ಶುರುವಾಯಿತು ಕ್ರಿಕೆಟ್ ಹಬ್ಬ – ಐ.ಪಿ.ಎಲ್ 2018 (ಕಂತು-1)

– ರಾಮಚಂದ್ರ ಮಹಾರುದ್ರಪ್ಪ.

ಐಪಿಎಲ್ 11, ಐಪಿಎಲ್ 2018, IPL 11, IPL 2018

ವರ‍್ಶವಿಡೀ ಬಾರತ ತಂಡವನ್ನು ಬೆಂಬಲಿಸುತ್ತಾ ‘ಬ್ಲೀಡ್ ಬ್ಲೂ’ ಎನ್ನುವ ಬಾರತದ ಕ್ರಿಕೆಟ್ ಪ್ರಿಯರು, ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾತ್ರ ‘ಪ್ಲೇ ಬೋಲ್ಡ್’ ‘ವಿಸಿಲ್ ಪೋಡು’ ‘ಹಲ್ಲಾ ಬೋಲ್’ ‘ಕೊರ‍್ಬೋ ಲೊರ‍್ಬೋ ಜೀತ್ಬೋ’ ಎನ್ನುತ್ತಾ ತಮ್ಮ ಊರಿನ ಪ್ರಾಂಚೈಸ್ ತಂಡವನ್ನು ಐಪಿಎಲ್ ನಲ್ಲಿ ಬೆಂಬಲಿಸೋದು ಈಗ ವಾಡಿಕೆಯಾಗಿದೆ. 2008 ರಲ್ಲಿ ಮೊದಲ್ಗೊಂಡ ಟಿ-20 ಬಗೆಯ ಈ ಕ್ರಿಕೆಟ್ ಪೋಟಿ, ಬಿಸಿಸಿಐ ನ ಬಹು ದೊಡ್ಡ ಯಶಸ್ಸು. ನೋಡ ನೋಡುತ್ತಿದ್ದಂತೆಯೇ ಪ್ರಪಂಚದ ಎಲ್ಲಾ ಕ್ರಿಕೆಟ್ ನೋಡುಗರನ್ನು ತನ್ನತ್ತ ಸೆಳೆಯುತ್ತಾ ಆಟಗಾರರಿಗೆ ತಮ್ಮ ಚಳಕವನ್ನು ತೋರಲು ಒಳ್ಳೆ ವೇದಿಕೆ ಮಾಡಿಕೊಟ್ಟು, ತಂಡದ ಒಡೆಯರ ಮತ್ತು ಬಿಸಿಸಿಐನ ಕಿಸೆಯನ್ನು ತುಂಬಿದ ಐಪಿಎಲ್ ಗೆ ಈಗ ಬರೋಬ್ಬರಿ 10 ವರ‍್ಶಗಳು ತುಂಬಿವೆ. ಕಳೆದ ಒಂದು ದಶಕದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡು ಸಾಕಶ್ಟು ವಿವಾದಗಳನ್ನು ಮೆಟ್ಟಿ ನಿಂತು ಐಪಿಎಲ್, ಕ್ರಿಕೆಟ್ ಜಗತ್ತಿನ ಒಂದು ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ. ಏಪ್ರಿಲ್ 7 ರಿಂದ ಐಪಿಎಲ್ ನ 11ನೇ ಆವ್ರುತ್ತಿ ಶುರುವಾಗಿದ್ದು ಬಾರತದಾದ್ಯಂತ ಕ್ರಿಕೆಟ್ ಪ್ರಿಯರ ಉತ್ಸಾಹ, ಚೀರಾಟ ಮುಗಿಲು ಮುಟ್ಟಿದೆ.

2018 ರ ಹರಾಜು ಪ್ರಕ್ರಿಯೆ

2014 ರ ದೊಡ್ಡ ಹರಾಜಿನ ನಂತರ ಎಲ್ಲಾ ತಂಡಗಳಿಗೆ ಇಂತಿಶ್ಟು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಮಾಡಿಕೊಟ್ಟು ಮತ್ತೊಮ್ಮೆ ದೊಡ್ಡ ಪ್ರಮಾಣದ ಆಟಗಾರರ ಹರಾಜು 2018 ರ ಜನವರಿಯಲ್ಲಿ ನಡೆಯಿತು. ಪ್ರತಿ ತಂಡದ ಹಣೆಬರಹ ಹೆಚ್ಚು-ಕಡಿಮೆ ಹರಾಜಿನ ಕೋಣೆಯಲ್ಲೇ ತೀರ‍್ಮಾನವಾಗುತ್ತದೆ. ಒಂದು ಚೆನ್ನಾದ ತಂಡ ಕಟ್ಟುವಲ್ಲಿ ಒಡೆಯರ ಜಾಣ್ಮೆ ಕೂಡ ಮುಕ್ಯ ಪಾತ್ರ ವಹಿಸುತ್ತದೆ. ಒಮ್ಮೆ ಹರಾಜಿನಲ್ಲಿ ಎಡವಿದರೆ ಅದರ ಪರಿಣಾಮವನ್ನು ವರ‍್ಶಗಟ್ಟಲೇ ಅನುಬವಿಸಬೇಕಾದ ಅಪಾಯ ತಂಡದ ಒಡೆಯರಿಗೆ! ಹಾಗಾಗಿ ತಂಡದ ಒಡೆಯರು ಎಲ್ಲಾ ಬಗೆಯಲ್ಲಿ ಸಿದ್ದರಾಗಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಾರೆ.

2018 ರ ಸಾಲಿನ ಹರಾಜು ನಡೆಯುವ ಮೊದಲು ಗರಿಶ್ಟ 3 ಆಟಗಾರನನ್ನು ಮತ್ತು ಹರಾಜಿನಲ್ಲಿ ಬೇರೆ ತಂಡದ ಪಾಲಾದ ತಮ್ಮ ಆಟಗಾರರನ್ನು ರೈಟ್ ಟು ಮ್ಯಾಚ್ (RTM) ಬಳಸಿ ಗರಿಶ್ಟ ಮೂವರನ್ನು ಉಳಿಸಿಕೊಳ್ಳುವ ಅವಕಾಶ ತಂಡಗಳಿಗೆ ಮಾಡಿಕೊಡಲಾಗಿತ್ತು. ಆದರೆ ಮೇಲಿನ ಎರಡೂ ಅವಕಾಶಗಳನ್ನು ಬಳಸಿಕೊಂಡು ಒಟ್ಟು 5 ಆಟಗಾರರನ್ನಶ್ಟೇ ತಮ್ಮಲ್ಲಿ ಉಳಿಸಿಕೊಳ್ಳುವಂತ ನಿಯಮ ಐಪಿಎಲ್ ಕೌನ್ಸಿಲ್ ಜಾರಿಗೆ ತಂದಿತ್ತು. ಮತ್ತು ಈ ಐವರಲ್ಲಿ ಹೆಚ್ಚೆಂದರೆ ಎರಡು ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿತ್ತು. ಪ್ರತಿ ತಂಡಗಳಿಗೆ ಒಟ್ಟು 80 ಕೋಟಿ ರೂಪಾಯಿಗಳನ್ನು ಆಟಗಾರರ ಕರೀದಿಗೆಂದು ನಿಗದಿ ಮಾಡಿ, ತಾವು ಮೊದಲೇ ಉಳಿಸಿಕೊಂಡ ಆಟಗಾರರ ಸಂಬಳದ ಹಣವನ್ನು ಈ 80 ಕೋಟಿಗಳಲ್ಲಿ ಕಳೆಯುವುದು ಐಪಿಎಲ್ ಹರಾಜಿನ ನಿಯಮವಾಗಿತ್ತು. ಈ ನಿಯಮದಂತೆಯೇ ಎಲ್ಲಾ ಎಂಟು ತಂಡಗಳು ಬಹಳ ಉತ್ಸಾಹದಿಂದ ಹರಾಜಿನಲ್ಲಿ ಪಾಲ್ಗೊಂಡು ತಮ್ಮ ನೆಚ್ಚಿನ ಆಟಗಾರರನ್ನು ಆರಿಸಿಕೊಂಡವು. ಇದರಲ್ಲಿ 2 ವರ‍್ಶ ನಿಶೇದಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡ ಐಪಿಎಲ್ ಗೆ ಮರಳಿದ್ದು ವಿಶೇಶ. ಕಳೆದೆರಡು ವರ‍್ಶಗಳಿಂದ ಐಪಿಎಲ್ ನಲ್ಲಿ ಪಾಲ್ಗೊಂಡಿದ್ದ ಪುಣೆ ಮತ್ತು ಗುಜರಾತ್ ತಂಡಗಳು ಹೊರಗುಳಿದವು.

ರಾಯಲ್ ಚಾಲೆಂಜರ‍್ಸ್ ಬೆಂಗಳೂರು

ಐಪಿಎಲ್  2018 ಮುನ್ನ

ಪಂದ್ಯಗಳು : 153
ಗೆಲುವು : 72
ಸೋಲು : 76

‘ಈ ಸಲ ಕಪ್ ನಮ್ದೇ!!’ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕರ‍್ನಾಟಕದ ಕ್ರಿಕೆಟ್ ಪ್ರಿಯರ ನಾಲಿಗೆಯಲ್ಲಿ ಹರಿದಾಡುತ್ತಿರುವ ಸಾಲು ಇದು. ಇದು ಯಾವ ಮಟ್ಟ ತಲುಪಿದೆ ಎಂದರೆ, ಬೆಂಗಳೂರು ತಂಡದ ನಾಯಕ ಕೊಹ್ಲಿ ಕೂಡ ‘ಈ ಸಲ ಕಪ್ ನಮ್ದೇ’ ಎಂದಾಗ ಎಲ್ಲರಿಗೂ ಅಚ್ಚರಿ ಆಯಿತು. 2008 ರಿಂದ 2017 ತನಕ ಒಟ್ಟು ಹತ್ತು ವರ‍್ಶಗಳಲ್ಲಿ 3 ಬಾರಿ ಪೈನಲ್ ನಲ್ಲಿ ಮುಗ್ಗರಿಸಿರುವ ಬೆಂಗಳೂರು ತಂಡ ಪ್ರತಿ ಬಾರಿಯೂ ಐಪಿಎಲ್ ಗೆಲ್ಲುವ ಒಂದು ನೆಚ್ಚಿನ ತಂಡವಾಗಿಯೇ ಕಣಕ್ಕಿಳಿಯುತ್ತದೆ. ಆದರೂ ಇನ್ನು ಒಮ್ಮೆಯೂ ಪ್ರಶಸ್ತಿ ಗೆಲ್ಲದೇ ಇರುವುದು ಸೋಜಿಗವೇ ಸರಿ. ಕೊಹ್ಲಿ, ಡಿವಿಲಿಯರ‍್ಸ್ ರಂತ ವಿಶ್ವ ಶ್ರೇಶ್ಟ ಬ್ಯಾಟ್ಸ್ಮನ್ ಗಳು ಈ ತಂಡದಲ್ಲಿದ್ದರೂ ಗೆಲುವು ಕೈಗೂಡದೇ ಇರೋದು ಕ್ರಿಕೆಟ್ ಅನ್ನೋದು ಒಂದು ತಂಡದ ಆಟ ಅನ್ನೋ ದಿಟವನ್ನ ಸಾರಿ ಹೇಳುತ್ತದೆ. ಹಾಗಾಗಿ ಈ ವರ‍್ಶದ ಹರಾಜಿನಲ್ಲಿ ತಂಡದ ಒಡೆಯರು ಈ ಇಬ್ಬರು ದಿಗ್ಗಜರ ಸುತ್ತ ಎಲ್ಲಾ ವಿಬಾಗಗಳಲ್ಲಿಯೂ ಸಮತೋಲನ ಇರುವಂತ ತಂಡವನ್ನು ಕಟ್ಟಿದ್ದಾರೆ. ದೇಶೀ ಕ್ರಿಕೆಟ್ ನಲ್ಲಿ ಮಿಂಚಿದ ಕರ‍್ನಾಟಕದ ಆಟಗಾರರನ್ನು ಕಡೆಗಣಿಸಿದ ಆರೋಪ ಬೆಂಗಳೂರು ತಂಡದ ಮೇಲಿದ್ದರೂ ಬೆಂಬಲಿಗರ ಹುಮ್ಮಸ್ಸು ಕಡಿಮೆ ಆಗಿಲ್ಲ. ಮೆಕ್ ಕಲಮ್ ಮತ್ತು ಡೀಕಾಕ್ ರ ಬರುವಿಕೆಯೊಂದ ತಂಡದ ಬ್ಯಾಟಿಂಗ್ ಬಲ ಇನ್ನಶ್ಟು ಹೆಚ್ಚಿದೆ. ಚಾಹಲ್, ಉಮೇಶ್ ಯಾದವ್, ಟಿಮ್ ಸೌತೀ, ಸಿರಾಜ್ ಬೌಲಿಂಗ್ ನಲ್ಲಿ ಪ್ರಮುಕರಾದರೆ ಕ್ರಿಸ್ ವೋಕ್ಸ್, ವಾಶಿಂಗ್ಟನ್ ಸುಂದರ್, ಗ್ರಾಂಡ್ಹೋಮ್, ಮೋಯಿನ್ ಅಲಿ ರಂತಹ ಆಲ್ ರೌಂಡರ್ ಗಳ ಬಲವೂ ತಂಡಕ್ಕಿದೆ. ಹಾಗಾಗಿ ತಂಡದಲ್ಲಿ ಹೆಚ್ಚು ಕುಂದುಗಳು ಕಂಡು ಬರುತ್ತಿಲ್ಲ. ಕರ‍್ನಾಟಕದ ಪವನ್ ದೇಶಪಾಂಡೆ ಮತ್ತು ಅನಿರುದ್ ಜೋಶಿ ತಂಡದಲ್ಲಿದ್ದರೂ ಅವರಿಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗಲಿದಿಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಕಿಕ್ಕಿರಿದು ತುಂಬಿರುವ ಚಿನ್ನಸ್ವಾಮಿ ಅಂಗಳದಲ್ಲಿ ‘ಆಆಆಆಆರ್ ಸೀ ಬೀ ಆಆಆಆಆರ್ ಸೀ ಬೀ’ ಎಂದು ಅಬಿಮಾನಿಗಳು ಕೆಂಪು ಬಾವುಟಗಳನ್ನು ಹಿಡಿದು ಕೂಗೋದನ್ನ ಕೇಳೋದು ಒಂದು ಸೊಗಸಾದ ಅನುಬವ. ಐಪಿಎಲ್ ವೇಳೆ ಯಾವ ಅಂಗಳದಲ್ಲೂ ನೋಡಲು ಸಿಗದ ಜನಜಂಗುಳಿ, ಸದ್ದು ಬೆಂಗಳೂರಿನಲ್ಲಿ ಸಿಗುತ್ತದೆ. ಇದು ಬೆಂಗಳೂರಿನ ಕ್ರಿಕೆಟ್ ಪ್ರೀತಿಗೆ ಒಂದು ಎತ್ತುಗೆ. ಕಳೆದ ಬಾರಿ ಕಳಪೆ ಆಟ ಆಡಿ ಕೊನೆ ಸ್ತಾನ ಪಡೆದಿದ್ದ ಬೆಂಗಳೂರು ತಂಡ ಈ ಬಾರಿ ತನ್ನ ತಪ್ಪುಗಳನ್ನು ತಿದ್ದುಕೊಂಡು ಐಪಿಎಲ್ ಗೆಲ್ಲುವ ವಿಶ್ವಾಸದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್  2018 ಮುನ್ನ

ಪಂದ್ಯಗಳು : 132
ಗೆಲುವು : 79
ಸೋಲು : 51

2008 ರಿಂದ 2015 ರ ತನಕ 8 ವರ‍್ಶಗಳಲ್ಲಿ ಆರು ಬಾರಿ ಪೈನಲ್ ತಲುಪಿ ಎರಡು ಬಾರಿ ಐಪಿಎಲ್ ಗೆದ್ದು, ಎಲ್ಲಾ ತಂಡಗಳಿಗಿಂತ ಹೆಚ್ಚು ಸ್ತಿರ ಪ್ರದರ‍್ಶನ ನೀಡಿರುವ ಹೆಗ್ಗಳಿಕೆ ಚೆನ್ನೈ ತಂಡದ್ದು. ದೋನಿಯವರ ನಾಯಕತ್ವದಲ್ಲಿ ಈ ತಂಡ ಮುರಿಯದ ದಾಕಲೆಗಳಿಲ್ಲ. ಕಳೆದೆರಡು ವರ‍್ಶ, ತಂಡದ ಒಡೆಯರ ಜೂಜು ಪ್ರಕರಣದಿಂದ ಹೊರಗುಳಿದ್ದಿದ್ದ ಚೆನ್ನೈ, 2018 ರ ಐಪಿಎಲ್ ಆಡಲು ತುದಿಗಾಲಲ್ಲಿ ನಿಂತಿದೆ. ಹರಾಜು ನಡೆಯುವುದಕ್ಕಿಂತ ಮೊದಲೇ ದೋನಿ, ರೈನಾ ಮತ್ತು ಜಡೇಜಾ ಅವರನ್ನು ಉಳಿಸಿಕೊಂಡಿದ್ದ ಚೆನ್ನೈ, ಹರಾಜಿನಲ್ಲಿ ಹೆಚ್ಚು ಅನುಬವ ಇರುವ ಆಟಗಾಗರರ ಮೊರೆ ಹೋಗಿದ್ದಾರೆ. ದೋನಿ ಮತ್ತು ರೈನಾರೊಟ್ಟಿಗೆ ಅಂಬತಿ ರಾಯುಡು, ಮುರಳಿ ವಿಜಯ್, ಕೇದಾರ್ ಜಾದವ್, ಡೂಪ್ಲೆಸಿಸ್ ತಂಡದ ಬ್ಯಾಟಿಂಗ್ ಬಲವಾಗಿದ್ದರೆ ಜಡೇಜಾ, ಟಾಕೂರ್, ಹರ‍್ಬಜನ್ ಸಿಂಗ್, ಸ್ಯಾಂಟ್ನರ್ ಮತ್ತು ಮಾರ‍್ಕ್ ವುಡ್ ತಂಡದ ಬೌಲಿಂಗ್ ಹೊರೆ ಹಂಚಿಕೊಳ್ಳಲ್ಲಿದ್ದಾರೆ. ಮತ್ತು ಬ್ರಾವೋ, ವಾಟ್ಸನ್ ರಂತಹ ಅಂತರಾಶ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಶ್ರೇಶ್ಟ ಆಲ್ ರೌಂಡರ್ ಗಳಿಂದ ಕೂಡಿರೋ ತಂಡ ಇದಾಗಿದ್ದು ಎಂತಾ ಸವಾಲನ್ನು ಎದುರಿಸಬಲ್ಲ ತಂಡ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ತಂಡ ಮರಳುವುದನ್ನೇ ಕಾಯುತ್ತಿದ್ದ ಚೆನ್ನೈ ಅಬಿಮಾನಿಗಳ ಸಂತಸ ಈಗ ಮುಗಿಲು ಮುಟ್ಟಿದೆ. ಆಗಲೇ ವಿಸಿಲ್ ಪೋಡು ಎಂದು ಹೊಸಬಗೆಯ ತಮಿಳಿನ ಹಾಡೊಂದನ್ನು ತಂಡ ಹೊರತಂದಿದೆ.

ಸನ್ ರೈಸರ‍್ಸ್ ಹೈದರಾಬಾದ್

ಐಪಿಎಲ್  2018 ಮುನ್ನ

ಪಂದ್ಯಗಳು : 76
ಗೆಲುವು : 41
ಸೋಲು : 34

2013 ರಲ್ಲಿ ಮೊದಲ ಬಾರಿಗೆ ಐಪಿಎಲ್ ನಲ್ಲಿ ಪಾಲ್ಗೊಂಡ ಸನ್ ರೈಸರ‍್ಸ್ ತಂಡ ಐದು ವರ‍್ಶಗಳಲ್ಲಿ ಒಂದು ಬಾರಿ ಐಪಿಎಲ್ ಗೆದ್ದು ಪಂದ್ಯಾವಳಿಯ ಒಂದು ಬಲಾಡ್ಯ ತಂಡ ಎಂಬುದನ್ನು ಸಾಬೀತು ಮಾಡಿದೆ. ಇಶ್ಟು ದಿನ ನಾಯಕ ವಾರ‍್ನರ್ ತಂಡದ ಬೆನ್ನೆಲುಬಾಗಿದ್ದರು. ಅವರು ಹೈದರಾಬಾದ್ ತಂಡಕ್ಕೆ ರನ್ ಗಳಿಸದೇ ಇರುವ ಪಂದ್ಯಗಳು ತೀರಾ ಕಡಿಮೆ. ಆದರೆ ಮೊನ್ನೆ ದಕ್ಶಿಣ ಆಪ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಚೆಂಡನ್ನು ತಿದ್ದಿ ಬದಲಾಯಿಸಿದ ಆರೋಪದ ಮೇಲೆ ಒಂದು ವರ‍್ಶದ ನಿಶೇದಕ್ಕೊಳಗಾಗಿರುವ ವಾರ‍್ನರ್ ಈ ವರ‍್ಶದ ಐಪಿಎಲ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಬ್ಯಾಟ್ಸ್ಮನ್ ವಾರ‍್ನರ್ ಜೊತೆಗೆ ನಾಯಕ ವಾರ‍್ನರ್ ರನ್ನೂ ತಂಡ ಕಳೆದುಕೊಳ್ಳುತ್ತಿರೋದು ಆ ತಂಡಕ್ಕೆ ತುಂಬಲಾರದ ನಶ್ಟ ಎಂದರೆ ತಪ್ಪಾಗಲಾರದು. ಇವರ ಬದಲಿಗೆ ಈಗ ನ್ಯೂಜಿಲ್ಯಾಂಡ್ ನ ವಿಲಿಯಮ್ಸನ್ ರನ್ನು ತಂಡ ನಾಯಕರನ್ನಾಗಿ ಆರಿಸಿದೆ. ಕರ‍್ನಾಟಕದ ಮನೀಶ್ ಪಾಂಡೆ ದೊಡ್ಡ ಮೊತ್ತಕ್ಕೆ(11 ಕೋಟಿ ರೂಪಾಯಿಗಳು) ಹೈದರಾಬಾದ್ ತಂಡದ ಪಾಲಾದರು. ಇವರ ಜೊತೆಗೆ ದೀಪಕ್ ಹೂಡಾ, ಅಲೆಕ್ಸ್ ಹೇಲ್ಸ್, ಯೂಸುಪ್ ಪಟಾಣ್, ದವನ್, ಸಾಹಾ ತಂಡಕ್ಕೆ ರನ್ ಕಲೆ ಹಾಕೋ ಹೊಣೆ ಹೊರಲಿದ್ದಾರೆ.

ಕಳೆದ ವರ‍್ಶ ಇದೇ ತಂಡದ ಪರವಾಗಿ ಆಡುತ್ತಾ ತನ್ನ ಕರಾರುವಾಕ್ ಲೆಗ್ ಸ್ಪಿನ್ ಬೌಲಿಂಗ್ ನಿಂದ ಪ್ರಪಂಚದ ಗಮನ ಸೆಳೆದ್ದಿದ್ದ ಅಪ್ಗಾನಿಸ್ತಾನ್ ನ ರಶೀದ್ ಕಾನ್ ರನ್ನು RTM ಬಳಿಸಿ ಹೈದರಾಬಾದ್ ತನ್ನಲ್ಲೇ ಉಳಿಸಿಕೊಂಡಿತು. ಜೊತೆಗೆ ಬುವನೇಶ್ವರ್ ಕುಮಾರ್ ರನ್ನು ಹರಾಜಿಗಿಂತ ಮೊದಲೇ ಉಳಿಸಿಕೊಂಡು ತಂಡಕ್ಕೆ ಇಬ್ಬರು ಒಳ್ಳೆ ಬೌಲರ್ ಗಳನ್ನು ಪಡೆಯಿತು. ಕಾರ‍್ಲೋಸ್ ಬ್ರೆತ್ವೈಟ್ ಮತ್ತು ಶಾಕಿಬ್ ಅಲ್ ಹಾಸನ್ ತಂಡದ ಆಲ್ ರೌಂಡರ್ ಗಳಾಗಿ ಕಣಕ್ಕಿಳಿಯಲಿದ್ದಾರೆ. ಹಾಳೆ ಮೇಲೆ ಅಶ್ಟೇನೂ ಬಲಿಶ್ಟ ತಂಡದಂತೆ ಕಂಡು ಬರದ್ದಿದ್ದರೂ ಎಂತಾ ಗಟಾನುಗಟಿ ತಂಡಗಳಿಗೂ ಸೋಲುಣಿಸೋ ಅಳವು ತಮ್ಮಲ್ಲಿದೆ ಎಂದು ಐದು ವರ‍್ಶಗಳಿಂದಲೂ ಹೈದರಾಬಾದ್ ಸಾಬೀತು ಮಾಡುತ್ತಲೇ ಬರುತ್ತಿದೆ. ಹಾಗಾಗಿ ಈ ಬಾರಿಯೂ ಬೇರೆ ತಂಡಗಳು ಅವರನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಮುಂಬೈ ಇಂಡಿಯನ್ಸ್

ಐಪಿಎಲ್  2018 ಮುನ್ನ

ಪಂದ್ಯಗಳು : 157
ಗೆಲುವು : 91
ಸೋಲು : 65

2008 ಮತ್ತು 2009 ರಲ್ಲಿ ಸಪ್ಪೆಯಾಗಿ ಕಂಡು ಬಂಡ ಮುಂಬೈ ತಂಡ ನಂತರದ ಎಂಟು ವರ‍್ಶಗಳಲ್ಲಿ ಚೆನ್ನೈ ನಂತೆಯೇ ಸ್ತಿರ ಪ್ರದರ‍್ಶನ ನೀಡುತ್ತಾ ಬರುತ್ತಿದೆ. 2013 ರಲ್ಲಿ ಮೊದಲ ಬಾರಿ ನಾಯಕರಾದ ನಾಯಕರಾದ ರೋಹಿತ್ ಶರ‍್ಮ 2013,15,17 ರಲ್ಲಿ ಒಟ್ಟು ಮೂರು ಬಾರಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ. ಹೆಚ್ಚು ಬಾರಿ ಐಪಿಎಲ್ ಗೆದ್ದಿರುವ ಹೆಗ್ಗಳಿಕೆ ಮುಂಬೈ ತಂಡದ್ದು. ಪ್ರತಿ ಹರಾಜಿನಲ್ಲಿ ದೊಡ್ಡ ಮೊತ್ತದ ಕೊಳ್ಳಿಕೆಗಳಿಗೆ ಹೆಸರುವಾಸಿಯಾಗಿರುವ ಅಂಬಾನಿ ಒಡೆತನದ ಮುಂಬೈ ತಂಡ ಅಶ್ಟೇ ಜಾಣ್ಮೆಯಿಂದ ತನ್ನ ಆಟಗಾರರನ್ನು ಆರಿಸುತ್ತದೆ. ಈ ಬಾರಿಯ ಹರಾಜಿಗೂ ಮುನ್ನ ರೋಹಿತ್ ಶರ‍್ಮಾ, ಹಾರ‍್ದಿಕ್ ಪಾಂಡ್ಯಾ, ಮತ್ತು ಬುಮ್ರಾಹ್ ರನ್ನು ಮುಂಬೈ ತನ್ನಲೇ ಉಳಿಸಿಕೊಂಡಿತು. ಮತ್ತು RTM ಬಳಿಸಿ ಆಲ್ ರೌಂಡರ್ ಗಳಾದ ಪೊಲಾರ‍್ಡ್ ಮತ್ತು ಕ್ರುನಾಲ್ ಪಾಂಡ್ಯಾ ರನ್ನು ಉಳಿಸಿಕೊಂಡು ತಂಡಕ್ಕೆ ಒಳ್ಳೆ ಅಡಿಪಾಯ ಹಾಕಿಕೊಂಡಿದೆ.

ರೋಹಿತ್, ಡುಮಿನಿ, ಲೆವಿಸ್, ಲಾಡ್, ಕಿಶನ್ ಮತ್ತು ಸೂರ‍್ಯ ಕುಮಾರ್ ಯಾದವ್ ಪ್ರಮುಕ ಬ್ಯಾಟ್ಸ್ಮನ್ ಗಳಾದರೆ ಪಾಂಡ್ಯಾ ಸಹೋದರರು ಮತ್ತು ಪೊಲಾರ‍್ಡ್ ಆಲ್ ರೌಂಡರ್ ಜವಾಬ್ದಾರಿಯನ್ನು ನಿಬಾಯಿಸಲಿದ್ದಾರೆ. ಬುಮ್ರಾಹ್, ಮುಸ್ತಾಪಿಸುರ್ ರಹ್ಮಾನ್, ಕಮಿನ್ಸ್, ಮತ್ತು ಮೆಕ್ ಲೇನಾಗನ್ ತಂಡಕ್ಕೆ ಬೌಲಿಂಗ್ ಬಲ ತುಂಬಲಿದ್ದಾರೆ. ಬ್ಯಾಟಿಂಗ್ ಗೆ ಹೇಳಿ ಮಾಡಿಸಿರುವ ಹಾಗಿರುವ ಮುಂಬೈನ ವಾಂಕೆಡೆ ಅಂಗಳದಲ್ಲಿ ನೀಲಿ ಬಣ್ಣದ ತಂಡದ ಬಾವುಟ ಹಿಡಿದು ಅಬಿಮಾನಿಗಳು ತಮ್ಮ ತಂಡವನ್ನು ಬೆಂಬಲಿಸೋ ದ್ರುಶ್ಯ ವರ‍್ಶಗಳಿಂದ ನೋಡುಗರ ಮನಸೂರೆಗೊಂಡಿದೆ. ಬೆಂಗಳೂರು ನಂತರ ಆಟದ ಹೊತ್ತಿನಲ್ಲಿ ಈ ರೀತಿಯ ವಾತಾವಾರಣ ನಿರ‍್ಮಾಣ ಆಗೋದು ಬಹುಶಹ ಮುಂಬೈನಲ್ಲಿ ಮಾತ್ರ. 2018 ರ ಐಪಿಎಲ್ ಗೆಲ್ಲುವ ನೆಚ್ಚಿನ ತಂಡವಾಗಿ ಹಾಲಿ ಗೆಲ್ಲುಗ ತಂಡವಾದ ಮುಂಬೈ ಇಂಡಿಯನ್ಸ್ ಕಣಕ್ಕಿಳಿಯಲಿದೆ.​

( ಉಳಿದ ತಂಡಗಳ ಬಗ್ಗೆ ನಾಳಿನ ಬರಹದಲ್ಲಿ )

( ಚಿತ್ರಸೆಲೆ:  newsekaaina.com, )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications