ಅಂಬಿಗರ ಚೌಡಯ್ಯನ ವಚನಗಳ ಓದು

– ಸಿ.ಪಿ.ನಾಗರಾಜ.

ಅಂಬಿಗರ ಚೌಡಯ್ಯನು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿದ್ದ ಶಿವಶರಣ. ಈತನ ಜೀವನದ ವಿವರಗಳನ್ನು ಸಾಹಿತ್ಯ ಚರಿತ್ರಕಾರರು ಈ ಕೆಳಕಂಡಂತೆ ಗುರುತಿಸಿದ್ದಾರೆ:

ಹೆಸರು: ಚೌಡಯ್ಯ

ಊರು: ಚೌಡದಾನಪುರ, ರಾಣಿಬೆನ್ನೂರು ತಾಲ್ಲೂಕು , ದಾರವಾಡ ಜಿಲ್ಲೆ.

ಕಸುಬು: ದೋಣಿಯನ್ನು ನದಿ/ಹೊಳೆ/ತೊರೆಯಲ್ಲಿ ನಡೆಸುವುದು.

ದೊರೆತಿರುವ ವಚನಗಳು: 273

ವಚನಗಳ ಅಂಕಿತನಾಮ: ಅಂಬಿಗ / ಅಂಬಿಗರ ಚೌಡಯ್ಯ

ಉಂಡರೆ ಭೂತನೆಂಬರು
ಉಣದಿದ್ದರೆ ಚಾತಕನೆಂಬರು
ಭೋಗಿಸಿದರೆ ಕಾಮಿಯೆಂಬರು
ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ ಎಂಬರು
ಊರೊಳಗಿದ್ದರೆ ಸಂಸಾರಿ ಎಂಬರು
ಅಡವಿಯೊಳಗಿದ್ದರೆ ಮೃಗಜಾತಿ ಎಂಬರು
ನಿದ್ರೆಗೈದರೆ ಜಡದೇಹಿ ಎಂಬರು
ಎದ್ದಿದ್ದರೆ ಚಕೋರನೆಂಬರು
ಇಂತೀ ಜನಮೆಚ್ಚಿ ನಡೆದವರ
ಎಡದ ಪಾದ ಕಿರಿ ಕಿರುಗುಣಿಯಲ್ಲಿ ಮನೆ ಮಾಡು ಮನೆ ಮಾಡು
ಎಂದಾತ ನಮ್ಮ ಅಂಬಿಗರ ಚೌಡಯ್ಯ.

ವ್ಯಕ್ತಿಯು ತನ್ನ ಜೀವನವನ್ನು ಯಾವ ರೀತಿಯಲ್ಲಿ ನಡೆಸುತ್ತಿದ್ದರೂ/ರೂಪಿಸಿಕೊಂಡಿದ್ದರೂ, ಸುತ್ತುಮುತ್ತಣ ಜನರಲ್ಲಿ ಕೆಲವರಾದರೂ ಅವನ ಬಗ್ಗೆ ಒಂದಲ್ಲ ಒಂದು ಬಗೆಯ ಕೊಂಕುನುಡಿಗಳನ್ನು/ಚುಚ್ಚುಮಾತುಗಳನ್ನು ಆಡುತ್ತಿರುತ್ತಾರೆ. ಆದುದರಿಂದ ಲೋಕದಲ್ಲಿ ಎಲ್ಲರೂ ಮೆಚ್ಚುವಂತೆ ಬಾಳ್ವೆಯನ್ನು ನಡೆಸಲು ಯಾರಿಂದಲೂ ಆಗದು ಎಂಬ ಸಾಮಾಜಿಕ ವಾಸ್ತವ/ದಿಟ/ಸತ್ಯವನ್ನು ಈ ವಚನದಲ್ಲಿ ಹೇಳಲಾಗಿದೆ.

( ಉಂಡರೆ=ಊಟವನ್ನು ಮಾಡಿದರೆ/ಕೂಳನ್ನು ತಿಂದರೆ/ಮೆದ್ದರೆ/ಸೇವಿಸಿದರೆ; ಭೂತನ್+ಎಂಬರು; ಭೂತ=ದೆವ್ವ/ಪಿಶಾಚಿ/ಉಣಿಸು ತಿನಸುಗಳನ್ನು ಇತಿಮಿತಿಯಿಲ್ಲದೆ ತಿನ್ನುವ/ಉಣ್ಣುವ ಹೊಟ್ಟೆಬಾಕ/ದೆವ್ವದ ಹಸಿವು ಇಂಗುವುದೇ ಇಲ್ಲವೆಂಬ ನಂಬಿಕೆ ಜನರಲ್ಲಿದೆ. ದೆವ್ವವೆಂಬುದು ಜನರ ಮಾನಸಿಕ ಕಲ್ಪನೆಯಿಂದ ರೂಪುಗೊಂಡಿದೆ; ಎಂಬರು=ಎನ್ನುವರು; ಉಣದೆ+ಇದ್ದರೆ; ಉಣದೆ=ಉಣ್ಣದೆ/ತಿನ್ನದೆ/ಮೆಲ್ಲದೆ/ಸೇವಿಸದೆ; ಇರು=ಜೀವಿಸು/ನಡೆದುಕೊಳ್ಳು; ಇದ್ದರೆ=ನಡೆದುಕೊಂಡರೆ; ಚಾತಕನ್+ಎಂಬರು; ಚಾತಕ=ಒಂದು ಬಗೆಯ ಹಕ್ಕಿ. ಈ ಹಕ್ಕಿಯು ಯಾವುದೇ ಬಗೆಯ ಹಣ್ಣುಕಾಯಿಹುಳುಹುಪ್ಪಟೆಗಳನ್ನು ತಿನ್ನದೆ , ಕೇವಲ ಮಳೆಯ ಹನಿ ನೀರನ್ನು ಕುಡಿದು ಜೀವಿಸುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ; ಉಂಡರೆ ಭೂತನೆಂಬರು ಉಣದಿದ್ದರೆ ಚಾತಕನೆಂಬರು=ಚೆನ್ನಾಗಿ ಉಂಡುತಿಂದು ತೇಗಿ ಆನಂದಪಡುತ್ತಿದ್ದರೆ ಇತಿಮಿತಿಯಿಲ್ಲದೆ ಉಣ್ಣುವ ಹೊಟ್ಟೆಬಾಕ ಎನ್ನುತ್ತಾರೆ , ಮಿತಿಯಾಗಿ ತಿಂದುಂಡರೆ ಹೊಟ್ಟೆಬಟ್ಟೆಗೂ ವೆಚ್ಚ ಮಾಡದೆ ಅತಿಜಿಪುಣನಾಗಿ ಬಾಳುತ್ತಿದ್ದಾನೆ ಎಂದು ಆಡಿಕೊಳ್ಳುತ್ತಾರೆ;

ಭೋಗ=ಜೀವನದಲ್ಲಿ ಒಲವು ನಲಿವುಗಳಿಂದ ಆನಂದವನ್ನು ಪಡೆಯುವುದು/ತನ್ನ ಬಳಿ ಇರುವ ಸಂಪತ್ತಿನಿಂದ ಮಯ್ ಮನಗಳು ಬಯಸಿದ್ದೆಲ್ಲವನ್ನು ಹೊಂದುವುದು; ಭೋಗಿಸಿದರೆ=ಜೀವನದಲ್ಲಿ ಆನಂದ/ನೆಮ್ಮದಿ/ಒಲವು/ನಲಿವುಗಳನ್ನು ಪಡೆಯುತ್ತಿದ್ದರೆ; ಕಾಮಿ+ಎಂಬರು; ಕಾಮ=ಬಯಕೆ/ಆಸೆ/ಇಚ್ಚೆ/ಹೆಣ್ಣುಗಂಡುಗಳ ಮಯ್ ಮನಗಳಲ್ಲಿ ಒಂದನ್ನೊಂದು ಜತೆಗೂಡುವುದಕ್ಕಾಗಿ ತುಡಿಯುವ ಒಳಮಿಡಿತ; ಕಾಮಿ=ಹೆಣ್ಣನ್ನು ಕೂಡುವುದಕ್ಕಾಗಿ ಹಂಬಲಿಸುವವನು/ಕಾಮುಕ/ಅತಿಯಾದ ಬಯಕೆ/ಆಸೆಗಳುಳ್ಳವನು; ಭೋಗಿಸದೆ+ಇದ್ದರೆ; ಭೋಗಿಸದಿದ್ದರೆ=ಯಾವುದೇ ಬಗೆಯ ಒಲವು ನಲಿವುಗಳನ್ನು ಹೊಂದದಿದ್ದರೆ/ಪಡೆಯದಿದ್ದರೆ; ಮುನ್ನ=ಈ ಮೊದಲು/ಮುಂಚೆ; ಮಾಡಿದ=ಮಾಡಿರುವ; ಕರ್ಮ=ಪಾಪದ/ಕೆಡುಕಿನ/ನೀಚನತದ ಕೆಲಸ; ಕರ್ಮಿ=ಪಾಪಿ/ನೀಚ/ಕೆಟ್ಟವನು; ಬೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ ಎಂಬರು=ಹಿಂದಿನ ಜನ್ಮದಲ್ಲಿ/ಹುಟ್ಟಿನಲ್ಲಿ ಮಾಡಬಾರದ ಪಾಪದ ಕೆಲಸಗಳನ್ನು ಮಾಡಿ ಜನರಿಗೆ ಕೇಡನ್ನು ಬಗೆದಿದ್ದಾನೆ.ಆದುದರಿಂದಲೇ ಈ ಜನ್ಮದಲ್ಲಿ ಯಾವುದೇ ಬಗೆಯ ಆನಂದ/ನೆಮ್ಮದಿಯನ್ನು ಪಡೆಯದೆ ಸಂಕಟದಲ್ಲಿ ಬೇಯುತ್ತಿದ್ದಾನೆ ಎಂದು ನಿಂದಿಸುತ್ತಾರೆ;

ಊರು+ಒಳಗೆ+ಇದ್ದರೆ; ಊರೊಳಿಗಿದ್ದರೆ=ಊರಿನಲ್ಲಿ ಬಾಳುತ್ತಿದ್ದರೆ/ನೆಲೆಸಿದ್ದರೆ/ವಾಸಿಸುತ್ತಿದ್ದರೆ; ಸಂಸಾರ=ಕುಟುಂಬ/ಪರಿವಾರ/ಪರಿಜನ; ಸಂಸಾರಿ=ಹೆಂಡತಿ ಮಕ್ಕಳು ಮೊಮ್ಮಕ್ಕಳಿಂದ ಕೂಡಿ ನನ್ನದು ತನ್ನದು ಎಂಬ ಮೋಹದಿಂದ ಬಾಳುತ್ತಿರುವ ವ್ಯಕ್ತಿ; ಅಡವಿ+ಒಳಗೆ+ಇದ್ದರೆ; ಅಡವಿ=ಕಾಡು/ಅರಣ್ಯ/ಕಾನನ; ಮೃಗ=ಪ್ರಾಣಿ/ಪಶು/ಜಂತು; ಜಾತಿ=ವರ‍್ಗ/ಗುಂಪು/ಪೀಳಿಗೆ; ಊರೊಳಗಿದ್ದರೆ ಸಂಸಾರಿ ಎಂಬರು ಅಡವಿಯೊಳಗಿದ್ದರೆ ಮೃಗಜಾತಿ ಎಂಬರು=ಊರಿನಲ್ಲಿ ಸಂಸಾರಿಯಾಗಿದ್ದರೆ ಆಸೆ/ಬಯಕೆ/ಮೋಹದ ಸುಳಿಯಲ್ಲೇ ಸಿಲುಕಿರುವ ವ್ಯಕ್ತಿಯೆಂದು ಟೀಕಿಸುತ್ತಾರೆ. ಸಂಸಾರದ ಬಯಕೆಗಳೆಲ್ಲವನ್ನೂ ಕಿತ್ತೊಗೆದು ಸಂನ್ಯಾಸಿಯಾಗಿ ಕಾಡಿನಲ್ಲಿ ನೆಲೆಸಿದರೆ ಕಾಡಿನ ಜಂತುವೆಂದು ಹಂಗಿಸುತ್ತಾರೆ;

ನಿದ್ರೆ+ಗೈದರೆ; ಗೈದರೆ=ಗೆಯ್ದರೆ; ಗೆಯ್=ಮಾಡು; ಗೆಯ್ದರೆ=ಮಾಡಿದರೆ; ನಿದ್ರೆಗೈಯ್ದರೆ=ಮಲಗಿ ನಿದ್ರಿಸಿದರೆ/ಒಂದೆಡೆ ಮಲಗಿ ಮಯ್ ಮನಗಳಿಗೆ ಬಿಡುವುಕೊಟ್ಟರೆ; ಜಡ=ಚಟುವಟಿಕೆಯಿಲ್ಲದ/ಅತ್ತಿತ್ತ ಅಲುಗಾಡದ/ಚುರುಕಿಲ್ಲದ; ದೇಹ=ಶರೀರ/ಮಯ್; ಜಡದೇಹಿ=ಸೋಂಬೇರಿ/ಆಲಸಿ/ಮಯ್ಗಳ್ಳ/ದುಡಿಮೆಯನ್ನು ಮಾಡದವನು; ಎದ್ದು+ಇದ್ದರೆ; ಎದ್ದು=ಎಳ್ದು; ಏಳ್/ಏಳು=ನಿಲ್ಲು; ಎದ್ದಿದ್ದರೆ=ಚಟುವಟಿಕೆ/ಚುರುಕುತನ/ಕ್ರಿಯಾಶೀಲತೆಯ ನಡೆನುಡಿಗಳಿಂದ ಕೂಡಿದ್ದರೆ; ಚಕೋರನ್+ಎಂಬರು; ಚಕೋರ=ಒಂದು ಬಗೆಯ ಹಕ್ಕಿ.ಇದು ಇರುಳಿನಲ್ಲಿ ಕಣ್ಣುಮುಚ್ಚದೆ ಎಚ್ಚರವಾಗಿದ್ದುಕೊಂಡು , ಚಂದಿರನ ಬೆಳದಿಂಗಳನ್ನು ಹೀರುತ್ತ ಬದುಕಿರುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ; ನಿದ್ರೆಗೈದರೆ ಜಡದೇಹಿ ಎಂಬರು ಎದ್ದಿದ್ದರೆ ಚಕೋರನೆಂಬರು=ಯಾವೊಂದು ಕೆಲಸವನ್ನು ಮಾಡದೆ ಸುಮ್ಮನಿದ್ದರೂ ಆಡಿಕೊಳ್ಳುತ್ತಾರೆ. ಏನನ್ನಾದರೂ ಮಾಡುತ್ತಾ ಚಟುವಟಿಕೆಯಿಂದ ಕೂಡಿದ್ದರೂ ನಿಂದಿಸುತ್ತಾರೆ;

ಇಂತು+ಈ; ಇಂತು=ಈ ರೀತಿಯಲ್ಲಿ/ಬಗೆಯಲ್ಲಿ; ಜನ=ಜನರು/ಲೋಕದ ಮಂದಿ; ಮೆಚ್ಚು=ಒಪ್ಪು/ಸಮ್ಮತಿಸು/ಹೊಗಳು/ಕೊಂಡಾಡು; ನಡೆ=ನಡವಳಿಕೆ/ನಡತೆ/ಆಚಾರ; ನಡೆದವರ=ನಡೆದವರನ್ನು; ಇಂತೀ ಜನಮೆಚ್ಚಿ ನಡೆದವರ=ತಮ್ಮ ಸುತ್ತಮುತ್ತಣ ಜನರನ್ನು ಮೆಚ್ಚಿಸಲೆಂದು , ಜನರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ , ತಮ್ಮ ಮಯ್ ಮನಗಳನ್ನು ತಾವೇ ವಂಚಿಸಿಕೊಂಡು ಬಾಳುವಂತಹ ವ್ಯಕ್ತಿಗಳನ್ನು; ಪಾದ=ಅಡಿ/ಕಾಲು ; ಎಡದ ಪಾದ=ಯಾವುದೇ ಒಂದು ವಸ್ತು/ಪ್ರಾಣಿ/ಮಾನವಜೀವಿಯನ್ನು ಬಹುಕೀಳಾಗಿ ಕಾಣುವಾಗ ಅದನ್ನು/ಅವನನ್ನು ಎಡದ ಪಾದಕ್ಕೆ ಹೋಲಿಸಿ ಹೀಯಾಳಿಸುವುದು ಜನಸಮುದಾಯದ ಮಾತುಕತೆಯಲ್ಲಿ ಒಂದು ನುಡಿಗಟ್ಟಾಗಿ ಬಳಕೆಯಾಗುತ್ತಿದೆ; ಕಿರಿ=ಚಿಕ್ಕದು/ಸಣ್ಣದು; ಕಿರು+ಕುಣಿ=ಕಿರುಗುಣಿ; ಕುಣಿ=ಕುಳಿ/ತಗ್ಗು; ಕಿರುಗುಣಿ=ಸಣ್ಣಗುಳಿ/ಚಿಕ್ಕಬಿರುಕು; ಕಿರುಗುಣಿಕೆ=ಕಿರು ಬೆರಳು; ಎಡದ ಪಾದದ ಕಿರಿ ಕಿರುಗುಣಿ=ಎಡದ ಪಾದದಲ್ಲಿ ಅತಿಚಿಕ್ಕದಾಗಿರುವ ಕಿರುಬೆರಳು; ಮನೆ ಮಾಡು=ನೆಲೆಸುವಂತೆ ಮಾಡು/ಅಲ್ಲಿಡು; ಜನಮೆಚ್ಚಿ ನಡೆದವರ ಎಡದ ಪಾದ ಕಿರಿ ಕಿರುಗುಣಿಯಲ್ಲಿ ಮನೆ ಮಾಡು ಮನೆ ಮಾಡು=ಜನರ ಮೆಚ್ಚುಗೆಯನ್ನು ಪಡೆಯಲೆಂದೇ ಸುಳ್ಳು/ತಟವಟ/ವಂಚನೆ/ಕುಟಿಲತೆಯಿಂದ ನಡೆದುಕೊಳ್ಳುವ ವ್ಯಕ್ತಿಗಳನ್ನು ದೂರವಿಡಬೇಕು/ಅಂತಹವರನ್ನು ಕಡೆಗಣಿಸಬೇಕು ಎಂಬ ತಿರುಳಿನಲ್ಲಿ ಬಳಕೆಯಾಗಿದೆ ; ಎಂದು+ಆತ; ಆತ=ಅವನು; ಎಂದಾತ=ಎಂದು ಹೇಳಿದನು/ಹೇಳಿದವನು ; ಅಂಬಿಗ=ದೋಣಿಯನ್ನು/ಹರಿಗೋಲನ್ನು ಹೊಳೆ/ನದಿ/ತೊರೆಗಳಲ್ಲಿ ನಡೆಸುವವನು/ಬೆಸ್ತ/ಮೀನುಗಾರ; ಚೌಡಯ್ಯ=ವಚನಕಾರನ ಹೆಸರು; ಅಂಬಿಗ ಚೌಡಯ್ಯ=ವಚನಕಾರ ಚೌಡಯ್ಯನು ತಾನು ರಚಿಸಿದ ವಚನಗಳಲ್ಲಿ ತನ್ನ ಹೆಸರನ್ನೇ ವಚನಗಳ ಅಂಕಿತನಾಮವನ್ನಾಗಿ ಬಳಸಿದ್ದಾನೆ.

ಯಾವುದೇ ವ್ಯಕ್ತಿಯು ಜನರ ಮೆಚ್ಚುಗೆಗಾಗಿ ಹಂಬಲಿಸದೆ , ಜನರ ಹೊಗಳಿಕೆ/ತೆಗಳಿಕೆಗೆ ಕಿವಿಗೊಡದೆ , ತನ್ನ ಮನಮೆಚ್ಚುವಂತೆ ಅಂದರೆ ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳಿಂದ ನಡೆದುಕೊಳ್ಳಬೇಕು ಎಂಬ ಇಂಗಿತವನ್ನು ಈ ವಚನದಲ್ಲಿ ಸೂಚಿಸಲಾಗಿದೆ)

 

 ಜಾತಿ ಭ್ರಮೆ ನೀತಿ ಭ್ರಮೆ ಎಂಬ ಕರ್ಮಂಗಳನು
ಘಾತಿಸಿ ಕಳೆಯಬಲ್ಲಡಾತ ಯೋಗಿ
ಕ್ಷೇತ್ರಭ್ರಮೆ ತೀರ್ಥಭ್ರಮೆ ಪಾಷಾಣಭ್ರಮೆ ಎಂಬ ಕರ್ಮಂಗಳನು
ನೀಕರಿಸಿ ಕಳೆಯಬಲ್ಲಡಾತ ಯೋಗಿ
ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆವಾತ ತೂತಯೋಗಿ
ಎಂದಾತನಂಬಿಗ ಚೌಡಯ್ಯ.

ಯೋಗಿಯಾದವನ ವ್ಯಕ್ತಿತ್ವವು ಹೇಗಿರಬೇಕೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ. ಸಾಮಾಜಿಕ ಒಳಿತಿಗಾಗಿ/ಜನಸಮುದಾಯದ ಹಿತಕ್ಕಾಗಿ ಬಾಳುವವನೇ ಯೋಗಿ. ಯೋಗಿಯಾದವನು ತನ್ನ ಮಯ್ ಮನವನ್ನು ಆವರಿಸಿಕೊಂಡಿರುವ ತಪ್ಪುಗ್ರಹಿಕೆಗಳನ್ನು/ಕಲ್ಪಿತ ಸಂಗತಿಗಳನ್ನು ಹೋಗಲಾಡಿಸಿಕೊಂಡು , ಒಳ್ಳೆಯ ನಡೆನುಡಿಗಳುಳ್ಳ ವ್ಯಕ್ತಿಯಾಗಿ ಬೆಳೆದು ಬಾಳಬೇಕಾದ ರೀತಿಯನ್ನು ವಿವರಿಸಲಾಗಿದೆ.

( ಜಾತಿ=ವಂಶ/ತಳಿ/ವರ‍್ಗ/ಗುಂಪು/ಮೇಲು ಕೀಳೆಂಬ ಜಾತಿ ಮೆಟ್ಟಿಲುಗಳಿಂದ ಕೂಡಿರುವ ಸಮಾಜದಲ್ಲಿ , ಜಾತಿ ಎನ್ನುವುದು ಮಾನವರೇ ಕಟ್ಟಿಕೊಂಡಿರುವ ಒಂದು ಸಾಮಾಜಿಕ ಒಕ್ಕೂಟ/ರಚನೆ; ಭ್ರಮೆ=ಇಲ್ಲದ್ದನ್ನು ಇದೆಯೆಂಬ/ಇರುವುದನ್ನು ಇಲ್ಲವೆಂಬ ಒಳಮಿಡಿತಗಳಿಂದ ಕೂಡಿರುವ ಮನಸ್ಸು/ತಪ್ಪು ಗ್ರಹಿಕೆ/ಅತಿಯಾದ ಮೋಹ/ಕಲ್ಪಿತ ಸಂಗತಿ; ಜಾತಿ ಭ್ರಮೆ=ನೂರೆಂಟು ಬಗೆಯ ಜಾತಿಗಳ ಕಟ್ಟುಪಾಡಿನಿಂದ ಕೂಡಿರುವ ಸಮಾಜದಲ್ಲಿ ತಾನು ಹುಟ್ಟಿ ಬೆಳೆದು ಬಾಳುತ್ತಿರುವ ತನ್ನ ಜಾತಿಯು ಮತ್ತೊಂದು ಜಾತಿಗಿಂತ ಮೇಲು ಎಂಬ ಮೇಲರಿಮೆ ಇಲ್ಲವೇ ತನ್ನ ಜಾತಿಯು ಮತ್ತೊಂದಕ್ಕಿಂತ ಕೀಳು ಎಂಬ ಕೀಳರಿಮೆಯಿಂದ ಕೂಡಿರುವ ಒಳಮಿಡಿತದ ಮನಸ್ಸು;

ನೀತಿ=ಒಳ್ಳೆಯ ನಡೆನುಡಿ; ನೀತಿ ಭ್ರಮೆ=ನಾನೊಬ್ಬನೇ ಪ್ರಾಮಾಣಿಕ ವ್ಯಕ್ತಿ/ ಒಳ್ಳೆಯವನು / ಸತ್ಯವಂತ/ಬೆವರನ್ನು ಹರಿಸಿ ದುಡಿದು ಬಾಳುತ್ತಿರುವವನು/ಸರಿಯಾದ ದಾರಿಯಲ್ಲಿ ನಡೆಯುತ್ತಿರುವವನು ಎಂಬ ಒಳಮಿಡಿತದಿಂದ ಕೂಡಿ , ನನ್ನನ್ನು ಬಿಟ್ಟರೆ ಈ ಜಗತ್ತಿನಲ್ಲಿ ಮತ್ತಾರು ನೀತಿವಂತರಿಲ್ಲ/ಸತ್ಯವಂತರಿಲ್ಲ/ಪ್ರಾಮಾಣಿಕರಿಲ್ಲ ಎಂದು ಇತರರನ್ನು ಕಡೆಗಣಿಸುವಂತಹ ನಿಲುವು/ತಪ್ಪುಗ್ರಹಿಕೆ; ಎಂಬ=ಎನ್ನುವ/ಎಂದು ಕಾಡುವ/ಪೀಡಿಸುವ; ಕರ್ಮ=ಕೆಲಸ/ಕಸುಬು/ಉದ್ಯೋಗ; ಕರ್ಮಂಗಳನು=ನಡೆನುಡಿಗಳನ್ನು; ಘಾತ=ಹೊಡೆತ/ಪೆಟ್ಟು/ನಾಶ/ಹಾಳು; ಘಾತಿಸಿ=ನಾಶಪಡಿಸಿ/ಇಲ್ಲದಂತೆ ಮಾಡಿ/ಹೊಡೆದೋಡಿಸಿ; ಕಳೆಯ+ಬಲ್ಲಡೆ+ಆತ; ಕಳೆ=ಬಿಡು/ಹೋಗಲಾಡಿಸು/ತೊರೆ/ತೆಗೆದುಹಾಕು; ಬಲ್ಲ=ತಿಳಿದ/ಅರಿತ/ಶಕ್ತನಾದ/ಕಸುವುಳ್ಳ; ಬಲ್ಲಡೆ=ತಿಳಿದುಕೊಂಡರೆ/ಅರಿತುಕೊಂಡರೆ/ಶಕ್ತನಾದರೆ; ಕಳೆಯಬಲ್ಲಡೆ=ಹೋಗಲಾಡಿಸಿಕೊಳ್ಳಲು ಶಕ್ತನಾದರೆ; ಆತ=ಅವನು/ಅಂತಹ ವ್ಯಕ್ತಿಯು; ಯೋಗಿ=ಯತಿ/ತಪಸ್ವಿ/ಮಯ್ ಮನಗಳನ್ನು ಹತೋಟಿಯಲ್ಲಿಟ್ಟುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿ/ಸಹ ಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು;

ಕ್ಷೇತ್ರ=ದೇಗುಲಗಳು/ಗುರುಹಿರಿಯರ ಗದ್ದುಗೆಗಳು ನೆಲೆಗೊಂಡಿರುವ ಪ್ರದೇಶ/ದೇವರಲ್ಲಿ ಒಲವು ಮತ್ತು ನಂಬಿಕೆಯನ್ನುಳ್ಳ ಜನರು ಹೋಗಿಬರುವ ಜಾಗ; ಕ್ಶೇತ್ರಭ್ರಮೆ=ಪುಣ್ಯದ ನೆಲೆಗಳೆಂದು ನಂಬಿರುವ ಜಾಗಗಳಿಗೆ ಹೋಗಿ ಮಿಂದು ಮಡಿಯುಟ್ಟು , ದೇವರಿಗೆ ಕಾಣಿಕೆ ಒಪ್ಪಿಸಿ , ಹಣ್ಣುಕಾಯಿ ಮಾಡಿಸಿ, ಅಡ್ಡಬಿದ್ದು ಬರುವುದರಿಂದ ತಮಗೆ ಜೀವನದಲ್ಲಿ ಬಂದೊದಗಿರುವ ಸಂಕಟಗಳು ನಿವಾರಣೆಯಾಗುವುದೆಂಬ/ತಾವು ಮನದಲ್ಲಿ ಹರಸಿಕೊಂಡ ಕೆಲಸಗಳು ಈಡೇರಿ ಮುಂದಿನ ದಿನಗಳಲ್ಲಿ ಒಳಿತಾಗುವುದೆಂಬ/ಜೀವನದಲ್ಲಿ ತಾವು ಮಾಡಿರುವ ಪಾಪಗಳು ಪರಿಹಾರವಾಗುದೆಂಬ ಒಳಮಿಡಿತದಿಂದ ಕೂಡಿದ ನಿಲುವು/ತಪ್ಪುಗ್ರಹಿಕೆ/ಕಲ್ಪಿತ ಸಂಗತಿ;

ತೀರ್ಥ=ದೇಗುಲದಲ್ಲಿ/ಗುರುಹಿರಿಯರ ಗದ್ದುಗೆಗಳಲ್ಲಿ ಬಳಿ ಹರಿಯುತ್ತಿರುವ ತೊರೆ/ಹೊಳೆ/ನದಿಗಳು ಇಲ್ಲವೇ ಇರುವ ಕೊಳ/ಕಲ್ಯಾಣಿಗಳು; ನೀರು/ಜಲ; ತೀರ್ಥಭ್ರಮೆ=ದೇಗುಲದ/ಗದ್ದುಗೆಗಳ ಬಳಿಯಿರುವ ನದಿ/ಹೊಳೆ/ಕಲ್ಯಾಣಿಗಳ ನೀರಿನಲ್ಲಿ ಮಿಂದೇಳುವುದರಿಂದ ಇಲ್ಲವೇ ದೇವರ ಮುಂದೆ ಇಟ್ಟು ಪೂಜೆ ಮಾಡಿ ನೀಡುವ ನೀರನ್ನು ಕುಡಿಯುವುದರಿಂದ/ ಮಯ್ ಮೇಲೆ ಸಿಂಪಡಿಸಿಕೊಳ್ಳುವುದರಿಂದ ಮಾಡಿದ ಪಾಪಗಳೆಲ್ಲ ನಿವಾರಣೆಯಾಗಿ / ಇರುವ ಸಂಕಟಗಳೆಲ್ಲ ತೊಲಗಿ / ಬರಲಿರುವ ಕೇಡು ಮರೆಯಾಗಿ / ಆಸೆಪಟ್ಟ ಬಯಕೆಗಳೆಲ್ಲ ಈಡೇರಿ , ಒಳಿತಾಗುವುದೆಂಬ ಒಳಮಿಡಿತದಿಂದ ಕೂಡಿದ ನಿಲುವು/ತಪ್ಪುಗ್ರಹಿಕೆ;

ಪಾಷಾಣ=ಕಲ್ಲು/ಶಿಲೆ/ಮಣಿ/ರತ್ನ/ಹರಳು; ಪಾಷಾಣಭ್ರಮೆ=ನವರತ್ನದಲ್ಲಿ ಒಂದು ರತ್ನವನ್ನು ಇಲ್ಲವೇ ಯಾವುದಾದರೊಂದು ಬಗೆಯ ಕಲ್ಲಿನ ಹರಳೊಂದನ್ನು ಉಂಗುರದಲ್ಲಿ ಇಲ್ಲವೇ ಸರ/ಮಾಲೆ/ಹಾರದಲ್ಲಿ ಹಾಕಿಸಿಕೊಂಡು ಬೆರಳಲ್ಲಿ/ಕೊರಳಿನಲ್ಲಿ ತೊಟ್ಟುಕೊಂಡರೆ ಒಳಿತಾಗುವುದೆಂಬ ಒಳಮಿಡಿತದಿಂದ ಕೂಡಿದ ನಿಲುವು/ತಪ್ಪುಗ್ರಹಿಕೆ; ವ್ಯಕ್ತಿಗೆ ಬರಲಿರುವ ಎಲ್ಲಾ ಬಗೆಯ ಕೇಡುಗಳನ್ನು ಈ ಬಗೆಯ ರತ್ನ/ಹರಳು ತಡೆದು , ಆಪತ್ತುಗಳಿಂದ ವ್ಯಕ್ತಿಯನ್ನು ಪಾರುಮಾಡಿ , ಕಾಪಾಡುವುದೆಂಬ ನಂಬಿಕೆಯು ಜನಮನದಲ್ಲಿದೆ;

ನೀಕರಿಸಿ=ತಿರಸ್ಕರಿಸಿ/ಕಡೆಗಣಿಸಿ/ನಿವಾರಿಸಿ/ಬಿಡಿಸಿ; ನೀಕರಿಸಿ ಕಳೆಯಬಲ್ಲಡಾತ ಯೋಗಿ=ಎಲ್ಲಾ ಬಗೆಯ ತಪ್ಪುಗ್ರಹಿಕೆಗಳನ್ನು/ಇಲ್ಲದ ಸಲ್ಲದ ಒಳಮಿಡಿತಗಳನ್ನು ನಿವಾರಿಸಿಕೊಂಡು , ಅವುಗಳಿಂದ ಬಿಡಿಸಿಕೊಂಡು , ನಿಸರ‍್ಗದಲ್ಲಿನ ಮತ್ತು ಸಮಾಜದಲ್ಲಿನ ವಾಸ್ತವ/ದಿಟ/ಸತ್ಯವನ್ನು ಅರಿತುಕೊಂಡು ಬಾಳುವವನು ಯೋಗಿಯಾಗುತ್ತಾನೆ;

ಲೋಕಕ್ಕೆ+ಅಂಜಿ; ಲೋಕ=ಜಗತ್ತು/ಪ್ರಪಂಚ/ಜನಸಮುದಾಯ; ಅಂಜಿಕೆ=ಹೆದರಿಕೆ/ದಿಗಿಲು/ಪುಕ್ಕಲುತನ; ಅಂಜಿ=ಹೆದರಿಕೊಂಡು/ದಿಗಿಲುಗೊಂಡು; ಲೋಕಕ್ಕಂಜಿ=ಸಮಾಜದಲ್ಲಿರುವ ಜನರು ಏನೆಂದುಕೊಳ್ಳುವರೋ / ಜನರಿಗೆ ತನ್ನ ನಿಜವಾದ ಬಣ್ಣ ಅಂದರೆ ನೀಚತನದ ಹಾಗೂ ಕಪಟತನದ ನಡೆನುಡಿಗಳು ಎಲ್ಲಿ ತಿಳಿಯುತ್ತದೆಯೋ ಎಂಬ ಹೆದರಿಕೆಯಿಂದ; ಲೌಕಿಕ=ಪ್ರಪಂಚದ ವ್ಯವಹಾರ/ಜನಸಮುದಾಯದ ನಿತ್ಯದ ನಡೆನುಡಿಗಳು; ಮರೆ+ಕೊಂಡು=ಮರೆಗೊಂಡು; ಮರೆ=ಗುಟ್ಟು/ರಹಸ್ಯ/ಕಾಣದಾಗುವಿಕೆ; ನಡೆವ+ಆತ; ನಡೆವ=ಜೀವನವನ್ನು ಮಾಡುತ್ತಿರುವ/ಬಾಳುತ್ತಿರುವ/ ವರ‍್ತಿಸುತ್ತಿರುವ ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆವಾತ=ಜನರ ಕಣ್ಣಿಗೆ ಕಾಣದಂತೆ ಒಳಗೊಳಗೆ ತನ್ನ ಮಯ್ ಮನದ ಕಾಮದ ಬಯಕೆಗಳನ್ನು/ತುಡಿತಗಳನ್ನು ತಣಿಸಿಕೊಂಡು ಬಾಳುತ್ತಿರುವವನು ;ತೂತು=ಕಂಡಿ/ಬಿಲ/ಬಿರುಕು; ತೂತಯೋಗಿ=ಕೆಟ್ಟ ವ್ಯಕ್ತಿ/ಅರಿವುಗೆಟ್ಟವನು/ಹೊರನೋಟಕ್ಕೆ ಯೋಗಿಯಂತೆ ಕಾಣಿಸಿಕೊಳ್ಳುತ್ತಾ , ತನ್ನ ಮಯ್ ಮನಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದೆ ಒಳಗಡೆ ಅಂದರೆ ಇತರರಿಗೆ ತಿಳಿಯದಂತೆ ಕೆಟ್ಟಕೆಲಸಗಳಲ್ಲಿ ತೊಡಗಿರುವವನು; ಎಂದ+ಆತನ್+ಅಂಬಿಗ; ಆತನ್=ಅವನು; ಎಂದಾತನ್=ಎಂದು ಹೇಳಿದನು/ಹೇಳಿದವನು)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: