ಮಪ್ತಿ – ನಾಯಕರು ಇಬ್ಬರಲ್ಲ, ಐವರು!

ಶಂಕರ್ ಲಿಂಗೇಶ್ ತೊಗಲೇರ್.

 

ಕರ‍್ತವ್ಯ ರೂಪದಲ್ಲಿರೋ ಒಬ್ಬ ರಾಕ್ಶಸ , ರಾಕ್ಶಸ ರೂಪದಲ್ಲಿರೋ ಒಂದು ಕರ‍್ತವ್ಯ.

ಇದೊಂದು ಡಯಲಾಗ್ ಮಪ್ತಿ ಚಿತ್ರವನ್ನ ವಿವರಿಸುತ್ತದೆ. ಇಡೀ ಕತೆ ನಿಂತಿರುವುದೇ ಈ ಒಂದು ಸಾಲಿನ ಮೇಲೆ. ಇಡೀ ಕತೆಯನ್ನ ಇದೊಂದು ಮಾತಿನಲ್ಲಿ ಅಡಗಿಸಿಟ್ಟಿರುವ ನಿರ‍್ದೇಶಕ ನರ‍್ತನ್ ರನ್ನು ಮೆಚ್ಚಲೇಬೇಕು!

ಸಿ ಬಿ ಐ ಕಮಿಶನರ್  ಒಬ್ಬ ವ್ಯಕ್ತಿಯ ಬಗ್ಗೆ, ತಲೆಕೆಡಿಸಿಕೊಂಡು ಮಾಡುತ್ತಿದ್ದ ತನಿಕೆ ಪಲಕಾರಿಯಾಗದೆ ಅಲ್ಲಿಗೊಬ್ಬ ಅದಿಕಾರಿಯನ್ನ ಮಪ್ತಿಯಲ್ಲಿ ಕಳಿಸಬೇಕು ಎನ್ನುವ ತೀರ‍್ಮಾನವಾಗುತ್ತದೆ. ಆಗ ಮಪ್ತಿಯಲ್ಲಿ ಹೋಗೋದೇ ಒಂಟಿ ಸಲಗ ಅಲಿಯಾಸ್ ಗಣ ಅಲಿಯಾಸ್ ಶ್ರೀ ಮುರಳಿ. ಗಣ ಬೇಟೆ ಆಡೋಕೆ ಹೊರಡೋದೇ ಬೈರತಿ ರಣಗಲ್ಲು ಅನ್ನೋ ರಾಕ್ಶಸನನ್ನು. ಬೈರತಿ ರಣಗಲ್ಲನ್ನುತಲುಪೋಕೆ ಏಳು ಸುತ್ತಿನ ಕೋಟೆಗಳನ್ನು ಬೇದಿಸಬೇಕಾಗುತ್ತದೆ. ಅದೆಲ್ಲವನ್ನೂ ದಾಟಿ ಬೈರತಿ ರಣಗಲ್ಲನ್ನು ಗಣ ಬೇಟಿ ಮಾಡ್ತಾನೋ ಇಲ್ವೋ ಅನ್ನೊದೇ ಮೊದಲಾರ‍್ದ.

ಗಣ ನ ಸೈಲೆಂಟ್ ಲುಕ್, ಅಲ್ಲಲ್ಲಿ ಅಪ್ಪಳಿಸುವ ಮಾಸ್ ಡಯಲಾಗ್ಸ್, ಕೆಲವೊಂದು ಅದ್ಬುತ ಅನ್ನಿಸುವ ಸ್ಟಂಟ್ ಗಳೆಲ್ಲದರ ಜೊತೆಗೆ ನಮ್ಮೊಳಗೆ ಉಳಿಯುವ ಕುತೂಹಲವೆಂದ್ರೆ – ಬೈರತಿ ರಣಗಲ್ಲನ್ನು ನೋಡುವುದು. ನನ್ನ ಪ್ರಕಾರ, ಓಂ ನಂತರ ಶಿವಣ್ಣನ ರೋಚಕ ಎಂಟ್ರಿ ಅಂದ್ರೆ – ಈ ಚಿತ್ರದಲ್ಲಿ ಬೈರತಿ ರಣಗಲ್ಲಾಗಿ! ಮುಂದಿನ ದ್ವಿತೀಯಾರ‍್ದ ಪೂರ‍್ತಿ ಬೈರತಿ ರಣಗಲ್ಲು ಅನ್ನೋ ರಾಕ್ಶಸ ರೂಪದ ಕರ‍್ತವ್ಯವನ್ನು ಸುತ್ತುವರಿದಿರುವುದು. ಆಮೇಲೆ ಗಣ, ರಣಗಲ್ಲು ಇಬ್ಬರ ನಡುವೆ ನಡೆಯುವ ಯುದ್ದ, ಮುಂದೆ ಏನಾಗತ್ತೆ ಅನ್ನೋದನ್ನ ತೆರೆಯ ಮೇಲೆಯೇ ನೋಡಿ ಆನಂದಿಸಬೇಕು.

ಮಪ್ತಿ ಇದು ಮಲ್ಟಿ ಸ್ಟಾರರ್ ಸಿನಿಮಾ. ಇದರಲ್ಲಿ ನಾಯಕರು ಇಬ್ಬರಲ್ಲ, ಐದು ಮಂದಿ. ಇಬ್ಬರು ತೆರೆಯ ಮೇಲೆ ಕಾಣುವ ನಾಯಕರಾದರೆ ಇನ್ನೂ ಮೂವರು ತೆರೆ ಹಿಂದಿರುವ ಹೀರೋಗಳು. ಒಬ್ಬರು ನಿರ‍್ದೇಶಕ ನರ‍್ತನ್, ಎರಡನೆಯವರು ಕ್ಯಾಮರಾ ಮ್ಯಾನ್ ನವೀನ್ ಕುಮಾರ್ ಮತ್ತು ಮೂರನೆಯವರು ಹಿನ್ನೆಲೆ ಸಂಗೀತ ನೀಡಿರುವ ರವಿ ಬಸ್ರೂರ್. ಪ್ರತಿಯೊಂದು ಪ್ರೇಮ್ ಅನ್ನು ನೆರಳು ಬೆಳಕಿನ ಚಾಯಾಚಿತ್ರದಂತೆ ಕಟ್ಟಿಕೊಟ್ಟಿರುವ ನವೀನ್ ರ ಕ್ಯಾಮರಾ ಚಳಕ ಅದ್ಬುತವಾಗಿದೆ. ಇನ್ನು ರವಿ ಬಸ್ರೂರ್ ಅವರು, ಈ ಹಿಂದೆ ಕರ‍್ವ ಚಿತ್ರಕ್ಕೂ ಅದ್ಬುತವಾದ ಹಿನ್ನೆಲೆ ಸಂಗೀತ ನೀಡಿ ತೆರೆಯ ಹಿಂದೆ ಹೀರೋ ಆದವರು. ಇಲ್ಲೂ ಅವರು ನಾಯಕನ ಪಟ್ಟವನ್ನ ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ, ಹಾಗಿದೆ ಅವರು ನೀಡಿರುವ ಹಿನ್ನೆಲೆ ಸಂಗೀತ.

ಇವೆಲ್ಲವನ್ನೂ ಒಟ್ಟುಮಾಡಿ ತಮ್ಮ ಕಲ್ಪನೆಯನ್ನ ತೆರೆಯ ಮೇಲೆ ತಂದ ನರ‍್ತನ್ ರ ನಿರ‍್ದೇಶನವನ್ನು ಮೆಚ್ಚದಿರಲಾಗುವುದಿಲ್ಲ. ಚಿತ್ರ ಕೊಂಚ ಎಳೆದಂತೆ ಅನಿಸುವುದು ನಾಯಕಿಯ ಎಂಟ್ರಿಯಲ್ಲಿ. ಹಿಂದೆ ರತಾವರದ ತಪ್ಪು ಇಲ್ಲಿ ಆಗಲಿಲ್ಲ ಯಾಕಂದ್ರೆ ರಣಗಲ್ಲು ಅದೆಲ್ಲವನ್ನೂ ಮುಚ್ಚಿ ಹಾಕುವನು. ಪಕ್ಕಾ ಮಾಸ್ ಚಿತ್ರ ಹೇಗಿರಬೇಕು ಹಾಗಿದೆ ಮಪ್ತಿ. ಮಾಸ್ ಸಿನಿಮಾ ಪ್ರಿಯರು ಕಂಡಿತವಾಗಿಯೂ ಇಶ್ಟ ಪಡುವ ಚಿತ್ರವಿದು.

( ಚಿತ್ರ ಸೆಲೆ:  filmibeat.com )

ನಿಮಗೆ ಹಿಡಿಸಬಹುದಾದ ಬರಹಗಳು

3 Responses

  1. ಶಿವಶಂಕರ ಕಡದಿನ್ನಿ says:

    ನಿಜಕು ಇದು ಅದ್ಭುತವಾದ ಚಿತ್ರವೆಂದು ಹೇಳಬಹುದು

  2. ನಾನು ನೀನು says:

    ಒಂದು ಒಳ್ಳೆ ಚಿತ್ರ… ಹಾಸ್ಯದ ಸನ್ನಿವೇಶಗಳು ಇಲ್ಲದಿದ್ದರೆ ಇನ್ನೂ ಚೆನ್ನಾಗಿ ಇರ್ತಿತ್ತು

  3. ಪ್ರದೀಪ್ ಬೆಳ್ಳಾವಿ says:

    ಅದ್ಭುತವಾದ ಚಿತ್ರ. ಶಿವಣ್ಣ ಅವರ ಅತ್ಯುತ್ತಮ ಚಿತ್ರಗಳಲ್ಲೊಂದು. ಮುರಳಿ ಪೈಪೋಟಿಗೆ ಬಿದ್ದು ನಟಿಸಿದ್ದಾರೆ.

ನಾನು ನೀನು ಗೆ ಅನಿಸಿಕೆ ನೀಡಿ Cancel reply