ಪುಟ್ಟ ಚರ‍್ಚಿನ ಮೇಲೆ ದೊಡ್ಡದೊಡ್ಡ ಮರಗಳು!

– ಕೆ.ವಿ.ಶಶಿದರ.

ಸೇಂಟ್ ತಿಯೋಡೋರ

ಯಾವುದೇ ಕಟ್ಟಡವನ್ನು ಕಟ್ಟುವಾಗ ಮೊದಲು ಅಡಿಪಾಯವನ್ನು ಹಾಕುತ್ತಾರೆ. ಅಡಿಪಾಯ ಬದ್ರವಾಗಿದ್ದರೆ ಕಟ್ಟಡ ಮಜಬೂತಾಗಿ ಹೆಚ್ಚುಕಾಲ ಇರುತ್ತದೆ ಎಂಬುದು ಸಾಮಾನ್ಯ ತಿಳಿವು. ಸಸ್ಯಶಾಸ್ತ್ರಕ್ಕೂ ಇದು ಅನ್ವಯಿಸುತ್ತದೆ. ಮರಗಿಡಗಳ ಬೇರು ಆಳವಾಗಿ ಬೂಮಿಯ ಒಳಹೊಕ್ಕಲ್ಲಿ ವಾತಾವರಣದ ಏರುಪೇರನ್ನೆಲ್ಲಾ ಎದುರಿಸುತ್ತಾ ಮರಗಿಡಗಳು ಸುರಕ್ಶಿತವಾಗಿ ಹೆಚ್ಚುಕಾಲ ಉಳಿಯುತ್ತವೆ. ಇದು ಸತ್ಯವೂ ಹೌದು.

ವಿಜ್ನಾನಕ್ಕೆ ಸಡ್ಡು ಹೊಡೆಯುವಂತೆ ನೂರಾರು ವರ‍್ಶಗಳಿಂದ ವಿರಾಜಮಾನವಾಗಿರುವ ಸೇಂಟ್ ತಿಯೋಡೋರ ಚರ‍್ಚಿನ ಮರ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಗ್ರೀಸ್‍ನ ಸೆಂಟ್ರಲ್ ಪೆಲೋಪೊನೆಸೆ ಪ್ರಾಂತದಲ್ಲಿರುವ ವಾಸ್ತಾ ಹಳ್ಳಿಯ ಗಲ್ಲಿಯಲ್ಲಿರುವ ಸೇಂಟ್ ತಿಯೋಡೋರ ಒಂದು ಪುಟ್ಟ ಚರ‍್ಚು. 11ನೇ ಅತವಾ 12ನೇ ಶತಮಾನದ ಈ ಪುಟ್ಟ ಚರ‍್ಚು ನಿಸ್ಸಂಶಯವಾಗಿ ಪ್ರಕ್ರುತಿಯ ಪವಾಡವಾಗಿದೆ. ಆಸ್ತಿಕರಿಗೆ ದೈವಶಕ್ತಿಯ ಸಂಕೇತವಾಗಿದೆ. ಇದು ಸಣ್ಣ ಕಟ್ಟಡವಾದರೂ ಇದರ ಗೋಡೆಗಳಿಂದ ಮರದ ದೊಡ್ಡ ದೊಡ್ಡ ಕೊಂಬೆಗಳು ಹೊರಹೊಮ್ಮಿವೆ. ಈ ಮರದ ಬೇರುಗಳು ಗೋಡೆಯಲ್ಲಿನ ಬಿರುಕುಗಳಲ್ಲಿ ಹಬ್ಬಿದ್ದು ಅಲ್ಲಿಂದ ನೆಲವನ್ನು ಸೇರಿವೆ. ಗೋಡೆಯ ಒಳಬದಿಯಲ್ಲಾಗಲಿ ಹೊರಬದಿಯಲ್ಲಾಗಲಿ ಬೇರಿನ ಕುರುಹೇ ಇಲ್ಲ. ನೆಲದಲ್ಲಿ ಬಲವಾಗಿ ಇಳಿದಿರುವ ಸೂಚನೆಗಳಿಲ್ಲ. ಮರ ತನ್ನ ಉಳಿವಿಗೆ ಕಟ್ಟಡದ ಅಡಿಪಾಯದಲ್ಲಿನ ಒರತೆಯ ನೀರನ್ನೇ ಅವಲಂಬಿಸಿರುವುದು ಇದರ ವಿಶೇಶ.

ಮೊದಲ ಬಾರಿ ಇಲ್ಲಿಗೆ ಬಂದವರಿಗೆ ಪುಟ್ಟ ಚರ‍್ಚಿನ ಒಳಹೋಗಲು ಜೀವ ಬಯ ಎದುರಾಗುವುದು ಸಹಜ. ಯಾವ ಕ್ಶಣದಲ್ಲಾದರೂ ಕಟ್ಟಡ ಕುಸಿಯಬಹುದು ಎಂಬ ಅಂಜಿಕೆ ಅವರಲ್ಲಿ ಮೂಡುವುದರಲ್ಲಿ ಸಂದೇಹವೇ ಇಲ್ಲ. ಪುಟ್ಟ ಕಟ್ಟಡದ ಮೇಲೆ ದೈತ್ಯ ಮರ ನಿಂತಿರುವ ದ್ರುಶ್ಯ ಎದೆ ನಡುಗಿಸುತ್ತದೆ.

2003ರಲ್ಲಿ ಗ್ರೀಸ್‍ನಲ್ಲಿ ಆಯೋಜನೆಗೊಂಡಿದ್ದ ಆರ‍್ಕಿಯೋಮೆಟ್ರಿಯ 4ನೇ ವಿಚಾರ ಗೋಶ್ಟಿಯಲ್ಲಿ ಸೇಂಟ್ ತಿಯೋಡೋರದ ಬೌಗೋಳಿಕ ತನಿಕೆಯ ವಿವರಗಳನ್ನು ಪ್ರಸ್ತುತ ಪಡಿಸಲಾಯಿತು. ಆಶ್ಚರ‍್ಯಕರ ವಿಶಯವೆಂದರೆ ಗೋಡೆಯ ಬಿರುಕುಗಳಲ್ಲಿ ಸೇರಿರುವ ಬೇರುಗಳ ಬೆಳವಣಿಗೆಯ ಒತ್ತಡದಿಂದ ಕಟ್ಟಡ ಎಂದೋ ಕುಸಿದು ಕುರುಹೇ ಇಲ್ಲದಂತೆ ನೆಲಸಮವಾಗಬೇಕಿತ್ತು. ಈ ಎಲ್ಲಾ ಒತ್ತಡಗಳ ನಡುವೆಯೂ ನೂರಾರು ವರ‍್ಶಗಳ ಕಾಲ ಕಟ್ಟಡಕ್ಕಾಗಲಿ ಮರಕ್ಕಾಗಲಿ ಹಾನಿಯಾಗದಂತೆ ಎರಡೂ ಉಳಿದಿರುವುದೇ ಇಲ್ಲಿನ ಒಂದು ದೊಡ್ಡ ವಿಸ್ಮಯ. ಇದರ ಹಿಂದಿರುವ ಪವಾಡವಾದರೂ ಯಾವುದು? ದೈವಿಕವೇ? ಅತವಾ ನೈಸರ‍್ಗಿಕವೇ?

ಸ್ತಳೀಯ ದಂತಕತೆಯ ಪ್ರಕಾರ, ತಿಯೋಡೋರ ಎಂಬಾಕೆ 10ನೇ ಶತಮಾನದಲ್ಲಿ ವಾಸ್ತ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ಒಮ್ಮೆ ಈ ಪ್ರದೇಶವನ್ನು ಡಕಾಯಿತರು ದಾಳಿ ಮಾಡಿದಾಗ ಅವರ ವಿರುದ್ದ ಪ್ರತಿದಾಳಿ ನಡೆಸಲು ತಿಯೋಡೋರ ಗಂಡಸಿನ ವೇಶ ದರಿಸಿ ಹೋರಾಟಕ್ಕೆ ದುಮುಕಿದಳು. ನಡೆದ ಬೀಕರ ಕಾಳಗದಲ್ಲಿ ಆಕೆ ಮಾರಣಾಂತಿಕವಾಗಿ ಗಾಯಗೊಂಡಳು. ಸಾಯುವ ಮುನ್ನ ಆಕೆ ದೇವರನ್ನು ಪ್ರಾರ‍್ತಿಸಿ ತನ್ನ ದೇಹವನ್ನು ಒಂದು ಚರ‍್ಚ್ ಆಗಿಯೂ, ತನ್ನ ಕೂದಲನ್ನು ಕಾಡಾಗಿಯೂ ಹಾಗೂ ತನ್ನ ರಕ್ತ ನೀರಾಗಿ ಮರಗಳನ್ನು ಪೊರೆಯುವಂತೆ ಬೇಡಿದಳು. ದೇವರ ಅನುಗ್ರಹದಿಂದಾದುದೇ ಈ ಚಾಪೆಲ್ ಎನ್ನುತ್ತಾರೆ ಸುತ್ತಲಿನವರು.

(ಮಾಹಿತಿ ಸೆಲೆ: atlasobscura.com, orthochristian.com, greecebyagreek.comorthodoxwiki.org)
(ಚಿತ್ರ ಸೆಲೆ: atlasobscura.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: