಕಾ ಓಪನ್ ಗೆಲ್ಲದಿರೋ ಪೆಡರರ್ ಈಗ ಒಳ್ಳೆ ಲಯದಲ್ಲಿದ್ದಾರೆ. ಅವರ ಆಟ ಹೀಗೆ ಮುಂದುವರೆದರೆ 20ನೇ ಗ್ರಾನ್ ಸ್ಲ್ಯಾಮ್ ಕಿರೀಟ ದೂರವಿಲ್ಲ ಅನ್ನೋದು ಮಾತ್ರ ದಿಟ. ಒಂದು ದಶಕಕ್ಕೂ ಹೆಚ್ಚು ಕಾಲ ನಮ್ಮನ್ನೆಲ್ಲಾ ರಂಜಿಸಿದ ಪೆಡರರ್ ಹೀಗೇ ಗೆಲ್ಲುತ್ತಾ ಸಾಗಲಿ ಎಂದು ಹಾರೈಸೋಣ.

( ಚಿತ್ರಸೆಲೆ: rolex.comsports.ndtv, guardian, sports.ndtv, sizzlingsuperstars.com,  pledgesports.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Article is good. I came to know lot of things about him. truly a legend.

ಅನಿಸಿಕೆ ಬರೆಯಿರಿ:

%d bloggers like this: