ಚಚ್ಚೌಕದ ಮರ – ಬಿಡಿಸಲಾಗದ ಪ್ರಕ್ರುತಿಯ ಒಗಟು

– ಕೆ.ವಿ.ಶಶಿದರ.

ಪ್ರಕ್ರುತಿಯಲ್ಲಿ ಅನೇಕ ವೈಶಿಶ್ಟ್ಯಗಳಿವೆ. ಆದುನಿಕ ವಿಜ್ನಾನ ಹಲವಾರು ರಹಸ್ಯಗಳನ್ನು ಬೇದಿಸುವಲ್ಲಿ ವಿಪಲವಾಗಿದೆ. ಅಂತಹ ರಹಸ್ಯಗಳಲ್ಲಿ ಒಂದು ಪನಾಮಾದ ಸಣ್ಣ ಪಟ್ಟಣ ಎಲ್ ವ್ಯಾಲೆ ಡಿ ಆಂಟನ್‍ನಲ್ಲಿರುವ ವಿಚಿತ್ರ ಹಾಗೂ ವಿಶಿಶ್ಟವಾದ ಹತ್ತಿಯ ಮರ. ಈ ಮರದ ಕಾಂಡ ಚಚ್ಚೌಕವಾಗಿದೆ!

ಎಲ್ ವ್ಯಾಲೆ ಡಿ ಆಂಟನ್ ಪಟ್ಟಣವಿರುವುದು ಸುಪ್ತ ಜ್ವಾಲಾಮುಕಿಯಿಂದ ಸ್ರುಶ್ಟಿಯಾದ ಕಣಿವೆಯಲ್ಲಿ. ಇದು ವಿಶ್ವದಲ್ಲೇ ಸುಪ್ತ ಜ್ವಾಲಾಮುಕಿಯ ಮೇಲಿರುವ ಎರಡನೆ ಅತಿ ದೊಡ್ಡ ಪಟ್ಟಣ. ಅಂದಾಜು ಹತ್ತು ಸಾವಿರ ವರ‍್ಶಗಳ ಕಾಲದಿಂದ ಜ್ವಾಲಾಮುಕಿ ಸುಪ್ತವಾಗಿದೆ. ಈ ಹಿಂದೆ ಜ್ವಾಲಾಮುಕಿ ಸಿಡಿದ ಸಮಯದಲ್ಲಿ 18 ಚದರ ಕಿಲೋಮೀಟರ್ ವಿಸ್ತಾರದ ಕಣಿವೆ ರೂಪುಗೊಂಡಿದೆ. ಆ ಕಣಿವೆಯಲ್ಲಿ ಈಗಿನ ಪಟ್ಟಣವಿದೆ.

ಈ ಕಣಿವೆ ವಿಶ್ವದಲ್ಲಿ ವಿಶೇಶವಾಗಿರುವುದು ಇಲ್ಲಿ ಬೆಳೆಯುತ್ತಿರುವ ವಿಶಿಶ್ಟವಾದ ಚಚ್ಚೌಕ ಹತ್ತಿಮರದಿಂದ. ಜ್ವಾಲಾಮುಕಿಯ ಮಣ್ಣಿನಲ್ಲಿ ಬೆಳೆದಿರುವ ಈ ಹತ್ತಿಮರ ಪ್ರವಾಸಿಗರನ್ನು ಹಾಗೂ ವಿಜ್ನಾನಿಗಳನ್ನು ಅಚ್ಚರಿಗೊಳಿಸಿದೆ. ಮರಗಳ ಕಾಂಡ ಏಕೆ ಚಚ್ಚೌಕವಾಗಿದೆ? ಏಕೆ ನೇರಕೋನದಲ್ಲಿದೆ? ಸಾಮಾನ್ಯ ಮರದಂತಿಲ್ಲ ಎಂಬ ನೂರಾರು ಪ್ರಶ್ನೆಗಳ ಆಗರವಾಗಿದೆ ಈ ಕುಳಿ. ಈ ವೈಚಿತ್ರ್ಯದ ಬಗ್ಗೆ ಯಾವುದೇ ವಿವರಣೆ ನೀಡಲು ಯಾರಿಂದಲೂ ಸಾದ್ಯವಾಗಿಲ್ಲ.

ಪ್ರಕ್ರುತಿಯ ಈ ಬಗೆಯ ವಿಚಿತ್ರ ಪ್ರಪಂಚದ ಬೇರೆಲ್ಲಿಯೂ ಸಂಬವಿಸಿಲ್ಲ ಎಂದು ನಂಬಲಾಗಿದೆ. ಪ್ಲೋರಿಡಾ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ತಜ್ನರು ಇದರ ಬಗ್ಗೆ ಸಂಶೋದನೆ ನಡೆಸಿದರು. ಮೊದಲೆನೆಯದಾಗಿ ಚಚ್ಚೌಕದ ಮರದ ಮೊಳಕೆಗಳನ್ನು ಬೇರೆಡೆ ಬೆಳಸಲು ಪ್ರಯತ್ನಿಸಿದರು. ಆದರೆ ಅವರಿಗೆ ಆಶ್ಚರ‍್ಯ ಕಾದಿತ್ತು! ಆ ಪ್ರದೇಶದಲ್ಲಿ ಬೆಳೆದಿದ್ದ ಬೇರೆಲ್ಲಾ ಮರಗಳಂತೆ ಈ ಚಚ್ಚೌಕದ ಹತ್ತಿಮರವೂ ದುಂಡಾಕಾರವಾಗಿ ಬೆಳೆದಿತ್ತು. ಹತ್ತಿ ಮರಗಳು ಎಲ್ ವ್ಯಾಲೆ ಡಿ ಆಂಟನ್‍ನಲ್ಲಿ ಚಚ್ಚೌಕವಾಗಿ ಬೆಳೆಯಲು ಸಸ್ಯಶಾಸ್ತ್ರಕ್ಕೆ ಸಂಬಂದಿಸಿದ ಏರುಪೇರು ಕಾರಣವಲ್ಲ ಎಂಬ ವಿಚಾರ ಇದರಿಂದ ಕಾತ್ರಿಯಾಯಿತು. ಹಾಗಾದರೆ ಮತ್ತಾವುದು ಕಾರಣ? ಉಳಿದಿದ್ದು ಒಂದೇ. ಮರ ಬೆಳೆಯುತ್ತಿರುವ ಕಣಿವೆಯ ನೆಲದ ಮಹಿಮೆ.

ಸಾಮಾನ್ಯವಾಗಿ ಮರಗಳು ಹೆಚ್ಚು ಕಾಲ ಬಾಳುತ್ತವೆ. ಅವುಗಳ ಕಾಲಾವದಿಯನ್ನು ಅರಿಯಲು ಸಸ್ಯಶಾಸ್ತ್ರಜ್ನರು ಕಾಂಡವನ್ನು ಕತ್ತರಿಸಿ ಅದರಲ್ಲಿನ ‘ಉಂಗುರ’ಗಳನ್ನು ಲೆಕ್ಕಹಾಕಿ ಈ ಆದಾರದ ಮೇಲೆ ಮರದ ವಯಸ್ಸನ್ನು ತೀರ‍್ಮಾನಿಸುತ್ತಾರೆ. ಸಾಮಾನ್ಯವಾಗಿ ಬಹುತೇಕ ಎಲ್ಲಾ ಮರದಲ್ಲಿನ ‘ಉಂಗುರ’ ದುಂಡಾಕಾರವಾಗಿರುತ್ತೆ. ಆದರೆ ಈ ಹತ್ತಿಯ ಮರದ ಕಾಂಡವನ್ನು ಕತ್ತರಿಸಿದಾಗ ಕಾಂಡದಂತೆ ಇದರಲ್ಲಿನ ‘ಉಂಗುರ’ಗಳೂ ಚಚ್ಚೌಕವಾಗಿತ್ತು. ಬೇರಿನಂತೆ ಮರ ಹೇಗೋ, ಕಾಂಡದಂತೆ ‘ಉಂಗುರ’ಗಳೂ ಹಾಗೆಯೇ ಇರಬಹುದಲ್ಲವೆ? ಹಾಗಾಗಿ, ಇದಿನ್ನು ಬಿಡಿಸಲಾರದಂತಹ ನಿಸರ‍್ಗದ ಒಗಟಾಗಿ ಉಳಿದಿದೆ.

(ಮಾಹಿತಿ ಸೆಲೆ: atlasobscura.com, odditycentral.commysteriouswritings.com)
(ಚಿತ್ರ ಸೆಲೆ:  diytravelhq.com, )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.