ಕೊನೆಯ ಗುಂಡು

– ಕರಣ ಪ್ರಸಾದ.

50 ರ ಆಸುಪಾಸಿನ ವ್ಯಕ್ತಿ, ಕಾರಿನ ಚಾಲಕನ ಪಕ್ಕದ ಸೀಟಿನಲ್ಲಿ ಕೂತು ತುಟಿಗೆ ಸಿಗರೇಟ್ ಏರಿಸಿ, ಲೈಟರ್ ಇಂದ ಅಂಟಿಸಿಕೊಂಡು, ಹೊಗೆಯನ್ನು ಎಳೆದು ಹೊರಗೆ ಬಿಡುತ್ತಾನೆ. ನೋಡಲು ದಡೂತಿ ದೇಹ, ಕೊರಳಲ್ಲಿ ಮತ್ತೆ ಕೈಗಳಲ್ಲಿ ಕಣ್ಣಿಗೆ ಕುಕ್ಕುವಂತೆ ಬಂಗಾರವನ್ನು ಹಾಕಿಕೊಂಡಿದ್ದಾನೆ. ಹಾವ ಬಾವಗಳಿಂದ ಬೂಗತ ಜಗತ್ತಿನ ವ್ಯಕ್ತಿ ಅತವಾ ರಿಯಲ್ ಎಸ್ಟೇಟ್ ಉದ್ಯಮಿಯಂತೆ ಕಾಣಿಸುತ್ತಾನೆ.

ಕಾರಿನ ಹಿಂಬಾಗದಿಂದ ಡಿಕ್ಕಿಯ ಶಬ್ದ ಕೇಳಿಸುತ್ತದೆ. ಅವನ ಪಕ್ಕದಲ್ಲಿರುವ ಚಾಲಕನ ಸೀಟಿಗೆ ರಂಗ ಬಂದು ಕುಳಿತುಕೊಳ್ಳುತ್ತಾನೆ. ರಂಗ 28 ರ ಯುವಕ, ಗುಂಗರು ಕೂದಲು, ತೆಳ್ಳಗಿನ ಮೈಕಟ್ಟು ಹೊಂದಿರುವ ಬಂಟ. ಏದುಸಿರು ಬಿಡುತ್ತ ಸ್ಟೇರಿಂಗ್ ಹಿಡಿದು, ತನ್ನ ಕಾರಿನ ಕನ್ನಡಿಯನ್ನು ಸರಿ ಪಡಿಸಿಕೊಳ್ಳುತ್ತಾನೆ ರಂಗ. ಅವನ ಮೈಯೆಲ್ಲಾ ಪೂರ‍್ತಿಯಾಗಿ ಬೆವೆತಿದೆ. ದುಕ್ಕ ಮತ್ತು ಬಯದ ಬಾವನೆಗಳೆರಡೂ ಅವನ ಮುಕದಲ್ಲಿ ಕಾಣಿಸುತ್ತಿವೆ. ತನ್ನ ಬಾಸ್ ನತ್ತ ತಿರುಗಿ ನೋಡುತ್ತಾನೆ. ಸಿಗರೇಟ್ ಸೇದುತ್ತಿದ್ದ ಬಾಸ್ ಇವನ ಕಡೆ ತಿರುಗಿ ಕಾರನ್ನು ಚಲಿಸಲು ಸನ್ನೆ ಮಾಡುತ್ತಾನೆ. ಕಾರಿನ ಇಂಜಿನ್ ಆರಂಬವಾಗಿ ಅದರ ದೀಪಗಳು ರಸ್ತೆಯನ್ನು ಬೆಳಗುತ್ತವೆ. ಕತ್ತಲಲ್ಲಿ ಮಿಂಚಿನ ಹುಳದಂತೆ ಒಂಟಿಯಾಗಿ ಕಾರು ಹೊರಡುತ್ತದೆ.

(ಒಂದು ಗಂಟೆಯ ಹಿಂದೆ )

ಒಂದು ಹಳೆಯ ಗ್ಯಾರೇಜ್ನಲ್ಲಿ ಒಬ್ಬ ಯುವಕನನ್ನು ಕಟ್ಟಿಹಾಕಲಾಗಿದೆ. ಅವನ ಮುಕಕ್ಕೆ ಚೆನ್ನಾಗಿ ಹೊಡೆದಿರುವುದರಿಂದ ಅವನ ಮುಕದ ತುಂಬಾ ರಕ್ತದ ಕಲೆಗಳಿವೆ. ಅವನ ಮುಂದೆ ಅವನಿಗೆ ಗನ್ ಹಿಡಿದು ರಂಗ ನಿಂತಿದ್ದಾನೆ. ಅವನ ಹಿಂದಗಡೆ, ಬಾಸ್ ಗೋಡೆಗೆ ಬುಜ ತಾಗಿಸಿಕೊಂಡು ಸಿಗರೇಟ್ ಹೊಗೆ ಬಿಡುತ್ತ ಕಟ್ಟಿ ಹಾಕಿರುವ ತನ್ನ ಇನ್ನೊಬ್ಬ ಬಂಟನನ್ನು ಸಿಟ್ಟಿನಿಂದ ನೋಡುತ್ತಿದ್ದಾನೆ.

ಹಗ್ಗದಲ್ಲಿ ಕಟ್ಟಿಸಿ ಕೊಂಡಿರುವ ವ್ಯಕ್ತಿ ನರಳುತ್ತಾ “ಬಾಸ್! ನನ್ ಬಿಟ್ ಬಿಡಿ ಬಾಸ್!…. ನಂದೇನ್ ತಪ್ಪಿಲ್ಲಾ, ಬೇಕಿದ್ರೆ ಇವ್ನೆ ಕೇಳಿ ಬಾಸ್” ಎಂದು ನರಳುತ್ತಾ ಬಾಸ್ ನನ್ನು ಬೇಡಿಕೊಳ್ಳುತ್ತಾನೆ. ಗನ್ ಹಿಡದಿರುವ ರಂಗ ಬಾಸ್ ನತ್ತ ತಿರುಗಿ ಮುಂದಿನ ಸನ್ನೆಗಾಗಿ ಕಾಯುತ್ತಾನೆ. ಬಾಸ್ ಕಣ್ ಸನ್ನೆಯಿಂದ ಅವನನ್ನು ಮುಗಿಸಲು ಹೇಳುತ್ತಾನೆ. ಬಾಸ್ ನ ಆಜ್ನೆಯಂತೆ ಗನ್ ಟ್ರಿಗರ್  ಅನ್ನು ಒತ್ತಲು ಮುಂದಾಗುತ್ತಾನೆ ರಂಗ. ಇನ್ನೇನು ಟ್ರಿಗರ್ ಒತ್ತಬೇಕು ಅನ್ನುವಶ್ಟರಲ್ಲೇ ತನ್ನ ಮುಂದೆ ಕಟ್ಟಿಹಾಕಿರುವ ಗೆಳೆಯನನ್ನು ನೋಡಿ ರಂಗನ ಮನಸಿನಲ್ಲಿ ಪ್ರಶ್ನೆಗಳು ಮೂಡುತ್ತವೆ.

“ಈ ಕೆಲಸ ನನ್ನ ತಪ್ಪಿನಿಂದ ಆಗಿದೆ. ಇದರಲ್ಲಿ ಅವನದೇನು ತಪ್ಪಿಲ್ಲ. ನನ್ನ ತಪ್ಪಿಗೆ ನನ್ನ ಕೈಯಿಂದ ಇವನೇಕೆ ಸಾಯಬೇಕು? ಅಕಸ್ಮಾತ್ ಈ ಕೆಲಸ ಮಾಡಿದ್ದು ನಾನೇ ಎಂದು ಒಪ್ಪಿಕೊಂಡರೆ ನನಗೂ ಇದೇ ಗತಿ ಬರುವುದಲ್ಲ!” ಎಂದು ಒಳಗೊಳಗೇ ಮಾತಾಡಿಕೊಳ್ಳುತ್ತಾನೆ. ಹಿಂದೆ ನಡೆದ ಒಂದು ವ್ಯವಹಾರದಲ್ಲಿ ಬಂದ ಹಣವನ್ನೆಲ್ಲಾ ರಂಗ ಲಪಟಾಯಿಸಿರುತ್ತಾನೆ. ಈ ವಿಶಯ ಬಾಸ್ ಗೆ ತಿಳಿದಾಗ ಅದನ್ನು ತನ್ನ ಗೆಳೆಯನ ಮೇಲೆ ಹೊರಿಸಿರುತ್ತಾನೆ. ಅದೇ ಗೆಳೆಯನನ್ನು ಕೊಲ್ಲಲು ಬಾಸ್ ರಂಗನಿಗೆ ಹೇಳಿರುತ್ತಾನೆ.

ರಂಗನ ಬೆರಳು ಟ್ರಿಗರ್ ಒತ್ತಲು ನಡುಗುತ್ತದೆ. ಅವನ ಮೈ ಬೆವರುತ್ತದೆ. ಇದನ್ನು ಗಮನಿಸಿದ ಬಾಸ್ ಸಿಗರೇಟ್ ನೆಲಕ್ಕೆ ಹಾಕಿ, ರಂಗನ ಬಳಿ ಬಂದು, ಅವನ ಕೈಯಲ್ಲಿರುವ ಗನ್ ತೆಗೆದುಕೊಂಡು ಕಟ್ಟಿಹಾಕಿರುವ ವ್ಯಕ್ತಿಗೆ ಗುಂಡು ಹೊಡೆಯುತ್ತಾನೆ. ರಂಗನ ಕೈಗೆ ಮತ್ತೆ ಗನ್ ಕೊಟ್ಟ ಬಾಸ್, “ಹತ್ತು ನಿಮಶದಲ್ಲಿ ಇವನ ಬಾಡಿ ಪ್ಯಾಕ್ ಮಾಡಿ ಕಾರಿನ ಡಿಕ್ಕಿಗೆ ಹಾಕು.. ಹಂಗೆ !”, ಗನ್ ನತ್ತ ಬೆಟ್ಟು ತೋರಿಸಿ, “ಈ ಗನ್ನನ್ನು ಕೂಡ ಅದ್ರಲ್ಲಿ ಪ್ಯಾಕ್ ಮಾಡು” ಎಂದು ಹೇಳಿ ಗ್ಯಾರೇಜಿನಿಂದ ಹೊರಬಂದು ಕಾರಿನಲ್ಲಿ ಕುಳಿತುಕೊಳ್ಳುತ್ತಾನೆ.

ತಾನು ಮಾಡಿದ ತಪ್ಪಿಗೆ ತನ್ನ ಅಮಾಯಕ ಗೆಳೆಯನಿಗೆ ಎದುರಾದ ಪರಿಸ್ತಿತಿ ನೋಡಿ ರಂಗನಿಗೆ ಮರುಕ ಉಂಟಾಗುತ್ತದೆ. ಗುಂಡೇಟು ತಿಂದ ತನ್ನ ಗೆಳೆಯನ ದೇಹವನ್ನು, ಪಕ್ಕದಲ್ಲಿದ್ದ ದೊಡ್ಡ ಬ್ಯಾಗಿನೊಳಗೆ ತಳ್ಳಿ, ಅದರೊಳಗೆ ಗನ್ ಇಟ್ಟು ಬ್ಯಾಗಿನ ಜಿಪ್ ಹಾಕಿ ಕಾರಿನ ಡಿಕ್ಕಿಗೆ ಹಾಕುತ್ತಾನೆ.

(ಈಗ)

ಕಾರು ಕಗ್ಗತ್ತಲಲ್ಲಿ ಒಂದು ಹೊಲದ ಮದ್ಯದಲ್ಲಿ ಬಂದು ನಿಲ್ಲುತ್ತದೆ. ಬಾಸ್ ರಂಗನಿಗೆ “ಬೇಗ ಗುಂಡಿ ತೋಡಿ ಅವನನ್ನ ಹೂತಾಕು” ಎಂದು ಆದೇಶಿಸುತ್ತಾನೆ. ರಂಗ ಕಾರಿನಿಂದ ಇಳಿದು ಡಿಕ್ಕಿ ತೆಗೆದು ಸಲಾಕೆಯನ್ನು ತೆಗೆದುಕೊಂಡು ಕಾರಿನ ದೀಪದ ಬೆಳಕಿನಲಿ ಗುಂಡಿ ತೋಡತೊಡಗುವನು. ಒಂದು ಗಂಟೆಯ ನಂತರ ಒಬ್ಬ ಮನುಶ್ಯನನ್ನು ಮುಚ್ಚುವಶ್ಟು ಅಗಲ ಮತ್ತು ಉದ್ದದ ಗುಂಡಿ ಅಣಿಯಾಗುತ್ತದೆ. ಬಾಸ್ ಕಾರಿನ ಬಾಗಿಲ ಬಳಿ ನಿಂತುಕೊಂಡು ಸಿಗರೇಟ್ ಸೇದುತ್ತಾ ರಂಗನ ಚಟುವಟಿಕೆಗಳನ್ನು ಗಮನಿಸುತ್ತಿರುತ್ತಾನೆ.

ಇತ್ತ ರಂಗ ಡಿಕ್ಕಿಯತ್ತ ಹೋಗಿ, ಬ್ಯಾಗನ್ನು ಹೊರ ತೆಗೆದು ದರ ದರ ಎಂದು ಎಳೆದುಕೊಂಡು ಗುಂಡಿಯ ಪಕ್ಕದಲ್ಲಿ ಇಡುತ್ತಾನೆ. ಕೊನೆಯ ಬಾರಿ ತನ್ನ ಗೆಳೆಯನ ಮುಕ ನೋಡಲು ಜಿಪ್ ಓಪನ್ ಮಾಡುವನು. ಗೆಳೆಯನ ಕಣ್ಣುಗಳು ಮಿಟುಕುತ್ತವೆ! ಆ ಕಣ್ಣುಗಳು ರಂಗನನ್ನೇ ನೋಡುತ್ತಿರುತ್ತವೆ. ಗಾಬರಿಗೊಂಡ ರಂಗ ಗುಂಡಿಗೆ ಬ್ಯಾಗನ್ನು ನೂಕುತ್ತಾನೆ. ಸರ-ಸರನೇ ಮಣ್ಣನ್ನು ಗುಂಡಿಗೆ ತುಂಬತೊಡಗುತ್ತಾನೆ. ಆಗ ಗುಂಡಿಯಲ್ಲಿರುವ ಬ್ಯಾಗ್ ನಿಂದ ನಡುಗುತ್ತಿರುವ ಕೈಯೊಂದು ಗನ್ ಹಿಡಿದು ಇವನ ಕಡೆ ಗುರಿ ಮಾಡುತ್ತದೆ. ಇದನ್ನು ನೋಡಿದ ರಂಗನಿಗೆ ಎದೆಬಡಿತ ಜೋರಾಗುತ್ತದೆ.

ಮಣ್ಣಿನಲ್ಲಿ ಅರೆಬರೆಯಾಗಿ ಮುಚ್ಚಿದ್ದ ಗೆಳೆಯನ ಕಣ್ಣುಗಳನ್ನು ನೋಡಿ ಇವನಿಗೆ ಪಾಪ ಪ್ರಜ್ನೆ ಕಾಡುತ್ತದೆ. ಬಾಸ್ ಗೆ ಇದನ್ನು ಹೇಳಲೆಂದು ಹಿಂದೆ ತಿರುಗುತ್ತಾನೆ, ರಂಗನ ಎದೆಬಡಿತ ನಿಂತೇ ಹೋಗುತ್ತದೆ. ಯಾಕೆಂದರೆ ಬಾಸ್ ಇವನತ್ತ ಗನ್ ಅನ್ನು ಗುರಿ ಮಾಡಿ ನಿಂತಿದ್ದಾನೆ. ‘ನನ್ನ ಕೊನೆ ಇದೇ’ ಎಂದು ರಂಗನಿಗೆ ಮನದಟ್ಟಾಗುತ್ತದೆ. ತಾ ಮಾಡಿದ ತಪ್ಪಿಗೆ, ಗೆಳೆಯನನ್ನು ನೂಕಿದ್ದಕ್ಕೆ ಇದೇ ಸರಿಯಾದ ಶಿಕ್ಶೆ ಎಂದುಕೊಂಡು ನೆಮ್ಮದಿಯ ಕಿರು ನಗೆ ಬೀರುತ್ತಾ ಬಾಸ್ ನತ್ತ ತಿರುಗುತ್ತಾನೆ.

ಗುಂಡಿನ ಶಬ್ದ ಕೇಳಿಸುತ್ತದೆ – ಒಂದು ಗುಂಡು ರಂಗನ ಎದೆ ಸೀಳಿರುತ್ತದೆ, ಇನ್ನೊಂದು ಗುಂಡು ರಂಗನ ಬೆನ್ನನ್ನು ಹೊಕ್ಕಿರುತ್ತದೆ.

( ಚಿತ್ರ ಸೆಲೆ:  dps.mn.gov )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: