ತಾವೇ ಮಮ್ಮಿಗಳಾಗುವ ಶಿಂಗನ್ ಪಂತದ ಸಂತರು!
– ಕೆ.ವಿ.ಶಶಿದರ.
ವ್ಯಕ್ತಿಯ ಸಾವಿನ ಬಳಿಕ ಅವನ ಕಳೇಬರವನ್ನು ಸಂರಕ್ಶಿಸಲು ನಡೆಯುವ ಕೆಲಸವೇ ಮಮ್ಮೀಕರಣ ಇಲ್ಲವೇ ಮಮ್ಮಿಸುವಿಕೆ. ಮಮ್ಮಿ(ಉಳಿಹೆಣ)ಗಳನ್ನು ಮಾಡುವ ಪ್ರಕ್ರಿಯೆಯ ವೈಜ್ನಾನಿಕ ಅದ್ಯಯನ ಪ್ರಾರಂಬವಾಗಿದ್ದು 1960ರ ದಶಕದಲ್ಲಿ. ವ್ಯಕ್ತಿಯ ಸಾವಿನ ಬಳಿಕ ಆತನ ಕಳೇಬರಕ್ಕೆ ರಾಸಾಯನಿಕಗಳನ್ನು ಬಳಸಿ, ಕೆಲವಾರು ಹಂತಗಳನ್ನು ಪಾಲಿಸಿ ಅದನ್ನು ಕೊಳೆಯದಂತೆ ಕಾಪಾಡಿಡುವ ಬಗೆಗಳನ್ನು ಈ ಅದ್ಯಯನದಿಂದ ಕಂಡುಕೊಳ್ಳಲಾಯಿತು. ಈಜಿಪ್ಟಿನ ಮಮ್ಮಿಗಳಾಗಬಹುದು ಅತವಾ ವಿಶ್ವಾದ್ಯಂತ ಕಂಡುಬರುವ ಇತರೆ ಬಹುತೇಕ ಮಮ್ಮಿಗಳಾಗಬಹುದು, ಎಲ್ಲದರ ಕೆಲಸ ನಡೆಯುವುದು ಇದೇ ರೀತಿಯಲ್ಲಿ. ಇದಕ್ಕೆ ವ್ಯತಿರಿಕ್ತವಾದ ಮಮ್ಮಿಗಳನ್ನು ಮಾಡುವ ಬಗೆಯೊಂದು ಜಪಾನಿನಲ್ಲಿ ಬಹಳ ಹಿಂದೆಯೇ ಅಸ್ತಿತ್ವದಲ್ಲಿತ್ತು ಎಂಬುದು ಪ್ರಚಲಿತವಾಗಿಲ್ಲ. ಆ ವಿದಾನವೇ ಸ್ವಯಂ ಮಮ್ಮಿಗಳಾಗುವಿಕೆ. ಆಶ್ಚರ‍್ಯವಲ್ಲವೇ? ಸಾಯುವ ಮುನ್ನವೇ ಮಮ್ಮಿಗಳಾಗುವುದೇ?
ತಾವೇ ಮಮ್ಮಿಗಳಾಗುವ ಅಬ್ಯಾಸ ಮೊದಲು ಪ್ರಾರಂಬವಾಗಿದ್ದು 1000 ವರುಶಗಳಿಗೂ ಹಿಂದೆ, ವಕಯಾಮಾ ಆಡಳಿತ ಪ್ರದೇಶದಲ್ಲಿರುವ ಮೌಂಟ್ ಕೋಯಾ ಸಂಕೀರ‍್ಣದ ದೇವಾಲಯದಲ್ಲಿ. ಇದನ್ನು ಪ್ರಾರಂಬಿಸಿದವ ಬೌದ್ದ ದರ‍್ಮದ ಶಿಂಗನ್ ಪಂತದ ಸ್ತಾಪಕ ಕೂಕೈ ಎಂಬಾತ. ಈ ಪಂತದ ಮೂಲ ಉದ್ದೇಶ ದೈಹಿಕ ಶಿಕ್ಶೆಯ ಮೂಲಕ ಜ್ನಾನೋದಯದ ಪರಿಕಲ್ಪನೆ.
ಕೂಕೈ ಪ್ರಸ್ತಾಪಿಸಿದ ಸ್ವಯಂ ಮಮ್ಮಿಗಳಾಗುವ ಪ್ರಕ್ರಿಯೆಯಲ್ಲಿ ಸುದೀರ‍್ಗವಾದ ಮೂರು ಹಂತಗಳಿವೆ. ಈ ಎಲ್ಲಾ ಮೂರು ಹಂತದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಸಂಪನ್ನಗೊಳಿಸಲು ಅವಶ್ಯವಿರುವ ಅವದಿ ಅಂದಾಜು 10 ವರ‍್ಶಗಳು.
ಮೊದಲನೇ ಹಂತ
ಮೊದಲನೆಯ ಹಂತದಲ್ಲಿ ಸೇವಿಸುವ ಊಟದಲ್ಲಿ ತೀವ್ರ ಬದಲಾವಣೆ ಇರುತ್ತದೆ. ಮೌಂಟ್ ಕೋಯಾ ದೇವಾಲಯದ ಸುತ್ತಲಿನ ಕಾಡುಗಳಲ್ಲಿ ಕಂಡು ಬರುವ ಬೀಜ ಮತ್ತು ಒಣಬೀಜಗಳನ್ನು ಮಾತ್ರ ಈ ಹಂತದದಲ್ಲಿ ಸೇವಿಸಬೇಕು. ಇದರ ಅವದಿ 1000 ದಿನ. ಈ ಅವದಿಯಲ್ಲಿ ತನ್ನ ದೈನಂದಿನ ಕಶ್ಟದ ಕೆಲಸಗಳಲ್ಲಿ ಯಾವುದಕ್ಕೂ ಚ್ಯುತಿ ಬರದಂತೆ ನಿರ‍್ವಹಿಸಬೇಕು. ಎಲ್ಲಾ ರೀತಿಯ ದೈಹಿಕ ಕಸರತ್ತುಗಳನ್ನು ತಪ್ಪದೇ ಮಾಡಬೇಕು. ಇದರ ಪಲಿತಾಂಶ ದೇಹದಲ್ಲಿನ ಕೊಬ್ಬಿನಂಶ ಕರಗಿ ನೀರಾಗಿ ಸಂಪೂರ‍್ಣ ನಾಶವಾಗುವುದು. ಸಾವಿನ ನಂತರ ದೇಹ ಕೊಳೆಯಲು ಸಹಕಾರಿಯಾಗುವ ಕೊಬ್ಬನ್ನು ಸುಲಬವಾಗಿ ತೆಗೆದು ಹಾಕುವುದು ಈ ಮೊದಲ ಹಂತದ ಪ್ರಕ್ರಿಯೆಯ ಮೂಲ ಉದ್ದೇಶ.
ಎರಡನೇ ಹಂತ
ಈ ಹಂತದಲ್ಲಿ ಊಟದ ಸೇವನೆಗೆ ಇನ್ನೂ ಹೆಚ್ಚಿನ ನಿರ‍್ಬಂದವನ್ನು ವಿದಿಸಲಾಗುವುದು. ಇದರ ಅವದಿಯೂ ಸಹ 1000 ದಿನಗಳು. ಈ ಅವದಿಯಲ್ಲಿ ಪೈನ್ ಮರಗಳ ತೊಗಟೆ ಮತ್ತು ಬೇರುಗಳನ್ನು ಮಾತ್ರ ಸೇವಿಸಲು ಅವಕಾಶವಿದೆ. ಅದೂ ನಿಗದಿತ ಪ್ರಮಾಣದಲ್ಲಿ ಮಾತ್ರ. ಈ ಹಂತದ ಕೊನೆಯ ವೇಳೆಗೆ ದೇಹದಲ್ಲಿನ ತೇವಾಂಶವೆಲ್ಲಾ ನಶಿಸಿ ಹೋಗಿ, ದೇಹ ಒಣಗಿ ಚರ‍್ಮ ಮೈಗಂಟಿ ದೇಹ ಅಸ್ತಿಪಂಜರವಾಗುತ್ತದೆ. ಸಾವಿನ ನಂತರ ದೇಹವನ್ನು ಕಾಪಾಡಿಡುವಲ್ಲಿ ತೇವಾಂಶದ ಪಾತ್ರ ಅತ್ಯಂತ ಹಿರಿದು. ಕಳೇಬರದಲ್ಲಿ ಬ್ಯಾಕ್ಟೀರಿಯಾಗಳ ಬಿರುಸಿನ ಬೆಳವಣಿಗೆಗೆ ತೇವಾಂಶ ಅತ್ಯಂತ ಸಹಕಾರಿ. ಒಣ ದೇಹ ಕೊಳೆಯುವಿಕೆಯಿಂದ ಸುರಕ್ಶಿತ, ಸಂರಕ್ಶಣೆಯ ಕೆಲಸ ಅತಿ ಸುಲಬ. ಇದು ಎರಡನೇ ಹಂತದಲ್ಲಿನ ಪೈನ್ ಮರದ ತೊಗಟೆ ಮತ್ತು ಬೇರುಗಳ ಸೇವನೆಯ ಪ್ರಮುಕ ಉದ್ದೇಶ.
ದೇಹದಲ್ಲಿನ ತೇವಾಂಶವನ್ನು ತೀವ್ರವಾಗಿ ಕಡಿಮೆ ಮಾಡಲು ಎರಡನೇ ಹಂತದ 1000 ದಿನಗಳ ಕೊನೆಗೆ ಉರುಶಿ ಮರದೆಸರಿನಿಂದ ಮಾಡಿದ ವಿಶೇಶ ಚಹಾ ಕುಡಿಯುವುದು ಕಡ್ಡಾಯ. ಈ ಚಹಾ ಕುಡಿಯುವುದರಿಂದ ವಾಂತಿ, ಮೂತ್ರ ವಿಸರ‍್ಜನೆ ಹಾಗೂ ಬೆವರುವಿಕೆ ಹೆಚ್ಚಾಗುತ್ತದೆ, ಇದು ದೇಹದಲ್ಲಿನ ತೇವಾಂಶವನ್ನು ಕಡಿಮೆ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ಅತ್ಯಂತ ಸಹಕಾರಿ. ಉರುಶಿ ಮರದೆಸರು ವಿಶಕಾರಿಯಾದ ಕಾರಣ ಇದು ದೇಹ ಸೇರಿದ ನಂತರ ದೇಹದಲ್ಲಿನ ಹುಳುಗಳಿಗೆ ಹಾಗೂ ಕೀಟಗಳಿಗೆ ಮಾರಣಾಂತಿಕವಾಗುತ್ತದೆ. ಸತ್ತ ದೇಹ ಕೊಳೆಯಲು ಕಾರಣವಾಗುವ ಎರಡನೇ ಮೂಲ ವಸ್ತುವಿನ ನಿರ‍್ಮೂಲನೆ ಈ ಚಹಾ ಬಳಕೆಯ ಮೂಲ ಉದ್ದೇಶ. ಉರುಶಿ ಮರದೆಸರನ್ನು ಮೆರಗನ್ನಾಗಿ ಪೀಟೋಪಕರಣಗಳ ತಯಾರಿಕೆಯಲ್ಲಿ ಬಳಸುವುದುಂಟು. ಇದರ ಸೇವನೆ ಹೆಚ್ಚಿನ ಜನರಿಗೆ ವಿಶಕಾರಿ.
ಮೂರನೆಯ ಹಾಗೂ ಕೊನೆ ಹಂತ
ಇದರ ಅವದಿಯೂ ಸಹ ಮೇಲಿನ ಎರಡು ಹಂತಗಳಂತೆ 1000 ದಿನಗಳದ್ದು. ಕುಳಿತುಕೊಳ್ಳುವಶ್ಟು ದೊಡ್ಡದಾದ ಕಲ್ಲಿನ ಕೋಣೆಯಲ್ಲಿ ಮೇಲಿನ ಎರಡು ಹಂತಗಳನ್ನು ದಾಟಿದವರು ಪದ್ಮಾಸನದ ಶೈಲಿಯಲ್ಲಿ ಕೂರಬೇಕು. ಬಳಿಕ ಕೋಣೆಯನ್ನು ಬದ್ರಪಡಿಸಿ ಉಸಿರಾಟಕ್ಕಾಗಿ ನಳಿಕೆಯ ಮೂಲಕ ಗಾಳಿಯನ್ನು ಹರಿಸಲಾಗುವುದು. ಒಳಗಿರುವಾತ ದಿನಕ್ಕೊಮ್ಮೆ ಅಲ್ಲೇ ತೂಗುಹಾಕಿರುವ ಗಂಟೆಯ ಶಬ್ದ ಮಾಡಬೇಕು. ಉಸಿರಾಟ ಇದೆಯೆಂದು ಗಂಟೆಯ ಶಬ್ದದ ಆದಾರದ ಮೇಲೆ ಅರಿತು ಗಾಳಿಯ ಪೂರೈಕೆ ಚಾಲನೆಯಲ್ಲಿರುತ್ತೆ. ಗಂಟೆಯ ಶಬ್ದ ನಿಂತದಿನ ಗಾಳಿಯ ಪೂರೈಕೆ ಸ್ತಗಿತಗೊಳಿಸಿ ಸಮಾದಿಯನ್ನು ಪೂರ‍್ಣ ಮುಚ್ಚಲಾಗುವುದು. ಈ ಅವದಿಯಲ್ಲಿ ಆಹಾರ ನಿಶಿದ್ದ.
ಮೂರನೇ ಹಂತದ 1000 ದಿನ ಪೂರೈಸಿದ ನಂತರ ಸಮಾದಿಯನ್ನು ತೆರೆದಾಗ ಮಮ್ಮಿಗಳಾಗುವ ಸ್ಪಶ್ಟ ಚಿತ್ರಣ ಹೊರ ಬೀಳುತ್ತದೆ. ದೇಹ ಕೊಳೆಯದೇ ಇದ್ದಲ್ಲಿ ಅಂತಹವರನ್ನು ಬುದ್ದನ ಶ್ರೇಣಿಗೆ ಏರಿಸಿ ಅತ್ಯಂತ ಆದರದಿಂದ ಗೌರವಿಸಲಾಗುವುದು. ವಿಪರ‍್ಯಾಸವೆಂದರೆ ಬಹಳಶ್ಟು ಸ್ವಯಂ ಮಮ್ಮಿಗಳಾಗುವ ದೇಹಗಳು ಕೊಳೆತು ನಾರುವುದು ಸಾಮಾನ್ಯ. ಅಂತಹವರನ್ನು ಮತ್ತದೇ ಗೋರಿಗಳಲ್ಲಿ ಹಾಗೆಯೇ ಸಮಾದಿ ಮಾಡಲಾಗುತ್ತದೆ. ಇದರಲ್ಲಿ ಬಾಗವಹಿಸಿದ ಪ್ರತಿಯೊಬ್ಬರ ಶ್ರಮ ನಿಜಕ್ಕೂ ಶ್ಲಾಗನೀಯ. ಪ್ರತಿಯೊಂದು ಹಂತವನ್ನೂ ಚಾಚೂ ತಪ್ಪದೆ, ಅತ್ಯಂತ ಶ್ರದ್ದೆಯಿಂದ, ಪ್ರಾಮಾಣಿಕತೆಯಿಂದ, ಮಾನಸಿಕ ಸ್ತಿರತೆಯಿಂದ ದಾಟಿಬಂದ ಅವರುಗಳ ಅದ್ಬುತ ಸಹಿಶ್ಣುತೆಗೆ ತಕ್ಕ ಗೌರವವನ್ನು ಸಲ್ಲಿಸಲಾಗುತ್ತಾದರೂ ಕೊಳೆತ ದೇಹದವರನ್ನು ಬುದ್ದನ ಶ್ರೇಣಿಗೆ ಏರಿಸಲು ಪರಿಗಣಿಸಲ್ಪಡುವುದಿಲ್ಲ.
ಯಮಗಾಟದ ಮೂರನೆ ಪವಿತ್ರ ಪರ‍್ವತ ಯುಡೊನೋದಲ್ಲಿ ಚಿಲುಮೆಯೊಂದಿದೆ. ಈ ಚಿಲುಮೆಯಲ್ಲಿನ ಕನಿಜ ನಿಕ್ಶೇಪಗಳಿಂದ ಚಿಲುಮೆಯ ನೀರು ವೈದ್ಯಕೀಯ ಮೌಲ್ಯ ಹೊಂದಿದೆ ಎಂದು ಸಾಬೀತಾಗಿದೆ. ಈ ಹಿಂದೆ ಮಮ್ಮಿಗಳಾದವರು ಸ್ವಯಂ ಮಮ್ಮಿಗಳಾಗುವ ಅವದಿಯಲ್ಲಿ ಈ ಚಿಲುಮೆಯ ನೀರನ್ನು ತರಿಸಿ ಸೇವಿಸಿರಬೇಕು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಈ ಚಿಲುಮೆಯ ನೀರನ್ನು ಮತ್ತು ನಿಕ್ಶೇಪವನ್ನು ವಿಶ್ಲೇಶಿಸಿದಾಗ ಅದರಲ್ಲಿ ಮಾನವನ ಜೀವ ಹಾನಿಗೆ ಸಾಲುವಶ್ಟು ಆರ‍್ಸೆನಿಕ್ ಇರುವುದು ಪತ್ತೆಯಾಗಿದೆ. ಆರ‍್ಸೆನಿಕ್ ಒಮ್ಮೆ ದೇಹವನ್ನು ಸೇರಿದರೆ ಮತ್ತೆ ಹೊರಹಾಕಲು ಸಾದ್ಯವಿಲ್ಲ, ದೇಹದಲ್ಲೇ ಉಳಿಯುತ್ತದೆ. ದೇಹ ಕೊಳೆಯಲು ಕಾರಣವಾಗುವ ಸೂಕ್ಶ್ಮ ಜೀವಿಗಳನ್ನೂ ಮತ್ತು ಬ್ಯಾಕ್ಟೀರಿಯಾಗಳನ್ನೂ ಆರ‍್ಸೆನಿಕ್ ವಿಶವಾಗಿ ಕೊಂದು ದೇಹವನ್ನು ಕಾಪಾಡುತ್ತದೆ. ಇದು ಎಶ್ಟು ನಿಜವೋ ಎಶ್ಟು ಸುಳ್ಳೋ ತಿಳಿದವರಿಲ್ಲ. ಯಮಗಟಾ ಮತ್ತು ವಕಯಾಮಾ ನಡುವಿನ ಅಂತರ ಸಹ ಇದಕ್ಕೆ ವ್ಯತಿರಿಕ್ತವಾಗಿದೆ. ಯಮಗಾಟದಲ್ಲಿನ ಪವಿತ್ರ ಚಿಲುಮೆಯ ನೀರು ಸೇವನೆ ಶಿಂಗನ್ ಪಂತದ ಸ್ತಾಪಕ ಕೂಕೈ, ಸ್ವಯಂ ಮಮ್ಮಿಗಳಾಗುವಿಕೆಗೆ ಹಾಕಿಕೊಟ್ಟ ಪ್ರಕ್ರಿಯೆಯ ಒಂದು ಬಾಗವೋ ಅಲ್ಲವೋ ಎಂಬುದರ ಬಗ್ಗೆ ಯಾವುದೇ ಸ್ಪಶ್ಟತೆ ಇಲ್ಲ.
ಯಮಗಾಟ ಆಡಳಿತ ಪ್ರದೇಶದ ಚುರೆಂಜಿ ದೇವಾಲಯದಲ್ಲಿರುವ ಟೆಟ್ಸುಮಾನ್-ಕೈ, ಕೈಕೋಜಿ ದೇವಾಲಯದಲ್ಲಿರುವ ಚೂ-ಕೈ ಮತ್ತು ಎನ್ಮೌ-ಕೈ, ದೈನಿಚಿ ಬೊ ದೇವಾಲಯದಲ್ಲಿರುವ ಶಿನ್ಯೋ-ಕೈ, ನಿಗಿಟಾ ಆಡಳಿತ ಪ್ರದೇಶದ ಮುರಕಾಮಿಯ ಕನ್ನೋಂಜಿ ದೇವಾಲಯದಲ್ಲಿರುವ ಬುಕ್-ಕೈ/ಪುಟ್ಸು-ಕೈ ಸ್ವಯಂ ಮಮ್ಮಿಗಳಾಗಿ ಬುದ್ದನ ಮಟ್ಟಕ್ಕೇರಿದ ಶಿಂಗನ್ ಪಂತದ ಪ್ರಮುಕರು.
(ಮಾಹಿತಿ ಸೆಲೆ: agorajournal.org, jref.com, io9.gizmodo.com, atlasobscura.com)
(ಚಿತ್ರ ಸೆಲೆ: traveldreamscapes, damninteresting.com)
ಇತ್ತೀಚಿನ ಅನಿಸಿಕೆಗಳು