ಮಕ್ಕಳಿಗಾಗಿ ಚುಟುಕುಗಳು

– ಚಂದ್ರಗೌಡ ಕುಲಕರ‍್ಣಿ.

*** ಮುಗಿಲು ***
ನೀಲಿ ನೀಲಿಯ ಕಪ್ಪು ಬಣ್ಣದ
ಅಗಲ-ಅತಿಯಗಲದ ಮುಗಿಲು
ತುಂಟ ಚಂದ್ರಮ ಚುಕ್ಕಿ ಬಳಗವು
ಆಟ ಆಡುವ ಬಯಲು

*** ನಕ್ಶತ್ರ ***
ದೂರದೂರಿನ ಆಗಸದಲ್ಲಿಯ
ಮಿನುಗುವ ಚುಕ್ಕೆಯ ಹಿಂಡು
ತಿಂಗಳ ಚಂದ್ರನಿಗೆ ಆಡಲಿ ಎಂದು
ದೇವರು ಕೊಟ್ಟ ಚೆಂಡು

*** ಚಂದ್ರ ***
ಆಟವಾಡಲು ಅಂಬೆಗಾಲಿನ
ತಪ್ಪು ಹೆಜ್ಜೆಯ ಪಾಪ
ದೇವದೇವನು ಹಚ್ಚಿಟ್ಟಿರುವ
ಹೊನಲು ಬೆಳಕಿನ ದೀಪ

*** ಸೂರ‍್ಯ ***
ವಿಶ್ವಮಾತೆ ಬೂಮಿಗೆ ಕೊಟ್ಟ
ಸುಂದರ ಪುಟ್ಟ ಪಾಪ
ಎಣ್ಣೆ ಬತ್ತಿ ಇಲ್ಲದೆ ಪ್ರತಿಕ್ಶಣ
ಬೆಳಗುತ್ತಿರುವ ದೀಪ

*** ಮಿಂಚು ***
ಕಡ್ ಕಡ್ ಸಿಡಿಲಿನ ಆರ‍್ಬಟದೊಂದಿಗೆ
ಪಳ್ಳನೆ ಹೊಳೆಯುವ ಮಿಂಚು
ಬೂರಮೆ ಪೋಟೊ ತೆಗೆಯಲು ತುಂಟನು
ನಡೆಸಿದ ಪ್ಲ್ಯಾಶಿನ ಸಂಚು

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: