ಶಣ್ಮುಕಸ್ವಾಮಿ ವಚನಗಳ ಓದು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು : ಶಣ್ಮುಕಸ್ವಾಮಿ / ಶಣ್ಮುಕ ಶಿವಯೋಗಿ

ತಂದೆ : ಮಲ್ಲಶೆಟ್ಟೆಪ್ಪ

ತಾಯಿ : ದೊಡ್ಡಮಾಂಬೆ

ಗುರು : ಅಕಂಡೇಶ್ವರ

ಕಾಲ : ಕ್ರಿ.ಶ.1639 ರಿಂದ 1711

ಊರು : ಜೇವರಗಿ ಪಟ್ಟಣ, ಜೇವರಗಿ ತಾಲ್ಲೂಕು, ಗುಲ್ಬರ‍್ಗ ಜಿಲ್ಲೆ.

ದೊರೆಕಿರುವ ವಚನಗಳು : 717

ವಚನಗಳ ಅಂಕಿತನಾಮ : ಅಖಂಡೇಶ್ವರಾ

=================================================

ತನ್ನ ಎಡೆಯಲ್ಲಿ ಕತ್ತೆ ಸತ್ತು ಬಿದ್ದುದನರಿಯದೆ
ಪರರೆಡೆಯಲ್ಲಿ ನೊಣವನರಸುವ ಮರುಳ ಮಾನವನಂತೆ
ತನ್ನಂಗ ಮನದ ಅವಗುಣಂಗಳ ತೊಲಗಿ ನೂಕಲರಿಯದೆ
ಅನ್ಯರಲ್ಲಿ ಅವಗುಣವ ಸಂಪಾದನೆಯ ಮಾಡುವ
ಕುನ್ನಿಗಳ ಎನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.

ತಮ್ಮ ನಡೆನುಡಿಯಲ್ಲಿನ ತಪ್ಪುಗಳನ್ನು/ನೀಚತನವನ್ನು/ಕೆಟ್ಟತನವನ್ನು ಮುಚ್ಚಿಟ್ಟುಕೊಂಡು , ಇತರರ ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದು ಮಾಡಿ ತೆಗಳುವ/ನಿಂದಿಸುವ/ಆಡಿಕೊಳ್ಳುವ ವ್ಯಕ್ತಿಗಳ ತಿಳಿಗೇಡಿತನದ ವರ‍್ತನೆಯನ್ನು ಈ ವಚನದಲ್ಲಿ ಕಟುವಾಗಿ ಟೀಕಿಸಲಾಗಿದೆ.

( ತನ್ನ=ತನಗೆ ಸೇರಿದ/ತನ್ನ ಮುಂದೆ ಇರುವ; ಎಡೆ+ಅಲ್ಲಿ; ಎಡೆ=ಊಟದ ತಟ್ಟೆ ಇಲ್ಲವೇ ಎಲೆ/ಅಗಲು/ಜಾಗ/ನೆಲೆ; ಎಡೆಯಲ್ಲಿ=ಅಗಲಿನಲ್ಲಿ/ಊಟದ ಎಲೆ/ತಟ್ಟೆಯಲ್ಲಿ; ತನ್ನ ಎಡೆಯಲ್ಲಿ=ತಾನು ಇರುವ ಜಾಗದಲ್ಲಿ/ನೆಲೆಯಲ್ಲಿ; ಕತ್ತೆ=ಒಂದು ಪ್ರಾಣಿ; ಸತ್ತು=ಸಾವನ್ನಪ್ಪಿ/ಜೀವ ಕಳೆದುಕೊಂಡು/ಮರಣ ಹೊಂದಿ; ಬಿದ್ದುದನ್+ಅರಿಯದೆ;ಬಿದ್ದುದನ್=ಬಿದ್ದಿರುವುದನ್ನು; ಅರಿ=ತಿಳಿಯುವುದು; ಅರಿಯದೆ=ತಿಳಿಯದೆ/ಗಮನಿಸದೆ;

ಪರರ+ಎಡೆ+ಅಲ್ಲಿ; ಪರ=ಬೇರೆಯ/ಇತರ/ಅನ್ಯ/ಎದುರಿನ/ಮುಂದಿನ; ಪರರ=ಬೇರೆಯವರ/ಇತರರ/ಎದುರುಗಡೆ ಇರುವವರ ; ನೊಣ+ಅನ್+ಅರಸುವ; ನೊಣ=ಹಾರುವ ರೆಕ್ಕೆಗಳಿರುವ ಒಂದು ಕೀಟ; ಅನ್=ಅನ್ನು; ಅರಸು=ಹುಡುಕು/ಬೆದಕು; ಅರಸುವ=ಹುಡುಕಿ ನೋಡುವ/ಬೆದಕಿ ಕಾಣುವ; ಮರುಳು=ತಿಳಿಗೇಡಿತನ/ಹುಚ್ಚು/ದಡ್ಡತನ ; ಮಾನವನ್+ಅಂತೆ; ಮಾನವ=ವ್ಯಕ್ತಿ ; ಅಂತೆ=ಹಾಗೆ /ಆ ಬಗೆ/ಆ ರೀತಿ ; ಮರುಳ ಮಾನವ=ತಿಳಿಗೇಡಿತನದ ವ್ಯಕ್ತಿ/ತನ್ನದೇ ಆದ ಕಲ್ಪಿತ ವಿಚಾರಗಳಲ್ಲಿ ಮಗ್ನನಾದವನು/ತನ್ನದೇ ಸರಿಯೆಂಬ ಒಳಮಿಡಿತದಿಂದ ಕೂಡಿದವನು;

ತನ್ನ ಎಡೆಯಲ್ಲಿ ಕತ್ತೆ ಸತ್ತು ಬಿದ್ದುದನರಿಯದೆ ಪರರೆಡೆಯಲ್ಲಿ ನೊಣವನರಸುವ ಮರುಳ ಮಾನವ=ವ್ಯಕ್ತಿಯ ತಿಳಿಗೇಡಿತನದ ವರ‍್ತನೆಯನ್ನು ಬಣ್ಣಿಸುವುದಕ್ಕೆ ದೊಡ್ಡ ಆಕಾರದ ಕತ್ತೆಯ ಮತ್ತು ಸಣ್ಣ ಆಕಾರದ ನೊಣದ ಗಾತ್ರವನ್ನು ಒಂದು ರೂಪಕವಾಗಿ ಬಳಸಲಾಗಿದೆ. ಇತರರ ತಪ್ಪನ್ನು ಗುರುತಿಸಿ ಅಲ್ಲಗಳೆಯುವುದಕ್ಕಿಂತ ಮೊದಲು ವ್ಯಕ್ತಿಯು ತನ್ನ ನಡೆನುಡಿಗಳಲ್ಲಿನ ತಪ್ಪನ್ನು ಅರಿತು ತಿದ್ದುಕೊಂಡು ಬಾಳಬೇಕೆಂಬ ಎಚ್ಚರಿಕೆಯನ್ನು ಹೊಂದಿರಬೇಕು. ತಾನು ಮಾಡಿದ ದೊಡ್ಡ ದೊಡ್ಡ ತಪ್ಪುಗಳ ಬಗ್ಗೆ ಯಾವುದೇ ಬಗೆಯಲ್ಲೂ ಚಿಂತಿಸದೆ/ಕೊರಗದೆ/ಆಲೋಚಿಸದೆ , ಇತರರ ಸಣ್ಣಪುಟ್ಟ ತಪ್ಪುಗಳನ್ನೇ ದೊಡ್ಡದಾಗಿ ಎತ್ತಿ ಹಿಡಿದು ಗದ್ದಲ ಎಬ್ಬಿಸುವ ವ್ಯಕ್ತಿಯು ನೀಚನಾಗಿರುತ್ತಾನೆ ಎಂಬ ಸಂಗತಿಯನ್ನು ಈ ರೂಪಕದ ಮೂಲಕ ಸೂಚಿಸಲಾಗಿದೆ;

ತನ್ನ+ಅಂಗ; ಅಂಗ=ದೇಹ/ಶರೀರ/ಮಯ್; ಮನ=ಮನಸ್ಸು/ಚಿತ್ತ ; ಅವಗುಣಂಗಳ=ಅವಗುಣಗಳನ್ನು; ಗುಣ=ನಡೆನುಡಿ/ನಡತೆ ; ಅವಗುಣ=ಕೆಟ್ಟ ನಡೆನುಡಿ; ತೊಲಗು=ತೊರೆ/ಬಿಡು/ಕಳಚು; ನೂಕಲ್+ಅರಿಯದೆ; ನೂಕು=ತಳ್ಳು/ದೂಡು/ಕಳೆ/ದಬ್ಬು; ತನ್ನಂಗ ಮನದ ಅವಗುಣಂಗಳ ತೊಲಗಿ ನೂಕಲರಿಯದೆ=ತನ್ನ ಮಯ್ ಮನಗಳಲ್ಲಿ ತುಡಿಯುತ್ತಿರುವ ಕೆಟ್ಟ ಒಳಮಿಡಿತಗಳನ್ನು ಹೋಗಲಾಡಿಸಿಕೊಂಡು/ಹತೋಟಿಯಲ್ಲಿಟ್ಟುಕೊಂಡು , ಒಳ್ಳೆಯತನದಿಂದ ಬಾಳುವ ಬಗೆಯನ್ನು ತಿಳಿಯದೆ;

ಅನ್ಯರ+ಅಲ್ಲಿ; ಅನ್ಯ=ಬೇರೆಯ/ಇತರ; ಅನ್ಯರಲ್ಲಿ=ಬೇರೆಯವರಲ್ಲಿ/ಇತರರಲ್ಲಿ/ಮತ್ತೊಬ್ಬರಲ್ಲಿ ; ಸಂಪಾದನೆ=ಗಳಿಕೆ/ಆದಾಯ; ಸಂಪಾದನೆ ಮಾಡು=ಗುರುತಿಸಿ ಪಟ್ಟಿಮಾಡು ಎಂಬ ತಿರುಳಿನಲ್ಲಿ ಈ ಪದಕಂತೆಯು ಒಂದು ನುಡಿಗಟ್ಟಾಗಿ ಬಳಕೆಯಾಗಿದೆ. ಅನ್ಯರಲ್ಲಿ ಅವಗುಣವ ಸಂಪಾದನೆಯ ಮಾಡುವ=ಇತರರ ನಡೆನುಡಿಗಳಲ್ಲಿ ಕಂಡುಬರುವ ತಪ್ಪುಗಳನ್ನು ಹುಡುಕಿ ತೆಗೆದು/ಗುರುತಿಸಿ ಎಲ್ಲರಿಗೂ ತಿಳಿಯುವಂತೆ ಎತ್ತಿ ಆಡುವ/ಇತರರ ಗಮನಕ್ಕೆ ತರುವ;

ಕುನ್ನಿ=ನಾಯಿ ಮರಿ/ನಾಯಿ ; ಕುನ್ನಿಗಳ=ನಾಯಿಗಳನ್ನು; ಈ ಸನ್ನಿವೇಶದಲ್ಲಿ ನಾಯಿ ಎಂಬ ಪದವು ಒಂದು ಬಯ್ಗುಳವಾಗಿ ಬಳಕೆಯಾಗಿದೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲಾಗದೆ, ಕೆಟ್ಟದ್ದರ ಕಡೆಗೆ ಹೊಯ್ದಾಡುವ ನಡೆನುಡಿಯುಳ್ಳ ವ್ಯಕ್ತಿಗಳನ್ನು ನಿಂದಿಸುವಾಗ/ತೆಗಳುವಾಗ/ಬಯ್ಯುವಾಗ ‘ ನಾಯಿ ‘ ಎಂಬ ಪದವನ್ನು ಆರೋಪದ ಬಯ್ಗುಳವಾಗಿ ಕನ್ನಡ ನುಡಿ ಸಮುದಾಯದಲ್ಲಿ ಬಳಸಲಾಗುತ್ತದೆ ;

ಎನಗೆ+ಒಮ್ಮೆ; ಎನಗೆ=ನನಗೆ ; ಒಮ್ಮೆ=ಒಂದು ಬಾರಿ/ಒಂದು ಸಲ ; ತೋರದೆ+ಇರು+ಅಯ್ಯ; ತೋರು=ಕಾಣು/ಗೋಚರವಾಗು/ಕಣ್ಣಿಗೆ ಕಾಣಿಸಿಕೊ; ತೋರದಿರು=ತೋರಿಸಬೇಡ/ಕಣ್ಣಿಗೆ ಬೀಳುವಂತೆ ಮಾಡಬೇಡ ; ಅಯ್ಯ=ಇತರರೊಡನೆ ಮಾತನಾಡುವಾಗ ಒಲವುನಲಿವನ್ನು ಸೂಚಿಸಲು ಬಳಸುವ ಪದ; ಎನಗೊಮ್ಮೆ ತೋರದಿರಯ್ಯ=ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಗಳೊಡನೆ ಒಡನಾಟ/ವ್ಯವಹಾರ/ಗೆಳೆತನದ ನಂಟು ಒಳ್ಳೆಯದಲ್ಲವೆಂಬ ಇಂಗಿತವನ್ನು ಈ ಪದಕಂತೆಯು ಸೂಚಿಸುತ್ತಿದೆ; ಅಖಂಡೇಶ್ವರಾ=ವಚನಕಾರನಾದ ಶಣ್ಮುಕಸ್ವಾಮಿಯ ಗುರುವಿನ ಹೆಸರು ಮತ್ತು ವಚನಗಳ ಅಂಕಿತನಾಮ.)

 

ತನ್ನ ತಾನರಿಯದೆ ಅನ್ಯರ ಗುಣಾವಗುಣಗಳ
ಎತ್ತಿ ಎಣಿಸುವನ್ನಕ್ಕ ಶಿವಶರಣನೆಂತಪ್ಪನಯ್ಯ
ಸಜ್ಜನ ಸದ್ಭಾವಿ ಸತ್ಪುರುಷರುಗಳ ಮನನೋವಂತೆ
ಹಳಿದು ಹಾಸ್ಯವ ಮಾಡಿ ದೂಷಿಸುವನ್ನಕ್ಕ ಶಿವಶರಣನೆಂತಪ್ಪನಯ್ಯ
ಗರ್ವಾಹಂಕಾರವೆಂಬ ಹಿರಿಯ ಪರ್ವತವನೇರಿ
ಮರವೆಯಿಂದ ಮುಂದುಗಾಣದೆ ಮನದ ಪ್ರಪಂಚಿನಲ್ಲಿ ನಡೆದು
ಜನನ ಮರಣಂಗಳೆಂಬ ಭವಜಾಲದಲ್ಲಿ ಸಿಲ್ಕಿ
ದುಃಖವ ಪಡುವನ್ನಕ್ಕ ಶಿವಶರಣನೆಂತಪ್ಪನಯ್ಯ ಅಖಂಡೇಶ್ವರಾ.

ಶಿವಶರಣನ ವ್ಯಕ್ತಿತ್ವದಲ್ಲಿ ಯಾವ ಬಗೆಯ ನಡೆನುಡಿಗಳು ಇರಬಾರದು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

( ತನ್ನ=ತನ್ನನ್ನು ; ತಾನ್+ಅರಿಯದೆ; ತಾನು=ವ್ಯಕ್ತಿಯು ; ಅರಿ=ತಿಳಿ ; ಅರಿಯದೆ=ತಿಳಿಯದೆ/ತಿಳಿದುಕೊಳ್ಳದೆ ; ತನ್ನ ತಾನರಿಯದೆ=ತನ್ನ ನಡೆನುಡಿಯಲ್ಲಿನ/ತನ್ನ ವ್ಯಕ್ತಿತ್ವದಲ್ಲಿನ ಇತಿಮಿತಿಗಳನ್ನು ತಿಳಿಯದೆ/ಅರಿತುಕೊಳ್ಳದೆ; “ ತನ್ನ ತಾನ್ ಅರಿಯುವುದು “ ಎಂದರೆ ತನ್ನನ್ನು ಒಳಗೊಂಡಂತೆ ಪ್ರತಿಯೊಬ್ಬ ವ್ಯಕ್ತಿಯು ತಾನು ಹುಟ್ಟಿ ಬೆಳೆದು ಬಾಳುವ ಪರಿಸರದ ನಿಸರ‍್ಗದಲ್ಲಿನ ಏರಿಳಿತಗಳಿಗೆ ಮತ್ತು ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟು ವ್ಯವಹರಿಸುತ್ತಿರುತ್ತಾನೆ. ಆದುದರಿಂದಲೇ ಒಂದೆಡೆ ನಿಸರ‍್ಗದ ಸೆಳೆತ , ಮತ್ತೊಂದೆಡೆ ಸಮಾಜದ ಕಟ್ಟುಪಾಡು ಮತ್ತು ಆಚರಣೆಗಳ ನಡುವೆ ಸಿಲುಕಿರುವ ಎಲ್ಲಾ ಮಾನವ ಜೀವಿಗಳ ಮಯ್ ಮನಗಳು ಸದಾಕಾಲ ಒಳಿತು ಕೆಡುಕಿನ ಇಬ್ಬಗೆಯ ತೊಳಲಾಟದಲ್ಲಿ ಸಿಲುಕಿರುತ್ತವೆ ಎಂಬ ವಾಸ್ತವವನ್ನು ತಿಳಿದುಕೊಳ್ಳುವುದು;

ಅನ್ಯರ=ಬೇರೆಯವರ/ಇತರರ/ಮತ್ತೊಬ್ಬರ ; ಗುಣ+ಅವಗುಣಗಳ; ಗುಣ=ನಡೆನುಡಿ/ನಡತೆ ; ಅವಗುಣ=ಕೆಟ್ಟ ನಡೆನುಡಿ ; ಎತ್ತಿ=ಬೆರಳು ಮಾಡಿ ತೋರಿಸುತ್ತ/ಮುಂದೊಡ್ಡುತ್ತ/ದೊಡ್ಡದು ಮಾಡಿ ತೋರಿಸುತ್ತ ; ಎಣಿಸು+ಅನ್ನಕ್ಕ; ಎಣಿಸು=ಲೆಕ್ಕಹಾಕು ; ಅನ್ನಕ್ಕ=ವರೆಗೆ/ತನಕ ; ಶಿವಶರಣನ್+ಎಂತು+ಅಪ್ಪನ್+ಅಯ್ಯ; ಶಿವ=ಈಶ್ವರ/ದೇವರು;

ಶರಣ=ತಲೆಬಾಗಿದವನು/ಮೊರೆಹೊಕ್ಕವನು; ಶಿವಶರಣ=ಶಿವನಿಗೆ ತನ್ನನ್ನು ಒಪ್ಪಿಸಿಕೊಂಡವನು/ಒಳಿತಿನ ನಡೆನುಡಿಗಳಿಂದ ಶಿವನನ್ನು ಒಲಿಸಿಕೊಂಡವನು; ಎಂತು=ಹೇಗೆ/ಯಾವ ರೀತಿಯಲ್ಲಿ/ಬಗೆಯಲ್ಲಿ; ಅಪ್ಪನ್=ಆಗುವನು; ಅಯ್ಯ=ಮತ್ತೊಬ್ಬರೊಡನೆ ಮಾತನಾಡುವಾಗ ಒಲವು ನಲಿವನ್ನು ತೋರಿಸಲೆಂದು ಬಳಸುವ ಪದ; ಶಿವಶರಣನೆಂತಪ್ಪನಯ್ಯ=ಹೇಗೆ ತಾನೆ ಶಿವಶರಣನಾಗುತ್ತಾನೆ? ಅಂದರೆ ತನ್ನನ್ನು ತಾನು ಅರಿತುಕೊಂಡು ಬಾಳದವನನ್ನು ಶಿವಶರಣನೆಂದು ಕರೆಯಲಾಗುವುದಿಲ್ಲ ಎಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತವೆ;

ಸಜ್ಜನ=ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿ ; ಸದ್ಭಾವಿ=ಮನದಲ್ಲಿ ಒಳ್ಳೆಯ ಮಿಡಿತಗಳನ್ನು/ಆಲೋಚನೆಗಳನ್ನು/ಚಿಂತನೆಗಳನ್ನು/ವಿಚಾರಗಳನ್ನು ಹೊಂದಿರುವವನು; ಸತ್ಪುರುಷರು+ಗಳ; ಸತ್ಪುರುಷ=ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿ ; ಸಜ್ಜನ ಸದ್ಭಾವಿ ಸತ್ಪುರುಷರು=ಜೀವನದಲ್ಲಿ ತಮಗೆ ಒಳ್ಳೆಯದಾಗಬೇಕೆಂಬ ಹಂಬಲದಿಂದ ದುಡಿಯುವಂತೆಯೇ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ವ್ಯಕ್ತಿಗಳು;

ಮನ=ಮನಸ್ಸು/ಚಿತ್ತ ; ನೋವು+ಅಂತೆ; ನೋವು=ಯಾತನೆ/ವೇದನೆ/ಬೇನೆ/ಅಳಲು/ಸಂಕಟ ; ಅಂತೆ=ಹಾಗೆ; ನೋವಂತೆ=ಸಂಕಟದಿಂದ/ಯಾತನೆಯಿಂದ ನರಳುವಂತೆ; ಹಳಿ=ತೆಗಳು/ನಿಂದಿಸು/ಹೀಯಾಳಿಸು ; ಹಳಿದು=ನಿಂದಿಸಿ/ಹೀಯಾಳಿಸಿ/ತೆಗಳಿ/ಕಡೆಗಣಿಸಿ ; ಹಾಸ್ಯ=ನಲಿವು/ಉಲ್ಲಾಸ/ವಿನೋದ ; ಹಳಿದು ಹಾಸ್ಯವ ಮಾಡಿ=ಅಣಕದ ಮಾತುಗಳಿಂದ/ಚುಚ್ಚು ಮಾತುಗಳಿಂದ/ಕಟು ನುಡಿಗಳಿಂದ ಒಳ್ಳೆಯವರ ವ್ಯಕ್ತಿತ್ವವನ್ನು ಅಲ್ಲಗಳೆಯುವುದು; ದೂಷಿಸು+ಅನ್ನಕ್ಕ; ದೂಷಿಸು=ನಿಂದಿಸುವುದು/ತೆಗಳುವುದು/ಅಪವಾದವನ್ನು ಹೊರಿಸುವುದು/ಆರೋಪಿಸುವುದು; ಅನ್ನಕ್ಕ=ವರೆಗೆ/ತನಕ; ಶರಣನೆಂತಪ್ಪನಯ್ಯಾ=ಹೇಗೆ ತಾನೆ ಶಿವಶರಣನಾಗುತ್ತಾನೆ? ಅಂದರೆ ಒಳ್ಳೆಯವರ ಮನಸ್ಸನ್ನು ಕುಚೋದ್ಯದ ನಡೆನುಡಿಗಳಿಂದ ನೋಯಿಸಿ ಗಾಸಿಗೊಳಿಸುವವನು ಶಿವಶರಣನಲ್ಲ ಎಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತಿವೆ;

ಗರ್ವ+ಅಹಂಕಾರ+ಎಂಬ; ಗರ್ವ=ಸೊಕ್ಕು/ಹೆಮ್ಮೆ/ಜಂಬ ; ಅಹಂಕಾರ=ನಾನೇ ದೊಡ್ಡವನು/ನನ್ನಿಂದಲೇ ಎಲ್ಲವೂ ಎಂಬ ಸೊಕ್ಕಿನ ನಡೆನುಡಿ; ಎಂಬ=ಎನ್ನುವ ; ಹಿರಿಯ=ದೊಡ್ಡದಾದ ; ಪರ್ವತ+ಅನ್+ಏರಿ; ಪರ್ವತ=ಎತ್ತರದ ಬೆಟ್ಟಗುಡ್ಡಕಾಡುಮೇಡುಗಳಿಂದ ಕೂಡಿರುವ ಜಾಗ ; ಅನ್=ಅನ್ನು ; ಏರಿ=ಮೇಲಕ್ಕೆ ಹೋಗಿ/ಹತ್ತಿ ; ಗರ್ವಾಹಂಕಾರವೆಂಬ ಹಿರಿಯ ಪರ್ವತವನೇರಿ=ಅತಿ ಹೆಚ್ಚಿನ ಗರ‍್ವ ಮತ್ತು ಅಹಂಕಾರದಿಂದ ಮೆರೆಯುತ್ತಾ, ಇತರರನ್ನು ಬಹುಕೀಳಾಗಿ ಕಾಣುತ್ತಿರುವ ಸೊಕ್ಕಿನ/ಕೊಬ್ಬಿನ ನಡೆನುಡಿಗಳು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ರೂಪಕ;

ಮರವೆ+ಇಂದ; ಮರವು=ನೆನಪಿಲ್ಲದಿರುವುದು/ಎಲ್ಲವನ್ನು ಮರೆತಿರುವುದು; ಮರವೆಯಿಂದ=ಯಾವುದನ್ನು ನೆನೆಸಿಕೊಳ್ಳದೆ/ಒಳಿತು ಕೆಡುಕಿನ ಅರಿವಿಲ್ಲದೆ/ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಎಚ್ಚರವಿಲ್ಲದೆ; ಮುಂದು+ಕಾಣದೆ; ಮುಂದು=ಎದುರಿಗೆ ಇರುವುದು/ಅನಂತರ ಜರುಗುವುದು ; ಕಾಣು=ನೋಡು/ತಿಳಿ/ಅರಿತುಕೊ ; ಮುಂದುಗಾಣದೆ=ಮುಂದೆ ಏನಾಗುತ್ತದೆ ಎಂಬುದನ್ನು ತಿಳಿಯದೆ/ಅರಿಯದೆ ; ಪ್ರಪಂಚಿ+ಅಲ್ಲಿ; ಪ್ರಪಂಚ=ಜಗತ್ತು/ಲೋಕ; ಪ್ರಪಂಚಿ=ಲೋಕದ ವ್ಯವಹಾರಗಳಲ್ಲಿ ಮಗ್ನನಾದವನು ; ನಡೆ=ವರ‍್ತಿಸು/ವ್ಯವಹರಿಸು/ಆಚರಿಸು ; ಮನದ ಪ್ರಪಂಚಿನಲ್ಲಿ ನಡೆದು=ಮನದಲ್ಲಿ ಮೂಡಿಬಂದ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಲಾಗದೆ/ಹತೋಟಿಯಲ್ಲಿಡಲಾಗದೆ, ಇಚ್ಚೆ ಬಂದಂತೆ ವ್ಯವಹರಿಸುತ್ತಾ ; ಜನನ=ಹುಟ್ಟು/ಜನ್ಮ; ಮರಣ+ಗಳ್+ಎಂಬ; ಮರಣ=ಸಾವು/ಜೀವ ಹೋಗುವುದು ;

ಭವ+ಜಾಲ+ಅಲ್ಲಿ; ಭವ=ಹುಟ್ಟು/ಪ್ರಪಂಚದ ವ್ಯವಹಾರ/ಜಗತ್ತು ; ಜಾಲ=ಪ್ರಾಣಿಗಳನ್ನು ಮತ್ತು ಹಕ್ಕಿಗಳನ್ನು ಹಿಡಿಯುವದಕ್ಕಾಗಿ ನೂಲು/ಹುರಿಯಿಂದ ಮಾಡಿದ ಸಣ್ಣ ಸಣ್ಣ ಕಂಡಿಗಳುಳ್ಳ ಬಲೆ/ಗಾಳ ; ಭವಜಾಲ=ಜಗತ್ತಿನ ವ್ಯವಹಾರಗಳಲ್ಲಿ/ವ್ಯಕ್ತಿಯ ಜೀವನದಲ್ಲಿ ಉಂಟಾಗುವ ಬಹುಬಗೆಯ ತೊಡಕಿನ ಸಂಗತಿಗಳು/ಹುಟ್ಟು ಬದುಕು ಸಾವಿನ ನಡುವೆ ಜರುಗುವ ಬಹುಬಗೆಯ ಏರಿಳಿತಗಳು; ಸಿಲ್ಕಿ=ಸಿಲುಕಿ/ಸೆರೆಯಾಗಿ/ಒಳಗಾಗಿ ; ದುಃಖ=ಸಂಕಟ/ವೇದನೆ/ಯಾತನೆ ; ಪಡು+ಅನ್ನಕ್ಕ; ಪಡು=ಹೊಂದು/ಪಡೆ ; ಪಡುವನ್ನಕ್ಕ=ಹೊಂದಿರುವ ತನಕ/ಪಡೆಯುತ್ತಿರುವವರೆಗೆ; ಶಿವಶರಣನೆಂತಪ್ಪನಯ್ಯಾ=ಹೇಗೆ ತಾನೆ ಶಿವಶರಣನಾಗುತ್ತಾನೆ? ಅಂದರೆ ನಾನೇ ಎಂಬ ಅಹಂಕಾರದಿಂದ ಕೂಡಿ, ಒಳಿತಿನ ನಡೆನುಡಿಗಳನ್ನು ಮರೆತು, ಕೆಟ್ಟ ಬಯಕೆಗಳನ್ನು ಈಡೇರಿಸಿಕೊಳ್ಳುವುದರಲ್ಲಿ ಮಗ್ನನಾದವನು ಎಂದೆಂದಿಗೂ/ಯಾವ ಬಗೆಯಲ್ಲೂ ಶಿವಶರಣನಾಗುವುದಿಲ್ಲ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ; ಅಖಂಡೇಶ್ವರಾ=ವಚನಕಾರ ಶಣ್ಮುಕಸ್ವಾಮಿಯ ಗುರು ಮತ್ತು ವಚನಗಳ ಅಂಕಿತನಾಮ;

“ಶಿವಶರಣನಾದವನು ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಮತ್ತು .ಒಳ್ಳೆಯ ನಡೆನುಡಿಗಳ ಮೂಲಕವೇ ಶಿವನನ್ನು ಒಲಿಸಿಕೊಳ್ಳಬೇಕೆಂಬ ಹಂಬಲದಿಂದ ಕೂಡಿರುತ್ತಾನೆ“ ಎಂಬ ನಿಲುವನ್ನು ವಚನಕಾರರು ಹೊಂದಿದ್ದರು.)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: